22.2 C
Karnataka
Sunday, September 22, 2024

    ನ್ಯೂಟನ್‌ ತೆರೆದಪ್ರಪಂಚ

    Must read

    ಮಾಧ್ಯಮಿಕ ಮತ್ತು ಹೈಯರ್‌ ಸೆಕೆಂಡರಿ ತರಗತಿಗಳಲ್ಲಿ ನಾವೆಲ್ಲರೂ ನ್ಯೂಟನ್, ಆತನ ಚಲನೆಯ ನಿಯಮಗಳು ಮತ್ತು ಗುರುತ್ವಾಕರ್ಷಣೆ ಸಿದ್ಧಾಂತಗಳ ಬಗ್ಗೆ ಓದಿದ್ದೇವೆ. ಹಾಗಾಗಿ, ಸರ್‌ ಐಸಾಕ್‌ ನ್ಯೂಟನ್‌ ವಿದ್ಯಾರ್ಥಿ ಸಮುದಾಯದಲ್ಲಿ ಚಿರ ಪರಿಚಿತರು. ಹಲವಾರು ಸಾಮಾನ್ಯ ನಾಗರಿಕರೂ ಸಹ ನ್ಯೂಟನ್‌ ಹೆಸರು ಕೇಳಿರುತ್ತಾರೆ. ಶಾಸ್ತ್ರೀಯ ಯಂತ್ರಶಾಸ್ತ್ರದ (ಕ್ಲಾಸಿಕಲ್‌ ಮೆಕಾನಿಕ್ಸ್)‌ ಜನಕನೆಂದು ಖ್ಯಾತಿ ಪಡೆದಿರುವ, ವಿಜ್ಞಾನಕ್ಕೆ, ವಿಶೇಷವಾಗಿ ಭೌತಶಾಸ್ತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿ ಹದಿನೇಳು ಮತ್ತು ಹದಿನೆಂಟನೇ ಶತಮಾನಗಳ ಭೌತಶಾಸ್ತ್ರದ ಅಭಿವೃಧ್ಧಿಗೆ ಕಾರಣೀಭೂತರಾದ ಸರ್‌ ಐಸಾಕ್‌ ನ್ಯೂಟನ್‌ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ.

    ಸರ್‌ ಐಸಾಕ್‌ ನ್ಯೂಟನ್‌ ವಿಶ್ವ ವಿಖ್ಯಾತ, ಪ್ರತಿಭಾವಂತ, ಭೌತಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ರಸವಿದ್ಯೆ (ಅಲ್‌ ಕೆಮಿಸ್ಟ್)‌, ದೇವತಾಶಾಸ್ತ್ರಜ್ಞ (ಥಿಯಾಲಾಜಿಯನ್)‌ ಮತ್ತು ಲೇಖಕ. ಹೀಗೆ ಅನೇಕ ಶಾಸ್ತ್ರಗಳ ಜ್ಞಾನವನ್ನು ಪಡೆದಿದ್ದ ಮಹಾ ವಿದ್ವಾಂಸ (ಬಹುಶ್ರುತ). ಹದಿನೇಳನೇ ಶತಮಾನದ ದ್ವಿತೀಯಾರ್ದ ಮತ್ತು ಹದಿನೆಂಟನೇ ಶತಮಾನದ ಮೊದಲನೇ ತ್ರೈಮಾಸಿಕ ಅವಧಿಯಲ್ಲಿ ಜೀವಿಸಿದ್ದ ಇಂಗ್ಲೆಂಡ್‌ ದೇಶದ ಭೌತಶಾಸ್ತ್ರಜ್ಞ ಮತ್ತು ತತ್ವಜ್ಞಾನಿ (1642-1726). ವಿಚಿತ್ರವೆಂದರೆ, ನ್ಯೂಟನ್‌ ಜೀವಿಸಿದ್ದ ಕಾಲದಲ್ಲಿ ವಿಜ್ಞಾನಿ ಎಂಬ ಪದದ ಬಳಕೆಯಿರಲಿಲ್ಲ. ಎಲ್ಲಾ ವಿಜ್ಞಾನಿಗಳನ್ನು ನೈಸರ್ಗಿಕ ತತ್ವಜ್ಞಾನಿ (ನ್ಯಾಚುರಲ್ ಫಿಲಾಸಫರ್)‌ ಎಂದೇ ಕರೆಯುತ್ತಿದ್ದರು.

    ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇತಿಹಾಸಕಾರ ಮತ್ತು ವಿಜ್ಞಾನದ ತತ್ವಜ್ಞಾನಿ ವಿಲಿಯಮ್‌ ವೆವೆಲ್‌ ಮೊಟ್ಟ ಮೊದಲಿಗೆ 1834 ರಲ್ಲಿ ವಿಜ್ಞಾನಿ ಎಂಬ ಪದವನ್ನು ಬಳಸಿದರು. ಅಂದಿನಿಂದ ವಿಜ್ಞಾನಿ ಎಂಬ ಪದದ ಬಳಕೆ ಪ್ರಾರಂಭವಾಯಿತು. ಮೇಲೆ ತಿಳಿಸಿರುವಂತೆ, ನ್ಯೂಟನ್‌, ಚಲನೆಯ ಮತ್ತು ಗುರುತ್ವಾಕರ್ಷಣೆಯ ನಿಯಮಗಳಿಗೆ, ಆಪ್ಟಿಕ್ಸ್‌ (ದೃಗ್ವಿಜ್ಞಾನ) ಮತ್ತು ಕಲನ ಶಾಸ್ತ್ರಕ್ಕೆ ಖ್ಯಾತಿಯನ್ನು ಪಡೆದ ಭೌತವಿಜ್ಞಾನಿ. ನ್ಯೂಟನ್‌ ರಚಿಸಿರುವ ಭವ್ಯ ಕೃತಿ “ಪ್ರಿನ್ಸಿಫಿಯಾ ಮ್ಯಾಥಮಾಟಿಕ” 1687 ರಲ್ಲಿ ಪ್ರಕಟಗೊಂಡಿತು. ಇದರ ಫಲವಾಗಿ ಪ್ರಪಂಚದಾದ್ಯಂತ, ವಿಶೇಷವಾಗಿ ಯೂರೋಪ್‌ ಖಂಡದಲ್ಲಿ ಜ್ಞಾನೋದಯದ ನವಯುಗಕ್ಕೆ ನಾಂದಿಯಾಯಿತು. ಹಲವಾರು ವರ್ಷಗಳು ನಡೆಸಿದ ಸಂಶೋಧನೆಯ ಫಲವಾಗಿ ಈ ಕೃತಿ ಪ್ರಕಟಗೊಂಡಿತು. ನ್ಯೂಟನ್‌ ಚಲನೆಯ ನಿಯಮಗಳು ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ ಸಂಶಯ ರಹಿತವಾಗಿ ಸ್ಥಾಪನೆಗೊಳ್ಳಲು ಸಾಧ್ಯವಾಯಿತು. ನ್ಯೂಟನ್‌ ರಚಿಸಿದ ಎರಡನೇ ಮಹಾಗ್ರಂಥ “ಆಪ್ಟಿಕ್ಸ್”‌ ನಲ್ಲಿ ಬೆಳಕಿನ ಗುಣಲಕ್ಷಣಗಳನ್ನು ವಿವರಿಸಲಾಗಿದೆ. ರಾಯಲ್‌ ಸೊಸೈಟಿ ಆಫ್‌ ಲಂಡನ್‌ ನ ಅಧ್ಯಕ್ಷರಾಗಿ ಮತ್ತು ರಾಯಲ್‌ ಮಿಂಟ್‌ ನ ಮಾಸ್ಟರ್‌ ಆಗಿ ಕಾರ್ಯನಿರ್ವಹಿಸಿ ಖ್ಯಾತಿಯನ್ನು ಪಡೆದ ನ್ಯೂಟನ್‌ 1726 ರಲ್ಲಿ ಮರಣ ಹೊಂದಿದರು.

