ಒಂದು ವೃತ್ತಿಯನ್ನು ಆರಿಸಿಕೊಂಡಾಗ ಅದಕ್ಕೆ ನ್ಯಾಯ ಸಮ್ಮತವಾದ ರೀತಿಯಲ್ಲಿ ನಿರ್ವಹಿಸಬೇಕು. ಕೆಲವು ವೃತ್ತಿಗಳಲ್ಲಿ ಕಾರ್ಯದ ಒತ್ತಡಗಳಿಂದ ವೃತ್ತಿಗೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗಲಿ, ಅರಿವು ಮೂಡಿಸಿಕೊಳ್ಳುವುದಕ್ಕಾಗಲಿ ಸಮಯಾವಕಾಶವೇ ಇರದ ರೀತಿಯಲ್ಲಿರುತ್ತದೆ. ಮತ್ತೆ ಕೆಲವರಿಗೆ ಆಸಕ್ತಿಯೂ ಇರಲಾರದು.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿಯವರು ಹೆಚ್ಚಿನ ಒತ್ತಡದಲ್ಲಿರುವುದು ಸಹಜವಾಗಿದೆ. ಕಾರಣ ಸಾರ್ವಜನಿಕರಲ್ಲಿ ಉಂಟಾಗುತ್ತಿರುವ ಹೊಸ ಹೊಸ ಆರೋಗ್ಯದ ತೊಂದರೆಗಳು.
ಕರೋನ ನಂತರದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತಿರುವಾಗಲೇ, ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಜನಜೀವನದ ಆರೋಗ್ಯದಲ್ಲಿ ವಿಶೇಷವಾಗಿ ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ಏರುಪೇರುಗಳುಂಟಾಗುತ್ತಿದೆ. ಈ ಎಲ್ಲದರ ನಡುವೆ ವೈದ್ಯರಿಗೆ ಸಮಯದ ಅಭಾವವಿರಬಹುದು. ಈ ಮಧ್ಯೆ ಇಷ್ಟು ಬಿಡುವಿಲ್ಲದ ಒತ್ತಡದಲ್ಲಿ ಅವರ ವೈಯಕ್ತಿಕ ಆರ್ಥಿಕ ನಿರ್ವಹಣೆಯು ಸುಲಭ ಸಾಧ್ಯವಿಲ್ಲ. ಇಂತಹವರಿಗೆ ಸೂಕ್ತವಾದ ವಿಧ ಎಂದರೆ ಷೇರುಪೇಟೆಯ ಹೂಡಿಕೆ.
ಷೇರುಪೇಟೆಯ ಹೂಡಿಕೆಗೆ ಅಗಾಧ ಹಣ ಬೇಕಾಗಬಹುದೆಂಬ ಕಲ್ಪನೆ ಹೆಚ್ಚಿನವರಲ್ಲಿರುತ್ತದೆ. ಆದರೆ ಪರಿಸ್ಥಿತಿ ಬದಲಾಗಿದೆ. ಷೇರುಗಳನ್ನು ಅಭೌತಿಕ ರೂಪ ಅಂದರೆ ಡಿಮ್ಯಾಟ್ ರೂಪದಲ್ಲಿ ಹೊಂದಬಹುದಾದ ಕಾರಣ ಹೂಡಿಕೆಯನ್ನು ಅತ್ಯಲ್ಪ ಪ್ರಮಾಣದಲ್ಲಾರಂಭಿಸಿ, ನಂತರ ಸೂಕ್ತವೆನಿಸಿದಲ್ಲಿ ಮತ್ತಷ್ಟು ಸೇರಿಸಿಕೊಳ್ಳುತ್ತಾ ಬೆಳೆಸಬಹುದು.
