ನಾಡಿನ ಹೆಸರಾಂತ ಸಾಹಿತಿ- ಕಥೆಗಾರ ಕೆ . ಸತ್ಯನಾರಾಯಣ ಅವರ ಹೊಸ ಕಥಾ ಸಂಕಲನ ಮನುಷ್ಯರು ಬದಲಾಗುವರೆ? ಬಿಡುಗಡೆಗೆ ಸಿದ್ಧವಾಗಿದೆ. ಗೀತಾಂಜಲಿ ಪ್ರಕಾಶನ ಈ ಕೃತಿ ಪ್ರಕಟಿಸುತ್ತಿದೆ. ನಮ್ಮ ಓದುಗರಿಗಾಗಿ ಅದರಿಂದ ಆಯ್ದ ಜಯನಗರ ಕ್ರಾಸಿಂಗ್ ನಲ್ಲಿ ಕಥೆಯನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.
ಕೆ ಸತ್ಯನಾರಾಯಣ
ಅಪ್ಪನ ಕರ್ಮಾಂತರಗಳಿಗೆ ಡೆನ್‌ವರ್‌ನಿಂದ ಬಂದಿದ್ದ ಮಮತಾ ಕೃತಜ್ಞತೆಯ ಭಾವದಿಂದ ತೊಯ್ದು ಹೋಗಿದ್ದಳು. ಮಮತಾ ತಾಯಿ ಸತ್ತು ಅದೆಷ್ಟು ವರ್ಷಗಳಾಗಿತ್ತು. ಮಮತಾಳನ್ನು ಹೆತ್ತ ಹತ್ತು ದಿವಸದಲ್ಲೇ ಸತ್ತು ಹೋಗಿದ್ದರು. ಇವಳ ಹೆರಿಗೆಗೆ ಮುಂಚೆ ಐದು ಸಲ ಗರ್ಭಪಾತವಾಗಿತ್ತಂತೆ. ಡಾಕ್ಟರ್ ಇನ್ನು ಮುಂದೆ ಗರ್ಭಿಣಿಯಾಗುವುದು ಬೇಡ ಬೇಡ ಎಂಬ ಎಚ್ಚರಿಕೆಯ ಮಾತನ್ನು ನೂರಾರು ಸಲ ಹೇಳಿದ್ದರೂ, ಇಲ್ಲ, ಇಲ್ಲ, ಇದೊಂದು ಛಾನ್ಸ್ ಕೊಡಿ, ಕೊನೆ ಅವಕಾಶ ಅಂತ ಗೋಗರೆದು ಸವಾಲಾಗಿ ತೆಗೆದುಕೊಂಡ ಒಂಭತ್ತು ತಿಂಗಳಾದ ಮೇಲೂ ಹದಿನಾರು ದಿನ ಸತಾಯಿಸಿ, ಸಿಸೇರಿಯನ್ ಹೆರಿಗೆಯಲ್ಲಿ ಹುಟ್ಟಿದವಳು ಮಮತಾ. ಹಾಗಾಗಿ ತಾಯಿಯನ್ನು ನೋಡಲೇ ಇಲ್ಲ. ಇಡೀ ಜೀವನವನ್ನು ಅವಳು ಹೇಗಿದ್ದಿರರಬಹುದು, ಹತ್ತು ದಿನದಲ್ಲಿ ಎಷ್ಟೆಷ್ಟು ಸಲ ಎಲ್ಲೆಲ್ಲಿ ತನ್ನನ್ನು ಮುಟ್ಟಿರಬಹುದು, ತಾನು ಸಾಯುತ್ತೇನೆ, ಸತ್ತೇ ಹೋಗುತ್ತೇನೆ ಅಂತ ಖಚಿತವಾದಾಗ ನನ್ನ ಕಡೆ ಹೇಗೆ ನೋಡಿ ಕಣ್ಣು ತುಂಬಿಕೊಂಡಿರಬಹುದು ಎಂಬ ಲೆಕ್ಕಾಚಾರ, ಕನಸುಗಾರಿಕೆಯಲ್ಲಿ ಮಮತಾ ಕಳೆದಿದ್ದಾಳೆ.
