21.7 C
Karnataka
Thursday, November 21, 2024

    ಜಯ ಕರ್ನಾಟಕ, ಜಯ ಕರ್ನಾಟಕ, ಜಯ ಕರ್ನಾಟಕ ಮಾತೆ
    ಹೂಡಿಕೆದಾರರೆಲ್ಲಾ ಕೂಡಿ, ಅಧ್ಯಯನ ಮಾಡಿ, ಪಡೆವೆವು ವಿತ್ತೀಯ  ಸಾಕ್ಷರತೆ.

    Must read


    ನಾಡಿನೆಲ್ಲೆಡೆ ರಾಜ್ಯೋತ್ಸವ ಮಾಸದ ಸಂಭ್ರಮ. ಈ ಮಾಸದ ಮೆರಗನ್ನು ಹೆಚ್ಚಿಸಲು ಪ್ರತಿವಾರದ ಷೇರು ವಿಶ್ಲೇಷಣೆಯನ್ನು ಹೆಸರಾಂತ ಷೇರು ತಜ್ಞ ಕೆ ಜಿ ಕೃಪಾಲ್ ಇಲ್ಲಿ ಕಾವ್ಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ.



    ಇಂದಿನ ವ್ಯವಹಾರಗಳ ಶೈಲಿ

    ಅಯೋಮಯವಾಗಿದೆ ಇಂದಿನ ವಹಿವಾಟಿನ ರೀತಿ
    ಪರಿಶೀಲಿಸದಿದ್ದರೆ ಆಗುವುದು ಫಜೀತಿ.
    ಸರ್ಕಾರಿ – ಖಾಸಗಿಗಳು ವ್ಯವಹಾರದಲ್ಲಿ ಎಲ್ಲಾ ಒಂದೇ 
    ಗುರಿಮಾತ್ರ ಲಾಭಗಳಿಕೆಯೊಂದೇ 

    ವ್ಯವಹಾರದ ಯಶಸ್ಸಿಗೆ ಇರಲೇಬೇಕು ಡಿಸ್ಕೌಂಟ್ 
    ಪ್ರಮಾಣ ಹೆಚ್ಚಿದಂತೆ ವೃದ್ಧಿಸುವುದು ವ್ಯವಹಾರ,  ಹೆಚ್ಚು ಪರ್ಸೆಂಟ್
    ಸರಿಯಾಗಿಡದಿದ್ದರೆ ಅಕೌಂಟ್
    ಅಗೋಚರವಾಗಿ ಕರಗುವುದು ಗಂಟು

    ಈಗಿನ ವ್ಯವಹಾರಿಕತೆಯ ಚಲನೆ ಹೇಗಿದೆ ಎಂದರೆ:

    ಚಕ್ರಾಕಾರದಲಿ ಚಲಿಸುತಿದೆ ಚಲಾರ್ಥ,
    ಸರ್ಕಾರಗಳು ಹಂಚುವುವು ಸವಲತ್ತು,
    ಅರಿಯದೆ ದುಡಿಮೆಯ ಕಿಮ್ಮತ್ತು,
    ವ್ಯಯಿಸುವರು ಗುಂಡೇರಿಸಿ ಪಡೆಯಲು ‘ಮತ್ತು’,
    ಗುಂಡು ಖರೀದಿಯಲ್ಲಿ ಕೈಲಿದ್ದ ಹಣ ಸರ್ಕಾರವ ಸೇರಿತು,
    ಎಂಬಲ್ಲಿಗೆ ಕರೆನ್ಸಿಯ ಚಕ್ರಾ ಚಾಲನೆ ಮುಗಿದಿತ್ತು.  
    ( ಚಲಾರ್ಥ =ಕರೆನ್ಸಿ)


