ಸುಮಾವೀಣಾ
ಏನೆನಾಗದೋ ಪಾಪದ ಫಳಂ ಎಯ್ದೆವಂದ ದೆವಸದೊಳಾರ್ಗಂ?(ಪಾಪದ ಫಲ ಹತ್ತಿರಕ್ಕೆ ಬಂದ ಯಾರ್ಯಾರಿಗೆ ಏನೇನಾಗುತ್ತದೋ)ಯುಧಿಷ್ಠಿರನು ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿರಿಸಿ ಸೋತನಂತರದಲ್ಲಿ ಆದಿಕವಿ ಪಂಪ ಈ ಉದ್ಗಾರವನ್ನು ತೆಗೆಯುತ್ತಾನೆ.
ಈ ಸಂದರ್ಭದಲ್ಲಿ ದ್ರೌಪದಿ ಪಣವಾಗಿದ್ದಾಳೆ ಪಾಂಡವರು ಸೋಲುತ್ತಾರೆ. ಅವಮಾನದ ಸೇಡಿಗೆ ಕೆರಳಿ ಆಕೆ ಪ್ರತಿಜ್ಞೆ ಮಾಡುತ್ತಾಳೆ… ಮುಡಿ ಬಿಚ್ಚುತ್ತಾಳೆ. ಬಿಚ್ಚಿದ ಮುಡಿಯನ್ನು ಮತ್ತೆ ಕಟ್ಟುವಲ್ಲಿವರೆಗಿನ ಸಮಯ ಬಲು ದೀರ್ಘದ್ದು ಅವಳು ಪ್ರತಿಜ್ಞೆ ಈಡೇರಿಸಿಕೊಳ್ಳುವ ದಿವಸದ ವರೆಗೆ ಯಾರ್ಯಾರು ಏನೇನನ್ನು ಅನುಭವಿಸಬೆಕಾಗುತ್ತದೆಯೋ ಎನ್ನುವ ಅರ್ಥದಲ್ಲಿ ಕವಿ “ಪಾಪದ ಫಲ ಹತ್ತಿರಕ್ಕೆ ಬಂದ ಯಾರ್ಯಾರಿಗೆ ಏನೇನಾಗುತ್ತದೋ?” ಎಂಬ ಮಾತನ್ನು ಬಳಸಿದ್ದಾನೆ.
ಸೋದಾಹರಣವಾಗಿ ನೋಡುವುದಾದರೆ ಅದೃಷ್ಟ, ದೈವಬಲ, ಪಡೆದುಕೊಂಡು ಬಂದಿರುವುದು, ಹಣೆಬರಹ,ದುರಾದೃಷ್ಟ ಇತ್ಯಾದಿ ಮಾತುಗಳನ್ನು ಒಳ್ಳೆಯದಾಗಲಿ ಇಲ್ಲವೆ ಕೆಟ್ಟದಾಗಲಿ ಬಳಸುತ್ತೇವೆ. ಕೆಟ್ಟ ಕೆಲಸ ಮಾಡುವವರಿಗೆ ತಕ್ಷಣ ಕೆಟ್ಟದ್ದಾಗುತ್ತದೆ ಶಿಕ್ಷೆ ಆಗುತ್ತದೆ ಎಂಬುದೇನು ಇಲ್ಲ. ವೈಯಕ್ತಿಕ ಹಾಗು ಸಾಮಾಜಿಕ ಬದುಕನ್ನು ನಡೆಸುವಾಗ ಒಳ್ಳೆಯದು ಕೆಟ್ಟದ್ದು ಎಲ್ಲವೂ ಇದ್ದದ್ದೆ. ಇದನ್ನು ಒತ್ತಟ್ಟಿಗಿರಿಸಿದರೆ ಶಿಷ್ಟ ಬದುಕಿಗೂ ಈ ಮಾತು ಅನ್ವಯ. ಯಾವುದೋ ಆಫೀಸಿನಲ್ಲಿ ಕೆಲಸ ಮಾಡುತ್ತಿರುತ್ತಾರೆ ಲೆಕ್ಕ ಪತ್ರದ ಶಾಖೆ ಇರಬಹುದು ಇಲ್ಲ ಸರಕಾರಿ ದಾಸ್ತಾನು ಮಳಿಗೆಗಳು ಇತ್ಯಾದಿಗಳು ಇರಬಹುದು…. ಏನೋ ಲೆಕ್ಕ ಪತ್ರದಲ್ಲಿ, ದಾಖಲೆಯಲ್ಲಿ, ದಾಸ್ತಾನಿನಲ್ಲಿ ವ್ಯತ್ಯಾಸವಾಗುತ್ತದೆ ಅದನ್ನು ಮೊದಲ ಹಂತದಲ್ಲಿ ಸರಿಪಡಿಸಿದರೆ ಸರಿ! ಆನಂತರ ಅದನ್ನು ಸರಿ ಪಡಿಸಲು ಕಷ್ಟ.
ಹೇಳಿ ಕೇಳಿ ಇದು ಆನ್ಲೈನ್ ಯುಗ. ಇಂಥ ಸಣ್ಣ ದೋಷಗಳೆ ಬೆಳೆದು ದೊಡ್ಡವಾಗಿರುತ್ತವೆ ಆ ತಪ್ಪುಗಳು ಒಮ್ಮೆಗೆ ಸಿಕ್ಕಿಬಿದ್ದರೆ ತೊಂದರೆಯೇ …! ಸಂಬಂಧ ಪಟ್ಟ ವ್ಯಕ್ತಿ ಬದಲಾಗಿ ಇಡಿ ಕಛೇರಿಯವರೆ ಹೊಣೆಗಾರರಾಗಬಹುದು . ಹಾಗೆಯೇ ರೈಲು ಹಳಿಯಮೇಲೆ ಚಲಿಸುವಾಗ ತೊಂದರೆ ಏನೂ ಇರುವುದಿಲ್ಲ ಸ್ವಲ್ಪ ವೆತ್ಯಾಸವಾದರೂ ಅನಾಹುತಗಳಾಗುತ್ತವೆ ತಪ್ಪು ಒಬ್ಬರಿಂದ ಆಗುವುದಾದರೂ ಶಿಕ್ಷೆ ಅಮಾಯಕರಿಗಾಗುತ್ತದೆ. ಮಹಾಭಾರತ ಯುದ್ಧದಲ್ಲಿ ಪ್ರಾಣ ತೆತ್ತವರಲ್ಲಿ ದಾಯಾದಿಗಳು , ವೈರಿಗಳು ಮಾತ್ರವಿರಲಿಲ್ಲ . ಜೋಳವಾಳಿಯ ಹೆಸರಿನಲ್ಲಿ ಅಮಾಯಕರೂ ಪ್ರಾಣ ತೆರಬೇಕಾಯಿತು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