26.6 C
Karnataka
Friday, November 22, 2024

    ಶ್ರಾವಣ ಮಾಸದ ಮಂಗಳಗೌರಿ ವ್ರತ

    Must read

    ಎಂ.ವಿ.ಶಂಕರಾನಂದ

    ಶ್ರಾವಣ ಮಾಸದಲ್ಲಿ ದೇವಿ ಪಾರ್ವತಿಯ ಕೃಪೆ ನಮಗೆ ದೊರೆಯಲಿ ಎಂದು ಮುತ್ತೈದೆಯರು ಮಂಗಳಗೌರಿ ಪೂಜೆಯನ್ನು ಮಾಡುವ ವ್ರತವೇ ಮಂಗಳಗೌರಿ ವ್ರತ. ಈ ವ್ರತವನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಈ ವ್ರತವನ್ನು ಶ್ರಾವಣ ಮಾಸದ ಮೊದಲನೇ ಮಂಗಳವಾರದಿಂದ ಕೊನೆಯ ಮಂಗಳವಾರದವರೆಗೆ ಆಚರಿಸಲಾಗುತ್ತದೆ.

    ಈ ಸಮಯದಲ್ಲಿ ಗೌರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮುತ್ತೈದೆಯರು ಸಾಂಪ್ರದಾಯಕವಾಗಿ ಅಲಂಕರಿಸಿಕೊಂಡು ಕೈಗೆ ಬಳೆ, ತಲೆಗೆ ಹೂ ಮುಡಿದಿರುತ್ತಾರೆ. ಇದರರ್ಥ ನಮಗೆ ಹೀಗೆ ಕೊನೆಯವರೆಗೂ ಮುತ್ತೈದೆ ಭಾಗ್ಯ ಕರುಣಿಸು ಎಂಬುದಾಗಿದೆ. ಈ ಸಮಯದಲ್ಲಿ ಮನೆಗೆ, ಮನೆಯವರಿಗೆ ಆರೋಗ್ಯ ಮತ್ತು ಐಶ್ವರ್ಯವನ್ನು ಕರುಣಿಸು, ಗಂಡನೊಂದಿಗೆ ಸಂತೋಷವಾಗಿ ಬಾಳುವಂತೆ ಮಾಡು ಎಂದು ಬೇಡಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಬರೀ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ.

    ಈ ವ್ರತವನ್ನು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮತ್ತು ಮದುವೆಯಾಗಿ ಇನ್ನೂ ಐದು ವರ್ಷ ತುಂಬಿರದ ಹೆಣ್ಣು ಮಕ್ಕಳು ಸೇರಿ ಮಾಡಲಾಗುವುದು. ವ್ರತವನ್ನು ಮಂಗಳವಾರ ಮಾಡಲಾಗದಿದ್ದರೆ ಶುಕ್ರವಾರ ಮಾಡಲಾಗುವುದು. ವ್ರತದ ಕೊನೆಯಲ್ಲಿ ತಾಯಿಗೆ ಮತ್ತು ಇತರ ಮುತ್ತೈದೆಯರಿಗೆ ಉಡುಗೊರೆ ಕೊಡಲಾಗುವುದು.

