ಎಂ.ವಿ. ಶಂಕರಾನಂದ
ಮುತ್ತೈದೆಯರು ತಮ್ಮ ಮನೆಯಲ್ಲಿ ಸುಖ, ಶಾಂತಿ, ಸಂಪತ್ತನ್ನು ಕರುಣಿಸು ಎಂದು ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸೋ ಹಬ್ಬವೇ ವರಮಹಾಲಕ್ಷ್ಮಿ ವ್ರತ. ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಹತ್ತಿರವಾದ ಎರಡನೇ ಶುಕ್ರವಾರದಂದು ಈ ವ್ರತವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು, ನವರಾತ್ರಿಯ ಶುಕ್ರವಾರದಂದು ಮಾಡುತ್ತಾರೆ.
ಭವಿಷ್ಯೋತ್ತರ ಪುರಾಣದಲ್ಲಿ ಈ ವ್ರತದ ಪ್ರಸ್ತಾಪ ಬರುತ್ತದೆ. ಒಮ್ಮೆ ಕೈಲಾಸದಲ್ಲಿ ಪರಮೇಶ್ವರನು ವೈಭವದಿಂದ ಒಡ್ಡೋಲಗವನ್ನು ನಡೆಸುತ್ತಿದ್ದಾಗ ಪಾರ್ವತಿದೇವಿಯು ಭಕ್ತರ ಇಷ್ಟಾರ್ಥವನ್ನು ನೆರವೇರಿಸುವಂತಹ ಯಾವುದಾದರೂ ವ್ರತವನ್ನು ತಿಳಿಸುವಂತೆ ಕೇಳಿದಾಗ, ಪರಮೇಶ್ವರನು ಈ ವರಮಹಾಲಕ್ಷ್ಮಿ ವ್ರತವನ್ನೂ, ಅದಕ್ಕೆ ಸಂಬಂಧಿಸಿದ ಕಥೆಯನ್ನು ವಿವರಿಸಿ, ಇದನ್ನು ಆಚರಿಸುವಂತೆ ತಿಳಿಸಿದನಂತೆ. (ಆಚರಣೆಯ ವಿವರಗಳ ಬಗ್ಗೆ ಈ ವಿಡಿಯೋ ನೋಡಿ)
ವ್ರತ ಕಥೆ
ಈ ವ್ರತಕ್ಕೆ ಸಂಬಧಿಸಿದ ಕಥೆಯೇನೆಂದರೆ: ಹಿಂದೆ ವಿದರ್ಭ ದೇಶದಲ್ಲಿ ಕುಂಡಿನಿ ಎಂಬ ಪಟ್ಟಣವಿತ್ತು. ಅಲ್ಲಿ ಚಾರುಮತಿ ಎಂಬ ಒಬ್ಬ ಬ್ರಾಹ್ಮಣ ಸ್ತ್ರೀಯಿದ್ದಳು. ಆಕೆ ಪತಿವ್ರತೆ, ತುಂಬಾ ಬಡವಳು. ಅಷ್ಟು ದಾರಿದ್ರಾವಸ್ಥೆಯಲ್ಲಿದ್ದರೂ ಚಾರುಮತಿ ಪತಿಭಕ್ತಿಯುಕ್ತಳಾಗಿ, ತನ್ನ ದೊಡ್ಡ ಸಂಸಾರವನ್ನು ಗೌರವಯುತವಾಗಿ ಸಾಗಿಸುತ್ತಾ, ನಿರಂತರವೂ ಲಕ್ಷ್ಮಿದೇವಿಯ ಧ್ಯಾನ, ಪೂಜಾ ಪಾರಾಯಣಳಾಗಿದ್ದಳು. ಅವಳ ಭಕ್ತಿಗೆ ಮೆಚ್ಚಿ ಒಂದು ದಿನ ರಾತ್ರಿ ಕನಸಿನಲ್ಲಿ ಲಕ್ಷ್ಮಿಯು ಕಾಣಿಸಿಕೊಂಡು ಹೀಗೆ ಹೇಳಿದಳು; ಚಾರುಮತಿ ನಿನ್ನ ಭಕ್ತಿಗೆ ಮೆಚ್ಚಿದೆನು. ನಾನೇ ವರಮಹಾಲಕ್ಷ್ಮಿ. ನೀನು ಶ್ರಾವಣ ಶುಕ್ಲ ಹುಣ್ಣಿಮೆಯ ಸಮೀಪದ ಶುಕ್ರವಾರದಲ್ಲಿ ನನ್ನನ್ನು ಕಲ್ಪೋಕ್ತ ಪ್ರಕಾರವಾಗಿ ಪೂಜಿಸು. ನಿನ್ನ ದಾರಿದ್ರ್ಯವು ಪರಿಹಾರವಾಗುವುದು.’’ ಎಂದು ಹೇಳಿ ಮಾಯವಾದಳು.
