ವಿಜ್ಞಾನ ನಮ್ಮ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿದೆ. ವಿಜ್ಞಾನವಿಲ್ಲದೆ ಜೀವನವೇ ಇಲ್ಲ. ನಮ್ಮ ದಿನ ನಿತ್ಯದ ಪ್ರತಿಯೊಂದು ಕೆಲಸದಲ್ಲಿ ನಮಗೆ ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೊ ವಿಜ್ಞಾನದ ತತ್ವಗಳನ್ನು ಬಳಸುತ್ತೇವೆ. ನಮ್ಮ ಜೀವನದ ಪ್ರತಿಯೊಂದು ಅಂಶವು ಸಹ ಒಂದಲ್ಲಾ ಒಂದು ರೀತಿಯಲ್ಲಿ ವಿಜ್ಞಾನದಿಂದ ಪ್ರಭಾವಗೊಂಡಿದೆ. ಪ್ರಾತಃಕಾಲದಲ್ಲಿ ಎದ್ದ ಕ್ಷಣದಿಂದ ಪ್ರಾರಂಭಗೊಂಡು ರಾತ್ರಿ ಮಲಗುವವರೆಗೂ ಪ್ರತಿ ತಿರುವಿನಲ್ಲಿ ವಿಜ್ಞಾನದ ಪ್ರಭಾವವನ್ನು ನಾವು ಕಾಣುತ್ತೇವೆ.
ಮಾನವನ ಜೀವನವನ್ನು ಸುಖಮಯಗೊಳಿಸುವ ದಿಕ್ಕಿನಲ್ಲಿ ವಿಜ್ಞಾನದ ಕೊಡುಗೆ ಅಪಾರ. ಉದಾಹರಣೆಗೆ, ವೈದ್ಯಕೀಯ ವಿಜ್ಞಾನದಲ್ಲಿನ ಅಭಿವೃದ್ಧಿಯಿಂದಾಗಿ, ನಮ್ಮ ಆರೋಗ್ಯ, ಯೋಗಕ್ಷೇಮ ಸುಧಾರಿಸಿರುವ ಜೊತೆಗೆ, ನಮ್ಮ ಆಯುಷ್ಯದ ಪ್ರಮಾಣವು ಸಹ ಗಮನಾರ್ಹವಾಗಿ ಹೆಚ್ಚಾಗಿದೆ. ಒಂದು ವರದಿಯ ಪ್ರಕಾರ ಹದಿನಾರು ಮತ್ತು ಹದಿನೇಳನೆ ಶತಮಾನಗಳಲ್ಲಿ, ಮಾನವನ ಜೀವಿತಾವಧಿ ಕೇವಲ 30-40 ವರ್ಷಗಳಾಗಿತ್ತು. ಪ್ರಸ್ತುತದಲ್ಲಿ ಜೀವಿತಾವಧಿ 70-80 ವರ್ಷಗಳಾಗಿರುವುದು ನಮ್ಮ ಅದೃಷ್ಟ. ಈ ಹಿನ್ನಲೆಯಲ್ಲಿ, ವಿಜ್ಞಾನ ಎಂದರೇನು, ವಿಜ್ಞಾನವನ್ನು ನಾವು ಏಕೆ ಮತ್ತು ಹೇಗೆ ಓದಬೇಕು ಹಾಗೂ ಪ್ರಸ್ತುತದಲ್ಲಿ ವಿಜ್ಞಾನ ಶಿಕ್ಷಣದ ಸ್ಥಾನಮಾನ ಮುಂತಾದುವುಗಳನ್ನು ಕುರಿತಂತೆ ಅವಲೋಕಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯೂ ಕೂಡ.
ವಿಜ್ಞಾನ ಎಂದರೇನು? ಭೌತಿಕ ಮತ್ತು ಪ್ರಾಕೃತಿಕ ಪ್ರಪಂಚದ ವಿದ್ಯಮಾನಗಳಿಗೆ ಸಂಬಂಧಿಸಿದ, ಪಕ್ಷಪಾತವಿಲ್ಲದ ಅವಲೋಕನ ಹಾಗೂ ವ್ಯವಸ್ಥಿತ ಪ್ರಯೋಗಗಳಿಗೆ ಒಳಗೊಳ್ಳುವಂತೆ ಮಾಡುವ ಅಧ್ಯಯನದ ವಿಧಾನವೇ ವಿಜ್ಞಾನ. ಸಾಮಾನ್ಯ ಸತ್ಯಗಳು ಅಥವಾ ಮೂಲಭೂತ ತತ್ವಗಳ ಕಾರ್ಯಾಚರಣೆಗಳನ್ನು ಒಳಗೊಂಡು ನಡೆಸುವ ಜ್ಞಾನಾನ್ವೇಷಣೆಯೆ ವಿಜ್ಞಾನ. ಒಂದು ಅರ್ಥದಲ್ಲಿ ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ ಜ್ಞಾನಮಂಡಲ.
