ಇಂದು ನವೆಂಬರ್ 1, ವಿಶ್ವಾದ್ಯಂತ ಕನ್ನಡಿಗರಿಗೆಲ್ಲರಿಗೂ ಸಂಭ್ರಮದ ದಿನ. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ಅಖಂಡ ರಾಜ್ಯವನ್ನಾಗಿ ಘೋಷಣೆ ಮಾಡಿದ ಸುದಿನ. 1956ರ ನವೆಂಬರ್ 1ರಂದು ಮೈಸೂರು ರಾಜ್ಯವು(ಈಗಿನ ಕರ್ನಾಟಕ) ನಿರ್ಮಾಣವಾದುದರ ಸಂಕೇತವಾಗಿ ಅಂದಿನಿಂದ ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಸುಮಾರು 2,೦೦೦ ವರ್ಷಗಳಿಗಿಂತಲೂ ಮಿಗಿಲಾದ ಇತಿಹಾಸ ಇರುವ ಕನ್ನಡ ನಾಡು ನುಡಿಯು ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಕ್ರೀಡೆ, ವಾಸ್ತುಶಿಲ್ಪ, ವಾಣಿಜ್ಯ, ಆರ್ಥಿಕತೆ, ಶಿಲ್ಪಕಲೆ, ಪ್ರವಾಸ, ವಿಜ್ಞಾನ, ತಂತ್ರಜ್ಞಾನ, ಅನೇಕ ವಿಷಯಗಳಲ್ಲಿ ರಾಷ್ಟ್ರ ಮಾತ್ರವಲ್ಲ ವಿಶ್ವದಲ್ಲಿಯೇ ಒಂದು ವಿಶೇಷ ಸ್ಥಾನಮಾನ ಹೊಂದಿದೆ. ಕನ್ನಡ ನಾಡಿನ ವಿಶೇಷತೆಗಳು, ಸಾಧನೆಗಳು ಒಂದೆರಡಲ್ಲ, ನೂರಾರು. ಅವುಗಳಲ್ಲಿ ಕೆಲವೊಂದನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಅವುಗಳನ್ನು ಒಂದೊಂದಾಗಿ ತಿಳಿಯುತ್ತಾ ಹೋದಂತೆ ಪ್ರತಿಯೊಬ್ಬ ಕನ್ನಡಿಗನಲ್ಲಿಯೂ ಕನ್ನಡಿಗನಾಗಿ ಹುಟ್ಟಿರುವುದಕ್ಕೆ ಅಭಿಮಾನ ತನ್ನಿಂತಾನೇ ಮೂಡಿಬರುತ್ತದೆ. ಇದೇ ಅಭಿಮಾನದಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರವಲ್ಲ ಪ್ರತಿ ದಿನ, ಪ್ರತಿ ಕ್ಷಣವು ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಸಂಭ್ರಮಿಸಬಹುದು.
- ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ 99.99 % ಪರಿಪೂರ್ಣವಾಗಿರುವ ಭಾಷೆ ಎಂದು ಗುರುತಿಸಲ್ಪಟ್ಟಿರುವ ಭಾಷೆ ಕನ್ನಡ.
- ಪ್ರಾಚೀನವಾದ ಹಲ್ಮಿಡಿ ಶಾಸನದಲ್ಲಿ ಕಾಣುವ ಕನ್ನಡ ಲಿಪಿಯು ಕ್ರಿ.ಶ 450 ರ ಸಮಯದಲ್ಲೇ ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುವುದನ್ನು ದೃಢಪಡಿಸುತ್ತದೆ.
- ಎರಡನೇ ಶತಮಾನದಷ್ಟು ಹಿಂದೆಯೇ ಕನ್ನಡ ಭಾಷೆ ಗ್ರೀಸ್ ದೇಶದವರೆಗೂ ತನ್ನ ಕಂಪನ್ನು ಬೀರಿತ್ತು; ಇದಕ್ಕೆ ಸಾಕ್ಷಿ ಎನ್ನುವಂತೆ ಚಾರಿಯಟ್ ಮೈಮ್ (Charition mime) ಎಂಬ ಎರಡನೇ ಶತಮಾನದ ಗ್ರೀಕ್ ನಾಟಕವೊಂದರಲ್ಲಿ ಕನ್ನಡ ನುಡಿಗಟ್ಟುಗಳನ್ನು ಬಳಸಲಾಗಿತ್ತು.
