ಅಮೆಜಾನ್ ಪ್ರೈಮ್ ವಿಡಿಯೋಸ್ ನಲ್ಲಿ ಬಿಡುಗಡೆಯಾಗಿರುವ ಶಶಾಂಕ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಚಿತ್ರವನ್ನು ಹೆಸರಾಂತ ನಿರ್ದೇಶಕ ಬಿ ಎಸ್ ಲಿಂಗದೇವರು
ಕಂಡ ಬಗೆ ಇದು.
ಹೆಣ್ಣೆಂದರೆ, ಅಡುಗೆ ಮನೆಗೆ ಸೀಮಿತ, ಆಕೆಗೆ ಜವಾಬ್ದಾರಿ ಇಲ್ಲ, ಗಂಡ್ಸೇ ಎಲ್ಲವನ್ನೂ ನಿಭಾಯಿಸುವುದು ಎಂಬ ಧಿಮಾಕಿನಲ್ಲಿರುವ ಪುರುಷ ಪ್ರಧಾನ ಈ ಜಗತ್ತಿನೆದುರು ಸದಾ ಕಾಲ ತನ್ನ ದರ್ಪ ಅಹಂಕಾರವನ್ನು ತೀರಿಸಲು ಹೆಣ್ಣೊಂದು ಬೇಕು ಅನ್ನುವುದು ಬಹಳ ಹಿಂದಿನಿಂದಲೂ ನಡೆಸಿಕೊಂಡು ಬಂದ ಪದ್ಧತಿ ಇರಬಹುದೇನೋ? ಪುರಾಣದ ಕಾಲಘಟ್ಟದಿಂದಲೂ ಹೆಣ್ಣು ಪಾತ್ರಗಳು ಅರಮನೆಯಲ್ಲಿ ಇದ್ದರೂ ಕೂಡ ಒಂದು ರೀತಿಯ ಶೋಷಣೆಗೆ ಒಳಗಾದ ಪಾತ್ರಗಳೇ ಆಗಿದ್ದವು. ಉದಾಹರಣೆಗೆ ಕುಂತಿ, ದ್ರೌಪದಿ, ಸೀತೆ, ಉರ್ಮಿಳೆ ಎಲ್ಲರೂ ನೋವು ಸಂಕಷ್ಟಗಳಿಗೆ ಒಳಗಾದವರೆ? ಬಹುಶಃ ಅಂದಿನಿಂದ ಇಂದಿನವರೆಗೂ ಉತ್ತರ ಸಿಕ್ಕಿಲ್ಲ ಎಂಬ ಭಾವನೆ ನನ್ನದು. ಈ ಹಿನ್ನೆಲೆಯಲ್ಲಿ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ತುಂಬಾ ಮುಖ್ಯವಾದ ಸಿನಿಮಾ.
ಕೃಷ್ಣ ಆಗಾಧವಾಗಿ ರಾಧೆಯನ್ಶು ಪ್ರೀತಿಸಿದರೂ ಕರ್ತವ್ಯದ ಹಿನ್ನೆಲೆಯಲ್ಲಿ ಬೃಂದಾವನದಿಂದ ಮಥುರೆಗೆ ಬರುತ್ತಾನೆ. ಇಲ್ಲಿ ರಾಧೆಯ ನೋವು ಕೃಷ್ಣನಿಗೆ ಮುಖ್ಯ ಆಗಲಿಲ್ಲ. ರಾಮನೇ ಸರ್ವಸ್ವ ಎಂದು ನಂಬಿದ ಸೀತೆಯನ್ನೇ ಸಂಶಯಿಸುತ್ತಾನೆ ರಾಮ! ಇಲ್ಲಿ ರಾಮನ ಸಂಶಯ ಗಂಡಸಿನ ಪುರುಷಹಂಕಾರಕ್ಕೆ ಉದಾಹರಣೆಯಾದರೆ ಈ ಅಧುನಿಕ ಯುಗದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ರಾಮ ತನ್ನನ್ನು ಆಗಾಧವಾಗಿ ಪ್ರೀತಿಸುವ, ಆರಾಧಿಸುವ ಶಿವಾನಿಯನ್ನು ಅದೇ ಪುರುಷಹಂಕಾರದಿಂದ ದೂರ ಮಾಡಿಕೊಳ್ಳುತ್ತಾನೆ. ಪ್ರತಿಬಾರಿ ಹೆಣ್ಣು ಶೋಕದ ಪ್ರತಿರೂಪವಾಗಿ ಬಿಂಬಿತವಾಗುವ ಹಿನ್ನೆಲೆಯಲ್ಲಿ ಸಿನಿಮಾದ ಈ ಘಟ್ಟ , ನಿರ್ದೇಶಕನ ಆಶಯ ಏನು ಎಂಬುದು ನಮಗೆ ತಿಳಿಯಲು ಸಹಾಯ ಮಾಡುತ್ತದೆ. ಶಿವಾನಿಯ ಪಾತ್ರ ಪೋಷಣೆ ಮತ್ತು ಬೆಳವಣಿಗೆ ಸ್ವಾಗತಾರ್ಹ. ಆ ಬೆಳವಣಿಗೆ ಏನು ಅನ್ನುವುದನ್ನು ನೀವು ಸಿನಿಮಾದಲ್ಲಿಯೇ ನೋಡಿ. ಶಿವಾನಿಯ ಪಾತ್ರಧಾರಿ ಬೃಂದಾ ಆಚಾರ್ಯ ನಟನೆ ಶ್ಲಾಘನೀಯ.
