21.7 C
Karnataka
Thursday, November 21, 2024

    Indian Stock Market:ಬದಲಾದ ಪರಿಸ್ಥಿತಿಯಲ್ಲಿ ಷೇರುಪೇಟೆಯಲ್ಲಿ  ಹೂಡಿಕೆ ಹೇಗೆ?

    Must read

    ಷೇರುಪೇಟೆಯಲ್ಲಿ ದಿನನಿತ್ಯ ಸುಮಾರು 50 ಸಾವಿರದಿಂದ 80 ಸಾವಿರ ಹೊಸ ಹೂಡಿಕೆದಾರರು ಪ್ರವೇಶಿಸುತ್ತಿದ್ದಾರೆ.   ಈ ವರ್ಷ ಕರ್ನಾಟಕದ ರಾಜ್ಯದಲ್ಲಿ ಸುಮಾರು ಶೇಕಡ 32ರಷ್ಟು ಹೊಸಬರು ಷೇರುಪೇಟೆಯ ಚಟುವಟಿಕೆಗೆ ನೋಂದಾಯಿಸಿಕೊಂಡಿದ್ದಾರೆ.  ಒಂದು ವರ್ಷದ ಹಿಂದೆ ಸುಮಾರು 8.50 ಕೋಟಿ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದರು,  ಅದು ಈ ವರ್ಷ ದ 31 ನೇ ಅಕ್ಟೋಬರ್‌ನ ಅಂಕಿ ಅಂಶಗಳ ಪ್ರಕಾರ 11.72 ಕೋಟಿಗೆ ಏರಿಕೆಯಾಗಿದೆ.  

    ಅಂದರೆ ಈ ಪ್ರಮಾಣದ ಏರಿಕೆಯ ಹಿಂದೆ ಅನೇಕರ ಭಾವನೆ ಏನೆಂದರೆ ಷೇರುಪೇಟೆಯಲ್ಲಿ ಅತಿ ಸುಲಭವಾಗಿ ಹಣ ಗಳಿಸಬಹುದೆಂಬುದಾಗಿದೆ.   ಪೇಟೆಯಲ್ಲಿ ಷೇರುಗಳ  ಚಲನೆಗೆ ಕಾರಣಗಳ ಅನ್ವೇಷಣೆಗೆ ತೊಡಗುತ್ತಾರೆ, ನಂತರ ಚಟುವಟಿಕೆಗೆ ಮುಂದಾಗುತ್ತಾರೆ,  ಆದರೆ ಆ ಅಂಶಗಳನ್ನು ಪೇಟೆ ಮೊದಲೇ ಪರಿಗಣಿಸಿ ಏರಿಕೆ ಕಾಣುವ ವಿಸ್ಮಯಕಾರಿ ಗುಣಗಳನ್ನು ಅರಿತಿರುವುದಿಲ್ಲ.

