26.3 C
Karnataka
Saturday, November 23, 2024

    Indian Stock Market: ಆರ್ಥಿಕ ಸಾಕ್ಷರತಾ ಆಂದೋಲನ ಇಂದಿನ ಅಗತ್ಯ

    Must read

    ಜಾಗತೀಕರಣದ ನಂತರದ ಪರಿವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು, ಅಭಿವೃದ್ಧಿಗಳನ್ನೂ ಹಾಗೂ ಹತ್ತಾರು ನಕಾರಾತ್ಮಕತೆಗಳನ್ನೂ ಕಾಣುವಂತಾಗಿದೆ. ಆದರೂ ಜೀವನ ಶೈಲಿಗಳು ಅದಕ್ಕೆ ಹೊಂದಿಕೊಂಡು ಹೋಗುವ ಹಾಗೆ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳುವುದನ್ನು ಅನಿವಾರ್ಯವಾಗಿ ಬೆಳೆಸಿಕೊಳ್ಳಲೇಬೇಕಾದ ಪರಿಸ್ಥಿತಿಗಳು ನಿರ್ಮಾಣವಾಗಿವೆ.

    ಪರಿಸ್ಥಿತಿಗಳು ಬದಲಾಗಿರುವುದು ಕೇವಲ ಸಾಮಾನ್ಯರಿಗೆ ಮಾತ್ರವಲ್ಲ, ಅದು ಕಾರ್ಪೊರೇಟ್‌ ವಲಯದಲ್ಲೂ, ಸಾಂಸ್ಥಿಕ ವಲಯದಲ್ಲೂ, ಪತ್ರಿಕಾ ರಂಗದಲ್ಲೂ ಅಲ್ಲದೆ ಸರ್ಕಾರಗಳ ಮೇಲೂ ಹೆಚ್ಚಿನ ಬದಲಾವಣೆಗಳನ್ನು ತಂದಿದೆ. ಜಾಗತೀಕರಣಕ್ಕೂ ಮುಂಚೆ ಸರ್ಕಾರಗಳು ಸೇವೆಗಳಿಗಾಗಿ ಶ್ರಮಿಸುತ್ತಿದ್ದವು. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿ ಅವರ ಜೀವನ ಶೈಲಿಗಳನ್ನು ಸುಧಾರಿಸುವತ್ತ ಹೆಚ್ಚು ಗಮನಹರಿಸುತ್ತಿದ್ದವು. ಆದರೆ ನಂತರದಲ್ಲಿ ಉದ್ದಿಮೆಗಳು, ಸೇವಾ ಸಂಸ್ಥೆಗಳೊಂದಿಗೆ ವಿದೇಶೀ ಕೈಗಾರಿಕೆಗಳು, ವಿದೇಶೀ ವಿತ್ತೀಯ ಸಂಸ್ಥೆಗಳು ದೇಶದೊಳಗೆ ಪ್ರವೇಶಿಸಿದ ಕಾರಣ ದೇಶದಲ್ಲಿ ಔದ್ಯೂಗೀರಣ ಮಿಂಚಿನಂತೆ ಬೆಳೆಯತೊಡಗಿದ ಕಾರಣ ಪರಿವರ್ತನೆಗಳು ನಿರೀಕ್ಷಿತ ಮಟ್ಟಕ್ಕಿಂತ ವೇಗವಾಗಿ ಸಾಗಿವೆ.