ವಿಶಾಲವಾಗಿ ಹೇಳುವುದಾದರೆ, ವಿಜ್ಞಾನವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದಾಗಿ, ಅಜೈವಿಕ ವಿಶ್ವದ ಅಧ್ಯಯವನ್ನು ಒಳಗೊಂಡಿರುವ ಭೌತವಿಜ್ಞಾನ. ಉದಾಹರಣೆ: ಖಗೋಳಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ ಇತ್ಯಾದಿ. ಎರಡನೆಯದಾಗಿ ಜೈವಿಕ ವಿಜ್ಞಾನ. ಉದಾಹರಣೆ: ಜೀವಶಾಸ್ತ್ರ, ಕೃಷಿವಿಜ್ಞಾನ, ಜೀವರಸಾಯನಶಾಸ್ತ್ರ, ಮುಂತಾದವುಗಳು. ಮೂರನೆಯ ಶಾಖೆ ಸಾಮಾಜಿಕ ವಿಜ್ಞಾನ. ಉದಾಹರಣೆ: ಅರ್ಥಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ. ಮೇಲೆ ತಿಳಿಸಿರುವಂತೆ ಭೌತಿಕ ಮತ್ತು ನೈಸರ್ಗಿಕ ಪ್ರಪಂಚದ ವಿದ್ಯಮಾನಗಳನ್ನು ತರ್ಕಬದ್ಧವಾಗಿ ವಿವರಿಸಬಲ್ಲ ಜ್ಞಾನದ ಗಣಿ ವಿಜ್ಞಾನ. ಜ್ಞಾನವನ್ನು ಗಳಿಸುವ ವ್ಯವಸ್ಥಿತವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿಯನ್ನು ವಿಜ್ಞಾನಿ ಎಂದು ಕರೆಯುತ್ತೇವೆ. ಸತ್ಯಾನ್ವೇಷಣೆಗೆ ವಿಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ವ್ಯಕ್ತಿ ವಿಜ್ಞಾನಿಯೆಂದು ಕರೆಸಿಕೊಳ್ಳಲು ಅರ್ಹನಾಗುತ್ತಾನೆ.
ವಿಜ್ಞಾನವನ್ನು ಏಕೆ ಓದಬೇಕು?
ವಿಜ್ಞಾನದ ತತ್ವಗಳನ್ನು ಮತ್ತು ಅವುಗಳ ಅನ್ವಯಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಉತ್ತಮ ಹಾಗೂ ಪರಿಣಾಮಕಾರಿಯಾದ ವಿಜ್ಞಾನ ಶಿಕ್ಷಣ ಅತ್ಯಗತ್ಯ.ಮುಂದುವರಿದು, ವಿಜ್ಞಾನ ಶಿಕ್ಷಣದ ಸ್ವರೂಪವು ವಿಜ್ಞಾನವು ಹೇಗೆ ಮಾನವನ ಉಪಕ್ರಮ (ಪ್ರಾರಂಭ) ವಾಗಿದೆ, ವಿಜ್ಞಾನಿಗಳ ಚಿಂತನೆ ಹೇಗಿರುತ್ತದೆ, ವೈಜ್ಞಾನಿಕ ಜ್ಞಾನವನ್ನು ಹೇಗೆ ಸೃಷ್ಟಿಸಲಾಗುತ್ತದೆ, ಹೇಗೆ ವಿಕಸನಗೊಳ್ಳುತ್ತದೆ, ತತ್ವಗಳನ್ನು ಅನ್ವಯಗಳಲ್ಲಿ ಹೇಗೆ ಬಳಸಲಾಗುತ್ತದೆ ಎಂಬುವುದರ ಅಧ್ಯಯನವನ್ನು ಸೂಚಿಸುತ್ತದೆ.
ವಿಜ್ಞಾನ ಶಿಕ್ಷಣವು ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
1) ರಾಷ್ಟ್ರದ ಅಭಿವೃದ್ಧಿಗೆ ವಿಜ್ಞಾನ ಶಿಕ್ಷಣ ಬಹಳ ಮುಖ್ಯ. ಏಕೆಂದರೆ, ವಿಜ್ಞಾನ ಶಿಕ್ಷಣವು ಹಲವು ಕ್ಷೇತ್ರಗಳಿಗೆ ಅಪಾರ ಕೊಡುಗೆಯನ್ನು ನೀಡುತ್ತದೆ. ಪರಿಸರ ಸುಸ್ಥಿರತೆ, ರಾಷ್ಟ್ರೀಯ ಭದ್ರತೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಉತ್ಪಾಧನಾ ಕ್ಷೇತ್ರ, ಸಾಮಾಜಿಕ ಅಭಿವೃದ್ಧಿ ಹೀಗೆ ಹಲವಾರು ಕ್ಷೇತ್ರಗಳಿಗೆ ಕೊಡುಗೆಯನ್ನು ನೀಡುತ್ತದೆ.
