ಷೇರುಪೇಟೆಯ ಸೂಚ್ಯಂಕಗಳು ದಾಖಲೆಯ ಮಟ್ಟದಲ್ಲಿದ್ದು, ಅನೇಕ ಕಂಪನಿಗಳ ಷೇರುಗಳು ಗರಿಷ್ಠದಲ್ಲಿವೆ. ಇವುಗಳಲ್ಲಿ ಅಗ್ರಮಾನ್ಯ ಕಂಪನಿಗಳು ಸಹಜ ಸಾಧನೆಯುಳ್ಳ ಅನೇಕ ಕಂಪನಿಗಳೂ ಇವೆ. ಇನ್ನು ಕೆಲವು ಸಮಯದ ಪ್ರಭಾವದಿಂದ ಅಲಂಕಾರಿಕ ವಿಶ್ಲೇಷಣೆಗಳ ಪ್ರೇರಿತವಾಗಿ ಹೆಚ್ಚಿನ ಏರಿಕೆ ಕಂಡು ಅನೇಕ ಹೊಸ ಹೂಡಿಕೆದಾರರನ್ನು ಆಕರ್ಷಿಸುವುದೂ ಇದೆ. ಹಾಗಾಗಿ ಹೂಡಿಕೆ ಎಂದು ನಿರ್ಧರಿಸುವ ಸಂದರ್ಭದಲ್ಲಿ ಕಂಪನಿಗಳ ಆಂತರಿಕ ಸಾಧನೆ, ಆ ಕಂಪನಿಯ ಉತ್ಮನ್ನಗಳಿಗಿರುವ ವರ್ತಮಾನ ಮತ್ತು ಭವಿಷ್ಯದ ಪರಿಸ್ಥಿತಿಗಳು, ಪೇಟೆಯ ವಾತಾವರಣ, ಕಂಪನಿಯ ಆಡಳಿತ ಮಂಡಳಿಗಳ ಹೂಡಿಕೆದಾರರ ಸ್ನೇಹಿ ಗುಣದಂತಹ ವಿವಿಧ ಅಂಶಗಳನ್ನು ಗಮನಿಸಿ ಹೂಡಿಕೆಯ ಯೋಗ್ಯತಾಮಟ್ಟವನ್ನು ಮಾಪನ ಮಾಡಿ ನಿರ್ಧರಿಸಿದಲ್ಲಿ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಬಹುದಾಗಿದೆ. ಈಗ ಪೇಟೆಗಳು ಗರಿಷ್ಠ ಹಂತದಲ್ಲಿರುವುದರಿಂದ ಅನೇಕ ಅಗ್ರಮಾನ್ಯ ಕಂಪನಿಗಳು ಏರಿಕೆ ಮತ್ತು ಇಳಿಕೆಗಳ ಚಕ್ರದೊಳಗೆ ಸಿಲುಕಿ ಚಕ್ರಾಕಾರದಲ್ಲಿ ಚಲಿಸುತ್ತಿವೆ.
ಉದಾಹರಣೆಗೆ 21 ನೇ ಸೋಮವಾರದಂದು ಸೆನ್ಸೆಕ್ಸ್ 518 ಪಾಯಿಂಟುಗಳ ಇಳಿಕೆ ಕಂಡಿತು ಅಂದು ರಿಲಯನ್ಸ್ ಇಂಡಸ್ಟ್ರೀಸ್ ಸೆನ್ಸೆಕ್ಸ್ ಗೆ 231 ಪಾಯಿಂಟುಗಳ ಇಳಿಕೆ ಕೊಟ್ಟಿತು. 22 ನೇ ಮಂಗಳವಾರದಂದು 43 ಪಾಯಿಂಟುಗಳ ಏರಿಕೆಯನ್ನು, ಬುಧವಾರ 23 ರಂದು 23 ಪಾಯಿಂಟುಗಳ ಇಳಿಕೆಯನ್ನು ಕಂಡರೆ, ಗುರುವಾರ 24 ರಂದು 79 ಪಾಯಿಂಟುಗಳ ಏರಿಕೆಯನ್ನು ಪಡೆಯಿತು. ಶುಕ್ರವಾರ 25 ರಂದು 104 ಪಾಯಿಂಟುಗಳ ಏರಿಕೆಯನ್ನು ಕಂಡಿದೆ. ಒಟ್ಟಾರೆ ವಾರದ ಬದಲಾವಣೆ 28 ಪಾಯಿಂಟುಗಳ ಇಳಿಕೆ. ಇದಕ್ಕೆ ವಾರದುದ್ದಕ್ಕೂ ವೈವಿಧ್ಯಮಯ ಕಾರಣಗಳ ಲೇಪನದಿಂದ ಏರಿಳಿತಗಳುಂಟಾಗಿ ಚಟುವಟಿಕೆ ಭರಿತವಾಗುವಂತಾಯಿತು.
