ಸುಮಾವೀಣಾ
ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಅನ್ನುವ ಬಸವಣ್ಣನವರ ಮಾತು ತಿಳಿದಿದ್ದರೂ ತಮ್ಮಲ್ಲಿರುವ ಡೊಂಕುಗಳನ್ನು ಬಿಟ್ಟು ಲೋಕದ ಕಾಳಜಿ ಮಾಡುವರೆ ಹೆಚ್ಚು. ಹಾಗಾದರೆ ಲೋಕದ ಕಾಳಜಿ ಬೇಡವೆಂದರ್ಥವಲ್ಲ. ‘ಮನೆ ಗೆದ್ದು ಮಾತು ಗೆಲ್ಲು’ ಅನ್ನುತ್ತಾರಲ್ಲ ಹಾಗೆ. ಮೊದಲಿಗೆ ನಾವು ನಮ್ಮ ಮನೆ ಆನಂತರ ಮಿಕ್ಕಿದ್ದು.
ಮಾನವ ಸಾಮಾಜಿಕ ಪ್ರಾಣಿ ಎನ್ನುವುದು ಎಷ್ಟು ಸರಿಯೋ ಹಾಗೆ ಸಾಮಾಜಿಕ ಮಾಧ್ಯಮ ಜೀವಿಯೂ ಹೌದು! ತನ್ನೆಲ್ಲ ಆಗು ಹೋಗುಗಳು ಮನೆಯವರಿಗೆ ತಿಳಿದಿರುತ್ತದೆಯೋ ಇಲ್ಲವೋ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಹಂಚಿಕೊಂಡು ಸಂತಸ ಪಡುವ ಮಾದರಿಗಳೆ ಹೆಚ್ಚು. ಇಷ್ಟು ಮನುಷ್ಯ ಸಂಕುಚಿತವಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳೂ ಕಾರಣವೇ ಅನ್ನಿಸುತ್ತದೆ.
ಸಂಘ ಜೀವಿ ಅಂದಮೇಲೆ ಇತರರ ಕಷ್ಟಗಳಿಗೂ ಸ್ಪಂದಿಸಬೇಕಾದವನ್ನು ಮನುಷ್ಯ. ಇಂದಿಗೂ ಸ್ಪಂದಿಸುವ ಗುಣ ಗೌಣ ವಾಗಿಲ್ಲ ಆದರೆ ಸ್ಪಂದನೆ ನಿಜವಾಗಿಯೂ ಸಲ್ಲಬೇಕಾದವರಿಗೆ ಸಲ್ಲುತ್ತಿದೆಯೇ ಅನ್ನುವ ಪ್ರಶ್ನೆ ಇದೆ.
ತನ್ನ ಮನೆಯ ಕಿಟಕಿಯಿಂದ, ಬಾಗಿಲಿನಿಂದ ಯಾವ ಬಡತನವೂ, ತೊಂದರೆಯೂ ಕಾಣದ ಆಧುನಿಕರಿಗೆ ಜಾಲತಾಣದ ಕಿಂಡಿಯಲ್ಲಿ ಎಲ್ಲವೂ ಕಾಣುತ್ತದೆ ಹಣವನ್ನು ತಕ್ಷಣ ತಕ್ಷಣ ಹಾಕಿ ಅಪಡೇಟ್ಗಳನ್ನು ಅದೇ ಜಾಲತಾಣಗಳಲ್ಲಿ ಕೊಡುತ್ತಾರೆ. ಇಲ್ಲಿ ನಮ್ಮ ಅಪ್ಡೇಟ್ ಯಾರಿಗೂ ಬೇಕಿಲ್ಲ. ನಮ್ಮ ನಮ್ಮೂರ ಸುತ್ತ -ಮುತ್ತ ಕೊರಗುವ, ಮರುಗುವ ಸಹಾಯ ನಿರೀಕ್ಷಿಸುವ ಮನಸ್ಸುಗಳು ಅದೆಷ್ಟೋ ಇರುತ್ತವೆ, ಮೊದಲು ನಾವು ಅವರಿಗೆ ಸ್ಪಂದಸಬೇಕು. ನಮ್ಮ ಭಾಷೆ ,ನಮ್ಮೂರ ಜನರಿಗೆ ಸಹಾಯ ಮಾಡಿ ಅವರು ಕ್ಷಣ ನೆಮ್ಮದಿ ಅನುಭವಿಸಿದರೆ ಬೇಕಾದಷ್ಟು. ಅದನ್ನು ಬಿಟ್ಟು ನೇರವಾಗಿ ಕಾಣದ ಕೈಗಳಿಗೆ ಸಹಾಯ ಮಾಡುವುದು ಸೂಕ್ತ ಅನ್ನಿಸಿದರೆ ಎರಡನೆ ಆಯ್ಕೆಯಾಗಬೇಕು .
ಕೊಡುವ ಕೈ ಗೌಣವಾಗಿರಬೇಕು ಅನ್ನುವುದು ಈಗ ವ್ಯತಿರಿಕ್ತವಾಗಿದೆ ಸಹಾಯ ತೆಗೆದು ಕೊಳ್ಳುವವರು ಗೌಣವಾಗಿರುತ್ತಾರೆ ಸಹಾಯು ಮಾಡುವರು ಎಲ್ಲಾ ಜಾಲತಾಣಗಳಲ್ಲಿ ಪ್ರಚಾರ ಮಾಡಿಕೊಳ್ಳುತ್ತಾರೆ. ಹಾಗೆಯೇ ಸಾಮಾಜಿಕ ಕೆಲಸಗಳಲ್ಲಿಯೂ ಅವರ ಮನೆಯದ್ದೆ ಒಂದಷ್ಟು ಇರುತ್ತದೆ ಅದನ್ನು ಬಿಟ್ಟು ಊರಿನ ಬಗ್ಗೆ ಚಿಂತೆ ಮಾಡುವುದು ಯಾವಾಗಲೂ ಎರಡನೆ ಆಯ್ಕೆಯಾಗಿರಬೇಕು. ಮೊದಲು ನಮ್ಮ ಡೊಂಕುಗಳು ಇಂಗಿದ ಮೇಲೆ ಲೋಕದ ಕಾಳಜಿ ಮಾಡಿದರೆ ಚಿಂತಿಸುವವರು ಯಾರೂ ಇರಲಾರರು. ಇದೆ ಅಂತಃಸತ್ವವನ್ನು ಇರಿಸಿಕೊಂಡ ಮಾತು ಬಸವಣ್ಣನವರ ನೆರೆಮನೆಯವರ ದುಃಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲಸಂಗಮದೇವಾ ಎನ್ನುವುದು.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.