2) ವಿಜ್ಞಾನವು ನಾವಿನ್ಯತೆ ಮತ್ತು ತಾಂತ್ರಿಕ ಪ್ರಗತಿಗೆ ಆಧಾರವಾಗಿದೆ.
3) ವಿಮರ್ಶಾತ್ಮಕ ಚಿಂತನೆ, ನಾವಿನ್ಯತೆ ಮತ್ತು ಸೃಜನಶೀಲತೆಗಳನ್ನು ಉತ್ತೇಜಿಸುತ್ತದೆ ಹಾಗೂ ವಿಷಯದ ಬಗ್ಗೆ ಕುತೂಹಲವನ್ನುಂಟುಮಾಡುತ್ತದೆ. ಓದಿದ ಅಥವಾ ಕೇಳಿದ ವಿಷಯದ ಬಗ್ಗೆ ಪ್ರಶ್ನಿಸುವ, ವಿಶ್ಲೇಷಿಸುವ, ಅರ್ಥವಿವರಣೆ ಮಾಡುವ (ಇಂಟರ್‌ಪ್ರಿಟ್), ಮೌಲ್ಯಮಾಪನ ಮಾಡುವ ಮತ್ತು ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯಕ್ಕೆ ವಿಮರ್ಶಾತ್ಮಕ ಚಿಂತನೆ ಎಂದು ಕರೆಯುತ್ತೇವೆ. ಸಾಂಪ್ರದಾಯಕ ಕಲ್ಪನೆಗಳು, ನಿಯಮಗಳು, ಮಾದರಿಗಳನ್ನು ಮೀರುವ, ಅರ್ಥಪೂರ್ಣ ಹೊಸ ಆಲೋಚನೆಗಳನ್ನು, ವಿಧಾನಗಳನ್ನು, ವ್ಯಾಖ್ಯಾನಗಳನ್ನು ರಚಿಸುವ ಸಾಮರ್ಥ್ಯಕ್ಕೆ ಸೃಜನಶೀಲತೆಯೆಂದು ಕರೆಯಬಹುದು. ಜ್ಞಾನ ಮತ್ತು ಮಾಹಿತಿಯನ್ನು ಪಡೆಯುವ ಅತೀವ ಬಯಕೆಗೆ ಕುತೂಹಲವೆನ್ನುತ್ತೇವೆ. ವಿಜ್ಞಾನ ಶಿಕ್ಷಣವು ಈ ನಾಲ್ಕು ಗುಣ ಲಕ್ಷಣಗಳನ್ನು ಪೋಷಿಸುತ್ತದೆ. ಬಹಳ ಜನ ಪ್ರಿಯವಾದ ಮತ್ತು ಹಲವಾರು ಜನ ಸಾಮಾನ್ಯರಿಗೂ ತಿಳಿದಿರುವ ನ್ಯೂಟನ್ ನ ಸೇಬು ಹಣ್ಣಿನ ಪ್ರಕರಣವನ್ನು ಗಮನಿಸಿ. ತನ್ನ ಪಿತ್ರಾರ್ಜಿತ ಸೇಬುಹಣ್ಣಿನ ತೋಟದಲ್ಲಿ ಕುಳಿತಿರುವಾಗ, ಮರದಿಂದ ಸೇಬು ಕೆಳಗೆ ಬೀಳುವುದನ್ನು ಗಮನಿಸಿದ, ಜೊತೆಗೆ ಯಾವುದೇ ವಸ್ತುವನ್ನು ಮೇಲಕ್ಕೆ ಎಸೆದಾಗ, ಅದು ಪುನಃ ಕೆಳಗೆ ಬೀಳುವದನ್ನು ಪರಿಶೀಲಿಸಿದ. ಅದರಲ್ಲೂ ಭೂಮಿಯ ಮೇಲ್ಮೈಗೆ ಲಂಬವಾಗಿ ಏಕೆ ಬೀಳುತ್ತದೆ, ಮೇಲಕ್ಕಾಗಲಿ ಅಥವಾ ಪಾರ್ಶ್ವ ದಿಕ್ಕಿಗಾಗಲಿ ಏಕೆ ಹೋಗುವುದಿಲ್ಲ ಎಂಬ ಅಂಶಗಳ ಬಗ್ಗೆ ಚಿಂತನೆ ನಡೆಸಿ, ಗುರುತ್ವಾಕರ್ಷಣೆ ತತ್ವವನ್ನು ಪ್ರತಿಪಾದಿಸಿದ.