    ಆಫರ್ ಡಿಸ್ಕೌಂಟ್  ಬೈ ಬ್ಯಾಕ್ ಕೊಡುಗೆಗಳಿಲ್ಲದ  ವ್ಯವಹಾರವಿಲ್ಲ
    ಗುಣಮಟ್ಟ ಲೆಕ್ಕಿಸದೆ ಕೊಡುಗೆಗಳಿಗೆ  ಹೆಚ್ಚಿನ ಮನ್ನಣೆ ಇದೆಯಲ್ಲಾ
    ಅಸೆ ಆಮಿಷಗಳೊಡ್ಡುವ   ಶೈಲಿಗೆ ಮಿತಿಯಿಲ್ಲ
    ಗ್ರಾಹಕರ ಸೆಳೆಯುವತ್ತಲೇ ಗಮನವೆಲ್ಲಾ


    ಷೇರುಪೇಟೆಯ ಚಟುವಟಿಕೆ ಬದಲಾದ ಪರಿಸ್ಥಿತಿ:

    ಹೋದೆಯ ದೂರ ಓ ಹೂಡಿಕೆದಾರ
    ನೀನೇ ಎನ್ನಯ ಸರದಾರ,
    ತಲ್ಲಣಿಸದೆ, ತಳಮಳಿಸದೆ  ತಗೋ ನಿರ್ಧಾರ
    ತೂಕಡಿಸಿ ತೂರಾಡಿ ತೃಪ್ತಿಪಡುವ ಈಗಿನ ಸಂತೆಗೆ ನೀನೇ  ಆಧಾರ


    ಎನ್ನುವ ದಿನಗಳಿದ್ದವು ಹಿಂದೆ
    ಈಗ ಹೂಡಿಕೆಯಗಿಹುದು ಒಂದು ದಂದೆ
    ಆಗಿರು ತುಂಬಾ ಅಲರ್ಟ್
    ಸಮಯ ಬಂದಾಗ ಕೆಲವು ಷೇರುಗಳಿಂದ ಗೆಟ್ ಔಟ್


    ವಿದೇಶಿ ವಿತ್ತೀಯ ಸಂಸ್ಥೆಗಳ ಕಾರ್ಯ ವಿಧಾನ:

    ವಿದೇಶಿ ಹೂಡಿಕೆದಾರ
    ನೀನೇಕೆ ಇಷ್ಟು ಕ್ರೂರ

    ನೀ ಬಂದೆ ಆಪದ್ಭಾನ್ಧವನಂತೆ
    ನಿನ್ನಯ ವೇಗಕೆ ತತ್ತರಿಸುತ್ತಿದೆ ಈ ಸಂತೆ
    ನೀ ಕೊಂಡ ಷೇರಿಗೆ ಗೋಲ್ಡನ್ ಟಚ್
    ನೀ ಮಾರ ಹತ್ತಿದರೆ ಹಚ್ಚಿದಂತೆ ಟಾರ್ಚ್

    ದಿನೇ ದಿನೇ ಹೆಚ್ಚುತ್ತಿದೆ ನಿನ್ನಯ ಪ್ರಭಾವ
    ನೀನಿಲ್ಲದಿದ್ದರೆ ವಹಿವಾಟಿನ ಅಭಾವ
    ನಿನ್ನಯ ಚಟುವಟಿಕೆಯಿಂದ   ಈ ಸಂತೆ ಅಸ್ಥಿರ
    ಹೂಡಿಕೆದಾರರಿಗಾಗುತ್ತಿರುವ ನಷ್ಟ ಅಪಾರ

    ಮಿತಗೊಳಿಸು ನಿನ್ನಯ ವೇಗ
    ನಡೆಸು ಮೌಲ್ಯಾಧಾರಿತ ವ್ಯವಹಾರದ ಪ್ರಯೋಗ
    ಜನಮಾಡಲಿ ನೀನಾಗಿರುವ ಭಕ್ಷಕ
    ಬದಲಾಯಿಸಿ ನಿನ್ನಯ ಕಾರ್ಯ ವೈಖರಿ ಆಗು ರಕ್ಷಕ

    ನಿಡುವೆವೆ ಹೈ ರೇಟಿಂಗ್ ನಿನ್ನಯ ಚಟುವಟಿಕೆ ಗಮನಿಸಿ
    ಅಳವಡಿಸಿಕೊಂಡರೆ ಲಿವ್ ಅಂಡ್ ಲೆಟ್ ಲಿವ್ ಪಾಲಿಸಿ.