- ಜಗತ್ತಿನಲ್ಲಿರುವ ಒಟ್ಟು 7117 ಭಾಷೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ 30 ನೇ ಸ್ಥಾನದಲ್ಲಿರುವ ಭಾಷೆ ಕನ್ನಡ.
- ಜರ್ಮನಿಯ ರೆವರೆಂಡ್ ಎಫ್. ಕಿಟ್ಟೆಲ್, 1894 ರಲ್ಲಿ ಭಾರತೀಯ ಉಪಖಂಡದ ಇತಿಹಾಸ, ಸಂಸ್ಕೃತಿ, ಭಾಷೆ, ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಲು ಆಯ್ಕೆಮಾಡಿಕೊಂಡಿರುವುದು ಕನ್ನಡನಾಡು ಮತ್ತು ಅವರು ನಿಘಂಟು ರಚಿಸಿರುವ ಭಾರತೀಯ ಏಕೈಕ ಭಾಷೆ ಕನ್ನಡ.
- ಭಾರತ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಪಡೆದಿರುವ 6 ಭಾಷೆಗಳಲ್ಲಿ ಕನ್ನಡವೂ ಒಂದು.
- ಭಾರತದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸಾಹಿತ್ಯ ದಿಗ್ಗಜರನ್ನು ಹೊಂದಿರುವ ರಾಜ್ಯ ಕರ್ನಾಟಕ (ಕುವೆಂಪು, ಶ್ರೀ ರಾಮಾಯಣ ದರ್ಶನಂ-1967; ದ. ರಾ. ಬೇಂದ್ರ, ನಾಕುತಂತಿ – 1973; ಕೆ. ಶಿವರಾಮ ಕಾರಂತ, ಮೂಕಜ್ಜಿಯ ಕನಸುಗಳು – 1977; ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1893; ವಿ. ಕೃ. ಗೋಕಾಕ, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1990; ಯು. ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯಕ್ಕೆ ಸಮಗ್ರ – 1994; ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ, ನಾಟಕಗಳು – 1998; ಚಂದ್ರಶೇಖರ ಕಂಬಾರ – ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ -2010).
- ವಿಕಿಪೀಡಿಯ ವಿಶ್ವಕೋಶ ಲಾಂಚನದಲ್ಲಿ ಸ್ಥಾನ ಪಡೆದಿರುವ ಜಗತ್ತಿನ ಭಾಷೆಗಳಲ್ಲಿ ಕನ್ನಡವು ಒಂದು.
- ಜಗತ್ಪ್ರಸಿದ್ಧ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪರಂಪರೆಯು ಬೆಳೆದುಬಂದಿರುವ ತಾಣ ಕನ್ನಡ ನಾಡು.
- ತಾಜ್ ಮಹಲ್ ನಂತರ ಭಾರತದ ಅತ್ಯಂತ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣ ಕೃಷ್ಣರಾಜೇಂದ್ರ ಒಡೆಯರು ನಿರ್ಮಿಸಿದ ಮೈಸೂರು ಅರಮನೆ.
- 57 ಅಡಿ ಎತ್ತರವಿದ್ದು, ಸುಮಾರು 30 ಕಿ.ಮೀ ದೂರದಿಂದಲೂ ನೋಡಬಹುದಾದ ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆ ಇರುವುದು ಕರ್ನಾಟಕದ ಶ್ರವಣಬೆಳಗೋಳದಲ್ಲಿ.
- ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುವ ಮತ್ತು “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ 37 ಮೀಟರ್ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುವ ವಿಶಿಷ್ಟ ವಾಸ್ತುಶೈಲಿಯ ವಿಶ್ವದ ಏಕೈಕ ಕಟ್ಟಡ ಮತ್ತು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ ಬಿಜಾಪುರದ (ವಿಜಯಪುರ) ಗೋಲ ಗುಮ್ಮಟ.
- ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಬಳಿಯ ನಿಡಗೋಡು ಗ್ರಾಮದಲ್ಲಿರುವ ಸುಮಾರು 1,493 ಅಡಿಗಳ ಎತ್ತರದಿಂದ ಧುಮುಕುವ ಕುಂಚಿಕಲ್ ಜಲಪಾತವು ಭಾರತದ ಅತ್ಯಂತ ಎತ್ತರದ ಜಲಪಾತವಾಗಿದೆ.
