ಲೀಲಾ ವಾಸುದೇವ್
ಪುರಾಣ ಕಾಲದಿಂದಲೂ ಶಕ್ತಿ ದೇವತೆಗೆ ಪೂಜೆ ಸಲ್ಲಿಸುತ್ತಿದ್ದರು. ಜಗದ ಜನನಿಯ ಆರಾಧನೆಯನ್ನು ಭಾವನಾತ್ಮಕವಾಗಿ ಮಾಡುತ್ತಿದ್ದರು. ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿದ ಆದಿಶಕ್ತಿ ಎಂದು ಪೂಜಿಸಿದರು. ನಂತರ ಕಲ್ಪನಾತ್ಮಕ ರೂಪವನ್ನು ರಚಿಸಿದರು. ಬಿಂದು ಬ್ರಹ್ಮಾಂಡ 7 ತ್ರಿ ಕೋನಾಕಾರದ ನೆಟ್ಟು ಸಪ್ತಮಾತ್ರಿಕೆಯರೆಂದು ಕಲ್ಲಿನಲ್ಲಿಯೇ ರೂಪ ಕೊಟ್ಟು ಜನನಿ ಎಂದು ಪೂಜಿಸತೊಡಗಿದರು. ಮುಂದೆ ಶರನ್ನವರಾತ್ರಿ ಯಲ್ಲಿ ಎರಡು ಕಣ್ಣುಗಳನ್ನು ಬರೆದು ಪೂಜಿಸುತ್ತಿದ್ದರು. ಯುಗಾದಿಯ ನಂತರ ವಸಂತ ನವರಾತ್ರಿಯನ್ನು ಆಚರಿಸುವುದು ವಾಡಿಕೆ. ಶರನ್ನ್ ನವರಾತ್ರಿಯಲ್ಲಿ ನವ ದುರ್ಗಿಯನ್ನು ರೌದ್ರ ರೂಪ ದಲ್ಲಿ ಪೂಜಿಸಿದರೆ ವಸಂತ ನವರಾತ್ರಿಯಲ್ಲಿ ಸೌಮ್ಯ ರೂಪದಲ್ಲಿ ಆರಾಧಿಸುತ್ತಾರೆ.ಲಕ್ಷ್ಮಿ ಗೌರಿಯರು ಮುಂದೆ ಗೊಂಬೆಯ ರೂಪ ತಾಳಿದರು.
ವಿಜಯನಗರದ ಕಾಲದಲ್ಲಿ ಗೊಂಬೆಗಳ ಪ್ರದರ್ಶನ ಮತ್ತು ಪೂಜೆ ಹೆಚ್ಚಾಗಿತ್ತು ಎಂದು ತಿಳಿದುಬರುತ್ತದೆ. ಅಂದಮೇಲೆ ಇದು ಇನ್ನೂ ಹಳೆಯ ಸಂಪ್ರದಾಯವೇ ಆಗಿರಬಹುದು. ನಂತರ ಸೂತ್ರದ ಗೊಂಬೆಗಳು ಹಾಗೂ ತೊಗಲುಗೊಂಬೆಗಳು ಆರಂಭವಾದವು. ಇವುಗಳನ್ನು ಮನರಂಜನೆಗೆ ಉಪಯೋಗಿಸಲು ಪ್ರಾರಂಭ ಮಾಡಿದರು. ಹೊಂಗೆ ಎಣ್ಣೆಯ ದೀಪ ವಿಟ್ಟು ಮುಂದೆ ಬಿಳಿ ಪರದೆ ಕಟ್ಟಿ ಹಿಂದೆಯಿಂದ ತೊಗಲುಗೊಂಬೆ ಯನ್ನು ಬಟ್ಟೆಯ ಮೇಲೆ ಇಟ್ಟು ಆಡಿಸುತ್ತಿದ್ದರು . ಸಾಮಾನ್ಯವಾಗಿ ತೊಗಲುಗೊಂಬೆ ಯಲ್ಲಿ ರಾಮಾಯಣ ಮತ್ತು ಮಹಾಭಾರತದ ಚಿತ್ರಗಳನ್ನು ಮಾಡಿ ರಾತ್ರಿಯೆಲ್ಲಾ ಕಥೆಗಳನ್ನು ನಿರೂಪಿಸುತ್ತಿದ್ದರು.