ವೈದ್ಯರು ತಮ್ಮ ರೋಗಿಗಳಿಗೆ ಅವರ ತೊಂದರೆ, ಕಾಯಿಲೆಗಳಿಗನುಗುಣವಾಗಿ ಸೂಕ್ತವಾದ ಔಷಧಿಗಳನ್ನು ಸೂಚಿಸುತ್ತಾರೆ. ಅವರು ಸೂಚಿಸುವ ಔಷದಿಗಳು ಮತ್ತು ಅವನ್ನು ಉತ್ಪಾದಿಸುವ ಕಂಪನಿಗಳ ಬಗ್ಗೆ ಅವರಿಗೆ ನಂಬಿಕೆ ಇರುತ್ತದೆ. ಆ ಕಂಪನಿಗಳ ಗುಣಮಟ್ಟದ ಬಗ್ಗೆಯೂ ಖಾತ್ರಿ ಇರುತ್ತದೆ. ಹೇಗಿದ್ದರೂ ಅವರು ಸೂಚಿಸುವ ಔಷದಿಗಳನ್ನು ಉತ್ಪಾದಿಸುವ ಕಂಪನಿಗಳ ಬಗ್ಗೆ ಮತ್ತು ಅವು ಉತ್ಪಾದಿಸುವ ವೈವಿಧ್ಯಮಯ ಉತ್ಪನ್ನಗಳ ಬಗ್ಗೆ ತಿಳಿದಿರುತ್ತಾರೆ, ಅಂತಹ ಕಂಪನಿಗಳ ಸುತ್ತ ಆಗುತ್ತಿರುವ ಘಟನಾವಳಿಗಳ ಬಗ್ಗೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಕಂಪನಿಗಳ ಉತ್ಪನ್ನಕ್ಕೆ ದೊರೆಯುವ ಮನ್ನಣೆ, ತಿರಸ್ಕಾರ, ಪುರಸ್ಕಾರ, ನಿಷೇದ, ಪ್ರತಿಸ್ವರ್ಧಿತ್ವ ಮುಂತಾದ ವಿಚಾರಗಳನ್ನೂ ತಿಳಿದುಕೊಂಡಲ್ಲಿ ಅವರ ವೃತ್ತಿಗೆ ಪೂರಕವಾಗುವುದರಲ್ಲಿ ಎರಡು ಮಾತಿಲ್ಲ. ಈ ಎಲ್ಲಾ ಅಂಶಗಳನ್ನು ಅವರ ಜೀವನದಲ್ಲಿ ಜಾರಿಗೊಳಿಸಲು ಸುಲಭವಾದ ಮಾರ್ಗವೆಂದರೆ ಷೇರುಪೇಟೆ.
ಔಷಧಿ ವಲಯದ ಪ್ರಮುಖ ಕಂಪನಿಗಳಾದ ಸಿಪ್ಲಾ, ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್, ದಿವೀಸ್ ಲ್ಯಾಬೊರೇಟರೀಸ್, ಗ್ಲಾಕ್ಸೋ, ಸನೋಫಿ, ಫೈಜರ್, ಸನ್ ಫಾರ್ಮ, ಗ್ಲೆನ್ ಮಾರ್ಕ್ ಫಾರ್ಮ, ವೊಕಾರ್ಡ್, ಲುಪಿನ್, ಲೌರಸ್ ಲ್ಯಾಬ್, ನ್ಯಾಟ್ಕೋ ಫಾರ್ಮ ದಂತಹ ಅನೇಕ ಪ್ರಮುಖ ಕಂಪನಿಗಳು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡು ದಿನ ನಿತ್ಯ ಷೇರಿನ ಬೆಲೆಗಳಲ್ಲಿ ಏರಿಳಿತಗಳನ್ನು ಪ್ರದರ್ಶಿಸುತ್ತಿರುತ್ತವೆ. ಒಮ್ಮೊಮ್ಮೆ ಕಂಪನಿಯು ಉತ್ತಮವಾದ ಸಾಧನೆ ಪ್ರದರ್ಶಿಸಿದ್ದರೂ, ವೈವಿಧ್ಯಮಯ ಕಾರಣಗಳಿಂದ ಷೇರಿನ ಬೆಲೆಗಳು ಕುಸಿತ ಕಾಣಬಹುದು ಅಂತಹ ಸಂದರ್ಭದಲ್ಲಿ ಕಂಪನಿಗಳ ಯೋಗ್ಯತಾ ಮಟ್ಟವನ್ನರಿತು ಹೆಚ್ಚಿನ ಹಣ ಹೂಡಲು ಪ್ರಯತ್ನಿಸಬಹುದಾಗಿದೆ. ಹಾಗೆಯೇ ಬಾಹ್ಯ ಕಾರಣಗಳಿಂದಾಗಿ ಕೆಲವು ಬಾರಿ ಅನಿರೀಕ್ಷಿತ ಮಟ್ಟದ ಏರಿಕೆಯನ್ನೂ ಸಹ ಪ್ರದರ್ಶಿಸಬಹುದು, ಅಂತಹ ಸಂದರ್ಭವನ್ನು ಬಳಸಿಕೊಂಡು ಸ್ವಲ್ಪ ಪ್ರಮಾಣದಲ್ಲಾಗಲಿ ಅಥವಾ ಪೂರ್ಣವಾಗಿ ಮಾರಾಟಮಾಡಿ ಲಾಭ ಗಳಿಸಬಹುದಾಗಿದೆ.