    ಷೇರುಪೇಟೆಯ ಹೂಡಿಕೆದಾರರ ಸಂಖ್ಯೆ  ಎರಡು ವರ್ಷಗಳಲ್ಲಿ ದ್ವಿಗುಣವಾಗಿದೆ,  ಸಂವೇದಿ ಸೂಚ್ಯಂಕವೂ ಮಾರ್ಚ್‌2020 ರ ಸಂಖ್ಯೆಗಿಂತ ದ್ವಿಗುಣಗೊಂಡಿದೆ ಹಾಗೆಯೇ ಬಂಡವಾಳೀಕರಣ ಮೌಲ್ಯವೂ ಸಹ ಮಾರ್ಚ್‌2020 ರ ಅಂಕಿ ಅಂಶವೂ ದ್ವಿಗುಣಗೊಂಡಿದೆ.  ಇವೆಲ್ಲಾ ಈ ರೀತಿ ಹೆಚ್ಚಾದರೂ ಅದಕ್ಕನುಗುಣವಾಗಿ ಲಿಸ್ಟಿಂಗ್‌ಆದ ಕಂಪನಿಗಳ ಸಂಖ್ಯೆಯು ಹೆಚ್ಚಾಗಿಲ್ಲ.  ಇದು ಒಂದು ರೀತಿಯ ಹೂಡಿಕೆದಾರರ ದಟ್ಟಣೆಯಾಗಿರುವ ವಾತಾವರಣ ನಿರ್ಮಿತವಾಗಿದೆ.  ಹಾಗಾಗಿ ಷೇರುಪೇಟೆಯಲ್ಲಿ ಹೆಚ್ಚು ಅನಿಶ್ಚಿಯತೆಗೆ ಕಾರಣವಾಗಿದೆ.  ಈ ಸಂದರ್ಭದಲ್ಲಿ ಸುಲಭವಾದ  ಸಮೀಕರಣವೆಂದರೆ ಸೂಕ್ತ ಚಿಂತನೆ, ವಿವೇಚನೆ, ಮಾರ್ಗದರ್ಶನದೊಂದಿಗೆ VALUE PICK – PROFIT BOOK ರೀತಿಯ ಚಟುವಟಿಕೆಯೇ ರಾಮಬಾಣವಾಗಿದೆ ಎನ್ನಬಹುದು.   ಜವಾಬ್ದಾರಿಯುತವಾದ  ಆರ್ಥಿಕ ಸಾಕ್ಷರತೆಯೊಂದಿಗೆ ಆರ್ಥಿಕ ನಿರ್ವಹಣೆಯ ಕೌಶಲ್ಯವನ್ನು  ರೂಢಿಸಿಕೊಳ್ಳುವುದೊಂದೇ ಉತ್ತಮ ದಾರಿಯಾಗಿದೆ.  

    ಹೆಚ್ಚಿನ ಹೊಸ ಹೂಡಿಕೆದಾರರು ಗ್ರಾಮೀಣ ಮತ್ತು ನಗರ ಪ್ರದೇಶದವರಾಗಿರುವ ಕಾರಣ ಅವರ ಅರಿವಿಗೆ ಬರಬಹುದಾದ ರೀತಿಯಲ್ಲಿ, ಕನ್ನಡ ಭಾಷೆಯಲ್ಲಿ ಪೇಟೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವು ಎಲ್ಲಾ ಮಾಧ್ಯಮಗಳು ಪ್ರಯತ್ನಿಸಿದಲ್ಲಿ, ಉತ್ತಮ ಸ್ಫಂದನೆ ದೊರೆಯಬಹುದಾಗಿದೆ.  ಈ ಹೊಸ ಹೂಡಿಕೆದಾರರಿಗೆ ಅಗತ್ಯವಿರುವ ಸೂಕ್ತ ಮಾರ್ಗದರ್ಶನವನ್ನು ಕನ್ನಡದಲ್ಲಿಯೇ ಒದಗಿಸಿದರೆ, ಅವರ ಪ್ರಯತ್ನಗಳು ಸ್ವಲ್ಪಮಟ್ಟಿಗಾದರೂ ಸುರಕ್ಷತೆ ಕಾಣಬಹುದಾಗಿದೆ ಎಂಬುದು ನನ್ನ ಅನುಭವದ ಅರಿವು.  ಈ ದಿಶೆಯಲ್ಲಿ ಮಾಧ್ಯಮಗಳು, ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ   ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುವುದು ಅತ್ಯಗತ್ಯ.  ಈ ಮೂಲಕ ಆರ್ಥಿಕ ಸಾಕ್ಷರತಾ ಮಟ್ಟವನ್ನು ಸುಧಾರಿಸಲು ಸಾಧ್ಯ.  

