BENGALURU MAY 27
ಜೀವನದಲ್ಲಿ ಎಂಥ ದೊಡ್ಡ ಸಾಧನೆ ಮಾಡಿದರು ಅದರಲ್ಲಿ ಮಾನವೀಯತೆಯನ್ನು ಅಳವಡಿಸಿಕೊಳ್ಳವುದು ಮುಖ್ಯ. ಏನಾದರು ಆಗು ನೀನು ಮೊದಲು ಮಾನವನಾಗು ಎಂಬ ಕವಿವಾಣಿಯನ್ನು ಪಾಲಿಸಿದಾಗ ಬದುಕು ಸಾರ್ಥಕ ಎಂದು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಅಭಿಪ್ರಾಯ ಪಟ್ಟರು.ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾದ ಕರ್ನಾಟಕದ ಅತಿ ದೊಡ್ಢ ಶೈಕ್ಷಣಿಕ ಮೇಳ ರೆಡ್ ಯು ಫೇರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ನೈತಿಕ ಶಿಕ್ಷಣ ಪಠ್ಯದ ಭಾಗವಷ್ಟೆ ಆಗಿರಲಿಲ್ಲ. ಅದನ್ನು ಜೀವನದಲ್ಲೂ ಅಳವಡಿಸಿಕೊಳ್ಳುವ ಪರಿಪಾಠವೂ ಇತ್ತು. ಆದರೆ ಈಗ ಅದನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ನೈತಿಕ ಶಿಕ್ಷಣವನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಈಗ ಹಿಂದೆ ಇದ್ದ ಸ್ಥಿತಿ ಇಲ್ಲ. ಕಲಿಕೆಗೆ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್ ವಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಡಾ. ಎಂ ಪಿ ಶ್ಯಾಮ್ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಉದ್ಯೋಗ ಕ್ಷೇತ್ರದಲ್ಲಿನ ನೂತನ ಸವಾಲುಗಳ ಬಗ್ಗೆ ವಿವರಿಸಿದರು.
ಹಿರಿಯ ಶಿಕ್ಷಣ ತಜ್ಞ ಡಾ. ಎಂ .ಜಯಪ್ಪ ರೆಡ್ ಯು ಫೇರ್ ಹೇಗೆ ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ ಎಂಬುದನ್ನು ತಿಳಿಸಿಕೊಟ್ಟರು. ಇನ್ ಸೈಟ್ ಇಂಡಿಯಾ ಐಎಎಸ್ ನ ಸಂಸ್ಥಾಪಕ ಜಿ ಬಿ ವಿನಯ್ ಕುಮಾರ್ ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ನೀಡಿದರು.
ರೆಡ್ ಎಫ್ ಎಂ ನ ಸಿಒಒ ಬಿ ಸುರೇಂದರ್, ಸಿಂಧಿ ಕಾಲೇಜಿನ ನಿರ್ದೇಶಕ ಡಾ. ಬಿ ಎಸ್ ಶ್ರೀಕಂಠ ಮತ್ತು ಕನ್ನಡಪ್ರೆಸ್ .ಕಾಮ್ ನ ಸಂಪಾದಕ ಶ್ರೀವತ್ಸ ನಾಡಿಗ್ ಉಪಸ್ಥಿಿತರಿದ್ದರು.
ವಿದ್ಯಾರ್ಥಿಗಳು ಪಾಲಕರು ಉತ್ಸಾಹದಿಂದ ಅತ್ಯಧಿಕ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿ ತಮಗೆ ಬೇಕಾದ ಮಾಹಿತಿ ಪಡೆದರು. ಮೇಳ ನಾಳೆ ಭಾನುವಾರ ಕೂಡ ಮುಂದುವರಿದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ರೆಡ್ ಎಫ್ ಎಂ ನೆಟ್ ವರ್ಕ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಸುರೇಶ್ ಗಣೇಶನ್ ತಿಳಿಸಿದ್ದಾರೆ.