ಸ್ವಾಮಿ ವಿವೇಕಾನಂದರು ಪ್ರಪಂಚ ಕಂಡ, ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ಆಧ್ಯಾತ್ಮಿಕ ಚಿಂತಕರು, ಭೋದಕರು, ತತ್ವಜ್ಞಾನಿಗಳು ಮತ್ತು ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವವನ್ನು ಹೊಂದಿದ್ದ ದೇಶಭಕ್ತ ಮತ್ತು ಸಂತ. ವಿವೇಕಾನಂದರಿಗೆ ಯುವಜನಾಂಗದ ಮೇಲೆ ಅಪಾರವಾದ ವಿಶ್ವಾಸ. ಅವರ ಪ್ರಕಾರ, ಯುವ ಜನಾಂಗದ ಪ್ರಮುಖ ಲಕ್ಷಣ ಆಶಾಭಾವ. ವಿವೇಕಾನಂದರ ಮಾತಿನಲ್ಲೇ ಹೇಳುವುದಾದರೆ- “ಯುವ ಮತ್ತು ಆಧುನಿಕ ಜನಾಂಗದಲ್ಲಿದೆ ನನ್ನ ವಿಶ್ವಾಸ. ನನ್ನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು ಯುವ ಮತ್ತು ಆಧುನಿಕ ಯುವಕ/ಯುವತಿಯರು. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಳಜಿವಹಿಸಿ, ಸಿಂಹದಂತೆ ಧೈರ್ಯದಿಂದ ಮುನ್ನುಗ್ಗುತ್ತಾರೆ.” ಉಜ್ವಲ ಭವಿಷ್ಯದ ಭಾರತದ ಸ್ಪಷ್ಟ ಕಲ್ಪನೆ ವಿವೇಕಾನಂದರಿಗಿತ್ತು. ಅವರಲ್ಲಿದ್ದ ಶಕ್ತಿ, ಉತ್ಸಾಹ, ಪ್ರಗತಿಪರ ಚಿಂತನೆಗಳನ್ನು ಮನನ ಮಾಡಿ, ಉಪಯೋಗಿಸಿಕೊಂಡು ಭವ್ಯ ಭಾರತವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ.
ಮಹಾತ್ಮ ಗಾಂಧೀಜಿಯವರು, ಯುವಕರನ್ನು ಕುರಿತು ಹೀಗೆ ಹೇಳಿದ್ದಾರೆ, “ಯುವಕ/ಯುವತಿಯರು ಸಾಮಾಜಿಕ ಬದಲಾವಣೆಗಳನ್ನು ತರಬಲ್ಲ ಸಾಧನಗಳಿದ್ದ ಹಾಗೆ ( Youth are the instruments of social change )”. ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ, ಸರಳತೆ, ಸಹಿಷ್ಣುತೆ, ದಯೆ ಮತ್ತು ಸರ್ವೋದಯಕ್ಕೆ ಹೆಚ್ಚು ಒತ್ತು ಕೊಟ್ಟವರು ಹಾಗೂ ಯುವಜನಾಂಗ ಈ ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಹಾಸು ಹೊಕ್ಕಾಗಬೇಕೆಂದು ಬಯಸಿದವರು. ಭಾರತ ದೇಶದ ಸಾಮಾಜಿಕ ಸುಧಾರಕರು, ತತ್ವಜ್ಞಾನಿಗಳು ನೀಡಿದಂತ ಕರೆಗಳು ಭೌಗೋಳಿಕ ಮತ್ತು ಸಾಮಾಜಿಕ ಕಟ್ಟಳೆಗಳನ್ನು ಮೀರಿ, ಎಂದೆಂದಿಗೂ ಪ್ರಸ್ತುತ ಎಂದು ಹೇಳಬಹುದಾಗಿದೆ.