    ಷೇರುಪೇಟೆಯ ವಿಸ್ಮಯಕಾರಿ ಗುಣವೆಂದರೆ, ಭವಿಷ್ಯದ ಘಟನೆಗಳನ್ನು  ವರ್ತಮಾನಕ್ಕೆ  ಭಟ್ಟಿ  ಇಳಿಸಿ  ಅದಕ್ಕೆ ಮೌಲೀಕರಣ ಮಾಡುವ ತಾಣವೇ ಷೇರು ವಿನಿಮಯ ಕೇಂದ್ರವೆಂಬುದು.  ಅಂದರೆ ಪ್ರಸ್ತುತ ತೇಲಿ ಬಂದಿರುವ ಸುದ್ಧಿಯನ್ನು ಪೇಟೆ ಆಗಲೇ ಕಡೆಗಣಿಸಿರುತ್ತದೆ.  ಹಾಗಾಗಿ ಒಂದು ಕಂಪನಿಯು ಪ್ರಕಟಿಸಿದ ಅಂಕಿ ಅಂಶಗಳು ಎಷ್ಟೇ ಆಕರ್ಷಣೀಯವಾಗಿದ್ದರೂ ಆ ಷೇರಿನ ಬೆಲೆ ಇಳಿಕೆಯತ್ತ ಸಾಗುತ್ತದೆ, ಎಷ್ಟೇ ಕಳಪೆಯಾಗಿದ್ದರೂ ಷೇರಿನ ಬೆಲೆ ಇಳಿಯುವುದಿಲ್ಲ ಕಾರಣ ಅದು ಆಗಲೇ ಪೇಟೆಯು ನಿರೀಕ್ಷಿಸಿದ್ದುದಾಗಿರುತ್ತದೆ.

    ಹಾಗೆಯೇ ಒಂದು ಷೇರಿನ ಬೆಲೆ ಇಳಿಕೆ ಕಂಡಾಗ ಮೌಲ್ಯಾಧಾರಿತ ಖರೀದಿಗೆ ಯೋಗ್ಯವೇ, ಏರಿಕೆ ಕಂಡಾಗ ಲಾಭದ ನಗದೀಕರಣದ ಸಮಯವೇ ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಸಣ್ಣ ಹೂಡಿಕೆದಾರರಲ್ಲಿ ಬೆಳೆಸುವ ಪ್ರಯತ್ನವನ್ನು ಮಾಧ್ಯಮಗಳು ನಮ್ಮ ಆಡು ಭಾಷೆಯಲ್ಲಿ ತಿಳಿಸಿದರೆ ಭಾಷೆಯೂ ಬೆಳೆಯುತ್ತದೆ, ಭಾಷಾಭಿಮಾನವೂ ಹೆಚ್ಚುತ್ತದೆ ಜೊತೆಗೆ ಮಾಧ್ಯಮದ ಘನತೆಯೂ ಉನ್ನತಿ ಹೊಂದುವುದರಲ್ಲಿ ಸಂಶಯವಿಲ್ಲ. ಎಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರಲ್ಲಿ ಆರ್ಥಿಕ ಸಾಕ್ಷರತಾ ಮಟ್ಟವು ಹೆಚ್ಚಾಗಿ ಅವರ ಬಾಳಲ್ಲಿ ನೆಮ್ಮದಿ ಮೂಡಿಸಿದ ಸಾಮಾಜಿಕ ಬದ್ಧತೆಯನ್ನು ನಿರ್ವಹಿಸಿದಂತಾಗುತ್ತದೆಯಲ್ಲವೇ?

    ಜಾಗೃತ ಹೂಡಿಕೆದಾರ- ಜಾಗತಿಕ ಸರ್ಧಾರ, ಎಂಬಂತೆ ನಮ್ಮ ಅಪಾರ ಜನಸ್ತೋಮವು ಆರ್ಥಿಕ ಸಾಕ್ಷರತೆಯಿಂದ ಜಾಗೃತಗೊಂಡಲ್ಲಿ ನಾವು ಅವಲಂಬಿತರಾಗಿರುವ ವಿದೇಶೀ ವಿತ್ತೀಯ ಸಂಸ್ಥೆಗಳ ಪ್ರಭಾವವನ್ನು ನಿಯಂತ್ರಿಸಬಹುದು. ಒಂದು ರೀತಿ ವ್ಯಾಘ್ರನ ಭೇಟೆಗೆ ಶ್ವಾನ ಬಿಟ್ಟಂತೆ ಎಂಬ ಪರಿಸ್ಥಿತಿಯುಂಟಾಗಿ, ಆಂತರಿಕ ಬಲದಿಂದ ಸದೃಢರಾಗಲೂ ಸಾಧ್ಯವಿದೆಯಲ್ಲವೇ?

