21.7 C
Karnataka
Thursday, November 21, 2024

    Indian Stock Market :ಲಾಭದ ನಗದೀಕರಣವೇ ಸೂಕ್ತ

    Must read

    ಸಾಮಾನ್ಯವಾಗಿ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವವರ ಚಿಂತನೆ ಎಂದರೆ ಧೀರ್ಘಕಾಲೀನ ಹೂಡಿಕೆ.  ಹಿಂದೆ ಹೂಡಿಕೆ ಮಾಡಿದವರು ವಿವರಿಸುವ ಸಂಪತ್ತಿನ ಸೃಷ್ಠಿ ಬಗ್ಗೆ ಹೆಚ್ಚು ಪ್ರಭಾವಿತರಾಗಿ ಹೂಡಿಕೆ ಮುಂದಾಗುವುದು ಹೆಚ್ಚು.  ಇಲ್ಲಿ ಗಮನದಲ್ಲಿರಸಲೇಬೇಕಾದ ಅಂಶವೆಂದರೆ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತವಾಗಿಸಿಕೊಂಡು ಬೆಳೆಸುವ ಪ್ರಕ್ರಿಯೆ.  ಅಂದರೆ ಹೂಡಿಕೆ ಮಾಡ ಬೇಕೆಂದಿರುವ ಕಂಪನಿ ಬಗ್ಗೆ ಸವಿವರವಾದ  ಅಧ್ಯಯನ, ಮಾಹಿತಿ ಮುಂತಾದವುಗಳನ್ನು ಅರಿತು ನಿರ್ಧರಿಸುವುದು ಅತ್ಯಗತ್ಯ.   ಒಂದು ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡುವಾಗ ಸಾಮಾನ್ಯವಾಗಿ  E P S  ಅಂಶವನ್ನು ಪರಿಗಣಿಸಿ ನಿರ್ಧರಿಸುವುದು ಸಹಜ.  ಆದರೆ ಬದಲಾದ ಪರಿಸ್ಥಿತಿಯಲ್ಲಿ E P S ಎಂದರೆ ಕೇವಲ  Earning Per Share  ಒಂದೇ ಅಲ್ಲ Errosion Per Share  ಅಂಶವನ್ನೂ  ಸಹ  ಪರಿಶೀಲಿಸಿ  ನಿರ್ಧರಿಸಬೇಕಾಗಿದೆ.

    ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ಸದ್ಯ  ರೂ.282 ಲಕ್ಷ ಕೋಟಿ ದಾಟಿದೆ.  ಅಲ್ಲದೆ ನೋಂದಾಯಿತ ಹೂಡಿಕೆದಾರರ ಸಂಖ್ಯೆ ಅಪಾರವಾಗಿ ಬೆಳೆಯುತ್ತಿದೆ.  ಕಳೆದ ಕೆಲವು ತಿಂಗಳುಗಳಿಂದ ಷೇರುಪೇಟೆ ಆಸಕ್ತಿ ಬೆಳೆಸಿಕೊಂಡು  ಹೊಸದಾಗಿ ಪೇಟೆ ಪ್ರವೇಶಿಸುತ್ತಿರುವವರ ಸಂಖ್ಯೆ ತಿಂಗಳಿಗೆ ಸುಮಾರು ಎರಡು ಲಕ್ಷದಷ್ಠಿದೆ.  ಆದರೆ  ಈ ರೀತಿ ಹೆಚ್ಚುತ್ತಿರುವ ಹೂಡಿಕೆದಾರರ ಸಂಖ್ಯೆಗನುಗುಣವಾಗಿ ಲಭ್ಯವಿರುವ ಕಂಪನಿಗಳ ಸಂಖ್ಯೆ ಹೆಚ್ಚುತ್ತಿಲ್ಲ.  ಇದು ಒಂದು ರೀತಿ ಬೇಡಿಕೆಯಾಧಾರಿತ ಏರಿಕೆ ಹೆಚ್ಚಿಸುತ್ತಿದೆ.   