ಆದರೆ, ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಸಮಾಜದಲ್ಲಿ ನೈತಿಕತೆ ಅಧೋಗತಿಗೆ ಜಾರಿ, ಭಯಂಕರವಾದ ವಾತಾವರಣ ಸೃಷ್ಟಿಯಾಗಿದೆ. ಇದು ನಿಜವಾಗಿಯೂ ದುರದುಷ್ಟಕರ ಸಂಗತಿ. ಈ ಸಮಸ್ಯೆಗೆ ಪರಿಹಾರ ಸೂಚಿಸುವುದಾದರೆ, ಯುವ ಶಕ್ತಿಯಲ್ಲಿ ಹೆಚ್ಚಿನ ವಿಶ್ವಾಸವಿಟ್ಟು ಯುವ ಶಕ್ತಿಯ ಸದುಪಯೋಗಕ್ಕೆ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇತ್ತೀಚಿಗೆ ನಡೆಸಿದ ಸಮೀಕ್ಷೆಗಳ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ದೇಶ ಪ್ರಪಂಚದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಯುವ ಜನಾಂಗವಿರುವ ದೇಶ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ. ಆದ್ದರಿಂದ ಯುವ ಶಕ್ತಿಯನ್ನು ರಾಷ್ಟ್ರವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳ ಬೇಕಾಗಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕಂಡು ಬರುವ ಅಂಶವೆಂದರೆ, ಯುವ ಜನಾಂಗ ಫೇಸ್ ಬುಕ್ಕ್, ಇನ್ಸ್ಟಗ್ರಾಮ್, ಟ್ವಿಟರ್ ಮುಂತಾದ ಜಾಲತಾಣಗಳಲ್ಲಿ ತಲ್ಲೀನರಾಗಿ, ಬೇರೆ ರಚನಾತ್ಮಕ ಅಂಶಗಳ ಕಡೆಗೆ ಗಮನಕೊಡುತ್ತಿಲ್ಲ. ಜಾಲತಾಣಗಳು ಯುವಜನಾಂಗದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿವೆ. ಸಾಮಾಜಿಕ ಜಾಲತಾಣಗಳು ಯುವ ಜನಾಂಗದ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದರೆ ತಪ್ಪಾಗಲಾರದು. ಶೇಕಡಾ 33ರಷ್ಟು ಯುವಕರು ಮತ್ತು ಯುವತಿಯರು, ದಿನನಿತ್ಯ ಎರಡರಿಂದ ಮೂರು ಗಂಟೆಗಳ ಕಾಲ ಜಾಲತಾಣಗಳಲ್ಲಿ ಅನವಶ್ಯಕವಾದ ಹಾಗೂ ಅಶ್ಲೀಲ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆಯುತ್ತಾರೆ ಎಂಬ ಆತಂಕಕಾರಿ ಸಂಗತಿಯನ್ನು ಇತ್ತೀಚೆಗೆ ನಡೆಸಿದ ಸಮೀಕ್ಷೆ ಬಹಿರಂಗ ಪಡಿಸಿದೆ. ಇನ್ನೂ ಕೆಲವರು ಬೆಳಗಿನಿಂದ, ರಾತ್ರಿಯವರೆವಿಗೂ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ. ದುರದುಷ್ಟಕರ ವಿಷಯವೆಂದರೆ ಜಾಲತಾಣಗಳಲ್ಲಿ ಅನವಶ್ಯಕವಾದ, ಪ್ರಚೋದನಕಾರಿ, ಅಪಾಯಕಾರಿ, ಅಶ್ಲೀಲವಾದ ವಿಷಯಗಳನ್ನು ಭಿತ್ತರಿಸಲಾಗುತ್ತಿದೆ. ಇವುಗಳಿಂದ ಆಕರ್ಷಣೆಗೊಂಡ ಯುವಕ, ಯುವತಿಯರು ವಿದ್ಯಾಭ್ಯಾಸ, ವೃತ್ತಿ ಜೀವನದ ಧ್ಯೇಯಗಳನ್ನು ಮರೆತು ಕೆಟ್ಟ ಹವ್ಯಾಸಗಳಿಗೆ ಗುಲಾಮರಾಗಿರುವ ಉದಾಹರಣೆಗಳು ಹಲವಾರು.