ಆದರೆ ತಾಯಿಗೆ ತುಂಬಾ ಖ್ಯಾತಿಯಿತ್ತು. ಮೈಸೂರು ವಿಶ್ವವಿದ್ಯಾಲಯಕ್ಕೇ ಮನಶ್ಯಾಸ್ತ್ರದಲ್ಲಿ ಮೊದಲ ಸ್ನಾತಕೋತ್ತರ ಪದವೀಧರೆಯಂತೆ. ಮನಶ್ಯಾಸ್ತ್ರದ ಮಾಧವಿ ಎಂದೇ ಹೆಸರಾಗಿದ್ದ ಅವರು ಎಂ.ಎ ಮಾಡಿದ ಮೇಲೆ ಇನ್ನೊಬ್ಬ ಹೆಂಗಸು ಅದೇ ಎಂ.ಎ ಮಾಡುವುದಕ್ಕೆ ಇನ್ನೂ ಹದಿನಾರು ವರ್ಷಗಳಾಯಿತಂತೆ. ಪಠ್ಯ ಪುಸ್ತಕಗಳ ಲೇಖಕಿ ಬೇರೆ. ಇನ್ನೂ ಮುಖ್ಯವಾಗಿ ಬೆಂಗಳೂರು, ಊಟಿ, ವೆಲ್ಲೂರಿನ ಆಸ್ಪತ್ರೆಗಳಿಗೆಲ್ಲ ಹೋಗಿ ಕೌನ್ಸಿಲರ್ ಆಗಿ ಕೆಲಸ ಕೂಡ ಮಾಡುತ್ತಿದ್ದರು. ತುಂಬಾ ಲಕ್ಷಣವಾಗಿದ್ದರು ಮತ್ತು ಪ್ರತಿ ತಿಂಗಳೂ ಒಂದಲ್ಲ ಒಂದು ಹೊಸ ಕೇಶ ವಿನ್ಯಾಸವನ್ನು ವಿದ್ಯಾರ್ಥಿನಿಯರಿಗೆ ತೋರಿಸುತ್ತಿದ್ದರಂತೆ ಎಂದೂ ಕೂಡ ಮಮತಾ ಕೇಳಲ್ಪಟ್ಟಿದ್ದಾಳೆ.
ತಂದೆ ಹಳೇ ಮೈಸೂರು ಸೀಮೆಗೇ ಪ್ರಸಿದ್ಧ ಟೆನಿಸ್ ಆಟಗಾರ. ಜೊತೆಗೆ ಕ್ರಿಕೆಟ್ ಪಂದ್ಯಗಳ ವೀಕ್ಷಕ ವಿವರಣೆ ನೀಡುವ ಹವ್ಯಾಸ. ವೃತ್ತಿಯಲ್ಲಿ ಜೀವಶಾಸ್ತ್ರದ ಅಧ್ಯಾಪಕ. ಊಟಿ ಮತ್ತು ಬೆಂಗಳೂರಿನಲ್ಲಿ ನಡೆಯುವ ಡರ್ಬಿ ರೇಸ್‌ಗಳಿಗೆ ಗಂಡ-ಹೆಂಡತಿ ಇಬ್ಬರೂ ಕಾರು ಮಾಡಿಕೊಂಡು ಎರಡೆರಡು ದಿನ ಹೋಗಿ ಬರುತ್ತಿದ್ದರಂತೆ.
ಆ ಕಾಲಕ್ಕೆಕ್ಕೇ ಮೈಸೂರಿನ ಸಾಂಸ್ಕೃತಿಕ, ಸಾರ್ವಜನಿಕ ವಲಯದಲ್ಲಿ ಅನ್ಯೋನ್ಯವಾದ ಶೃಂಗಾರಮಯ ದಾಂಪತ್ಯಕ್ಕೆ ಇವರೇ ಮಾನದಂಡ, ಸ್ಫೂರ್ತಿ ಎಲ್ಲವೂ.
ಮಮತಾಗೆ ಅಮ್ಮನ ಫೋಟೋ ಗೊತ್ತು, ಪ್ರಸಿದ್ಧಿ ಗೊತ್ತು. ಜಗತ್ತಿನಲ್ಲೆಲ್ಲ ಹರಡಿಕೊಂಡಿರುವ ಅಮ್ಮನ ಬಂಧು ಬಳಗದ ಮೂಲಕ ಎಲ್ಲವನ್ನೂ ಕೇಳಿ, ಕೇಳಿಸಿಕೊಂಡೇ ಬಾಲ್ಯ, ಯೌವನವನ್ನು ಕಳೆದಳು. Micro-Biology ಓದಲು ಅಮೆರಿಕದಲ್ಲಿ ವಿದ್ಯಾರ್ಥಿ ವೇತನ ಸಿಕ್ಕಾಗ ಹೋಗಲು ಅಪ್ಪ ಬೇಡವೆನ್ನಲಿಲ್ಲ. ಆಮೇಲೆ, ಅಲ್ಲೇ ಉದ್ಯೋಗ, ಮದುವೆ, ಮಕ್ಕಳು ಅಂತ ವರ್ಷಗಳ ಮೇಲೆ ದಶಕಗಳು ಕೂಡ ಕಳೆದುಹೋದವು. ಹಿನ್ನೋಟದಿಂದ ಈಗ ಎಲ್ಲವನ್ನೂ ನೋಡಿದಾಗ, ನೆನಪಿಸಿಕೊಂಡಾಗ ಎಷ್ಟೊಂದು ದೀರ್ಘವಾದ ಬದುಕು ಎಂದೂ ಅನಿಸುತ್ತೆ. ಕೊನೆಗೆ ಜೀವನವೆಂದರೆ ಇಷ್ಟು ಕಡಿಮೇನಾ ಎಂದು ಕೂಡ ಅನಿಸುತ್ತದೆ.