ಹೀಗೆಯೇ ಹೆಚ್ ಡಿ ಎಫ್ ಸಿ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್, ಲಾರ್ಸನ್ ಅಂಡ್ ಟೋಬ್ರೋ ದಂತಹ ಕಂಪನಿಗಳು ಏರಿಳಿತಗಳನ್ನು ಪ್ರದರ್ಶಿಸಿ ಅನೇಕರಿಗೆ ಅಲ್ಪಕಾಲೀನ ಲಾಭ ಗಳಿಸಿಕೊಡುವ ಅವಕಾಶಗಳನ್ನು ಒದಗಿಸಿವೆ. ಆಕ್ಸಿಸ್ ಬ್ಯಾಂಕ್ ಷೇರು ವಾರ್ಷಿಕ ಗರಿಷ್ಠದಲ್ಲಿದ್ದಾಗ, ನವೆಂಬರ್ 1 ರಂದು ಸುಮಾರು ರೂ.900 ರ ಸಮೀಪವಿತ್ತು, ಕೇಂದ್ರ ಸರ್ಕಾರ ತಾನು ಹೊಂದಿರುವ SUUTI ಷೇರುಗಳನ್ನು ಅಂದರೆ ಶೇ.1.55 ರಷ್ಟನ್ನು ರೂ.830.63 ರ ಕನಿಷ್ಠಬೆಲೆಯ ಆಧಾರದ ಮೇಲೆ ಆಫರ್ ಫಾರ್ ಸೇಲ್ ಮೂಲಕ ಷೇರುವಿನಿಮಯ ಕೇಂದ್ರಗಳ ಮೂಲಕ ಮಾರಾಟಮಾಡುವ ಅಂಶ ಹೊರಬಿದ್ದು ನವೆಂಬರ್ 10, 11 ರಂದು ಮಾರಾಟಮಾಡಿತು. ಶೇ.1.55 ಅಂದರೆ 4,65,34,903 ಷೇರುಗಳಾಗುತ್ತವೆ. ಈ ಪ್ರಮಾಣದ ಷೇರುಗಳು ಪೇಟೆ ಪ್ರವೇಶಿಸುವುದರಿಂದ ಹರಿದಾಡುವ ಷೇರುಗಳ ಪ್ರಮಾಣ ಹೆಚ್ಚಾಗಿ ಪೂರೈಕೆಗೆ ತಕ್ಕಂತೆ ಬೇಡಿಕೆ ಇರದ ಕಾರಣ ಷೇರಿನ ಬೆಲೆಯಲ್ಲಿ ಕುಸಿತ ಉಂಟಾಗಿ ರೂ.841 ರವರೆಗೂ ಕುಸಿಯುವಂತಾಯಿತು. ಆದರೆ ಬ್ಯಾಂಕಿನ ಷೇರಿನ ಬೆಲೆ ರೂ.841 ರವರೆಗೂ ಕುಸಿದರೂ ಭಾರಿ ಪ್ರಮಾಣದ Value pick ಆಧಾರಿತ ಖರೀದಿಯ ಕಾರಣ ಷೇರಿನ ಬೆಲೆ ಪುಟಿದೆದ್ದು 25 ರಂದು ಶುಕ್ರವಾರ ರೂ.891 ರ ಗರಿಷ್ಠ ತಲುಪಿ ರೂ.887 ರ ಸಮೀಪ ಕೊನೆಗೊಂಡಿದೆ. ಈ ಅಂಶಗಳು ಪೇಟೆಯಲ್ಲಿ ನಡೆಯುವ ಏರಿಳಿತಗಳು ಒದಗಿಸುವ ಅವಕಾಶಗಳಿಗೆ ಹಿಡಿದ ಕನ್ನಡಿಯಾಗಿದೆ.