    ಹೂಡಿಕೆಯಾಧಾರಿತ ಚಟುವಟಿಕೆ ನಡೆಸುವವರಿಗೆ ಕೇವಲ ತಮಗೆ ಬೇಕಾದವರು, ಆಪ್ತರು, ಸ್ನೇಹಿತರು, ಯು ಟ್ಯೂಬ್‌, ಇನ್ಸ್ಟಾಗ್ರಾಂ, ಟೆಲಿಗ್ರಾಂ ನಲ್ಲಿ ನ ಮಾಹಿತಿ ಆಧರಿಸಿದರೆ ಸಾಲದು.  ದಿನ ನಿತ್ಯ, ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ವಾತಾವರಣವನ್ನು ಷೇರಿನ ಬೆಲೆಯನ್ನಾಧರಿಸಿ ತೀರ್ಮಾನ ತೆಗೆದುಕೊಳ್ಳುವುದು ಒಳಿತು.  ವಿಶೇಷವಾಗಿ ಗಜಗಾತ್ರದ ವಹಿವಾಟುಗಳು ಮತ್ತು ಹಿತಾಸಕ್ತ ಚಟುವಟಿಕೆಗಳ ಬಗ್ಗೆ ಗಮನಹರಿಸಿ ತುಲನಾತ್ಮಕ ನಿರ್ಧಾರ ಅಗತ್ಯ.

    ಕಾಲ್ಗೇಟ್‌ ಪಾಲ್ಮೊಲಿವ್‌ 1978 ರಲ್ಲಿ ಪ್ರತಿ ಷೇರಿಗೆ ರೂ.15 ರಂತೆ ವಿತರಿಸಿ 2000 ಇಸವಿಯೊಳಗೆ  ಹೂಡಿಕೆಯನ್ನ ಸುಮಾರು 50 ಪಟ್ಟು ವೃದ್ಧಿಸುವಂತಹ ಸಾಧನೆ ದಾಖಲಿಸಿತು.

    ಇನ್ಫೋಸಿಸ್‌ ಕಂಪನಿ1993 ರಲ್ಲಿ ವಿತರಿಸಿದ 100 ಷೇರು ಇಂದಿಗೆ 55,000 ಗಳಿಗೂ ಹೆಚ್ಚುವಂತಹ ಸಾಧನೆ ತೋರಿತು. ಅಲ್ಲದೆ ಆ ಷೇರುದಾರರು, ಮಾರಾಟಮಾಡದೆ ಇದ್ದವರು,  ಪ್ರತಿ ವರ್ಷ ಸಧ್ಯ ಸುಮಾರು ರೂ.20 ಲಕ್ಷದಷ್ಟು ಲಾಭಾಂಶವನ್ನು ಪಡೆದುಕೊಳ್ಳುತ್ತಿದಾರೆ.   ಷೇರುಗಳೂ ವೃದ್ಧಿಸುತ್ತಿವೆ, ಷೇರಿನ ದರವೂ ಹೆಚ್ಚಿದೆ ಮತ್ತು ಲಾಭಾಂಶಗಳ ಮೂಲಕ ಷೇರುದಾರರನ್ನು ವಿಧೇಯ (LOYAL) ರನ್ನಾಗಿಸಿದೆ.

    ಆದರೆ ಪೇಟೆಗಳು, ಚಟುವಟಿಕೆದಾರರು, ವಿತ್ತೀಯ ಸಂಸ್ಥೆಗಳು, ವಿದೇಶೀ ವಿತ್ತೀಯ ಸಂಸ್ಠೆಗಳು ಬೆಳೆದಂತೆಲ್ಲಾ ಷೇರುಪೇಟೆಯ ಚಟುವಟಿಕೆ ಸಮೀಕರಣಗಳು, ಚಿಂತನೆಗಳು, ವಿಶ್ಲೇಷಣೆಗಳು ಬದಲಾಗುತ್ತಿವೆ.  ಹಾಗಾಗಿ ಷೇರಿನ ಬೆಲೆಗಳು ಅತಿಯಾದ ವೇಗದ ಚಲನೆ ಪ್ರದರ್ಶಿಸುತ್ತಿವೆ.  ವೇಗಕ್ಕನುಗುಣವಾಗಿ ಅಸ್ಥಿರತೆಗಳನ್ನೂ ಸಹ ಜೊತೆಗೂಡಿಸಿಕೊಂಡಿವೆ.

