26 C
Karnataka
Thursday, November 21, 2024

    Indian Stock Market: ಹೊಸ ಸಂವತ್ಸರದಲ್ಲಿ ಅವಕಾಶದ ಲಾಭ ಪಡೆಯುವದೇ ಜಾಣತನ

    Must read

    ನಾಳೆ 6.15 ರಿಂದ 7.15 ಮುಹೂರ್ತ ಟ್ರೇಡಿಂಗ್ -MUHURTH TRADING

    ಭೂಮಿ ಗುಂಡಾಗಿದೆ. ಚಕ್ರಾಕಾರದಲಿ ತಿರುಗುತ್ತಿದೆ ಎಂಬುದು ನಿರ್ವಿವಾದಿತ ಸತ್ಯ. ಹಾಗೆಯೇ ಇಂದಿನ ಚಟುವಟಿಕೆಗಳು, ವಿಶೇಷವಾಗಿ ಷೇರುಪೇಟೆಯಲ್ಲಿನ ವಹಿವಾಟು ಸಹ ಚಕ್ರಾಕಾರದಲ್ಲಿ ನಡೆಯುತ್ತಿದೆ. ಅಂದರೆ ಷೇರುವಿನಿಮಯ ಕೇಂದ್ರಗಳಲ್ಲಿ ಚಟುವಟಿಕೆಯು ಒಂದು ರೀತಿ ಮಂಡೂಕ ಚಲನೆ ತರಹ ಒಂದು ಕಂಪನಿಯಿಂದ ಒಂದು ಕಂಪನಿಗೆ ಜಿಗಿಯುತ್ತಿರುವಂತೆ ಕಾಣುತ್ತದೆ. ಹಾಗಾಗಿ ಈಚಿನ ದಿನಗಳಲ್ಲಿ ಕೇವಲ ಕೆಲವೇ ದಿನಗಳಲ್ಲಿ ಅಗ್ರಮಾನ್ಯ ಕಂಪನಿಯ ಷೇರುಗಳು ಭಾರಿ ಏರಿಳಿಕೆಯನ್ನು ಪ್ರದರ್ಶಿಸುತ್ತಿದ್ದು, ಅಲ್ಪಕಾಲೀನ ಹೂಡಿಕೆಯು ಆಕರ್ಷಣೀಯವಾದ ಲಾಭವನ್ನು ಒದಗಿಸುತ್ತಿದೆ.

    ಸಾಮಾನ್ಯವಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕಂಪನಿಗಳ ಏರಿಳಿತಗಳು ರಭಸವಾಗಿದ್ದು ಅವು ಡೆರಿವೇಟಿವ್ಸ್‌ ವಿಭಾಗದ ಮೇಲೆ ಪ್ರಭಾವಿಯಾಗಿರುತ್ತವೆ. ಉ ಳಿದಂತೆ ಇತರೆ ಕಂಪನಿ ಷೇರುಗಳು ದೀರ್ಘಕಾಲೀನ ಹೂಡಿಕೆಗೆ ಸೂಕ್ತ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಏರಿಳಿತಗಳನ್ನುಂಟುಮಾಡಿದದಲ್ಲಿ ಮಾತ್ರ ಷೇರುಪೇಟೆಯಲ್ಲಿ ಲಾಭ ಗಳಿಕೆ ಸಾಧ್ಯ ಎನ್ನುವ ಹಂತದಲ್ಲಿ ಸಧ್ಯದ ಪೇಟೆಗಳಿವೆ.

