21.7 C
Karnataka
Thursday, November 21, 2024

    ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಇನ್ನು ಮುಂದೆ ನ್ಯಾಕ್‌ (NAAC) ಸಂಸ್ಥೆಯಿಂದ ಅವಳಿ ಮಾನ್ಯತಾ ಪದ್ಧತಿ

    Must read

    .ಪೀಠಿಕೆ:- ದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಎನ್‌ ಇ ಪಿ 2020 ರ ಪರಮೋಚ್ಛ ಉದ್ಧೇಶವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿ  ಬೋಧನಾ-ಕಲಿಕೆ, ಸಂಶೋಧನೆ, ಸೃಜನಶೀಲತೆಯ ಬೆಳವಣಿಗೆ, ಪ್ರೇರಿತ ಶಿಕ್ಷಕರು, ಉದ್ಯೋಗ ಕೌಶಲ್ಯಗಳು, ಶೈಕ್ಷಣಿಕ ವಾತಾವರಣ, ಭೌತಿಕ ಸೌಲಭ್ಯಗಳ  ಜೊತೆಗೆ ಮೌಲ್ಯಮಾಪನ ಮತ್ತು ಮಾನ್ಯತೆಯು ಸಹ ಬಹಳ ಮುಖ್ಯ ಮತ್ತು ಅದರ ಅವಿಭಾಜ್ಯ ಅಂಗವಾಗಿದೆ. ಮೌಲ್ಯಮಾಪನ ಮಾಡಿ, ಮಾನ್ಯತೆಯನ್ನು ನೀಡುವ ಕಾರ್ಯವನ್ನು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು (ನ್ಯಾಶನಲ್‌ ಅಸೆಸ್‌ಮೆಂಟ್‌ ಅಂಡ್‌ ಅಕ್ರೆಡಿಟೇಶನ್‌ ಕೌನ್ಸಿಲ್-NAAC) ಕಳೆದು ಮೂವತ್ತು ವರ್ಷಗಳಿಂದಲೂ ಮಾಡುತ್ತಾ ಬಂದಿದೆ.

    ಎನ್‌ ಇ ಪಿ 2020 ರ ಉದ್ದೇಶಗಳ ಅನುಗುಣವಾಗಿ ಮೌಲ್ಯಮಾಪನ ಮತ್ತು ಮಾನ್ಯತಾ ಪ್ರಕ್ರಿಯೆಯನ್ನು ಬಲಪಡಿಸುವ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಭಾರತ ಸರ್ಕಾರದ ವತಿಯಿಂದ 2022 ರಲ್ಲಿ ಡಾ. ಕೆ. ರಾದಾಕೃಷ್ಣನ್‌, ವಿಶ್ರಾಂತ ಅಧ್ಯಕ್ಷರು, ಇಸ್ರೊ, ಇವರ ನೇತೃತ್ವದಲ್ಲಿ ಸಮಗ್ರ ಸಮಿತಿಯನ್ನು ರಚಿಸಲಾಯಿತು. ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಮತ್ತು ಪ್ರತ್ಯುತ್ತರಗಳನ್ನು ಸಂಗ್ರಹಿಸಿ, ಸಮಿತಿಯು ಅಂತಿಮ ವರದಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ಜನವರಿ 2024 ರಲ್ಲಿ ಸಲ್ಲಿಸಿತು. ಸಮಿತಿಯ ಶಿಪಾರಸ್ಸುಗಳನ್ನು ಅಂಗೀಕರಿಸಿ, ಹೊರಡಿಸಿದ ಸರ್ಕಾರದ ಆದೇಶದ ಮೇರೆಗೆ ನ್ಯಾಕ್‌ ಸಂಸ್ಥೆಯು ಈಗಿರುವ ಶ್ರೇಣೀಕರಣದ ಮಾನ್ಯತೆಯ ಬದಲಿಗೆ ಅವಳಿ ಮಾನ್ಯತೆಯನ್ನು  ಎರಡು ಹಂತಗಳಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ.

