Bengaluru Nov 1
ಕನ್ನಡ ಚಲನಚಿತ್ರ ನಟ ದಿ. ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರದ ನೀಡಿರುವ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ದಿ. ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರದಾನ ಮಾಡಿದರು.
ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ, ಸುರಿವ ಮಳೆಯ ನಡುವೆಯೇ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ದಿ.ಪುನೀತ್ ರಾಜ್ ಕುಮಾರ್ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಳೆಯನ್ನೂ ಲೆಕ್ಕಿಸದೇ ಸಹಸ್ರಾರು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಕಣ್ತುಂಬಿಕೊಂಡರು.
ಮುಖ್ಯ ಅತಿಥಿಯಾಗಿ ಆಗಮಿಸಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ರಜನೀಕಾಂತ್, ಅಪ್ಪು ಸಾಧಾರಣ ವ್ಯಕ್ತಿಯಲ್ಲ, ಆತ ಅಪಾರವಾದದ್ದನ್ನು ಸಾಧಿಸಿದ್ದಾರೆ. ಎನ್ ಟಿಅರ್, ಎಂಜಿಆರ್, ಶಿವಾಜಿಗಣೇಶನ್, ರಾಜ್ ಕುಮಾರ್ ಅವರು 50 ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20 ವರ್ಷಗಳಲ್ಲಿ ಸಾಧಿಸಿದ್ದರು. ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಅದು ನಮ್ಮ ಅಪ್ಪು ಮಾಡಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ 1979 ರಲ್ಲಿ ಶಬರಿ ಮಲೆ ಯಾತ್ರೆ ವೇಳೆ ತಾವು ಪುನೀತ್ ರಾಜ್ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದನ್ನು ರಜನಿಕಾಂತ್ ಸ್ಮರಿಸಿಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೂ. ಎನ್ ಟಿಆರ್, ಒಬ್ಬ ವ್ಯಕ್ತಿಗೆ ಉಪನಾಮ ಎಂಬುದು ಪರಂಪರೆಯಿಂದ ಬರುತ್ತದೆ ಆದರೆ ವ್ಯಕ್ತಿತ್ವ ಸ್ವಂತ ಸಂಪಾದನೆಯಾಗಿರುತ್ತದೆ. ಸ್ವಂತ ವ್ಯಕ್ತಿತ್ವದಿಂದ ನಗುವಿನಿಂದಲೇ ಒಂದು ರಾಜ್ಯ ಗೆದ್ದ ರಾಜ ಪುನೀತ್ ರಾಜ್ ಕುಮಾರ್, ಅವರು ಎಲ್ಲಕ್ಕೂ ಮಿಗಿಲಾಗಿ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು ಎಂದರು. ಸಿಎಂ ಬೊಮ್ಮಾಯಿ, ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು “ನನ್ನ ಪುಣ್ಯ ಭಾಗ್ಯ, ಸರ್ಕಾರದ ಪುಣ್ಯಭಾಗ್ಯ, ಸೌಭಾಗ್ಯ ಸಿಕ್ಕಿದೆ ಎಂದು ಹೇಳಿದರು.
ಮೂರ್ತಿ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ, ಸಚಿವರಾದ ಆರ್. ಅಶೋಕ್, ಸುನಿಲ್ ಕುಮಾರ್,ಡಾ. ಸುಧಾಕರ್, ವಿ. ಸೋಮಣ್ಣ, ಬೈರತಿ ಬಸವರಾಜ್, ಬಿ.ಸಿ. ನಾಗೇಶ್, ಚಲನಚಿತ್ರ ನಟ ಶಿವರಾಜಕುಮಾರ್ ಹಾಗೂ ಮತ್ತಿತರ ಗಣ್ಯರು ಇದ್ದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಜ್ಯೂನಿಯರ್ ಎನ್. ಟಿ. ಆರ್. ಅವರನ್ನು ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಸನ್ಮಾನಿಸಿದರು. ರಜನೀಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿದ್ದರು.