ಪೋಷಕರ ಮತ್ತು ಮಕ್ಕಳ ನಡುವೆ ಜಗಳಗಳು ಉಂಟಾಗಿ ಮನೆಗಳ ವಾತಾವರಣ ಕೆಟ್ಟಿರುವ ಉದಾಹರಣೆಗಳಿವೆ. ಕೆಲವೊಂದು ಸಂದರ್ಭಗಳಲ್ಲಿ ಆತ್ಮಹತ್ಯೆ, ಸಾವುಗಳು ಸಹ ಉಂಟಾಗಿವೆ. ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವುದಾದರೂ ಏನು, ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಅಂಶಗಳ ಬಗ್ಗೆ ಪೋಷಕರಿಗೆ ಮಾಹಿತಿಯಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ವಿಭಕ್ತ ಕುಟುಂಬಗಳಲ್ಲಿ ಈ ಸಮಸ್ಯೆ ಹೆಚ್ಚು. ಹಿಂದಿನ ಪೀಳಿಗೆಯಲ್ಲಿ, ಒಂದು ಸಂಸಾರದಲ್ಲಿ, ಸಾಮಾನ್ಯವಾಗಿ ಐದಾರು ಮಕ್ಕಳಿರುತ್ತಿದ್ದರು. ಮಕ್ಕಳಿಗೆ ಪ್ರತ್ಯೇಕ ಕೋಣೆಗಳಿರಲಿಲ್ಲ. ಎಲ್ಲರೂ ಒಟ್ಟಿಗೆ, ದೊಡ್ಡ ಹಾಲ್ ನಲ್ಲಿ ಓದುತ್ತಿದ್ದರು ಮತ್ತು ಮಲಗುತ್ತಿದ್ದರು. ಆದರೆ ಈಗಿನ ವಿಭಕ್ತ ಕುಟುಂಬಗಳಲ್ಲಿ ಒಂದು ಅಥವಾ ಎರಡು ಮಕ್ಕಳಿದ್ದು, ಮಕ್ಕಳಿಗೆ ಪ್ರತ್ಯೇಕ ಕೋಣೆಗಳಿರುತ್ತವೆ. ಹಾಗಾಗಿ, ಕೊಠಡಿಯಲ್ಲಿ ಬಾಗಿಲು ಮುಚ್ಚಿಕೊಂಡು, ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಅಂಶದ ಬಗ್ಗೆ ಪೋಷಕರಿಗೆ ಅರಿವು ಇರುವುದಿಲ್ಲ. ಕೆಲವರು ಮಧ್ಯ ರಾತ್ರಿಯವರೆವಿಗೂ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿರುತ್ತಾರೆ. ಹೀಗೆ ನಿದ್ದೆ ಕೆಡುವುದರಿಂದ ಆರೋಗ್ಯಕ್ಕೂ ಹಾನಿಯಾಗಿ, ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಕಾಲೇಜು ಅಥವಾ ಶಾಲೆಗಳ ತರಗತಿಗಳಲ್ಲಿ ತೂಕಡಿಸುತ್ತಾ, ಪಾಠ, ಪ್ರವಚನಗಳು ಅರ್ಥವಾಗದೆ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ.