ರೈಟ್ ಸಹೋದರರು ಸಹ (ಆರ್ವಿಲ್ಲೆ ರೈಟ್ ಮತ್ತು ವಿಲ್ಬರ್ ರೈಟ್) ಹಕ್ಕಿಗಳು ಹಾರಾಡುವುದನ್ನುಸೂಕ್ಷ್ಮವಾಗಿ ಗಮನಿಸಿ, ನಿಯಂತ್ರಣದ ಕಲೆಯನ್ನು ಕರಗತ ಮಾಡಿಕೊಳ್ಳಲು ಗ್ಲೈಡಿಂಗ್ ನ್ನು ಅಭ್ಯಾಸಮಾಡಿ, ಅಂತಿಮವಾಗಿ 1903 ಡಿಸೆಂಬರ್ 17 ರಂದು ವಿಮಾನದ ಮೊದಲ ನಿಯಂತ್ರಿತ ಹಾರಾಟವನ್ನು ಮಾಡಿದರು.
4) ವಿಜ್ಞಾನ ಶಿಕ್ಷಣದಲ್ಲಿ ಪರಿಕಲ್ಪನೆಯ ತಿಳುವಳಿಕೆಗೆ (ಕನ್ಸ್‌ಪ್ಚುಯಲ್ ಅಂಡರ್‌ಸ್ಟಾಂಡಿಂಗ್) ಪ್ರಾಮುಖ್ಯತೆ ನೀಡುವುದರಿಂದ, ವಿಜ್ಞಾನ ಶಿಕ್ಷಣವು ವಿಮರ್ಶಾತ್ಮಕ ಚಿಂತನೆಯನ್ನು ಕೃಷಿಮಾಡುತ್ತದೆ. ಇದರಿಂದ ನೈಜ ಪ್ರಪಂಚದ ಸಮಸ್ಯೆಗಳನ್ನು ಬಿಡಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
5) ವಿಜ್ಞಾನವು ತಂತ್ರಜ್ಞಾನಕ್ಕೆ ಅಡಿಪಾಯವಾಗಿದೆ. ತಂತ್ರಜ್ಞಾನವು ವೈಜ್ಞಾನಿಕ ಜ್ಞಾನದ ಅನ್ವಯವಾಗಿದೆ. ಹೊಸ ತಾಂತ್ರಿಕ ಕಲ್ಪನೆಗಳಿಗೆ ಕಾರಣವಾಗುವ ಹೊಸ ಜ್ಞಾನವನ್ನು ಮೂಲ ವಿಜ್ಞಾನ ಒದಗಿಸುತ್ತದೆ. ಉದಾಹರಣೆಗೆ, ಸೆಮಿ ಕಂಡಕ್ಟರ್ (ಅರೆವಾಹಕ) ಸಂಬಂಧಿಸಿದ ಭೌತಶಾಸ್ತ್ರದಲ್ಲಿ ನಡೆಸುವ ಮೂಲಭೂತ ಸಂಶೋಧನೆಯನ್ನು ಆಧರಿಸಿ, ಟ್ರಾನ್ಸಿಸ್ಟರ್, ಇಂಟಿಗ್ರೇಟೆಡ್ ಸರ್ಕ್ಯೂಟ್ಸ್ ನಂತಹ ಸಾಧನಗಳನ್ನು ತಯಾರು ಮಾಡಲು ಸಾಧ್ಯವಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವು ವಿಭಿನ್ನ ರೀತಿಯ ಉದ್ದೇಶಗಳನ್ನು ಹೊಂದಿದ್ದರೂ ಸಹ, ಅವುಗಳು ಪರಸ್ಪರ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತವೆ.
6) ವಿಜ್ಞಾನವು ಕಲಿಕೆಯ ಉತ್ಸಾಹವನ್ನುಂಟು ಮಾಡುತ್ತದೆ. ಅನ್ವೇಷಣೆಗಾಗಿ ವಿದ್ಯಾರ್ಥಿಗಳು ಆಕರ್ಷಣೆಗೊಳ್ಳುತ್ತಾರೆ. ಪ್ರಕೃತಿಯಲ್ಲಿ ನಾವು ಕಾಣುವ ವಿದ್ಯಮಾನಗಳಿಗೆ ಉತ್ತರ ಕಂಡುಹಿಡಿಯಲು ಆಸಕ್ತಿಯನ್ನು ಬಲಪಡಿಸುತ್ತದೆ. ಉದಾಹರಣೆಗೆ, ಸೂರ್ಯ ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಏಕೆ ಅಸ್ತಮಿಸುತ್ತಾನೆ, ನಕ್ಷತ್ರಗಳು ಏಕೆ ಮಿನುಗುತ್ತವೆ, ಆಕಾಶದ ಬಣ್ಣ ಏಕೆ ನೀಲಿ, ಸಾಗರದ ನೀರಿನ ಮೇಲ್ಮೈ ಏಕೆ ನೀಲಿ ಬಣ್ಣವಾಗಿ ಕಾಣುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಉತ್ತೇಜನಗೊಳ್ಳುತ್ತಾರೆ, ಈ ಪ್ರಕ್ರಿಯೆಯಲ್ಲಿ ಜ್ಞಾನವು ಬೆಳೆಯುತ್ತದೆ.
