ಸುಮಾವೀಣಾ
ಅತಿಬುದ್ಧಿಯುಳ್ಳವರಾದೊಡಂ ಶಾಸ್ತ್ರ ಚಿಂತನೆಯಂ ಮಾಡವೇಳ್ಕುಂ-ಪಂಚ ತಂತ್ರದಲ್ಲಿ ಬರುವ ಮಾತಿದು. ಅತಿಬುದ್ಧಿವಂತಿಕೆ, ಅತೀವಿಶ್ವಾಸ ಎರಡೂ ಅಪಾಯಕಾರಿ . ಇವೆರಡರ ಹಂದರದಲ್ಲಿ ಬಂಧಿಯಾದರೆ ಮೂಲ ವ್ಯಕ್ತಿತ್ವತ್ವಕ್ಕೆ ಸಂಚಕಾರ ತಂದುಕೊಂಡಂತೆ.
“ನಾನು ತುಂಬಾ ತಿಳಿದುಕೊಂಡಿದ್ದೇನೆ! ನನಗ್ಯಾರು ಸಾಟಿ ?” ಎಂಬ ಅಹಮಿಕೆ, ನಂಬಿಕೆ ಕೆಲವೊಮ್ಮೆ ಹುಸಿಯಾಗಬಹುದು. “ಎಲ್ಲಾ ಸರಿಯಿದೆ!” ಎಂಬ ಅತಿವಿಶ್ವಾಸ ಮತ್ತು “ಅದೇನ್ ಮಹಾ? ಚಿಕ್ಕವಿಷಯ” ಎಂಬೆರಡೂ ಧೋರಣೆಯೂ ತಪ್ಪೇ! .
ಈಗಿನ ದಿನಮಾನದಲ್ಲಿ ಪರಿಪ್ರೇಕ್ಷಗಳು ಒಂದರಿಂದ ಒಂದಕ್ಕೆ ಉನ್ನತೀಕರಣವಾಗುತ್ತಿರುತ್ತದೆ. ಹಾಗಾಗಿ ನಾವು ತಿಳಿದುಕೊಂಡ ವಿಚಾರಕ್ಕಿಂತ ಒಂದು ಹೆಜ್ಜೆ ಆ ವಿಷಯ ಔನ್ನತ್ಯಕ್ಕೇರಿರುವ ಸಾಧ್ಯತೆಯೂ ಇರುತ್ತದೆ ಹಾಗಾಗಿ ಇದಿಷ್ಟೇ….! ಇದಮಿತ್ಥಮ್,,,! ಎಂದು ದೊಡ್ಡದೊಂದು ಅಡ್ಡಗೆರೆ ಎಳೆದು ಸುಮ್ಮನಾಗುವುದು ಮೂರ್ಖತನವೇ ಸರಿ!
ಮೇಲ್ನೋಟಕ್ಕೆ ನಾವಂದು ಕೊಂಡಿರುವ ಸರಿ ಎನಿಸಿದರೂ ವೈಜ್ಞಾನಿಕವಾಗಿ ಏನಾದರೊಂದು ತೊಡಕು ಇದ್ದಿರಬಹುದು ಹಾಗಾಗಿ “ಬೆಟ್ಟಕ್ಕಿಂತ ಬೆಟ್ಟ ದೊಡ್ಡದು” ಎಂಬಂತೆ ಅಂತಿಮ ನಿರ್ಧಾರಕ್ಕೂ ಮುನ್ನ ವಿಚಾರವನ್ನು ಪರಾಮರ್ಶೆ ಮಾಡುವುದು ಒಳಿತು ಇಲ್ಲವಾದರೆ ಓಟದ ಸ್ಪರ್ಧೆಯಲ್ಲಿ ಮೊಲ ಆಮೆಯಿಂದ ಸೋತ ಕತೆಯಂತಾಗುತ್ತದೆ.
ಅತಿ ವಿಶ್ವಾಸ ಎಂದಿಗೂ ಅಪಾಯಕಾರಿ. ಬುದ್ಧಿಗೆ ಹೊಳೆದದ್ದೆಲ್ಲವೂ ತಾರ್ಕಿಕವಾಗಿ ಸರಿಯಾಗಬೇಕೆಂದಿಲ್ಲ ವೈಚಾರಿಕತೆಗೂ ಭಾವನಾತ್ಮಕತೆಗೂ ಕೆಲವು ವಿಚಾರಗಳಲ್ಲಿ ಹೇಗೆ ವೆತ್ಯಾಸವಿರುತ್ತದೆಯೋ ಹಾಗೆ ಇಲ್ಲಿಯೂ. ತಿಳಿಯುವುದು ಸಾಗರದಷ್ಟು ಇದ್ದರೂ ಸ್ವಲ್ಪ ತಿಳಿದೊಡನೆಯೆ ನಾನೆ ಬುದ್ಧಿವಂತ ಎಂಬ ಅಮಲು ತಲೆಗೇರಬಾರದು ಜೀವನ ಪರ್ಯಂತ ಕಲಿಯುವುದು ಇದ್ದೇ ಇರುತ್ತದೆ. ದಡ್ಡತನವನ್ನು ಯಾರಾದರೂ ಕ್ಷಮಿಸುವರು ಆದರೆ ಉದ್ಧಟತನವನ್ನು ಯಾರೂ ಸಹಿಸುವುದಿಲ್ಲ. ಹಾಗಾಗಿ ನಾನೇ ಎಲ್ಲವೂ ಎಂಬ ಅಹಂ ಸಲ್ಲದು. ಬುದ್ಧಿ ಹಾಗು ಜ್ಞಾನ ಎರಡೂ ಒಟ್ಟಿಗಿರಬೇಕು ಎಂಬುದನ್ನು “ಅತಿಬುದ್ಧಿಯುಳ್ಳವರಾದೊಡಂ ಶಾಸ್ತ್ರ ಚಿಂತನೆಯಂ ಮಾಡವೇಳ್ಕುಂ” ಎಂಬ ಮಾತು ಹೇಳುತ್ತದೆ.

ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