    ಕೆಲವು ವಿಸ್ಮಯಕಾರಿ ಅಂಶಗಳನ್ನು ಗಮನಿಸೋಣ:

    ಆಲ್‌ ಸ್ಟೋನ್‌ ಟೆಕ್ಸ್‌ ಟೈಲ್ಸ್‌ ( ಇಂಡಿಯಾ) ಲಿಮಿಟೆಡ್:‌  

    ಈ ಕಂಪನಿ  ಪ್ರತಿ ಷೇರಿಗೆ 9 ಷೇರು ಬೋನಸ್‌ ಆಗಿ ವಿತರಿಸುವುದರೊಂದಿಗೆ ಷೇರಿನ ಮುಖಬೆಲೆಯನ್ನು ಪ್ರಸ್ತುತ ರೂ.10 ರಿಂದ ರೂ.1 ಕ್ಕೆ ಸೀಳಲು ಡಿಸೆಂಬರ್‌ 14 ನ್ನು ನಿಗದಿತ ದಿನವನ್ನಾಗಿಸಿದೆ.  ಇದಕ್ಕಾಗಿ ಡಿಸೆಂಬರ್‌ 6 ರಂದು ವಿಶೇಷ ಸಾಮಾನ್ಯ ಸಭೆ ಕರೆದಿದೆ.

    ಈ ಕಂಪನಿಯು 1985 ರಲ್ಲಿ ಶಾಲಿನಿ ಹೋಲ್ಡಿಂಗ್ಸ್‌ ಲಿಮಿಟೆಡ್‌ ಹೆಸರಿನಲ್ಲಿ ಪ್ರಾರಂಭವಾಗಿತ್ತು.  2015 ರಲ್ಲಿ ತನ್ನ ಹೆಸರನ್ನು ಈಗಿನ ಹೆಸರಿಗೆ ಬದಲಿಸಿಕೊಂಡಿದೆ.   2020 ರಲ್ಲಿ ಈ ಕಂಪನಿಯು ಸ್ಟಾಕ್‌ ಎಕ್ಸ್‌ ಚೇಂಜ್‌ ನ ಲೀಸ್ಟಿಂಗ್‌ ಶುಲ್ಕವನ್ನು ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಷೇರನ್ನು ಟ್ರೇಡ್‌ ಟು ಟ್ರೇಡ್‌ ಸಮೂಹಕ್ಕೆ ವರ್ಗಾಯಿಸಿತ್ತು.

    ಕಳೆದ ಆಗಸ್ಟ್‌ 2022 ರ 24 ರಂದು ಷೇರಿನ ಬೆಲೆ ರೂ.15 ರಲ್ಲಿದ್ದು 18 ನೇ ನವೆಂಬರ್‌ 2022 ರಂದು ಷೇರಿನ ಬೆಲೆ ರೂ.300  ರ ವಾರ್ಷಿಕ ಗರಿಷ್ಟದ ದಾಖಲೆ ನಿರ್ಮಿಸಿದೆ.  ಈಗಲೂ ಟಿ ಗುಂಪಿನಲ್ಲಿ ವಹಿವಾಟಾಗುತ್ತಿರುವ ಈ ಷೇರಿನಲ್ಲಿ  ಕೆಲವು‌ ಖಾಸಗಿ ಉದ್ಯಮಗಳು ಹೂಡಿಕೆ ಮಾಡಿವೆ. 

    *  ಪಶ್ಚಿಮ್ ಫೈನಾನ್ಸ್‌ ಅಂಡ್‌ ಚಿಟ್‌ ಫಂಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸೆಪ್ಟೆಂಬರ್‌ 2022 ಅಂತ್ಯದಲ್ಲಿ 22.59% ರಷ್ಟು ಭಾಗಿತ್ವವನ್ನು ಹೊಂದಿತ್ತು.   ಅಕ್ಟೋಬರ್‌ 2022 ರಿಂದ 18 ನೇ ನವೆಂಬರ್‌ ವರೆಗೂ ಸುಮಾರು 7.27 ಲಕ್ಷ ಷೇರುಗಳನ್ನು ವಿವಿಧ ಬೆಲೆಗಳಲ್ಲಿ ಮಾರಾಟ ಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಂಡಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಮಾರ್ಚ್‌ ಅಂತ್ಯದಲ್ಲಿ ಈ ಸಂಸ್ಥೆಯು ಆಲ್‌ ಸ್ಟೋನ್‌ ಟೆಕ್ಸ್‌ ಟೈಲ್ಸ್‌ ( ಇಂಡಿಯಾ) ಲಿಮಿಟೆಡ್ ನಲ್ಲಿ  3,86,350 ಷೇರುಗಳನ್ನು  ಅಂದರೆ 3.12% ರ ಭಾಗಿತ್ವವನ್ನು ಹೊಂದಿತ್ತು.