    ಅರ್ಥವನ್ನು ಅರ್ಥವತ್ತಾಗಿ ನಿರ್ವಹಿಸದಿದ್ದರೆ ಜೀವನ ಅರ್ಥಹೀನ.  ಎಂಬಂತೆ ಹಣಕಾಸು ಬಳಕೆಯನ್ನು, ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ ಜೀವನವು ಹಳಿತಪ್ಪಿದ ರೈಲಿನ ತರಹ ಕಲ್ಪನಾತೀತ ಹಂತದಲ್ಲಿರುತ್ತದೆ.  ಈಗಿನ ಜೀವನ ಶೈಲಿಯು ಹೆಚ್ಚಾಗಿ ಪಾರ್ಶ್ವ ಚಿಂತನೆಗಳಿಂದ ಕೂಡಿದ್ದು,  ಸಮಯದ ಅಭಾವವೋ, ಚಿಂತನೆಯ ಕೊರತೆಯೋ ಇದಕ್ಕೆ ಪೂರಕವಾಗಿ ಸಾಗುವಂತೆ ಮಾಡುತ್ತಿದೆ.  ಹೆಚ್ಚಿನ ಜಾಹಿರಾತುಗಳು ಇದನ್ನು ದೃಢೀಕರಿಸುತ್ತವೆ.

    ಈಗಿನ ಜೀವನ ಶೈಲಿಗಳು ಎಷ್ಠು ಒತ್ತಡಮಯವಾಗಿರುತ್ತವೆ ಎಂದರೆ ನಾವು ಕೇವಲ ಅಕ್ಷರ ಸಾಕ್ಷರತೆಯ ಕಡೆಯೇ ಹೆಚ್ಚು ಒತ್ತು ನೀಡುತ್ತೇವೆ  ಮತ್ತು ಅತ್ಯವಶ್ಯವಿರುವ ಆರ್ಥಿಕ ಸಾಕ್ಷರತೆಯನ್ನು ಕಡೆಗಣಿಸಿ, ಗುಣಮಟ್ಟ ಲೆಕ್ಕಿಸದೆ ಕೇವಲ ರಿಯಾಯಿತಿ, ಡಿಸ್ಕೌಂಟ್, ಆಫರ್,  ಕ್ಯಾಶ್ ಬ್ಯಾಕ್ ನಂತಹ ತಂತ್ರಗಾರಿಕೆಗೆ ಮರುಳಾಗಿ ಚಿಂತನಾ ಸಾಮರ್ಥ್ಯವನ್ನು ಕ್ಷೀಣಿಸಿಕೊಳ್ಳುತ್ತಿದ್ದೇವೆ.

    ಬ್ಯಾಂಕಿಂಗ್ ಮತ್ತು ನಾನ್‌ಬ್ಯಾಂಕಿಂಗ್  ಸಂಸ್ಥೆಗಳ ವೈಖರಿಯೇ ಬೇರೆ,  ಅವರ ಪ್ರಚಾರ ಹೇಗಿರುತ್ತೆಂದರೆ, ಅಭಿನಂದನೆಗಳು,  ನೀವು 5 ಲಕ್ಷ ರೂಪಾಯಿಗಳ ಪ್ರಿ-ಅಪ್ರೂವ್ಡ್  ಲೋನ್ ಗೆ  ಅರ್ಹರಾಗಿದ್ದೀರಿ, ಎಂದು ಬಹಳಷ್ಟು ಜನರಿಗೆ ಆಸೆಯ ಜಾಲಕ್ಕೆ ತಳ್ಳುತ್ತಾರೆ.  ಸಾಲಕ್ಕೆ ಅರ್ಜಿ ಸಲ್ಲಿಸದೆ, ವಿವಿರಗಳನ್ನೊದಗಿಸದೆ ಸಾಲ ನೀಡಲು ಹೇಗೆ ಸಾಧ್ಯ.   ಕೇವಲ ಪ್ರೇರೇಪಿಸುವ ಕೃತ್ಯವಷ್ಟೆ.  ಈ  ಪ್ರಿಅಪ್ರೂವ್ಡ್  ಆಶ್ವಾಸನೆಯನ್ನು ನಂಬಿ ಅರ್ಜಿ ಸಲ್ಲಿಸಿದ ನಂತರ, ಅದಕ್ಕೆ ಪ್ರೊಸೆಸಿಂಗ್‌ಫೀಸ್ ‌ಕಟ್ಟಿಸಿಕೊಳ್ಳುವರು.  ಫೀಸ್  ಕಟ್ಟಿದ್ದಕ್ಕೆ  ಸಾಲ ಸಿಕ್ಕಿತೆಂಬ ನಂಬಿಕೆ ಬೇಡ.  ಅವರು ನಂತರ ಅರ್ಜಿ ಪರಿಶೀಲಿಸಿ ನೀವು, ನಿಮ್ಮ ಆದಾಯ, ಸಿಬಿಲ್ ಸ್ಕೋರ್, ವೃತ್ತಿಯಾಧರಿಸಿ ಸಾಲ ಪಡೆಯಲು ಅರ್ಹರೇ, ಇಲ್ಲವೇ ಎಂಬದನ್ನು ನಿರ್ಧರಿಸುವರು.  ಒಂದೊಮ್ಮೆ ಅರ್ಹರಲ್ಲವೆಂದರೆ ನೀವು ಕಟ್ಟಿದ ಪ್ರೊಸೆಸಿಂಗ್‌ಫೀಸ್  ಹಿಂದಿರುಗಿಸಲಾಗದು.  ಈ ಪ್ರಿ-ಅಪ್ರೂವ್ಡ್ ಎಂಬುದು ಕೇವಲ ಪ್ರಚಾರಿಕ, ಮೋಹಕ ತಂತ್ರವಷ್ಟೆ.

    ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ನಾವುಗಳು ಹೆಚ್ಚಿನ ಗೊಂದಲಮಯ, ಸಂಕಷ್ಠಮಯ ಪರಿಸ್ಥಿತಿಗೊಳಗಾಗಿದ್ದೇವೆ.   ಹೆಚ್ಚು ಹೆಚ್ಚು ಆದ್ಯತೆಗಳು ಸವಲತ್ತುಗಳನ್ನು ಪಡೆಯುವತ್ತಲೇ  ಗಮನ ಹರಿಸುತ್ತೇವೆ.   ಇದಕ್ಕಾಗಿ ʼ ಇ ಎಂ ಐ ʼ ಮೂಲಕ  ಕಂತಿನಲ್ಲಿ ಹಣಪಾವತಿಯನ್ನು ಆಯ್ಕೆ ಮಾಡಿಕೊಂಡು  ಬಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗುತ್ತೇವೆ.  ಈಗಿನ ಅಸ್ಥಿರತೆಯ ಸನ್ನಿವೇಶದಲ್ಲಿ  ಈ   ʼ ಇ ಎಂ ಐ ʼ ಬಾಧ್ಯತೆಗಳು ಮುಂದಿನ ದಿನಗಳಲ್ಲಿ ಎಂತಹ ತೊಂದರೆಗಳನ್ನು ಉಂಟುಮಾಡಬಹುದು ಎಂಬುದನ್ನು ಆರ್ಥಿಕ  ಹಿಂಜರಿತಗಳ ಸಮಯದಲ್ಲಿ ಕಂಡಿದ್ದೇವೆ.  ಈಗಿನ ಸನ್ನಿವೇಶದಲ್ಲಿ ʼ ಇ ಎಂ ಐ ʼ ಕಡಿಮೆ ಇದ್ದಷ್ಟು ಜೀವನದಲ್ಲಿ ನೆಮ್ಮದಿ, ಸಂತೋಷಗಳನ್ನು ಕಾಣಬಹುದಾಗಿದೆ.

