BENGALURU DEC 5
ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳು ಜ್ಞಾನಮಾರ್ಗದಲ್ಲೇ ಬೆಳೆದುಕೊಂಡು ಬಂದಿದ್ದು, ನಮ್ಮ ವಿದ್ಯಾರ್ಥಿ ಸಮುದಾಯ ಕೂಡ ಈ ಉನ್ನತ ಮಾರ್ಗದಲ್ಲೇ ಸಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣವೊಂದೇ ಮಾರ್ಗವಾಗಿದ್ದು, ಇದಕ್ಕೆ ಯಾವುದೇ ಅಡ್ಡಹಾದಿಗಳಿಲ್ಲ ಎನ್ನುವುದನ್ನು ಮನಗಾಣಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಚಿತ್ರನಟ ದ್ವಾರಕೀಶ್, ಅಮೆರಿಕದ ಕನ್ನಡ ಸಂಘಟನೆಗಳ ಒಕ್ಕೂಟದ ಡಾ.ಅಮರನಾಥ್ ಗೌಡ ಮತ್ತು ಕಲಾವಿದ ಟಿ.ಅನಿಲ್‌ಕುಮಾರ್ ಅವರಿಗೆ ಗೌರವ ಡಾಕ್ಟೊರೇಟ್ ಪ್ರದಾನ ಮಾಡಲಾಯಿತು. ಜತೆಗೆ 300 ಚಿನ್ನದ ಪದಕ, 73 ನಗದು ಬಹುಮಾನ ಮತ್ತು 257 ಪಿಎಚ್.ಡಿ. ಪದವಿಗಳನ್ನು ಕೊಡಲಾಯಿತು. ಅಲ್ಲದೆ, 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಗೆ ಪಾತ್ರರಾದರು.
21ನೇ ಶತಮಾನವು ಜ್ಞಾನದ ಯುಗವಾಗಿದೆ. 13೦ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಸಮಸ್ಯೆಗಳಾ ಭಾಗವಾಗುವುದು ಮತ್ತು ವ್ಯವಸ್ಥೆಯನ್ನು ದೂಷಿಸುವುದು ಯಾರಿಗೇ ಆದರೂ ತುಂಬಾ ಸುಲಭವಾಗಿದೆ. ಆದರೆ, ವಿದ್ಯಾರ್ಥಿಗಳು ಸಮಸ್ಯೆಯ ಭಾಗವಾಗದೆ ಪರಿಹಾರ ಕ್ರಮಗಳ ಭಾಗವಾಗಬೇಕು. ಆಗಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಕರೆ ಕೊಟ್ಟರು.
ಒಳ್ಳೆಯ ಸಮಾಜ ನಿರ್ಮಾಣದ ಹೊಣೆಗಾರಿಕೆಯು ಕಲಿಕೆಯ ಭಾಗವಾಗಬೇಕು ಎಂಬ ಉದ್ದೇಶದಿಂದಲೇ ಎನ್‌ಇಪಿ ಜಾರಿಗೆ ತರಲಾಗಿದೆ. ಇದನ್ನು ಈಗಾಗಲೇ ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಅಂತಿಮವಾಗಿ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಗಳ ಭಾಗವಾಗಬೇಕು. ಈ ವಿಷಯದಲ್ಲಿ ಸಾಧಿಸಬೇಕಾದ್ದು ಇನ್ನೂ ಬಹಳಷ್ಟಿದೆ ಎಂದು ಅವರು ಎಚ್ಚರಿಸಿದರು.
ಅಮೆರಿಕದಂತಹ ದೇಶವು ಜಾಗತಿಕ ಮಟ್ಟದಲ್ಲಿ ಬಲಾಢ್ಯವಾಗಲು ಅಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೇ ಕಾರಣ. ನಮ್ಮಲ್ಲಿ ಕೇವಲ ವೈಯಕ್ತಿಕ ಸಾಧನೆಯ ಕಡೆಗೆ ಗಮನವಿದೆಯೇ ವಿನಾ ಸಾಂಘಿಕ ಪ್ರಯತ್ನಗಳಿಗೆ ಆದ್ಯತೆ ಕೊಟ್ಟಿಲ್ಲ. ಈ ಕೊರತೆಯನ್ನು ನಿವಾರಿಸುವತ್ತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದಾಪುಗಾಲಿಡುತ್ತಿದೆ. ಇದರ ಭಾಗವಾಗಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನ ಅಳವಡಿಕೆಯ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆಯುತ್ತಿವೆ ಎಂದು ಅವರು ವಿವರಿಸಿದರು.