    ಆರಂಭಿಕ/ಬಾಲ್ಯ ಜೀವನ:- ದಿನಾಂಕ 25 ಡಿಸೆಂಬರ್‌ 1642 ರಲ್ಲಿ (ಜ್ಯೂಲಿಯನ್‌ ಕ್ಯಾಲೆಂಡರ್)‌ ವೂಲ್ಸ್‌ ಥಾರ್ಪ್‌, ಲಿಂಕನ್‌ ಸೈರ್‌ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅದೇ ವರ್ಷದಲ್ಲಿ (8, ಜನವರಿ 1642) ಗೆಲಿಲಿಯೋ ನಿಧನ ಹೊಂದಿದ್ದರು. ಕೆಲವರ ಅಭಿಪ್ರಾಯವೇನೆಂದರೆ, ಭೌತಶಾಸ್ತ್ರದ ಕ್ಷೇತ್ರದಲ್ಲಿ ನಿರ್ವಾತವನ್ನುಂಟು ಮಾಡದಿರುವ ಇಚ್ಛೆ ಹೊಂದಿದ್ದ ದೇವರು, ಗೆಲಿಲಿಯೋ ನಿಧನರಾದ ವರ್ಷದಲ್ಲಿಯೇ ನ್ಯೂಟನ್‌ ಜನಿಸುವಂತೆ ಆಶೀರ್ವದಿಸಿದ. ಐಸಾಕ್‌ ನ್ಯೂಟನ್‌ (ತಂದೆಯ ಹೆಸರು ಕೂಡ ನ್ಯೂಟನ್)‌ ಮತ್ತು ಹನ್ನ ಆಯ್ ಸ್ಕಾಫ್‌ ನ್ಯೂಟನ್‌ನ ತಂದೆ ಮತ್ತು ತಾಯಿ. ಮಗು ತಾಯಿಯ ಗರ್ಭದಲ್ಲಿರುವಾಗಲೇ, ನ್ಯೂಟನ್‌ ಜನನದ ಮೂರು ತಿಂಗಳು ಮುಂಚೆಯೇ, ಅವನ ತಂದೆ ತೀರಿಕೊಂಡಿದ್ದರು. ಹುಟ್ಟಿದ ಮಗು ಅತಿ ಸಣ್ಣ ಮತ್ತು ಬಹು ದುರ್ಬಲವಾಗಿದ್ದರಿಂದ, ಹುಟ್ಟಿದ ಕೂಡಲೇ ಮಗು ಸಾಯುತ್ತದೆ ಎಂದು ನಿರೀಕ್ಷಿಸಿದ್ದರು. ಮಗುವನ್ನು ದೊಡ್ಡ ಲೋಟದಲ್ಲಿರಿಸಬಹುದಾಗಿತ್ತೆಂಬ ವಿಷಯವನ್ನು ಹಲವು ಕಡೆ ದಾಖಲಿಸಲಾಗಿದೆ. ಆದರೆ ದೇವರ ಇಚ್ಛೆ ಬೇರೆಯೇ ಆಗಿತ್ತು. ನ್ಯೂಟನ್‌ ಎಂಬತೈದು ವರ್ಷಗಳ ಕಾಲ ಬದುಕಿದ್ದರು.

    ನ್ಯೂಟನ್ನನ ತಾಯಿ ಶ್ರೀಮಂತ ವ್ಯಾಪಾರಿ ಬಾರ್ನಾಬಾಸ್‌ ಸ್ಮಿತ್‌ ಎಂಬುವರನ್ನು ನ್ಯೂಟನ್‌ ಜನಿಸಿದ ಎರಡು ವರ್ಷಗಳೊಳಗೆ ಎರಡನೇ ಮದುವೆಯಾದರು. ನ್ಯೂಟನ್‌ನ್ನು ಅವರ ಅಜ್ಜಿಯ ಆರೈಕೆಯಲ್ಲಿ ಬಿಟ್ಟು, ಎರಡನೇ ಗಂಡನ ಜೊತೆಯಲ್ಲಿ ಪಕ್ಕದ ಊರಿಗೆ ಹೊರಟರು. ಇದರಿಂದ ನ್ಯೂಟನ್‌ ತಾಯಿ ತಂದೆಯವರ ಪ್ರೀತಿ ವಿಶ್ವಾಸಗಳಿಂದ ವಂಚಿತರಾದರು. ಇದು ನ್ಯೂಟನ್‌ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರಿತು ಎಂದು ಹಲವರ ಅಭಿಪ್ರಾಯ. 1653 ರಲ್ಲಿ ಮಲ ತಂದೆ ತೀರಿಕೊಳ್ಳುವವರೆವಿಗೂ, ನ್ಯೂಟನ್‌ ಅಜ್ಜಿಯ ಮನೆಯಲ್ಲಿ ತನ್ನ ಬಾಲ್ಯವನ್ನು ಕಳೆದರು.

    ನ್ಯೂಟನ್‌ನ ಪ್ರಾರಂಭಿಕ ಶಿಕ್ಷಣ, ಗ್ರಾಮೀಣ ಶಾಲೆಗಳಲ್ಲಿ ನಡೆಯಿತು. ಗ್ರಾಂಥಮ್‌ನ ಕಿಂಗ್ಸ್‌ ಶಾಲೆಯಲ್ಲಿ ಲ್ಯಾಟಿನ್‌ ಭಾಷೆ, ಗ್ರೀಕ್‌ ಭಾಷೆ ಮತ್ತು ಗಣಿತಶಾಸ್ತ್ರದಲ್ಲಿ ಶಿಕ್ಷಣ ಪಡೆದರು. 1659 ರಲ್ಲಿ, ನ್ಯೂಟನ್‌ನ್ನು ಸ್ವಂತ ಊರಿಗೆ ಕರೆ ತರಲಾಯಿತು. ಅವರ ತಾಯಿಗೆ, ನ್ಯೂಟನ್‌ ರೈತನಾಗಬೇಕೆಂಬ ಆಸೆಯಿತ್ತು. ಆದರೆ ನ್ಯೂಟನ್‌ಗೆ ಅದು ಸುತರಾಂ ಇಷ್ಟವಿರಲಿಲ್ಲ. 1661 ರಲ್ಲಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿಗೆ, 19 ನೇ ವಯಸ್ಸಿನಲ್ಲಿ ಪ್ರವೇಶವನ್ನು ಪಡೆದರು. ಆ ಸಮಯದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅರಿಸ್ಟಾಟಲ್‌ನ ತತ್ವಗಳಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿತ್ತು. ನ್ಯೂಟನ್‌ಗೆ ಇದು ಇಷ್ಟವಾಗದೆ, ಆಧುನಿಕ ತತ್ವಜ್ಞಾನಿಗಳಾದ ಡೆಸ್ಕಾರ್ಟ್‌ಸ್ (ಫ್ರೆಂಚ್, 1596-1650), ಖಗೋಳಶಾಸ್ತ್ರಜ್ಞರಾದ ಗೆಲಿಲಿಯೋ (ಇಟಲಿ, 1564-1642), ಕಾಪರ್‌ ನಿಕಸ್‌ (ಪೋಲಾಂಡ್‌, 1473-1543) ಮತ್ತು ಕೆಪ್ಲರ್‌ (ಜರ್ಮನಿ, 1571-1630) ಇವರುಗಳು ಪ್ರತಿಪಾದಿಸಿದ ಅತ್ಯಾಧುನಿಕ ಅಥವಾ ಸುಧಾರಿತ ವಿಚಾರಗಳ ಬಗ್ಗೆ ಹೆಚ್ಚು ಒಲವನ್ನು ತೋರಿಸಿ, ಈ ವಿಚಾರಗಳ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದರು. 1665 ರಲ್ಲಿ ನ್ಯೂಟನ್‌ ಪದವಿಯನ್ನು ಪಡೆದರು. ದುರದೃಷ್ಟವಶಾತ್‌, ಅದೇ ವರ್ಷದಲ್ಲಿ ಗ್ರೇಟ್‌ ಪ್ಲೇಗ್‌ ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ವಿಶ್ವವಿದ್ಯಾಲಯವನ್ನು ಸುಮಾರು ಹದಿನೆಂಟು ತಿಂಗಳ ಕಾಲ ಮುಚ್ಚಲಾಯಿತು. ಮುಂದಿನ ಎರಡು ವರ್ಷಗಳ ಕಾಲ, ವೂಲ್ಸ್‌ ಥಾರ್ಫ್ ನ ಮನೆಯಲ್ಲಿಯೇ ಕಲನಶಾಸ್ತ್ರ (ಕ್ಯಾಲ್‌ ಕ್ಯುಲಸ್)‌, ಆಪ್ಟಿಕ್ಸ್‌ (ದೃಗ್ವಿಜ್ಞಾನ) ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮಗಳ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸಿದರು.

