ಸುಮಾ ವೀಣಾ
ಕನಸಿನ ಭತ್ತಕ್ಕೆ ಗೋಣಿಯಾಂತಂತೆ– ನಯಸೇನನ ವಿಡಂಬನಾತ್ಮಕ ಕಾವ್ಯ ‘ಧರ್ಮಾಮೃತ’ದಲ್ಲಿ ಬರುವ ಮಾತಿದು. ಕನ್ನಡಿಯೊಳಗಿನ ಗಂಟು ಎಂಬ ನುಡಿಗಟ್ಟನ್ನು ಇದಕ್ಕೆ ಪೂರಕವಾಗಿ ತೆಗೆದುಕೊಳ್ಳಬಹುದು.
ಕನ್ನಡಿಯೊಳಗಿನ ಗಂಟು ನಮ್ಮ ಸಮಕ್ಷಮ ಇದ್ದರೂ ಅದನ್ನು ನೋಡಬಹುದೆ ವಿನಃ ಅದರ ಅನುಭೂತಿ ಪಡೆಯಲು ಸಾಧ್ಯವಿಲ್ಲ ಅದು ಬರೀ ಭ್ರಾಮಕ ಹಾಗೆಯೇ ಕನಸಿನಲ್ಲಿ ಭತ್ತದ ರಾಶಿಯನ್ನೆ ಕಂಡರೆ ಅದನ್ನು ಚೀಲದಲ್ಲಿ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಸಿಕ್ಕಂತೆ ಅಷ್ಟೇ ಅನುಭವಿಸಲು ಬಾರದು. ಇದು ಹೇಗೆ ಅಂದರೆ ತಾನೇ ಬಾಯಲ್ಲಿ ಕಚ್ಚಿಕೊಂಡ ಮೂಳೆಯನ್ನು ನೀರಿನ ಬಿಂಬದಲ್ಲಿ ನೋಡಿ ಅದನ್ನೂ ಬಯಸ ಹೋಗಿ ಇರುವುದನ್ನು ಕಳೆದುಕೊಂಡು ನಿರಾಸೆ ಅನುಭವಿಸಿದ ನಾಯಿಯಂತಾಗುತ್ತದೆ.
ಕನಸುಗಳು ಇರಬೇಕು ಆದರೆ ಕನಸಿನ ಕೋಟೆಯಲ್ಲಿಯೇ ಬಂಧಿಯಾಗಬಾರದು. ನಾವು ಕಂಡ ಕನಸನ್ನು ವಾಸ್ತವದಲ್ಲಿ ಈಡೇರಿಸಿಕೊಳ್ಳುವ ಛಲ ಇರಬೇಕು. . ಪುರಂದರದಾಸರು ಕನ್ನಡಿಯೊಳಗಿನ ಗಂಟ ಕಂಡು ಕಳ್ಳ ಕನ್ನವಿಕ್ಕುವನ ವಶವಹುದೇ? ಎಂದಿದ್ದಾರೆ ಇದು ಒಂದು ಭ್ರಾಮಕ ಸ್ಥಿತಿಯನ್ನು ಹೇಳುತ್ತದೆ. ವಾಸ್ತವದ ತಿಳಿವಿರಬೇಕೆಂಬುದು ಮುಖ್ಯ.
‘ಕನಸಿನ ಭತ್ತಕ್ಕೆ ಗೋಣಿಯಾಂತಂತೆ’ ಎಂಬ ಮಾತನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುವಂತಿಲ್ಲ. ದೂರದ ಬೆಟ್ಟ ನುಣ್ಣಗೆ ಕೈಗೆ ಸಿಗದ ದ್ರಾಕ್ಷಿ ಹುಳಿ ಎಂದು ತೀರ್ಮಾನಕ್ಕೂ ಬರಬಾರದು ಅದರ ಬೆನ್ನು ಹತ್ತ ಬೇಕು ಅಂದರೆ ಪರಿಶ್ರಮ ಪಡ ಬೇಕು . ಆಗ ಪ್ರತಿಫಲ ಸಿಗುತ್ತದೆ . ಆದರೆ ಸಿಕ್ಕೇ ಸಿಗುವುದು ಅನ್ನುವ ಹುಂಬತನವಿರಬಾರದು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದರೆ ಅಭಾವದಲ್ಲೂ ಅನುಭಾವ ಪಡೆಯುವ ಜೀವ ಚೈತನ್ಯ ಇರಬೇಕು. ಇರುವುದನ್ನು ಬಿಟ್ಟು ಸಿಗದೆ ಇರುವುದರ ಕಡೆಗೆ ನಮ್ಮ ಮನಸ್ಸು ಹೊರಳುವುದು ಇದನ್ನೆ ಗೊಪಾಲಕೃಷ್ಣ ಅಡಿಗರು ಇದ್ದುದೆಲ್ಲವ ಬಿಟ್ಟು ಇರದುದರರೆಡೆಗೆ ತುಡಿವುದೇ ಜೀವನ ಎಂದಿರುವುದು.
ಭ್ರಾಮಕ ಸ್ಥಿತಿಯಿಂದ ಹೊರ ಬಂದು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಬೇಕು ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕು ಅದನ್ನು ಹೊರತು ಪಡಿಸಿ ವಾಮಮಾರ್ಗ ಸಂಚಾರ ವ್ಯರ್ಥ ಎಂಬುದನ್ನು ಕನಸಿನ ಭತ್ತಕ್ಕೆ ಗೋಣಿಯಾಂತಂತೆ ಎಂಬ ಮಾತು ಹೇಳುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ
ವಾಸ್ತವ, ಹಾಗು ಪ್ರಯತ್ನ ದ ಬಗ್ಗೆ ಸೂಕ್ತವಾದ ವಿವರಣೆ.👏👏
ವಾಸ್ತವತೆ, ಪ್ರಯತ್ನ ದ ಬಗ್ಗೆ ಸೂಕ್ತವಾದ ವಿವರಣೆ.🙏🙏