7) ವಿಜ್ಞಾನವು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು (ಪ್ರಾಬ್ಲಂ ಸಾಲ್ವಿಂಗ್ ಸ್ಕಿಲ್ಸ್) ಮತ್ತು ತಾರ್ಕಿಕ ಚಿಂತನೆಯ ಕೌಶಲ್ಯಗಳನ್ನು (ಲಾಜಿಕಲ್ ಥಿಂಕಿಂಗ್ ಸ್ಕಿಲ್ಸ್) ಅಭಿವೃದ್ಧಿಪಡಿಸುತ್ತದೆ. ಉದಾಹರಣೆಗೆ, ನೊಬೆಲ್ ಪ್ರಶಸ್ತಿ ವಿಜೇತರಾದ ಸರ್. ಸಿ. ವಿ ರಾಮನ್ ರವರು 1921 ರಲ್ಲಿ ಇಂಗ್ಲೆಂಡ್ ನಿಂದ ಸಮುದ್ರಯಾನದ ಮೂಲಕ ಭಾರತಕ್ಕೆ ವಾಪಸ್ಸು ಬರುವಾಗ, ನಿಕಾಲ್ ಪಟ್ಟಕದ ಸಹಾಯದಿಂದ ಸರಳ ಪ್ರಯೋಗ ನಡೆಸಿ, ಸಾಗರದ ನೀರಿನ ಮೇಲ್ಮೈನಲ್ಲಿ ಆಕಾಶವು ಪ್ರತಿಫಲನಗೊಳ್ಳುವುದರಿಂದ ನೀಲಿ ಬಣ್ಣವಾಗಿ ಕಾಣುತ್ತದೆ ಎಂದು ಲಾರ್ಡ್ ರಾಲೆ ನೀಡಿದ್ದ ವಿವರಣೆಯನ್ನು ತಾರ್ಕಿಕವಾಗಿ ತಪ್ಪು ಎಂದು ಪ್ರತಿಪಾದಿಸಿ, ಬೆಳಕಿನ ಚದರುವಿಕೆ ಕಾರಣ ಎಂದು ಪ್ರತಿಪಾದಿಸಿ, ರಾಮನ್ ಪರಿಣಾಮವನ್ನು (ರಾಮನ್ ಎಪೆಕ್ಟ್) ಕಂಡು ಹಿಡಿದರು.
8) ವೈಜ್ಞಾನಿಕ ಸಾಕ್ಷರತೆ (ಸೈಂಟಿಫಿಕ್ ಲಿಟರಸಿ) ಯನ್ನು ಅಭಿವೃದ್ಧಿ ಪಡಿಸುತ್ತದೆ. ವೈಜ್ಞಾನಿಕ ಸಾಕ್ಷರತೆಯಿಂದ, ವೈಜ್ಞಾನಿಕ ಸುದ್ಧಿಗಳು, ಅನ್ವೇಷಣೆಗಳು, ವೈಜ್ಞಾನಿಕ ಸಿದ್ದಾಂತಗಳು ಮತ್ತು ಅವಲೋಕನಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. ಪರಿಣಾಮವಾಗಿ ವಿಜ್ಞಾನ, ಸುಸ್ಥಿರತೆ ಮತ್ತು ತಂತ್ರಜ್ಞಾನಗಳನ್ನೊಳಗೊಂಡ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸುಲಭವಾಗುತ್ತದೆ. ಉದಾಹರಣೆಗೆ, ಹವಾಮಾನ ಬದಲಾವಣೆಗಳ ಬಗ್ಗೆ ಅಧ್ಯಯನ ಮಾಡಿದಾಗ, ಗ್ರೀನ್ ಹೌಸ್ ಗ್ಯಾಸಸ್ (ಹಸಿರು ಮನೆ ಅನಿಲಗಳು) ಗಳ ಪರಿಣಾಮ ಅರ್ಥವಾಗುತ್ತದೆ. ಸಂಬಂಧಪಟ್ಟ ನೀತಿಗಳ ಬಗ್ಗೆ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ. ಸಕ್ಕರೆ ಖಾಯಿಲೆಯಿರುವ ವ್ಯಕ್ತಿಗೆ, ಅನ್ನವನ್ನು ಮಿತವಾಗಿ ತಿನ್ನಬೇಕು, ಅದರಲ್ಲಿ ಕಾರ್ಬೊ ಹೈಡ್ರೇಟ್ ಹೆಚ್ಚಾಗಿರುತ್ತದೆ. ಫಲವಾಗಿ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಬದಲಾಗಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ಕೊಟ್ಟಾಗ ವಿಜ್ಞಾನ ಸಾಕ್ಷರತೆಯಿದ್ದ ವ್ಯಕ್ತಿಗೆ ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಚಾಚು ತಪ್ಪದೆ ಪಾಲಿಸುತ್ತಾನೆ.