    ಚಾಲ್ತಿಯಲ್ಲಿರುವ ಶ್ರೇಣಿಕರಣದ ಮಾನ್ಯತೆಯ ಪದ್ಧತಿ

    ಈಗ ಚಾಲ್ತಿಯಲ್ಲಿರುವ ಶ್ರೇಣೀಕರಣದ ಮಾನ್ಯತೆಯ ಪದ್ಧತಿಯಲ್ಲಿ ಪಠ್ಯಕ್ರಮ, ಬೋಧನಾ-ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆ, ಭೌತಿಕ ಸೌಲಭ್ಯಗಳು ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಬೆಂಬಲಿತ ಸೌಕರ್ಯಗಳು, ಆಳ್ವಿಕೆ, ನಾಯಕತ್ವ ಮತ್ತು ನಿರ್ವಹಣೆ, ಸಂಸ್ಥೆಯ ಮೌಲ್ಯಗಳು ಹೀಗೆ ಏಳು ಮಾನದಂಡಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಶೇಕಡಾ 70 ರಷ್ಟು ದತ್ತಾಂಶ ಆಧಾರಿತ ಮತ್ತು ಉಳಿದ ಶೇಕಡಾ 30 ಅಂಕಗಳಿಗೆ ಸಮಾನ ಸ್ಕಂದರ ತಂಡದಿಂದ ಭೌತಿಕ ಪರಿಶೀಲನೆ ನಡೆಸಿ ಎರಡು ಹಂತಗಳ ಫಲಿತಾಂಶಗಳನ್ನು ಕ್ರೌಢೀಕರಿಸಿ ಶ್ರೇಣೀಕರಣದ ಮಾನ್ಯತೆಯನ್ನು ನೀಡಲಾಗುತ್ತಿದೆ.  A++ನಿಂದ D ವರೆವಿಗೂ ಎಂಟು ಗ್ರೇಡ್‌ ಗಳ ಪದ್ಧತಿಯಲ್ಲಿ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡಲಾಗುತ್ತಿದೆ.

    ಶ್ರೇಣೀಕರಣದ ಮಾನ್ಯತಾ ಪದ್ಧತಿಯನ್ನು ಪರಿಷ್ಕರಿಸಿ ನೂತನ ಅವಳಿ ಮಾನ್ಯತಾ ಪದ್ಧತಿಯನ್ನು ರೂಪಿಸಲು ಮುಖ್ಯ ಕಾರಣಗಳು 

    ಎನ್‌ ಇ ಪಿ 2020 ರ ದೃಷ್ಟಿಕೋನಕ್ಕೆ ಅನುಗುಣವಾಗಿ ಮೌಲ್ಯಮಾಪನ ಪದ್ಧತಿಯನ್ನು ಮಾರ್ಪಾಡು ಮಾಡುವುದು, ಉತ್ತಮ ಶ್ರೇಣಿಯನ್ನು ಪಡೆಯಲು (A++ ಮತ್ತು A+) ಶಿಕ್ಷಣ ಸಂಸ್ಥೆಗಳ ನಡುವೆ ಇದ್ದಂತಹ ಅನಾರೋಗ್ಯಕರ ಪೈಪೋಟಿ ಮತ್ತು ನಂತರದ ದಿನಗಳಲ್ಲಿ ಶ್ರೇಣಿಗಳ ಹೆಸರಿನಲ್ಲಿ ನಡೆಸುತ್ತಿದ್ದ ವ್ಯಾಪಾರೀಕರಣವನ್ನು ತಡೆಯುವುದು, ಮೌಲ್ಯಮಾಪನ ಕಾರ್ಯವನ್ನು ಸರಳೀಕರಣಗೊಳಿಸಿ ಮೌಲ್ಯಮಾಪನ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳು  ಭಾಗವಹಿಸಲು ಉತ್ತೇಜಿಸುವುದು ಮತ್ತು ಅದರ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು (ಸೆಪ್ಟಂಬರ್‌ 30, 2023 ರ ವರೆಗೆ ದೇಶದಲ್ಲಿರುವ 43796 ಕಾಲೇಜುಗಳ ಪೈಕಿ ಕೇವಲ 9479 ಕಾಲೇಜುಗಳು ಮಾನ್ಯತೆ ಪಡೆದಿವೆ), ಹಸ್ತ ಚಾಲಿತ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡಿ ತಂತ್ರಜ್ಞಾನ ಚಾಲಿತ ಮತ್ತು ಆಧುನಿಕ ವ್ಯವಸ್ಥೆಯೊಂದಿಗೆ ಅನುಮೋದನೆ ನೀಡುವುದು, ಪಾರದರ್ಶಕತೆಯನ್ನು ಕಾಪಾಡುವುದು, ಮಾನ್ಯತೆಯ ಗುಣಮಟ್ಟವನ್ನು ಹೆಚ್ಚಿಸಿ, ಶ್ರೇಷ್ಠತೆ ಮತ್ತು ಜಾಗತಿಕ ಮೆಚ್ಚುಗೆಯನ್ನು ಪಡೆಯಲು ಮಾರ್ಗದರ್ಶನ ನೀಡುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಅವಳಿ ಮಾನ್ಯತೆಯನ್ನು ಜಾರಿಗೊಳಿಸಿ ಸಮಾನತೆಯನ್ನು ತರುವುದು.

