ಎಂ.ವಿ. ಶಂಕರಾನಂದ
ಗಣೇಶ ಚತುರ್ಥಿ ಭಾರತದಲ್ಲಿ ವೈಭವದಿಂದ ಆಚರಿಸಲ್ಫಡುವ ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ನಾಲ್ಕನೇ ದಿನ, ಚತುರ್ಥಿ ದಿನ ಈ ಹಬ್ಬವನ್ನು ಖುಷಿಆಚರಿಸುತ್ತೇವೆ. ಈ ಹಬ್ಬದಲ್ಲಿ ಮುಖ್ಯವಾಗಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜೆ ಮಾಡುತ್ತೇವೆ.
ಗಣೇಶ ಚತುರ್ಥಿಯ ದಿನ ಚಂದ್ರ ದರ್ಶನ ಮಾಡಿದವರು “ಚೋರ” ನೆಂಬ ಅಪಖ್ಯಾತಿಗೆ ಗುರಿಯಾಗುತ್ತಾರೆ, ಎಂಬುದಕ್ಕೆ “ಶಮಂತಕಕೋಪಾಖ್ಯಾನ” ದ ಕಥೆ ಇದೆ.
ಒಮ್ಮೆ ದ್ವಾಪರಯುಗದಲ್ಲಿ ಶ್ರೀಕೃಷ್ಣ ಚೌತಿಯ ದಿನ ಅರಮನೆಯ ಉಪ್ಪರಿಗೆಯಲ್ಲಿ ಕುಳಿತಿದ್ದ. ರುಕ್ಮಿಣಿ ಆತನಿಗೆ ಹಾಲು ತಂದುಕೊಟ್ಟಳು. ಹಾಲು ಕುಡಿಯಲು ಲೋಟ ಎತ್ತಿದಾಗ ಹಾಲಿನಲ್ಲಿ ಕೃಷ್ಣನಿಗೆ ಚೌತಿಯ ಚಂದ್ರನ ದರ್ಶನವಾಯಿತು. ಅವನ ಮೇಲೂ ಕಳ್ಳತನದ ಆರೋಪ ಬಂತು.
ಕೃಷ್ಣನ ಬಂಧುಗಳಲ್ಲಿ ಒಬ್ಬನಾದ ಸತ್ರಾರ್ಜಿತನಲ್ಲಿ ಸೂರ್ಯ ದಯಪಾಲಿಸಿದ ಶಮಂತಕ ಎಂಬ ಒಂದು ಅಮೂಲ್ಯ ರತ್ನ ಇತ್ತು. ಅದು ದಿನವೂ 8 ಸೇರು ಬಂಗಾರವನ್ನು ನೀಡುತ್ತಿತ್ತು. ಅದನ್ನು ಧರಿಸಿ ಹೊರಟರೆ ಅದರ ಪ್ರಕಾಶದಿಂದ ಸೂರ್ಯನೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಕೃಷ್ಣ ಒಮ್ಮೆ ಇಂತಹ ಮಣಿ ಚಕ್ರವರ್ತಿಯ ಬಳಿ ಇರುವುದು ಕ್ಷೇಮ ಬಲರಾಮನಿಗೆ ಕೊಟ್ಟು ಬಿಡು ಎಂದು ಕೇಳಿದ. ಆದರೆ ಸತ್ರಾರ್ಜಿತ ಒಪ್ಪಲಿಲ್ಲ.ಆ ಮಣಿಯನ್ನು ಭೇಟೆಗೆ ಹಾಕಿಕೊಂಡು ಹೋಗುವಂತಿರಲಿಲ್ಲ. ಆದರೂ ಸತ್ರಾರ್ಜಿತ ಸೋದರ ಪ್ರಸೇನನು ಶಮಂತಕ ಮಣಿ ಧರಿಸಿ ಶ್ರೀಕೃಷ್ಣನ ಜತೆಗೂಡಿ ಬೇಟೆಗೆ ಹೋದನಂತೆ. ಬೇಟೆಯ ಸಂದರ್ಭದಲ್ಲಿ ಎಲ್ಲರೂ ದಾರಿ ತಪ್ಪಿದರು. ಪ್ರಸೇನ ಎಲ್ಲೋ ಕಾಡಿನಲ್ಲಿ ಕಾಣೆಯಾದ. ಪ್ರಸೇನನನ್ನು ಸಿಂಹವೊಂದು ಕೊಂದು ಶಮಂತಕ ಮಣಿಯನ್ನು ಅಪಹರಿಸಿತು. ಆ ಸಿಂಹವನ್ನು ಜಾಂಬವಂತನೆಂಬ ಕರಡಿಯು ಕೊಂದು ಮಣಿಯನ್ನು ತನ್ನ ಸ್ವಾಧೀನ ಮಾಡಿಕೊಂಡು ಅದನ್ನು ಮಗುವಿನ ತೊಟ್ಟಿಲಿಗೆ ಆಡಲು ಕಟ್ಟಿತು.