ಉನ್ನತ ಶಿಕ್ಷಣ ವಲಯವು ಸ್ವತಂತ್ರ, ಸ್ವಾವಲಂಬಿ, ಉತ್ತರದಾಯಿ ಮತ್ತು ಪಾರದರ್ಶಕವಾಗಿರಬೇಕು. ಈ ಮಹೋದ್ದೇಶಗಳೊಂದಿಗೆ ಸಾಕಷ್ಟು ಸುಧಾರಣೆಗಳನ್ನು ಕಳೆದ ಮೂರು ವರ್ಷಗಳಲ್ಲಿ ತರಲಾಗಿದೆ. ಈಗ ಮುಂದುವರಿದ ಭಾಗವಾಗಿ ಇಡೀ ತಿಂಗಳು ‘ಸುಶಾಸನ ಮಾಸ’ವನ್ನು ಆಚರಿಸಲಾಗುತ್ತಿದೆ. ನಮ್ಮ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಎಲ್ಲೋ ಪ್ರತ್ಯೇಕವಾಗಿ ಕೆಲಸ ಮಾಡುವುದರ ಬದಲು ಸಮಾಜದಲ್ಲಿರುವ ಪರಿಣತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ರಚನಾತ್ಮಕ ಪ್ರಗತಿಯ ಹಿರಿಮೆಯನ್ನು ಸಾಧಿಸಬೇಕು ಎಂದು ಸಚಿವರು ಪ್ರತಿಪಾದಿಸಿದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವೇ ನಮ್ಮ ಬದುಕಿನ ಶಿಲ್ಪಿಗಳಾಗಬೇಕು. ಇದು ಸಾಧ್ಯವಾಗಬೇಕೆಂದರೆ ಉನ್ನತಿ ಮತ್ತು ಉತ್ಕೃಷ್ಟತೆಗಳ ಕಡೆಗೆ ವಿದ್ಯಾರ್ಥಿಗಳು ತುಡಿತ ಬೆಳೆಸಿಕೊಳ್ಳಬೇಕು. ಈ ಜ್ಞಾನದ ಯುಗದಲ್ಲಿ ಬೆಂಗಳೂರು ನಗರವು ದೇಶದ ನಂಬರ್ ಒನ್ ನಗರವಾಗಿದ್ದು, ಜಾಗತಿಕ ಸ್ತರದಲ್ಲಿ 24ನೇ ಸ್ಥಾನವನ್ನು ಅಲಂಕರಿಸಿದೆ. ಇಲ್ಲಿರುವ ಉಜ್ವಲ ಅವಕಾಶಗಳನ್ನು ವಿದ್ಯಾರ್ಥಿಗಳು ತಮ್ಮ ಮತ್ತು ಸಮುದಾಯದ ಯಶಸ್ಸಿಗೆ ಬಳಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಎನ್‌ಇಪಿಯಿಂದ ಭಾರತ ವಿಶ್ವಗುರು
ಘಟಿಕೋತ್ಸವ ಭಾಷಣ ಮಾಡಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ಜಗದೀಶ್‌ಕುಮಾರ್, “ಲಭ್ಯತೆ, ಕೈಗೆಟುಕುವಿಕೆ, ಗುಣಮಟ್ಟ, ಸಮಾವ ಅವಕಾಶ ಮತ್ತು ಉತ್ತರದಾಯಿತ್ವ ಎನ್ನುವ ಐದು ಅಂಶಗಳೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಧಾರಸ್ತಂಭಗಳಾಗಿವೆ. ಇದರ ಆಧಾರದ ಮೇಲೆ ಪ್ರಧಾನಿ ಮೋದಿಯವರ ಆಶಯದಂತೆ ಭಾರತವು ವಿಶ್ವಗುರುವಾಗುತ್ತ ಮುಂದಡಿ ಇಟ್ಟಿದೆ” ಎಂದರು.
