18.8 C
Karnataka
Friday, November 22, 2024

    ಸರ್ಕಾರಿ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಿಗೆ ಆರ್ಥಿಕ ಸ್ವಾಯತ್ತತೆ; ವಿದ್ಯಾರ್ಥಿಗಳ ಶುಲ್ಕ ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲು

    Must read

    BENGALURU JULY 17

    ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, 91 ಪಾಲಿಟೆಕ್ನಿಕ್‌ಗಳು ಮತ್ತು 14 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಸರಕಾರಿ ನಿಗದಿತ ನಾನಾ ಶುಲ್ಕಗಳನ್ನು ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುವು ನೀಡಿ, ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸ್ವಾಯತ್ತತೆ ನೀಡಬೇಕು ಮತ್ತು ಈ ಮೂಲಕ ಆಯಾಯ ಸಂಸ್ಥೆಗಳು ಸುಗಮವಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳಲು ಅವಕಾಶ ನೀಡಬೇಕೆನ್ನುವುದು ಸರಕಾರದ ಆಶಯವಾಗಿದೆ. ಹೀಗಾಗಿ, ಸರ್ಕಾರಿ ಶುಲ್ಕಗಳ ಸದ್ಬಳಕೆಗೆ ಕ್ರೋಡೀಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ’ ಎಂದಿದ್ದಾರೆ.

    ಇದಕ್ಕಾಗಿ ಮೇಲ್ಕಂಡ ಸಂಸ್ಥೆಗಳ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ. ಇದರಲ್ಲಿ ಐಕ್ಯೂಎಸಿ ಸಂಚಾಲಕರು, ನಿಕಾಯವಾರು ಹಿರಿಯ ಉಪನ್ಯಾಸಕರು, ಅಧೀಕ್ಷಕರು, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ತಲಾ ಇಬ್ಬರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸದಸ್ಯರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

    ಈ ಸಮಿತಿಗಳು ಆಯಾ ಶೈಕ್ಷಣಿಕ ವರ್ಷದ ಜೂನ್‌ನಲ್ಲಿ ರಚನೆಗೊಂಡು, ಆಗಸ್ಟ್‌ ಹೊತ್ತಿಗೆ ಈ ಶುಲ್ಕ ಬಳಕೆಗೆ ಸಂಬಂಧಿಸಿ ವಾರ್ಷಿಕ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರ ಕಚೇರಿಗೆ ಕಳಿಸುವುದು ಕಡ್ಡಾಯವಾಗಿದೆ. ಹೀಗೆ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಆಯುಕ್ತರ ಕಚೇರಿಯು ಸೆಪ್ಟೆಂಬರ್‍‌ ಹೊತ್ತಿಗೆ ಒಪ್ಪಿಗೆ ನೀಡಲಿವೆ. ಇದಕ್ಕಾಗಿ ಈ ಹಂತದಲ್ಲೂ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯ ಒಂದು ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ.

    ಈ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ, ಬೋಧನೆ, ಪ್ರಯೋಗಾಲಯ, ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ಪ್ರಮಾಣಪತ್ರ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್, ಎನ್‌ಎಸ್‌ಎಸ್‌, ಗ್ರಂಥಾಲಯ ಬಳಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕಾಲೇಜು ಮ್ಯಾಗಜೈನ್, ಪರಿಚಯ ಪುಸ್ತಕ ಮತ್ತು ಗುರುತಿನ ಚೀಟಿ ಶುಲ್ಕಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಹೊಸ ಆದೇಶದ ಪ್ರಕಾರ, ಈ ಶುಲ್ಕಗಳ ಹೆಚ್ಚಿನ ಭಾಗವನ್ನು ಆಯಾ ಕಾಲೇಜುಗಳಿಗೇ ಕೊಡಲಾಗುವುದು. ಈ ನಿಧಿಯನ್ನು ಬಳಸಿಕೊಂಡು ಕಟ್ಟಡಗಳ ನಿರ್ವಹಣೆ, ದುರಸ್ತಿ, ಗ್ರಂಥಾಲಯಕ್ಕೆ ಪುಸ್ತಕ ಮತ್ತು ನಿಯತಕಾಲಿಕೆಗಳ ಖರೀದಿ, ಪ್ರಯೋಗಾಲಯಗಳ ಉಪಕರಣ, ಇಂಟರ್‍‌ನೆಟ್‌, ಕಚೇರಿ ವೆಚ್ಚ, ಎನ್‌ಎಸ್‌ಎಸ್‌ ಘಟಕ ಸ್ಥಾಪನೆ, ಕಂಪ್ಯೂಟರ್‍‌, ಸಿ.ಸಿ. ಕ್ಯಾಮರಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮುಂತಾದವುಗಳಿಗೆ ಬಳಸಿಕೊಳ್ಳಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಹೊಸ ನಿಯಮದ ಪ್ರಕಾರ, ಆಯಾ ಕಾಲೇಜುಗಳು ಈ ರೀತಿಯಲ್ಲಿ ಸಂಗ್ರಹವಾಗಿರುವ ನಿಧಿ ಮತ್ತು ಅವುಗಳ ಖರ್ಚುವೆಚ್ಚದ ರೀತಿಗಳನ್ನು ತಮ್ಮ ಸೂಚನಾ ಫಲಕ ಮತ್ತು ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಜೊತೆಗೆ, ಎಲ್ಲ ರೀತಿಯ ವ್ಯವಹಾರಗಳನ್ನೂ ಆನ್‌ಲೈನ್‌ ಮೂಲಕ ಮಾತ್ರವೇ ಮಾಡಬೇಕು. ಇದರಲ್ಲಿ ಭೌತಿಕ ಸ್ವರೂಪದ ವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!