HYDERABAD NOV 15
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ಕೃಷ್ಣ ಘಟ್ಟಮನೇನಿ (80) ಅವರು ಮಂಗಳವಾರ ವಿಧಿವಶರಾಗಿದ್ದಾರೆ.
ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ನಟ ಕೃಷ್ಣ ಅವರನ್ನು ನಿನ್ನೆ ಹೈದರಾಬಾದ್’ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4 ಗಂಟೆಗೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಕೃಷ್ಣ ತೆಲುಗು ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆ ಹಾಗೂ ಟಿಡಿಪಿ ನಾಯಕ ಜಯ್ ಗಲ್ಲಾ ಅವರ ಮಾವ ಕೂಡ ಆಗಿದ್ದಾರೆ. 1980ರ ದಶಕದಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಿ ಸಂಸದರು ಆಗಿದ್ದರು.
1965ರಿಂದ ನಟನೆ ಆರಂಭಿಸಿದ್ದ ಕೃಷ್ಣ ಅವರು, ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.
ಸೆಪ್ಟೆಂಬರ್ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಆ ಬಳಿಕ ಕೃಷ್ಣ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು.