ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ನಿರಂತರವಾಗಿ ಏರಿಳಿತಗಳನ್ನುಂಟುಮಾಡುತ್ತಿದ್ದು ಅನಿರೀಕ್ಷಿತ ಮಟ್ಟದ ಬದಲಾವಣೆಗಳನ್ನು ಬಿಂಬಿಸುತ್ತಿದ್ದು ಅವಕಾಶಗಳನ್ನು ಕಾಲ್ಪನಿಕವೆಂದಿನಿಸುವಂತೆ ಶೀಘ್ರವಾಗಿ ಕಣ್ಮರೆಯಾಗುವಂತೆ ಮಾಡುತ್ತಿದೆ. ಕೊರೋನಾ ಸಮಯದ ನಂತರದಲ್ಲಿ ಪೇಟೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈ ರೀತಿಯ ಅಸ್ಥಿರ ವಾತಾವರಣಕ್ಕೆ ಕಾರಣವೇನು? ಎಂಬುದು ಎಲ್ಲರ ಮನದಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.
ಈಗಿನ ಪೇಟೆಗಳ ಚಲನೆಯನ್ನು ಪರಿಶೀಲಿಸಿದಾಗ ಅರಿವಾಗುವುದು ಅವು ಸೂಜಿ ಮತ್ತು ಪಿನ್ ಗಳ ಮೇಲೆ ನಿಂತಂತಿದೆ ಎಂಬ ಸಿಟಿ ಬ್ಯಾಂಕ್ ನವರ ಹೇಳಿಕೆ ಸಹಜತೆಯಿಂದ ಕೂಡಿದೆ ಎನಿಸುತ್ತದೆ.
ಈ ವರ್ಷದ ಏಪ್ರಿಲ್ 29 ರಂದು 57,060 ರಲ್ಲಿದ್ದ ಸೆನ್ಸೆಕ್ಸ್ ಮೇ ತಿಂಗಳ ಮಧ್ಯಂತರದಲ್ಲಿ 52,800 ರ ಸಮೀಪಕ್ಕೆ ಕುಸಿದು ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.241.34 ಲಕ್ಷ ಕೋಟಿಗೆ ಮೇ 12 ರಂದು ತಲುಪಿತು. ಅಲ್ಲಿಂದ ಸೆನ್ಸೆಕ್ಸ್ ಪುಟಿದೆದ್ದು ಮೇ ಅಂತ್ಯದಲ್ಲಿ 56,000 ಪಾಯಿಂಟುಗಳ ಸಮೀಪಕ್ಕೆ ಏರಿಕೆ ಕಂಡಿತು. ಜೊತೆಗೆ ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.258 ಲಕ್ಷ ಕೋಟೆ ಮೀರಿತು.
ಜೂನ್ ತಿಂಗಳ 17 ರಂದು ಮಧ್ಯಂತರದಲ್ಲಿ ಸೆನ್ಸೆಕ್ಸ್ 50,921 ನ್ನು ತಲುಪಿ ವಾರ್ಷಿಕ ಕನಿಷ್ಠದ ದಾಖಲೆ ಬರೆಯಿತು. ಅಂದಿನ ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.239.18 ಲಕ್ಷ ಕೋಟಿಗೆ ಕುಸಿದಿತ್ತು. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಸೆನ್ಸೆಕ್ಸ್ 57,570 ಪಾಯಿಂಟುಗಳೊಂದಿಗೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.266.58 ಲಕ್ಷ ಕೋಟಿಗೆ ಜಿಗಿಯಿತು. ಅಂದರೆ ಏಪ್ರಿಲ್ ತಿಂಗಳ ಅಂತ್ಯದಲ್ಲಿ 57,000 ಪಾಯಿಂಟುಗಳಲ್ಲಿದ್ದುದು ಜೂನ್ ತಿಂಗಳ ಮಧ್ಯಂತರದಲ್ಲಿ 50,921 ಪಾಯಿಂಟುಗಳಿಗೆ ಕುಸಿದು ಮತ್ತೆ ಜುಲೈ ಅಂತ್ಯಕ್ಕೆ 57 ಸಾವಿರದ ಗಡಿ ದಾಟಿರುವುದು ಹೂಡಿಕೆಯೆನಿಸದು.