    ಗುರುತ್ವಾಕರ್ಷಣೆ:- 1687ರಲ್ಲಿ ಮೂಲತಃ ಪ್ರಕಟವಾದ ಫಿಲಾಸಫಿ ನ್ಯಾಚುರಲಿಸ್‌ ಪ್ರಿನ್ಸಿಫಿಯಾ ಮ್ಯಾಥಮ್ಯಾಟಿಕಾನಲ್ಲಿ ಐಸಾಕ್‌ ನ್ಯೂಟನ್‌ ಚಲನೆಯ ಮೂರು ನಿಯಮಗಳನ್ನು ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮವನ್ನು ವಿವರಿಸಿದ್ದಾರೆ. ಗುರುತ್ವಾಕರ್ಷಣೆಯ ನಿಯಮ – ಪ್ರತಿಕಣವು ಬ್ರಹ್ಮಾಂಡದ ಪ್ರತಿಯೊಂದು ಕಣವನ್ನು ಆಕರ್ಷಿಸುತ್ತದೆ ಮತ್ತು ಆಕರ್ಷಿಸುವ ಬಲವು ದ್ರವ್ಯ ರಾಶಿಗಳ ಉತ್ಪನ್ನಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ ಮತ್ತು ಅವುಗಳ ಅಂತರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿರುತ್ತದೆ ಎಂದು ಹೇಳುತ್ತದೆ. ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮವು ಮರದಿಂದ ಸೇಬು ಹೇಗೆ ಕೆಳಗೆ ಬೀಳುತ್ತದೆ ಎಂಬುವದರಿಂದ ಹಿಡಿದು ಚಂದ್ರನು ಭೂಮಿಯ ಸುತ್ತ ಏಕೆ ಸುತ್ತುತ್ತಾನೆ, ಗ್ರಹಗಳು ಸೂರ್ಯನ ಸುತ್ತಲೂ ಏಕೆ ಸುತ್ತುತ್ತವೆ ಎಂಬುವುದರವರೆಗೆ ವಿವರಿಸಬಹುದು. ವಸ್ತುಗಳು ತಮ್ಮ ಎಲ್ಲಾ ದ್ರವ್ಯ ರಾಶಿಯನ್ನು ತಮ್ಮ ಕೇಂದ್ರ ಬಿಂದುವಿನಲ್ಲಿ ಕೇಂದ್ರಿಕರಿಸದಂತೆ ಆಕರ್ಷಿಸುತ್ತವೆ.

    ತನ್ನ ಕುಟುಂಬಕ್ಕೆ ಸೇರಿದ ಸೇಬಿನ ತೋಟದಲ್ಲಿ ಅಡ್ಡಾಡುತ್ತಾ, ಆಳವಾಗಿ ಯೋಚಿಸಿದ ನ್ಯೂಟನ್‌ಗೆ ಗುರುತ್ವಾಕರ್ಷಣೆಯ ಬಲದ ಬಗ್ಗೆ ಕಲ್ಪನೆ ಮೂಡಿತು ಹಾಗೂ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ರೂಪಿಸಲು ಪ್ರೇರೇಪಿಸಿತು. ಸೇಬಿನ ಹಣ್ಣು ಮರದಿಂದ ಲಂಬವಾಗಿ ಭೂಮಿಗೆ ಬೀಳಲು ಕಾರಣವಾದ ಗುರುತ್ವಾಕರ್ಷಣೆಯ ಬಲ, ಚಂದ್ರನನ್ನು ತನ್ನ ಕಕ್ಷೆಯಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿಯೂ ಆಗಿರಬಹುದು ಎಂಬ ಆಲೋಚನೆ ನ್ಯೂಟನ್‌ಗೆ ಬಂದಿತು. ದೂರದ ವಿಲೋಮ ವರ್ಗದಂತೆ ಬಲವು ಕಡಿಮೆಯಾದರೆ, ನಿಜವಾಗಿಯೂ ಚಂದ್ರನ ಕಕ್ಷೆಯ ಅವಧಿಯನ್ನು ಲೆಕ್ಕ ಹಾಕಬಹುದು ಮತ್ತು ಉತ್ತಮ ಒಪ್ಪಂದವನ್ನು ಪಡೆಯಬಹುದೆಂದು ನ್ಯೂಟನ್‌ ತೋರಿಸಿಕೊಟ್ಟರು. ಇದೇ ಬಲವು ಇತರೆ ಕಕ್ಷೆಗಳ ಚಲನೆಗಳಿಗೆ ಕಾರಣವಾಗಿದೆ ಎಂದೂ ನ್ಯೂಟನ್‌ ಊಹಿಸಿದರು ಮತ್ತು ಆದ್ದರಿಂದ, ನಿಯಮವನ್ನು ಸಾರ್ವತ್ರಿಕ ಗುರುತ್ವಾಕರ್ಷಣೆಯೆಂದು ಕರೆದರು.

    ನ್ಯೂಟನ್‌ನ ಚಲನೆಯ ನಿಯಮಗಳ ಪ್ರಕಾರ ವೃತ್ತಾಕಾರದ ಚಲನೆಯ ವಿಶ್ಲೇಷಣೆಯನ್ನು ಮಾಡಿದಾಗ, ವೃತ್ತಾಕಾರದ ಚಲನೆಗೆ ಕೇಂದ್ರಾಭಿಮುಖ ಬಲವು ಅವಶ್ಯಕ ಎಂಬ ಅಂಶ ತಿಳಿಯುತ್ತದೆ. ಯಾವುದೇ ಒಂದು ವಸ್ತುವನ್ನು ಸರಳ ರೇಖಾ ವೃತ್ತದ ಪಥದಿಂದ ವೃತ್ತಾಕಾರದ ಚಲನೆಗೆ ಬದಲಾಯಿಸಿಲು ಕೇಂದ್ರಾಭಿಮುಖ ಬಲವು ಅತ್ಯವಶ್ಯಕ. ಮುಂದುವರೆದು, ಸೂರ್ಯನ ಸುತ್ತಲೂ ದೀರ್ಘವೃತ್ತಾಕಾರದ ಪಥದಲ್ಲಿ ಗ್ರಹಗಳ ಚಲನೆಗೆ ಕಾರಣವಾದ ಕೇಂದ್ರಾಭಿಮುಖ ಬಲವು ಸೂರ್ಯನ ಮತ್ತು ಗ್ರಹಗಳ ದೂರದ ವರ್ಗಕ್ಕೆ ವಿಲೋಮವಾಗಿರುತ್ತದೆ ಎಂಬ ಅಂಶವನ್ನು ಕಂಡುಹಿಡಿದರು. ಅಲ್ಲದೆ ಗುರು ಗ್ರಹದ (ಜೂಪಿಟರ್) ಉಪಗ್ರಹಗಳು ಕೆಪ್ಲರ್‌ನ ಮೂರನೇ ನಿಯಮವನ್ನು ಪಾಲಿಸುವಲ್ಲಿ, ವಿಲೋಮ ವರ್ಗದ ಕೇಂದ್ರಾಭಿಮುಖ ಬಲವು, ಉಪಗ್ರಹಗಳನ್ನು ತಮ್ಮ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿರುಸುತ್ತವೆ ಎಂದು ವಾದಿಸಿದರು.

