ಷೇರುಪೇಟೆಯಲ್ಲಿ ಇತ್ತೀಚೆಗೆ ಹರಿದಾಡುವ ಹಣದ ಪ್ರಭಾವದ ಕಾರಣ ಗಜಗಾತ್ರದ ವಹಿವಾಟುಗಳು ಹೆಚ್ಚಾಗುತ್ತಿವೆ. ಈ ಗಜಗಾತ್ರದ ವಹಿವಾಟುಗಳು ಹೂಡಿಕೆದಾರರ ವಿಶೇಷವಾಗಿ ಸಣ್ಣ ಹೂಡಿಕೆದಾರರ ಭಾವನೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆಂದರೆ ಒಂದು ಕಂಪನಿ ಷೇರಿನ ಬೆಲೆಗಳು ಅಧಿಕ ಸಂಖ್ಯಾಗಾತ್ರದ ವಹಿವಾಟಿನೊಂದಿಗೆ ಏರಿಕೆ ಕಂಡರೆ ಅದು ಹೂಡಿಕೆಗೆ ಸೂಕ್ತವೆಂದು ಮತ್ತು ಅದು ಏರಿಕೆಯ ದಿಶೆಯಲ್ಲಿರುವುದರಿಂದ ಮತ್ತಷ್ಠು ಏರಿಕೆ ಕಾಣಬಹುದೆಂಬ ಆಶಾಭಾವನೆಗೆ ದಾರಿಯಾಗುತ್ತದೆ ಮತ್ತು ಸಹಜ ಚಿಂತನೆಗಳಿಂದ ದೂರವಾಗುವಂತೆ ಮಾಡುತ್ತದೆ.
ಗಜಗಾತ್ರದ ವಹಿವಾಟು ಎಂದರೇನು?
ಒಂದು ವಹಿವಾಟಿನ ಗಾತ್ರವು ರೂ.10 ಕೋಟಿಗೂ ಹೆಚ್ಚಿದ್ದು, ಮಾರಾಟಮಾಡುವವರು ಮಾರಾಟಮಾಡುವ ಷೇರುಗಳ ಸಂಖ್ಯೆ ಮತ್ತು ದರಗಳೊಂದಿಗಿನ ಆರ್ಡರ್ ನ್ನು ದಾಖಲಿಸಿದ ಮೇಲೆ ಖರೀದಿಸುವವರು ಸಹ ಅಷ್ಠೇ ಸಂಖ್ಯೆಯ ಷೇರುಗಳು ಮತ್ತು ದರದೊಂದಿಗೆ ಆರ್ಡರ್ ದಾಖಲಿಸಿದಲ್ಲಿ ಮಾತ್ರ ಅದು ವಹಿವಾಟಾಗಿ ಪರಿವರ್ತಿತವಾಗುತ್ತದೆ. ಈ ಪ್ರಕ್ರಿಯೆಯು ಕೇವಲ 90 ಸೆಕಂಡ್ ಗಳಲ್ಲಿ ನಡೆಯುತ್ತದೆ. ಒಂದೊಮ್ಮೆ 9 ನಿಮಿಷಗಳೊಳಗೆ ಸಮಾನಾಂತರದ ಪರ್ಯಾಯ ಆರ್ಡರ್ ಬರದಿದ್ದರೆ ಆ ಆರ್ಡರ್ ನಿಷ್ಕ್ರಿಯಗೊಳ್ಳುತ್ತದೆ. ಅಂದರೆ ಖರೀದಿಸುವ ಮತ್ತು ಮಾರಾಟಮಾಡುವ ಎರಡೂ ಆರ್ಡರ್ ಗಳು ನಿಗದಿತ ಸಮಯದೊಳಗೆ ಪ್ರವೇಶಿಸಿದಲ್ಲಿ ಮಾತ್ರ ಅದು ವಹಿವಾಟಾಗುತ್ತದೆ.