ಶುಕ್ರವಾರ ಸೆಪ್ಟೆಂಬರ್ 9 ರಂದು ಸೆನ್ಸೆಕ್ಸ್ 60,000 ದ ಗಡಿ ದಾಟಿ ಮತ್ತೆ ಹಿಂದಿರುಗಿ 59,793.14 ರಲ್ಲಿ ಕೊನೆಗೊಂಡಿದೆ. ಅಂದಿನ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.283.03 ಲಕ್ಷ ಕೋಟಿಯನ್ನು ತಲುಪಿ ಸರ್ವಕಾಲೀನ ದಾಖಲೆ ನಿರ್ಮಿಸಿದೆ. ಇದು ಒಂದು ರೀತಿಯ ವ್ಯವಹಾರಿಕತೆಗೆ ಪುಷ್ಠಿ ನೀಡುವಂತಹುದಾಗಿದೆ. ಇಂತಹ ವಾತಾವರಣದಲ್ಲಿ ಅನೇಕ ಕಂಪನಿಗಳ ಷೇರಿನ ಬೆಲೆ ಚಲನೆಗಳನ್ನು ಹೆಸರಿಸಬಹುದು.
ಜೂನ್ 16, 2022 ರಂದು ಅಗ್ರಮಾನ್ಯ, ಪ್ರಮುಖ ಕಂಪನಿಗಳಾದ ಬಜಾಜ್ ಫೈನಾನ್ಸ್, ಸಿಯಟ್, ಗ್ಲೆನ್ ಮಾರ್ಕ್ ಫಾರ್ಮ, ಗ್ರಾಫೈಟ್ ಇಂಡಿಯಾ, ಗ್ರಾಸಿಂ, ಗುಜರಾತ್ ಗ್ಯಾಸ್, ಹಿಂಡಾಲ್ಕೋ, ಹಿಂದೂಸ್ಥಾನ್ ಝಿಂಕ್, ಇಂಡಸ್ ಇಂಡ್ ಬ್ಯಾಂಕ್, ಇನ್ಫೋಸಿಸ್, ಎಲ್ ಐ ಸಿ ಹೌಸಿಂಗ್, ಎನ್ ಎಂ ಡಿ ಸಿ, ಸೇಲ್, ಟಾಟಾ ಸ್ಟೀಲ್, ಟೆಕ್ ಮಹಿಂದ್ರ, ಅಲ್ಟ್ರಾಟೆಕ್ ಮುಂತಾದವುಗಳು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಇಳಿದವು. ಆದರೆ ಕೇವಲ ಎರಡು/ ಮೂರು ತಿಂಗಳುಗಳಲ್ಲೇ ಅವು ಗಳಿಸಿಕೊಟ್ಟ ಅವಕಾಶಗಳು ಹೇಗಿತ್ತೆಂದರೆ ಷೇರುಪೇಟೆಯಲ್ಲಿ ಇಷ್ಟು ಸುಲಭವಾಗಿ ಸಂಪಾದನೆ ಮಾಡಬಹುದೆಂಬ ಚಿಂತನೆಯಿಂದ ಮತ್ತಷ್ಟು ಹಣವನ್ನು ತೊಡಗಿಸಿರಲೂಬಹುದು. ಈ ಕಂಪನಿಗಳು ಯಾವ ರೀತಿಯಲ್ಲಿ ಪುಟಿದೆದ್ದವು ಎಂಬುದಕ್ಕೆ ಈ ಕೋಷ್ಠಕದ ಮೇಲೆ ಕಣ್ಣಾಯಿಸಿರಿ.
ಕಂಪನಿ ಹೆಸರು | ಪೇಟೆಯ ಕನಿಷ್ಠ ದರ 16/06/2022 | ಪೇಟೆಯ ಗರಿಷ್ಠ ದರ 10/09/2022 | ವಾರ್ಷಿಕ ಕನಿಷ್ಠ ದರ |
ಬಜಾಜ್ ಫೈನಾನ್ಸ್ | 5,365.60 | 7,320.00 | 5,235.60( 17/06) |
ಸಿಯಟ್ | 911.10 | 1,431.25 | 890(20/06) |
ಗ್ಲೆನ್ ಮಾರ್ಕ್ ಫಾರ್ಮ | 363 | 388 | 348.90 (20/06) |
ಗ್ರಾಫೈಟ್ | 382.25 | 408 | 350.20(20/06) |
ಗ್ರಾಸಿಂ | 1,278.15 | 1,797.85 | 1,276.90(17/06) |
ಗುಜರಾತ್ ಗ್ಯಾಸ್ | 421.85 | 519.00 | 403.80(23/06) |
ಹಿಂಡಾಲ್ಕೊ | 333.00 | 430.60 | 309(20/06) |
ಹಿಂದೂಸ್ಥಾನ್ ಝಿಂಕ್ | 207.25 | 291.90 | 242.40(06/07) |
ಇಂಡಸ್ ಇಂಡ್ ಬ್ಯಾಂಕ್ | 806.00 | 1,149.50 | 763.75(23/06) |
ಇನ್ಫೋಸಿಸ್ | 1,392.15 | 1,519.80 | 1,367.20(17/06) |