    * ವಿಕ್ಟರಿ ಸಾಫ್ಟ್‌ ವೇರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು  ಸೆಪ್ಟೆಂಬರ್‌ 2022 ರ ಅಂತ್ಯದಲ್ಲಿ 20.31% ರ ಭಾಗಿತ್ವವನ್ನು ಹೊಂದಿತ್ತು.  ಅಕ್ಟೋಬರ್‌ 2022 ರಿಂದ 18 ನೇ ನವೆಂಬರ್‌ ವರೆಗೂ  9.44 ಲಕ್ಷ ಷೇರು ಮಾರಾಟಮಾಡಿಕೊಂಡು ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದಾರೆ.

    * ಉತ್ಸವ್‌ ಸೆಕ್ಯುರಿಟೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಸೆಪ್ಟೆಂಬರ್‌ 2022 ರ ಅಂತ್ಯದಲ್ಲಿ ಶೇ.2.35% ರ ಭಾಗಿತ್ವ ಹೊಂದಿತ್ತು. ಅಂದರೆ 3 ಲಕ್ಷ ಷೇರುಗಳು ಅದರಲ್ಲಿ ಅಕ್ಟೋಬರ್‌ 2022 ರಿಂದ ಈಚೆಗೆ 2,39,900 ಷೇರಿಗಳನ್ನು ಮಾರಾಟಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಂಡಿದೆ.  ಸೋಜಿಗವೆಂದರೆ ಮಾರ್ಚ್‌ 2022 ರ ಅಂತ್ಯದ ವರ್ಷದಲ್ಲಿ ಆಲ್‌ ಸ್ಟೋನ್‌ ಟೆಕ್ಸ್‌ ಟೈಲ್ಸ್‌ ( ಇಂಡಿಯಾ) ಲಿಮಿಟೆಡ್ ಕಂಪನಿಯು ಉತ್ಸವ್‌ ಸೆಕ್ಯುರಿಟೀಸ್‌ ಪ್ರೈವೇಟ್‌ ಲಿಮಿಟೆಡ್‌ ನಿಂದ  ಪಡೆದ ಸಾಲ ರೂ.5.50 ಲಕ್ಷ ದಿಂದ ರೂ.13.73 ಲಕ್ಷ ಸಾಲ ಬೆಳೆದಿದೆ. 

    ವಿಶಾಲ್‌ ತಿಲೋಕ್‌ ಚಂದ್‌ ಕೊಥಾರಿ ಯವರು ಸೆಪ್ಟೆಂಬರ್‌ 2022 ರ ಅಂತ್ಯದಲ್ಲಿ ಶೇ.3.10% ರ ಭಾಗಿತ್ವ ಹೊಂದಿದ್ದರು.  ಅಂದರೆ 3,95,500 ಷೇರುಗಳು.  ಅದರಲ್ಲಿ ಅಕ್ಟೋಬರ್‌ 2022 ರಿಂದೀಚೆಗೆ 3 ಲಕ್ಷ ಷೇರುಗಳನ್ನು ಮಾರಾಟ ಮಾಡಿ ಪೇಟೆ ಒದಗಿಸಿದ ಅವಕಾಶಗಳ ಲಾಭ ಪಡೆದುಕೊಂಡಿದ್ದಾರೆ.

    ಹೀಗಿರುವಾಗ ಸಣ್ಣ ಹೂಡಿಕೆದಾರರು ಕೇವಲ ಬೋನಸ್‌ ಷೇರು ಮತ್ತು ಮುಖಬೆಲೆ ಸೀಳಿಕೆಗಳಿಂದ ಪ್ರೇರಿತರಾಗಿ  ಷೇರಿನ ಬೆಲೆ ಗರಿಷ್ಟದಲ್ಲಿರುವಾಗ ಹೂಡಿಕೆ ಮಾಡುವುದು ಎಷ್ಟರ ಮಟ್ಟಿಗೆ ಸುರಕ್ಷಿತ? ಪರ್ಯಾಯವಾಗಿ ಲಾಭದ ನಗದೀಕರಣವು ಸೂಕ್ತವಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!