    ಈ ಬದಲಾವಣೆಗಳು ಯಾವ ಮಟ್ಟಕ್ಕಾಯಿತೆಂದರೆ 2012 ರಲ್ಲಿ ಆಮ್ ಸ್ಟರ್ ಡ್ಯಾಂ ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ಸಾಕ್ಷರತಾ ಸಮ್ಮೇಳನದಲ್ಲಿನ ಮಾಪನದಂತೆ ಭಾರತದ ಆರ್ಥಿಕ ಸಾಕ್ಷರತಾ ಮಟ್ಟವು ಶೇ.35 ರಷ್ಟಿದ್ದು 2016 ರಲ್ಲಿ ಅದು ಶೇ.24 ಕ್ಕೆ ಕುಸಿಯಿತು. ಅಂದರೆ ನಮ್ಮ ಚಿಂತನೆಗಳು ವ್ಯವಹಾರಿಕತೆಯಲ್ಲುಂಟಾದ ಪರಿವರ್ತನೆಗಳಿಗೆ, ಪ್ರಚಾರಗಳಿಗೆ ಮಾರುಹೋಗಿ ನಮ್ಮ ಆರ್ಥಿಕ ಚಿಂತನೆಗಳನ್ನು ತ್ಯಜಿಸಿ ಮೋಹಕ ಪದಗಳಿಂದ ಪ್ರಭಾವಿಯಾಗಿ, ಆರ್ಥಿಕ ನಿರ್ವಹಣೆಯ ಗುಣಮಟ್ಟವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಈ ವ್ಯವಹಾರಿಕತೆಯ ಪ್ರಭಾವವು ಎಲ್ಲಿಯವರೆಗೂ ವಿಸ್ತರಿಸಿದೆ ಎಂದರೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ವಲಯಗಳಿಗೂ ಹರಡಿಕೊಂಡಿವೆ.

    ಹೀಗಿರುವಾಗ, ಮಾಧ್ಯಮಗಳೂ ಈ ವ್ಯವಹಾರಿಕ ಜಾಲದೊಳಗೆ ಸಿಲುಕಿಕೊಂಡಿರುವುದು ಅಚ್ಚರಿಯಲ್ಲ. ಈಚಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಪತ್ರಿಕೆಗಳ ಮುಖಪುಟಗಳನ್ನೇ ಜಾಹಿರಾತುಗಳು ನುಂಗಿಹಾಕಿರುವುದನ್ನು ಆಗಿಂದಾಗ್ಗೆ ಅನೇಕ ಬಾರಿ ಕಾಣಬಹುದಾಗಿದೆ. ಕೆಲವು ಬಾರಿ ಪತ್ರಿಕೆಗಳಲ್ಲಿ ಅರ್ಧ ಪುಟವನ್ನೇ ಒಂದು ಪುಟ ಎಂದು ಪುಟಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣುತ್ತೇವೆ. ಇವೆಲ್ಲವೂ ಸಾಮಾನ್ಯವಾಗಿ ವಿಶೇಷವೆಂದೆನಿಸುವುದಿಲ್ಲ. ಹಾಗೆಯೇ ಇಂದಿನ ದಿನಗಳಲ್ಲಿ ಷೇರುಪೇಟೆಯಲ್ಲಿ ವಿಶ್ಲೇಷಣೆಗಳು, ಚಿಂತನೆಗಳು ಸಾಮಾನ್ಯರ ಸ್ವಾಭಾವಿಕ ಚಿಂತನೆಗಳನ್ನು ದಾರಿ ತಪ್ಪಿಸುವ ಮಟ್ಟಕ್ಕೆ ಕೊಂಡೊಯ್ಯುತ್ತಿವೆ.

    ಸಾಮಾನ್ಯರ ಚಿಂತನೆ:

    ನಾವು ಐ ಪಿ ಒ ಗಳಲ್ಲಿ ಹೂಡಿಕೆ ಮಾಡಿದಲ್ಲಿ ನಾವು ಹಣ ಗಳಿಸಲು ಸಾಧ್ಯ. ಈ ಹಿಂದೆ 1993 ರಲ್ಲಿ ಇನ್ಫೋಸಿಸ್‌ ಕಂಪನಿಯ ಐ ಪಿ ಒ ನಲ್ಲಿ ರೂ.95 ರಂತೆ ಖರೀದಿಸಿದ್ದರೆ ಇಂದು ಅದು ಎರಡೂವರೆ ಕೋಟಿ ರೂಪಾಯಿಗಳಷ್ಟು ಬೆಳೆದಿದೆ ಎಂಬ ಅಂಶ ಸದಾ ಮನದಾಳವನ್ನು ಆಕ್ರಮಿಸಿದೆ.