ನಮ್ಮ ಭಾರತೀಯ ಸಂಸ್ಕೃತಿಯೂ ಸಹ ಯುವಕರಲ್ಲಿ ಕಾಣೆಯಾಗುತ್ತಿದೆ. ಈಗಿನ ವಿದ್ಯಾರ್ಥಿ/ ನಿಯರಲ್ಲಿ ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ ಗೌರವ ಸೂಚಿಸ ಬೇಕೆಂಬ ಪರಿಪಾಠವು ಇರುವುದಿಲ್ಲ. ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ಶಿಕ್ಷಕರು ಜಾಲತಾಣಗಳಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಬುದ್ಧಿವಾದ ಹೇಳುತ್ತಿದ್ದರೂ ಸಹ ಸರಿಯಾಗಿ ಫಲಕಾರಿಯಾಗುತ್ತಿಲ್ಲ. ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಪೋಷಕರು ವಿಫಲವಾಗಿರುವ ಸಂದರ್ಭಗಳಿವೆ. ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ಮತ್ತು ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆಯೂ ಸಹ ಕಾರಣ. ಉದಾಹರಣಗೆ ಹೇಳುವುದಾದರೆ, ಪೋಷಕರ ಪ್ರೀತಿಯ ಕೊರತೆ, ಏಕ ಪೋಷಕ ಸಂಸಾರಗಳು ( Single parent ), ಏಕ ಪುತ್ರ/ ಪುತ್ರಿ, ಅತೀವ ಮುದ್ದು ಮಾಡುವಿಕೆ, ಮಕ್ಕಳಿಗೆ ನೀಡಿರುವ ಸ್ವಾತಂತ್ರ್ಯ ಇವೆಲ್ಲವೂ ಸಹ ಹೆಚ್ಚಿನ ಮಟ್ಟದಲ್ಲಿ ಯುವಕ/ಯುವತಿಯರ ವಿಲಕ್ಷಣ ವರ್ತನೆಗೆ ಕಾರಣಗಳಾಗಿವೆ.
ಮೇಲೆ ತಿಳಿಸಿರುವ ಅಂಶಗಳಿಂದ ಜಾಲತಾಣಗಳು ಭಯವನ್ನುಂಟು ಮಾಡಿದರು ಸಹ, ಜಾಲತಾಣಗಳಿಂದ ಬಹಳಷ್ಟು ಉಪಯೋಗಗಳು ಸಹ ಇವೆ. ಆದರೆ, ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಧನಾತ್ಮಕವಾಗಿ ಬಳಸುವ ಅವಶ್ಯಕತೆಯಿದೆ. ಶೈಕ್ಷಣಿಕವಾಗಿ ಅಭಿವೃದ‍್ಧಿ ಹೊಂದಲು ಉಪಯೋಗಿಸಬಹುದಾಂತಹ ಹಲವಾರು ಜಾಲತಾಣಗಳಿವೆ. ಈ ಪೀಳಿಗೆಯ ವಿದ್ಯಾರ್ಥಿ/ನಿಯರು ಹಲವಾರು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದ, ಆರೋಗ್ಯಕರ ರೀತಿಯಲ್ಲಿ ನೆಟ್ವರ್ಕಿಂಗ್ ಬೆಳೆಸಲು, ದೂರದ ಊರಗಳಲ್ಲಿರುವವರು ಪೋಷಕರ ಜೊತೆಯಲ್ಲಿ ಸಂಪರ್ಕದಲ್ಲಿರಲು ಹೆಚ್ಚು ಉಪಯೋಗವಾಗುತ್ತಿವೆ. ಕೋವಿಡ್ ಸಮಯದಲ್ಲಿ, ಶಿಕ್ಷಣ ಸಂಸ‍್ಥೆಗಳನ್ನು ಮುಚ್ಚಲ್ಪಟ್ಟಾಗ, ಆನ್ ಲೈನ್ ಮೂಲಕ ಶಿಕ್ಷಣವನ್ನು ನೀಡಲಾಯಿತು. ಈ ರೀತಿಯಾಗಿ ಜಾಲತಾಣಗಳಿಂದ ಅನುಕೂಲಗಳು ಮತ್ತು ಅನಾನುಕೂಲಗಳು ಎರಡು ಇವೆ. ಆದರೆ ಇಂದಿನ ಯುವ ಜನಾಂಗ, ಆರೋಗ್ಯ ಮತ್ತು ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುವ ಅಂಶಗಳ ಕಡೆಗೆ ಹೆಚ್ಚಿನ ಒಲವು ಮತ್ತು ಆಕರ್ಷಣೆ ತೋರುತ್ತಿದ್ದಾರೆ. ತಂತ್ರಜ್ಞಾನ ಮತ್ತು ಸಂಹವನ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಯನ್ನು ಕಂಡರು ಸಹ, ಜಾಲತಾಣಗಳ ಬಗ್ಗೆ ಹೇಳುವುದಾದರೆ, ಅನಪೇಕ್ಷಿತ ಸ್ಥಳದಲ್ಲಿದ್ದೇವೆ. ಆದ್ದರಿಂದ ಕೂಡಲೇ ಜಾಗೃತರಾಗಿ, ಈ ಸಮಸ್ಯೆಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಪರಿಹಾರ ಕಂಡು ಕೊಳ‍್ಳಬೇಕಾಗಿದೆ.