9) ಜಾಗತಿಕ ಸಮಸೈಗಳನ್ನು ವೈಜ್ಞಾನಿಕ ದೃಷ್ಟಿಕೋನದ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳುವ ಮತ್ತು ಸಂದರ್ಭೋಚಿತ ನೆಲೆಯಲ್ಲಿ ತಿಳಿಯುವ ಸಾಮರ್ಥ್ಯವನ್ನು ವೈಜ್ಞಾನಿಕ ಶಿಕ್ಷಣದಿಂದ ಪಡೆಯಬಹುದು.
10) ವೈಜ್ಞಾನಿಕ ಪ್ರಗತಿ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ.
11) ವಿಜ್ಞಾನ ಶಿಕ್ಷಣದಿಂದ ಮೂಡನಂಬಿಕೆಗಳನ್ನು ತೊಲಗಿಸಬಹುದು. ವೈಜ್ಞಾನಿಕ ಮನೋಭಾವನೆ ಬೆಳೆಯಲು ಸಹಾಯವಾಗುತ್ತದೆ.
12) ವಿಜ್ಞಾನದ ಪದವೀಧರರು ಹೆಚ್ಚಿನ ಸಂಭಾವನೆ ಪಡೆಯುವ ಅವಕಾಶಗಳಿರುತ್ತವೆ ಮತ್ತು ಧೀರ್ಘಕಾಲದ ಉದ್ಯೋಗಗಳನ್ನು ಪಡೆಯಬಹುದು.
13) ವಿಜ್ಞಾನ ಶಿಕ್ಷಣವು ಮುಂದಿನ ಪೀಳಿಗೆಯ ವಿಜ್ಞಾನಿಗಳನ್ನು ಸಿದ್ಧಪಡಿಸುತ್ತದೆ.
ವಿಜ್ಞಾನವನ್ನು ಹೇಗೆ ಓದಬೇಕು?
1) ಮೊಟ್ಟ ಮೊದಲನೆಯದಾಗಿ ಕಂಠಪಾಠ ಮಾಡುವ (ಗಟ್ಟು ಹೊಡೆಯುವ) ಅಥವಾ ಪರೀಕ್ಷೆಗಳನ್ನು ಪಾಸು ಮಾಡುವ ದೃಷ್ಟಿಯಿಂದಲೇ ಓದುವ ಅಭ್ಯಾಸವನ್ನು ಸಂಪೂರ್ಣವಾಗಿ ಬಿಡಬೇಕು. ಬದಲಿಗೆ ಪರಿಕಲ್ಪನಾ ತಿಳುವಳಿಕೆಗೆ (ಕನ್ಸಪ್ಚುಯಲ್ ಅಂಡರ್‌ಸ್ಟಾಂಡಿಂಗ್) ಆಧ್ಯತೆಯನ್ನು ನೀಡಿ ಪರಿಕಲ್ಪನೆಗಳನ್ನು (ಕಾನ್ಸೆಪ್ಟ್ಸ್) ಚೆನ್ನಾಗಿ ಅರ್ಥಮಾಡಿಕೊಂಡು, ಏಕಾಗ್ರತೆಯಿಂದ ಕೂಡಿದ ಅಧ್ಯಯನವನ್ನು ಮಾಡಬೇಕು. ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಪಡೆಯುವುದರ ಮೂಲಕ, ವೃತ್ತಿಯಲ್ಲಿ ಪ್ರವರ್ಧನವನ್ನು ಮತ್ತು ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ.