    ಹೂಡಿಕೆಗೆ ನಿರ್ಧರಿಸುವಾಗ ಹೆಚ್ಚಿನವರು, ಪ್ರಚಾರದಲ್ಲಿರುವ ಕಂಪನಿಗಳತ್ತ,  ಆಕರ್ಷಣೀಯ ಮಟ್ಟದ ಫಲಿತಾಂಶ,  ಶೇಕಡಾವಾರು ಲಾಭಾಂಶ, ಮಲ್ಟಿಬ್ಯಾಗರ್‌, ಮಲ್ಟಿ ಇಯರ್‌ ಗ್ರೌತ್‌ ಮುಂತಾದವುಗಳನ್ನಾಧರಿಸಿ ಚಟುವಟಿಕೆ ನಡೆಸುವ ಮುನ್ನ ಆಕಂಪನಿಗಳು ಯಾವ ಶ್ರೇಣಿಯಲ್ಲಿವೆ, ಅಗ್ರಮಾನ್ಯ ಕಂಪನಿಯೇ, ಬೃಹತ್‌ ಬಂಡವಾಳವಿರುವ ಕಂಪನಿಯೇ,  ಎಂಬುದರ ಅರಿವಿನಿಂದ ಅರ್ಹತೆಯನ್ನು ಮಾಪನ ಮಾಡಬೇಕು.  ಅಗ್ರಮಾನ್ಯ ಕಂಪನಿಯಾಗಲಿ, ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಕಂಪನಿಯಾಗಲಿ ಅದರ ಹಿಂದಿನ ಸಾಧನೆ, ಭವಿಷ್ಯದಲ್ಲಿ ಆ ಕಂಪನಿಗಿರಬಹುದಾದ ಅವಕಾಶಗಳು,  ಕಂಪನಿಯ ಆಡಳಿತ ಮಂಡಳಿಯವರ ಗೌರವ, ಘನತೆ, ಪ್ರತಿಷ್ಠೆಗಳು ಮತ್ತು ಹೂಡಿಕೆದಾರ ಸ್ನೇಹಿ ಗುಣದ ಬಗ್ಗೆ ಮಾಪನಮಾಡಿ ನಿರ್ಧರಿಸಬೇಕು.  ವಿಶೇಷವಾಗಿ ಹೊಸ ಕಂಪನಿಗಳು ತೇಲಿ ಬಿಟ್ಟಾಗ ಅಂತಹ ಕಂಪನಿಗಳಿಗೆ ಕೆಲವು ವರ್ಷ ತಮ್ಮ ಸಾಮರ್ಥ್ಯವನ್ನು ಪ್ರದರ್ಶೊಸಲು ಸಮಯಾವಕಾಶ ನೀಡಬೇಕು ನಂತರ ಯೋಗ್ಯವೆನಿಸಿದಲ್ಲಿ ಹೂಡಿಕೆಯನ್ನು ಪರಿಶೀಲಿಸಬಹುದು.  ಹೂಡಿಕೆ ಮಾಡಿದ ಷೇರುದಾರರ ಬಂಡವಾಳವನ್ನು ಕರಗಿಸಿದ ಅನೇಕ ಕಂಪನಿಗಳಿವೆ. ಏರಿಳಿತಗಳ ಪ್ರಭಾವವು ಅನೇಕ ಅವಕಾಶಗಳನ್ನು ಸೃಷ್ಠಿಮಾಡಿಕೊಟ್ಟರೂ ಅವು ಕಾಲ್ಪನಿಕವಾಗಿರುತ್ತವೆ.

    1995 ರಲ್ಲಿ  ಬೆಂಗಳೂರು ಷೇರು ವಿನಿಮಯ ಕೇಂದ್ರದಲ್ಲಿ ಉತ್ತಮ ಸಂಖ್ಯಾ ಗಾತ್ರದೊಂದಿಗೆ ವಹಿವಾಟಾಗುತ್ತಿದ್ದ ಷೇರುಗಳು , ಅವುಗಳ ದರಗಳು ಮತ್ತು ವಹಿವಾಟಾಗುತ್ತಿದ್ದ ಸಂಖ್ಯಾಗಾತ್ರದ ಪಟ್ಟಿಯನ್ನು ಓದುಗರ ಅವಗಾಹನೆಗೆ ಇಲ್ಲಿ ನೀಡುತ್ತಿದ್ದೇವೆ.

    ಈ ಪಟ್ಟಿಯಲ್ಲಿ ಆಗ ಮಿಂಚಿನಂತೆ ಬಂದು ಮಾಯಾವಾದ ಅನೇಕ ಷೇರುಗಳಿವೆ. ಅದರ ಜೊತೆಗೆ ಈಗಲೂ ಬಲವಾಗಿ ನಿಂತಿರುವ ಅನೇಕ ಷೇರುಗಳೂ ಇವೆ. ಹೀಗಾಗಿ ವಹಿವಾಟು ಮಾಡುವಾಗ ಎಚ್ಚರದಿಂದ ಮಾಡುವುದು ಉತ್ತಮ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!