ಆಷಾಡದ ಮಳೆಗೆ ಬಿಡುವು ಕೊಡುವ ಉಮೇದಿರುವುದಿಲ್ಲ.ಜೋ ಎನ್ನುವುದನ್ನು ಹೊರತುಪಡಿಸಿದರೆ ಜೀರುಂಡೆಗಳ ಜೀಗುಟ್ಟುವಿಕೆ ಮಾತ್ರ ಸದ್ಯ ನನ್ನ ಮನೆ ಸುತ್ತ ಕೇಳ್ತಿರೋ ಸದ್ದು.ಹೊರಗೆ ಕಾಲಿಟ್ಟರೆ ಜಾರಿಕೆ.ಮಳೆ ಶುರುವಾಗಿ ಇಪ್ಪತ್ತು ದಿನ ಅಯ್ತು. ಅಂಗಳದಲ್ಲಿ ಪಾಚಿ ಬೆಳೆದು ಹಸಿರುಗಟ್ಟಿಯಾಗಿದೆ.ಇಷ್ಟು ಸಣ್ಣ ಅವಧಿಯಲ್ಲಿ ಜೀವ ಜಿನುಗುವುದು ನಂಗೆ ಯಾವತ್ತಿಗೂ ಅಚ್ಚರಿಯೇ.
ಅಂಗಳ ದಾಟಿ ಆಚೆಗೆ ಹೋದರೆ ಅಣುವಗಲದ ಎಲೆ ಹರವಿಕೊಂಡ ಧಿಮಾಕಿನ ಪುಟಾಣಿ ಸಸಿಗಳು ‘ಹೆಂಗೆ ನಾವು’ ಅಂತಿದ್ದಾವೆ !ಕರಗಿದ ಮರದ ಬೊಡ್ಡೆಯ ಮೇಲೆಲ್ಲ ಮೊಲ್ಲೆ ಹೂಚೆಲ್ಲಿದಂತೆ ಅಣಬೆ! ಅವು ತಿನ್ನುವ ಅಣಬೆಗಳಾ ಕಹಿ ಜಾತಿಯವಾ ನಂಗೊಂದೂ ಗೊತ್ತಾಗಲ್ಲ. ಕೆಲಸದವರು ಬಂದಾಗ ಮಾತ್ರ ‘ಯೇ ಎಷ್ಟ್ ಸರ್ತಿ ಹೇಳ್ಕೊಟ್ರು ನಿಮಗ ತಿಳಿಯಕಿಲ್ಲ ಹೋಗತ್ಲಗಿ’ ಅಂತ ಹುಸಿ ಸಿಟ್ಟು ತೋರಿಸ್ತಾರೆ.
ಅಮ್ಮ ಚಿಕ್ಕಂದಿನಿಂದಲೂ ಹೇಳಿಕೊಟ್ಟ ಪ್ರಕಾರ ‘ಅಣಬೆ ಮುಟ್ಟುವುದು ಉಣ್ಣುವುದು ಎರಡೂ ಮಾಂಸ ತಿಂದ ಹಾಗೆ’. ಇಷ್ಟು ದೊಡ್ಡವಳಾಗಿ(?) ಅಷ್ಟಿಷ್ಟು ಓದಿಕೊಂಡು ಅಣಬೆಯೂ ಸಾಮಾನ್ಯ ಸಸ್ಯ ಜಾತಿಗೆ ಸೇರಿದ್ದು,ಪತ್ರ ಹರಿತ್ತು ಇರುವುದಿಲ್ಲ ಅಷ್ಟೇ ಅಂತ ಗೊತ್ತಾದ ಮೇಲೂ ಅಣಬೆಯನ್ನು ಮುಟ್ಟುವಾಗ ತುಸು ಹಿಂಜರಿಕೆ. ಮನೆಯ ಉಳಿದವರೆಲ್ಲರೂ ಅಮ್ಮ ಕಲಿಸಿದ್ದನ್ನು ಮೀರಿ ಅಣಬೆಯ ಜೊತೆಗೆ ಮೊಟ್ಟೆ ಗಿಟ್ಟೆ ತಿನ್ನುವುದನ್ನು ಸಲೀಸು ಮಾಡಿಕೊಂಡರಾದರೂ ನಂಗೆ ಅದಿನ್ನೂ ಒಗ್ಗಿಲ್ಲ.