    ನ್ಯೂಟನ್‌ ಮಾಡಿದ ಪ್ರತಿಪಾದನೆ, ಭೂಮಿ ಮತ್ತು ಚಂದ್ರನ ನಡುವೆಯೂ‌ ಸಹ ಅದೇ ರೀತಿಯ ಸಂಬಂಧವಿದೆಯೆಂಬ ಅಂಶವು ಬೆಳಕಿಗೆ ಬಂದಿತು. ಭೂಮಿಯಿಂದ ಚಂದ್ರನ ದೂರ 384400 ಕಿ.ಮೀ. ಭೂಮಿಯ ತ್ರಿಜ್ಯ (ರೇಡಿಯಸ್)‌ 6371 ಕಿ.ಮೀ. ಭೂಮಿಯಿಂದ ಚಂದ್ರನ ದೂರ ಭೂಮಿಯ ತ್ರಿಜ್ಯದ ಅರವತ್ತು ಪಟ್ಟು ಜಾಸ್ತಿ. ಭೂಮಿಯ ಮೇಲ್ಮೈನಲ್ಲಿನ ಗುರುತ್ವಾಕರ್ಷಣೆಯ ವೇಗವರ್ದನೆ (ಆಕ್ಷಿಲರೇಶನ್‌ ಡ್ಯೂಟು ಗ್ರಾವಿಟಿ) 9.81 ಮೀ/ಸೆ2 ಇದ್ದು, ಭೂಮಿಯಿಂದ ಚಂದ್ರನಿರುವ ದೂರದ ಬಿಂದುವಿನಲ್ಲಿ ಗುರುತ್ವಾಕರ್ಷಣೆಯ ವೇಗವರ್ದನೆಯು 2.72X10-3 ಮೀ/ಸೆ2 ಇದ್ದು, ಇವುಗಳ ಅನುಪಾತವು 3600 (602). ಅಂದರೆ, ಭೂಮಿಯ ಮೇಲ್ಮೈನಲ್ಲಿರುವ ಗುರುತ್ವಾಕರ್ಷಣೆಯ ವೇಗವರ್ದನೆ ಮತ್ತು ಭೂಮಿಯಿಂದ ಚಂದ್ರನಿರುವ ಬಿಂದುವಿನಲ್ಲಿರುವ ಗುರುತ್ವಾಕರ್ಷಣೆಯ ವೇಗವರ್ದನೆ  ಅನುಪಾತವು ಚಂದ್ರನ ಕಕ್ಷೆಯ ಮತ್ತು ಭೂಮಿಯ ತ್ರಿಜ್ಯದ ಅನುಪಾತದ ವರ್ಗಕ್ಕೆ ಸರಿಸಮ. ಈ ಅನುಪಾತಗಳ ಸರಿಸಮವು ಒಂದು ವಸ್ತುವಿನ ವೇಗವರ್ದನೆಯ ಕಕ್ಷೆಯ ಕೇಂದ್ರ ಬಿಂದುವಿನಿಂದ ದೂರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿ ಕಡಿಮೆಯಾಗುತ್ತದೆ ಎಂದು ಸೂಚಿಸುತ್ತದೆ. ಬಲವು ದ್ರವ್ಯರಾಶಿ ಮತ್ತು ವೇಗವರ್ದನೆಯ ಉತ್ಪನ್ನವಾಗಿರುವುದರಿಂದ, ಗುರುತ್ವಾಕರ್ಷಣೆಯ ಬಲವು ಸಹ ಅಂತರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿ ಬದಲಾಗುತ್ತದೆ. ಇದರಿಂದ ಗುರುತ್ವಾಕರ್ಷಣೆಯ ಆವಿಷ್ಕಾರವಾಯಿತು ಎಂದೇ ಹೇಳಬಹುದು. ಮುಂದುವರೆದು, ಗುರುತ್ವಾಕರ್ಷಣೆಯ ಬಲವು, ವಸ್ತುಗಳ ದ್ರವ್ಯ ರಾಶಿಯನ್ನು ಅವಲಂಬಿಸಿರಬೇಕೆಂಬ ಅಂಶವನ್ನು ನ್ಯೂಟನ್‌ ಅರಿತುಕೊಂಡರು. M ದ್ರವ್ಯರಾಶಿಯುಳ್ಳ ವಸ್ತುವಿನ ಮೇಲೆ F ಬಲವನ್ನು ಪ್ರಯೋಗಿಸಿದಾಗ, F/M ದರದಲ್ಲಿ ವೇಗವರ್ಧನೆಗೊಳ್ಳುವುದರಿಂದ, ದ್ರವ್ಯರಾಶಿಗೆ ಗುರುತ್ವಾಕರ್ಷಣೆಯ ಬಲವು ನೇರ ಅನುಪಾತದಲ್ಲಿರ ಬೇಕೆಂದು ನಿರ್ಣಯಿಸಿದರು. ಈ ನಿರ್ಣಯವು, ಎಲ್ಲಾ ವಸ್ತುಗಳು, ಅವುಗಳ ದ್ರವ್ಯರಾಶಿಯ ಮೇಲೆ ಅವಲಂಬಿಸದೆ, ಭೂಮಿಯ ಕಡೆಗೆ ಒಂದೇ ದರದಲ್ಲಿ ವೇಗವರ್ದನೆಗೊಳ್ಳುತ್ತದೆ ಎಂಬ ಗೆಲಿಲಿಯೋನ ತತ್ವಕ್ಕೆ ಅನುಗುಣವಾಗಿರುತ್ತದೆ ಎಂದು ಪ್ರತಿಪಾದಿಸಿದರು. ಈ ಅಂಶವನ್ನು ನ್ಯೂಟನ್‌ ಸಹ ಪ್ರಾಯೋಗಿಕವಾಗಿ ಧೃಡಪಡಿಸಿದ್ದಾರೆ. ಗುರುತ್ವಾಕರ್ಷಣೆಯ ಬಲವು, ವಸ್ತುಗಳ ದ್ರವ್ಯರಾಶಿಗಳ ಉತ್ಪನಕ್ಕೆ ನೇರ ಅನುಪಾತದಲ್ಲಿರುತ್ತದೆ ಎಂದು ತೋರಿಸಿಕೊಟ್ಟರು.