    ಇಂತಹ ಸಂದರ್ಭದಲ್ಲಿ ಪ್ರಮುಖ ಕಂಪನಿಗಳಾದ ಕಾಲ್ಗೇಟ್‌ ಪಾಲ್ಮೊಲೀವ್‌, ವೇದಾಂತ, ಇಂಡಿಯಾ ಸೀಮೆಂಟ್‌, ಡಾ.ಲಾಲ್‌ ಪತ್‌ ಲ್ಯಾಬ್‌, ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌, ಹೈಡಲ್‌ ಬರ್ಗ್‌ ಸೀಮೆಂಟ್‌, ಹಿಂದೂಸ್ಥಾನ್‌ ಏರೋನಾಟಿಕ್ಸ್‌, ಗುಜರಾತ್‌ ಗ್ಯಾಸ್‌, ರಾಜೇಶ್‌ ಎಕ್ಸ್‌ ಪೋರ್ಟ್ಸ್‌, ಕರ್ನಾಟಕ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬರ್ಜರ್‌ ಪೇಂಟ್ಸ್‌, ಗ್ಲೆನ್‌ ಮಾರ್ಕ್‌ ಫಾರ್ಮ, ಇ ಕೆ ಐ ಎನರ್ಜಿ, ಕ್ಯಾನ್‌ ಫಿನ್‌ ಹೋಮ್ಸ್‌, ಟ್ರಾನ್ಸ್‌ ಪೋರ್ಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಎಂ ಅಂಡ್‌ ಎಂ ಫೈನಾನ್ಸ್‌, ಬಂದನ್‌ ಬ್ಯಾಂಕ್‌, ಲೌರಸ್‌ ಲ್ಯಾಬ್‌, ಟಾಟಾ ಎಲ್ಯಾಕ್ಸಿ, ಝೀ ಎಂಟರ್‌ ಟೇನ್‌ ಮೆಂಟ್‌ ನಂತಹ ಅನೇಕ ಕಂಪನಿಗಳು ಕೇವಲ ಕೆಲವೇ ದಿನಗಳಲ್ಲಿ ಅನಿರೀಕ್ಷಿತ ಮಟ್ಟದ ಏರಿಳಿತಗಳನ್ನು ಪ್ರದರ್ಶಿಸಿವೆ. ಏರಿಕೆ ಕಂಡರೆ ಮಾರಾಟದ ಒತ್ತಡದಿಂದ ಕುಸಿಯುವುದು, ಇಳಿಕೆ ಕಂಡಲ್ಲಿ ರಭಸದಿಂದ ಪುಟಿದೇಳುವುದು ಸಹಜ ಚಟುವಟಿಕೆಯಾಗಿದೆ. ಏಕೆ ಈ ರೀತಿಯ ಏರಿಳಿತಗಳು ಎಂದರೆ ಮುಖ್ಯವಾಗಿ ಪೇಟೆಗಳು ಗರಿಷ್ಠ ಮಟ್ಟದಲ್ಲಿ ತೇಲಾಡುತ್ತಿವೆ. ಮತ್ತೆ ಹೂಡಿಕೆದಾರರು, ಅವರು ರೀಟೇಲ್‌ ಹೂಡಿಕೆದಾರರಾಗಲಿ, ಸಾಹುಕಾರಿ ಹೂಡಿಕೆದಾರರಾಗಲಿ, ಮ್ಯುಚುಯಲ್‌ ಫಂಡ್‌ ಹೌಸ್‌ ಗಳಾಗಲಿ, ಇತರೆ ಸಾಂಸ್ಥಿಕ ಹೂಡಿಕೆದಾರರಾಗಲಿ ಹೆಚ್ಚು ಲಾಭ ಗಳಿಕೆಯತ್ತಲೇ ಗಮನಹರಿಸುವ ಶೈಲಿಯ ವಿಶ್ಲೇಷಣೆಗಳೇ ಹೆಚ್ಚು ಹೆಚ್ಚು ಪ್ರಚಾರದಲ್ಲಿವೆ.

    ಕಾಲ್ಗೇಟ್‌ ಪಾಲ್ಮೊಲೀವ್‌ ಕಂಪನಿ ಷೇರಿನ ಬೆಲೆಯು ಈ ತಿಂಗಳ ಆರಂಭದಲ್ಲಿ ರೂ.1,635 ರ ಸಮೀಪವಿತ್ತು. ನಂತರ ಈ ತಿಂಗಳ ಎರಡನೇ ವಾರದಲ್ಲಿ ರೂ.1,535 ರವರೆಗೂ ಕುಸಿಯಿತು. ಶುಕ್ರವಾರದಂದು ರೂ.1,625 ರವರೆಗೂ ಜಿಗಿಯಿತು. ಈ ಏರಿಕೆಗೆ ಕಂಪನಿಯು ಪ್ರಕಟಿಸಿದ ರೂ.18 ರ ಲಾಭಾಂಶ ಕಾರಣವಿರಬಹುದಾದರೂ ಪ್ರದರ್ಶಿಸಿದ ಏರಿಳಿತಗಳ ಪ್ರಮಾಣವು ಲಾಭಾಂಶಕ್ಕಿಂತ ಅತಿ ಹೆಚ್ಚಿರುವುದು ಗಮನಾರ್ಹ.