ಚಾರುಮತಿಯು ದೇವಿಯ ಆಜ್ಷೆಯಂತೆ ವರಮಹಾಲಕ್ಷ್ಮಿ ವ್ರತವನ್ನು ವಿಧ್ಯುಕ್ತವಾಗಿ ಮಾಡಿ ಸಕಲ ಸೌಭಾಗ್ಯಗಳನ್ನೂ ಪಡೆದಳು. ಆದ್ದರಿಂದ ಇಂಥ ಉತ್ತಮೋತ್ತಮವಾದ ವ್ರತವನ್ನು ಯಾರು ಮಾಡುವರೋ ಅವರು ಸಕಲ ಸಂಪತ್ತನ್ನು ಹೊಂದುತ್ತಾರೆ’’ ಎಂದು ಪರಮೇಶ್ವರನು ಪಾರ್ವತೀದೇವಿಗೆ ಹೇಳಿದನೆಂದು ಭವಿಷ್ಯೋತ್ತರಪುರಾಣ ತಿಳಿಸುತ್ತದೆ.
ದಕ್ಷಿಣ ಭಾರತದಲ್ಲಿ ಆಚರಣೆ
ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ಈ ಹಬ್ಬವನ್ನು ತುಂಬಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಪೂಜೆಯಲ್ಲಿ ರಂಗೋಲಿ, ಹಸಿರು ತಳಿರು ತೋರಣ, 5 ರೀತಿಯ ಹಣ್ಣುಗಳು, 16 ಜಾತಿಯ ಪತ್ರೆಗಳು, ಹಾಗೂ ಲಕ್ಷ್ಮಿಗೆ ಪ್ರಿಯವಾದಂತಹ ಕಮಲದ ಹೂ, ಸೇವಂತಿಗೆ, ಮಲ್ಲಿಗೆ ಹೂವನ್ನು ಅರ್ಪಿಸುತ್ತಾರೆ.
ಈ ವ್ರತವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವ ೫ ಗಂಟೆಗೆ ಮಾಡಿದರೆ ಶ್ರೇಷ್ಠವೆನ್ನುತ್ತಾರೆ. ನಂತರ ಬೆಳಗಿನ ಸಮಯ ೭-೩೦ಕ್ಕೆ ಅಥವಾ ಮಧ್ಯಾಹ್ನ ಅಭಿಜಿನ್ ಮುಹೂರ್ತವಾದ ೧೨ಕ್ಕೆ ಇಲ್ಲವೇ ಸಂಜೆ ಗೋಧೂಳಿ ಮುಹೂರ್ತವಾದ ೫-೬ಕ್ಕೆ ಮಾಡಬಹುದು ಎಂದು ಹೇಳುತ್ತಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಎದ್ದು ಮಂಗಳ ಸ್ನಾನ ಮಾಡಿ, ನಂತರ ವ್ರತ ಮಾಡುವವರು ಪೂಜೆ ಮಾಡುವವರು ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ, ಅಷ್ಟದಳ ಪದ್ಮದ ರಂಗೋಲಿ ಹಾಕುತ್ತಾರೆ. ಇದರ ಮೇಲೆ ಕಳಸ ಸ್ಥಾಪಿಸುತ್ತಾರೆ.
ಉಪವಾಸವಿದ್ದು, ಮನದಲ್ಲೇ ಸಂಕಲ್ಪ ಮಾಡಿ, ಕಲಶದಲ್ಲಿ ಅಕ್ಕಿಯನ್ನು ಅಥವಾ ನೀರನ್ನು ತುಂಬಿಸಿ, ಅದರಲ್ಲಿ ಆಲದ ಚಿಗುರನ್ನು ಹಾಕಿ, ಜೊತೆಗೆ ಅರಿಸಿನದ ಕೊಂಬು, ಅಡಿಕೆ, ನಾಣ್ಯ ಇಟ್ಟು, ಅದರ ಮೇಲೆ ಅರಿಸಿನ, ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಚಿನ್ನ, ಬೆಳ್ಳಿಯಿಂದ ಮಾಡಿದ ಮುಖವಾಡ ತೊಡಿಸಿ ಅಥವಾ ತೆಂಗಿನ ಕಾಯಿಗೆ ಹಳದಿ ಹಿಟ್ಟಿನಿಂದ ಅಥವಾ ಅರಿಸಿನದಿಂದ ಮೂಗು, ಕಣ್ಣು, ಕಿವಿ ಮಾಡಿ, ಒಡವೆ ಸೀರೆ ಉಡಿಸಿ, ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಕಳಶದ ಬಾಯಿಗೆ ವೀಳ್ಯದ ಎಲೆ ಅಥವಾ ಮಾವಿನ ಎಲೆಯನ್ನು ಇಡುತ್ತಾರೆ. ಅಲ್ಲದೆ ಈ ಪೂಜೆಯಲ್ಲಿ ಕಳಸಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದ್ದು, ಅದನ್ನು ಲಕ್ಷ್ಮಿ ಕಳಶ ಎಂದೇ ಕರೆಯಲಾಗುತ್ತದೆ.