ಔಷಧಿ ಕಂಪನಿಗಳು, ವಿಶೇಷವಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಗಳನ್ನು ಬೆಳೆಸಿಕೊಂಡಿರುವಂತಹ ಕಂಪನಿಗಳು ಹೆಚ್ಚು ಹೆಚ್ಚು ಸೂಕ್ಷ್ಮತೆಯನ್ನು ಬೆಳೆಸಿಕೊಂಡಿರುತ್ತವೆ. ಅದಕ್ಕೆ ಮುಖ್ಯ ಪ್ರಭಾವಿ ಅಂಶ ಎಂದರೆ ಅಮೇರಿಕಾದ ʼ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ʼ ( )ಸಂಸ್ಥೆ ಕೈಗೊಳ್ಳಬಹುದಾದ ಕ್ರಮಗಳಾಗಿವೆ. ಕೆಲವೊಮ್ಮೆ ಎಫ್ ಡಿ ಎ ಇನ್ಸ್ಪೆಕ್ಷನ್ ಆರಂಭಿಸಿದೆ ಎಂದರೆ ಸಾಕು ಆ ಕಂಪನಿಯ ಷೇರುಗಳು ಒತ್ತಡ ಎದುರಿಸುವ ಸಾಧ್ಯತೆ ಇದೆ. ಅಂತಹ ಇಳಿಕೆಯ ಸಮಯ ಹಲವಾರು ಬಾರಿ ಹೂಡಿಕೆಗೆ ಅವಕಾಶಗಳನ್ನು ಸೃಷ್ಠಿಸುತ್ತದೆ. ಈ ಹಿಂದೆ ಈ ಯು ಎಸ್ ಎಫ್ ಡಿ ಎ ಕ್ರಮದಿಂದ ಅಗಾಧವಾದ ಕುಸಿತಕ್ಕೊಳಗಾದ ಕಂಪನಿಗಳಲ್ಲಿ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್, ಹಿಂದಿನ ರಾನ್ ಬಾಕ್ಸಿ ಲ್ಯಾಬೊರೇಟರೀಸ್, ಸನ್ ಫಾರ್ಮ, ಗ್ಲೆನ್ ಮಾರ್ಕ್ ಫಾರ್ಮ, ಝೈಡಸ್ ಲೈಫ್ ಸೈನ್ಸಸ್, ಲುಪಿನ್ , ಅರವಿಂದೋ ಫಾರ್ಮ, ಅಲೆಂಬಿಕ್ ಫಾರ್ಮ ದಂತಹ ಅನೇಕ ಕಂಪನಿಗಳು ಸೇರಿವೆ.
ದಿವೀಸ್ ಲ್ಯಾಬೊರೇಟರೀಸ್ ಕಂಪನಿಯು 2009 ರಲ್ಲಿ, 2015 ರಲ್ಲಿ 1:1 ಅನುಪಾತದ ಬೋನಸ್ ನೀಡಿದ್ದಲ್ಲದೆ, ನಿರಂತರವಾಗಿ ಆಕರ್ಷಣೀಯ ಪ್ರಮಾಣದ ಲಾಭಾಂಶಗಳನ್ನು ವಿತರಿಸುತ್ತಿರುವ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ 2015 ರಲ್ಲಿ ರೂ.2,480 ರ ಗರಿಷ್ಠದಲ್ಲಿತ್ತು. 2016 ರಲ್ಲಿ ರೂ.1,380 ರಲ್ಲಿತ್ತು. 2017 ರಲ್ಲಿ ಯು ಎಸ್ ಎಫ್ ಡಿ ಎ ವಾರ್ನಿಂಗ್ ಪತ್ರದ ಕಾರಣ ಷೇರಿನ ಬೆಲೆಯು ರೂ.534 ರವರೆಗೂ ಕುಸಿಯಿತು. ಸುದೀರ್ಘ ಸಮಯದ ನಂತರ ಅಂದರೆ 2019 ರಲ್ಲಿ ಷೇರಿನ ಬೆಲೆ ರೂ.1,860 ನ್ನು ದಾಟಿತು, 2020 ರಲ್ಲಿ ಷೇರಿನ ಬೆಲೆ ರೂ.3,850 ನ್ನು ದಾಟಿತು. ಈ ವರ್ಷ ಷೇರಿನ ಬೆಲೆ ರೂ.4,700 ರ ಗರಿಷ್ಠಕ್ಕೂ ಜಿಗಿತ ಕಂಡು ಸಧ್ಯ ರೂ.3,570 ರ ಸಮೀಪವಿದೆ. ಈ ನಿದರ್ಶನವು ವ್ಯಾಲ್ಯು ಪಿಕ್ ಗೆ ಆಯ್ಕೆ ಯಾವಾಗ ಮಾಡಿಕೊಂಡರೆ ಸೂಕ್ತ ಎಂಬುದನ್ನು ಮತ್ತು ಒಂದು ಉತ್ತಮ ಕಂಪನಿ ಯಾವ ರೀತಿ ಷೇರುದಾರರಿಗೆ ಲಾಭ ತಂದುಕೊಡಬಹುದೆಂಬುದನ್ನೂ ಸಹ ತಿಳಿಸುತ್ತದೆ. ಗಮನವಿರಲಿ ಈ ಕಂಪನಿಯ ಷೇರಿನ ಬೆಲೆಯು 2007 ರಲ್ಲಿ ರೂ.7,000 ದ ಗಡಿ ದಾಟಿ ಬೆಳೆದಿತ್ತು ಹಾಗೆಯೇ 2009 ರಲ್ಲಿ ರೂ.455 ರ ಸಮೀಪಕ್ಕೂ ಕುಸಿದಿತ್ತು.