- ಭವ್ಯವಾದ ಜೋಗ ಜಲಪಾತವೂ ಒಳಗೊಂಡು ಸುಮಾರು 5೦೦ ಜಲಪಾತಗಳನ್ನು ಹೊಂದಿರುವ ಸೌಂದರ್ಯದ ಬೀಡು ಎಂದು ಗುರುತಿಸಿಕೊಂಡಿರುವ ರಾಜ್ಯ ಕರ್ನಾಟಕ.
- ಕರ್ನಾಟಕವು ಹಂಪಿ, ಪಟ್ಟದಕಲ್ಲು ಮತ್ತು ಜೀವವೈವಿಧ್ಯತೆಯ ಸ್ವರ್ಗ ಪಶ್ಚಿಮ ಘಟ್ಟಗಳು ಸೇರಿದಂತೆ ಹಲವಾರು UNESCO ವಿಶ್ವ ಪರಂಪರೆಯ ತಾಣಗಳಿಗೆ ನೆಲೆಯಾಗಿದೆ.
- ‘ಭಾರತೀಯ ಶಿಲ್ಪಕಲೆಯ ತೊಟ್ಟಿಲು’ ಎಂದು ಖ್ಯಾತಿ ಹೊಂದಿರುವ ಪ್ರವಾಸಿ ತಾಣ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಐಹೊಳೆ.
- ರಾಷ್ಟ್ರೀಯ ಪ್ರಾಣಿ ಹುಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಭಾರತದ ಎರಡನೇ ರಾಜ್ಯ ಕರ್ನಾಟಕ.
- ನಾಯಕ ನಟನಾಗಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಏಕೈಕ ಸಿನಿಮಾ ತಾರೆ ಡಾ. ರಾಜಕುಮಾರ್.
- ನೀರೊಳಗಿನ ಚಿತ್ರೀಕರಣ ಮಾಡಿದ ಮೊದಲ ಭಾರತೀಯ ಚಿತ್ರ ಶಂಕರ್ ನಾಗ್ ನಿರ್ದೇಶನದ ‘ಒಂದು ಮುತ್ತಿನ ಕಥೆ’.
- ಭಾರತದ ಅತಿದೊಡ್ಡ ಕಚ್ಚಾ ರೇಷ್ಮೆ ಉತ್ಪಾದನಾ ಘಟಕಗಳ ನೆಲೆ ಎಂದು ಗುರುತಿಸಿಕೊಂಡಿರುವ ರಾಜ್ಯ ಕರ್ನಾಟಕ; ಪೇಟೆಂಟ್ ಪಡೆದಿರುವ ಮೈಸೂರು ರೇಷ್ಮೆ ಜಗತ್ತಿನ ಅತ್ಯಂತ ಉತ್ಕೃಷ್ಟ ರೇಷ್ಮೆಗಳಲ್ಲಿ ಒಂದು ಎಂದು ಮನ್ನಣೆ ಪಡೆದಿದೆ.
- ಭಾರತದ ರಾಷ್ಟ್ರ ಧ್ವಜಗಳನ್ನು ತಯಾರಿಸಲು ಮತ್ತು ಪೂರೈಸಲು ಸರ್ಕಾರದ ಅಧಿಕೃತ ಅನುಮತಿಯನ್ನು ಹೊಂದಿರುವ ಭಾರತದ ಏಕೈಕ ಘಟಕ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ.
- ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಜನಪ್ರಿಯ ಚಲನಚಿತ್ರ ಎರಡಕ್ಕೂ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಭಾರತದ ಏಕೈಕ ನಟ ಮತ್ತು ನಿರ್ದೇಶಕ ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಒಬ್ಬ ಕನ್ನಡಿಗ.
- ಭಾರತದಲ್ಲಿನ ಎಲ್ಲಾ ಚುನಾವಣೆಗಳಿಗೆ ಬಳಸಲಾಗುವ ಅಳಿಸಲಾಗದ ಕಪ್ಪು ಶಾಯಿಯನ್ನು ತಯಾರಿಸಲು ಅಧಿಕಾರ ಹೊಂದಿರುವ ಏಕೈಕ ಸ್ಥಳ ಮೈಸೂರಿನಲ್ಲಿರುವ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್.