ಆದರೆ ಅಮ್ಮ ತನ್ನ ಬದುಕಿನಲ್ಲಿ ಇಲ್ಲವೆನ್ನುವ ಭಾವನೆ ಮಮತಾಗೆ ಬರದೇ ಇರುವುದಕ್ಕೆ ಎರಡು ಕಾರಣ. ಮಾಧವಿಯ ತಾಯಿ ರಾಧಮ್ಮ ಇನ್ನೂ ಬದುಕಿದ್ದು, ತಾಯಿಯಿಲ್ಲದ ಕೊರತೆಯನ್ನು ತುಂಬಿದ್ದರು. ಹಾಗೆ ತಂದೆ ಕೂಡ ಮತ್ತೊಂದು ಮದುವೆ ಆಗದೆ ವಿಧುರರಾಗಿಯೇ ಉಳಿದು ಮಗಳಿಗೆ ಯಾವುದೇ ರೀತಿಯ ಭಾವನಾತ್ಮಕ ಮಾನಸಿಕ ಕೊರೆ ಆಗದ ಹಾಗೆ ನೋಡಿಕೊಂಡರು.
ಇದೆಲ್ಲದರ ಬೆಲೆ ಮಹತ್ವ ಮಮತಾಗೆ ಗೊತ್ತಾದದ್ದು ನಿಧಾನವಾಗಿ, ಕ್ರಮೇಣವಾಗಿ. ಅದೂ ಅವಳೇ ಸಂಸಾರಸ್ಥೆಯಾಗಿ ಆಗಾಗ ಅಪ್ಪನನ್ನು ನೋಡಲು ಮೈಸೂರಿಗೆ ಬರುತ್ತಿದ್ದಾಗ. ಅವರ ಒಂಟಿತನ, ಇನ್ನೂ ದೇಹವನ್ನು ಆರೋಗ್ಯವಾಗಿ, ಸೂಟಿಯಾಗಿ ಇಟ್ಟುಕೊಂಡಿರುವುದು, ಅಮ್ಮನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷವೂ ಮಹಿಳಾ ಸಮಾಜಕ್ಕೆ ಏಳು ಟೈಲರಿಂಗ್ ಮೆಶಿನ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದುದು, ಅಮ್ಮನ ಹೆಸರಿನಲ್ಲಿ ಮನಶ್ಯಾಸ್ತ್ರದ ವಿದ್ಯಾರ್ಥಿನಿಯರಿಗೆ Subject Scholarship ಕೊಡುತ್ತಿದ್ದುದು. ಅಮ್ಮನ ಬಗ್ಗೆ ಇಷ್ಟೊಂದು ವರ್ಷಗಳ ನಂತರ ಮಾತನಾಡುವಾಗಲೂ ಕಣ್ಣಲ್ಲಿ ಕಾಣಿಸಿಕೊಳ್ಳುವ ಮಿಂಚು. ಅಮೆರಿಕದಲ್ಲಿ ಬದುಕುತ್ತಿದ್ದ ಅವಳಿಗೆ ಇದೆಲ್ಲ ದೇವ ದುರ್ಲಭವೆಂದೇ ಮತ್ತೆ ಮತ್ತೆ ಅನಿಸುತ್ತಿತ್ತು. ಯಾರ ಬಗ್ಗೆಯೇ ಆಗಲಿ ನೆನಪು, ಕೃತಜ್ಞತೆ, ಪ್ರೀತಿಯೆಲ್ಲವೂ ಅಷ್ಟೊಂದು ದೀರ್ಘಕಾಲ ಉಳಿಯಬಹುದೆ? ಒಂದೇ ಪ್ರಮಾಣದ ತೀವ್ರತೆಯಲ್ಲಿ ಜೀವನದುದ್ದಕ್ಕೂ ಇರಬಹುದೇ? ಎಂಬ ಆಶ್ಚರ್ಯವೇ ಮಮತಾಳನ್ನು ಮತ್ತೆ ಮತ್ತೆ ಕಾಡುತ್ತಿತ್ತು.
ಈ ಕಾರಣಕ್ಕೋ ಏನೋ ಅಜ್ಜಿ ಕೂಡ ಅಪ್ಪನ ಜೊತೆಯೇ ಉಳಿದುಬಿಟ್ಟರು. ಅಮ್ಮನ ಸಹೋದರ-ಸಹೋದರಿಯರು ಇದ್ದರೂ, ಆಗಾಗ್ಗೆ ಅವರಲ್ಲಿಗೆ ಹೋಗಿ ಬಂದು ಮಾಡುತ್ತಿದ್ದರೂ ಜೊತೆಯಲ್ಲಿ ಅಂತ ಉಳಿದದ್ದು ಅಪ್ಪನ ಹತ್ತಿರ ಮಾತ್ರ. ನನಗೆ ಮಾಧವಿ ಮೇಲೆ ಇನ್ನಿಲ್ಲದ ಪ್ರೀತಿ. ಈ ಮನೆಯನ್ನು ಅವಳೇ ನಿಂತು ಕಟ್ಟಿಸಿದ್ದು. ಮೈಸೂರಿನಲ್ಲಿದ್ದ ಎಲ್ಲ ಮನೆಗಳ ವಾಸ್ತು-ವಿನ್ಯಾಸವನ್ನೆಲ್ಲ ಶೋಧಿಸಿ, ಇಟ್ಟಿಗೆ, ಇಟ್ಟಿಗೆ ಕಿಟಕಿ, ಕಿಟಕಿಯನ್ನು ಕೂಡ ಪರೀಕ್ಷಿಸಿ ಕಟ್ಟಿದ ಮನೆ. ಈ ಮನೆಯ ತೋಟವನ್ನು ಒಂಭತ್ತು ಭಾಗ ಮಾಡಿ ಒಂದೊಂದು ಭಾಗಕ್ಕೆ ದಶಾವತಾರದ ಒಂದೊಂದು ಹೆಸರು ಇಟ್ಟು, ಪ್ರತಿ ಭಾಗದಲ್ಲೂ ಚಪ್ಪರ ಎಬ್ಬಿಸಿದ್ದಳು. ಅದನ್ನೆಲ್ಲ ನೋಡಿಕೊಳ್ಳಬೇಕಾದದ್ದು ನನ್ನ ಕರ್ತವ್ಯ ತಾನೆ ಅಂತ ಅಳಿಯನ ಹತ್ತಿರವೇ ಇದ್ದುಬಿಟ್ಟರು.