    ನೂತನ ಅವಳಿ ಮಾನ್ಯತೆ ಮತ್ತು ಪ್ರಬುದ್ಧತೆ ಆಧಾರಿತ ಶ್ರೇಣಿಕರಣ ಮಾನ್ಯತೆ.

    ಮೊದಲನೆಯದಾಗಿ, ಈಗ ಚಾಲ್ತಿಯಲ್ಲಿರುವ ಶ್ರೇಣೀಕರಣ ಮಾನ್ಯತೆಯ ಬದಲು “ಮಾನ್ಯತೆ ಹೊಂದಿದೆ ಅಥವಾ ಹೊಂದಿಲ್ಲ” ಎಂಬ ಅವಳಿ ಮಾನ್ಯತಾ ಪದ್ಧತಿಯನ್ನು ಅಳವಡಿಸಲಾಗುತ್ತದೆ. ಈ ಪದ್ಧತಿಯನ್ನು ಮುಂದಿನ ನಾಲ್ಕು ತಿಂಗಳುಗಳಲ್ಲಿ ನ್ಯಾಕ್‌ ಸಂಸ್ಥೆಯು ಜಾರಿ ಮಾಡಲಿದೆ. ಈ ಪದ್ಧತಿಯಲ್ಲಿ  ಹತ್ತು ನಿಯತಾಂಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಆ ಹತ್ತು ನಿಯತಾಂಕಗಳು ಯಾವುವೆಂದರೆ, ಪಠ್ಯಕ್ರಮ, ಅಧ್ಯಾಪಕರ ಸಂಪನ್ಮೂಲಗಳು, ಬೋಧನೆ-ಕಲಿಕಾ ಪದ್ಧತಿ, ಸಂಶೋಧನೆ ಮತ್ತು ಆವಿಷ್ಕಾರಗಳು, ಸಹ ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳು, ಸಮುದಾಯದ ಬಗ್ಗೆ ಕಾಳಜಿ, ಹಸಿರು ಉಪಕ್ರಮಗಳು, ಆಳ್ವಿಕೆ ಮತ್ತು ಆಡಳಿತ, ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಆರ್ಥಿಕ ಸಂಪನ್ಮೂಲಗಳು ಹಾಗೂ ನಿರ್ವಹಣೆ. ಈ ನಿಯತಾಂಕಗಳಿಗೆ ಸಂಬಂಧಿಸದಂತೆ ಅಧ್ಯಯನಾಧಾರಿತ ಮೌಲ್ಯಮಾಪನ ಮಾಡಿ, ನಿಗದಿತ ಕನಿಷ್ಠ ಅಂಕ ಅಥವಾ ಅದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಸಂಸ್ಥೆಗಳಿಗೆ “ಮಾನ್ಯತೆ ಹೊಂದಿದೆ” ಎಂದು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

