MYSURU DEC 30
ಇಡೀ ದೇಶ ಸ್ವಲ್ಪವಾದರೂ ಲವಲವಿಕೆಯನ್ನು ಮರಳಿ ಪಡೆಯುತ್ತಿರುವ ಈ ಹೊತ್ತಿನಲ್ಲಿ ಕೋವಿಡ್‌ನ ಮತ್ತೊಂದು ತಳಿ ಮತ್ತೆ ಸದ್ದು ಮಾಡುತ್ತಿರುವುದು ಆತಂಕಕಾರಿ. ಹೀಗಾಗಿ ಇಡೀ ದೇಶವನ್ನು ಎಲ್ಲಾ ನೆಲೆಗಳಿಂದಲೂ ಕಾಪಾಡಿಕೊಳ್ಳಬೇಕಾದ ಹೊಣೆ ಸರಕಾರದ ಮೇಲಿದೆ. ಎಂದು ಯುವ ಉದ್ಯಮಿ, ಚಿಂತಕಿ ಡಾ. ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಗೋಷ್ಠಿಯಲ್ಲಿ ಅವರು ಮಾತನಾಡಿದರು.
ಓಮೈಕ್ರಾನ್ ನ ಹೊಡೆತದಿಂದ ದೇಶದ ಜನತೆ ಮತ್ತೆ ತತ್ತರಿಸದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಓಮೈಕ್ರಾನ್ BF 7 ಚೀನಾದಲ್ಲಿ ಸದ್ದು ಮಾಡುತ್ತಿದ್ದಂತೆ ದೇಶದಲ್ಲಿ ಕೆಲವು ಪೂರ್ವನಿಯೋಜಿತಕ್ರಮಗಳ ಬಗೆಗೆ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಈ ನಿಟ್ಟಿನಲ್ಲಿ ಸರಕಾರದ ಕೆಲವು ನಡೆಗಳು ನಮ್ಮ ಮುಂದಿವೆ. ಆಸ್ಪತ್ರೆಗಳು ತಮ್ಮ ಸೇವೆಗೆ ಸನ್ನದ್ಧಗೊಂಡಿವೆ ಎನ್ನುವುದು ಸಮಾಧಾನಕರ.
ಆದರೆ “ಏರ್ ಪೋರ್ಟ್‌ಗಳಲ್ಲಿ ಚೈನಾದಂಥ ದೇಶಗಳಿಂದ ಬರುವ ಪ್ರಯಾಣಿಕರಿಗೆ ಏರ್ ಸುವಿಧಾ ಪೋರ್ಟಲ್ ಕಡ್ಡಾಯಗೊಳಿಸುವ ಬಗ್ಗೆ ಸರಕಾರ ಯೋಜನೆ ರೂಪಿಸಿದೆ” ಎಂದು ಇಂದಿನ ಪತ್ರಿಕಾ ವರದಿಯಿದೆ. ಇದು ಸ್ವಾಗತಾರ್ಹ. ಕುರಿತು ಕಡ್ಡಾಯ ನಿಯಮಗಳನ್ನು ಈಗಾಗಲೇ ರೂಪಿಸಿರಬೇಕಿತ್ತು. ಆದರೆ ಇನ್ನೂ ಏರ್ ಸುವಿಧಾ ಪೋರ್ಟಲ್ ಕಡ್ಡಾಯಗೊಳಿಸಿಲ್ಲ. ಹೀಗಾಗಿ ತಕ್ಷಣವೇ ಅಂತರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಏರ್ ಸುವಿಧಾ ಪೋರ್ಟಲ್ ನ್ನು ತಕ್ಷಣ ಜಾರಿಗೆ ತರಬೇಕಾಗಿದೆ ಎಂದರು.
ಕೋವಿಡ್ ನ ಹೊಸ ತಳಿಯ ಕುರಿತಂತೆ ಜನರಲ್ಲಿ ಈಗಿಂದಲೇ ಎಚ್ಚರ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಮಾಸ್ಕ್ ಧರಿಸುವಂತೆ ಅರಿವು ಮೂಡಿಸಬೇಕು. ಯಾವ ಕಾರಣಕ್ಕೂ ರೋಗವು ಅತಿಯಾದ ದುಷ್ಪರಿಣಾಮಗಳನ್ನು ಮೂಡಿಸುವವರೆಗೆ ಕಾಯುತ್ತಾ ಕೂರಬಾರದು. ಎಂದು ಅವರು ಮನವಿ ಮಾಡಿಕೊಂಡರು.
ಹಿಂದೆ ಸರಕಾರ ಮಾಡಿದ ಅವಾಂತರಗಳನ್ನು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲಿ ಎಂದು ಅವರು ಕೇಳಿಕೊಂಡರು. ಹಿಂದೆ ಮಾಡಿದ ಲಾಕ್ ಡೌನ್ ನ ಪರಿಣಾಮಗಳಿಂದ ಇನ್ನೂ ಜನ ಚೇತರಿಕೊಂಡಿಲ್ಲ. ಇನ್ನೂ ಕೆಲವೆಡೆ ಈಗ ಲವಲವಿಕೆ ಮೂಡುತ್ತಿದೆ. ಆದ ಕಾರಣ ಮುಂದೆ ಎಂಥದ್ದೆ ಪರಿಸ್ಥಿತಿ ಬಂದರೂ ಲಾಕ್‌ಡೌನ್ ಮಾಡುವ ಪ್ರಯತ್ನವನ್ನು ಸರಕಾರ ಮಾಡದಿರಲಿ ಎಂದು ಅಭಿಪ್ರಾಯಿಸಿದರು. ಜನಸಾಮಾನ್ಯರು ಕಳೆದ ಲಾಕ್ಡೌನ್ ನಿಂದ ಬಹಳವಾದ ಆರ್ಥಿಕ ಹೊಡೆತಕ್ಕೆ ಒಳಗಾಗಿದ್ದಾರೆ. ಅದರಲ್ಲೂ ದಿನಾಕೂಲಿಕಾರರು, ಆಟೋ-ಟ್ಯಾಕ್ಸಿ ಚಾಲಕರು, ಹೋಟೇಲ್ ಉದ್ಯಮಿಗಳು, ತರಕಾರಿ ಮಾರುವವರು ಹೀಗೆ ಎಲ್ಲಾ ವರ್ಗದವರಿಗು ಲಾಕ್ಡೌನ್ ಬಹುವಾದ ಹೊಡೆತ ನೀಡಿದೆ. ಆದ ಕಾರಣ ಸರಕಾರ ಇಂಥ ನಿರ್ಧಾರಗಳಿಗೆ ಒತ್ತು ಕೊಡದೇ ರೋಗ ಪರಿಹಾರಕ್ಕೆ ವೈಜ್ಙಾನಿಕ ಮಾರ್ಗಗಳನ್ನು ಕಂಡುಕೊಳ್ಳಲಿ ಎಂದು ಹೇಳಿದರು.
ಈ ಹೊತ್ತಿನಲ್ಲಿ ಮಾಧ್ಯಮಗಳು ಜನಸಾಮಾನ್ಯರಲ್ಲಿ ಆತಂಕ ಹರಡದಂತೆ ಜವಾಬ್ದಾರಿ ಕಾಯ್ದುಕೊಳ್ಳಬೇಕಾಗಿದೆ. ನಾಗರಿಕರೂ ಕೂಡ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಜನರೂ ರೋಗ ಬರದ ಹಾಗೆ ಮುನ್ನೆಚ್ಚರಿಕೆ ಕಾಯ್ದುಕೊಳ್ಳಲಿ ಎಂದರು.