19.1 C
Karnataka
Wednesday, February 19, 2025

    ಹಾಸನದ ಹೆಮ್ಮೆ ಸತ್ಯವತಿ ರಾಮನಾಥ

    Must read


    ಕೆಲವರು ಇರುತ್ತಾರೆ. ಎಲೆ ಮರೆಯ ಕಾಯಿಯಂತೆ. ತಮ್ಮ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿ ತೆರೆ ಮರೆಗೆ ಸರಿದು ಬಿಡುತ್ತಾರೆ. ಅಂಥವರಲ್ಲಿ ಒಬ್ಬರು . ಭಾನುವಾರ, ಫೆಬ್ರವರಿ 9,2025ರಂದು ತಮ್ಮ 74ನೇ ವಯಸ್ಸಿನಲ್ಲಿ ದೆಹಲಿಯಲ್ಲಿ ತೀರಿಕೊಂಡ ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ. ಸ್ವತಃ ಗಮಕಿ ಮಾತ್ರವಲ್ಲದೆ ಹಲವಾರು ಗಮಕಿಗಳನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಅವರದ್ದು. ನಮ್ಮ ಕನ್ನಡಪ್ರೆಸ್ ಯೂ ಟ್ಯೂಬ್ ವಾಹಿನಿಗೆ ರನ್ನನಗದಾಯುದ್ದ ಎಂಬ ಮಾಲಿಕೆಯನ್ನು ಆರಂಭಿಸಿ ಅದನ್ನು ರೂಪಿಸಿ ಸಮನ್ವಯ ಮಾಡಿದ ಹಿರಿಮೆ ಅವರದ್ದು. ದೆಹಲಿಯ ಮಗಳ ಮನೆಗೆ ತೆರಳುವ ವರೆಗೂ ತೊರವೆ ರಾಮಾಯಣ ಸರಣಿಯನ್ನು ನಿರ್ವಹಿಸಿದರು. ಅಪೂರ್ಣವಾಗಿರುವ ಈ ಸರಣಿಯನ್ನು ಮುಕ್ತಾಯ ಗೊಳಿಸುವ ಹೊಣೆ ಇದೀಗ ಅವರ ಅಭಿಮಾನ ಬಳಗ ನಿರ್ವಹಿಸಬೇಕಾಗಿದೆ. ಅಗಲಿದ ಈ ಮಹಾಚೇತನದ ಬಗ್ಗೆ ಮತ್ತೊಬ್ಬ ಗಮಕಿ ಸುಮಾ ವೀಣಾ ಅವರು ಸಲ್ಲಿಸಿದ ನುಡಿನಮನ ಇಲ್ಲಿದೆ.


     

    ಹಾಸನ ಜಿಲ್ಲೆ ಮರಿತಮ್ಮನಹಳ್ಳಿ  ಗ್ರಾಮದ ಶ್ರೀಸೂರ್ಯನಾರಾಯಣಪ್ಪ ಮತ್ತು   ಶ್ರೀಮತಿ ಅನಂತಲಕ್ಷ್ಮಿಯವರ  ಮಗಳಾಗಿ  1951 ರಲ್ಲಿ ಸತ್ಯವತಿಯವರು ಜನಿಸುತ್ತಾರೆ. ಮೂಲತಃ ಸಂಪ್ರದಾಯಸ್ಥ  ಕುಟುಂಬಕ್ಕೆ ಸೇರಿದ  ಇವರ  ಆಧ್ಯಾತ್ಮ ಹಾಗು ಗಮಕ ವ್ಯಾಖ್ಯಾನ  ಕ್ಷೇತ್ರದ  ಸಾಧನೆ ಅನನ್ಯ. ಒಂದನೆ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ತಮ್ಮ ಊರಿನಲ್ಲೆ ವಿದ್ಯಾಭ್ಯಾಸ  ಮುಗಿಸಿದ ಇವರು ಐದನೆ ತರಗತಿಯಿಂದ ಏಳನೆ ತರಗತಿಯವರೆಗೆ ಸಕಲೇಶಪುರದ ಸಂತ ಜೋಸೇಫರ ಶಾಲೆಯಲ್ಲಿ ಅಧ್ಯಯನ ಮಾಡಿ  ಹೊಳೆನರಸೀಪುರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ 1967ರಲ್ಲಿ  ಹಾಸನದ  ಎ.ವಿ.ಕೆ ಕಾಲೇಜು ಪ್ರಾರಂಭವಾದ ಮೊದಲ ವರ್ಷವೇ ಪ್ರಥಮ ಪಿ.ಯು.ಸಿಯನ್ನು ವ್ಯಾಸಂಗ ಮಾಡಿ  ಬೆಂಗಳೂರಿನ  ಬಿ. ಎಮ್.ಎಸ್. ಕಾಲೇಜಿನಲ್ಲಿ  ಬಿ.ಎಸ್ಸಿ ಪದವಿ   ಮುಗಿಸಿ ಧಾರವಾಡದಲ್ಲಿ ಸಂಸ್ಕೃತ ಎಂ.ಎ ಅಧ್ಯಯನ ಮಾಡಿದರು.

    ತಮ್ಮ ಇಪ್ಪತ್ತೊಂದನೆ ವಯಸ್ಸಿನಲ್ಲಿ ಮದುವೆಯಾದನಂತರ ಎಂ. ಎ ವ್ಯಾಸಂಗ ಮಾಡಿದ್ದು  ವಿಶೇಷವೇ ಹೌದು!  ಅಂತಾರಾಷ್ಟ್ರೀಯ ಖ್ಯಾತಿಯ  ಸಂಸ್ಕೃತ ವಿದ್ವಾಂಸರಾದ  ಡಾ. ಕೆ. ಕೃಷ್ಣಮೂರ್ತಿಯವರ ಶಿಷ್ಯೆಯಾದ     ಇವರು  ಸಂಸ್ಕೃತ  ಅಧ್ಯಾಪಕಿಯಾಗಿಯೂ ಆಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಅಪಾರ ಶಿಷ್ಯವರ್ಗ ಹೊಂದಿದ್ದರು.

    ಇವರ ಪತಿ  ದಾವಣಗೆರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೃತ್ತಿಬದುಕನ್ನು ಆರಂಭಿಸಿ, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕೆನಡದ  University of Manitoba ವಿಶ್ವವಿದ್ಯಾನಿಲಯದ ಸಂದರ್ಶಕ  ಪ್ರಾಧ್ಯಾಪಕರಾಗಿಯೂ, ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನ  ಕಂಪ್ಯೂಟರ್ ವಿಭಾಗದ ಮುಖ್ಯಸ್ಥರೂ, ಪ್ರಾಚಾರ್ಯರೂ , ಪ್ರಾಂಶುಪಾಲರು, ಆಡಳಿತಾಧಿಕಾರಿಯೂ ಆಗಿ  ಕರ್ತವ್ಯ ನಿರ್ವಹಿಸಿ ಈಗ ವಿಶ್ರಾಂತ ಬದುಕು ನಡೆಸುತ್ತಿದ್ದಾರೆ. ಇವರಿಗೆ   ಓರ್ವ ಪುತ್ರಿ ಮಾಯ ಹಾಗು ಓರ್ವ ಪುತ್ರ ಮಾಧವ . ಇವರ ಪುತ್ರಿ  ಹಾಗು ಅಳಿಯ   ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಉನ್ನತ ಶಿಕ್ಷಣ ಪಡೆದು ಸದ್ಯ ದೆಹಲಿಯ ಐ.ಐ.ಟಿ ಸಂಸ್ಥೆಯಲ್ಲಿ  ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಪುತ್ರ ಅಮೆರಿಕಾದಲ್ಲಿ ನೆಲೆಸಿದ್ದಾರೆ.   ಮಕ್ಕಳಿಗೆ ಸಾಂಸ್ಕೃತಿಕ ಹಾಗು ಪರಂಪರೆಯ ಶಿಕ್ಷಣ ನೀಡುವಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು  ಸಂಗೀತ ಹಾಗು ಸಾಹಿತ್ಯ ಶಿಕ್ಷಣವನ್ನು ಶೈಕ್ಷಣಿಕ  ಶಿಕ್ಷಣದ ಜೊತೆ ಜೊತೆಗೆ ನೀಡಿದ್ದಾರೆ.

    ಸತ್ಯವತಿಯವರು ಹಾಸನದಲ್ಲಿದ್ದಾಗ ಪಿ.ಆ್ಯಂಡ್. ಟಿ ಕಾಲೊನಿಯಲ್ಲಿ  ಮಹಿಳೆಯರಿಗಾಗಿ ಮೊದಲಿಗೆ “ಗೀತಾ ಸತ್ಸಂಗ”ವನ್ನು ಸ್ಥಾಪಿಸಿ   ಭಗವದ್ಗೀತೆ ಮತ್ತು  ವಿಷ್ಣುಸಹಸ್ರನಾಮಪಾರಾಯಣ ಪ್ರಾರಂಭಿಸಿ  ಶುಭಾರಂಭ ