26.2 C
Karnataka
Thursday, November 21, 2024

    ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…

    Must read

    ಎಂ.ವಿ. ಶಂಕರಾನಂದ

    ನಾವೆಲ್ಲ ಚಿಕ್ಕ ಹುಡುಗರಾಗಿದ್ದಾಗ ನಮಗೆ ತಿಳಿದಿದ್ದ ಕೆಲವೇ ದೊಡ್ಡ ಹಬ್ಬಗಳಲ್ಲಿ ಯುಗಾದಿಯೂ ಒಂದು. ಯುಗಾದಿ ಇನ್ನೂ ಒಂದು ವಾರವಿದೆ ಎಂದಾಗ ಮನೆಯನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ, ಒಪ್ಪ ಓರಣಗೊಳಿಸಿಡಲಾಗುತ್ತಿತ್ತು. ಆಗ ಯುಗಾದಿ ಹಬ್ಬಕ್ಕೆ ಮಾತ್ರ ನಮಗೆ ಹೊಸಬಟ್ಟೆಯ ದರ್ಶನವಾಗುತ್ತಿತ್ತು. ಆಗ ನಮ್ಮ್ಮೂರಿನಲ್ಲಿದ್ದದು ವೆಂಕಟಾಚಲ ಶೆಟ್ಟಿ, ರತ್ನಯ್ಯ ಶೆಟ್ಟಿಯರ ಬಟ್ಟೆ ಅಂಗಡಿ ಮಾತ್ರ. ಜನರು ಅವರ ಅಂಗಡಿಯಲ್ಲಿ ಹಿಂದಿನ ವರ್ಷದ ಬಾಕಿ ಸಲ್ಲಿಸಿ, ಮತ್ತೆ ಹೊಸವರ್ಷಕ್ಕೆ ಬಟ್ಟೆಯನ್ನು ಖರೀದಿಸಿ, ಹೊಸ ಸಾಲವನ್ನು ಮಾಡುತ್ತಿದ್ದರು. ಆಗ ನಮ್ಮ ಸುತ್ತಮುತ್ತಲೆಲ್ಲಾ ಬಡತನವೇ ಇದ್ದುದರಿಂದ ನಮಗೆ ಅದೇನು ಹೊಸದೆಂದು ಅನಿಸುತ್ತಿರಲಿಲ್ಲ. ನಮ್ಮ ಜಮೀನಿನಲ್ಲೇ ಬೆಳೆದ ತೊಗರಿಕಾಳು ಒಬ್ಬಟ್ಟು ಮಾಡಲು ಬಳಕೆಯಾಗಿರುತ್ತಿತ್ತು. ಮಾಮೂಲಿ ಸೊಸೈಟಿ ಅಕ್ಕಿಯ ಅನ್ನ. ಕೆಲವರು ಹುರಳಿಕಾಳಿನ ಒಬ್ಬಟ್ಟು ಮಾಡುತ್ತಿದ್ದುದೂ ಉಂಟು. ಹಬ್ಬದ ದಿನ ಮೈಗೆಲ್ಲಾ ಎಣ್ಣೆಯನ್ನು ಹಚ್ಚಿಕೊಂಡು ಬಿಸಿಲಿನಲ್ಲಿ ಮೈಯೊಡ್ಡಿ ನಿಂತಾಗ, ಆಗ ರೇಡಿಯೋದಿಂದ ಈ ಕೆಳಗಿನ ಸುಶ್ರಾವ್ಯ ಗೀತೆ ಕೇಳಿಬರುತ್ತಿತ್ತು.

    “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
    ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…’’