    ಸಧ್ಯದ ಪರಿಸ್ಥಿತಿ ಹೇಗಿದೆ ಎಂದರೆ:

    ಹೆಚ್ಚುತ್ತಿದೆ ಸಾಕ್ಷರತಾ ಸಮೂಹ  
    ಆದರೂ ಕ್ಷೀಣಿಸುತ್ತಿಲ್ಲ  ಡಿಸ್ಕೌಂಟ್ ವ್ಯಾಮೋಹ 
    ಇತ್ತು ಆರ್ಥಿಕ ಸಾಕ್ಷರತಾ ಮಟ್ಟ ಶೇ.35 % ದಶಕದ ಹಿಂದೆ
    ಇಂದು ಶೇ.28% ರಲ್ಲಿ ಉಳಿದಿಹೆವು ಹಿಂದೆ 

    ಬಿ ಎಸ್ ಇ – ಎನ್ ಎಸ್ ಇ ಗಳೆರಡೂ ಪ್ರಮುಖ 
    ಬಿ ಎಸ್ ಇ ಶತಮಾನದ ಮೇಲೆ  ಕಂಡಿದೆ ನಾಲ್ಕುವರೆ ದಶಕ
    ಎನ್ ಎಸ್ ಇ ಗೆ ಈಗ ಮೂರು ದಶಕ
    ಆದರೂ ಸಾಂಸ್ಥಿಕ ಚಟುವಟಿಕೆಯಿಂದ ವಹಿವಾಟು ಗಾತ್ರ  ತಕತಕ 

    ಮೂಡಿಬರುತ್ತಿವೆ ವಿಶ್ಲೇಷಣೆಗಳು ಅಪಾರ
    ಸದಾ ಮನದಲ್ಲಿರಲಿ ಇದೊಂದು ವ್ಯಾಪಾರ
    ಬಂಡವಾಳ ಸುರಕ್ಷತೆಗೆ ಆಧ್ಯತೆ
    ಒದಗಿಸುವುದು ಲಾಭಗಳಿಕೆಯ ಸಾಧ್ಯತೆ.

    ವಾರದ ವರದಿ

    ವಿಶ್ಲೇಷಣೆಗೆ ತುತ್ತಾಗಿ  ಗಾಡ್ರೇಜ್‌ ಪ್ರಾಪರ್ಟೀಸ್ 9 ರಂದು ಕರಗಿ
    ಜಾರಿತು ನೂರಿಪ್ಪತ್ತು ರೂಪಾಯಿಗಳಷ್ಟು ಸುಸ್ತಾಗಿ
    10, 11 ರಂದು ಸಮಜಾಯಿಶಿಯ ನೆಪದಲ್ಲಿ ಪುಟಿದೆದ್ದಿತು ಪಠಿಸುತ್ತಾ ಮಗ್ಗಿ
    ಆದರೂ ಕಲ್ಪಿಸಿತು ಬೇರ್‌ ಮತ್ತು ಬುಲ್‌ ಗಳಿಗೆ ಸುಗ್ಗಿ

    ದೊಪ್ಪನೆ ಕುಸಿಯಿತು ನೈಕಾ ಅನ್‌ ಲಾಕ್‌ ಷೇರುಗಳ ನೆಪದಿಂದ
    ಕಂಪನಿ ಪ್ರಕಟಿಸಿತು ಒಂದಕ್ಕೆ ಐದು ಬೋನಸ್‌ ಷೇರುದಾರರ ಹಿತದಿಂದ
    ಆರಂಭವಾಯಿತು ಎಕ್ಸ್‌ ಬೋನಸ್‌ ಭಾರಿ  ಕುಸಿತದಿಂದ
    ಗಜಗಾತ್ರದ ವಹಿವಾಟು ಪ್ರೇರೇಪಿಸಿತು ಖರೀದಿಸಲು ಸಂತಸದಿಂದ