ಗಜಗಾತ್ರದ ವಹಿವಾಟು ಇತರೆ ವಿಚಾರಗಳು
ಗಜಗಾತ್ರದ ವಹಿವಾಟು ದಿನಕ್ಕೆ ಎರಡು ಬಾರಿ ನಡೆಯುತ್ತದೆ. ಮುಂಜಾನೆ 8.45 ರಿಂದ 9.00 ಗಂಟೆಯವರೆಗೂ ಮತ್ತು ಎರಡನೇ ಬಾರಿ ಮದ್ಯಾಹ್ನ 2.05 ರಿಂದ 2.20 ರವರೆಗೆ. ಕೇವಲ ಈಕ್ವಿಟಿ ಷೇರುಗಳಿಗೆ ಮಾತ್ರ ಅನ್ವಯಿಸುವ ಈ ವಹಿವಾಟು, ಬ್ಲಾಕ್ ರೆಫರೆನ್ಸ್ ಪ್ರೈಸ್ ಆಧಾರದ ಮೇಲೆ ದರವನ್ನು ನಿಗದಿಪಡಿಸುವರು. ಇಲ್ಲಿ ವಹಿವಾಟಾದ ಷೇರುಗಳ ಸಂಖ್ಯೆಯು ಒಟ್ಟು ವಹಿವಾಟಾದ ಷೇರುಗಳ ಸಂಖ್ಯೆಯಲ್ಲಿ ಬಿಂಬಿತವಾಗುತ್ತದೆ. ಆದರೆ ಈ ವಹಿವಾಟಿನ ದರಗಳು LTP, LTQ, ಓಪನಿಂಗ್ ಮತ್ತು ಕ್ಲೋಸಿಂಗ್ ದರಗಳು, ಗರಿಷ್ಠ ಮತ್ತು ಕನಿಷ್ಠ ದರಗಳು ವೇಟೆಡ್ ಆವರೇಜಿಂಗ್ ಪ್ರೈಸಿಂಗ್ ಗಳನ್ನು ಪರಿಗಣಿಸುವುದಿಲ್ಲ. ಈ ಸಮೂಹದಲ್ಲಿ ವಹಿವಾಟಾಗಲು ಪೀರಿಯಾಡಿಕ್ ಕಾಲ್ ಆಕ್ಷನ್ ಸಮೂಹದಲ್ಲಿರುವ ಷೇರುಗಳು ಅರ್ಹವಲ್ಲ.
ದಿನದ ಅಂತ್ಯದಲ್ಲಿ ಷೇರುವಿನಿಮಯ ಕೇಂದ್ರಗಳು ಪ್ರಕಟಿಸುವ ವಹಿವಾಟಿನ ಗಾತ್ರದ ಅಂಶಗಳಲ್ಲಿ , ವಿದೇಶಿ ಮತ್ತು ಸ್ವದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಅಂಕಿ ಅಂಶಗಳಲ್ಲಿ ಗಜಗಾತ್ರದ ವಹಿವಾಟೂ ಸೇರಿರುತ್ತದೆ. ಇತ್ತೀಚಿನ ದಿನಗಳಲ್ಲಿ ವಿದೇಶೀ ವಿತ್ತೀಯ ಸಂಸ್ಥೆಗಳು ನಡೆಸುವ ವಹಿವಾಟು ತುಲನಾತ್ಮಕವಾಗಿದ್ದು, ನಿವ್ವಳ ಅಂಶಗಳು ಭಾರಿ ಏರಿಳಿತ ಕಾಣುತ್ತಿರಲಿಲ್ಲ. ಆದರೆ ಆಗಷ್ಟ್ 30ರಂದು ನಡೆದ ಚಟುವಟಿಕೆಗಳ ಅಂಕಿ ಅಂಶಗಳು ವಿಭಿನ್ನತೆಯಿಂದ ಕೂಡಿತ್ತು. ಅಂದು ವಿದೇಶೀ ವಿತ್ತೀಯ ಸಂಸ್ಥೆಗಳು ರೂ.16,145 ಕೋಟಿ ಮೌಲ್ಯದ ಷೇರು ಖರೀದಿಸಿದರೆ ರೂ.11,979 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟಮಾಡುವ ಮೂಲಕ ರೂ.4,165 ಕೋಟಿ ಮೌಲ್ಯದ ಷೇರು ನಿವ್ವಳ ಖರೀದಿ ಮಾಡಿದ್ದವು. ಆದರೆ ನಂತರದ ದಿನದಲ್ಲಿ ಅಂದರೆ ಸೆಪ್ಟೆಂಬರ್ 1 ರಂದು ಪರಿಸ್ಥಿತಿಯು ಪಲ್ಲಟಗೊಂಡು, ಅಂದು ಅವು ಖರೀದಿಸಿದ ಷೇರಿನ ಮೌಲ್ಯವು ರೂ.11,907 ಕೋಟಿಯಾಗಿದ್ದು, ಮಾರಾಟದ ಮೌಲ್ಯವು ರೂ.14,197 ಕೋಟಿಯಾಗಿ, ಅಂತಿಮವಾಗಿ ರೂ.2,290 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟಮಾಡಿದ್ದವು.