    ದೇವಿ ಭಾಗವತದಲ್ಲಿ ಮಂಗಳಗೌರಿ ವ್ರತಕ್ಕೆ ಸಂಬಂಧಿಸಿದಂತೆ ಒಂದು ಕಥೆ ಇದೆ; ಮಹಿಷ್ಮತಿ ನಗರದ ರಾಜ ಜಯಪಾಲನಿಗೆ ಶಿವನ ವರದಿಂದ ಹದಿನಾರು ವರ್ಷ ಮಾತ್ರ ಆಯಸ್ಸನ್ನುಳ್ಳ ಮಗನೊಬ್ಬನು ಹುಟ್ಟುತ್ತಾನೆ. ಅವನ ಹೆಸರು ಶಿವಧರ್ಮ. ಅವನು ಬೆಳೆದು ದೊಡ್ಡವನಾದಾಗ ತನ್ನ ಅಲ್ಪಾಯುಷ್ಯದ ಬಗ್ಗೆ ತಿಳಿದು, ತನ್ನ ಸೋದರಮಾವನ ಜೊತೆಗೂಡಿ, ಕಾಶಿಯಾತ್ರೆ ಮಾಡಿಬರಲು ಹೊರಡುತ್ತಾನೆ. ದಾರಿಯಲ್ಲಿ ಅವರು ಪ್ರತಿಷ್ಠಾಪುರವೆಂಬ ಊರಿನ ಉದ್ಯಾನದಲ್ಲಿ ವಿಶ್ರಾಂತಿಗೆಂದು ತಂಗಿರುವಾಗ, ಅಲ್ಲಿಗೆ ಕೆಲವರು ಕನ್ಯೆಯರು ಬಂದರು. ಅವರಲ್ಲಿ ಮಂಗಳಗೌರಿಯ ಭಕ್ತಳೂ, ಆ ಊರಿನ ರಾಜನ ಮಗಳೂ ಆದ ಸುಶೀಲೆಯೂ ಇದ್ದಳು. ಆಗ ಅಶರೀರವಾಣಿಯೊಂದು ಅವಳ ತಂದೆಗೆ ಆ ಉದ್ಯಾನದಲ್ಲಿರುವ ಶಿವಧರ್ಮನ ಜೊತೆ ನಿನ್ನ ಮಗಳ ವಿವಾಹ ಮಾಡು ಎಂದು ಹೇಳಿತು. ಆ ರಾಜನು ಅವರಿಬ್ಬರ ಮದುವೆ ಮಾಡಿಸಿದನು.
    ಆ ದಿನ ರಾತ್ರಿ ಸುಶೀಲೆ ಮಂಗಳ ಗೌರಿಯ ಪೂಜೆಯನ್ನು ಮಾಡುತ್ತಿದ್ದಾಗ, ಮಂಗಳಗೌರಿಯು ಪ್ರತ್ಯಕ್ಷಳಾಗಿ,“ ನಿನ್ನ ಗಂಡನಿಗೆ ಈ ದಿನಕ್ಕೆ ಆಯುಷ್ಯ ಮುಗಿಯುತ್ತದೆ. ಕರಿ ನಾಗರಹಾವೊಂದು ಬಂದು ಅವನನ್ನು ಕಚ್ಚಿ ಸಾಯಿಸುತ್ತದೆ. ನೀನು ಹಾಗೆ ಆಗದಂತೆ ನೋಡಿಕೋ. ಸರ್ಪ ಬಂದಾಗ ಹಾಲು ತುಂಬಿದ ಕಲಶವನ್ನು ಅದರೆದುರಿಗೆ ಹಿಡಿ. ಅದು ಹಾಲು ಕುಡಿಯಲು ಅದರೊಳಗೆ ಇಣುಕಿದಾಗ ಅದನ್ನು ಬಟ್ಟೆಯಿಂದ ಮುಚ್ಚಿ, ಬಂಧಿಸಿಬಿಡು. ನಾಳೆ ಬೆಳಿಗ್ಗೆ ಆ ಕಲಶವನ್ನು ನಿಮ್ಮ ತಾಯಿಗೆ ಬಾಗಿನವಾಗಿ ಕೊಡು. ಆಗ ನಿನ್ನ ಗಂಡನ ಆಯುಷ್ಯ ಹೆಚ್ಚುತ್ತದೆ.” ಎಂದು ಹೇಳಿದಳು.

    ಆ ದಿನ ರಾತ್ರಿ ದೇವಿ ಹೇಳಿದಂತೆಯೇ ಎಲ್ಲವೂ ನಡೆಯಿತು.
    ಶಿವಧರ್ಮನು ಮಾರನೇ ದಿನ ಬೆಳಿಗ್ಗೆ ಎಚ್ಚೆತ್ತು, ಕಾಶಿಯಾತ್ರೆಯನ್ನು ನೆನಸಿಕೊಂಡು, ತನ್ನ ಉಂಗುರವನ್ನು ಬಿಚ್ಚಿಟ್ಟು, ಹೊರಟು ಹೋದನು. ರಾಜಕುಮಾರಿ ಆ ಕಲಶವನ್ನು ತನ್ನ ತಾಯಿಗೆ ಬಾಗಿನವಾಗಿ ಕೊಟ್ಟಳು. ಆಕೆ ಅದನ್ನು ತೆರೆದು ನೋಡಿದರೆ ಒಳಗೆ ಹಾವಿನ ಬದಲು ಒಂದು ರತ್ನಹಾರವಿತ್ತು. ಅದನ್ನು ಆಕೆ ಸುಶೀಲೆಗೇ ಕೊಟ್ಟಳು.

    ಐದು ವರ್ಷದವರೆಗೂ ಸುಶೀಲೆ ಮಂಗಳಗೌರಿ ವ್ರತವನ್ನು ಆಚರಿಸಿದಳು. ಐದು ವರ್ಷದ ನಂತರ ಶಿವಧರ್ಮನು ಕಾಶಿಯಾತ್ರೆ ಮುಗಿಸಿಕೊಂಡು ಮತ್ತೆ ಹಿಂತಿರುಗಿ ತನ್ನ ಹೆಂಡತಿಯ ಊರಿಗೆ ಬಂದನು. ಅವರಿಬ್ಬರೂ ಕೂಡಿ ಮಹಿಷ್ಮತಿ ನಗರಕ್ಕೆ ಹೋಗಿ ಮಂಗಳಗೌರಿ ವ್ರತವನ್ನು ಆಚರಿಸುತ್ತಾ ಸುಖವಾಗಿದ್ದರು. ಅಂದಿನಿಂದ ನವವಿವಾಹಿತ ಹೆಣ್ಣು ಐದು ವರ್ಷ ಮಂಗಳಗೌರಿ ವ್ರತವನ್ನು ಆಚರಿಸುವ ಸಂಪ್ರದಾಯ ಲೋಕರೂಢಿಗೆ ಬಂದಿತು. ಭಕ್ತಿಭಾವಗಳಿಂದ ವ್ರತವನ್ನಾಚರಿಸುವವರಿಗೆ ಮಂಗಳಗೌರಿಯ ಅನುಗ್ರಹ ಕಟ್ಟಿಟ್ಟ ಬುತ್ತಿಯೆಂದು ಪ್ರತೀತಿಯಾಯಿತು.

    ಈ ವ್ರತದ ದಿನ ಮಂಗಳಸ್ನಾನ ಮಾಡಿ, ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸುತ್ತಾರೆ. ಒಂದು ಮಣೆ ಇಟ್ಟು ಅದರ ಮೇಲೆ ರವಿಕೆ ಬಟ್ಟೆಯನ್ನು ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮರನ್ನು (ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಗೋಪುರದ ಆಕಾರ ಕೊಟ್ಟು) ಇಡುತ್ತಾರೆ. ಮೂರು ರವಿಕೆ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಿಸಿ ಹಿಂದೆ ಇಡುತ್ತಾರೆ. ಅಥವಾ ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡುತ್ತಾರೆ. ಇದಕ್ಕೆ ಕಣ್ಣು ಕಪ್ಪಿನಿಂದ ಕಣ್ಣು, ಮೂಗು ಬರೆದು ಅಲಂಕರಿಸುತ್ತಾರೆ. ಇದೇ ಮಂಗಳಗೌರಿ ಮೂರ್ತಿ.

    ಕೆಲವು ಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ. ಕೆಲವರು ದೇವಿಯ ಎಡ ಬದಿಯಲ್ಲಿ 16 ಎಲೆ, ಅಡಿಕೆಗಳನ್ನು ಇಡುತ್ತಾರೆ. ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಬಾಗಿನದ ಜೊತೆ, ಹತ್ತಿ ಎಳೆ, ಬಳೆ, ಬಿಚ್ಚೋಲೆ, ತಂಬಿಟ್ಟಿನ ಆರತಿ ಇರುತ್ತದೆ. ಮೊದಲು ಗಣಪತಿ ಪೂಜೆ ಮಾಡಿ, ನಂತರ ಮಂಗಳಗೌರಿ ಪೂಜೆ ಮಾಡುತ್ತಾರೆ. ಗೌರಿಗೆ 16 ಹಿಡಿ, 16ಎಳೆಗಳ ಹತ್ತಿಯ ಹಾರ ಹಾಕುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ಆರತಿ ಮಾಡುತ್ತಾರೆ. ಈ ದೀಪದಲ್ಲಿ ವೀಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ)ನ್ನು ಶೇಖರಿಸುತ್ತಾರೆ. ಇದನ್ನು ಮಂಗಳ ಗೌರಿಗೆ ಹಚ್ಚಿ, ಕಣ್ಣಿಗೆ ಹಚ್ಚಿಕೊಳ್ಳುತ್ತಾರೆ.
    ಪೂಜೆಯ ನಂತರ ಕಥೆಯನ್ನು ಓದುವರು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೇ ಇಟ್ಟುಕೊಂಡು, ಅದೇ ಕೊಬ್ಬರಿಯನ್ನು ಉಳಿದೆಲ್ಲಾ ವಾರ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಅದನ್ನು ಬಾಗಿನದಲ್ಲಿ ಇಟ್ಟು ಕೊಡುತ್ತಾರೆ.

    ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಬಾಗಿನದ ಜೊತೆ ಇಟ್ಟುಕೊಳ್ಳುವರು. ಮರದ ಒಳಗೆ ನಾಲ್ಕು ತರಹದ ಬೇಳೆಗಳು, ಅಕ್ಕಿ, ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, ೧೬ ಎಳೆ ಹತ್ತಿಯ ಹಾರವನ್ನು ಇಡುವರು. ಇದನ್ನು ಹೆಣ್ಣುಮಕ್ಕಳು ತಮ್ಮ ತಾಯಿಗೆ ಬಾಗಿನ ಕೊಡುತ್ತಾರೆ. ಹೀಗೆ ಐದು ವರ್ಷ ವ್ರತ ಮಾಡಿ, ಮುಕ್ತಾಯ ಮಾಡುವರು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಮ್ಮ ತಾಯಿಗೆ ಕೊಡುತ್ತಾರೆ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    spot_img

    More articles

    2 COMMENTS

    1. ಶ್ರಾವಣ ಮಾಸದ ಹಬ್ಬಗಳು ಬಗ್ಗೆ ತುಂಬಾ ವಿವರವಾಗಿ ತಿಳಿಸಿಕೊಟ್ಟಿದ್ದೀರಾ … ಧನ್ಯವಾದಗಳು.ಮುಂಬರುವ ಹಬ್ಬಗಳ ಬಗ್ಗೆ ತಿಳಿಯಲು ಕಾತುರರಾಗಿದ್ದೀವಿ

    LEAVE A REPLY

    Please enter your comment!
    Please enter your name here

    Latest article

    error: Content is protected !!