BENGALURU SEP 17
ಯುವಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲಗಳನ್ನು ಕಲಿಸಿದರಷ್ಟೆ ಸ್ವಾವಲಂಬಿ ಭಾರತ ಕಟ್ಟಲು ಸಾಧ್ಯವಾಗುತ್ತದೆ. ಸದ್ಯ 150 ಐಟಿಐಗಳನ್ನು ಮೇಲ್ದರ್ಜೆಗೇರಿಸಿದ್ದು, ಇನ್ನೂ 30 ಸರ್ಕಾರಿ ಐಟಿಐಗಳನ್ನು ಈ ವರ್ಷ ಉನ್ನತೀಕರಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಪೀಣ್ಯದಲ್ಲಿರುವ ಸರಕಾರಿ ಐಟಿಐನಲ್ಲಿ ಶನಿವಾರ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಪ್ರಪ್ರಥಮ ಐಟಿಐ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರ ಸೂಚನೆಯಂತೆ ‘ವಿಶ್ವಕರ್ಮ ದಿನ’ವಾದ ಶನಿವಾರ ದೇಶದ ಎಲ್ಲಾ 14 ಸಾವಿರ ಐಟಿಐಗಳಲ್ಲಿ ಘಟಿಕೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಅವರು 2021-22ರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು.
ಸರಕಾರವು ಐಟಿಐ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಿದೆ. ಜತೆಗೆ, ಇಂಗ್ಲಿಷ್ ಕಲಿಕೆಯನ್ನು ಇದರ ಭಾಗವಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಟಾಟಾ ಸಮೂಹದ ನೆರವಿನಲ್ಲಿ ಈಗಾಗಲೇ 150 ಸರಕಾರಿ ಐಟಿಐಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಕೋರ್ಸುಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ 4,500 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ನುಡಿದರು.