ಅಪ್ಪ ಕೂಡ ಮಾಧವಿಯ ತಾಯಿ ಅತ್ತೆಯಲ್ಲ, ಸ್ವಂತ ತಾಯಿ ಇದ್ದ ಹಾಗೆ ಅಂತ ಪದೇ ಪದೇ ಹೇಳುತ್ತಲೇ ಇರೋರು. ಇಂತಹ ಅಪ್ಪ ಇದೀಗ ತೀರಿ ಹೋದರೂ ಮಾಧವಿಯ ತಾಯಿ ಇನ್ನೂ ಬದುಕೇ ಇದ್ದಾರೆ. ಅವರ ವಯಸ್ಸಿಗೆ ಗಟ್ಟಿಮುಟ್ಟಾಗಿಯೇ ಇದ್ದಾರೆ. ದೃಷ್ಟಿ ಮೊದಲಿನಷ್ಟು ಇಲ್ಲ. ಕಿವಿ ಕೂಡ ಚುರುಕಿಲ್ಲ. ಆದರೂ ಕೂಡ ಹಾಸಿಗೆ ಹಿಡಿದು ಮಲಗಿಲ್ಲ. ಸ್ವಂತದ ಕೆಲಸವನ್ನೆಲ್ಲ ಅವರೇ ಮಾಡಿಕೋತಾರೆ. ತರಕಾರಿ ಅಂಗಡಿಗೂ ಯಾರನ್ನಾದರೂ ಜೊತೆ ಮಾಡಿಕೊಂಡು ಹೋಗಿ ಬರುತ್ತಿದ್ದರು. ಆದರೆ ಬೀದಿ ದೀಪಗಳು ಆಗಾಗ್ಗೆ ಕೆಟ್ಟು ಹೋಗುತ್ತೆ ಅನ್ನುವ ಕಾರಣಕ್ಕೆ ಈಚೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟರು.
ಯಾರ‍್ಯಾರೋ ಬಂಧು ಬಳಗದವರನ್ನು ಹಿಡಿದು ನಂಬಿಕಸ್ಥ ಪುರೋಹಿತರು, ಅಡುಗೆ ಮಾಡುವವರನ್ನು ಗೊತ್ತು ಮಾಡಿ, ಮಮತಾ ಕರ್ಮಾಂತರಗಳನ್ನು ಮುಗಿಸಿದಳು. ಅಪ್ಪ-ಅಮ್ಮನ ಬಹುಪಾಲು ಸಮಕಾಲೀನರು ತೀರಿ ಹೋಗಿದ್ದರು. ಉಳಿದವರು ಕೂಡ ಶಾಸ್ತ್ರ, ಆಚರಣೆ, ಊಟಗಳಿಗೆ ಬರುವಷ್ಟು ಆರೋಗ್ಯವಾಗಿರಲಿಲ್ಲ. ಬಂದವರಿಗೂ ಕುಳಿತು ಊಟ ಮಾಡುವಷ್ಟು, ಮಾತನಾಡುವಷ್ಟು ಚೈತನ್ಯವಿರಲಿಲ್ಲ. ಕೆಲವರಿಗಂತೂ ನೆನಪಿನ ಸ್ವಭಾವವೇ ತಿರುಚಿ ಹೋಗಿತ್ತು. ಅಪ್ಪ ಎಲ್ಲವನ್ನೂ ಇವಳಿಗೇ ವಿಲ್ ಮಾಡಿ ತೀರಿ ಹೋಗಿದ್ದರು. ಮನೆಯೆಲ್ಲ ಬಿಕೋ ಎನ್ನುತ್ತಿತ್ತು. ಮಮತಾ ಸುಮ್ಮನೆ ಕುಳಿತುಕೊಂಡು ಮನೆಯ ತಾರಸಿ, ತೋಟದ ಪಾತಿ, ನಿರ್ಜನ ಬೀದಿಗಳನ್ನು ನೋಡುತ್ತಾ ತಂದೆ-ತಾಯಿ ಬದುಕಿ ಬಾಳಿದ ಊರಿನಲ್ಲಿ ಇನ್ನು ನಾನು ನೆನಪಿನಲ್ಲಿ ಕೂಡ ಇರುವುದಿಲ್ಲ ಎಂಬುದನ್ನು ನೆನಸಿಕೊಳ್ಳುತ್ತಾ ಅಪ್ಪನ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳುತ್ತಿದ್ದಳು. ಅಪ್ಪನ ತ್ಯಾಗ, ಒಂಟಿತನ, ಜೀವನದಲ್ಲಿ ಕೊನೆಯ ತನಕ ರುಚಿ-ಆಸಕ್ತಿ ಕಳೆದುಕೊಳ್ಳದೆ ಸಂತೋಷವಾಗೇ ಬದುಕಿದ್ದು, ಎಲ್ಲ ಕಣ್ಣು ಮುಂದೆ ಬರುತ್ತಿತ್ತು. ವಿಷಾದದ ಮೇಲುಸ್ತರ ಮರೆಯಾದ ಮೇಲೆ ಎಲ್ಲವೂ ಸಾರ್ಥಕವಾದದ್ದು, ಪವಿತ್ರವಾದದ್ದು, ಅಪ್ಪ ಇನ್ನೂ ಸತ್ತಿಲ್ಲ, ಸಾಯುವುದೂ ಇಲ್ಲ ಅನಿಸುತ್ತಿತ್ತು.
ಕರ್ಮಾಂತರದ ಎಂಟನೇ ದಿನದಿಂದ ಅಜ್ಜಿ ರಾಗ ಎಳೆಯುವುದಕ್ಕೆ ಶುರುಮಾಡಿತು. ಯಾಕೆ ಶುರುಮಾಡಿತು, ಹೇಗೆ ಶುರುಮಾಡಿತು ಮಮತಾಗೆ ಗೊತ್ತಿಲ್ಲ. ಮೊದಮೊದಲು ಸುಮ್ಮನೆ ಹೇಳುತ್ತಿದ್ದಾರೆ ಅಂದುಕೊಳ್ಳುತ್ತಿದ್ದಳು. ಆದರೆ ಬರ‍್ತಾ ಬರ‍್ತಾ ದಿನವೆಲ್ಲ ಯಾವಾಗಲೂ ಅದೇ ಮಾತುಗಳು, ಮಾತಿನಲ್ಲಿ ವಿಪರೀತ ಒರಟುತನ, ಹತಾಶೆ. ಮಧ್ಯರಾತ್ರಿ ಎಬ್ಬಿಸಿ ಯಾವ ಯಾವುದೋ ಘಟನೆ, ಕತೆ, ಪ್ರಸಂಗಗಳನ್ನೆಲ್ಲ ಎಡಬಿಡದೆ ಹೇಳುವರು.
*****
ನಿಮ್ಮಪ್ಪ ಒಳ್ಳೆಯವರು ನಿಜ. ಆದರೆ ನೀನು ತಿಳಿದುಕೊಂಡಷ್ಟು ದೊಡ್ಡ ಮನುಷ್ಯ ಅಲ್ಲ. ಮಾಧವಿ ಇವನು ಹಾಕಿದ ಗಡಿ ಮೀರುತ್ತಿರಲಿಲ್ಲ. ಇವನು ಹಠ ಹಿಡಿದು ಮಗು ಬೇಡ ಅಂತ ಹೇಳಿದ್ದರೆ, ಅವಳು ಇನ್ನೊಂದು ಮಗುವಿಗೆ ಪ್ರಯತ್ನಿಸುತ್ತಿರಲಿಲ್ಲ. ಆಯ್ತು, ಗಂಡ-ಹೆಂಡತಿ ಸಮಾಚಾರ. ಅದೇನು ಮಾಡಿಕೊಂಡರೋ, ಅದೇನು ಮಾತಾಡಿಕೊಂಡರೋ ನೀನು ಹುಟ್ಟಿದೆ. ಹುಟ್ಟಿದ ಹದಿನೈದು ದಿನಕ್ಕೇ ಮಾಧವಿ ತೀರಿಕೊಂಡಳು. ಮಗಳು ಅಂತ ಹೇಳ್ತಾ ಇಲ್ಲ. ಸಾಯುವ ವಯಸ್ಸಲ್ಲ ಅದು ಅನ್ನುವುದು ಎಲ್ಲರೂ ಹೇಳಿದ ಮಾತು. ಸಾಯಬೇಕಾದ ವ್ಯಕ್ತಿಯಾಗಿರಲಿಲ್ಲ. ನಿಮ್ಮ ಅಮ್ಮ ಬದುಕಿ, ಬಾಳಿ, ಬೆಳಗಬೇಕಾಗಿದ್ದವಳು.