- 1780 ರ ದಶಕದಲ್ಲಿ, ಟಿಪ್ಪು ಸುಲ್ತಾನ್ ಮತ್ತು ಹೈದರ್ ಆಲಿ ಆಳ್ವಿಕೆಯ ಕಾಲದಲ್ಲಿ ಲೋಹ-ಸಿಲಿಂಡರ್ ಮತ್ತು ಕಬ್ಬಿಣ-ಕೇಸ್ಡ್ ರಾಕೆಟ್ ಫಿರಂಗಿಗಳನ್ನು ಪ್ರಥಮ ಬಾರಿಗೆ ಅಭಿವೃದ್ಧಿಪಡಿಸಿದ ನಾಡು ಕನ್ನಡ ನಾಡು.
- ಭಾರತೀಯ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಅತ್ಯಂತ ಶ್ರೀಮಂತ ಸಾಮ್ರಾಜ್ಯಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದ್ದು, ಅಲ್ಲಿ ವ್ಯಾಪಾರಿಗಳು ಚಿನ್ನ ಮತ್ತು ಅಮೂಲ್ಯ ರತ್ನಗಳನ್ನು ಸಂತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು.
- ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ‘ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ’.
- ಭಾರತೀಯ ಸೇನೆಯು ಕಂಡ ಅತ್ಯಂತ ಶ್ರೇಷ್ಠ ಮಿಲಿಟರಿ ಅಧಿಕಾರಿ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಕಾಲಾಳುಪಡೆ ದಳಕ್ಕೆ ಯುದ್ಧ ಮಾಡಿದ ಏಕೈಕ ಭಾರತೀಯ ಕರ್ನಾಟಕದ ಜನರಲ್ ಕೆ. ಎಸ್. ತಿಮ್ಮಯ್ಯ.
- ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ (ಸಿ-ಇನ್-ಸಿ) ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ.
- ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ (ಐಟಿ) ರಫ್ತು ಮಾಡುವ ‘ಭಾರತದ ಸಿಲಿಕಾನ್ ವ್ಯಾಲಿ” ಹಾಗೂ “ಭಾರತದ ಐಟಿ ರಾಜಧಾನಿ’ ಎಂದು ಪರಿಗಣಿಸಲ್ಪಟ್ಟ ದೇಶದ ಏಕೈಕ ನಗರ ಬೆಂಗಳೂರು.
- ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ 3 ನೇ ಸ್ಥಾನದಲ್ಲಿರುವ .’ದಕ್ಷಿಣದ ಚಿರಾಪುಂಜಿ’ ಎಂದು ಗುರುತಿಸಿ ಸಲ್ಪಟ್ಟ ಪ್ರದೇಶ ಕರ್ನಾಟಕದ ಆಗುಂಬೆ.
- ಭಾರತದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ಉತ್ಪಾದಿಸುವ ರಾಜ್ಯ ಕರ್ನಾಟಕ.
- ಅತಿ ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಸ್ಥಾಪಿಸಿ ‘ಭಾರತದ ಬ್ಯಾಂಕಿಂಗ್ ತೊಟ್ಟಿಲು’ ಎಂದು ಮನ್ನಣೆ ಪಡೆದಿರುವ ರಾಜ್ಯ ಕರ್ನಾಟಕ (ದೇಶದ ಏಳು ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜನ್ಮ ಪಡೆದಿರುವುದು ಕರ್ನಾಟಕದಲ್ಲಿ -ಇತ್ತೀಚಿನ ವರ್ಷಗಳಲ್ಲಿ ಕೆಲವು ಬ್ಯಾಂಕ್‌ಗಳು ವಿಲೀನಗೊಂಡಿವೆ).
- ವಿಶ್ವ ದಾಖಲೆಯ ಮಟ್ಟದ ವೇಗದಲ್ಲಿ ಓಡಿ ‘ಭಾರತದ ಉಸೇನ್ ಬೋಲ್ಟ್’ ಎಂದು ಹೆಸರು ಗಳಿಸಿದ ಏಕೈಕ ವ್ಯಕ್ತಿ ಮೂಡುಬಿದಿರೆಯ ಕಂಬಳ ಓಟಗಾರ ಶ್ರೀನಿವಾಸ ಗೌಡ.