ಅಪ್ಪ ಮಾತ್ರ ಮಳೆಗಾಲ ಬಂತು ಅಂದರೆ ಅಮ್ಮನ ಈ ಕಂತೆ ಪುರಾಣಗಳನ್ನೆಲ್ಲ ಟ್ರಂಕಿನೊಳಗಿಟ್ಟು ಪ್ರತಿವರ್ಷವೂ ಅಣಬೆ ಹುಟ್ಟುವ ಅದೇ ಜಾಗವನ್ನು ಗುರುತಿಟ್ಟುಕೊಂಡು ಅವು ಅರಳುವ ಮುನ್ನ ಹೂವಿನಷ್ಟೇ ಜೋಪಾನವಾಗಿ ಬಿಡಿಸಿಕೊಂಡು ತರ್ತಾರೆ.ತಂದದನ್ನು ಅಮ್ಮ ಹಾಗೆಲ್ಲ ಒಳಗಿಡಲಿಕ್ಕೆ ಬಿಡೋರಲ್ಲ.ಹಿಂದುಗಡೆಯ ಕಾಯಿ ಸುರಿಯುವ ರೂಮಿನಲ್ಲಿ ಒಂದು ಬಟ್ಟೆ ಹಾಸಿ ಅದರಲ್ಲಿ ಸೋಸಿಕೊಳ್ಳಿ ಅಂತ ಆಜ್ಞೆ ಬರ್ತದೆ.ಅಣಬೆ ಸೋಸುವಾಗಿನ ಅಪ್ಪನ ಏಕಾಗ್ರತೆಯನ್ನು ನೋಡಬೇಕು.
ಧ್ಯಾನಸ್ಥ!
ನಡುನಡುವೆ ‘ಎಳೆ ಮಕ್ಳಂಗೆ ನೋಡು’ ಎಂಬೋ ಉವಾಚ.ಅಣಬೆಯ ಕಾಲು.. ಹೂವು ಎರಡೂ ಮುಕ್ಕಾಗದಂತೆ ಮೆತ್ತಗೆ ಕೈಗೆತ್ತಿಕೊಂಡು ಒಂದೊಂದನ್ನೇ ನೋಡಿ ಹುಳು ಹುಪ್ಪಡಿ ಇದೆಯಾ ಸೋಸಿ ಬೆಚ್ಚಗಿನ ನೀರಿನಲ್ಲಿ ತೊಳೆದು ಸೋರಿಡ್ತಾರೆ.
ಅಮ್ಮ ಅಷ್ಟರಲ್ಲಿ ಒಗ್ಗರಣೆಗೆ ಈರುಳ್ಳಿ ಹಸೀ ಮೆಣಶಿನಕಾಯಿ ಹೆಚ್ಚಿ ಮೊಟ್ಟೆ ಮಾಡಿಕೊಳ್ಳುವ ಪಾತ್ರೆಯನ್ನೂ ಕೊಟ್ಟು ಹೊರಕೋಣೆಯಲ್ಲಿರುವ ಸ್ಟೌವು ಹಚ್ಚಿಕೊಡ್ತಾರೆ.ಅಪ್ಪ ಅಣಬೆಗೆ ಒಗ್ಗರಣೆ ಹಾಕುವ ಪರಿಮಳವನ್ನು ಬರೆಯಲು ನಂಗೆ ಪದಗಳು ಒದಗುವುದಿಲ್ಲ.
ಅದು ಇಡೀ ಮನೆಯನ್ನು ತುಂಬಿ ಎಂದೂ ಅಣಬೆ ರುಚಿ ನೋಡದ ನನ್ನ ನಾಲಿಗೆಯೂ ಸೋರಿ ರುಚಿ ನೋಡುವ ಒಮ್ಮೆ ಅಂತನಿಸದೇ ಇರಲು ಸಾಧ್ಯವೇ ಇಲ್ಲ.
ಒಂದು ಒಂದೂವರೆ ತಾಸಿನ ಕಾರ್ಯಾಚರಣೆಯ ನಂತರ ಅಣಬೆ ಪಲ್ಯ ತಯಾರಾಗಿ ಡೈನಿಂಗ್ ಹಾಲಿಗೆ ಅಮ್ಮನ ಸಿಡಿಮಿಡಿಯೊಂದಿಗೆ ಆಗಮಿಸ್ತದೆ.ಅಷ್ಟರಲ್ಲಿ ಅಮ್ಮ ಬಿಸಿರೊಟ್ಟಿಯೋ ಚಪಾತಿಯೊ ಹಾಕಿಟ್ಟಿರ್ತಾರೆ.