ಅವಳು ತೀರಿಹೋದ ಮೇಲೆ ಇವನು ಇನ್ನೊಂದು ಲಗ್ನ ಮಾಡ್ಕೋತಾನೆ ಅಂತ ಊರ ತುಂಬಾ ಸುದ್ದಿಯಿತ್ತು. ಆದರೆ ನಿಮ್ಮಮ್ಮ ಸ್ನೇಹಮಯಿ ಹೆಣ್ಣು. ಗಂಡನನ್ನು ಅಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ತುಂಬಾ ಅನ್ಯೋನ್ಯವಾದ ಗಂಡ-ಹೆಂಡತಿ ಅಂತ ಎಲ್ಲರಿಗೂ ನಿಮ್ಮಮ್ಮನೇ ಯಾವಾಗಲೂ ಹೇಳಿಕೊಳ್ಳುತ್ತಿದ್ದಳು. ಎಲ್ಲರ ಕಣ್ಣು ಇವನ ಮೇಲಿತ್ತು. ಆ ಭಯಕ್ಕೇ ಮದುವೆ ಆಗಲಿಲ್ಲ. ಮಾಧವಿ ಹೋದ ಹೊಸತರಲ್ಲಿ ನನ್ನ ಹತ್ತಿರ ಅಷ್ಟೊಂದು ಮಾತು ಕೂಡ ಆಡುತ್ತಿರಲಿಲ್ಲ. ವಯಸ್ಸಾದ ಮುದುಕಿ ಎನ್ನುವ ಗೌರವವೂ ಇಲ್ಲದೆ ರಾತ್ರಿ ಹೊತ್ತು ಕ್ಲಬ್‌ನಿಂದ ತುಂಬಾ ತಡವಾಗಿ ಬರೋನು.
ದಿನವೂ ಅದೇ ಸುದ್ದಿ, ಅದೇ ಮಾತುಕತೆ. ಆ ಮೇಡಂ ಜೊತೆ ಸಂಬಂಧ; ಕ್ಲಬ್ ಪೂವಮ್ಮನ ಜೊತೆ ಸಂಬಂಧ ಇದೆ; ಇವಳ ಜೊತೆ ಶ್ರೀರಂಗಪಟ್ಟಣಕ್ಕೆ ಹೋದರು; ಅವಳ ಜೊತೆ ಈರೋಡ್‌ಗೆ ಹೋದರು; ಗುಟ್ಟಾಗಿ ಬೆಂಗಳೂರಲ್ಲಿ ಒಬ್ಬಳನ್ನು ಮದುವೆ ಆಗಿದ್ದಾರೆ; ಬೆಂಗಳೂರಲ್ಲೇ ಸಂಸಾರ ನಡೀತಾಯಿದೆ; ಶನಿವಾರ ಭಾನುವಾರ ಆಸಾಮಿ ಬೆಂಗಳೂರಿಗೆ ಹೋಗೋದು ಕ್ರಿಕೆಟ್ ಮ್ಯಾಚ್ ನೋಡೋಕಲ್ಲ, ಹೊಸ ಹೆಂಡತಿ ಜೊತೆ ಸಂಸಾರ ಮಾಡೋಕ್ಕೆ.
ಇದನ್ನೆಲ್ಲ ನಾನು ಹೇಗೆ ನಿಂದಿಸಿ ಕೇಳುವುದು. ಇಬ್ಬರಿಗೆ ಎಷ್ಟೂ ಅಂತ ಅಡುಗೆ ಬೇಯಿಸಿ ಹಾಕೋಕೆ ಆಗುತ್ತೆ. ಈ ಮನುಷ್ಯ ಹೀಗೆಲ್ಲ ಇದ್ದರೆ ಎರಡು ಹೊತ್ತು ಯಾಕೆ ಬಿಸಿ ಬಿಸಿ ಅಡುಗೆ ಮಾಡಿ ಹಾಕಬೇಕು. ಬೆಳಿಗ್ಗೆ ಒಂದು ಸಲ ಅಡುಗೆ ಮಾಡಿದರೆ ರಾತ್ರಿಯ ತನಕವೂ ಅದೇ ನಡೆಯೋದು. ಒಂದು ದಿನ ಬಾಯಿಬಿಟ್ಟು ಕೇಳಲಿಲ್ಲ, ಯಾಕೆ ಇದೆಲ್ಲ ಅಂತ.
*****
ಮಮತಾ ಅಮೆರಿಕಕ್ಕೆ ಹೊರಡಲು ಇನ್ನು ಎರಡು ಹಗಲು, ಒಂದು ರಾತ್ರಿ ಮಾತ್ರ ಇತ್ತು. ಒಂದು ಟ್ಯಾಕ್ಸಿ ಮಾಡಿ ನನ್ನನ್ನು ನಾನು ಹೇಳಿದ ಒಂದು ಜಾಗಕ್ಕೆ ಕರೆದುಕೊಂಡು ಹೋಗು. ಒಂದರ್ಧ ಘಂಟೆಯ ಕೆಲಸ. ಕೊಪ್ಪಲು ಗೇಟಿನಿಂದ ಜಯನಗರ ಗೇಟಿಗೆ ಎಷ್ಟು ಮಹಾದೂರ. ಹೋಗಿ ಬರೋಣ. ಅಜ್ಜಿಯ ಬೇಡಿಕೆ ಶುರುವಾಯಿತು. ಮತ್ತೆ ಮತ್ತೆ ಅದೇ ಬೇಡಿಕೆ.