    ಅದೇ ರೀತಿ ಈಗ ಒಂದು ಬ್ರಾಂಡೆಡ್‌ ಕಂಪನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಸುಲಭವಾಗಿ ಸಂಪಾದಿಸಬಹುದು ಎಂದು ನಂಬಿರುವವರು ಅತಿ ಹೆಚ್ಚು. ಆ ಚಿಂತನೆಯಿಂದ ಕಳೆದ ಒಂದು ವರ್ಷದಲ್ಲಿ ತೇಲಿಬಿಟ್ಟ ಕಂಪನಿಗಳ ಬ್ರಾಂಡ್‌ ವ್ಯಾಮೋಹಕ್ಕೆ ಬಿದ್ದು, ಹೂಡಿಕೆಯ ಮೂಲ ಉದ್ದೇಶವಾದ ಸುರಕ್ಷತೆ, ಹೂಡಿಕೆಯ ಅಭಿವೃದ್ಧಿ, ಹೂಡಿಕೆ ಮುಂದುವರೆಸಿದ್ದಕ್ಕೆ ನಿಯತಕಾಲಿಕವಾಗಿ ಅದು ನೀಡಬಹುದಾದ ಕಾರ್ಪೊರೇಟ್‌ ಫಲಗಳ ಬಗ್ಗೆ ಚಿಂತಿಸದೆ, ಕಂಪನಿಯ ಒಳಗಣ ಚಿತ್ರಣ ಅಂದರೆ ಅದು ನಡೆಸುತ್ತಿರುವ ಚಟುವಟಿಕೆ ಎಷ್ಟರಮಟ್ಟಿಗೆ ಲಾಭ ಗಳಿಸಿಕೊಡುತ್ತಿದೆ, ಆ ಕಂಪನಿ ಗಳಿಸಿರುವ ಬ್ರಾಂಡ್‌ ಗೆ ಮೂಲ ಆಂತರಿಕ ಸಾಧನೆ ಮತ್ತು ಅದಕ್ಕನುಗುಣವಾಗಿ ಆ ಕಂಪನಿ ಲಾಭ ಗಳಿಸುತ್ತಿದೆಯೇ ಅಥವಾ ಟರ್ನೋವರ್‌ ಮಾತ್ರ ಹೆಚ್ಚಿದ್ದು ಹಾನಿಗೊಳಗಾಗಿದೆಯೇ, ಆ ಕಂಪನಿಯು ಹೊಂದಿರುವ ಸ್ವತ್ತುಗಳ ಸ್ವರೂಪ ಮತ್ತು ಗುಣಮಟ್ಟ, ಕಂಪನಿಯ ಪ್ರವರ್ತಕರ ಹೂಡಿಕೆದಾರ ಸ್ನೇಹಿಗುಣ ಮುಂತಾದವುಗಳನ್ನು ತುಲನೆ ಮಾಡಿ ನಿರ್ಧರಿಸದೆ, ಅಲಂಕಾರಿಕ ಮಾತು- ಪ್ರಚಾರಗಳಿಗೆ ಮೋಹಿತರಾಗಿ ಹೆಚ್ಚಿನ ಹಾನಿಗೊಳಗಾದವರ ಸಂಖ್ಯೆ ಹೆಚ್ಚಾಗಿದೆ.

    ಇನ್ಫೋಸಿಸ್‌ ಹೂಡಿಕೆದಾರರಿಗೆ ಹೇಗೆ ಗೋಲ್ಡನ್‌ ಟಚ್‌ ಆಗಿದೆ?:

    ಇನ್ಫೋಸಿಸ್‌ 1993 ರಲ್ಲಿ ಪ್ರಥಮ ಬಾರಿ ಪ್ರತಿ ಷೇರಿಗೆ ರೂ.95 ರಂತೆ ವಿತರಿಸಿದಾಗ ತಾಂತ್ರಿಕ ವಲಯದ ಮೊದಲ ಕಂಪನಿಯಾಗಿದ್ದು, ಆ ಸಂದರ್ಭದಲ್ಲಿ ವಿತ್ತೀಯ ವಲಯದಲ್ಲಿ ಹರಿದಾಡುತ್ತಿದ್ದ ಹಣದ ಪ್ರಮಾಣವು ಹೆಚ್ಚಿರಲಿಲ್ಲ. ಆ ಸಂದರ್ಭದಲ್ಲಿ ಕಂಪನಿಗೆ ತನ್ನ ದೈನಂದಿನ ಚಟುವಟಿಕೆಗೆ ಸಂಪನ್ಮೂಲದ ಆವಶ್ಯಕತೆ ಇತ್ತು, ಸಂಗ್ರಹಿಸಿದ ಸಂಪನ್ಮೂಲವನ್ನು ಬಳಕೆ ಮಾಡಿ ಹೂಡಿಕೆದಾರರಿಗೆ ಪ್ರತಿಫಲಗಳನ್ನು ವಿತರಿಸುವ ಬದ್ಧತೆ ಮತ್ತು ಬಾಧ್ಯತೆಗಳಿದ್ದ ಕಾರಣ ಅದು ಪ್ರಬುದ್ಧತೆಯಿಂದ ಮೆರೆಯಿತು. ಇನ್ಫೋಸಿಸ್‌ ಕಂಪನಿಯು ಆರಂಭದಿಂದ 7 ಬಾರಿ 1:1 ರ ಅನುಪಾತದಲ್ಲಿ ಬೋನಸ್‌ ಷೇರು ವಿತರಿಸಿದೆ ಮತ್ತು ಒಂದು ಬಾರಿ ಅಂದರೆ 2004 ರಲ್ಲಿ 3:1 ರ ಅನುಪಾತದಲ್ಲಿ ಬೋನಸ್‌ ಷೇರು ವಿತರಿಸಿದೆ.