ಇಂದಿನ ಯುವ ಜನಾಂಗಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು.
- ಅಸಹಿಷ‍್ಣುತೆ ಮತ್ತು ಕೈಗೆ ಎಟಕದಷ್ಟು ನಿರೀಕ್ಷಣೆ.
- ಹಣ ಮತ್ತು ಭೌತಿಕ ವಸ್ತುಗಳಿಗಾಗಿ ಅತೀವ ದಾಹ.
- ಹಿಂಸಾತ್ಮಕ ನಡತೆ.
- ಜೀವನ ಮತ್ತು ಜೀವನ ವೃತ್ತಿಯಲ್ಲಿರಬೇಕಾದ ಧ್ಯೇಯಗಳ ಅಸ್ಪಷ್ಟತೆ.
- ಸಾಮಾಜಿಕ ಜಾಲತಾಣಗಳ ಬಗ್ಗೆ ದುರಾಸಕ್ತಿ.
- ಭಾರತ ದೇಶದ ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ಅಸಡ್ಡೆ.
- ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ.
- ಆದರ್ಶ ವ್ಯಕ್ತಿಗಳನ್ನು ಆರಿಸುವ ವಿಷಯದಲ್ಲಿ ತಪ್ಪು ಆಯ್ಕೆ.
- ಅನಾರೋಗ್ಯಕರ ಸಂಬಂಧಗಳು.
- ಪ್ರತಿಭಾವಂತ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳಿಂದ ಪ್ರತ್ಯೇಕತೆಯನ್ನು ಪಾಲಿಸುವುದು. ( Exclusivity )
ನಾವು ಎಲ್ಲಿ ಎಡವಿದ್ದೇವೆ.
- ಶಾಲಾ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುವ ಮೌಲ್ಯಾಧಾರಿತ ಶಿಕ್ಷಣವಿಲ್ಲದಿರುವುದು, ಇದ್ದರೂ ಹೆಚ್ಚು ಪ್ರಾಮುಖ್ಯತೆಯನ್ನು ಕೊಡದಿರುವುದು.
- ಅನೈತಿಕ ಪದ್ದತಿಗಳನ್ನು ಅನುಸರಿಸುತ್ತಿರುವ ಶಿಕ್ಷಣ ಸಂಸ‍್ಥೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಿರುವುದು.
- ನೈತಿಕತೆ ಮತ್ತು ಭಾರತೀಯ ಸಂಸ್ಕೃತಿಯ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಂಸ‍್ಥೆಗಳ ಗೋಚರತೆ ಅಲ್ಪ ಪ್ರಮಾಣದಲ್ಲಿರುವುದು. ಇಂತಹ ಸಂಸ‍್ಥೆಗಳಲ್ಲಿ ಯುವಜನಾಂಗದ ಪ್ರತಿನಿಧಿತ್ವ ಕಡಿಮೆ ಸಂಖ್ಯೆಯಲ್ಲಿರುವುದು.
ಕಾರ್ಯ ತಂತ್ರ.