ಇಂತಹ ಅಂಕಿ ಅಂಶಗಳಿಗೆ ಪರಿಶೀಲಿಸದೆ ಆದ್ಯತೆ ಕೊಡುವುದು ಸರಿಯಲ್ಲ. ಇಲ್ಲಿ ಅನೇಕ ಗಜಗಾತ್ರದ ವಹಿವಾಟುಗಳು ನಡೆದಿರುವ ಅಂಶವನ್ನು ಗಮನಿಸಬೇಕು. ಈ ರೀತಿ ಗಜಗಾತ್ರದ ವಹಿವಾಟಿನಲ್ಲಿ ಚೌಕಾಶಿ ಮಾಡಿ ನಿರ್ಧರಿಸಿರುವ ವಹಿವಾಟುಗಳೂ ಸೇರಿರುತ್ತವೆ. ಹಲವಾರು ಬಾರಿ ಕೆಲವು ಮ್ಯೂಚುಯಲ್ ಫಂಡ್ ಗಳಾಗಲಿ, ವಿತ್ತೀಯ ಸಂಸ್ಥೆಗಳಾಗಲಿ ತಮ್ಮ ಹೂಡಿಕೆ ಗುಚ್ಚದಲ್ಲಿರುವ ಷೇರುಗಳನ್ನು ತಮ್ಮದೇ ಸಮೂಹದ ಮತ್ತೊಂದು ಕಂಪನಿಗೆ ವರ್ಗಾಯಿಸುವುವು. ಇದಕ್ಕೆ ಕಾರಣ ಪೇಟೆಯಲ್ಲಾಗುವ ಬದಲಾವಣೆಗಳ ಪ್ರಯೋಜನ ಪಡೆಯುವುದಾಗಬಹುದು, ತೆರಿಗೆ ಸವಲತ್ತುಗಳನ್ನು ಪಡೆದುಕೊಳ್ಳುವುದೂ ಇರಬಹುದು. ಆದರೆ ಈ ರೀತಿಯ ಚಟುವಟಿಕೆಗಳೂ ಸಹ ವಹಿವಾಟಿನ ಅಂಕಿ ಅಂಶಗಳಲ್ಲಿ ಸೇರಿರುತ್ತವೆ.
1, ಸೆಪ್ಟೆಂಬರ್ 2022 ರಂದು ನಡೆದ ಕೆಲವು ವಹಿವಾಟಿನ ಅಂಶಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ.
NTUC INSURANCE CO OPERATIVE Ltd ಸಂಸ್ಥೆ ಮಾರಾಟ ಮಾಡಿದ ಕಂಪನಿಗಳ ಸಂಖ್ಯಾಗಾತ್ರ | INCOME INSURANCE Ltd ಸಂಸ್ಥೆಯು ಅಂದು ಖರೀದಿ ಮಾಡಿದ ಷೇರುಗಳ ಸಂಖ್ಯೆ ಮತ್ತು ವಹಿವಾಟಿನ ದರ |
ಭಾರತಿ ಏರ್ ಟೆಲ್ 12,22,300 | 12,22,300 @ Rs.734.90 |
ಹೆಚ್ ಡಿ ಎಫ್ ಸಿ 4,85,014 | 4,85,104 @ Rs.2,400.50 |
ಹಿಂದೂಸ್ಥಾನ್ ಯುನಿಲೀವರ್ 3,90,939 | 3,90,939 @ Rs.2,598.05 |
ಐಸಿಐಸಿಐ ಬ್ಯಾಂಕ್ 34,76,713 | 34,76,713 @ Rs.873.55 |
ಇನ್ಫೋಸಿಸ್ 2,55,013 | 2,55,013 @ Rs.1,456.40 |
ಲಾರ್ಸನ್ ಅಂಡ್ ಟೋಬ್ರೊ 4,08,788 | 4,08,788 @ Rs.1,902.35 |
ರಿಲೈಯನ್ಸ್ ಇಂಡಸ್ಟ್ರೀಸ್ 7,17,194 | 7,17,194 @ Rs.2,562.45 |
ಝೊಮೆಟೊ 1,32,74,095 | 1,32,74,095 @ Rs.61.00 |
NTUC INSURANCE CO OPERATIVE Ltd & INCOME INSURANCE Ltd ಇವೆರಡೂ ಕಂಪನಿಗಳೂ ಸಿಂಗಪೂರ್ ನಲ್ಲಿ ಸ್ಥಾಪಿತಾವಾಗಿರುವ ಕಂಪನಿಗಳು.
ಇಂತಹ ಚಟುವಟಿಕೆಯಿಂದ ಸಣ್ಣ ಹೂಡಿಕೆದಾರರು ವಿದೇಶೀ ವಿತ್ತೀಯ ಸಂಸ್ಥೆಗಳು ಭಾರಿ ಪ್ರಮಾಣದ ಚಟುವಟಿಕೆ ನಡೆಸಿವೆ ಎಂದು, ಈ ಅಗ್ರಮಾನ್ಯ ಕಂಪನಿಗಳ ವಹಿವಾಟಾದ ಷೇರುಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಮತ್ತಷ್ಟು ಏರಿಕೆಯಾಗಬಹುದೆಂದು ನಿರೀಕ್ಷಿಸಿ ವಾಸ್ತವಿಕತೆಯನ್ನು ಮರೆತುಬಿಡಬಹುದು. ಚಟುವಟಿಕೆಗೂ ಮುನ್ನ ಇಂತಹ ಅಂಶಗಳನ್ನೂ ಗಮಾನಿಸಬೇಕಾದುದು ಅನಿವಾರ್ಯ
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.