ಸುಮಾವೀಣಾ
ಬಡಿಗಂಡನಿಲ್ಲ ಪಾಲನೆ ಕಂಡಂ (ಬಡಿಗೆ ಕಾಣಲಿಲ್ಲ ಹಾಲು ಮಾತ್ರ ಕಂಡಿತು)- ಪಂಪನ ವಿಕ್ರಮಾರ್ಜುನ ವಿಜಯಂ ದ ಸಪ್ತಮಾಶ್ವಾಸದಲ್ಲಿ ಉಲ್ಲೇಖವಾಗಿರುವ ಮಾತು.
ದುರ್ಯೋಧನ ಜೂಜಿನ ಗೆಲುವಿನಿಂದ ಬಂದ ರಾಜ್ಯವನ್ನು ನೋಡಿ ಹಿಗ್ಗುತ್ತಾನೆಯೇ ವಿನಾ ಅದರಿಂದ ಮುಂದಾಗುವ ಶಾಶ್ವತ ಅಪಕೀರ್ತಿಯನ್ನು ಮುಂಗಾಣಲಿಲ್ಲ ಎಂದು ವಿವರಿಸುವಲ್ಲಿ “ಬಡಿಗಂಡನಿಲ್ಲ ಪಾಲನೆ ಕಂಡಂ” ಎನ್ನುವ ಮಾತು ಬಂದಿದೆ.
ಅಂದರೆ ಬೆಕ್ಕು ಕದ್ದು ಹಾಲನ್ನು ಕುಡಿಯುವಾಗ ದೊಣ್ಣೆಯನ್ನು ಕಾಣದೆ ಹಾಲನ್ನು ಮಾತ್ರ ಕಂಡಿತು ಎಂಬುದಾಗಿ ಆಡು ಮಾತಿನಲ್ಲಿ ಹೇಳಬಹುದು. ವಾಮಮಾರ್ಗದಿಂದ ಪಡೆದುಕೊಂಡದ್ದು ಸುಲಭವಾಗಿ ದಕ್ಕುವುದಿಲ್ಲ ಎಂಬುದೇ ಇದರ ತಾತ್ಪರ್ಯ.
ಇಂದಿನ ದಿನಮಾನಗಳಲ್ಲಿಯೂ ಅಪರಾಧ ಕೃತ್ಯಗಳನ್ನು ಮಾಡುವಾಗ ಹೇಗಾದರೂ ಸರಿ! ತಪ್ಪೋ? ಸರಿಯೋ? ನ್ಯಾಯವೋ ?ಅನ್ಯಾಯವೋ ?ಅಂದುಕೊಂಡಿದ್ದನ್ನು ಮಾಡಿ ಬಿಡಬೇಕು ಅನ್ನುವಲ್ಲಿಗೆ ಮಾತ್ರ ಅವರ ಆಲೋಚನೆಗಳು ಸೀಮಿತವಾಗಿರುತ್ತವೆ ತದನಂತರ ಬರುವ ಸಮಸ್ಯೆಗಳು, ಮಾನಾಪಮಾನ, ಶಿಕ್ಷೆಗಳ ಬಗ್ಗೆ ಕಿಂಚಿತ್ ಯೋಚನೆಯನ್ನೂ ಮಾಡುವುದಿಲ್ಲ ಅದೊಂದು ಉನ್ಮಾದದಲ್ಲಿ ಪಾಪ ಕೃತ್ಯಗಳನ್ನು ಎಸಗಿ ಬಿಡುತ್ತಾರೆ . ಕಾನೂನಿನ ಸಂಚನೆಗಳನ್ನು ಎದುರಿಸುವಾಗ ಪಶ್ಚಾತ್ತಾಪ ವಾಗುತ್ತದೆ. ಪಾಪಕೃತ್ಯ ಮಾಡುವುದು ಅಲ್ಪ ಕಾಲದಲ್ಲಿಯೇ ಆದರೂ ಅದರ ಪರಿಣಾಮ ದೀರ್ಘಕಾಲದ್ದೆನ್ನುವ ಸತ್ಯವನ್ನು ಮನಗಾಣಬೇಕಿದೆ.
ಹಾಲನ್ನು ಕುಡಿಯುವ ಬೆಕ್ಕು ಕೇವಲ ಅದರ ಬಗ್ಗೆಯೇ ಯೋಚನೆ ಮಾಡುತ್ತಿರುತ್ತದೆ ಆದರಲ್ಲೆ ಇರುವ ಅದಕ್ಕೆ ಹೊಡೆಯಲೆಂದೇ ಇರಿಸಿರುವ ಬಡಿಗೆ ಬಗ್ಗೆ ಯೋಚನೆ ಮಾಡುವುದಿಲ್ಲ.
ಕವಿಯ ಶಬ್ದಚಮತ್ಕಾರವನ್ನು ಪದಜಿಜ್ಞಾಸುಗಳು ಗಮನಿಸಬೇಕು ‘ಬಡಿಗೆ ಕಂಡನಿಲ್ಲ’ ಎಂಬಲ್ಲಿ ಕ>ಗ ಆಗುವುದು ಒಂದೆಡೆಯಾದರೆ ,ಬಡಿಯುವ ಗಂಡ ಅಂದರೆ ಒದಗುವ ಆಪತ್ತಿನ ಬಗ್ಗೆ ಅದು ಯೋಚಿಸುವುದಿಲ್ಲ ಎಂಬ ಅರ್ಥವನ್ನು ಅಡವಾಗಿಸಿದ್ದಾನೆ. ಬೆಕ್ಕು ಇಲ್ಲಿ ಪ್ರತಿಮೆ ಮಾತ್ರ ಹೆಚ್ಚೆಂದರೆ ಅದಕ್ಕೆ ಹೊಟ್ಟೆ ಹಸಿವನ್ನು ಇಂಗಿಸಿಕಳ್ಳುವ ಚಿಂತಯೆ ಅಷ್ಟೆ .
ಮನುಷ್ಯ ಹಾಗಾಲ್ಲ ಸ್ವಾರ್ಥಿಯಾಗಿರುತ್ತಾನೆ. ಒಳಗೊಳಗೆ ಕುತಂತ್ರ ನಡೆಸಿ ತಮಗೆ ಲಾಭ ಮಾಡಿಕೊಳ್ಳುವವರನ್ನು ಬೆಕ್ಕಿಗೆ ಹೋಲಿಸುವುದಿದೆ ಯಾವುದೇ ಕೆಲಸ ಮಾಡಬೇಕಾದರೂ ದೂರಾಲೋಚನೆಗಳು ಇರಬೇಕು ದೂರಾಲೋಚನೆಗಳು ಮುಂಬರುವ ವಿಪತ್ತುಗಳ ದಿಕ್ಸೂಚಿಗಳಾಗುತ್ತವೆ ಹಾಗಾದಾಗ ದುರಾಲೋಚನೆಗಳು ಇಲ್ಲವಾಗುತ್ತವೆ , ಸರ್ವಕಾಲಕ್ಕೂ ಅನ್ವಯವಾಗುವ ಎಚ್ಚರವನ್ನು ಪಂಪ ದುರ್ಯೋಧನನ ಪಾತ್ರದ ಮೂಲಕ ಪ್ರಮಾಣೀಕರಿಸಿದ್ದಾನೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