    ಆಗೆಲ್ಲಾ ಈಗಿನಂತೆ ಕೇಬಲ್, ಡಿಜಿಟಲ್‌ಡಿಷ್‌ಗಳು ಇದ್ದ ಕಾಲವಲ್ಲ. ಇಡೀ ಊರಿನಲ್ಲೆಲ್ಲಾ ಹುಡುಕಿದರೆ ಕೇವಲ ಒಂದೋ, ಎರಡೋ ಮನೆಗಳಲ್ಲಿ ಮಾತ್ರ ಅದೂ ಕಪ್ಪುಬಿಳುಪಿನ ಟಿ.ವಿ. ಇರುತ್ತಿತ್ತು. ಹೀಗಾಗಿ ನಮ್ಮಂತಹ ಮಧ್ಯಮವರ್ಗದವರ ಪಾಲಿಗೇ ರೇಡಿಯೊನೇ ಸರ್ವಸ್ವವಾಗಿತ್ತು. ನಮಗೆಲ್ಲಾ ಆ ಹಾಡು ಯಾರು ಹಾಡುತ್ತಿದ್ದರೆ, ಯಾರು ಅದನ್ನು ಬರೆದಿದ್ದಾರೆ ಎಂಬುದು ಗೊತ್ತಿರುತ್ತಿರಲಿಲ್ಲ. ಶುದ್ಧ ಸಂಗೀತ ರಸಿಕರಂತೆ ಆ ಗೀತೆಯನ್ನೇ ಆಸ್ವಾದಿಸುತ್ತಿದ್ದವು.

    ಮುಂದೆ ನಾವು ಬೆಳೆಯುತ್ತಾ ಹೋದಂತೆ ಈ ಹಾಡು ನಮ್ಮ ವರಕವಿ ಬೇಂದ್ರೆಯವರು ಬರೆದದ್ದು, ಅದನ್ನು ಕುಲವಧು ಚಿತ್ರದಲ್ಲಿ ಎಸ್. ಜಾನಕಿಯವರ ಕಂಠಸಿರಿಯಲ್ಲಿ ಅಳವಡಿಸಿಕೊಂಡಿದ್ದು ಎಂದು ತಿಳಿದು ಬಂತು. ಯುಗಾದಿಯ ಸಂಭ್ರಮವನ್ನು ಹಿಡಿದಿಡುವ ಬಹಳ ಅಪರೂಪದ ಸಾರ್ವಕಾಲಿಕ ಗೀತೆಯಿದು. ಬೇಂದ್ರೆಯವರು ಯುಗಾದಿಯ ಮಹತ್ವ ಮತ್ತು ಉದ್ದೇಶವನ್ನು ಅತ್ಯದ್ಭುತವಾಗಿ ತಮ್ಮ ಈ ಕವನದ ಮೂಲಕ ವಿವರಿಸಿದ್ದಾರೆ.

    ಎಲ್ಲ ಜೀವಸೆಲೆಯೊಡನೆ ಆಗಮಿಸಿದ ವಸಂತ, ಅರಳಿ ನಿಂತ ಪ್ರಕೃತಿ, ಇಂಥ ವಸಂತದಲ್ಲಿ ಬಂದ ಯುಗಾದಿ ಸಂಭ್ರಮದ ಸಂವೇದನೆಯೊಡನೆ ಆರಂಭವಾಗುವ ಗೀತೆಯಲ್ಲಿ ಕಾಲ ಮತ್ತೆ ಮತ್ತೆ ಪ್ರಕೃತಿಯನ್ನು ಹೊಸದಾಗಿಸುತ್ತದೆ ಎನ್ನುವ ಕವಿ, ದೇವರ ಸೃಷ್ಟಿಯಾದ ಈ ಪ್ರಕೃತಿಗೆ ವರ್ಷಕ್ಕೊಂದು ಹೊಸ ಜನ್ಮವಾದರೆ ಅವನ ಸೃಷ್ಟಿಯೇ ಆದ ನಮಗೆ ಮಾತ್ರ ಒಂದೇ ಬಾಲ್ಯ, ಒಂದೇ ಹರೆಯ ಏಕೆ ಎಂದು ಪ್ರಶ್ನಿಸುತ್ತಾರೆ. ಕಾಲ ಪ್ರಕೃತಿಗೆ ಎಲ್ಲ ರೀತಿಯ ನವಚೈತನ್ಯವನ್ನು ತಂದಿದೆ, ಆದರೆ ನಮ್ಮನ್ನಷ್ಟೇ ಮರೆತಿದೆ ಎನ್ನುತ್ತಾರೆ.
    ಆದರೆ ನಾವು ಸಹ ನಮಗೆ ದೊರೆಯುವ ಪ್ರತಿ ಯುಗಾದಿಯನ್ನೂ ನಮಗೆ ಮೂಡಿ ಬಂದ ಪುರ್ನಜನ್ಮವೆಂದು ಭಾವಿಸಿ, ಅಪ್ರಿಯವಾದ ಸಾವಿನ ಬಗ್ಗೆ ಚಿಂತಿಸದೇ ಜೀವನದಲ್ಲಿ ಕಷ್ಟಸುಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನಡೆಯೋಣ ಅಲ್ಲವೇ?

