ವಿ ಎಸ್ ನಾಯಕ ಬಳಕೂರು
ಒಂದು ಚಿತ್ರವು ಸಾವಿರಾರು ಕಥೆಗಳನ್ನು ಹೇಳುತ್ತದೆ. ಸಾವಿರಾರು ಧ್ವನಿಗಳನ್ನು ಹೊರಹೊಮ್ಮಿಸುತ್ತದೆ. ನಿಸ್ತೇಜವಾದ ಮನಸ್ಸನ್ನು ಹೂವಿನಂತೆ ಅರಳಿಸುತ್ತದೆ. ಚಿತ್ರಕಲೆ ಒಂದು ಮಾಯಾಲೋಕ. ಅದರ ಅಂತರಾಳವನ್ನು ಹೊಕ್ಕಿ ಕಲಾವಿದ ಎಲ್ಲರ ಮನಸೂರೆಗೊಳ್ಳುವ ವಿಭಿನ್ನ ಕಲಾಕೃತಿಗಳನ್ನು ರಚಿಸಿ ಕಲಾಸಕ್ತರ ಮಡಿಲಿಗೆ ಅರ್ಪಿಸುತ್ತಾ ನೆ. ಇಂತಹ ವಿಭಿನ್ನ ಕಲಾಕೃತಿಗಳ ಮೂಲಕ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ರಚಿಸಿರುವ ವಿನೂತನ ಕಲಾಕೃತಿಗಳನ್ನು ಕಲಾ ಪ್ರದರ್ಶನದ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸುತ್ತಿದ್ದಾರೆ ಡಾ. ಶ್ರೀಧರ್ ಮೂರ್ತಿ. ಎ.

ಇವರು ರಚಿಸಿರುವ ಜಲವರ್ಣ ಮಾಧ್ಯಮದ ಕಲಾಕೃತಿಗಳು ಒಂದು ಮಾಂತ್ರಿಕ ಜಗತ್ತನ್ನು ಸೃಷ್ಟಿ ಮಾಡಿದಂತಿದೆ. ಶ್ರೀಧರ್ ಅವರು ಮೂಲತಃ ಕೊಪ್ಪಳ ದವರು ಈಗ ಬೆಂಗಳೂರಿನ ಶ್ರೀನಿವಾಸಪುರದಲ್ಲಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಮುದ್ರಣ ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಚಿತ್ರಕಲಾ ಮಹಾವಿದ್ಯಾಲಯದಿಂದ ಬಿ. ಎಫ್. ಎ. ಪದವಿಯನ್ನು ನಂತರ ಎಂ. ಎಫ್. ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.2012 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಆರ್ಟ್ ಹೌಸ್ ಕಲಾ ಗ್ಯಾಲರಿಯಲ್ಲಿ ಆಯೋಜನೆ ಮಾಡಿರುವ ಇವರ ಜಲವರ್ಣ ಮಾಧ್ಯಮದ ಕಲಾಕೃತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ವಿನೂತನ ಸಂದೇಶವನ್ನು ಕೊಡುತ್ತದೆ. ಸೌಂದರ್ಯ ಪ್ರಜ್ಞೆಯನ್ನು ಈ ಭೂಮಿಯ ಮಿತಿಯಿಂದ ಹೊರಗಿನ ಬ್ರಹ್ಮಾಂಡಕ್ಕೆ ಹೇಗೆ ವಿಸ್ತಾರ ಮಾಡಬಹುದು ಮತ್ತು ಇವರ ಆಲೋಚನೆಯಲ್ಲಿ ಈ ಭೂಮಿಯ ಹೊರಗೆ ಒಂದು ಸೌಂದರ್ಯವಿದೆ. ಅದರ ಆಕರ್ಷಣೆ ಹೊಂದಿ ಆಲೋಚನೆಯಿಂದ ವಿಭಿನ್ನ ಕಲಾಕೃತಿಗಳನ್ನು ರಚಿಸಿದ್ದಾರೆ.