- ಶಿಕ್ಷಣದ ಎಲ್ಲಾ ಹಂತಗಳಲ್ಲೂ ಮೌಲ್ಯಾಧಾರಿತ ಶಿಕ್ಷಣವನ್ನು ಪಠ್ಯಕ್ರಮದ ಒಂದು ಭಾಗವನ್ನಾಗಿ ರಚಿಸಿ, ಕಡ್ಡಾಯ ಮಾಡಿ, ಸರ್ಕಾರ ಸೂಕ್ತ ಕ್ರಮ ತೆಗೆದು ಕೊಳ‍್ಳುವುದು.
- ಶಾಲಾ ಕಾಲೇಜುಗಳಲ್ಲಿ ಮಹಾತ್ಮ ಗಾಂಧೀ, ಸ್ವಾಮಿ ವಿವೇಕಾನಂದ, ಬಸವಣ‍್ಣ, ಬುದ‍್ಧ, ಡಾ. ಅಂಬೇಡ್ಕರ್ ಮುಂತಾದ ಮಹನೀಯರುಗಳ ಹೆಸರಿನಲ್ಲಿ ನೈತಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ, ಅವರ ಉಪದೇಶಗಳನ್ನು ಪ್ರಚಾರ ಮಾಡಿ ವಿದ್ಯಾರ್ಥಿ/ನಿಯರಿಗೆ ಮನದಟ್ಟು ಮಾಡುವ ಕ್ರಮಗಳನ್ನು ಜಾರಿಗೊಳಿಸುವುದು. ಈ ದಿಶೆಯಲ್ಲಿ, ನಿರಂತರ ಹಾಗೂ ಹೆಚ್ಚು ಅವಧಿಯ ಪ್ರೋತ್ಸಾಹ ಮತ್ತು ತರಬೇತಿಯ ಅವಶ್ಯಕತೆ ಇರುತ್ತದೆ. ಗಾಂಧೀ ಭವನ, ರಾಮಕೃಷ‍್ಣ ಆಶ್ರಮ ಮುಂತಾದ ಆಧ್ಯಾತ್ಮಿಕ ಸಂಸ‍್ಥೆಗಳೊಡನೆ ಭಾಗಿಯಾಗಿ, ಜಂಟಿ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
- ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ವಿದಾರ್ಥಿ/ನಿಯರಿಗೆ ಎನ್. ಎಸ್. ಎಸ್. ಯೋಜನೆಗೆ ಪ್ರವೇಶ ನೀಡುವುದು.
- ಪ್ರಖ್ಯಾತ ವ್ಯಕ್ತಿಗಳ ಜನ್ಮ ದಿನಗಳಂದು ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು, ಉದಾಹರಣೆಗೆ ರಕ್ತದಾನ, ನೇತ್ರದಾನ, ಆಯೋಜಿಸುವುದು.
- ಪೋಷಕರಿಗೂ ಸಹ, ಉತ್ತಮ ಪೋಷಕತ್ವದ ( Good parenting ) ಬಗ್ಗೆ ಕೌನ್ಸೆಲಿಂಗ್ ಷೆಸನ್ ಗಳನ್ನು ಏರ್ಪಡಿಸುವುದು.
- ಶಿಕ್ಷಕರಿಗೆ ನೈತಿಕತೆ, ನೀತಿಶಾಸ್ತ್ರ ಮತ್ತು ಶಿಕ್ಷಕ ವೃತ್ತಿಯ ಪವಿತ್ರತೆ ಇವುಗಳ ಬಗ್ಗೆ ಸಮಾಲೋಚನಾ ಸಭೆಗಳನ್ನು ಏರ್ಪಡಿಸುವುದು.
- ಅಂತಿಮ ಫಲಿತಾಂಶಕ್ಕಿಂತ, ಅನುಸರಿಸುವ ಮಾರ್ಗ ಬಹಳ ಮುಖ್ಯ ಎಂಬ ಅಂಶವನ್ನು ಯುವ ಜನಾಂಗಕ್ಕೆ ಅರ್ಥವಾಗುವಂತೆ ತಿಳಿ ಹೇಳುವುದು.
