ಸುಮಾ ವೀಣಾ
ಮಗುವನ್ನು ಬುದ್ಧಿವಂತ ಎಂದು ತೀರ್ಮಾನಿಸುವ ಮಾನದಂಡ ಅಂಕಗಳು. ಮಕ್ಕಳನ್ನು ಅಂಕಗಳು ಅನ್ನುವ ಅಂಕುಶವನ್ನು ಒಡ್ಡಿ ಬಂಧಿಸುವ ಕ್ರಮ ಸರಿಯೇ ಎನ್ನುವುದೊಂದು ಪ್ರಶ್ನೆ. ಅದಕ್ಕೆ ಗ್ರೇಡ್ ಹಾಕುವ ಪದ್ಧತಿ ಅಲ್ಲಿಯೂ A+,A++ A1,A2 ಇತ್ಯಾದಿಗಳು ಬಂದಿವೆ.ಪ್ರಾಚೀನ ಗುರುಕುಲ ಪದ್ಧತಿ ಮೂಲಕ ಗುರುತಿಸಿಕೊಂಡ ನಮ್ಮ ದೇಶದಲ್ಲಿ ಈ ಮಟ್ಟಿಗಿನ ಅಂಕೆಗಳ ಸವಾಲು ಬೇಕೇ?ಒಂದು ಕಾಲದಲ್ಲಿ ಅಂಕಗಳು ಎಷ್ಟು ಬಂದಿವೆ ಎನ್ನುತ್ತಿದ್ದ ಕಾಲ ಈಗ ಅಂಕಗಳು ಎಲ್ಲಿ ಕಳೆದು ಹೋಗಿವೆ ಅನ್ನುವ ಭಾವವಿದೆ.
ತಕ್ಷಶಿಕ, ನಲಂದ ವಿಶ್ವ ವಿದ್ಯಾಲಯಗಳು ಇದ್ದ ದೇಶ ನಮ್ಮದು. ನಮ್ಮ ಗುರುಕುಲಗಳು ಅಂಕಗಳ ಅಂಕೆಯನ್ನು ಎಂದಿಗೂ ಹಾಕೊಕೊಂಡಿದ್ದಿಲ್ಲ. ವಿದ್ಯಾರ್ಥಿ ಕಲಿಯುವವರೆಗೆ ಕಲಿಸುತ್ತಿದ್ದುರು ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾಗಿ ಸ್ಪಂದಿಸುತ್ತಿದ್ದರು. ಮಕ್ಕಳಿಗೆ ಬೌದ್ಧಿಕ ಒತ್ತಡವನ್ನು ಪಾಲಕರು ಗುರುಗಳಾದಿಯಾಗಿ ಹೇರುವ ಮನೋಭಾವ ಅತ್ಯಂತ ಅಪಾಯಕಾರಿ ಅನ್ನಿಸುತ್ತದೆ .ಅಂಕಗಳು ಮುಖ್ಯ ನೀವು ಕಲಿಸುವ ವಿಷಯದಲ್ಲಿ ಎಷ್ಟು ಮಕ್ಕಳಿಗೆ ಪೂರ್ಣಾಂಕಗಳು ಬಂದಿವೆ ಎಂದು ಕೇಳಿದಾಗ ಶಿಕ್ಷಕರು ಅದೇ ಕಡೆಗೆ ವಾಲುತ್ತಾರೆ. ಅಂಕಗಳನ್ನು ಉತ್ತರ ಬರೆಯುವ ಕ್ರಮಕ್ಕನುಗುಣವಗಿ ವಿಭಾಗಿಸಿಕೊಂಡಂತೆ ಮಕ್ಕಳ ಮನಸ್ಸನ್ನು ಭಾಗಗಳನ್ನಾಗಿ ಮಾಡಲು ಸಾಧ್ಯವಿಲ್ಲ.
ಭಾಷಾವಿಷಯಗಳಿಗೂ ಪೂರ್ಣಾಂಕ ಕೊಡುವ ಈ ಕಾಲ ಇದು ಎಷ್ಟು ಸಮಂಜಸ ಅನ್ನಿಸುತ್ತದೆ.ಪಠ್ಯ ಕ್ರಮವೇ ಬಂದಿರುವುದಿಲ್ಲ ಪ್ರಶ್ನೆ ಪತ್ರಿಕೆಯ ಬ್ಲೂಪ್ರಿಂಟ್ ಕೊಡಿ ಎನ್ನುವ ಮಕ್ಕಳು ಇದ್ದಾರೆ. ಕಲಿಕೆ ಎನ್ನುವುದು ಸಹಜವಾಗಿರಬೇಕು ಅಂಕಗಳ ಶಂಕೆಯಲ್ಲಿಯೇ ಕಳೆದು ಹೋಗುವ ವಿದ್ಯಾರ್ಥಿ ಪೀಳಿಗೆ ಇಂದಿನ ದಿನಮಾನದ್ದು.