- ಜಗತ್ತಿನಲ್ಲಿ 25 ಬಾರಿ ಮರುಮುದ್ರಣಗೊಂಡ ಏಕೈಕ ಕವನ ಸಂಕಲನಗಳ ಪುಸ್ತಕ ನಾಡೋಜ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ‘ ನಿತ್ಯೋತ್ಸವ ‘.
- ಒಂದನೇ ಸ್ಥಾನದಲ್ಲಿರುವ ಭಾರತದ ಶೈಕ್ಷಣಿಕ ಕೇಂದ್ರ (Educational hub) ಎಂದು ಅಂತರರಾಷ್ಟ್ರೀಯ ಮನ್ನಣೆ ಪಡೆದ ನಗರ ಬೆಂಗಳೂರು.
- “ಜಗತ್ತಿನ ಅತ್ಯಂತ ಜೀವವೈವಿಧ್ಯತೆಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ (ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಮೀಸಲು ಕಾಡುಗಳು ಸೇರಿದಂತೆ) ವಿಶ್ವ ಪರಂಪರೆಯ ಹತ್ತು ತಾಣಗಳಿರುವುದು ಕರ್ನಾಟಕದಲ್ಲಿ.
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್ಸಿ.), ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ಇಸ್ರೋ), ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿ.ಎಫ್.ಟಿ. ಆರ್. ಐ.), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್), ಒಟ್ಟು ಸುಮಾರು 50 ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಸಂಶೋಧನಾ ಕೇಂದ್ರಗಳು ಇರುವುದು ಕರ್ನಾಟಕದಲ್ಲಿ.
- ಸ್ವಾದಿಷ್ಟದಲ್ಲಿ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿರುವ ಕೋಸಂಬರಿ ಮಸಾಲೆದೋಸೆ, ಮಂಗಳೂರು ಬಜ್ಜಿ, ಮದ್ದೂರುವಡೆ, ರಾಗಿರೊಟ್ಟಿ, ಮೈಸೂರುಪಾಕ್,, ಧಾರವಾಡದ ಫೇಡೆ (ಪೇಡಾ), ಬೆಳಗಾವಿ ಕುಂದಾ, ಹಲಸಿನ ಹಪ್ಪಳ, ಬಿಸಿಬೇಳೆಭಾತ್ ಅಡುಗೆಗಳು ಅನ್ವೇಷಿಸಲ್ಪಟ್ಟ ರಾಜ್ಯ ಕರ್ನಾಟಕ.
- ಜಿಡಿಪಿಯಲ್ಲಿ ಭಾರತದಲ್ಲಿ ಮೂರನೇ ಶ್ರೀಮಂತ ರಾಜ್ಯ ಕರ್ನಾಟಕ (₹20.5 trillion).
- ವಿಶಿಷ್ಟ ಶೈಲಿ ಮತ್ತು ರಂಗಭೂಮಿ ತಾಂತ್ರಿಕತೆಯೊಂದಿಗೆ ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಮೇಕಪ್ ಸಮ್ಮಿಶ್ರಣದಿಂದ ಕೂಡಿರುವ ವಿಶ್ವದ ಏಕೈಕ ಕಲೆ ಕರ್ನಾಟಕದ ಯಕ್ಷಗಾನ.
- ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರ ‘ಆಕಾಶವಾಣಿ’ಯನ್ನು ಸ್ಥಾಪಿಸಿದ್ದು ಕರ್ನಾಟಕದ ಮೈಸೂರಿನಲ್ಲಿ (1936 ರಲ್ಲಿ ಎಂ. ವಿ. ಗೋಪಾಲಸ್ವಾಮಿ).
- ಭಾರತ ವಿಶ್ವದ ಅತಿದೊಡ್ಡ ಚಲನಚಿತ್ರಗಳ ನಿರ್ಮಾಣ ಮಾಡುವ ದೇಶ; 2019ರಲ್ಲಿಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿರುವ ರಾಜ್ಯ ಕರ್ನಾಟಕ.
- ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ (ಇವಿಎಂ) ಗಳನ್ನು ತಯಾರಿಸುವ ಸಂಸ್ಥೆ ಕರ್ನಾಟಕದಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್.