    ಚಂದ್ರಮಾನ ಪಂಚಾಂಗದ ಶಿಶಿರ ಋತುವಿನ ಮಾರ್ಗಶಿರ ಮಾಸದ ಹೋಳಿ ಹುಣ್ಣಿಮೆ ನಂತರದ ಹದಿನೈದು ದಿನಗಳಿಗೆ ಬರುವ ವಸಂತ ಋತುವಿನ ಚೈತ್ರಮಾಸದ ಶುದ್ಧ ಮೊದಲನೆಯ ದಿನವೇ ಯುಗಾದಿ. ಇದನ್ನು ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷ ಎಂದು ಪರಿಗಣಿಸಲಾಗುತ್ತದೆ. ಅಂದಿನ ದಿನದಿಂದ ವಸಂತ ಮಾಸವು ಆರಂಭವಾಗುವುದರಿಂದ ಗಿಡ ಮರ ಬಳ್ಳಿಗಳು ಚಿಗುರೊಡೆಯುತ್ತವೆ. ಹೊಸ ಹೊಸ ಹೂಗಳ ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿದ ಮರಗಿಡಗಳು ಮತ್ತೆ ಹೊಸ ಚೈತನ್ಯವನ್ನು ಪಡೆಯುತ್ತವೆ. ಈ ದಿನ ಜೀವನದಲ್ಲಿ ಒಂದು ವರ್ಷದಲ್ಲಿ ಕಂಡ ಸುಖ ದುಃಖಗಳನ್ನು ಮರೆತು, ಹೊಸಬಾಳನ್ನು ಪ್ರಾರಂಭಿಸುವ ಮುನ್ಸೂಚನೆಯಾಗಿ ಬೇವು ಬೆಲ್ಲವನ್ನು ಸವಿಯುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

    ಯುಗ ಎಂದರೆ ಕಾಲಗಣನೆ ಎಂದೂ ಆದಿ ಎಂದರೆ ಆರಂಭ ಎಂದೂ ಅರ್ಥ. ಒಟ್ಟಾರೆ ಯುಗಾದಿ ಎಂದರೆ ಹೊಸ ಕಾಲಗಣನೆಯ ಆರಂಭ ಎಂದು ಅರ್ಥ. ಈ ದಿನ ಶ್ರೀರಾಮನು ರಾವಣನ್ನು ಸಂಹರಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ ಇದೆ. ಈ ದಿನವೇ ವಿಷ್ಣುವು ಮತ್ಸಾವತಾರವನ್ನು ತಾಳಿದನೆಂದೂ, ಶಾಲಿವಾಹನನು ವಿಕ್ರಮಾದಿತ್ಯನನ್ನು ಸೋಲಿಸಿ ಶಾಲಿವಾಹನ ಶಕೆ ಎಂಬ ಹೊಸ ಕಾಲಮಾನವನ್ನು ಆರಂಭಿಸಿದನೆಂದೂ ಹೇಳುವರು.

    ಚಾಂದ್ರಮಾನ ಯುಗಾದಿಯನ್ನು ಹೆಚ್ಚಾಗಿ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಇದನ್ನು ಯುಗಾದಿಯೆಂದು, ಮಹಾರಾಷ್ಟ್ರದಲ್ಲಿ ಗುಡಿಪಡ್ವ ಎಂದೂ ಕರೆಯುತ್ತಾರೆ. ಪಾಡ್ಯಮಿಯ ದಿನ ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ, ಗುಡಿ ಎಂದು ಮೂಲೆಯಲ್ಲಿರಿಸುವರು. ಇದು ಹೊಸವರ್ಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರಪ್ರದೇಶದಲ್ಲಿ ಈ ದಿನ ಹುಣಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವುಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಪದಾಥವನ್ನು ತಯಾರಿಸಿ ಸೇವಿಸುವರು.