2) ಸಮಸ್ಯೆ ಆಧಾರಿತ (ಪ್ರಾಬ್ಲಮ್ ಬೇಸಡ್ ಲರ್ನಿಂಗ್) ಮತ್ತು ಯೋಜನೆ ಆಧಾರಿತ ಕಲಿಕೆ (ಪ್ರಾಜೆಕ್ಟ್ ಬೇಸಡ್ ಲರ್ನಿಂಗ್) ಗಳನ್ನು ಅಳವಡಿಸಿಕೊಳ್ಳ ಬೇಕು. ಯಾವುದೇ ಒಂದು ತತ್ವ ಅಥವಾ ನಿಯಮ ಮತ್ತು ಸಂಬಂಧಪಟ್ಟ ಪರಿಕಲ್ಪನೆಯು ಸರಿಯಾದ ರೀತಿಯಲ್ಲಿ ಅರ್ಥವಾಗಬೇಕಾದರೆ, ಈ ಎರಡು ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಮುಕ್ತ ಸಮಸ್ಯೆಯನ್ನು ಪರಿಹರಿಸುವ ಅನುಭವದ ಮೂಲಕ ವಿಷಯದ ಬಗ್ಗೆ ಆಳವಾಗಿ ಹಾಗೂ ಸಮಂಜಸವಾಗಿ ತಿಳಿಯಲು ಸಾಧ್ಯವಾಗುತ್ತದೆ ಮತ್ತುಸಮಸ್ಯೆಗಳನ್ನು ಬಿಡಿಸುವ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡುತ್ತದೆ. ಉದಾಹರಣಗೆ, ನ್ಯೂಟನ್ ನಿಯಮವನ್ನಾಗಲಿ ಅಥವಾ ಆರ್ಕಿಮೀಡೀಸ್ ತತ್ವವನ್ನಾಗಲೀ ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವುಗಳ ಆಧಾರಿತ ಸಮಸ್ಯೆಗಳನ್ನು ಬಿಡಿಸಿದರೆ ಪರಿಕಲ್ಪನಾ ತಿಳುವಳಿಕೆ ಹೆಚ್ಚುತ್ತದೆ.
3) ಒಂದು ಅಧ್ಯಾಯ ಅಥವಾ ವಿಷಯವನ್ನು ಓದಿದ ನಂತರ, ಸ್ವಯಂ ಪ್ರಶ್ನಿಸುವ (ಸೆಲ್ಪ್ ಕ್ವೆಶ್ಚನಿಂಗ್) ಕ್ರಮವನ್ನು ಅನುಸರಿಸಬೇಕು. ಇದು ಹೇಗೆ? ಏಕೆ? ಮತ್ತು ಹೀಗೇಕೆ ಆಗಬಾರದು? ಎಂದು ಪ್ರಶ್ನಿಸಿಕೊಂಡು, ಆ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಪ್ರಯತ್ನಿಸಬೇಕು. ತಿಳಿಯದ ಪಕ್ಷದಲ್ಲಿ, ಅಧ್ಯಾಪಕರಿಂದ ಉತ್ತರವನ್ನು ಪಡೆಯಬೇಕು. ಇದರಿಂದ ಜ್ಞಾನ ವೃದ್ಧಿಯಾಗಿ, ಗ್ರಹಿಕೆಯ ಮಟ್ಟವು ಹೆಚ್ಚುತ್ತದೆ.
4) ಸ್ವಯಂ ಕಲಿಕಾ ( ಸೆಲ್ಪ್ ಲರ್ನಿಂಗ್) ಪದ್ದತಿಯನ್ನು ರೂಢಿಸಿಕೊಳ್ಳಬೇಕು. ಪ್ರಾರಂಭದಲ್ಲಿ ಕಠಿಣ ಅನಿಸಿದರೂ ಸಹ ಕ್ರಮೇಣ ಜ್ಞಾನಾರ್ಜನೆಗೆ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಈ ಪದ್ದತಿ ಹೆಚ್ಚು ಪ್ರಯೋಜನಕಾರಿ.
5) ಮೆಮೊರಿಯಿಂದ ಮಾಹಿತಿಯನ್ನು ಹಿಂಪಡೆಯಲು ಪ್ರಯತ್ನಿಸಬೇಕು. ಪ್ರಮುಖವಾದ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು.
6) ಸ್ನೇಹಿತರ ಜೊತೆ ಶೈಕ್ಷಣಿಕ ಚರ್ಚೆಗಳಲ್ಲಿ ಭಾಗವಹಿಸಬೇಕು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ತಮ ಗುಣಮಟ್ಟದ ವಿಜ್ಞಾನ ಶಿಕ್ಷಣವು ಜಗತ್ತಿನ ಉತ್ಕೃಷ್ಟ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ದೈನಂದಿನ ಜೀವನದಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು ಸಕ್ರಿಯಗೊಳಿಸುತ್ತದೆ.