ಎಲ್ ಐ ಸಿ ಹೌಸಿಂಗ್ | 309.00 | 439.40 | 291.75(20/06) |
ಎನ.ಎಂಡಿಸಿ | 107.45 | 125.10 | 99.60(15/07) |
ಹೆಚ್ ಡಿ ಎಫ್ ಸಿ ಬ್ಯಾಂಕ್ | 1,278.00 | 1,509.00 | 1,271.75 (17/06) |
ಸೇಲ್ | 66.65 | 82.75 | 63.60 (20/06) |
ಬಿ ಪಿ ಸಿ ಎಲ್ | 310.35 | 341.55 | 293.50(21/06) |
ಟೆಕ್ ಮಹೀಂದ್ರ | 971.15 | 1,131.95 | 971.15(16/06) |
ಅಲ್ಟ್ರಾಟೆಕ್ | 5,280 | 7,027 | 5,158.05(17/06) |
ಈ ಪ್ರಮಾಣದ ಏರಿಕೆಯನ್ನು ಕೇವಲ ಒಂದೇ ತ್ರೈಮಾಸಿಕದಲ್ಲಿ ಪ್ರದರ್ಶಿಸಿರುವುದು ಉಳಿತಾಯಕ್ಕಿಂತ ಹೂಡಿಕೆಯಾಗಿಯೇ ಆಯ್ಕೆ ಮಾಡಿಕೊಳ್ಳುವುದು ಸುರಕ್ಷತೆಯ ದೃಷ್ಠಿಯಿಂದ ಸೂಕ್ತವಾಗಿದೆ. ಉಳಿತಾಯವೆಂದರೆ ದೀರ್ಘಕಾಲೀನ ಚಿಂತನೆಯೊಂದಿಗೆ ಮಾಡಿ, ಸಮಯಬದ್ಧವಾಗಿ ಮಾಸಾಶನ ಒದಗಿಸುವುದಾಗಿದೆ.
ಅಂದರೆ ಷೇರುಪೇಟೆಯ ದೃಷ್ಠಿಯಿಂದ ಲಾಭಾಂಶವನ್ನು ಪಡೆಯುವುದಾಗಿದೆ. ಆದರೆ ಅಲ್ಪಕಾಲೀನ ಸಮಯದಲ್ಲಿ ಅಪೂರ್ವವಾದ ಲಾಭ ಒದಗಿಸಿದಾಗ ನಗದೀಕರಿಸಿಕೊಂಡಲ್ಲಿ ಅದು ಲಾಭಗಳಿಕೆಗಾಗಿ ಹೂಡಿಕೆಮಾಡಿದಂತಾಗುತ್ತದೆ. ಹಲವು ಬಾರಿ ದೊರೆತ ಲಾಭ ಗಳಿಕೆ ಅವಕಾಶವನ್ನು ಕಳೆದುಕೊಂಡಲ್ಲಿ ಮುಂದೆ ಬಂಡವಾಳಕ್ಕೇ ಕುತ್ತು ಬರಲು ಸಾಧ್ಯವಿದೆ. ಕಾರಣ ಕಂಪನಿಗಳ ಸಾಧನೆಯು ಪೇಟೆಯಲ್ಲಾಗುವ ಬದಲಾವಣೆಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಷೇರುಪೇಟೆಯಲ್ಲಿ VALUE PICK ಅಂದರೆ ಉತ್ತಮ ಷೇರಿನ ಬೆಲೆ ಕುಸಿತ ಕಂಡಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದು ಕ್ಷೇಮ.
ಕೆಲವೊಮ್ಮೆ ಅಪೂರ್ವ ಏರಿಕೆಯಿಂದ ಲಾಭ ಗಳಿಸಿಕೊಟ್ಟಾಗ ಅದನ್ನು PROFIT BOOK ಗೆ ಅಪೂರ್ವ ಅವಕಾಶವೆಂದು ನಗದೀಕರಿಸಿಕೊಳ್ಳುವುದು. ಉಳಿತಾಯ ಮತ್ತು ಹೂಡಿಕೆಗಳ ಮೂಲ ಉದ್ದೇಶ ನಮ್ಮ ಹಣ ಸುರಕ್ಷಿತಗೊಳಿಸುವುದರೊಂದಿಗೆ ಲಾಭ ಗಳಿಸಿಕೊಳ್ಳುವುದು. ಇಲ್ಲಿ ಕಾರ್ಪೊರೇಟ್ ಗಳ ಭವಿಷ್ಯವು ಅನೇಕ ಮಾನದಂಡಗಳಿಂದ ತೂಗುವುದರಿಂದ ಷೇರಿನ ಬೆಲೆಗಳು ಅದಕ್ಕನುಗುಣವಾಗಿ ಬದಲಾಗುತ್ತಿರುತ್ತವೆ. ಹಾಗಾಗಿ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಸೂಕ್ತ.
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.