ಹೊರಗೆ ಬಯ್ದಂತೆ ನಟಿಸುವ ಅಮ್ಮನಿಗೂ ಅಪ್ಪನಿಗೆ ಆಸೆ ಬಂದಿದ್ದನ್ನು ತಿನ್ನಲಿ ಅಂತ ಒಳಗೊಂದು ಮನಸಿರ್ತದೆ ಕಾಣುತ್ತೆ. ಒಂದು ದೊಡ್ಡ ಕೈಚೀಲದ ಭರ್ತಿ ತಂದಿದ್ದ ಅಣಬೆ ಒಗ್ಗರಣೆ ಯಲ್ಲಿ ಬೆಂದು ಸಣ್ಣ ಸರ್ವಿಂಗ್ ಬೌಲು ತುಂಬುವಷ್ಟು ಮಾತ್ರ ಪಲ್ಯ ಆದದ್ದು ನೋಡಿದಾಗ ಅಪ್ಪನಿಗೆ ಇನ್ನಷ್ಟು ಸಿಕ್ಕಿದ್ರೆ ಖುಷಿಯಲ್ಲಿ ತಿಂತಿದ್ರೋ ಏನೋ ಅಂತ ಅನಿಸಿ ‘ಇಷ್ಟೇ ಇಷ್ಟು ಆಯ್ತಲ್ಲಪ್ಪಜಿ’ ಅಂತೀನಿ. ವರ್ಷಕೊಂದ್ಸರ್ತಿ ಸಿಗುವ ತರಕಾರಿನ ಒಂದು ಗುಕ್ಕೇ ಆಗಲಿ,ತಿನ್ನಬೇಕು ಎನ್ನುವುದು ಅಪ್ಪನ ವಾದ.
ಮೊಮ್ಮಕ್ಕಳು ಮನೆಯಲ್ಲಿದ್ರೆ ಅಪ್ಪನ ಈ ಅಣಬೆ ಗ್ರೆವಿ ತಯಾರಿಕೆಗೆ ಮತ್ತಷ್ಟು ಉತ್ಸಾಹ.ನಾನೂ ತವರುಮನೆಯಲ್ಲಿದ್ದಾಗ ಒಂಚೂರು ತಿಂದು ನೋಡು ಅಂತ ಪದೇಪದೇ ಒತ್ತಾಯಿಸಿದ್ರೂ ಅದರ ಪರಿಮಳಕ್ಕೆ ಜಿಹ್ವಾರಸ ಚುರುಕಾಗಿದ್ರೂ ಅಮ್ಮನ ಚಿಕ್ಕಂದಿನ ‘ಮಾಂಸ ತಿಂದಂತೆ’ ಮಾತು ನೆನಪಾಗಿ ‘ನಂಗ್ ಬ್ಯಾಡ ನೀವು ತಿನ್ನಪ್ಪಜಿ’ ಅಂತೀನಿ.
ಮಳೆ ಹಿಡಿದು ಇಷ್ಟು ದಿನ ಆಗಿದೆ.ಅಣಬೆಗಳೂ ಎದ್ದೂ ಅರಳಿ ಮಾಸಿಯೂ ಆಗಿರಬಹುದು. ಅಥವಾ ಮತ್ತೆಲ್ಲೋ ಹುಟ್ಟುತ್ತಲೂ ಇರಬಹುದು.ಅಪ್ಪಾಜಿಗೆ ಈ ಸರ್ತಿ ಮಳೆಗಾಲದಲ್ಲಿ ಮೊದಲಿನಂತೆ ಬೇಕು ಬೇಕಾದಲ್ಲಿ ಸುತ್ತಾಡೋ ಹಾಗಿಲ್ಲ ಅಂತ ಮಕ್ಕಳಿಂದ ಎಚ್ಚರಿಕೆ ರವಾನೆಯಾಗಿದೆ.
ಅಪ್ಪನ ಮನೆಯಂಗಳದ ಕೊನೆಯಲ್ಲೇ ಒಂದು ರಾಶಿ ಅಣಬೆ ಹುಟ್ಟಿ ಒಂದರ್ದ ತಾಸು ಮಳೆ ಬಿಡುವು ಕೊಡಲಿ,’ಸೀಸನ್ನಿಗೊಂದ್ಸಾರಿ ಬರೋ ತಿನ್ನೋ ಪದಾರ್ಥನ ಹಂಗ್ ತಿನ್ದೆ ಇರಬಾರದು ನಾಗಮ್ಮ’ ಅಂತ ಅಮ್ಮನಿಗೆ ಕನ್ವಿನ್ಸ್ ಮಾಡಿ ಅಪ್ಪ ಮಳೆ ನಿಂತ ಸಮಯ ನೋಡ್ಕೊಂಡು ಒಂದು ಕೈಚೀಲ ಭರ್ತಿ ಅಣಬೆ ಎತ್ಕೊಂಡು ಬರಲಿ ಅಂತ ಮನಸ್ಸು ಬಯಸ್ತಿದೆ.
Very nice