ಸುಮಾ ವೀಣಾ
ನಿಯತಿಯನಾರ್ ಮೀರಿದಪರ್-(ನಿಯತಿಯನ್ನು ಯಾರು ಮೀರುತ್ತಾರೆ) ಜನ್ನ ಕವಿಯ ‘ಯಶೋಧರ ಚರಿತೆ’ಯಿಂದ ಪ್ರಸ್ತುತ ಸಾಲನ್ನು ಆರಿಸಲಾಗಿದೆ. ಚಂಡ ಕರ್ಮನು ಎಳೆದುಕೊಂಡು ಹೋಗುವಾಗ ಅಭಯರುಚಿತು ತನ್ನ ತಂಗಿಯಾದ ಅಭಯಮತಿಯನ್ನು ಕುರಿತು ನೀತಿಶಾಸ್ತ್ರವನ್ನು ಬಲ್ಲವಳೆ ವಿಧಿ ನಿಯಮವನ್ನು ಮೀರಲು ಯಾರಿಗೆ ಸಾಧ್ಯವಾಗುತ್ತದೆ . ಸಂದಿಗ್ಧತೆಯ ಸಮಯದಲ್ಲಿ ಬರುವ ಕಷ್ಟಗಳನ್ನು ಸಹಿಸಿಕೊಂಡು ಕ್ಲೇಶಗಳನ್ನು ನೀಗಿಕೊಳ್ಳಲೇ ಬೇಕು ಅದಕ್ಕಾಗಿ ಮಾನಸಿಕ ಧೃಡತೆ ಮುಖ್ಯವಾಗಿ ಬೇಕಾಗುತ್ತದೆ ಎಂಬ ಮಾತನ್ನು ಹೇಳುತ್ತಾನೆ.
ಆಧುನಿಕ ಜಗತ್ತಿನಲ್ಲಿ ವಿಧಿ ಹಣೆಬರೆಹ ಇತ್ಯಾದಿ ಮಾತುಗಳು ವಿಚಾರವಂತರಿಗೆ ಗುಂಪಿಗೆ ಸೇರದವು ಅನ್ನಿಸುತ್ತವೆ ಇನ್ನು ಕೆಲವರಿಗೆ ಸರಿ ಅನ್ನಿಸುತ್ತದೆ ಹೇಗೂ ಇರಲಿ ಪೂರ್ವ ನಿರ್ಧಾರಿತ ಹೌದೋ ಅಲ್ಲವೋ ಅದನ್ನು ಮೀರಿ ಬರುವ ಕಷ್ಟಗಳನ್ನು ಸಹಿಸಿಕೊಳ್ಳುವ ಕಸುವನ್ನು ಮೈ ಮನಸ್ಸುಗಳಲ್ಲಿ ರೂಢಿಸಿಕೊಳ್ಳಬೇಕು ಇಲ್ಲವಾದರೆ ಕಷ್ಟ.
ದುಃಖವಿದ್ದರೆ ಸುಖ ಹೇಗೆ ಬರುತ್ತದೆಯೋ ಹಾಗೆ ಕತ್ತಲು –ಬೆಳಕು, ಕಷ್ಟ –ಸುಖಗಳು ಮತ್ತೆ ಮತ್ತೆ ಆವರ್ತನವಾಗುತ್ತವೆ. ಬರೆ ಸಿಹಿಯನ್ನೇ ಸೇವಿಸುತ್ತಿದ್ದರೆ ಆರೋಗ್ಯ ಹೇಗೆ ಕೆಡುತ್ತದೆಯೋ ಅಂತೆಯೇ ಬರೆ ಸುಖ ಜೀವನದ ಮಧುರತೆಯನ್ನು ಕೊಡುವುದಿಲ್ಲವೇನೋ ಜೀವನದ ನಿಜವಾದ ಸಿಹಿಯನ್ನು ಅನುಭವಿಸಲು ಕಷ್ಟಗಳು ಬರುತ್ತಿರಬೇಕು ಆಂತೆಯೇ ಅವುಗಳು ಬಿಡುಗಡೆಯೂ ಆಗುತ್ತಿರಬೇಕು .
ಕಷ್ಟಗಳು ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತವೆಯೇ ಅನ್ನುವ ಮಾತುಗಳಿವೆ . ಎಂಥ ಕಷ್ಟಗಳು ಬಂದರೂ ಸಹಿಸುವ ಶಕ್ತಿ ಬೇಕು ನಾನು ಕಷ್ಟಗಳನ್ನು ಮೀರಿ ನಿಲ್ಲುವೆ ಅನ್ನುವ ಮನಸ್ಥಿತಿ ಇದ್ದರೆ ಸಾಕು . ಬದುಕಲು ನಮ್ಮ ಪೂರ್ವಿಕರಿಗೆ ಇದ್ದ ಕಷ್ಟಗಳು ಇಂದಿಲ್ಲ. ಇಂದಿಗೆ ಕಷ್ಟ ಅನ್ನುವ ಮಾತುಗಳೆಲ್ಲವೂ ನಾವೆ ಮಾಡಿಕೊಂಡಿರುವ ತಪ್ಪುಗಳು. ಬದುಕು ಆದಷ್ಟೂ ಸರಳವಾಗಿದ್ದರೆ ಸುಂದರವೇ ಆಗಿರುತ್ತದೆ ಆದರೆ ವಿಪರೀತ ಅನ್ನುವಷ್ಟರ ಮಟ್ಟಿಗೆ ನಮ್ಮ ಬದುಕನ್ನು ನಾವೆ ಜಟಿಲ ಮಾಡಿಕೊಂಡಿದ್ದೇವೆ. ನಾವೆ ಮಾಡಿಕೊಂಡ ತಪ್ಪುಗಳು ಮತ್ತೆ ಕಷ್ಟಗಲಾಗಿ ಕಾಡತೊಡಗಿದಾಗ ಅದಕ್ಕೆ ಬೆನ್ನು ಹಾಕುವ ಮನಸ್ಥಿತಿಯೂ ನಮ್ಮದೆ ಆಗಿದೆ. ಇದೊಂದು ಅಪಸವ್ಯವೇ ಅಲ್ಲವೆ . ನಿಯತಿಯನ್ನು ಯಾರು ಮೀರುತ್ತಾರೆ ಅಂದರೆ ವಿಧಿಯನಿಯಮವನ್ನು ಯಾರು ಮೀರುತ್ತಾರೆ ಎಂದು ನಮ್ಮ ನಿರ್ಲಕ್ಷದ ಹೊಣೆಯನ್ನು ವಿಧಿಯ ಮೇಲೆ ಹಾಕುವುದು ಸರಿಯಲ್ಲ. ಕಷ್ಟಗಳನ್ನು ಸಹಿಸಲು ಜೀವನೋತ್ಸಾಹವೂ ಬೇಕು ಏನಂತೀರ?
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.