Value pick ಚಟುವಟಿಕೆಗೆ ಮತ್ತೊಂದು ಉದಾಹರಣೆ ಎಂದರೆ ರೆಡಿಂಗ್ಟನ್ ಲಿಮಿಟೆಡ್ ಕಂಪನಿ. ಈ ಕಂಪನಿ ಹಿಂದಿನ ವರ್ಷದ ಆಗಷ್ಟ್ ನಲ್ಲಿ ಒಂದು ಷೇರಿಗೆ ಒಂದರಂತೆ (1:1 ರ ಅನುಪಾತ) ಬೋನಸ್ ಷೇರು ವಿತರಿಸಿದ್ದಲ್ಲದೆ, ಈ ವರ್ಷದ ಜುಲೈನಲ್ಲಿ ಪ್ರತಿ ಷೇರಿಗೆ ರೂ.6.60 ರ ಲಾಭಾಂಶ ವಿತರಿಸಿದೆ. ಸೆಪ್ಟೆಂಬರ್ 2022 ರ ಫಲಿತಾಂಶ ಉತ್ತಮವಾಗಿದ್ದ ಕಾರಣ ನಿರಂತರ ಚಟುವಟಿಕೆಗೊಳಗಾಗಿ, ಕಳೆದ ಒಂದು ತಿಂಗಳಿನಲ್ಲಿ ರೂ.135 ರ ಸಮೀಪದಿಂದ ರೂ.183 ರ ವರೆಗೂ ಪುಟಿದೆದ್ದಿದೆ. ಒಂದು ವಾರದಲ್ಲಿ ರೂ.165 ರ ಸಮೀಪದಿಂದ ರೂ.183 ರ ವರೆಗೂ ಚೇತರಿಕೆ ಕಂಡಿರುವುದು ಉತ್ತಮ ಲಾಭ ಗಳಿಕೆಯ ಅವಕಾಶವಲ್ಲವೇ?
ಕಳೆದ ಒಂದು ವರ್ಷದಲ್ಲಿ ರೂ.1,800 ರ ಸಮೀಪದಿಂದ ರೂ.440 ರೂಪಾಯಿಗಳಿಗೆ ಕುಸಿದದ್ದಾಗಲಿ, ರೂ.1,330 ರಿಂದ ರೂ.360 ಕ್ಕೆ ಜಾರಿದ್ದಾಗಲಿ, ಕೆಲವು ತಿಂಗಳುಗಳಲ್ಲೇ ರೂ.700 ನ್ನು ದಾಟಿದ ಕಂಪನಿ ಷೇರು ರೂ.320 ಕ್ಕೆ ಇಳಿಯುವಂತಹ ಉದಾಹರಣೆಗಳಿರುವ ಸಂದರ್ಭದಲ್ಲಿ ಹೂಡಿಕೆ ಸುರಕ್ಷತೆಗೊಳಸುವಂತಹ ಚಟುವಟಿಕೆಗೆ ಆಧ್ಯತೆ ನೀಡಿದಲ್ಲಿ ಹೂಡಿಕೆ ನೆಮ್ಮದಿ ಮೂಡಿಸಲು ಸಾಧ್ಯ. ಕೇವಲ ಪ್ರಚಾರಿಕ ಅಂಶಗಳಿಗೆ ಪ್ರಾಶಸ್ತ್ಯ ನೀಡುವುದಕ್ಕಿಂತ ಆಂತರಿಕ ಅಂಶಗಳನ್ನೂ ಆಧರಿಸಿ ನಿರ್ಧರಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಹಾಗಾಗಿ ಹೂಡಿಕೆಯನ್ನು ಅರಿತು ನಿರ್ಧರಿಸಿರಿ- ಅನುಸರಿಸಬೇಡಿ.
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.