    ಬಲವು ವಿಲೋಮ ವರ್ಗದ ಕಾನೂನಿನ ಅಡಿಯಲ್ಲಿ ಬದಲಾದರೆ, ವಸ್ತುವಿನ ಕಕ್ಷೆಯು ದೀರ್ಘ ವೃತ್ತಾಕಾರವಾಗಿರುತ್ತದೆ ಎಂದು ನ್ಯೂಟನ್‌ ತೋರಿಸಿಕೊಟ್ಟರು. ಬಹಳ ಮುಖ್ಯವಾಗಿ, ಭೂಮಿಯ ಮೇಲಿನ ವಸ್ತುಗಳ ಚಲನೆಗಳು ಹಾಗೂ ಬಾಹ್ಯಾಕಾಶದಲ್ಲಿನ ಆಕಾಶಕಾಯಗಳ ಚಲನೆಗಳು ಒಂದೇ ತತ್ವಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ಜಗತ್ತಿಗೆ ತೋರಿಸಿಕೊಟ್ಟರು. ನಕ್ಷತ್ರಗಳು, ನಕ್ಷತ್ರ ಸಮೂಹಗಳು ಮತ್ತು ಎಲ್ಲಾ ಆಕಾಶ ಕಾಯಗಳ ನಡುವೆ ಗುರುತ್ವಾಕರ್ಷಣೆಯ ಬಲವಿರುತ್ತದೆ ಎಂಬ ಅಂಶ ಬೆಳಕಿಗೆ ಬಂದಿತು. 1684 ರಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ಉಲ್ಲೇಖಿಸಲು ಬಯಸುತ್ತೇನೆ. ವಿಜ್ಞಾನಿ ಎಡ್‌ಮೆಂಡ್‌ ಹ್ಯಾಲಿ ನ್ಯೂಟನ್‌ ರಿಂದ ತಮಗಿದ್ದ ಸಂಶಯದ ಬಗ್ಗೆ ಸ್ಪಷ್ಠೀಕರಣವನ್ನು ಬಯಸಿದರು. ವಿಲೋಮ ವರ್ಗದ ಕಾನೂನಿನ ಅಡಿಯಲ್ಲಿ ವಸ್ತುವು ಯಾವ ರೀತಿಯ ಕಕ್ಷೆಯಲ್ಲಿ ಚಲಿಸುತ್ತದೆ ಎಂದು ಹ್ಯಾಲಿ ಪ್ರಶ್ನಿಸಿದರು. ಕೂಡಲೇ ದೀರ್ಘ ವೃತ್ತಾಕಾರ ಎಂದು ನ್ಯೂಟನ್‌ ಉತ್ತರಿಸಿದರು. ಗುರುತ್ವಾಕರ್ಷಣೆಯ ನಿಯಮದ ಮೂಲಕ, ನ್ಯೂಟನ್‌ ಕೆಪ್ಲರ್‌ ನಿಯಮಗಳನ್ನು ಸಾಧಿಸಿದರು. ಜೊತೆಗೆ ಧೂಮಕೇತುಗಳ ಪಥ, ಉಬ್ಬರ ಏರಿಳಿತಗಳ ವಿವರಣೆ ನೀಡಿದರು. ಇದರ ಮೂಲಕ, ಸೌರಮಂಡಲದ ಸೂರ್ಯ ಕೇಂದ್ರಿತ ಸೂತ್ರೀಕರಣಗಳನ್ನು ನ್ಯೂಟನ್‌ ದೃಡಪಡಿಸಿದರು.

    ನ್ಯೂಟನ್‌ ವಿಧಾನ ಕ್ರಮವನ್ನು ಅನುಸರಿಸಿ, ಎಡ್‌ಮಂಡ್‌ ಹ್ಯಾಲಿ ಬಹಳಷ್ಟು ಧೂಮಕೇತುಗಳ (ಕಾಮೆಟ್ಸ್)‌ ಕಕ್ಷೆಗಳು ಪ್ಯಾರಾಬೊಲಿಕ್‌ ಕಕ್ಷೆಗಳಾಗಿರುತ್ತವೆ ಎಂದು ತೋರಿಸಿಕೊಟ್ಟರು. ಇವರ ಅಧ್ಯಯನದ ವಿಶೇಷತೆಯೆಂದರೆ 1537, 1607 ಮತ್ತು 1680 ರಲ್ಲಿ ಕಾಣಿಸಿಕೊಂಡ ಮೂರು ಧೂಮಕೇತುಗಳು ಒಂದೇ ಧೂಮಕೇತು ಎಂದು ತೋರಿಸಿಕೊಟ್ಟರು. ಅದು 1456 ಮತ್ತು 1378 ರಲ್ಲೂ ಕಾಣಿಸಿಕೊಂಡಿತ್ತು ಎಂದು ತೋರಿಸಿಕೊಟ್ಟರು ಮತ್ತು ಇದೇ ಧೂಮಕೇತು 1759 ರಲ್ಲಿ ಕಾಣಿಸುತ್ತದೆ ಎಂದು ಪ್ರತಿಪಾದಿಸಿದರು. ಆಶ್ಚರ್ಯದ ಸಂಗತಿಯೆಂದರೆ, 1759 ರಲ್ಲಿ ಅದೇ ಧೂಮಕೇತು ಕಾಣಿಸಿಕೊಂಡಿತ್ತು. ಈ ಧೂಮಕೇತು 1986 ರಲ್ಲೂ ಕಾಣಿಸಿಕೊಂಡಿತ್ತು. ಆಗ ನಮಗೆ ಧೂಮಕೇತುವನ್ನು ನೋಡುವ ಅವಕಾಶ ದೊರಕಿತು. ಮತ್ತೆ ಅದು 2061 ರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಧೂಮಕೇತುವಿನ ಹೆಸರು ಹ್ಯಾಲಿಸ್‌ ಕಾಮೆಟ್, ಪ್ರತಿ ಸುಮಾರು 75 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

    ಗುರುತ್ವಾಕರ್ಷಣೆಯ ತತ್ವವನ್ನು ಪ್ರತಿಪಾದಿಸಲು ಇದ್ದಂತಹ ಅಡತಡೆಗಳ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ. ಪ್ರಮುಖವಾಗಿ, ಅರಿಸ್ಟಾಟಲ್‌ ನ ವಾದ ವಿವಾದ ಮತ್ತು ಡೆಸ್‌ ಕಾರ್ಟಿಸ್‌ ನ ಗುರುತ್ವಾಕರ್ಷಣೆಯ ವರ್ಟೆಕ್ಸ್‌ ಸಿದ್ಧಾಂತ. ಅರಿಸ್ಟಾಟಲ್‌ ನ ವಾದವೇನೆಂದರೆ

    ಅ) ಒಂದು ವಸ್ತುವು ಕೆಳಗೆ ಬೀಳುವುದು ನೈಸರ್ಗಿಕ ಕ್ರಿಯೆ.

    ಆ) ಆಕಾಶ ಕಾಯಗಳು ವೃತ್ತಾಕಾರದ ಪಥದಲ್ಲಿ ಚಲಿಸುತ್ತವೆ.

    ಇ) ಒಂದು ಸ್ಥಿರ ವೇಗದಲ್ಲಿ ಚಲಿಸಲು ಹಾಗೂ ಚಲನೆಯನ್ನು ಮುಂದುವರಿಸಲು ಆ ವಸ್ತುವಿನ ಮೇಲೆ ನಿರಂತರವಾಗಿ ಬಲವನ್ನು ಪ್ರಯೋಗಿಸಬೇಕು.

    ಈ) ಒಂದು ವಸ್ತುವಿನ ಮೇಲೆ ಸಂಪರ್ಕದ ಮೂಲಕವೇ ಬಲ ಪ್ರಯೋಗಿಸಬಹುದು. ದೂರದಿಂದ ಬಲ ಪ್ರಯೋಗಿಸಲು ಸಾಧ್ಯವಿಲ್ಲ.

    ಉ) ಭಾರವಾದ ವಸ್ತುಗಳು, ಹಗುರವಾದ ವಸ್ತುಗಳಿಗೆ ಹೋಲಿಸಿದರೆ, ಹೆಚ್ಚಿನ ವೇಗದಿಂದ ಭೂಮಿಗೆ ಬೀಳುತ್ತವೆ.