ಇತ್ತ ಕಾಡಿನಲ್ಲಿ ಪ್ರಸೇನನಿಗಾಗಿ ಹುಡುಕಿದ ಯಾದವರು, ಆತ ಸಿಗದಿದ್ದಾಗ ಕೃಷ್ಣ ಸಮೇತನಾಗಿ ಅರಮನೆಗೆ ಮರಳಿದರು. ಆದರೆ, ಸತ್ರಾರ್ಜಿತ ಹಾಗೂ ಪುರಜನರು ಮಣಿಗಾಗಿ ಕೃಷ್ಣನೇ ತನ್ನ ಸೋದರ ಪ್ರಸೇನನನ್ನು ಕೊಂದಿರಬೇಕು ಎಂದು ಅನುಮಾನಿಸಿದರು. ಚೌತಿಯ ಚಂದ್ರನ ದರ್ಶನದಿಂದ ತನಗೆ ಈ ಅಪವಾದ ಬಂದಿದೆ ಎಂಬುದನ್ನು ಗ್ರಹಿಸಿದ ಕೃಷ್ಣ , ಗಣಪನನ್ನು ಪೂಜಿಸಿ, ಪ್ರಸಾದ ಸ್ವೀಕರಿಸಿ, ಮಣಿಯನ್ನು ಹುಡುಕುತ್ತಾ ಕಾಡಿಗೆ ಹೊರಟ. ಆಗ ಅವನಿಗೆ ಸಿಂಹ ಪ್ರಸೇನನನ್ನು ಕೊಂದ್ದದ್ದು, ಸಿಂಹವನ್ನು ಜಾಂಬವಂತ ಕೊಂದಿದ್ದು ಹೆಜ್ಜೆ ಗುರುತುಗಳಿಂದ ತಿಳಿಯಿತು. ಮಣಿ ಹುಡುಕುತ್ತಾ ಅವನು ತನ್ನ ಸಹಚರರೊಂದಿಗೆ ಕರಡಿಯ ಗುಹೆಗೂ ಬಂದ. ಎಲ್ಲರನ್ನೂ ಹೊರಗೆ ನಿಲ್ಲಿಸಿ ತಾನೊಬ್ಬನೇ ಕರಡಿಯ ಗುಹೆ ಹೊಕ್ಕ. ಕ್ಷತ್ರಿಯನಾದ ತಾನು ಹೋರಾಡಿಯೇ ಈ ಮಣಿಯನ್ನು ಪಡೆಯುತ್ತೇನೆ ಎಂದು ಹೇಳಿ ಪಂಚಜನ್ಯವನ್ನು ಊದಿದ.
ಹೊರಗೆ ಹೋಗಿದ್ದ ಜಾಂಬವಂತ ಗುಹೆಗೆ ಮರಳಿ, ದ್ವಾರಕ್ಕೆ ದಪ್ಪ ಕಲ್ಲ ಬಂಡೆಯನ್ನು ಅಡ್ಡ ಇಟ್ಟು, ಕೃಷ್ಣನೊಂದಿಗೆ ಕಾಳಗಕ್ಕೆ ನಿಂತ.ಹೊರಗೆ ನಿಂತಿದ್ದವರು 7 ದಿನ ಕಾದರೂ ಕೃಷ್ಣ ಬಾರದಿದ್ದಾಗ ಕೃಷ್ಣ ಸತ್ತಿರಬೇಕು ಎಂದು ತಿಳಿದು ಹಿಂತಿರುಗಿದರು. ಸತತವಾಗಿ 15 ದಿನ ಯುದ್ಧ ನಡೆಯಿತು. ತ್ರೇತಾಯುಗದ ರಾಮನ ಭಂಟನಾಗಿದ್ದ ಜಾಂಬವಂತನೂ ಸೋಲಲಿಲ್ಲ. ದ್ವಾಪರದಲ್ಲಿ ಕೃಷ್ಣಾವತಾರದಲ್ಲಿದ್ದ ನಾರಾಯಣನೂ ಸೋಲಲಿಲ್ಲ. ಕಡೆಗೆ ಕೃಷ್ಣ ಪರಮಾತ್ಮ ಶ್ರೀರಾಮನಾಗಿ ಜಂಬವಂತನಿಗೆ ದರ್ಶನ ನೀಡಿದ. ತನ್ನ ತಪ್ಪನ್ನು ಅರಿತ ಜಾಂಬವಂತ ತನ್ನ ಮಗಳು ಹಾಗೂ ಕನ್ಯಾಮಣಿಯಾದ ಜಾಂಬವತಿಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿ, ಶಮಂತಕ ಮಣಿ ಕೊಟ್ಟು, ಆನಂದದಿಂದ ಕಳುಹಿಸಿಕೊಟ್ಟ. ಕೃಷ್ಣ ಶಮಂತಕ ಮಣಿಯಾಂದಿಗೆ ಮರಳಿದಾಗ ಜನರು ತಮ್ಮ ತಪ್ಪನ್ನು ಮನ್ನಿಸುವಂತೆ ಕೃಷ್ಣನನ್ನು ಕೋರಿದರು.ಚೌತಿಯ ಚಂದ್ರ ದರ್ಶನ ದೇವಾನು ದೇವತೆಗಳನ್ನೂ ಬಿಟ್ಟಿಲ್ಲ ಎನ್ನುತ್ತದೆ ಕತೆ. ಅಕಸ್ಮಾತ್ ಚೌತಿಯ ಚಂದ್ರ ದರ್ಶನವಾಗಿದ್ದರೂ, ಈ ಕತೆ ಕೇಳಿದರೆ ಅಥವಾ ಓದಿದರೆ, ಜನರಿಗೆ ದೋಷಕ್ಕೆ ಪರಿಹಾರ ಸಿಗುತ್ತದೆ ಎನ್ನುತ್ತದೆ ಪುರಾಣ.
ಆ ದೋಷ ಪರಿಹಾರಾರ್ಥವಾಗಿ ಸಿಂಹಃ ಪ್ರಸೇನ್ನಂ ಅವಧಿ, ಸಿಂಹೌ ಜಾಂಬವತಾ ಹತಃ, ಸುಕುಮಾರಕ ಮಾರೋದ, ತವಶ್ಯೇಷ ಶಮಂತಕಃ
ಏಕ ದಂತಾಯ ವಿದ್ಮಹೇ, ವಕ್ರ ತುಂಡಾಯ ಧೀಮಹೆ, ತನ್ನೋ ದಂತಿ: ಪ್ರಚೋದಯಾತ್..
ವಕ್ರ ತುಂಡ ಮಹಾ ಕಾಯ ಕೋಟಿ ಸೂರ್ಯ ಸಮಪ್ರಭ, ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ..
ಅ ಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ, ಅನೇಕ ದಂತಂ ಭಕ್ತಾನಾಂ ಏಕ ದಂತಂ ಉಪಾಸ್ಮಹೆ…
ಎಂಬ ಶ್ಲೋಕವನ್ನು ಪದೇ ಪದೇ ಪಠಿಸ ಬೇಕು ಎನ್ನುತ್ತಾರೆ ಹಿರಿಯರು.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ. 2022 ನೇ ಸಾಲಿನ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