ವಿಚಿತ್ರ ಎನಿಸಿತು ಮಮತಾಗೆ. ಯಾರ ಮನೆಗೆ ಹೋಗಬೇಕು? ಎಷ್ಟು ಕೇಳಿದರೂ ಹೇಳಲಿಲ್ಲ. ಮಾಡ್ತೀಯೋ ಇಲ್ಲವೋ ಟ್ಯಾಕ್ಸಿ ಹೇಳು? ಕರೆದುಕೊಂಡು ಹೊಗ್ತೀಯೋ ಇಲ್ಲವೋ? ಅಜ್ಜಿ ಹಟ ಬಿಡಲಿಲ್ಲ.
ಅಂತೂ ಒಂದು ಮಧ್ಯಾಹ್ನ ಅಜ್ಜಿ-ಮೊಮ್ಮಗಳು ಹೊರಟರು. ಅಜ್ಜಿಯ ಕಣ್ಣಲ್ಲಿ ನೀರು ತುಂಬುತ್ತಿರುವುದನ್ನು ಮಮತಾ ಗಮನಿಸಿದಳು. ಯಾಕಜ್ಜಿ ಅಳ್ತಾ ಇದೀ. ಅಜ್ಜಿಯ ಎರಡೂ ಕೈಗಳನ್ನು ಹಿಡಿದುಕೊಳ್ಳಲು ಮಮತಾ ಪ್ರಯತ್ನಿಸಿದಳು.
ಅಳದೆ ಏನು ಮಾಡಬೇಕು? ನಾಳೆ ರಾತ್ರಿ ಬೆಂಗಳೂರಿಗೆ ಹೊರಡುವೆ. ಅಲ್ಲಿಂದ ಅಮೆರಿಕಕ್ಕೆ ಹಾರುವೆ. ನೀನು ಇನ್ನೊಂದು ಸಲ ಇಲ್ಲಿಗೆಲ್ಲ ಬರ‍್ತೀಯೋ ಇಲ್ಲವೋ? ಬಂದರೂ ನಾನು ಇರಬೇಕಲ್ಲ. ಇನ್ನೂ ಯಾಕಿರಬೇಕು ನಾನು? ಮಮತಾಳಿಗೆ ಗಂಟಲು ಸೆರೆ ಕಟ್ಟಿತು.
ನೋಡು ಮಮತಾ, ಆವತ್ತು ಕೂಡ ಇಷ್ಟೇ ಹೊತ್ತು ಆಗಿತ್ತು. ಇಷ್ಟೊಂದು ಬಿಸಿಲಿರಲಿಲ್ಲ ಅಷ್ಟೇ. ರೋಡ್‌ನಲ್ಲಿ ಇಷ್ಟೊಂದು ವಾಹನಗಳು ಕೂಡ ಇರಲಿಲ್ಲ. ನಾನಂತೂ ಆವತ್ತು ಒಂದೇ ಉಸಿರಿನಲ್ಲಿ ಓಡೋಡಿ ಜಯನಗರ ಕ್ರಾಸಿಂಗ್ ಹತ್ತಿರ ಬಂದೆ. ಇದೇ ಜಾಗ. ಅಜ್ಜಿ ಕೈ ಬೆರಳು ಮಾಡಿ ತೋರಿಸಿದಳು.
ಇಲ್ಲಿ ನೋಡು, ಈಗ ಮನೆಗಳೆಲ್ಲ ಬಂದಿವೆಯಲ್ಲ ಅಲ್ಲಿ ಆವಾಗ ಒಂದು ಪೆಟ್ಟಿ ಅಂಗಡಿ ಮಾತ್ರವಿತ್ತು. ಆ ಹೆಂಗಸು ಬಂದು ರೈಲ್ವೆ ಗಾರ್ಡ್ ರೂಮಿನಲ್ಲಿ ಕುಳಿತುಕೊಳ್ಳುತ್ತಿದ್ದಳು. ನಿಮ್ಮಪ್ಪ ಕಾಲೇಜಿಂದ ಸೈಕಲ್ ತಳ್ಳಿಕೊಂಡು ಬರುತ್ತಿದ್ದರು. ಅವಳು ಗಾರ್ಡ್ ರೂಮಿನಿಂದ ಹೊರ ಬಂದು ಸೈಕಲ್ ಹಿಡಿದುಕೊಂಡು ಮಾತನಾಡುತ್ತಾ ನಿಲ್ಲುತ್ತಿದ್ದಳು. ಹೆರಳು ಹಾಕಿಕೊಂಡಿರುತ್ತಿದ್ದಳು. ಹೆಗಲಲ್ಲಿ ದೊಡ್ಡ ವ್ಯಾನಿಟಿ ಬ್ಯಾಗ್. ತುಂಬಾ ಹೊತ್ತು ಮಾತಾಡ್ತಾ ನಿಂತಿರೋರು.