    ಜೊತೆಗೆ, 16-17 ನೇ ಶತಮಾನದಲ್ಲಿ ಜೀವಂತವಾಗಿದ್ದ ಮೊದಲ ಕ್ರಮಾಂಕದ ಗಣಿತಶಾಸ್ತ್ರಜ್ಞ, ವೈಜ್ಞಾನಿಕ ಚಿಂತಕ ಡೆಸ್ಕಾರ್ಟಿಸ್‌ನ ಪ್ರಕಾರ, ಅಸ್ತಿತ್ವದಲ್ಲಿ ನಿರ್ವಾತವಿಲ್ಲ. ಈಥರ್‌ ಎಂಬ ಮಾಧ್ಯಮದ ಬಾಹ್ಯಾಕಾಶದಲ್ಲಿ ನಿರಂತರ ಒತ್ತಡದ ವ್ಯತ್ಯಾಸದಿಂದಾಗಿ ಸಾರ್ವತ್ರಿಕ ಗುರುತ್ವಾಕರ್ಷಣೆ ಸೃಷ್ಟಿಯಾಗುತ್ತದೆ ಎಂದು ಪ್ರತಿಪಾದಿಸಿದ್ದ.

    ನ್ಯೂಟನ್‌ ಗುರುತ್ವಾಕರ್ಷಣೆಯ ಮಹತ್ವವಾದ ಆವಿಷ್ಕಾರದ ನಂತರ, ಅರಿಸ್ಟಾಟಲ್‌ ಮತ್ತು ಡೆಸ್ಕರ್ಟಿಸ್‌ನ ವಾದಗಳನ್ನು ತಿರಸ್ಕರಿಸಲಾಯಿತು. 1915 ರಲ್ಲಿ ಐನ್‌ಸ್ಟೀನ್ ಸಾಪೇಕ್ಷತೆಯ ಸಾಮಾನ್ಯ ಸಿದ್ಧಾಂತ ಆವಿಷ್ಕರಿಸುವವರೆವಿಗೂ ಹಾಗೂ ಗುರುತ್ವಾಕರ್ಷಣೆಯ ಬಲದ ದೃಷ್ಟಿಕೋನವು ಬದಲಾಗುವವರೆವಿಗೂ, ಹಲವು ಶತಮಾನಗಳ ವರೆಗೆ ನ್ಯೂಟನ್ನನ ಗುರುತ್ವಾಕರ್ಷಣೆಯ ತತ್ವಗಳು ಪ್ರಬಲವಾದ ವೈಜ್ಞಾನಿಕ ದೃಷ್ಟಿಕೋನವನ್ನು ರೂಪಿಸುವಲ್ಲಿ  ಯಶಸ್ವಿಯಾಯಿತು. ಕೇಪ್ಲರ್‌ನ ಗ್ರಹಗಳ ಚಲನೆಯ ನಿಯಮಗಳು, ಉಬ್ಬರವಿಳಿತಗಳು, ಧೂಮಕೇತುಗಳ ಪಥಗಳು ಹೀಗೆ ಹಲವಾರು ವಿದ್ಯಮಾನಗಳನ್ನು ವಿವರಿಸಲು ಗುರುತ್ವಾಕರ್ಷಣೆಯ ತತ್ವಗಳನ್ನು ನ್ಯೂಟನ್‌ ಬಳಸಿದರು. ಜೊತೆಗೆ ಸೌರವ್ಯೂಹದ ಸೂರ್ಯ ಕೇಂದ್ರಿತ ಸಿದ್ಧಾಂತದ ಬಗ್ಗೆ ಇದ್ದ ಅನುಮಾನಗಳನ್ನು ನಿರ್ಮೂಲನ ಮಾಡಿದರು.

    ಆಪ್ಟಿಕ್ಸ್‌ (ದೃಗ್ವಿಜ್ಞಾನ):- ಪ್ರಮುಖ ಅಂಶವೆಂದರೆ, ಲೂಕಾಷಿಯನ್‌ ಪ್ರಾಧ್ಯಾಪಕರಾಗಿ ನೇಮಕಾತಿಯಾದ ನಂತರ, ಪ್ರಪ್ರಥಮವಾಗಿ ನ್ಯೂಟನ್‌ ಸಂಶೋಧನೆ ನಡೆಸಿದ್ದು ಬೆಳಕಿಗೆ ಸಂಬಂಧಿಸಿದಂತೆ. 1666 ರಲ್ಲಿ ಕನಿಷ್ಠ ವಿಚಲನದ ಸ್ಥಾನದಲ್ಲಿರಿಸಿದ (ಮಿನಿಮಮ್‌ ಡೀವಿಯೇಶನ್‌ ಪೊಝಿಶಿನ್)‌ ಗಾಜಿನ ಪಟ್ಟಕದ (ಪ್ರಿಜಮ್)‌ ಮೂಲಕ ಬೆಳಕನ್ನು ಹಾಯಿಸಿದಾಗ, ಬೇರೆ ಬೇರೆ ಬಣ್ಣದ ಕಿರಣಗಳು ವಿವಿಧ ಕೋನಗಳಲ್ಲಿ ವಕ್ರೀಭವನಗೊಂಡು, ಬಹುವರ್ಣದ ಚಿತ್ರಣ (ಸ್ಪೆಕ್ಟ್ರಮ್)‌ ಉಂಟಾಗುತ್ತದೆ ಎಂಬ ಅಂಶವನ್ನು ನ್ಯೂಟನ್‌ ಕಂಡುಹಿಡಿದರು. ಇದರಿಂದ, ಬಣ್ಣವು ಬೆಳಕಿನ ಅಂತರ್ಗತವಾಗಿರುವ ಲಕ್ಷಣವೆಂದು ಜಗತ್ತಿಗೆ ತೋರಿಸಿಕೊಟ್ಟರು. ಮುಂದುವರಿಸಿ, ಈ ರೀತಿಯಾಗಿ ಉಂಟಾದ ಬಹುವರ್ಣದ ಕಿರಣಗಳನ್ನು ಮಸೂರ ಮತ್ತು ಎರಡನೇ ಪಟ್ಟಕದಲ್ಲಿ ಹಾಯಿಸಿದಾಗ, ಬಿಳಿ ಬೆಳಕನ್ನು ಮರು ಸಂಯೋಜಿಸಬಹುದೆಂದು ಪ್ರದರ್ಶಿಸಿದರು. ಬಿಳಿ ಬಣ್ಣವು VIBGYOR ಎಂಬ ಏಳು ಬಣ್ಣಗಳಿಂದ ಕೂಡಿದೆ ಎಂದು ತೋರಿಸಿಕೊಟ್ಟರು. ವಸ್ತುಗಳು ಸ್ವತಃ ಬಣ್ಣವನ್ನು ಸೃಷ್ಟಿಸುವುದಿಲ್ಲ. ಅವುಗಳ ವರ್ಣ, ಬಣ್ಣದ ಬೆಳಕಿನೊಂದಿಗೆ ಸಂವಹನ ನಡೆಸುವ ಪರಿಣಾಮವಾಗಿದೆ ಎಂದು ಗಮನಿಸಿ, ಪ್ರಪಂಚಕ್ಕೆ ಈ ಅಂಶವನ್ನು ನಿದರ್ಶಿಸಿದರು. ಇದನ್ನು ನ್ಯೂಟನ್‌ನ ಬಣ್ಣದ ಸಿದ್ಧಾಂತ ಎಂದೇ ಕರೆಯುತ್ತಾರೆ. ಉದಾಹರಣೆಗೆ, ಕೆಂಪು ಬಣ್ಣದ ವಸ್ತುವನ್ನು ನೀಲಿ ಬಣ್ಣದ ಬೆಳಕಿನಲ್ಲಿಟ್ಟಾಗ ಕಪ್ಪಾಗಿ ಕಾಣುತ್ತದೆ.