                ಎರಡನೆಯದಾಗಿ, ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಮತ್ತು ಗುಣಮಟ್ಟದ ರೇಖೆಯನ್ನು ಮೇಲೇರಿಸಲು ಅನುಕೂಲವಾಗುವಂತೆ ಪ್ರಬುದ್ಧತೆ (ಮೆಚ್ಯೂರಿಟಿ) ಆಧಾರಿತ ಮಾನ್ಯತೆಯನ್ನು ಈ ವರ್ಷದ ಡಿಸೆಂಬರ್‌ ವೇಳೆಗೆ ನ್ಯಾಕ್‌ ಸಂಸ್ಥೆಯು ಅನುಷ್ಠಾನ ಮಾಡಲಿದೆ. ಈ ಪದ್ಧತಿಯಲ್ಲಿ ಹಂತ 1 ರಿಂದ ಹಂತ 4 ರ ವರೆಗೆ ರಾಷ್ಟ್ರೀಯ ಉತ್ಕೃಷ್ಟತಾ ಸಂಸ್ಥೆಗಳಾಗಿ ಬೆಳೆಯಲು, ನಂತರ ಹಂತ 5- ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರುವಾಸಿಯಾದ ಹಾಗೂ ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ಸಂಸ್ಥೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಮೌಲ್ಯಮಾಪನ ಮಾಡಿ, ಮಾನ್ಯತೆಯನ್ನು ನೀಡಲಾಗುತ್ತದೆ.  ಮೇಲೆ ವಿವರಿಸಿದ ಎರಡು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯ ವಿಧಾನಗಳು, ಶೈಕ್ಷಣಿಕ ಕಲಿಕಾ ಫಲಿತಾಂಶಗಳು ಮತ್ತು ಸಂಸ್ಥೆಯ ಗುಣಮಟ್ಟದ ಮೇಲೆ ಇವುಗಳ ಪರಿಣಾಮಗಳ ಆಧಾರಿತ ಮೌಲ್ಯಮಾಪನ ನಿಯತಾಂಕಗಳನ್ನು ರೂಪಿಸಲಾಗುತ್ತದೆ.

    ನೂತನ ಪದ್ಧತಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಿರುವ ಇನ್ನಿತರ ಬದಲಾವಣೆಗಳು

    ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಈಗ ಚಾಲ್ತಿಯಲ್ಲಿರುವ ಒಂದು ಗಾತ್ರ ಎಲ್ಲರಿಗೂ ಸರಿ ಹೊಂದುತ್ತದೆ (ಒನ್‌ ಸೈಜ್‌ ಫಿಟ್ಸ್‌ ಆಲ್) ಮಾದರಿಯ ಬದಲು, ನಮ್ಮ ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳ ವೈವಿಧ್ಯತೆ (ಉದಾಹರಣೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಸಂಸ್ಥೆಗಳ ನಡುವೆ ಇರುವ ವ್ಯತ್ಯಾಸಗಳು), ಸಂಸ್ಥೆಗಳ ದೃಷ್ಠಿಕೋನ ಮತ್ತು ಪರಂಪರೆಗಳನ್ನು ಪರಿಗಣಿಸಿ ವರ್ಗೀಕರಣ ಮಾಡಲಾಗುತ್ತದೆ.

                ಇನ್ನಿತರ ಬದಲಾವಣೆಗಳೆಂದರೆ, ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಮಾನ್ಯತೆಯ ಅವಧಿಯನ್ನು 6 ವರ್ಷಗಳಿಗೆ ಏರಿಸುವುದು, ಮಾನ್ಯತೆಯನ್ನು ಹೊಂದಲು ಅನರ್ಹವಾದ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವುದು, ಒಂದು ರಾಷ್ಟ್ರ ಒಂದು ಡೇಟಾ (ಅಂಕಿ ಅಂಶಗಳ ಮಾಹಿತಿ) ವೇದಿಕೆಯನ್ನು ರಚಿಸುವುದು, ನಂಬಿಕೆಯ ಮತ್ತು ವಿಶ್ವಾಸಾರ್ಹ ಮೇರೆಗೆ ಸಂಸ್ಥೆಗಳ ಅಂಕಿ ಅಂಶಗಳನ್ನು ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕೆಂಬ ನಿಯಮವನ್ನು ಜಾರಿಗೊಳಿಸಿ, ತಪ್ಪು ಮಾಹಿತಿ ನೀಡಿದ ಪಕ್ಷದಲ್ಲಿ ಕಠಿಣ ಶಿಕ್ಷೆಯನ್ನು ನೀಡುವುದು ಮತ್ತು ಪರಿಶೀಲನೆಗಾಗಿ ಭೌತಿಕ ಭೇಟಿಗಳನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳು ಹಾಗೂ ಇನ್ನಿತರ ಪಾಲುದಾರರ ಅಭಿಪ್ರಾಯಗಳಿಗೆ ಹೆಚ್ಚು ಒತ್ತು ನೀಡುವುದು.