ಪ್ರಕೃತಿ ಮತ್ತು ಪುರುಷ
ಹಿಂದಿನ ಕಾಲದಲ್ಲಿ ಮದುವೆಯಾದ ಹೆಣ್ಣುಮಗಳಿಗೆ ಒಂದು ಜೊತೆ ಪ್ರಕೃತಿ ಮತ್ತು ಪುರುಷರ ಗೊಂಬೆಗಳನ್ನು ಶ್ರೀಗಂಧದ ಮರದಲ್ಲಿ ಮಾಡಿಸಿ ಕೊಡುತ್ತಿದ್ದರು ಎಂದು ತಿಳಿದು ಬರುತ್ತದೆ . ಇದು ಪರಂಪರೆಯಾಗಿ ನಡೆಯಬೇಕಾದ ಹಬ್ಬ. ನಂತರ ಗೊಂಬೆಗಳನ್ನು ರೋಸ್ ವುಡ್ ನಲ್ಲಿ ಮಾಡುವುದು ಅಧಿಕವಾಯಿತು. ಸಾಮಾನ್ಯವಾಗಿ ಇವು ಪಟ್ಟದ ಗೊಂಬೆಗಳು ಎಂದು ಪ್ರಖ್ಯಾತಿಯನ್ನು ಪಡೆದವು.
ನವರಾತ್ರಿಯಲ್ಲಿ ನವ ದುರ್ಗಾ ಪೂಜೆ ಬಹಳ ಶ್ರೇಷ್ಠವಾಗಿದೆ.ಬೊಂಬೆ ಇಡಲು ಮೆಟ್ಟಿಲುಗಳಂತೆ ಜೋಡಿಸಿದ ಮರದ ಚೌಕಟ್ಟು ತಯಾರಿಸಿ ಅದರ ಮೇಲೆ ಮೊದಲಿಗೆ ಪಟ್ಟದ ಗೊಂಬೆಗಳನ್ನು ಇಕ್ಕೆಲಗಳಲ್ಲಿ ದೀಪವನ್ನು ಇಟ್ಟು ಮುಂದೆ ಕಲಶ ಪೂಜೆ ಮಾಡುತ್ತಾರೆ. ಇವುಗಳಿಗೆ ,ಆದ್ಯತೆ. ನಂತರದ ಮೆಟ್ಟಿಲ ಮೇಲೆ ದಶಾವತಾರ, ಅನ್ನಪೂರ್ಣೇಶ್ವರಿ, ಕಾಳಿಂಗಮರ್ದನ, ಅನಂತಶಯನ ,ರಾಮ ಲಕ್ಷ್ಮಣ ಸೀತೆ ….ಹೀಗೆ ದೇವತಾ ಪ್ರತೀ ಕ ಗೊಂಬೆಗಳು.
ನಂತರ ಮಾನವರು, ಅಂಬಾರಿ ಮಹಾರಾಜರು, ವಿವಿಧ ಪುಸ್ತಕಗಳು, ವಾದ್ಯದ ಸಮೇತ ಸಂಗೀತಗಾರರು ,ಮುಂತಾದ ಬಹಳ ಆಕರ್ಷಕವಾದ ಗೊಂಬೆಗಳು ಬಂದವು. ಅಗತ್ಯ ವಸ್ತುಗಳು, ಹಣ್ಣುಗಳು ,ಬ್ಯಾಂಡ್ ಸೆಟ್ ,ಪಕ್ಕದ ಖಾಲಿ ಸ್ಥಳದಲ್ಲಿ ಉದ್ಯಾನವನ, ರೈತ ನೆಲ ಉಳುವುದು, ಮೃಗಾಲಯ ಗಳು ಗೊಂಬೆ ರೂಪ ಪಡೆದವು.
ಇವುಗಳ ಮುಂದೆ ರಂಗೋಲಿ ಹಾಕುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ಅಕ್ಕಿಹಿಟ್ಟಿನ ರಂಗೋಲಿ. ಎಳೆ ರಂಗೋಲಿ ಚುಕ್ಕಿ ರಂಗೋಲಿ ( ಗೋಪಿಕಾಸ್ತ್ರೀಯರು ತುದಿಗಾಲಿನಲ್ಲಿ ನಿಂತು ನೃತ್ಯ ಮಾಡುತ್ತಿದ್ದು ಅದರ ಸಂಕೇತ ಚುಕ್ಕಿ ರಂಗೋಲಿ) ದೇವಿಯ ಸ್ತುತಿಯನ್ನು ಮಾಡಿ ಷೋಡಶೋಪಚಾರದಿಂದ ಪೂಜೆ ಮಾಡಿ ಒಂದು ಕಾಳು ಒಂದು ಅನ್ನದ ನೈವೇದ್ಯ ಆಗಬೇಕು ಆದರೆ ಪ್ರತಿಸಂಜೆ ಆರತಿ ಮಾಡುವುದು ಅಷ್ಟೇ ಮುಖ್ಯ ವಾಗಿರುತ್ತದೆ . ಇದೇ ಸಂದರ್ಭದಲ್ಲಿ ಮಕ್ಕಳಿಗೆ ತಿಂಡಿಯನ್ನು ಕೊಡುವುದುಬಹಳ ಮುಖ್ಯ.