ಹರಿಯುವ ನೀರಿಗೆ ದಾರಿ ಹೇಳಿಕೊಡಬೇಕಿಲ್ಲ ಹಾಗೆ ಹರಿಯುವುದಕ್ಕೆ ಅವಕಾಶ ಕೊಡಬೇಕು ಅಷ್ಟೇ… , ಹಾಗೆ ಮಕ್ಕಳನ್ನು ಕಲಿಕೆಗೆ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು. ಕಲಿಕೆಗೆ ಪ್ರಾಯೋಗಿಕ ಹಿನ್ನೆಲೆ ಬೇಕು ಅನುಭವ ಜನ್ಯ ಪಾಠ ಬೇಕು. ಪೋಷಕರು ಬರಿಸಿದ ಶಾಲಾ ಶುಲ್ಕವನ್ನೆ ಬಂಡವಾಳ ಎಂದು ತಿಳಿದು ಅದಕ್ಕೆ ಅಂಕಗಳು ಉತ್ಪತ್ತಿ ಎಂದಾಗಬಾರದು. ಹೀಗೆ ಅಂಕಗಳ ಮೀತಿ ಹೇರುವುದರಿಂದ ಮಕ್ಕಳು ಬೌದ್ಧಿಕ ದಾಸ್ಯಕ್ಕೆ ಒಳಗಾಗುತ್ತಾರೆ. ಸ್ವತಂತ್ರವಾಗಿ ಆಲೋಚಿಸಲು ಬಿಡಲಾಗದ ಅಂಕಗಳಲ್ಲೂ ಗ್ರೇಸ್ ಕೃಪಾಂಕ , ಧನಾತ್ಮಕ ಋಣಾತ್ಮಕ ಅಂಕಗಳು ಎನ್ನುವ ಪರಿಪ್ರೇಕ್ಷಗಳು ಮಕ್ಕಳ ಮನೋಸಂಚನೆಗೆ ಕಾರಣವಾಗಿವೆ. ಅಂಕಗಳ ಗಳಿಕೆ ಅತೀ ಆತ್ಮವಿಶ್ವಾಸಿಗಳನ್ನಾಗಿಸಬಹುದು ಇದು ಮಕ್ಕಳ ಬೆಳವಣಿಗೆಗೆ ಮಾರಕ.
ಅಂಕ ಅನ್ನುವುದು ಅಖಾಡ ಅನ್ನುವ ಹಾಗಾಗಿದೆ. .ನೂರು ಅಂಕಗಳಿಗೆ ಪರೀಕ್ಷೆ ಬರೆಯುವುದಾದರೂ ಪ್ರಶ್ನೆ ಪತ್ರಿಕೆ 155 ಅಂಕಗಳಿಗೆ ರಚನೆಯಾಗಿರುತ್ತದೆ. ಅಂಕಗಳ ಅಣಕವಾಡು ಇದು ಅಂಕಗಳು ಶಂಕೆ ಮಕ್ಕಳ ಮನೋಬಲವನ್ನು ಕಸಿತುತ್ತದೆ. ಅಂಕಗಳಷ್ಟೆ ಜೀವನವಲ್ಲ.ಮಕ್ಕಳ ಅರಿವಿನ ಪ್ರಪಂಚವನ್ನು ಹಿಗ್ಗಿಸಬೇಕು. ಕಂಠ ಪಾಠ ಬೇಡ , ಕಂಠ ಪತ್ರದ ಉಲುಹು ಕೆಟ್ಟರೆ ಹೋಯಿತು ಬರೆದು ಅಭ್ಯಾಸ ಮಾಡಿಸಿ , ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ನೀಡಿ ಮಕ್ಕಳನ್ನು ಅಂಕಗಳು ಅನ್ನುವ ಪಾಶದಲ್ಲಿ ಸಿಕ್ಕಿಸುವುದು ಬೇಡ.