ಹಲವು ಬಾರಿ ಒಂದು ಕಂಪನಿಯ ಉತ್ಪನ್ನವು ನಿಗದಿಪಡಿಸಿದ ಮಾನದಂಡಗಳಿಗನುಗುಣವಾಗಿರದೆ, ಸ್ವಲ್ಪ ಕೆಳಮಟ್ಟದ್ದಾಗಿದ್ದಲ್ಲಿ ಅದನ್ನು ಸಾರಾಸಗಟಾಗಿ ತಿರಸ್ಕರಿಸುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ ಗುಣಮಟ್ಟ ಕಾಪಾಡಿಕೊಂಡು, ಸ್ಫರ್ಧಾತ್ಮಕ ವ್ಯವಹಾರದಲ್ಲಿ ತನ್ನ ಉಳಿವಿಗಾಗಿ, ಸಾಧನೆಗಾಗಿ ನೀತಿಪಾಲನಾ ಮಟ್ಟವನ್ನು ಉನ್ನತ ಸ್ಥಿತಿಯಲ್ಲಿರಿಸುವುದು ಅಗ್ರಮಾನ್ಯ ಕಂಪನಿಗಳಿಗೆ ಅತ್ಯಗತ್ಯವಾಗಿದೆ. ಕಳೆದ ಏಪ್ರಿಲ್ ನಲ್ಲಿ ಅರಂವಿಂದೋ ಫಾರ್ಮ ಮತ್ತು ಸನ್ ಫಾರ್ಮಾ ಕಂಪನಿಗಳು ತಮ್ಮ ಉತ್ಪನ್ನವನ್ನು ಹಿಂದಕ್ಕೆ ( ರಿಕಾಲ್) ಪಡೆದುಕೊಂಡಿದೆ. ಆಗಷ್ಟ್ ತಿಂಗಳಲ್ಲಿ ಫೈಜರ್ ಕಂಪನಿಯು ತನ್ನ ಉತ್ಪಾದನೆಯನ್ನು ಸ್ವಯಂ ನಿರ್ಧಾರದಿಂದ ಹಿಂದಕ್ಕೆ ಪಡೆದುಕೊಂಡಿದೆ.
ಕೇವಲ ಅಮೇರಿಕಾದಲ್ಲಿ ಮಾತ್ರವಲ್ಲದೆ ಇತರೆ ಹೆಚ್ಚಿನ ದೇಶಗಳು ಔಷಧಿ ನಿಯಂತ್ರಕ ಸಂಸ್ಥೆ ಹೊಂದಿವೆ. ಕೆಲವು ಇಂತಿವೆ.