    ಯುಗಾದಿ ದಿನ ಬೆಳಿಗ್ಗೆ ಪ್ರಾತಃಕಾಲದಲ್ಲಿಯೇ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ, ದೇವರ ಮನೆ, ಮನೆಯ ಮುಖ್ಯ ದ್ವಾರಗಳನ್ನು ರಂಗೋಲಿ, ತೋರಣಾದಿಗಳಿಂದ ಸಿಂಗರಿಸಿ, ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಿ, ಹೊಸ ವರ್ಷದ ಪಂಚಾಂಗವನ್ನು ದೇವರ ಸಮೀಪವಿಟ್ಟು, ಪೂಜಾ ಸಲಕರಣೆಗಳನ್ನು ಸಿದ್ದಪಡಿಸಿಕೊಂಡು ಗಣಪತಿ ಪೂಜೆಯನ್ನು ಮಾಡಿ, ಕುಲದೇವತೆ ಪೂಜೆ ಮಾಡಿ, ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ಈ ಕೆಳಗಿನ ಶ್ಲೋಕವನ್ನು ಹೇಳುತ್ತಾ ಬೇವು ಬೆಲ್ಲವನ್ನು ತಿನ್ನುತ್ತಾರೆ.
    “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ
    ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ’’

    (ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ, ಸಕಲ ಅರಿಷ್ಟ ನಿವಾರಣೆಗಾಗಿ ಬೇವು ಬೆಲ್ಲವನ್ನು ಸೇವಿಸುತ್ತೇನೆ.)

    ನಂತರ ಮಿತ್ರರು, ಸಜ್ಜನರು, ಬಂಧುಗಳನ್ನು ಕೂರಿಸಿಕೊಂಡು ಪಂಚಾಂಗ ಪಠಣೆಯನ್ನು ಮಾಡುತ್ತಾರೆ ಇಲ್ಲವೇ ಕೇಳುತ್ತಾರೆ. ನಂತರ ಯುಗಾದಿ ಹಬ್ಬದ ವಿಶಿಷ್ಟ ಖಾದ್ಯವಾದ ಒಬ್ಬಟ್ಟನ್ನು ತಿನ್ನುವುದೆಂದರೆ ಸ್ವರ್ಗವೇ ಧರೆಗಿಳಿದು ಬಂದಂತೆ!
    ನೂತನ ಶುಭಕೃತ್ ನಾಮ ಸಂವತ್ಸರ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲೆಡೆ ಸಂಭ್ರಮದ ವಾತಾವರಣ, ಪ್ರತಿ ಮನೆಯಲ್ಲೂ ಒಬ್ಬಟ್ಟು, ಹೋಳಿಗೆಗಳ ವಿವಿಧ ಖಾದ್ಯಗಳ ಕಮ್ಮನೆಯ ವಾಸನೆ. ಹೊಸ ಬಟ್ಟೆ ಧರಿಸಿ ದೇವರಿಗೆ ಕೈ ಮುಗಿದು ಹಿರಿಯರು ಚಿಣ್ಣರು ಸಂಭ್ರಮದಿಂದ ನಲಿಯುತ್ತಾರೆ. ಯುಗಾದಿಯ ದಿನ ಬಹಳಷ್ಟು ಕಡೆ ಜೂಜಾಡುವುದೂ ಸಂಪ್ರದಾಯವಾಗಿ ಬೆಳೆದು ಬಂದಿದೆ. ಯುಗಾದಿಯ ಮಾರನೇಯ ದಿನವನ್ನು ವರ್ಷ ತೊಡಕು ಎಂದು ಕರೆಯುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸ ಸೇವನೆ ಮಾಡುತ್ತಾರೆ. ಕೆಲವೆಡೆ ಮದ್ಯದ ಆರಾಧನೆಯೂ ಇರುತ್ತದೆ.

    ಈಗ ಕಾಲ ಬದಲಾದಂತೆ ಆಚರಣೆಗಳೂ ಬದಲಾದರೂ ಅವು ಸಾರಾಸಗಟಾಗಿ ಪೂರ್ತಿಯಾಗಿ ಬದಲಾಗಿಲ್ಲ. ಹಳ್ಳಿಗಳಲ್ಲಿ ಹಿಂದಿನ ಸಡಗರ ಸಂಭ್ರಮಗಳಿಲ್ಲದಿದ್ದರೂ ಹಿಂದಿನ ಆಚರಣೆಗಳು ಮಾಸಿಲ್ಲ..

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    spot_img

    More articles

    2 COMMENTS

    1. ಯುಗಾದಿ ಹಬ್ಬದ ಬಗ್ಗೆ ವಿಶೇಷವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!