ರಾಮನ ಪಾತ್ರ ಪೋಷಣೆಯು ತಾಯಿಯ ಸಾವಿನ ನಂತರ ತಿರುವ ಪಡೆಯುತ್ತದೆ. ಆ ತಿರುವಿನ ಘಟ್ಟದಲ್ಲಿ ಅದ್ಭುತವಾದ ಸಾಹಿತ್ಯ, ಸಂಗೀತ ಮತ್ತು ದೃಶ್ಯ ಸಂಯೋಜನೆಯ ಈ ಕೆಳಗಿನ ಹಾಡು ಪ್ರೇಕ್ಷಕರನ್ನು ಭಾವನಾತ್ಮಕವಾಗಿಸುವಲ್ಲಿ ಯಶಸ್ವಿಯಾಗಿದೆ.
ಯಾರೋ ಕರೆದ ಹಾಗೆ ಹೋದೆ
ಏಕೆ ಹೀಗೆ, ನಾಳೆ ಬರದ ಹಾಗೆ
ಹೋದೆ ಎಲ್ಲಿ ಹೀಗೆ, ನೀ ಕೊಟ್ಟ ಎಲ್ಲಾ ಪ್ರೀತಿ
ವಾತ್ಸಲ್ಯದ ಋಣಭಾರ ಹೊತ್ತು ನಾನು ಇರಲಿ ಹೇಗೆ ?
ಮರಳಿ ಬಾ ಮರಳಿ ಬಾ ಮರಳಿ ಬಾ ನನ್ನಮ್ಮ
ಕೇಳಿಸಿಕೋ ಈ ಕರೆಯಮ್ಮ ಮರಳಿ ಬಾ ನನ್ನಮ್ಮ
ನೋವೆಲ್ಲಾ ನೀ ನುಂಗಿ ನಗುವ ಕೊಟ್ಟೆ
ನಿನ್ನೆಲ್ಲಾ ಆಸೆಗಳ ನನಗೇ ಬಿಟ್ಟೆ
ನಿನ್ನಾ ತ್ಯಾಗವ ಹೇಗೆ ಮರೆಯಲಿ,
ಅಮ್ಮಾ ಎಂದು ನಾ ಯಾರ ಕೂಗಲಿ
ಬರುವಾಗ ನೋವ ಕೊಟ್ಟು ಬಂದೆ ಎಂದು
ನನಗೀಗ ಅದನೇ ನೀನು ಬಿಟ್ಟೇ ಏನು
ಮರಳಿ ಬಾ ಮರಳಿ ಬಾ ಮರಳಿ ಬಾ ನನ್ನಮ್ಮ
ಕೇಳಿಸಿಕೋ ಕರೆಯಮ್ಮ ಮರಳಿ ಬಾ ನನ್ನಮ್ಮ
ಯಾರೋ ಕರೆದ ಹಾಗೆ ಹೋದೆ
ಏಕೆ ಹೀಗೆ, ನಾಳೆ ಬರದ ಹಾಗೆ
ಈ ಸಾಹಿತ್ಯ ಹಾಗೇ ಓದಿದಾಗ ಆಗುವ ಅನುಭವಕ್ಕಿಂತಲೂ ಸಿನಿಮಾದಲ್ಲಿ ಹೆಚ್ಚು ಗಾಢವಾದ ಪ್ರಭಾವ ಬೀರುತ್ತದೆ. ಅಮ್ಮ ಮಗನ ಬಾಂಧವ್ಯವನ್ನು ಹೇಳುವ ಈ ಹಾಡು ನನಗೆ ಇಷ್ಟ ಆಯ್ತು.