ಆಶ್ವಯುಜ ಮಾಸದಲ್ಲಿ ಆಚರಿಸಲ್ಪಡುವ ಸೌಹಾರ್ದತೆಯನ್ನು ಕಾಪಾಡುವ ಶರನ್ನವರಾತ್ರಿ ಭಾರತ ದೇಶದ ಎಲ್ಲಾ ಭಾಗಗಳಲ್ಲಿಯೂ ವಿಶೇಷವಾಗಿ ಆಚರಿಸಲ್ಪಡುತ್ತದೆ. ಹಳೆಯ ಕಾಲದ ಸಂಪ್ರದಾಯಸ್ಥರ ಮನೆಗಳಲ್ಲಿ ನೀಲು ಗೌರಿ ಇಡುತ್ತಾರೆ (3-4 ಅಡಿಯ ಗೊಂಬೆಗಳು ) ಪ್ರತಿದಿನ ರೂಪ ಬದಲಾಯಿಸಬೇಕು ಸಪ್ತಮಿಯ ದಿನ ಸರಸ್ವತಿ, ಅಷ್ಟಮಿಯ ದಿನ ದುರ್ಗಿ, ದಶಮಿಯಂದು ವಿಷ್ಣುರೂಪ ನಂತರ ವಿವಿಧ ಆಭರಣಗಳನ್ನು ಹಾಕಿ ಬಂಗಾರ ಮಾಡುತ್ತಾರೆ. ಇದು ನೋಡುವವರ ಕಣ್ಮನವನ್ನು ತಣಿಸುತ್ತದೆ.
ಲೀಲಾ ವಾಸುದೇವ್ ಎಂ. ಎ. ಬಿ ಎಡ್ ಪದವೀಧರರು . ಇವರು ಮಲ್ಲೇಶ್ವರದ ದಿ ಬೆಂಗಳೂರು ಎಜುಕೇಶನ್ ಸೊಸೈಟಿ ಪದವಿಪೂರ್ವ ಕಾಲೇಜು ಮಲ್ಲೇಶ್ವರಂ ಪ್ರಾಂಶುಪಾಲರಾಗಿ ಇಲ್ಲಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಇವರು ಗಾಂಧಿ ಸಾಹಿತ್ಯ ಸಂಘ ಮತ್ತು ಸಿದ್ಧವನಹಳ್ಳಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಇದರಲ್ಲಿ ಟ್ರಸ್ಟಿ ಯಾಗಿದ್ದಾರೆ. ಇವರು ಹಲವಾರು ಕೃತಿಗಳನ್ನು ಬರೆದಿದ್ದಾರೆ ಅದರಲ್ಲಿ ಪ್ರಕಟಗೊಂಡ ಕೃತಿಗಳು ಯಾವುದೆಂದರೆ ಧರ್ಮಜ್ಯೋತಿ, ಭಾವನಾ ಬಿಂದು, ಮಕ್ಕಳ ಕಸ್ತೂರ್ಬಾ, ಭಾವನ ತುಂತುರು , ಕರ್ನಾಟಕದ ಕಸ್ತೂರ್ಬಾ ಯಶೋಧರಮ್ಮ ದಾಸಪ್ಪ, ಮಲ್ಲೇಶ್ವರದ ದೇವಸ್ಥಾನಗಳ ಕಿರುಪರಿಚಯ, ಶ್ಲೋಕ ರತ್ನಗಳು ಇವರ ಸಾಹಿತ್ಯ ಸೇವೆಗೆ ಮೆಚ್ಚಿ ಹಲವಾರು ಸಂಘ-ಸಂಸ್ಥೆಗಳು ಪುರಸ್ಕರಿಸಿದ್ದಾರೆ.