ಕಣ್ಮಲರರಿಯದೆ ಮನಂ ಅರಿದುದು– ನೇಮಿಚಂದ್ರ ಕವಿಯ ‘ಲೀಲಾವತಿ ಪ್ರಬಂಧ’ದಲ್ಲಿ ಉಲ್ಲೇಖವಾಗಿರುವ ಮಾತಿದು.ಕಣ್ಣರಿಯದಿದ್ದರೂ ಮನಸ್ಸು,ಕರುಳು ಅರಿವುದು ಎಂಬ ಮಾತು ಎಲ್ಲರಿಗು ತಿಳಿದಿರುವಂಥದ್ದೆ. ಪ್ರತಿಭೆ ಎಂಬುದು ದೃಗ್ಗೋಚರವಲ್ಲ ಹೃದ್ಗೋಚರ ಎಂಬಂತೆ ಹೃದಯಕ್ಕೆ ತಿಳಿಯುವಂತಹ ಮಾತನ್ನು ಕುರಿತು ಈ ಮಾತಿದೆ.
ಕಂಡದ್ದೆಲ್ಲವನ್ನು ಸಾಕ್ಷಿಯ ಹಿನ್ನೆಲೆಯಿಂದಲೇ ವಿವೇಚಿಸುತ್ತೇವೆ ಎಂದು ತೀರ್ಮಾನಕ್ಕೆ ಬರಲಾಗದು.ಮನಸ್ಸಿನ ಸೂಕ್ಷ್ಮ ಸಂವೇದನೆಯ ಹಿನ್ನೆಲೆಯಿಂದಲೂ ಅವಲೋಕಿಸಬಹುದು. ಬುದ್ಧಿಯ ಮಾತು ಎಲ್ಲಾ ಸಂದರ್ಭಕ್ಕೂ ಹೊಂದಿಕೆಯಾಗುವುದಿಲ್ಲ. ಹೃದಯದಿಂದ ಮನಸ್ಸಿನ ಸಂಚಲನಕ್ಕೆ ಆ ಭಾವಕ್ಕೆ ಸ್ಪಂದಿಸಲೇಬೇಕಾಗುತ್ತದೆ. ಸಂಬಂಧಗಳು ತಮಗೆ ತಿಳಿಯದಂತೆ ಅವಿನಾಭಾವ ಬಂಧವನ್ನು ಹೊಂದಿರುತ್ತದೆ.
ಮನುಷ್ಯ ಸಮಾಜ ಸುಸ್ಥಿತಿಯಲ್ಲಿ ಇರಬೇಕೆಂದರೆ ಆತನ ಸಂಬಂಧದಲ್ಲಿಯೂ ಅನ್ಯೋನ್ಯತೆ ಇರಬೇಕು. ಕಣ್ಣಿಗೆ ಕಂಡಿದ್ದು ಸತ್ಯವಲ್ಲ. ಪರೀಕ್ಷಕ ದೃಷ್ಟಿಯಿಂದ ಈಕ್ಷಿಸಿದರೆ ಸತ್ಯಾಸತ್ಯತೆಗಳ ಅರಿವಾಗುತ್ತದೆ.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಇಲ್ಲಿ ಸಂವಾದಿಯಾಗಿ ನೋಡಬಹುದು. ಕಣ್ಣಿಗೆ ಕಂಡದ್ದೆಲ್ಲ ಸತ್ಯವೆಂದು ಭಾವಿಸಲಾಗದು ಮೇಲ್ನೋಟಕ್ಕೆ ಸತ್ಯದ ಛಾಯೆ ಹೊಂದಿದ್ದರೂ ಅದು ಸುಳ್ಳಾಗಬಹುದು ಹಾಗಾಗಿ ಯಾವುದೇ ವಿಚಾರದಲ್ಲಿ ಆತುರದ ತೀರ್ಮಾನಕ್ಕೆ ಬಾರದೆ ಸಂದರ್ಭವನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಜಾಗೃತೆಯ ಎಚ್ಚರ ಬೇಕೆಂಬುದನ್ನು ಪ್ರಸ್ತುತ ಮಾತು ಹೇಳುತ್ತದೆ. ಯಾರೇ ಆಗಲಿ ವಿವೇಚನಾಯುಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ತಿಳಿವಿಗಿಂತ ತಾಳುವಿಕೆಗಿಂತ ಹೆಚ್ಚಿನದಿಲ್ಲ ಅಲ್ವ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