    ವೇದಾಂತ ಕಂಪನಿಯು ಸಹ ಏರಿಳಿತ ಪ್ರದರ್ಶಿಸಿದೆ. ಅಕ್ಟೋಬರ್‌ ತಿಂಗಳ ಆರಂಭದಲ್ಲಿ ರೂ.272 ರಲ್ಲಿದ್ದ ಷೇರಿನ ಬೆಲೆ, 11 ರಂದು ಸೋಮವಾರ ದಿನದ ಆರಂಭದಲ್ಲಿ ರೂ.305 ರವರೆಗೂ ಏರಿಕೆ ಕಂಡಿತು. ನಂತರ ಅಂದೇ ರೂ.286 ಕ್ಕೆ ಕುಸಿದು, 17 ರಂದು ರೂ.277 ಕ್ಕೆ ಹಿಂದಿರುಗಿದೆ.

    ಇಂಡಿಯಾ ಸೀಮೆಂಟ್‌ ಷೇರಿನ ಬೆಲೆ ಜೂನ್‌ 20 ರಂದು ರೂ.145 ರಲ್ಲಿತ್ತು, ಸೆಪ್ಟೆಂಬರ್‌ 20 ರಂದು ವಾರ್ಷಿಕ ಗರಿಷ್ಟ ರೂ.298 ಕ್ಕೆ ತಲುಪಿ ಈ ತಿಂಗಳ 17 ರಂದು ರೂ.226 ತಲುಪಿದೆ. ಈಗ ರೂ.236 ರ ಸಮೀಪದಲ್ಲಿದೆ.

    ಡಾಕ್ಟರ್‌ ಲಾಲ್‌ ಪತ್‌ ಲ್ಯಾಬ್‌ ಷೇರಿನ ಬೆಲೆ ಸೆಪ್ಟೆಂಬರ್‌ 29 ರಂದು ರೂ.2,719 ರಲ್ಲಿತ್ತು. ಈ ತಿಂಗಳ 11 ರಂದು ರೂ.2,260 ಕ್ಕೆ ಕುಸಿಯಿತು. 21 ಕ್ಕೆ ರೂ.2,575 ರವರೆಗೂ ಚೇತರಿಸಿಕೊಂಡಿತು.

    ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌ ಷೇರಿನ ಬೆಲೆ ಆಗಷ್ಟ್‌ ಅಂತ್ಯದಲ್ಲಿ ರೂ.585 ರ ವಾರ್ಷಿಕ ಗರಿಷ್ಢ ತಲುಪಿತು. ನಂತರ ಸೆಪ್ಟೆಂಬರ್‌ 26 ರ ಸಮಯದಲ್ಲಿ ರೂ.478 ರ ವರೆಗೂ ಜಾರಿತು. ಅಲ್ಲಿಂದ ಈ ತಿಂಗಳ 7 ರಂದು ರೂ.562 ರವರೆಗೂ ಪುಟಿದೆದ್ದಿತು. 12 ರಂದು ರೂ.499 ರ ಸಮೀಪಕ್ಕೆ ಹಿಂದಿರುಗಿತು. ಸಧ್ಯ ರೂ.517 ರ ಸಮೀಪ ವಹಿವಾಟಾಗುತ್ತಿದೆ.

