26 C
Karnataka
Thursday, November 21, 2024

    2025ರ ಜೂನ್‌ ಹೊತ್ತಿಗೆ 175 ಕಿ.ಮೀ. ಮೆಟ್ರೋ ಮಾರ್ಗ

    Must read

    BENGALURU NOV 18

    ಮೆಟ್ರೋ ರೈಲು ವ್ಯವಸ್ಥೆಯು ಸುಗಮ ಸಂಚಾರವನ್ನು ಸಾಧ್ಯವಾಗಿಸುತ್ತಿದ್ದು, 2025ರ ಜೂನ್‌ ಹೊತ್ತಿಗೆ ‘ನಮ್ಮ ಮೆಟ್ರೋ’ ಜಾಲದಲ್ಲಿ 175 ಕಿ.ಮೀ. ಉದ್ದದ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ತಿಳಿಸಿದ್ದಾರೆ.
    ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಅವರು ಶುಕ್ರವಾರ ‘ಸಂಚಾರ ವ್ಯವಸ್ಥೆಯ ಭವಿಷ್ಯ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

    ನಮ್ಮ ಮೆಟ್ರೋದ 2 ಮತ್ತು 3ನೇ ಹಂತದ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದರೆ, ನಗರದಲ್ಲಿ 2041ರ ಹೊತ್ತಿಗೆ ಒಟ್ಟು 314 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಸದ್ಯಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯ ಕಡೆಗೆ ಜನರನ್ನು ಕರೆತರುವುದೇ ದೊಡ್ಡ ಸವಾಲಾಗಿದೆ ಎಂದು ಅವರು ಪ್ರತಿಪಾದಿಸಿದರು.

    1990ರವರಗೂ ದೇಶದಲ್ಲಿ ನಗರ ಪ್ರದೇಶಗಳ ಕಡೆಗೆ ಗಮನವನ್ನೇ ಕೊಡುತ್ತಿರಲಿಲ್ಲ. ಹೀಗಾಗಿ ನಮ್ಮ ನಗರಾಭಿವೃದ್ಧಿ ಯೋಜನೆಗಳು ಬಹುಕಾಲ ವೈಜ್ಞಾನಿಕವಾಗಿರಲಿಲ್ಲ. ಈಗ ನವೋದ್ಯಮಗಳಿಂದ ಮೆಟ್ರೋ ವ್ಯವಸ್ಥೆಗೆ ಸಾಕಷ್ಟು ಅನುಕೂಲಗಳು ಸಿಗುತ್ತಿವೆ. ಹೀಗಾಗಿ ಜನರು ಮೆಟ್ರೋ ರೈಲುಗಳ ಮೂಲಕ ತಮ್ಮ ಕಾರ್ಯಸ್ಥಳಗಳನ್ನು ತಲುಪುವಂತೆ ಮಾಡಲು ಹಲವು ನವೋದ್ಯಮಗಳೊಂದಿಗೆ ಬಿಎಂಆರ್‍‌ಸಿಎಲ್‌ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ವಿವರಿಸಿದರು.

    ಮೆಟ್ರೋ ನಿಲ್ದಾಣಗಳಲ್ಲೇ ಬಸ್‌ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಬಿಎಂಟಿಸಿ ಜತೆ ಮಾತುಕತೆ ಪ್ರಗತಿಯಲ್ಲಿದೆ. ಇದರಿಂದ ಆ ಸಂಸ್ಥೆಗೂ ಲಾಭವಾಗಲಿದೆ. ಇದರ ಜತೆಗೆ ಕಾರ್‍‌ ಮತ್ತು ಬೈಕ್‌ ಪೂಲಿಂಗ್‌ ವ್ಯವಸ್ಥೆಯನ್ನು ಉತ್ತೇಜಿಸಬೇಕು. ಅಲ್ಲದೆ, ಮೆಟ್ರೋ ನಿಲ್ದಾಣಗಳ ಒಳಗೆ ಮತ್ತು ಹೊರಗೆ ಸಾರ್ವಜನಿಕರಿಗೆ ಪ್ರತಿಯೊಂದೂ ಸಿಗುವಂತಿರಬೇಕು. ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಸಂಸ್ಥೆಯು ಯೋಚಿಸುತ್ತಿದೆ ಎಂದು ಪರ್ವೇಜ್‌ ನುಡಿದರು.

    ಅಂತರರಾಷ್ಟ್ರೀಯ ಸಾರಿಗೆ ಕೌನ್ಸಿಲ್‌ನ ಅಮಿತ್‌ ಭಟ್‌ ಮಾತನಾಡಿ, “ಪಾಶ್ಚಾತ್ಯ ಜಗತ್ತಿನಲ್ಲಿ ಶೇಕಡ 85ರಷ್ಟು ನಗರೀಕರಣವಾಗಿದ್ದು, ಭಾರತದಲ್ಲಿ ಈ ಪ್ರಮಾಣ ಶೇಕಡ 33ರಷ್ಟಿದೆ. ಆದರೆ ನಮ್ಮಲ್ಲಿ ಇನ್ನೂ ಶೇಕಡ 66ರಷ್ಟು ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಏಕೆಂದರೆ, ನಮ್ಮಲ್ಲಿ ಹೊಸದಾಗಿ ಹಲವು ನಗರಗಳು ತಲೆ ಎತ್ತುತ್ತಿವೆ” ಎಂದರು.
    ಸುಗಮ ಮತ್ತು ಅತ್ಯಾಧುನಿಕ ಸಾರಿಗೆ ಸೌಲಭ್ಯವನ್ನು ಒದಗಿಸುವಾಗ ಇಂಗಾಲದ ಉತ್ಪಾದನೆ ಇಲ್ಲದಂತೆ ನೋಡಿಕೊಳ್ಳುವುದು, ಎಲ್ಲರನ್ನೂ ಒಳಗೊಳ್ಳುವುದು ಮತ್ತು ಯಾವುದೇ ಅಪಘಾತಗಳಿಗೆ ಆಸ್ಪದವಿಲ್ಲದಂತೆ ಖಾತ್ರಿಪಡಿಸುವುದು ಬಹಳ ದೊಡ್ಡ ಸವಾಲುಗಳಾಗಿವೆ ಎಂದು ಅವರು ಪ್ರತಿಪಾದಿಸಿದರು.

    ಬಾಶ್‌ ಕಂಪನಿಯ ಉಪಾಧ್ಯಕ್ಷ ವಾದಿರಾಜ್‌ ಕೃಷ್ಣಮೂರ್ತಿ, ಚಲೋ ಕಂಪನಿಯ ಸಹ ಸಂಸ್ಥಾಪಕ ವಿನಾಯಕ್‌ ಭಾವ್ನಾನಿ ಅವರು ಕೂಡ ಗೋಷ್ಠಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!