    ಎಲ್‌ ಐ ಸಿ ಷೇರಿನ ಬೆಲೆ ಸತತ ಜಾರುತಲಿತ್ತು ಆಳದ ಅರಿವಿಲ್ಲದೆ,
    ಸಣ್ಣ ಹೂಡಿಕೆದಾರರು ಹೆದರಿ ಮಾರಾಟ ಮಾಡುತಲಿದ್ದರು ದಾರಿ ಅರಿಯದೆ,
    ಘೋಷಿಸಿದೆ ಎಲ್‌ ಐ ಸಿ ಉತ್ಕೃಷ್ಠ ಸಾಧನೆಯ ಅಂಕಿ ಅಂಶ
    ಪ್ರೇರೇಪಿಸಬಹುದು ಹೆಚ್ಚಿನವರಲಿ ಧೀರ್ಘಕಾಲೀನ ಚಿಂತನೆ, ಈ ಫಲಿತಾಂಶ

    ಆಯಿಲ್‌,  ಕೋಲ್‌, ಹೆಚ್‌ ಎ ಎಲ್‌ , ಇಂಗರ್‌ ಸಾಲ್‌ ಘೋಷಿಸಿದವು ಉತ್ತಮ ಲಾಭಾಂಶ
    ಅಸ್ಟ್ರಾಲ್‌,   ಎಂ ಆರ್‌ ಎಫ್‌ ಪ್ರಕಟಿಸಿದವು ಕಳೆಪೆ ಲಾಭಾಂಶ
    ಬಂದರೂ ಬಲರಾಂಪುರ್‌, ಕೇರ್‌ ರೇಟಿಂಗ್ಸ್‌ ಗಳ ಬೈಬ್ಯಾಕ್
    ನೀರಸಮಯದಲ್ಲಿದ್ದವು ಈ ಸ್ಟಾಕ್


    ನಿಯಂತ್ರಣ ವ್ಯವಸ್ಥೆ:

    ಷೇರುಪೇಟೆ ವಹಿವಾಟು ನಿಯಮ ಬಲು ಬಿಗಿ
    ಆದರೂ ನೈತಿಕಮಟ್ಟ ಕುಗ್ಗಿ
    ಹಿತಾಸಕ್ತರಿಗೆ ಉಂಟಾಗಿ ಸುಗ್ಗಿ
    ನಡೆಯಾದಾಗಬಹುದು ಯಾವುದೇ ಮಗ್ಗಿ

    ಸಧ್ಯದ ಪರಿಸ್ಥಿತಿಗೆ ಪರಿಹಾರವೇನು?
    ಷೇರುಪೇಟೆಯೊಂದೇ ಇಂದಿನ ಉತ್ತಮ ಹೂಡಿಕೆ
    ಅರಿಯದೆ ನಡೆಸಿದರೆ ಚಟುವಟಿಕೆ  ಬಂಡವಾಳ ಹೊಡೆವುದು ಗೊರಕೆ
    ಹೆಚ್ಚಿಸಿ ಕೊಳ್ಳಲು ಸಂಪನ್ಮೂಲ 
    ವ್ಯಾಲ್ಯೂ ಪಿಕ್ ಪ್ರಾಫಿಟ್ ಬುಕ್ ಚಟುವಟಿಕೆಯೇ   ಮೂಲ 


    ಬೇಕೆನಿಸದಾಕ್ಷಣ ಮಾರಾಟ ಮಾಡಿ ಹೊರಬರಬಹುದಾದ ಏಕೈಕ ಸ್ವತ್ತು,
    ಹೆಚ್ಚಿನ ಬಾರಿ ಅನಿರೀಕ್ಷಿತ ಲಾಭವ ತರುವ ಸವಲತ್ತು 
    ಹಿಡಿಯಬೇಕು ಸಿಕ್ಕಾಗ ‘ ಲಾಭ ಮತ್ತು ಕಳ್ಳ’  
    ಬಿಟ್ಟರೆ ಸೇರುವುದು ಹಳ್ಳಸದಾ ಹಸಿರಾದ ಸುರಕ್ಷಿತ ಚಿಂತನೆ:

    ಅಧ್ಯಯನದಿಂದ ಅರಿವು,
    ಅನುಭವದಿಂದ ತಿಳಿವು
    ಚಿಂತನೆಯಿಂದ ಸುಳಿವು
    ಅರಿವು, ತಿಳಿವು ಸುಳಿವುಗಳಿಂದ ಉಳಿವು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!