ಎಂ.ವಿ. ಶಂಕರಾನಂದ
ಕಾರ ಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು, ಹೋಳಿ ಹುಣ್ಣಿಮೆ ಹಬ್ಬಗಳ ಕರಕೊಂಡು ಹೋಯ್ತು-ಎಂಬ ಹಿರಿಯರ ನುಡಿ ಎಷ್ಟು ಸತ್ಯ. ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆ ಮೋಡಗಳ ಮೂಲಕ ಬರುವ ಮಾಸವೇ ಇಂದು ಶುರು ಆಗಿರುವ ಶ್ರಾವಣ.ಇದನ್ನು ವರಕವಿ ದ.ರಾ.ಬೇಂದ್ರೆಯವರು ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ’’ ಎಂದು ಶ್ರಾವಣದ ವೈಭವವನ್ನು ಕುರಿತು ಹಾಡಿ ಹೊಗಳಿದ್ದಾರೆ.
ಶ್ರಾವಣ ಬಂತೆಂದರೆ ಎಲ್ಲಿಲ್ಲದ ಸಂಭ್ರಮ ಸಡಗರ. ಆಸ್ತಿಕರ ಪಾಲಿನ ಆನಂದ ಚೇತನ ಸ್ವರೂಪವಾಗಿದೆ ಈ ಮಾಸ. ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನದ ಐದನೇ ತಿಂಗಳಲ್ಲಿ ಬರುವ ಈ ಶ್ರಾವಣ ಮಾಸದಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ನಾಡಹಬ್ಬ, ಪುಣ್ಯಾರಾಧನೆ ಏನಾದರೂ ನಿತ್ಯ ನಿರಂತರವಾಗಿರುತ್ತವೆ. ಭೋಜನ ಪ್ರಿಯರಿಗಂತೂ ನಿತ್ಯವೂ ಹಬ್ಬದ ಔತಣವೇ.
`ಏನೇ ಮಾಡಿದರೂ ಶ್ರಾವಣ ಮಾಸದಲ್ಲಿ ಮಾಡು, ಒಳ್ಳೆಯದಾಗುತ್ತದೆ’ ಎಂಬ ರೂಢಿಯುಂಟು. ಅದರಲ್ಲೂ ಈ ಮಾಸ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಅಚ್ಚುಮೆಚ್ಚು. ಆಷಾಢ ಮಾಸದಲ್ಲಿ ಮಂದಗತಿಯಲ್ಲಿದ್ದ ವ್ಯಾಪಾರ, ವ್ಯವಹಾರಗಳು ಶ್ರಾವಣ ಮಾಸದಲ್ಲಿ ಚಿಗುರುವುದರಿಂದ ಈ ಮಾಸವೆಂದರೆ ಹಣ್ಣು, ಹೂ, ತರಕಾರಿ ವ್ಯಾಪಾರಿಗಳಿಗೆ ಮತ್ತು ಪುರೋಹಿತರಿಗೆ ಒಂದು ರೀತಿಯಲ್ಲಿ ಸಂತೋಷವೋ ಸಂತೋಷ.
ಶ್ರಾವಣವು ಆಷಾಢ ಮೋಡದ ಮಬ್ಬಿನ ವಾತಾವರಣವನ್ನು ಹೋಗಲಾಡಿಸಿ, ಹಬ್ಬ ಹರಿದಿನಗಳ ಬೆಳಕಿನ ಹೊನಲನ್ನು ಹರಿಸುತ್ತದೆ. ಈ ಮಾಸ ಪೂರ್ತಿ ಮನೆಯ ಮುಂಬಾಗಿಲಿನಲ್ಲಿ ತೋರಣ ಹಸಿರಾಗಿರುತ್ತದೆ. ದೇವರ ಮಂಟಪದಲ್ಲಿ ನಂದಾದೀಪ ಬೆಳಗುತ್ತಿರುತ್ತದೆ. ಮುತ್ತೈದೆಯರು ಮಂಗಳರೂಪಿಣಿಯರಾಗಿ ಕಂಗೊಳಿಸುತ್ತಾ ಹಬ್ಬವನ್ನು ಶ್ರದ್ಧೆ, ಭಕ್ತಿ, ಉತ್ಸಾಹದಿಂದ ಆಚರಿಸುತ್ತಾರೆ.
ಈ ಮಾಸದಲ್ಲಿ ಬರುವಷ್ಟು ಹಬ್ಬಗಳು ಮತ್ತು ವ್ರತಗಳು ಬೇರೆ ಯಾವ ಮಾಸದಲ್ಲಿಯೂ ಬರುವುದಿಲ್ಲ. ಸರ್ವ ಹಬ್ಬಗಳ ಸಮನ್ವಯ ಸಂಯೋಗ ಮಾಸವಿದು. ಆಷಾಢದಲ್ಲಿ ಸಂಪ್ರದಾಯದ ಪ್ರಕಾರ ದೂರವಾಗಿರುವ ದಂಪತಿಗಳು ಶ್ರಾವಣದಲ್ಲಿ ಒಂದಾಗುತ್ತಾರೆ. ಅತ್ತೆ-ಸೊಸೆ, ಮಾವ-ಅಳಿಯ ಸೇರುವ ಮಾಸವಿದು. ಆದ್ದರಿಂದಲೇ ಈ ಮಾಸವನ್ನು ಹಬ್ಬಗಳ ಮಾಸ ಎನ್ನುತ್ತಾರೆ.
ಗುಡುಗು, ಮಿಂಚು, ಮೇಘಾವಳಿಗಳಿಂದ ಕೂಡಿದ ವರ್ಷಧಾರೆಯೊಂದಿಗೆ ಆರಂಭವಾಗಿ ಜೀವರಾಶಿಗಳ ಜೀವನ ಚೈತನ್ಯವಾಗಿರುವ ಈ ಶ್ರಾವಣವನ್ನು ನಾವು ಮಂಗಳ ಗೌರಿಯ ಪೂಜೆಯೊಂದಿಗೆ ಸ್ವಾಗತಿಸಿದರೆ, ಭಾರತದ ವಿವಿಧ ಪ್ರದೇಶಗಳ ಜನರು ಇದನ್ನು ಆಯಾ ಭಾಗಗಳಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುತ್ತಾರೆ. ಹಿಮಾಚಲ ಪ್ರದೇಶದವರು ಕಾಳಿಕಾಮಾತೆಯನ್ನು ಪೂಜಿಸುವ ಮೂಲಕ ದಖರೈವ (ಹರಿಯಾಲಿ ತ್ಯೋಹಾರ್) ಎಂಬ ಹೆಸರಿನಿಂದ ಆಚರಿಸಿದರೆ, ಪಂಜಾಬಿಗಳು ತಿಯಾನ್ ಬಾಗಿ ಎಂದೂ, ಉತ್ತರಪ್ರದೇಶದಲ್ಲಿ ಸಾವನ್, ಜಮ್ಮು ಕಾಶ್ಮೀರದಲ್ಲಿ ರುಥಾ ನೃತ್ಯವನ್ನು ಮಾಡುವುದರ ಮೂಲಕ ಶ್ರಾವಣವನ್ನು ಸ್ವಾಗತಿಸಿ, ಆಚರಿಸುತ್ತಾರೆ. (ಶ್ರಾವಣ ಮಾಸದ ವಿಶೇಷತೆಗಳ ಬಗ್ಗೆ ಈ ವಿಡಿಯೋ ನೋಡಿ)
ಶ್ರಾವಣ ಮಾಸದಲ್ಲಿ ಬರುವ ಹಬ್ಬ, ವ್ರತಗಳೆಂದರೆ; ಮಂಗಳ ಗೌರಿ ವ್ರತ, ನಾಗ ಚತುರ್ಥಿ, ನಾಗ ಪಂಚಮಿ/ಬಸವ ಪಂಚಮಿ, ಶುಕ್ರಗೌರಿ ವ್ರತ, ವೈಷ್ಣವ ಶ್ರಾವಣ ಶನಿವಾರ ವ್ರತ, ಅಂಗಾರಕ ಜಯಂತಿ, ಶ್ರೀ ವರಮಹಾಲಕ್ಷ್ಮಿ ವ್ರತ, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ, ಗಾಯತ್ರಿ ಆರಾಧನೆ, ಪ್ರತಿ ಸೋಮವಾರ ವಿಶೇಷ ಶ್ರಾವಣ ಸೋಮವಾರ ಆಚರಣೆ, ನೂಲು ಹುಣ್ಣಿಮೆ, ಋಗ್/ಯಜುರ್ ಉಪಾಕರ್ಮ, ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಶಿರಿಯಾಳ ಷಷ್ಠಿ… ಹೀಗೆ ಸಾಕಷ್ಟು ಹಬ್ಬಗಳು ಆಚರಿಸಲ್ಪಡುವುವು.