ಭಾರತ : ಸೆಂಟ್ರಲ್ ಡ್ರಗ್ಸ್ ಕಂಟ್ರೋಲ್ ಆರ್ಗನೈಸೇಷನ್
ಇಂಗ್ಲೆಂಡ್ : ಮೆಡಿಸಿನ್ಸ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರೀ ಏಜೆನ್ಸಿ
ಆಸ್ಟ್ರೇಲಿಯಾ : ಥೆರೋಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್
ಯುರೋಪ್ : ಯುರೋಪಿನ್ ಮೆಡಿಸಿನ್ಸ್ ಏಜೆನ್ಸಿ
ಸ್ವೀಡನ್ : ಮೆಡಿಕಲ್ ಪ್ರಾಡಕ್ಟ್ಸ್ ಏಜೆನ್ಸಿ
ಸೌತ್ ಆಫ್ರಿಕಾ : ಮೆಡಿಸಿನ್ಸ್ ಕಂಟ್ರೋಲ್ ಕೌನ್ಸಿಲ್
ತಾಂಜಾನಿಯಾ : ತಾಂಜಾನಿಯಾ ಡ್ರಗ್ ಅಥಾರಿಟಿ
ಸಿಂಗಾಪುರ್ : ಸೆಂಟರ್ ಫಾರ್ ಫಾರ್ಮಸ್ಯುಟಿಕಲ್ ಅಡ್ಮಿನಿಸ್ಟ್ರೇಷನ್ ಹೆಲ್ತ್ ಸೈನ್ಸಸ್ ಅಥಾರಿಟಿ
ಕಳೆದ ಒಂದು ವರ್ಷದಲ್ಲಿ ಹಲವು ಫಾರ್ಮಾ ಕಂಪನಿಗಳಲ್ಲುಂಟಾದ ಷೇರಿನ ದರಗಳ ಬದಲಾವಣೆಗಳು:
ಕಂಪನಿ ಹೆಸರು | ಸಧ್ಯದ ಪೇಟೆ ದರ | ವಾರ್ಷಿಕ ಗರಿಷ್ಠ | ವಾರ್ಷಿಕ ಕನಿಷ್ಠ |
ಸಿಪ್ಲಾ | 1,033 | 1,083 | 850 |
ದಿವೀಸ್ ಲ್ಯಾಬ್ | 3,574 | 5,425 | 3,366 |
ಡಾಕ್ಟರ್ ರೆಡ್ಡೀಸ್ | 4,082 | 5,078 | 3,655 |
ಲುಪಿನ್ | 632 | 985 | 583 |
ಫೈಜರ್ | 4,191 | 6,036 | 4,056 |
ಗ್ಲಾಕ್ಸೋ | 1,431 | 1,917 | 1,372 |
ಸನೋಫಿ | 6,055 | 8,428 | 6,000 |
ಗ್ಲೆನ್ ಮಾರ್ಕ್ ಫಾರ್ಮ | 372 | 551 | 349 |
ಝೈಡಸ್ ಲೈಫ್ | 360 | 572 | 319 |
ನ್ಯಾಟ್ಕೋ ಫಾರ್ಮ | 611 | 973 | 600 |
ವೊಕಾರ್ಡ್ | 257 | 492 | 201 |
ಗಮನಿಸಬೇಕು: ಮೇಲೆ ತೋರಿಸಿದ ಕಂಪನಿಗಳಲ್ಲಿ ಒಂದೊಂದು ಕಂಪನಿ ಒಂದೊಂದು ತರಹದ ಮುಖಬೆಲೆ ಹೊಂದಿರುವುದರಿಂದ ಹೋಲಿಕೆ ಮಾಡುವಾಗ ಅದನ್ನು ಸಮತೋಗಿ ನಿರ್ಧರಿಸಿರಿ. ಲಾಭಾಂಶವನ್ನು ಶೇಕಡಾವಾರು ನಿರ್ಧರಿಸಲು ಷೇರಿನ ಮುಖಬೆಲೆ ಮುಖ್ಯ.
ಹೀಗೆ ಅನೇಕ ಕಂಪನಿಗಳು ಹತ್ತಾರು ಅವಕಾಶಗಳನ್ನು ಸೃಷ್ಠಿಸಿಕೊಡುತ್ತವೆ. ಅವಶ್ಯಕತೆ ಇದ್ದಾಗ ಸುಲಭಾವಾಗಿ ಅಂದಿನ ಪೇಟೆಯ ದರದಲ್ಲಿ ಮಾರಾಟ ಮಾಡಿ ನಗದೀಕರಿಸಿಕೊಳ್ಳಬಹುದಾಗಿದೆ. ಹೂಡಿಕೆಯಾಗಿ ಮುಂದುವರೆಸಿಕೊಂಡು ಹೋದಲ್ಲಿ ಆಕರ್ಷಣೀಯ ಮಟ್ಟದ ಲಾಭಾಂಶ ಮುಂತಾದ ಕಾರ್ಪೊರೇಟ್ ಫಲಗಳನ್ನು ಪಡೆದುಕೊಳ್ಳಬಹುದು.
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.