    ಯಾವುದೇ ಮಸೂರಕ್ಕೆ ವರ್ಣವಿಪಥನ (ಕ್ರೊಮಾಟಿಕ್‌ ಅಬರೇಷನ್)‌ ನ್ಯೂನತೆಯಿರುತ್ತದೆ ಎಂದು ತಿಳಿದ ನ್ಯೂಟನ್‌, ವಕ್ರೀಭವನದ ದೂರದರ್ಶಕದ ಬದಲು, ಪ್ರತಿಫಲನದ ದೂರದರ್ಶಕವನ್ನು 1668 ರಲ್ಲಿ ಮೊಟ್ಟ ಮೊದಲಿಗೆ ತಯಾರಿಸಿದರು. ನ್ಯೂಟನ್‌ ತನ್ನ ದೂರದರ್ಶಕಗಳಿಗೆ ದೃಗ್ವಿಜ್ಞಾನದ ಗುಣಮಟ್ಟವನ್ನು ನಿರ್ಣಯಿಸಲು ನ್ಯೂಟನ್‌ನ ಉಂಗುರಗಳನ್ನು (ನ್ಯೂಟನ್‌ ರಿಂಗ್ಸ್)‌ ಬಳಸಿಕೊಂಡಿದ್ದು ವಿಶೇಷ. ಈ ಆವಿಷ್ಕಾರಕ್ಕೆ ಮೆಚ್ಚುಗೆಯನ್ನು ತೋರಿಸುವ ಸಲುವಾಗಿ, ಲಂಡನ್ ನ ರಾಯಲ್‌ ಸೊಸೈಟಿಯ ಸದಸ್ಯತ್ವವನ್ನು ನೀಡಲಾಯಿತು. ನ್ಯೂಟನ್‌ ಬಿಳಿಯ ಬಣ್ಣವು, ಏಳು ಬಣ್ಣಗಳಿಂದ ಕೂಡಿದೆ ಎಂದು ಪ್ರಪಂಚಕ್ಕೆ ತಿಳಿಸಿಕೊಡುವ ಮುಂಚೆ, ಅರಿಸ್ಟಾಟಲ್‌ ಸೇರಿದಂತೆ, ಎಲ್ಲಾ ವಿಜ್ಞಾನಿಗಳು ಬಿಳಿ ಬಣ್ಣವು ಏಕ ಘಟಕ ಎಂಬ ಅಭಿಪ್ರಾಯವನ್ನು ಹೊಂದಿದ್ದರು.

    ಬೆಳಕಿನ ಕಾರ್ಪಸ್ಕುಲರ್ಸಿದ್ಧಾಂತ:- ನ್ಯೂಟನ್‌ ಬೆಳಕಿನ ಕಾರ್ಪಸ್ಕುಲರ್‌ ಸಿದ್ಧಾಂತವನ್ನು ಪ್ರತಿಪಾದಿಸಿದರು. ಬೆಳಕು ಸಣ್ಣ ಕಣಗಳಿಂದ ಕೂಡಿದೆ ಎಂದು ಭಾವಿಸಿದರು. (ಕ್ವಾಂಟಮ್‌ ಸಿದ್ಧಾಂತದ ಪೋಟಾನ್ ಗಳಿಗೂ, ನ್ಯೂಟನ್‌ನ ಬೆಳಕಿನ ಕಣಗಳಿಗೆ ಸಂಬಂಧವಿಲ್ಲ) ಈ ಬೆಳಕಿನ ಕಿರಣಗಳು, ಬೇರೆ ಕಣಗಳಂತೆ ನೈಸರ್ಗಿಕ ದ್ರವ್ಯ ರಾಶಿಯನ್ನು ಹೊಂದಿರುತ್ತವೆ ಎಂದು ಭಾವಿಸಿದ್ದರು. ಆದ್ದರಿಂದ ಭೂಮಿಯ ಮೇಲ್ಮೈಗೆ ಸಮಾನಂತರವಾಗಿರುವ ಬೆಳಕಿನ ಕಿರಣವು ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದಿಂದ ಕೆಳಕ್ಕೆ ಬಾಗುತ್ತದೆ ಎಂದು ನ್ಯೂಟನ್‌ ನಿರ್ಣಯಿಸಿದ್ದರು. ಬೆಳಕಿನ ವೇಗವು ಅತಿ ಹೆಚ್ಚಾಗಿರುವುದರಿಂದ, ಈ ಪರಿಣಾಮವನ್ನು ಗಮನಿಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ನ್ಯೂಟನ್‌ ತನ್ನ ಕಣ ಸಿದ್ಧಾಂತದಿಂದ ವಕ್ರೀಭವನವನ್ನು ವಿವರಿಸಿದರು. ನ್ಯೂಟನ್‌ನ ಸಿದ್ಧಾಂತದ ಪ್ರಕಾರ ಬೆಳಕಿನ ಕಿರಣಗಳು ದಟ್ಟವಾದ ಮಾಧ್ಯಮದಲ್ಲಿ ಹೆಚ್ಚು ವೇಗವಾಗಿ ಪ್ರಸರಣಗೊಳ್ಳುತ್ತವೆ. ಆದರೆ, ಪ್ರಾಯೋಗಿಕ ವೀಕ್ಷಣೆಗಳ ಪ್ರಕಾರ ಬೆಳಕಿನ ಕಿರಣಗಳು ದಟ್ಟವಾದ ಮಾಧ್ಯಮದಲ್ಲಿ ಕಡಿಮೆ ವೇಗದಲ್ಲಿ ಪ್ರಸರಣಗೊಳ್ಳುತ್ತವೆ. ಮುಂದುವರಿದಂತೆ, ನ್ಯೂಟನ್‌ ಸಿದ್ಧಾಂತದ ಆಧಾರದ ಮೇಲೆ ಬೆಳಕಿನ ಹಸ್ತಕ್ಷೇಪ (ಬೆಳಕಿನ ಇಂಟರ್‌ಫಿಯರೆನ್ಸ್)‌ ಮತ್ತು ಬೆಳಕಿನ ವಿವರ್ತನೆ (ಡಿಫ್ರ್ಯಾಕಶನ್‌ ಆಫ್‌ ಲೈಟ್) ವಿವರಿಸಲು ಸಾಧ್ಯವಾಗಲಿಲ್ಲ. ಈ ಕಾರಣಗಳಿಂದ, 1704 ರಲ್ಲಿ ನ್ಯೂಟನ್‌ನ ಕಾರ್ಪಸ್ಕುಲರ್‌ ಸಿದ್ಧಾಂತವನ್ನು ತಿರಸ್ಕರಿಸಲಾಯಿತು.

    ಗುರುತ್ವಾಕರ್ಷಣೆ ಮತ್ತು ದೃಗ್ವಿಜ್ಞಾನದ ಜೊತೆಗೆ, ಅನುಭವ ಜನಿತವಾದ (ಎಂಪಿರಿಕಲ್)‌ ತಂಪಾಗಿಸುವಿಕೆಯ ನಿಯಮ ಮತ್ತು ಅನಿಲಗಳಲ್ಲಿ ಶಬ್ಧದ ವೇಗವನ್ನು ಅಧ್ಯಯನ ಮಾಡಿದರು. ನ್ಯೂಟನ್‌ನ ತಂಪಾಗಿಸುವಿಕೆಯ ನಿಯಮವು, ಒಂದು ವಸ್ತುವನ್ನು ತಂಪಾಗಿಸುವ ದರವು ವಸ್ತು ಮತ್ತು ವಸ್ತುವಿನ ಸುತ್ತ ಮುತ್ತಲಿನ ತಾಪಮಾನದ ವ್ಯತ್ಯಾಸಕ್ಕೆ ನೇರ ಅನುಪಾತದಲ್ಲಿರುತ್ತದೆ ಎಂದು ಹೇಳುತ್ತದೆ. ಜೊತೆಗೆ ನ್ಯೂಟನ್‌ ಕಲನಶಾಸ್ತ್ರವನ್ನು (ಕ್ಯಾಲ್‌ ಕ್ಯುಲಸ್)‌ ಸ್ವತಂತ್ರವಾಗಿ ( ಲೈಬ್ನಿಜ್‌ ನ ವಿವಾದ ಹಿನ್ನಲೆಯಲ್ಲಿ) ಅಭಿವೃದ್ಧಿ ಪಡಿಸಿದ್ದಾರೆ ಎಂಬುವುದಾಗಿ ಆಧುನಿಕ ಇತಿಹಾಸಕಾರು ನಂಬುತ್ತಾರೆ.

