21.3 C
Karnataka
Tuesday, December 3, 2024

    ಅಪಾತ್ರರಿಗೆ ದಾನ ಮಾಡುವುದಕ್ಕಿಂತ  ನಿಜಕ್ಕೂ ಅವಶ್ಯಕತೆ ಇರುವವರಿಗೆ ದಾನ ಮಾಡಬೇಕು

    Must read

    ಸುಮಾವೀಣಾ

    ಸೊಡರೆಣ್ಣೆ ತೀರಿದರೆ ಕೊಡನೆತ್ತಿ  ಹೊಯ್ಯುವರೆ-  ನೀಡುವ ದಾನ ಹೇಗಿರಬೇಕು?ಉಚಿತವಾಗಿರಬೇಕು! ನಮ್ಮಳತೆಯನ್ನು ಮೀರಬಾರದು!   ಎಂದು ಹೇಳುವಾಗ ಸರ್ವಜ್ಞ ಕೊಡುವ   ಅನನ್ಯ ರೂಪಕವನ್ನು  ಇಲ್ಲಿ ಗಮನಿಸಬಹುದು.  ಆ ವಚನದ ಪೂರ್ಣ ಪಾಠ ಹೀಗಿದೆ…..

     ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೆ?

    ಕೊಡಬೇಡ,ಕೊಡದೆ ಇರಬೇಡ ಧರ್ಮವನು

    ಬಿಡಬೇಡವೆಂದ ಸರ್ವಜ್ಞ

     ದೀಪದ  ತೈಲ ತೀರಿದರೆ ದೀಪವೆಷ್ಟು ಹಿಡಿಸುತ್ತದೆಯೋ ಅದಷ್ಟೇ ತೈಲವನ್ನು ಹಾಕಲು ಸಾಧ್ಯ.   ಅದನ್ನು ಬಿಟ್ಟು ತೈಲ ತುಂಬಿದ  ಪಾತ್ರೆಯನ್ನೆ ಯಾರೂ ತೆಗೆದು ಹಾಕುವುದಿಲ್ಲ.  ಅಂತೆಯೇ  ನೀಡುವ ದಾನವೂ ನಮ್ಮ ಆಯದ ಚೌಕಟ್ಟಿನಲ್ಲಿ ಇರಬೇಕು.

    ಪ್ರಸ್ತುತ ವಚನದಲ್ಲಿ  ಕೊಡಬೇಡ, ಕೊಡದಿರಬೇಡ ಎನ್ನುವುದನ್ನು ಏಕಕಾಲಕ್ಕೆ ಹೇಳಿರುವುದು ವಚನದ ಸೊಗಸನ್ನು ಇಮ್ಮಡಿಸಿದೆ. ಅಪಾತ್ರರಿಗೆ ದಾನ ಮಾಡುವುದಕ್ಕಿಂತ  ನಿಜಕ್ಕೂ ಅವಶ್ಯಕತೆ ಇರುವವರಿಗೆ ದಾನ ಮಾಡಬೇಕೆಂಬ  ತಿಳಿವಿನ ಸಂಗಡ ನಿರಂತರ ಧರ್ಮ ಮಾರ್ಗವನ್ನೆ  ಅನುಸರಿಸಬೇಕು ಎನ್ನುವ  ವಿವೇಕವನ್ನೂ ಈ ವಚನ ಮನದಟ್ಟು  ಮಾಡಿಸುತ್ತದೆ.

    ನಾವು ಮಾಡುವ ಯಾವುದೇ ಕೆಲಸವೇ  ಆಗಿರಲಿ  ಅರ್ಥಬದ್ಧವಾಗಿರಬೇಕು ಹಾಕಿದ ಶ್ರಮ ಉಪಯೋಗಿಸಿಕೊಂಡ ಸಮಯ  ಪೋಲಾಗಬಾರದೆಂಬ ನಿಲುವನ್ನು ಇಲ್ಲಿ ಕಾಣಬಹುದಾಗಿದೆ. ಮುಗಿಲನ್ನು ಮುಟ್ಟಲು ಸಾಮಾನ್ಯನಿಗೆ ಸಾಧ್ಯವಿಲ್ಲ ತನ್ನ ಎಟುಕಿಗೆ ಎಷ್ಟು ಸಿಗುತ್ತದೆ ಅಷ್ಟನ್ನು ಮಾತ್ರ ಮುಟ್ಟಲು ಪ್ರಯತ್ನಿಸಬಹುದು.  ಅಂತೆಯೇ ಬೇಡಿಕೆ ಇರುವವರು ಬೇಡಿದಷ್ಟನ್ನು ನೀಡುವ  ಸಾಮರ್ಥ್ಯ  ಶ್ರೀಸಾಮಾನ್ಯನಿಗೆ ಇರಲು ಸಾಧ್ಯವೆ? ಖಂಡಿತಾ ಇಲ್ಲ . 

    ಅಂತೆಯೇ  ಇರುವಷ್ಟು ಮಿತಿಯಲ್ಲಿಯೇ ಉದಾರಿಯಾಗಬೇಕು.  ಮೊದಲು  ತಾನು, ತನ್ನ ಮನೆ  ನಂತರ ನೆರೆಹೊರೆಯವರ ಬಗ್ಗೆ ಯೋಚನೆ ಮಾಡುವುದು. ಇದನ್ನೆ ಹಿರಿಯರು ಮನೆಗೆದ್ದು ಮಾರುಗೆಲ್ಲು ಎನ್ನುವುದು. ತಮ್ಮ ಮಿತಿಯನ್ನು ದಾಟಿ ಮಾಡಿದ  ದಾನವನ್ನು ಸಾಮಾಜಿಕರು ನೆನಪಿನಲ್ಲಿಡುವುದೂ ಇಲ್ಲ   ಇದೇ ಕಾರಣಕ್ಕೆ  ಊರು ಉಪಕಾರವರಿಯದು ಹೆಣ ಶೃಂಗಾರವರಿಯದು ಎನ್ನುವ ಗಾದೆ  ರಚಿತವಾಗಿರುವುದು. ಅಂತೂ ದೀಪಕ್ಕೆ ಉಚಿತಕ್ಕೆ ತಕ್ಕಷ್ಟು ತೈಲವನ್ನು ಭರಿಸಬೇಕು ಎನ್ನಲು ಹೊರಟು ಧರ್ಮಮಾರ್ಗಿಯಾಗಬೇಕು ಎನ್ನುವಲ್ಲಿಯವರೆಗೆ ಅಲ್ಪದಕ್ಕಿಯೇ ಮಹತ್ಕೃತಿಯನ್ನು ವಿವರಿಸುವ  ಸರ್ವಜ್ಞನ ರೀತಿ   ಇಲ್ಲಿ ಶ್ಲಾಘನೀಯ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!