ಸುಮಾ ವೀಣಾ
ಕೊಲ್ಲದುದೆ ಧರ್ಮ- ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ ಲಲಿತ ಘಟೆಯ ಕತೆಯಲ್ಲಿ ಉಲ್ಲೇಖವಾಗಿರುವ ಮಾನವ ಧರ್ಮವನ್ನು ಸಾರುವ ವಾಕ್ಯವಿದು. ಬೇಟೆಯಲ್ಲಿದ್ದ ಲಲಿತಘಟನಿಗೆ ಅಭಯಸೇನಾ ಭಟಾಚಾರ್ಯರು ಕೊಲ್ಲದುದೆ ಧರ್ಮ ಎಂದು ಉಪದೇಶಿಸುತ್ತಾರೆ.
ಹುಟ್ಟು ಮನುಷ್ಯನಿಗೂ ಪ್ರಾಣಿಗಳಿಗೂ ಸಸ್ಯಾವಳಿಗೂ ಒಂದೇ. ಬದುಕಲೇಬೇಕೆಂಬ ಆಸೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳಿಗೂ ಇರುತ್ತದೆ. ಮನುಷ್ಯ ಬುದ್ದಿಯನ್ನು, ದೈಹಿಕ ಶ್ರಮವನ್ನು ಉಪಯೋಗಿಸಿ ಕೆಲಸ ಮಾಡುತ್ತಾನೆ ಹಾಗೆ ಪ್ರಾಣಿಗಳು ಆಕ್ರಮಣಕಾರಿಗಳಾಗುವುದು ಹೊಟ್ಟೆಗಾಗಿ ಮತ್ತು ಇತರರಿಂದ ರಕ್ಷಿಸಿಕೊಳ್ಳಲು . ಆಸೆ, ಸುಖದ ಅನ್ವೇಷಣೆಯಲ್ಲಿ ಮನುಷ್ಯ ಪ್ರತೀ ಕ್ಷಣವೂ ಕಾಲ ಕಳೆಯುತ್ತಿರುತ್ತಾನೆ. ಮನುಷ್ಯ ಮನುಷ್ಯನನ್ನೆ ನಿರ್ದಾಕ್ಷಿಣ್ಯವಾಗಿ ಕೊಲ್ಲುವ ಹಂತಕ್ಕೆ ಬಂದಿದ್ದಾನೆ. ಈ ಕಾರಣದಿಂದ ಮನುಷ್ಯ ಸಂಘಜೀವಿ ಎನಿಸಿಕೊಂಡಿದ್ದರ ಉದ್ದೇಶ ದಿಕ್ಕು ತಪ್ಪುತ್ತಿದೆಯೇ ಅನ್ನುವ ಭಾವ ಆವರಿಸುತ್ತದೆ.
ಸ್ವಾರ್ಥವನ್ನು ಬಿಟ್ಟು ತನ್ನಂತೆ ಬದುಕುವ ಸಹಮಾನವರಿಗೆ ಪರಸ್ಪರ ಸಂಚನೆಗಳಾಗದಂತೆ ಬದುಕುವುದೆ ಮನುಷ್ಯ ಧರ್ಮವಾಗಬೇಕು. ಪರರಿಗೋಸ್ಕರವೇ ಬದುಕಿದ ಅದೆಷ್ಟೋ ಜನರು ಸಿದ್ಧಪುರುಷರು, ಸಾಧಕರು, ಹೋರಾಟಗಾರರು ನಮ್ಮ ನಡುವಿದ್ದಾರೆ ಅಲ್ಲವೆ. ಇತ್ತೀಚೆಗೆ ಇರಿದು ಕೊಲ್ಲುವ,ಗುಂಡಿಕ್ಕಿ ಕೊಲ್ಲುವ,ಹೊಡೆದು ಕೊಲ್ಲುವ ಸುದ್ದಿಗಳು ಹೆಚ್ಚು ಹೆಚ್ಚು ಕೇಳಿಸುತ್ತಿವೆ . ಹೀಗೆ ಮುಂದುವರೆದರೆ ಮನುಷ್ಯಶರೀರ ಹೊತ್ತ ಮೃಗೀಯ ಸಮಾಜವಾಗಿಬಿಡುತ್ತದೆಯೋ ಏನೋ? ಸುರಕ್ಷತೆ ಅನ್ನುವುದು ಮರೀಚಿಕೆಯಾಗಿ ಬಿಡುತ್ತದೆಯೋ ಅನ್ನುವ ಪ್ರಶ್ನೆಗಳು ಕಾಡಲು ಪ್ರಾರಂಭವಾಗುತ್ತವೆ.
ಮನುಷ್ಯ ಮನುಷ್ಯನನ್ನೆ ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ಮಧುರತೆಯನ್ನು ಹಾಳು ಮಾಡುತ್ತದೆ .ಅಲ್ಪದರಲ್ಲಿಯೇ ತೃಪ್ತಿ ಹೊಂದುವಂಥವರಾಗಬೇಕು ಅತೃಪ್ತ ಮನಸ್ಸು ಎಂದಿಗೂ ಅಪಾಯಕಾರಿ ಪರರ ಜೀವ ತೆಗೆದು ನೆಮ್ಮದಿಯ ಬದುಕು ಬದುಕಲು ಸಾಧ್ಯವೇ ಖಂಡಿತಾ ಇಲ್ಲ ಕಾನೂನು ಕಟ್ಟಳೆಗಳಲ್ಲಿ ಬಂಧಿಯಾಗಿ ನಿತ್ಯ ಸಾವನ್ನು ಅನುಭವಿಸಬೇಕಾಗುತ್ತದೆ. ಇಷ್ಟು ಚಂದದ ಬದುಕನ್ನು ನಾವು ಪಡೆದಿದ್ದೇವೆ ಎಂದಮೇಲೆ ಈ ಆಕ್ರಮಣಕಾರಿ ಮನಸ್ಥಿತಿ ಕೊಂದು ಬದುಕುವ ದುರಾಲೋಚನೆ ಏಕೆ ತಿಳಿಯುತ್ತಿಲ್ಲ. ಒಂದೇ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ರಸ್ತೆಯನ್ನೆ ಹಂಚಿಕೊಂಡು ಆದಷ್ಟು ಎಚ್ಚರದಿಂದ ಕ್ಷೇಮವಾಗಿ ಮನೆ ತಲುಪುವಂತೆ ಈ ಬದುಕಿನ ಪ್ರಯಾಣವನ್ನು ಸುಖಾಂತ್ಯ ಮಾಡಿಕೊಳ್ಳುವುದು ಒಂದು ಧರ್ಮವೇ ಸರಿ!
ಈ ಅಂಕಣದ ಹಿಂದಿನ ಸಂಚಿಕೆಗಳ ಧ್ವನಿರೂಪಕವನ್ನು ಆಲಿಸಲು ಈ ಕೆಳಗಿನ ಯೂ ಟ್ಯೂಬ್ ಲಿಂಕ್ ನ್ನು ಕ್ಲಿಕ್ ಮಾಡಿ. ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ SUBSCRIBE ಆಗಿರಿ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.