ಜನ ಹೇಳ್ತಾ ಇರೋದೆಲ್ಲ ನಿಜವೇ ಅನಿಸಿತು. ನಿಮ್ಮಪ್ಪ ಇವಳನ್ನು ಮದುವೆ ಮಾಡ್ಕೋಬಹ್ದು. ಸಂಬಂಧ ಇಟ್ಕೋಬಹುದು ಅನಿಸಿತು. ತುಂಬಾ ಒದ್ದಾಡಿದೆ, ಸಂಕಟಪಟ್ಟೆ. ಎರಡು ಮೂರು ದಿನದ ನಂತರ ಮತ್ತೆ ಬಂದೆ. ಅದೇ ಹೆಂಗಸು, ಅದೇ ನಿಮ್ಮಪ್ಪ. ಮನಸ್ಸು ತಡೀಲಿಲ್ಲ. ಓಡಿಹೋಗಿ ನಿಮ್ಮಪ್ಪನ ಸೈಕಲ್ ಹಿಡಿದುಕೊಂಡು ಗಳಗಳ ಅತ್ತುಬಿಟ್ಟೆ.
ನನ್ನ ಮಗಳಿಗೆ ವಂಚನೆ ಮಾಡಬೇಡಿ. ನನ್ನ ಕರುಳ ಬಳ್ಳಿ ಕತ್ತರಿಸಿಕೊಂಡು ಹೋಗಿ ಇನ್ನೊಬ್ಬರಿಗೆ ಕೊಡಬೇಡಿ. ಕೈ ಮುಗಿದು ಕೇಳಿಕೊಂಡೆ. ಆಕೆಯ ಎರಡೂ ಕೈಯನ್ನು ಹಿಡಿದು ಅಂಗಲಾಚಿದೆ.
ಅಳ್ತಾ ಅಳ್ತಾ ಓಡಿ ಬಂದೆ. ನಿಮ್ಮಪ್ಪ ಕೂಡ ಹಿಂದೆಯೇ ಬಂದರು. ಏನೂ ಮಾತನಾಡಲಿಲ್ಲ. ಆಮೇಲೆ ಕೂಡ ನಾನು ವಾರಕ್ಕೆ, ಹದಿನೈದು ದಿನಕ್ಕೆ, ತಿಂಗಳಿಗೆ ಅಂತ ಮತ್ತೆ ಮತ್ತೆ ಬಂದು ಇಲ್ಲಿ ನಿಲ್ಲುತ್ತಿದ್ದೆ. ನಿಮ್ಮಪ್ಪ ಆ ಹೆಂಗಸು ಇಲ್ಲಿ ಕಾಣಿಸಿಕೊಳ್ಳಲಿಲ್ಲ.
ಸುಳ್ಳು ಹೇಳಬಾರದು, ನಿಮ್ಮಪ್ಪ ವಂಚನೆ ಇಲ್ಲದ ಮನುಷ್ಯ. ಆಮೇಲೆ ಒಂದು ದಿನ ಕೂಡ ಇಂತಹ ಮಾತು ಕೇಳಿಬರಲಿಲ್ಲ.
ಇಷ್ಟೆಲ್ಲ ಹೇಳಿಕೊಳ್ಳುವಾಗ ಅಜ್ಜಿ ರೈಲ್ವೆ ಗೇಟ್, ಗಾರ್ಡ್ ರೂಮ್, ಆವತ್ತು ಇಬ್ಬರೂ ಮಾತನಾಡುತ್ತ ನಿಲ್ಲುತ್ತಿದ್ದ ಜಾಗದ ನಡುವೆ ಪಟಪಟನೆ ಓಡಾಡಿದಳು. ಕಣ್ಣೀರು ಒರೆಸಿಕೊಂಡಳು. ಅದೇನೋ ನಿರ್ಧಾರ ಮಾಡಿದವಳಂತೆ ಕೆಮ್ಮಿದಳು.
ಆಮೇಲೆ ಟ್ಯಾಕ್ಷಿಯಲ್ಲಿ ಮನೆಗೆ ವಾಪಸ್ ಹೋಗುವಾಗ ಮೊಮ್ಮಗಳ ನೆತ್ತಿಯನ್ನು ಮತ್ತೆ ಮತ್ತೆ ನೇವರಿಸಿದಳು. ಕಾರು ಮನೆ ಮುಂದೆ ನಿಂತಾಗ ಮೊಮ್ಮಗಳನ್ನು ಬಾಚಿ ತಬ್ಬಿಕೊಂಡಳು. ಇನ್ನೂ ಒಂದು ಸಲ ಕಣ್ಣು ಒರೆಸಿಕೊಂಡಳು. ಇಬ್ಬರೂ ಮನೆ ಒಳಗೆ ಹೆಜ್ಜೆ ಹಾಕಿದರು.
ಅಜ್ಜಿಯ ಹೆಜ್ಜೆಗಳೇ ಹೆಚ್ಚು ದೃಢವಾಗಿದ್ದವು.
ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.
ತುಂಬಾ ಚೆನ್ನಾಗಿದೆ