ಸಾಮಾಜಿಕ ಪರಿವರ್ತನೆ ಮತ್ತು ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸಲು ಶಿಕ್ಷಣದ ಮೂಲಕವೇ ಸಾಧ್ಯ. ಸಮಾಜದ ಅಸ್ಪಸ‍್ಥತೆಯನ್ನು ಹೋಗಲಾಡಿಸಲು ಶಿಕ್ಷಣ ರಾಮಬಾಣ ಔಷಧವಿದ್ದಂತೆ. ( Education is the panacea for ills in the society ). ದಕ್ಷಿಣ ಆಫ್ರಿಕಾದ ವಿಶ್ವ ವಿದ್ಯಾಲಯದ ಉಪನ್ಯಾಸಕ, ಕಾಲೇಜಿನ ಪ್ರವೇಶ ದ್ವಾರದಲ್ಲಿ ಕೆಳಗಿನ ಸಂದೇಶದ ಪಲಕವನ್ನು ತಗಲುಹಾಕಿದ್ದರು. ಪಲಕದ ಸಂದೇಶ ಹೀಗಿತ್ತು. ”ಒಂದು ರಾಷ್ಟ್ರವನ್ನು ಧ್ವಂಸ ಮಾಡಲು ಅಣುಬಾಂಬ್ ಗಳ ಅಥವಾ ಬಹುದೂರ ಚಲಿಸುವ ಕ್ಷಿಪಣಿಗಳ ಅವಶ್ಯಕತೆಯಿಲ್ಲ. ಬದಲಾಗಿ, ಶಿಕ್ಷಣದ ಗುಣಮಟ್ಟವನ್ನು ಕೆಳಗಿಳಿಸಿ, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡುವ ಅವಕಾಶ ಕಲ್ಪಿಸಿದರೆ ಸಾಕು”. ಸ್ವಾಮಿ ವಿವೇಕಾನಂದರು ಹೇಳಿರುವಂತೆ, ಮಾನವನನ್ನು ತಯಾರು ಮಾಡುವ, ಒಳ‍್ಳೆಯ ನಡತೆಯಿರುವ ವ್ಯಕ್ತಿಯನ್ನು ತಯಾರು ಮಾಡುವ ಶಿಕ್ಷಣದ ಅಗತ್ಯವಿದೆಯೇ ಹೊರತು ಕೇವಲ ಅಕ್ಷರಸ‍್ಥರನ್ನು ತಯಾರು ಮಾಡುವ ಶಿಕ್ಷಣದ ಅಗತ್ಯವಿಲ್ಲ.
ಶಿಕ್ಷಣ ಕ್ಷೇತ್ರದ ದಿಗ್ಗಜರು, ಪೋಷಕರು, ಶಿಕ್ಷಣ ಆಡಳಿತಗಾರರು, ನೀತಿ ನಿರೂಪಕರು, ಹೆಚ್ಚಿನ ಜವಾಬ್ದಾರಿ ವಹಿಸಿ ಯುವ ಜನಾಂಗದಲ್ಲಿ ನೈತಿಕತೆಯನ್ನು ಮೈಗೂಡಿಸುವುದು ಬಹಳ ಮುಖ್ಯ. ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಅತಿದೊಡ್ಡ ಅಪಾಯವನ್ನು ನಾವು ಕಾಣ ಬೇಕಾಗಿರುತ್ತದೆ.
Very good information for students .this is very importent information ,thank you sir
Scholarly article and very much apt for the present situation.
Very good article it show mirror to the present generation who totally depends on social media’s. Srikanta sir give very minute details how the social media taken on young generation and also give reasons and proud part of the article is it discussed how to come out from the social media. Thanks for your insight hope it help younger generations
Dr Sreekanta sir has analysed the behaviour of todays youth/ students. Value and moral education, ethics etc.. are the most important requirements and need of the day . Todays youth has to inculcate important behaviour..