ಸುಮಾ ವೀಣಾ
ಬಾಡಿದ ಸಸಿ ಮಲೆಯ ಪೆತ್ತಂತೆ- ರತ್ನ ತ್ರಯರಲ್ಲಿ ಎರಡನೆಯವನಾದ ಪೊನ್ನನ ಮಾತಿದು. ಸಸಿ ಎಂದರೆ ಎಳಸು ಎಂತಲೂ ಅಷ್ಟೇನು ಕಾರ್ಯಕ್ಷಮತೆ ಇಲ್ಲದ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ. ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲು ಮೂಲ ಅರ್ಹತೆ ಬೇಕಾಗುತ್ತದೆ ಇಲ್ಲವಾದರೆ ಆ ಕೆಲಸ ಸಾಗುವುದಿಲ್ಲ.
ಜೈವಿಕ ಗುಣಲಕ್ಷಣಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಂದು ಹೂ ಬೀರುವ ಸುವಾಸನೆಯನ್ನು ಇನ್ನೊಂದು ಹೂ ಬೀರಲು ಸಾದ್ಯವೇ? ಒಂದು ಹಣ್ಣು ಕೊಡುವ ರುಚಿಯನ್ನು ಇನ್ನೊಂದು ಹಣ್ಣು ಕೊಡಲು ಸಾಧ್ಯವೇ? ಖಂಡಿತಾ ಇಲ್ಲ. ಇನ್ನೂ ಮುಂದುವರೆದು ಹೇಳುವುದಾದರೆ ದೈಹಿಕ ಬಲವೂ ಗಣ್ಯವಾಗುತ್ತದೆ ಅವುಗಳ ಜೈವಿಕ ಲಕ್ಷಣಗಳಂತೆ ಅವು ಇರುತ್ತವೆ. ಕೆಲವರು ಕಡಿಮೆ ಕೆಲಸವನ್ನೂ ಇನ್ನೂ ಕೆಲವರು ಹೆಚ್ಚಿನ ಕೆಲಸವನ್ನು ಮಾಡುವಂಥವರಾಗಿರುತ್ತಾರೆ ಅದಕ್ಕೆ ಅಜಗಜಾಂತರ ಅನ್ನುವ ಮಾತು ಇರುವುದು.
ಪ್ರಸ್ತುತ ಬಾಡಿದ ಸಸಿ ಪರ್ವತವನ್ನು ಹತ್ತಲು ಸಾಧ್ಯವೇ ಅನ್ನುವ ಅರ್ಥ ಬರುತ್ತದೆ. ಮೂಲ ಮಾತುಗಳಲ್ಲೆ ಸಸಿ, ಬಾಡಿರುವುದು ಎಂಬ ಮಾತುಗಳು ಬರುತ್ತವೆ . ಹೀಗಿದ್ದು ಪರ್ವತವನ್ನು ಏರಿ ನೆಲೆ ಕಂಡುಕೊಳ್ಳಲು ಸಾಧ್ಯವೇ? ಹಾಗೆಂದುಕೊಂಡರೆ ಅದು ಮೂರ್ಖತನದ ಪರಮಾವಧಿ ಅಲ್ವೆ! ಅಷ್ಟೇನು ಕ್ಷಮತೆ ಇಲ್ಲದೆ ಪರ್ವತವನ್ನೇರುವ ಪ್ರಯತ್ನ ಮಾಡಬಹುದು ಆದರೆ ಪರ್ವತವನ್ನೇರಿಯೇ ಬಿಡುವೆ ಎಂಬುದು ಹುಂಬತನದ ಮಾತು.
ಹಾಗೆ ಬಸವನ ಹುಳು ಹಾರಾಡಲು ಸಾಧ್ಯವೇ? ಅದರ ಗುಣವೇ ನಿಧಾನವಾಗಿ ಚಲಿಸುವುದು .ಕೃತಿ ರೂಪಕ್ಕಿಳಿಯದವುಗಳಿಂದ ನಾವು ಅಪೇಕ್ಷೆ ಪಡುವುದು ಸಲ್ಲ ಎಂಬುದನ್ನೆ ಪ್ರಸ್ತುತ ಮಾತು ಹೇಳುತ್ತದೆ.
ಆಕಾಶಕ್ಕೆ ಏಣಿ ಹಾಕುವ ಯೋಚನೆ ಎಂದಿಗೂ ಸರಿಯಲ್ಲ .ಮುಗಿಲ ಮಲ್ಲಿಗೆಯನ್ನು ಮೆಲ್ಲಗೆ ಕೈಗೆ ತೆಗೆದುಕೊಂಡೇ ಬಿಡುತ್ತೇವೆ ಎನ್ನುವ ಮಾತುಗಳೆಲ್ಲ ನಗು ತರಿಸುವಂತದ್ದು. ತನ್ನಾಯವನ್ನು ನೋಡಿ ಕೈಯೆಡಕದಲ್ಲಿ ಸಂಸಾರವನ್ನಿರಿಸಿಕೊಳ್ಳಬೇಕು ಎಂಬ ಮಾತಿನಂತೆ ನಮ್ಮ ಲಭ್ಯತೆ ನೋಡಿ ಮುಂದಿನ ಯೋಜನೆಗಳನ್ನು ಹಾಕಿಕೊಳ್ಳಬೇಕು .
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.
.