    ಹೈಡಲ್‌ ಬರ್ಗ್‌ ಸೀಮೆಂಟ್‌ ಕಂಪನಿಯ ಷೇರಿನ ಬೆಲೆ ಸೆಪ್ಟೆಂಬರ್‌ 28 ರಂದು ರೂ.183 ರಲ್ಲಿದ್ದು ಅಕ್ಟೋಬರ್‌ 11 ಕ್ಕೆ ರೂ.214 ಕ್ಕೆ ಜಿಗಿಯಿತು. ಶುಕ್ರವಾರ 21 ರಂದು ರೂ.184 ರ ಸಮೀಪ ಕೊನೆಗೊಂಡಿದೆ.

    ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಸೆಪ್ಟೆಂಬರ್‌ 28 ರಂದು ರೂ.2,245 ರಲ್ಲಿದ್ದು ಈ ತಿಂಗಳ 7 ರಂದು ರೂ.2,499 ರವರೆಗೂ ಚೇತರಿಸಿಕೊಂಡಿತು. ನಂತರ 14 ರಂದು ರೂ.2,332 ರವರೆಗೂ ಕುಸಿದು, 19 ರಂದು ರೂ.2,555 ರವರೆಗೂ ಪುಟಿದೆದ್ದಿತು, ಶುಕ್ರವಾರ 2,401 ರ ಸಮೀಪ ಕೊನೆಗೊಂಡಿದೆ.

    ಇ ಕೆ ಐ ಎನರ್ಜಿ ಕಂಪನಿ ಷೇರಿನ ಬೆಲೆ ಸೆಪ್ಟೆಂಬರ್‌ 15 ರಂದು ರೂ.1,720 ರ ಸಮೀಪವಿತ್ತು, ನಂತರ ಈ ತಿಂಗಳ 3 ರಂದು ರೂ.1,300 ರವರೆಗೂ ಕುಸಿಯಿತು. 11 ರಂದು ರೂ.2,100 ಕ್ಕೆ ಪುಟಿದೆದ್ದಿತು. ಶುಕ್ರವಾರ 21 ರಂದು ರೂ.1,676 ರವರೆಗೂ ತಲುಪಿ ರೂ.1,722 ರ ಸಮೀಪ ಕೊನೆಗೊಂಡಿದೆ.

    ಹೀಗೆ ಅಸಹಜ ರೀತಿಯ ಏರಿಳಿತಗಳನ್ನು ಪ್ರದರ್ಶಿಸುವ ಷೇರುಪೇಟೆಯ ಚಟುವಟಿಕೆಯು ಹೆಚ್ಚು ವ್ಯವಹಾರಿಕತೆಯಿಂದ ಕೂಡಿದ್ದಾಗಿದೆ. ಈ ಸಂದರ್ಭದಲ್ಲಿ ದೀರ್ಘಕಾಲೀನ ಹೂಡಿಕೆಯ ಚಿಂತನೆಗಿಂತ ಅವಕಾಶದ ಲಾಭ ಪಡೆಯುವುದೇ ಸರಿ ಎನಿಸುತ್ತದೆ. ಈ ಏರಿಳಿತಗಳ ಹಿಂದೆ ಅಡಕವಾಗಿರುವ ಕಾರಣಗಳಿಗಿಂತ ಪೇಟೆಯ ದರಗಳನ್ನಾಧರಿಸಿ ಚಟುವಟಿಕೆಯೇ ಸೂಕ್ತವಲ್ಲವೇ?

    ಮುಹೂರ್ತ್ ಟ್ರೇಡಿಂಗ್

    ನಾಳೆ ದೀಪಾವಳಿಯ ಶುಭ ಅವಸರ. ಷೇರು ಪೇಟೆಯಲ್ಲಿ ಹೊಸ ಸಂವತ್ಸರದ ಆರಂಭ. ಸಂಜೆ 6.15 ರಿಂದ 7.15ರವರೆಗೆ ಮುಹೂರ್ತ ವಹಿವಾಟು. ಈ ದೀಪಾವಳಿ ಎಲ್ಲಾ ಹೂಡಿಕೆದಾರರಿಗೆ ಸಂತಸ ತರಲಿ. ಹೂಡಿಕೆ ಇಮ್ಮಡಿಸಲಿ ಎಂಬ ಶುಭ ಹಾರೈಕೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!