ಆತ್ಮಶೋಧನೆಯೇ ಕಲಿಕೆಯ ಅಂತಿಮ ಗುರಿಯಾಗಿದೆ. ಇದರ ಜತೆಗೆ ನಿರಂತರ ಕಲಿಕೆ ಕೂಡ ಸಾಧ್ಯವಾಗಬೇಕು. ನಮ್ಮಲ್ಲಿ ಉದ್ಭವಿಸುವ ಪ್ರಶ್ನೆ ಮತ್ತು ಜಿಜ್ಞಾಸೆಗಳು ಕೂಡ ಉನ್ನತ ಮಟ್ಟದ್ದಾಗಿದ್ದಾಗ ಮಾತ್ರ ಅದಕ್ಕೆ ತಕ್ಕ ಗುಣಮಟ್ಟದ ಉತ್ತರ ದೊರೆಯುವುದು ಸಾಧ್ಯವಾಗಲಿದೆ ಎಂದು ಅವರು ನುಡಿದರು.
ನಮ್ಮಲ್ಲಿ ಈಗ ಜನಸಂಖ್ಯೆಯ ಸರಸಾರಿ ವಯಸ್ಸು 29ರಷ್ಟಿದೆ. ಇದು ಸಾಧನೆಗೆ ಹೇಳಿಮಾಡಿಸಿದಂತಹ ವಾತಾವರಣವನ್ನು ಸೃಷ್ಟಿಸಿದೆ. ಭಾರತವು ಜ್ಞಾನಾಧಾರಿತ ಸಮಾಜವಾದರೆ ಮಾತ್ರ ವಿಶ್ವ ಮಟ್ಟದಲ್ಲಿ ಪ್ರತಿಷ್ಠಾಪಿತವಾಗಬಹುದಷ್ಟೆ. ಇದು ಸಾಕಾರಗೊಳ್ಳಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಆದ್ಯತೆಗಳು ಆಮೂಲಾಗ್ರವಾಗಿ ಬದಲಾವಣೆಗೆ ತೆರೆದುಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಎನ್‌ಇಪಿ ಒಂದು ದಿಟ್ಟ ನಿರ್ಧಾರವಾಗಿದೆ. ಅತ್ಯಂತ ಚಾರಿತ್ರಿಕವಾಗಿರುವ ಈ ನೀತಿಯಿಂದಾಗಿ, ದೇಶದ ಶಿಕ್ಷಣ ಕ್ಷೇತ್ರವು ಹೊಸತನಕ್ಕೆ ಮತ್ತು ದೇಶಕ್ಕೆ ಅಗತ್ಯವಾದ ಶೈಕ್ಷಣಿಕ ದೃಷ್ಟಿಕೋನಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಉದ್ಯೋಗಾವಕಾಶಗಳ ಜತೆಗೆ ಸಂಶೋಧನೆ ಮತ್ತು ಜ್ಞಾನದಾಹದ ಸೃಷ್ಟಿ ಇದರಿಂದ ಸಾಧ್ಯವಾಗಲಿದ್ದು, ಎನ್‌ಇಪಿ ಪರಿಪೂರ್ಣ ದೃಷ್ಟಿಕೋನದೊಂದಿಗೆ ಇವೆಲ್ಲವನ್ನೂ ಅಳವಡಿಸಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಮತ್ತು ಕುಲಾಧಿಪತಿಗಳಾದ ಥಾವರಚಂದ್ ಗೆಹಲೋಟ್, ಬೆಂಗಳೂರು ವಿವಿ ಕುಲಪತಿ ಡಾ.ಎಸ್ ಎಂ ಜಯಕರ್, ಕುಲಸಚಿವರಾದ ಪ್ರೊ.ಜೆ ಟಿ ದೇವರಾಜ್ ಮತ್ತು ಎನ್ ಮಹೇಶ್ ಬಾಬು ಮುಂತಾದವರು ಉಪಸ್ಥಿತರಿದ್ದರು.