ಶ್ರಾವಣ ಮಾಸದಲ್ಲಿ ಹೆಂಗಸರಿಗಂತೂ ಬಿಡುವಿಲ್ಲದಂತೆ ಕೆಲಸವಿರುತ್ತದೆ. ಆಷಾಢದ ಮಳೆಗೆ ಹೆದರಿ ಬೀರುವನ್ನು ಸೇರಿದ್ದ ಸೀರೆಗಳು, ಒಡವೆಗಳು ಶ್ರಾವಣ ಶುರುವಾದ ಕೂಡಲೇ ಒಂದೊಂದಾಗಿ ಹೊರಬಂದು ಹಬ್ಬ-ಹರಿದಿನ, ಶುಭಕಾರ್ಯ ಸಮಾರಂಭಗಳಲ್ಲಿ ತಮ್ಮ ಅಸ್ತಿತ್ವವನ್ನು ಮೆರೆಸುತ್ತವೆ. ಸಕಲರಿಗೂ ಸುಖ ತರುವ ಶ್ರಾವಣದಲ್ಲಿ ಹಬ್ಬಗಳ ಸುಗ್ಗಿ ಎಂದು ಹಿಗ್ಗಿದರೂ ಜೇಬಿಗೆ ಸದಾ ಖರ್ಚು. ಹಾಗಾಗಿ ಹಬ್ಬಗಳ ಸುಗ್ಗಿಯ ಹೊತ್ತು ಖರ್ಚುಗಳ ಮಗ್ಗಿಯನ್ನು ಮರೆಯುವುದೇ ಒಳ್ಳೆಯದು.
ಮೂರು ತಿಂಗಳು ಮಳೆಗಾಲದಲ್ಲಿ ಬೋರ್ಗರೆದು ಮೊರೆವ ಸಮುದ್ರ ಶ್ರಾವಣ ಹುಣ್ಣಿಮೆಯಂದು ಶಾಂತವಾಗುತ್ತದೆ. ಕರಾವಳಿಯಲ್ಲಿ ಜಾತಿಬೇಧವಿಲ್ಲದೆ ಜನ ಕಡಲಿಗೆ ಹಾಲೆರೆದು ಸಮುದ್ರ ದೇವತೆಯನ್ನು ಪೂಜೆ ಮಾಡುತ್ತಾರೆ. ಮಹಾರಾಷ್ಟ್ರೀಯರು ಆ ದಿನವನ್ನು ನಾರಳ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಪಾರಸೀಕರು ಈ ಹುಣ್ಣಿಮೆಯ ದಿನವನ್ನು ತಮ್ಮ ಹೊಸ ವರ್ಷವಾಗಿ ಪತೇತಿ ಎಂಬ ಹೆಸರಿನಿಂದ ಆಚರಿಸುತ್ತಾರೆ.
ದೇಶಾದ್ಯಂತ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬದಲ್ಲಿ ದೇವರ ಪ್ರಾರ್ಥನೆ ಮುಖ್ಯವಾದರೂ, ಪತಿ, ಒಡಹುಟ್ಟಿದವರು, ಗೋವು, ನಾಗ, ಗರುಡ, ಋಷಿಗಳು, ಗ್ರಹಗಳು, ಶಕ್ತಿದೇವತೆ, ಮಹಾಲಕ್ಷ್ಮಿ ನವವಿವಾಹಿತರಿಗೆ, ನವ ವಟುಗಳಿಗೆ -ಹೀಗೆ ಎಲ್ಲರಿಗೂ ಒಳ್ಳೇಯದಾಗಲಿ ಎಂದು ವಿವಿಧ ರೀತಿಯಲ್ಲಿ ಆಚರಿಸುವ ಹಬ್ಬಗಳುಂಟು. ಆದ್ದರಿಂದಲೇ ಹೇಳುವುದು ಶ್ರಾವಣಮಾಸ ಎಲ್ಲರಿಗೂ ಪ್ರಿಯವಾದ ಮಾಸ!
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.