    ಅವಳಿ ಮಾನ್ಯತಾ ಪದ್ಧತಿಯ ಅನನುಕೂಲಗಳು

                ಬಹಳಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಅವಳಿ ಮೌಲ್ಯಮಾಪನ ಪದ್ಧತಿಯನ್ನು ಸ್ವಾಗತಿಸಿದರೆ, ಕೆಲವು ಶಿಕ್ಷಣ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಬಹುದು. ಏಕೆಂದರೆ, A+ ಶ್ರೇಣಿ ಪಡೆಯಲು ಅರ್ಹವಿರುವ ಕಾಲೇಜಿಗೂ ಮತ್ತು B+ ಶ್ರೇಣಿ ಪಡೆಯಬಹುದಾದಂತಹ ಕಾಲೇಜಿಗೂ “ಮಾನ್ಯತೆ ಹೊಂದಿದೆ” ಎಂಬ ಒಂದೇ ತರಹದ  ಪ್ರಮಾಣ ಪತ್ರವನ್ನು ನೀಡಿದರೆ, ಸಾಮಾನ್ಯ ಜನತೆಯ ದೃಷ್ಠಿಯಲ್ಲಿ ಎರಡು ಕಾಲೇಜುಗಳಲ್ಲಿನ ವ್ಯತ್ಯಾಸವು ಕಂಡುಬರುವುದಿಲ್ಲ. ಕಾಲೇಜುಗಳ ಆಯ್ಕೆಯ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಜೊತೆಗೆ, ಶಿಕ್ಷಣ ಸಂಸ್ಥೆಗಳು ನಿರುತ್ಸಾಹವನ್ನು ವ್ಯಕ್ತಪಡಿಸಬಹುದು. ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಉತ್ಕೃಷ್ಠ ಸಂಸ್ಥೆಗಳಾಗಿ ಬೆಳೆಯಲು ಮೆಚ್ಯೂರಿಟಿ ಆಧಾರಿತ ಮಾನ್ಯತಾ   ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

    ಮುಂದಿನ ಹದಿನೈದು ವರ್ಷಗಳಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಮೌಲ್ಯಮಾಪನ ಮತ್ತು ಮಾನ್ಯತೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅತ್ಯುತ್ತಮ ಮಟ್ಟಕ್ಕೆ ಏರಿ, ಪದವಿಗಳನ್ನು ನೀಡುವ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆಯ ಬೇಕೆಂಬುದೇ  ಸರ್ಕಾರದ ಆಶಯವಾಗಿದೆ.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
    spot_img

    More articles

    2 COMMENTS

    1. .ಶೈಕ್ಷಣಿಕ ಸಂಸ್ಥೆಗಳ ವೈವಿಧ್ಯತೆಯನ್ನು ಪರಿಗಣಿಸಿ ಮಾನ್ಯತೆಯನ್ನು ನೀಡುವುದು ಅತ್ಯಂತ ಉತ್ತಮ ನಿರ್ಧಾರ. ಶಿಕ್ಷಕರು ಓದಲೇಬೇಕಾದ ಉತ್ತಮ ಲೇಖನ. ವಂದನೆಗಳು ಸುಬ್ರಹ್ಮಣ್ಯ ಭಟ್

    2. Author’s expressions in kannada deserves high degree of compliments. He is probably a better writer than a talker. My friends and I share and express our appreciation.

    LEAVE A REPLY

    Please enter your comment!
    Please enter your name here

    Latest article

    error: Content is protected !!