ವಿವಿಧ ರೀತಿಯ ಬಾದಾಮಿ, ಖರ್ಜೂರ, ಒಣದ್ರಾಕ್ಷಿ, ಕಲ್ಲುಸಕ್ಕರೆ, ಹಣ್ಣು ಹಂಪಲುಗಳನ್ನು ದೇವರ ಮುಂದಿರಿಸುತ್ತಾರೆ. ಗೋಧಿ ಅಥವಾ ಅಕ್ಕಿ ಹಿಟ್ಟಿನಲ್ಲಿ ಮಾಡಿದ ಕಡುಬುಗಳನ್ನು ನಿವೇದಿಸುತ್ತಾರೆ. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ನೀರಿನಲ್ಲಿ ನೆನಸಿ, ಅರಿಸಿನ ಹಚ್ಚಿ, ದೇವಿಯ ಪಕ್ಕದಲ್ಲಿರಿಸುತ್ತಾರೆ. ದೇವಿಯ ಮೂರ್ತಿಗೆ ಅರಿಸಿನ ಕುಂಕುಮ ಹೂ, ಪತ್ರೆಗಳಿಂದ ಪೂಜಿಸುತ್ತಾರೆ. ನಂತರ ಆ ಹನ್ನೆರಡು ದಾರಗಳಿಗೆ,ರಮೆ, ಸರ್ವಮಂಗಳೆ, ಕಮಲವಾಸಿನಿ, ಮನ್ಮಥ ಜನನಿ, ವಿಷ್ಣು ವಲ್ಲಭೆ, ಕ್ಷೀರಾಬ್ಧಿ ಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಪೆ ಮತ್ತು ವರಲಕ್ಷ್ಮಿ’’ ಎಂಬ 12 ಹೆಸರುಗಳಿಂದ ಉಚ್ಛರಿಸಿ, ಕುಂಕುಮ ಹೂ, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವುದು ಈ ವ್ರತದ ವಿಶೇಷ.
ಈ ದಾರಕ್ಕಾಗಿ ವಿಶೇಷ ನೈವೇದ್ಯವಾಗಿ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀ ಸೂಕ್ತವನ್ನು ಪಠಿಸುವುದೂ ಒಳ್ಳೆಯದು ಎನ್ನುತ್ತಾರೆ. ಪೂಜೆಯ ಬಳಿಕ ಮುತ್ತೈದೆಯರು, ದಾರಿದ್ರ್ಯ ಸಾಗರೇ ಮಗ್ನಾ ಭೀತಾಹಂ ಭವಭೀತಿತಃ, ದೋರಂ ಗೃಹ್ಣಾಮಿ ಕಮಲೇ ಮಮಾಭೀಷ್ಟ ಪ್ರದಾಭವ’’ ಎಂಬ ಶ್ಲೋಕವನ್ನು ಹೇಳುತ್ತಾ ಆ ದಾರಗಳಿಗೆ ಹೂಗಳನ್ನು ಕಟ್ಟಿ, “ದ್ವಾದಶ ಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿಃ, ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ’’ ಎಂಬ ಶ್ಲೋಕವನ್ನು ಹೇಳುತ್ತಾ ಅವನ್ನು ಹಿರಿಯರಿಂದ ಬಲಗೈಗೆ ಕಟ್ಟಿಸಿಕೊಂಡು ಆಶೀರ್ವಾದ ಪಡೆದು, ದಕ್ಷಿಣೆಯ ಜೊತೆಗೆ ಅರಿಸಿನ, ಕುಂಕುಮವನ್ನು ನೀಡುವುದು ವಾಡಿಕೆ.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.