    ಸರ್ಕಾರಿ ಹುದ್ದೆಗಳು: ನ್ಯೂಟನ್‌ ಬ್ರಿಟಿಷ್‌ ಸರ್ಕಾರದಲ್ಲಿ ಹಲವಾರು ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದ್ದರು. 1696 ರಿಂದ 1699 ರ ವರೆವಿಗೆ ರಾಯಲ್‌ ಮಿಂಟ್‌ನ ವಾರ್ಡನ್‌ ಹುದ್ದೆಯಲ್ಲಿ, ನಂತರ 1699 ರಿಂದ 1726 ರ ವರೆವಿಗೆ ಮಾಸ್ಟರ ಆಫ್‌ ರಾಯಲ್‌ ಮಿಂಟ್‌ ಸ್ಥಾನವನ್ನು ಅಲಂಕರಿಸಿದ್ದರು.

    1703 ರಿಂದ 1726 ರ ವರೆವಿಗೆ ರಾಯಲ್‌ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಜೊತೆಗೆ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ಪಾರ್ಲಿಮೆಂಟ್‌ ಸದಸ್ಯರಾಗಿ ಎರಡು ಬಾರಿ 1689 ರಿಂದ 1690 ಮತ್ತು 1701 ರಿಂದ 1702 ರ ವರೆಗೆ ಸೇವೆಯನ್ನು ಸಲ್ಲಿಸಿದರು. 1705 ರಲ್ಲಿ ಮಹಾರಾಣಿ ಅನ್ನಿ, ನ್ಯೂಟನ್‌ ಗೆ ನೈಟ್‌ಹುಡ್‌ ನೀಡಿ ಗೌರವಿಸಿದರು.   ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ನ್ಯೂಟನ್‌ ಎಂದಿಗೂ ಮದುವೆಯಾಗಲಿಲ್ಲ. ಯಾವುದೇ ಭಾವೊದ್ರೇಕಕ್ಕೆ ಎಂದಿಗೂ ಸಂವೇದನಾಶೀಲರಾಗಲಿಲ್ಲ. ಸಾಮಾನ್ಯ ಮನುಷ್ಯನ ದೌರ್ಬಲ್ಯಗಳಿಗೆ ಒಳಪಟ್ಟಿರಲಿಲ್ಲ. ನ್ಯೂಟನ್‌ ಕನ್ಯೆಯಾಗಿ ಮರಣ ಹೊಂದಿದನೆಂಬ ನಂಬಿಕೆ ಅಸ್ಥಿತ್ವದಲ್ಲಿದೆ.

    ನ್ಯೂಟನ್‌ ತನ್ನ ಸಾಧನೆಗಳ ಬಗ್ಗೆ ತುಲನಾತ್ಮಕಾವಾಗಿ ಸಾಧಾರಣವಾಗಿದ್ದರು. (ಮಾಡೆಸ್ಟ್‌ ಅಬೌಟ್‌ ಇಸ್‌ ಅಚೀವ್‌ಮೆಂಟ್ಸ್)‌.

    ವಿಜ್ಞಾನದ ಇತಿಹಾಸದಲ್ಲಿ ಪ್ರಿನ್ಸಿಫಿಯಾ ಮ್ಯಾಥಮ್ಯಾಟಿಕಾ ಗ್ರಂಥವನ್ನು ಅದ್ಬುತವಾದ, ಸ್ಮಾರಕದ ಗ್ರಂಥವೆಂದು ಪರಿಗಣಿಸಲಾಗಿದೆ. ಲ್ಯಾಟಿನ್‌ ಭಾಷೆಯಲ್ಲಿ ಬರೆದಿರುವ ಈ ಗ್ರಂಥವನ್ನು 1687 ರಲ್ಲಿ ಎಡ್‌ಮಂಡ್‌ ಹ್ಯಾಲಿಯವರ ಸಹಾಯದಿಂದ ಮತ್ತು ಒತ್ತಾಯದಿಂದ ಪ್ರಕಟಿಸಲಾಯಿತು. ಎಡಮಂಡ್‌ ಹ್ಯಾಲಿ ಆರ್ಥಿಕ ನೆರವನ್ನು ಸಹ ನೀಡಿದರು ಎಂದು ಹೇಳಲಾಗಿದೆ. ಫ್ರೆಂಚ್‌ ಗಣಿತಶಾಸ್ತ್ರಜ್ಞ ಲಾಗ್ರೇಂಜ್‌ ಹೇಳಿರುವ ಪ್ರಕಾರ “ನ್ಯೂಟನ್‌ ಅವರು ಅಸ್ತಿತ್ವದಲ್ಲಿದ್ದ ಅತ್ಯಂತ ಶ್ರೇಷ್ಠ ಪ್ರತಿಭೆ ಮತ್ತು ಅತ್ಯಂತ ಅದೃಷ್ಠಶಾಲಿ, ಏಕೆಂದರೆ ನಾವು ಸ್ಥಾಪಿಸಲು ಪ್ರಪಂಚದ ವ್ಯವಸ್ಥೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಕಂಡು ಹಿಡಿಯಲಾಗುವುದಿಲ್ಲ.”

    ಆಂಗ್ಲ ಕವಿ ಅಲೆಕ್ಸಾಂಡರ್‌ ಪೋಪ್‌ ನ್ಯೂಟನ್‌ ಸಾಧನೆಗಳನ್ನು ಮೆಚ್ಚಿ ಶಿಲಾ ಶಾಸನವನ್ನು ಬರೆದರು. “ಪ್ರಕೃತಿ ಮತ್ತು ಪ್ರಕೃತಿ ನಿಯಮಗಳು ರಾತ್ರಿಯಲ್ಲಿ ಅಡಗಿಕೊಂಡಿವೆ. ದೇವರು ನ್ಯೂಟನ್‌ ಆಗಲಿ ಮತ್ತು ಎಲ್ಲವೂ ಬೆಳಕಿಗೆ ಬರಲಿ.”

    ನ್ಯೂಟನ್‌ನ ಹೇಳಿಕೆಯಿಂದ ಲೇಖನವನ್ನು ಅಂತ್ಯಗೊಳಿಸುತ್ತಿದ್ದೇನೆ. “ನಾನು ಜಗತ್ತಿಗೆ ಹೇಗೆ ಕಾಣಿಸುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನನಗೆ, ನಾನು ಸಮುದ್ರ ತೀರದಲ್ಲಿ ಆಟವಾಡುವ ಹುಡುಗನಂತೆ ಮತ್ತು ಆಗಾಗ್ಗೆ ನನ್ನ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುತ್ತಿದ್ದೇನೆ ಮತ್ತು ನಂತರ ಸಾಮಾನ್ಯಕ್ಕಿಂತ ಮೃದುವಾದ ಬೆಂಚಕಲ್ಲು ಅಥವಾ ಸುಂದರವಾದ ಚಿಪ್ಪುಗಳನ್ನು ಕಂಡು ಕೊಂಡಿದ್ದೇನೆ. ಸತ್ಯದ ಸಾಗರವು ನನ್ನ ಮುಂದೆ ಎಲ್ಲಾ ಪತ್ತೆಯಾಗಿಲ್ಲ”.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!