ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಎನ್ನೆವರಂ ಜೀವಿಸುವುದು ಅನ್ನೆವರಂ ಸುಖಂಬಡೆವುದು– ದುರ್ಗಸಿಂಹನ ‘ಪಂಚತಂತ್ರ’ದಲ್ಲಿ ಬರುವ ಸಾರ್ವಕಾಲಿಕ ತಾತ್ವಿಕ ಮಾತಿದು. ಜೀವಿಸುವುದಕ್ಕೆ ಬಂದಿರುವ ಈ ಶರೀರ ಸಂತಸದಿಂದ ಜೀವಿಸಬೇಕು ಅದನ್ನು ಹೊರತು ಪಡಿಸಿ ನಮಗೆ ನಾವೆ ಸಂಚನೆಯ ಹೊದರಲ್ಲಿ ಸಿಲುಕಬಾರದು ಎನ್ನುವುದನ್ನು ಈ ಮಾತು ಶೃತಪಡಿಸುತ್ತದೆ.
ವೃಥಾ ಅನ್ಯಪೀಡಕರಾಗದೆ,ವಂಚಕರಾಗದೆ,ಲೋಭಿಗಳಾಗದೆ ತಮ್ಮ ಆಯವನ್ನು ನೋಡಿಕೊಂಡು ದಾನ-ಧರ್ಮಗಳನ್ನೂ ಮಾಡುತ್ತಾ ಕುಟುಂಬದವರೊಂದಿಗೆ ಒಲುಮೆಯಿಂದ ಬಾಳಬೇಕು. ಮನುಷ್ಯ ಬರಬರುತ್ತಾ ಲೌಖಿಕ ವ್ಯಾಮೋಹಗಳಿಗೆ ಅತೀ ಮಾರುಗೋಗಿ ಆ ಮಾಯಾಜಿಂಕೆಯನ್ನೆ ಬೆನ್ನಟ್ಟುತ್ತಿದ್ದಾನೆ ಹಾಗೆ ಬೆನ್ನಟ್ಟುವಾಗ ಅದನ್ನು ಪಡೆದೇ ತೀರುವೆ ಎಂಬ ಹಠದಿಂದ ಅಡ್ಡದಾರಿಗಳನ್ನೂ ಕ್ರಮಿಸಬೇಕಾಗುತ್ತದೆ. ‘ಹಾಲು ಕುಡಿದ ಮಕ್ಕಳೆ ಬದುಕವು ವಿಷ ಕುಡಿದವು ಬದುಕುತ್ತವೆಯೇ?’ ಎಂಬ ಮಾತಿನಂತೆ ಅಡ್ಡ ದಾರಿಯ ಫಲ ನೆಮ್ಮದಿ ತರುವುದಿಲ್ಲ.
ಎಲ್ಲರಂತೆ ಬದುಕಬೇಕು ಎಂಬುದು ಸರಿ ಆದರೆ ಎಲ್ಲರಂತೆ ನಾನೂ ಎನ್ನುವ ಹೋಲಿಕೆ ಉದ್ಧಟತನದ್ದು . ನಮ್ಮ ಅಭಿರುಚಿಗೆ ತಕ್ಕಂತೆ ನಾವು ಬದುಕಬೇಕಾಗುತ್ತದೆ. ಹೊರಲಾರದ ಹೊರೆಯನ್ನು ಒಮ್ಮೆಗೆ ಹೊತ್ತು ಸೋತು ಶಾಂತಿಯನ್ನು ಕಳೆದುಕೊಳ್ಳುವುದರ ಬದಲು ಅದನ್ನೆ ನಿಧಾನವಾಗಿ ಹೊರಬಹುದು, ಇಲ್ಲವೆ ನಮಗಾಗುವಷ್ಟನ್ನು ಹೊರಬಹುದು ಆಗ ಬಾಧೆಗಳು ಬಾಧಿಸವು .
ಆಧುನಿಕ ಸೌಲಭ್ಯಗಳೆಲ್ಲಾ ನಮ್ಮೆಟುಕಿನಲ್ಲಿಯೇ ಇರಬೇಕು ಎಂದು ಬಯಸುವ ಬದಲು ಪ್ರೀತಿ, ಕರುಣೆ,ದಯೆ,ಅನುಕಂಪ, ಶಾಂತಿ,ಕ್ಷಮೆ ಮೊದಲಾದವುಗಳ ಸಂಗಡ ಬದುಕಬೇಕು. ಕನಿಷ್ಟ ಜೀವಿತದ ಅವಧಿ ನಮಗೆ ಇರುವುದು ಒಂದಲ್ಲ ಒಂದು ದಿನ ನಿರ್ಗಮಿಸಬೇಕು ಖಂಡಿತಾ ಎಂದು ತಿಳಿದೂ ಮೈಮೇಲೆ ಸಂಕಟಗಳನ್ನು ಎಳೆದುಕೊಳ್ಳುವುದು ಮೂರ್ಖತನ.
ಇರುವುದನ್ನೆ ಸಂತೋಷದಿಂದ ಅನುಭವಿಸುತ್ತಾ ಸುಖಪಡುವುದು ಜಾಣತನ ಅಲ್ಲದೆ ನಾವು ಈ ಬದುಕಿನ ರೀತಿಗೆ ಕೊಡುವ ಗೌರವ . ನಮಗೆ ಎಲ್ಲಿವರೆಗೆ ಬದುಕಲು ಅವಕಾಶವಿರುತ್ತದೆಯೋ ಅಲ್ಲಿಯವರೆಗೂ ಏನೇ ಬಂದರೂ ಚಿತ್ತಸಮಾಧಾನದಿಂದ ಸ್ವೀಕರಿಸಬೇಕು ಅದರಲ್ಲೆ ಸುಖಿಸಬೇಕು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.