ಸುಮಾವೀಣಾ
ಆರಾಧ್ಯಂ ನ ಪ್ರಕೋಪಯೇತ್-ಶಕ್ತಿ ಕವಿ ರನ್ನ ಬರೆದಿರುವ ‘ಗದಾಯುದ್ಧ’ದ ‘ಸಂಜಯ ವಚನ’ದಿಂದ ಪ್ರಸ್ತುತ ವಾಕ್ಯವನ್ನು ಆರಿಸಿದೆ. ನಾವು ಯಾರನ್ನು ಆರಾಧಿಸುತ್ತೇವೆಯೋ ಅವರ ಮೇಲೆ ಕೋಪಿಸಿಕೊಳ್ಳಬಾರದು ಅನ್ನುವ ಅರ್ಥ ಬರುತ್ತದೆ . ಇದೊಂದು ದಾಕ್ಷಿಣ್ಯದ ಸನ್ನಿವೇಶ . ನಮ್ಮ ಪ್ರೀತಿ ಪಾತ್ರರ ಮೇಲೆ ಕೋಪ ಮಾಡಿಕೊಳ್ಳಲು ಏನೋ ಕಷ್ಟ . ಅದು ಮನಸ್ಸಿಗೆ ಹಿಡಿಸದ ವಿಚಾರ. ಅವರು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದ ಬಳಿಕವೂ ಅವರು ನೊಂದು ಕೊಲ್ಲುತ್ತಾರೆ ಅನ್ನುವ ಕಾರಣಕ್ಕೆ ಆ ತಪ್ಪುಗಳನ್ನು ಮನ್ನಿಸಿಬಿಡುವ ಸನ್ನಿವೇಶ ಎಷ್ಟೋ ಬಾರಿ ಎದುರಾಗುತ್ತದೆ. ಇಲ್ಲಿ ಈ ಸನ್ನಿವೇಶದಲ್ಲಿ ಇಂಥ ಇಕ್ಕಟ್ಟಿನ ಪರಿಸ್ಥಿತಿಯನ್ನು ಸಂಜಯ ಎದುರಿಸುತ್ತಾನೆ. ದುರ್ಯೋಧನನ ತಪ್ಪುಗಳನ್ನು ಆದಷ್ಟು ತಿದ್ದುವ ಪ್ರಯತ್ನ ಮಾಡುತ್ತಾನೆ ಅವನಿಂದ ಕೋಪದ ಪ್ರತಿಕ್ರಿಯೆ ಬಂದ ಬಳಿಕ “ಆರಾಧ್ಯಂ ನ ಪ್ರಕೋಪಯೇತ್” ಅನ್ನುವ ಮಾತನ್ನು ತನ್ನಂತರ್ಗತದಲ್ಲಿ ಹೇಳುತ್ತಾನೆ.
ಅದರೆ ಈ ಮಾತು ಮಕ್ಕಳ ಬೆಳವಣಿಗೆಯ ವಿಚಾರದಲ್ಲಿ ನಿಷಿದ್ಧ ಎಂದೇ ಹೇಳಬಹುದು . ತೀಕ್ಷ್ಣ ಪ್ರತಿಕ್ರಿಯೆಗಳನ್ನು ಕೊಡಬೇಕಾಗುತ್ತದೆ ಅದರಿಂದ ಮಕ್ಕಳ ಕಲಿಕಾ ಪ್ರಗತಿಯಾಗುತ್ತದೆ. ಇಲ್ಲವಾದರೆ ಅವರ ಕಲಿಕೆಗೆ ಮಾರಕವಾಗುತ್ತದೆ. ಇದೊಂದು ಸಂದಿಗ್ಧತೆಯನ್ನು ಹೇಳುವ ಮಾತಾಗಿದೆ. ಬೈದು ಹೇಳುವವರು ಬದುಕುವುದಕ್ಕೆ ಎಂಬುದು ಹಳೆಯ ಮಾತಾದರೂ ಸಾರ್ವಕಾಲಿಕವಾದದ್ದು.
‘ಕಯ್ಪೆ ಸೋರೆಯ ಕುಡಿಯೇಂ ಮಿಡಿಯೇಂ’ ಸಂಜಯ ವಚನದಲ್ಲಿ ಬರುವ ಮಾತು ತಂದೆಯಂತೆ ಮಗ ಕಹಿ ಸೋರೆಯ ಕುಡಿಯೇನು? ಕಾಯೇನು ಎಲ್ಲವೂ ಒಂದೇ ರುಚಿಯನ್ನು ಕೊಡುತ್ತದೆ ಇದರಲ್ಲೇನು ವಿಶೇಷ. ಜನ್ಮತಃ ಬಂದ ಕೆಲವು ಗುಣಗಳನ್ನು ಯಾರಿಂದಲೂ ಬದಲಾಯಿಸಲು ಸಾದ್ಯವಿಲ್ಲ. ಹುಟ್ಟು ಗುಣ ಎನ್ನುತ್ತಾರಲ್ಲ ಹಾಗೆ ಗುಣಾವಗುಣಂಗಳು ಹುಟ್ಟನ್ನೇ ಅವಲಂಬಿಸಿರುತ್ತವೆ ಅದರ ಬದಲಾವಣೆ ಕಷ್ಟ ಎನ್ನುವುದು ಇಲ್ಲಿ ವೇದ್ಯವಾಗುತ್ತದೆ.
ಹುಟ್ಟಿನಿಂದ ಬಂದ ಗುಣಕ್ಕೆ ತದ್ವಿರುದ್ಧ ಗುಣವನ್ನು ಆಶಿಸುವುದು ತಪ್ಪು ಸ್ವಾಭಾವಿಕ ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಇಲ್ಲಿ ದುರ್ಯೋಧನ ಹತಾಶೆಯಿಂದ ಈ ಮಾತುಗಳನ್ನು ಹೇಳಿರುವಂತಿದೆ.ಎಲ್ಲರೂ ಸಹಾಯಮಾಡುವರೆಂಬ ನಿರೀಕ್ಷೆಯಲ್ಲಿರುತ್ತಾನೆ ಆದರೆ ಯಾರೊಬ್ಬರೂ ಪೂರಕವಾಗಿ ಸ್ಪಂದಿಸದೆ ಇದ್ದಾಗ ಇನ್ನು ಯಾರೂ ಸಹಾಯ ಮಾಡಲಾರರು ಅನ್ನುವ ನಿರಾಶೆ ಇಲ್ಲಿರುವುದನ್ನು ನೋಡಬಹುದು.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.