ಶಿಕ್ಕರು ಮೌಲ್ಯಮಾಪನದ ಜೊತೆಗೆ ಸಹ ಮೌಲ್ಯಮಾಪನವನ್ನು ಮಕ್ಕಳಿಗೆ ಬಿಡಬೇಕು ಆಗ ಮಕ್ಕಳಿಗೆ ತಾವು ಎಡವಿದ ಸ್ಥಳಗಳ ಕುರಿತು ಮಾಹಿತಿ ಇರುತ್ತದೆ. ದೇಶದ ಬದಲಾವಣೆಗೆ ಅಲ್ಲಿನ ಶಿಕ್ಷಣ ಪದ್ಧತಿ ಕೂಡ ಕಾರಣವಾಗುತ್ತದೆ. ನಮ್ಮಲ್ಲಿ ಶಾಲೆಗೆ ಹೋಗುವ ವಯಸ್ಸು ಅತ್ಯಂತ ಬೇಗ ಅನ್ನಿಸುತ್ತಿದೆ . ಕೊಠಡಿಯೊಳಗಿನ ಶಿಕ್ಷಣಕ್ಕೆ ಪ್ರೋತ್ಸಾಹ ಇದೆ ಆದರೆ ಬಯಲ ಶಿಕ್ಷಣ ಸಾಮಾಜಿಕ ಶಿಕ್ಷಣಕ್ಕೆ ಆದ್ಯತೆ ಇಲ್ಲ. ಗ್ರಾಮೀಣ ಭಾಗದಲ್ಲಿ ಅಂಗನವಾಡಿಗೆ ಹೋಗುವ ಮಕ್ಕಳು ಇದ್ದರೆ ನಗರ ಪ್ರದೇಶದಲ್ಲಿ ಆ್ಯಪ್ ಆಧಾರಿತ ಶಿಕ್ಷಣ ಇದೆ ವಿದ್ಯಾಭ್ಯಾಸದಲ್ಲಿ ಸಮಾನತೆ ಇರಬೇಕು 12 ನೆ ವಯಸ್ಸಿನ ವರೆಗೂ ಮಾರ್ಕ್ಸ್ ಕಾರ್ಡ್ ಕೊಡುವ ಪದ್ಧತಿ ತೆಗೆಯಬೇಕು. ಹೋಂ ವರ್ಕ್ ಮಕ್ಕಳಿಗೆ ಬೇಕು ಅನ್ನಿಸಿದರೆ ಮಕ್ಕಳಿಗೆ ಇಷ್ಟವಾಗುವ ವಿಷಯದಲ್ಲಿ ಬರೆಯಲು ಆದ್ಯತೆ ನೀಡಬೇಕು.ಆದಷ್ಟು ಮಕ್ಕಳನ್ನು ಅಂಕೆಯಲ್ಲಿ ಬಂಧಿಸುವುದಕ್ಕಿಂತ ಸಂತೋಷವಾಗಿಸಿದರೆ ಮಕ್ಕಳ ಬೌದ್ಧಿಕ ವಿಕಾಸವಾಗುತ್ತದೆ.
ಕುವೆಂಪುರವರು ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೆ ವಿನಃ ಬತ್ತ ತುಂಬುವ ಚೀಲಗಳಾಗಬಾರದು ಎಂದಿದ್ದಾರೆ ಆದರೆ ಇಂದಿನ ಮಕ್ಕಳು ಬತ್ತಿ ಬಾಯಾರಿದ ಹೂಕುಂಡಗಳಂತೆ ಅಷ್ಟಕ್ಕೇ ಸೀಮಿತವಾಗಿ ಕುದುರೆಗೆ ಜೀನು ಕಟ್ಟಿದಂತೆ ಆಗಿದ್ದಾರೆ. ಅಂಕೆಗಳ ಅಂಕೆಯನ್ನು ಮೀರಿ ಬಹುತ್ವದ ಕಡೆಗೆ ಅವರ ಆಲೋಚನಾಲಹರಿ ಪ್ರವಹಿಸಬೇಕು.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.
ತುಂಬಾ ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಶಿಕ್ಷಣ ಅಂದರೇನು, ಅದು ಹೇಗಿರಬೇಕು, ಮತ್ತು ಯಾಕೆ ಬೇಕು ಎನ್ನುವಂತಹ ಪ್ರೆಶ್ನೆಗಳನ್ನು ತಜ್ಞರು ಮೊದಲು ಹಾಕಿಕೊಳ್ಳಬೇಕು.. ಗುಲಾಮಗಿರಿಗೆ ಅಂತ ರಚಿಸಿದ್ದ ವ್ಯವಸ್ಥೆಯಲ್ಲಿ ಪ್ತತಿಭೆಗಳು ಬಾಡಿ ಹೋಗುತ್ತಿವೆ. ನೌಕರಿಗಾಗಿ ಶಿಕ್ಷಣ ಅನ್ನುವ ಮನೋಭಾವ ಸಮಾಜದಿಂದ ತೊ ಲಗಬೇಕು…70 ಕೋಟಿ ಭಾರತೀಯ ಯುವ ಮೆದುಳುಗಳು ಶಿಕ್ಷಣ ಅನ್ನುವ ವ್ಯವಸ್ಥೆಯಲ್ಲಿ ನಲುಗುತ್ತಿದ್ದಾರೆ. ಅಂಕ ವ್ಯವಸ್ಥೆಯ ಕರಾಳ ಮುಖವನ್ನು ಲೇಖಕರು ಚೆನ್ನಾಗಿ ಅನಾವರಣ ಮಾಡಿದ್ದಾರೆ.