ಪ್ರಸ್ತುತ ಪರಿಸ್ಥಿತಿ
ವಿಪರ್ಯಾಸದ ಸಂಗತಿಯೆಂದರೆ, ವಿಜ್ಞಾನದಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಸಹ, ಇತ್ತೀಚಿನ ವರ್ಷಗಳಲ್ಲಿ ಪದವಿ ಹಂತದಲ್ಲಿ ಅಧ್ಯಯನಕ್ಕಾಗಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ಈ ವಿಷಯ ನಿಜವಾಗಲೂ ಆತಂಕಕಾರಿ ವಿಷಯ. ಮೂಲ ವಿಜ್ಞಾನದ (ಬೇಸಿಕ್ ಸೈನ್ಸ್) ವಿಷಯಗಳ ಬಗ್ಗೆ ಒಲವು ಕಡಿಮೆಯಾಗಲು ಹಲವಾರು ಕಾರಣಗಳಿವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ ಈ ವಿಷಯಗಳು ಕಲಾ ವಿಷಯಗಳಿಗೆ ಹೋಲಿಸಿದರೆ ಕಠಿಣ, ಅಧ್ಯಯನ ಮಾಡಲು ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಬದ್ಧರಾಗಿರಬೇಕಾಗುತ್ತದೆ, ಗ್ರಹಿಕೆಯು ಕಷ್ಟಕರ, ಇತರರಿಗಿಂತ ಬುದ್ದಿವಂತರಾಗಿರಬೇಕು ಎಂಬ ತಪ್ಪು ಕಲ್ಪನೆಗಳು ವಿದ್ಯಾರ್ಥಿಗಳಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ಮೂಡಿವೆ.
ವೃತ್ತಿಪರ ಕೋರ್ಸುಗಳಂತೆ (ಉದಾಹರಣೆಗೆ ಎಂಜಿನಿಯರಿಂಗ್) ಮೂಲ ವಿಜ್ಞಾನದ ವೃತ್ತಿಯು ಲಾಭದಾಯಕವಲ್ಲ, ಉದ್ಯೋಗ ಸಿಗುವುದು ಕಷ್ಟ ಎಂಬ ಋಣಾತ್ಮಕ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಮೂಡಿದೆ. ಈ ಚಿಂತನೆಗಳು ಸರಿಯಲ್ಲ. ಈ ಪರಿಸ್ಥಿತಿ ಉಂಟಾಗಲು ಬಹುಶಃ ಈಗ ಹೆಚ್ಚಿನ ಮಟ್ಟದಲ್ಲಿ ಅನುಸರಿಸುತ್ತಿರುವ ಕಂಠಪಾಠ ಪದ್ದತಿಯು ಕಾರಣವೆಂದು ಹೇಳಬಹುದು. ಹಲವಾರು ವರ್ಷಗಳಿಂದ ಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಗಿತ್ತಿರುವುದರಿಂದ, ನೈಪುಣ್ಯತೆ ಹೊಂದಿರುವ ವಿಜ್ಞಾನದ ಶಿಕ್ಷಕರ ಕೊರತೆಯು ಸಹ ಕಾರಣವಾಗಿದೆ ಎಂದು ಹೇಳಬಹುದು. ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಅನುಕೂಲಕರವಾದ ವಾತಾವರಣ ಇಳಿಮುಖವಾಗುತ್ತಿರುವ ಪ್ರವೃತ್ತಿಯು ಕಾರಣವಿರಬಹುದು. ಹೀಗೆ ಮುಂದುವರಿದರೆ, ಭವಿಷ್ಯದಲ್ಲಿ ಎಲ್ಲಾ ಹಂತಗಳಲ್ಲೂ (ಪ್ರೈಮರಿಯಿಂದ ಸ್ನಾತಕೋತ್ತರ ಹಂತದ ವರೆವಿಗೆ) ನುರಿತ ಮತ್ತು ನೈಪುಣ್ಯತೆ ಹೊಂದಿರುವ ವಿಜ್ಞಾನದ ಶಿಕ್ಷಕರ ಕೊರತೆ ತೀವ್ರವಾಗುವುದರಲ್ಲಿ ಸಂಶಯವೇ ಇಲ್ಲ. ಪರಿಸ್ಥಿತಿಯು ಇನ್ನೂ ಹದಗೆಡುತ್ತದೆ. ಆದ್ದರಿಂದ ಮೂಲ ವಿಜ್ಞಾನದ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದ ಬಗ್ಗೆ ಗಂಭೀರವಾಗಿ ಅವಲೋಕಿಸಿ, ಪ್ರೋತ್ಸಾಹಕಾರಿ ಕ್ರಮಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ, ಹಿಂದಿನ ದಿನಗಳಲ್ಲಿದ್ದಂತ ವಿಜ್ಞಾನ ಶಿಕ್ಷಣದ ದಿವ್ಯತೆಯನ್ನು ಪುನಃ ಸ್ಥಾಪನೆ ಮಾಡಬೇಕಾಗಿದೆ.
photos courtesy: unsplash.com
ಉತ್ತಮ ಬರಹ
Well written article, covers the need for science education comprehensively!
The article is an eye opener for the government and general public. There is urgent need to encourage study of basic science. As written in this article, basic science knowledge is foundation for technology development. There is urgent need to popularize science education and encourage student community towards science education.
The article can be published in English also to reach the non kannada readers.
Quite VERY thoughtful. Well written. I have been reading this author ‘s articles. Well researched content. Wish more readers benefit or more people particularly the young lot take access and read. Lots of information given readymade.
Nice, very informative and useful article
Super, very nice and informative article
Very very informative