    2000 ದಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.5 ಕ್ಕೆ ಸೀಳಿತು. ಇದರಿಂದ ಐ ಪಿ ಒ ನಲ್ಲಿ ಪಡೆದ 100 ಷೇರುಗಳು ಸುಮಾರು 55,000 ಷೇರುಗಳಿಗೂ ಹೆಚ್ಚಾಗಿ ಬೆಳೆಯಿತು. ಇದಲ್ಲದೆ ನಿರಂತರವಾಗಿ ಷೇರುದಾರರಿಗೆ ಆಕರ್ಷಣೀಯ ಲಾಭಾಂಶವನ್ನು ವಿತರಿಸಿದ ಹೆಗ್ಗಳಿಕೆ ಈ ಕಂಪನಿಗಿದೆ. ಈ ಕಂಪನಿಯು 2020.21 ರಲ್ಲಿ ಪ್ರತಿ ಷೇರಿಗೆ ರೂ.37 ರ ಲಾಭಾಂಶವನ್ನು, 2021.22 ರಲ್ಲಿ ರೂ.31 ರಂತೆ ಲಾಭಾಂಶ ವಿತರಿಸಿದೆ. ಇಲ್ಲಿ ಹೂಡಿಕೆದಾರರು ಗಮನಿಸಬೇಕಾದ ಅಂಶವೆಂದರೆ ಒಂದು ಷೇರಿಗೆ ರೂ.37 ರಂತೆ ಅಂದರೆ ರೂ.37X55 ಸಾವಿರದಷ್ಟು ಹಣ ಎಂದರೆ ರೂ.20 ಲಕ್ಷಕ್ಕೂ ಹೆಚ್ಚಿನ ಹಣ ಐಪಿಒ ನಲ್ಲಿ ಪಡೆದ 100 ಷೇರುಗಳಿಗೆ ಲಭಿಸಿದ ಲಾಭಾಂಶದ ಪ್ರಮಾಣವಾಗುತ್ತದೆ.

    ಅಂದರೆ 100 ಷೇರುಗಳ ರೂ.9,500 ರ ಹೂಡಿಕೆಗೆ ಷೇರುಗಳ ಸಂಖ್ಯೆಯು 55 ಸಾವಿರಕ್ಕೆ ಬೆಳೆದಿದೆ ಜೊತೆಗೆ ದಶ ಲಕ್ಷಗಳ ಪ್ರಮಾಣದಲ್ಲಿ ಲಾಭಾಂಶವನ್ನು ನಿರಂತರವಾಗಿ ಲಭಿಸುವ ಹಂತವು ಈಗಿನ ದಿನಗಳಲ್ಲಿ ಕಲ್ಪನಾತೀತವಲ್ಲವೇ? ಅಂದಿನ 100 ಷೇರುಗಳ ಮೌಲ್ಯವು ಇಂದಿನ ರೂ.1,400 ರ ಬೆಲೆಯಲ್ಲಿ ರೂ.7.70 ಕೋಟಿಯಾಗಿ ಬೆಳೆದಿದೆ. ಈಗಿನ ವಾತಾವರಣದಲ್ಲಿ ಈ ರೀತಿಯ ಏಳ್ಗೆ ಸಾಧ್ಯವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!