ಗೋಚರ ಮತ್ತು ಅಗೋಚರ ಪ್ರಪಂಚದ ನಡುವೆ ಒಂದು ಪ್ರಪಂಚವಿದೆ ಆ ಪ್ರಪಂಚ ಶ್ರೀಧರ್ ಅವರಿಗೆ ಬಹ ಳಷ್ಟು ಕಾಡಿದೆ ಅದು ಇಷ್ಟವಾಗಿದೆ ಕಾಣುವ ಮತ್ತು ಕಾಣದಿರುವ ಲೋಕದ ಮಧ್ಯೆ ಇರುವ ಒಂದು ಪ್ರಪಂಚವನ್ನು ತಾವೇ ಕಲ್ಪಿಸಿಕೊಂಡು ಅಲ್ಲಿ ಅವರು ಅನುಭವಿಸಿದ ನೋಡಿದ ಹಲವಾರು ವಿಚಾರಗಳನ್ನು ವಿಸ್ಮಯಕಾರಿ ಕಲಾಕೃತಿಗಳ ಮೂಲಕ ರಚಿಸಿದ್ದಾರೆ. ಆದರೆ ಭೂಮಿಯ ಆಚೆ ಏನಿದೆ ಎಂಬ ಕಲ್ಪನೆ ಅವರಿಗಿಲ್ಲ. ಆದರೆ ಅವರು ಈ ಭೂಮಿಯನ್ನು ಆಧಾರವಾಗಿಟ್ಟುಕೊಂಡು ಆಲೋಕ ದ ಪರಿಚಯವನ್ನು ಕಲಾಕೃತಿಗಳ ಮೂಲಕ ಬಿಂಬಿಸಿದ್ದಾರೆ. ಸಾಮಾನ್ಯವಾಗಿ ಇವರು ರಚಿಸಿರುವ ಈ ಕಲಾಕೃತಿಗಳನ್ನು ನೆರಳು ಮತ್ತು ಬೆಳಕಿನ ನಡುವೆ ವೀಕ್ಷಿಸಿದಾಗ ವಿಭಿನ್ನವಾದ ಒಂದು ತಾಣಕ್ಕೆ ಹೋದ ಅನುಭವದ ಜೊತೆಗೆ ನಮಗೆ ನಾವು ಎಲ್ಲಿದ್ದೇವೆ ಎಂಬ ಪರಿವೆಯೂ ಕೂಡ ಇರುವುದಿಲ್ಲ.
ಇಂತಹ ವಿಭಿನ್ನ ಕಲಾಕೃತಿಗಳ ಸರಣಿ ವೀಕ್ಷಿಸುವ ಸುಯೋಗ ಕಲಾಸಕ್ತರ ಆದ ತಮ್ಮ ಪಾಲಿಗೆ ಒದಗಿ ಬಂದಿದೆ . ತಮ್ಮ ಬಿಡುವಿನ ಸಮಯದಲ್ಲಿ ಈ ಕಲಾಗ್ಯಾಲರಿ ಗೆ ಭೇಟಿ ನೀಡಿ ಕಲಾಪ್ರದರ್ಶನವನ್ನು ವೀಕ್ಷಿಸಬಹುದು.
ಆರ್ಟ್ ಹೌಸ್ ಕಲಾಗ್ಯಾಲರಿ
ಅರಮನೆ ರಸ್ತೆ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕ
ವಸಂತನಗರ, ಬೆಂಗಳೂರು
ದಿನಾಂಕ: 27 ಅಗಸ್ಟ್ ರಿಂದ ಆರಂಭವಾಗಿ 4 ಸೆಪ್ಟೆಂಬರ್ ವರೆಗೆ ನಡೆಯಲಿದೆ
ವೀಕ್ಷಣೆಯ ಸಮಯ :
ಬೆಳಿಗ್ಗೆ 10:30 ರಿಂದ ಸಂಜೆ6:30
ಪ್ರವೇಶ ಉಚಿತ

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.