- ಸರ್ ಎಂ. ವಿಶ್ವೇಶ್ವರಯ ಅವರ ಜನ್ಮ ದಿನಾಚರಣೆಯನ್ನು (ಸೆಪ್ಟೆಂಬರ್ 15) ರಾಷ್ಟ್ರೀಯ ಇಂಜಿನಿಯರ್ಸ್ ದಿನಾಚರಣೆ ಎಂದು ಆಚರಿಸಲಾಗುತ್ತದೆ.
- ಭಾರತ ಕ್ರಿಕೆಟ್ ತಂಡಕ್ಕೆ ಅತಿ ಹೆಚ್ಚು ಆಟಗಾರರನ್ನು ನೀಡಿರುವ ರಾಜ್ಯ ಕರ್ನಾಟಕ.
- ವಿಧಾನಸೌಧ ಭಾರತದ ಅತಿದೊಡ್ಡ ಶಾಸಕಾಂಗ ಕಟ್ಟಡವಾಗಿದೆ.
- ಕರ್ನಾಟಕ ರಾಜ್ಯದ ಸಾಫ್ಟ್‌ವೇರ್ ಉದ್ಯಮವು ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಸಾಫ್ಟ್‌ವೇರ್ ರಫ್ತಿನಿಂದ ಬರುವ ಆದಾಯ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಕರ್ನಾಟಕ.
- 1999 ರಲ್ಲಿ ಪಾಕಿಸ್ತಾನದ ವಿರುದ್ಧ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಮತ್ತು ಏಕೈಕ ಭಾರತೀಯ ಮತ್ತು ಜಗತ್ತಿನ ಎರಡನೇ ಬೌಲರ್ ಸಾಧಿಸಿರುವ ಕ್ರಿಕೇಟಿಗ ಅನಿಲ್ ಕುಂಬ್ಳೆ ಕನ್ನಡಿಗ.
- ಜಾಗತಿಕವಾಗಿ ‘ಸೈನ್ಸ್ ಕೆರಿಯರ್ಸ್ ಟಾಪ್ 20 ಉದ್ಯೋಗದಾತರು’ ಪಟ್ಟಿಯಲ್ಲಿ ಅಗ್ರ ಐದು ಬಯೋಟೆಕ್ ಉದ್ಯೋಗದಾತರಲ್ಲಿ ಸ್ಥಾನ ಪಡೆದಿರುವ ಬಯೋಕಾನ್ ಲಿಮಿಟೆಡ್ ಸಂಸ್ಥೆ ಇರುವುದು ಬೆಂಗಳೂರಿನಲ್ಲಿ ಮತ್ತು ಅದರ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ಶಿಕ್ಷಣ ಪಡೆದಿರುವುದು ಕರ್ನಾಟಕದಲ್ಲಿ.
- ಇನ್ಫೋಸಿಸ್ ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾಗಿದೆ.
- ವಿದ್ಯುತ್ ಬೀದಿ ದೀಪಗಳನ್ನು ಬಳಸಿದ ಏಷ್ಯಾದ ಮೊದಲ ನಗರ ಬೆಂಗಳೂರು.
- ಸರ್ ಎಂ. ವಿಶ್ವೇಶ್ವರಯ್ಯ; ಭೀಮ್ಸೆನ್ ಜೋಶಿ; ಪ್ರೊ. ಸಿ.ಎನ್.ಆರ್. ರಾವ್ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಗೆ ಭಾಜನರಾದ ಕರ್ನಾಟಕದ ಶ್ರೇಷ್ಠ ಸಾಧಕರು.
ಹೀಗೆ ಕನ್ನಡ ನಾಡು ನುಡಿಯ ವಿಶಿಷ್ಟತೆ, ಸಾಧನೆ, ಸಾಧಕರುಗಳ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಾ ಹೋಗುತ್ತದೆ. ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳು ಕನ್ನಡಿಗರೆಲ್ಲರಿಗೂ ಎಂದೆಂದಿಗೂ ಸ್ಪರ್ತಿದಾಯಕ.
“ಎಲ್ಲಾದರು ಇರು
ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ”
ಸಂಗ್ರಹಯೋಗ್ಯ
ಉತ್ತಮ ಮಾಹಿತಿ 🌹🌹