ರಾಮನ ಅಮ್ಮ ಕೌಸಲ್ಯ ತೀರಿಹೋದ ನಂತರ ಬರುವ ಸಿದ್ದೇಗೌಡರ ಸೊಸೆ ಮುತ್ತು ಲಕ್ಮೀ ಪ್ರವೇಶದಿಂದ ಸಿನಿಮಾದ ಮೊದಲ ಭಾಗದಲ್ಲಿ ಎತ್ತಿದ ಅನೇಕ ಪ್ರಶ್ನೆಗಳಿಗೆ ಉತ್ತರಾರ್ದದಲ್ಲಿ ಉತ್ತರ ನೀಡುತ್ತಾ ಸಾಗುತ್ತಾರೆ ನಿರ್ದೇಶಕ ಶಶಾಂಕ್. ಮುತ್ತು ಲಕ್ಮೀ ಮತ್ತು ರಾಮನ ಮದುವೆ Marriage for Convenience ಗೋಸ್ಕರ!
ತಾನು ಯಾಕೆ ಈ ಮದುವೆಗೆ ಒಪ್ಪಿಕೊಂಡೆ ಮತ್ತು ನಾನು ಯಾಕೆ ಕುಡಿಯಲು ಆರಂಭಿಸಿದೆ ಎನ್ನುವುದನ್ನು ಮತ್ತುಲಕ್ಷ್ಮಿ ಮತ್ತು ಗಂಡ ರಾಮನ ಬಳಿಯ ಈ ಸಂಭಾಷಣೆ ಕ್ಷಣ ಕಾಲ ನಮ್ಮನ್ನು ಚಿಂತನೆ ಮಾಡುವಂತೆ ಮಾಡುತ್ತದೆ.
ಮುತ್ತು ಲಕ್ಮೀ: ಹೆಣ ನೋಡಿದ್ರೆ ಭಯ ಆಗುತ್ತೆ ಅಂತ ಕುಡಿಯೋಕೆ ಶುರುಮಾಡಿದ ನಾನು ಈ ಹೊತ್ತು ಈ ಮಟ್ಟಕ್ಕೆ ಬಂದು ನಿಂತಿದ್ದೀನಿ ಅಂದ್ರೇ.. ನನ್ನ ಈ ಪರಿಸ್ಥಿತಿಗೆ ಕಾರಣ ಯಾರು ರಾಮ? …
ಭಯ ಆಗುತ್ತೆ ಅಂತ ಹೇಳಿದ್ರು, ಕೇಳದೆ ಮ್ಯಾನಿಪುಲೇಟ್ ಮಾಡಿದ ಅಪ್ಪನ?
ಇಲ್ಲ, ಹೆಣ ಇಟ್ಟುಕೊಂಡು ಪಾಠ ಮಾಡೋ ಸಿಸ್ಟಮಾ?
What an Irony
ಸತ್ತಿರುವವರು ಬದುಕಿರುವವರಿಗೆ ಪಾಠ ಆಗ್ತಾರಂತೆ.
ಆಗ ಮೌನಕ್ಕೆ ಶರಣಾಗುವ ರಾಮ ಗಮನ ಸೆಳೆಯುತ್ತಾನೆ.
ತಾಯಿಯಾಗಿರುವ, ಹೆಂಡತಿಯಾಗಿರುವ, ಸಹೋದರಿಯಾಗಿರುವ ಹೆಣ್ಣು, ಪುರುಷ ಪ್ರಧಾನವಾದ ಈ ಆಧುನಿಕ ಸಂದರ್ಭದಲ್ಲಿ ತನ್ನ ಅಸ್ಮಿತೆಯನ್ನು ಹೇಗೆ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ ಎನ್ನುವುದೇ ಕೌಸಲ್ಯ ಸುಪ್ರಜಾ ರಾಮ ಸಿನಿಮಾ. ಮಚ್ಚು, ಲಾಂಗ್, ಸುತ್ತಿಗೆಯಿಂದ ಚಚ್ಚಿಸಿಕೊಂಡ ಪ್ರೇಕ್ಷಕ ಸುಸ್ತಾಗಿದ್ದು ಮತ್ತು ಹೊಸತನ್ನು ಬಯಸುವವನಿದ್ದರೆ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಖಂಡಿತ ನೋಡಬಹುದಾದ ಸಿನಿಮಾ.
ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ ಮತ್ತು ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ವಿಮರ್ಶೆ
ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ವಿಮರ್ಶೆ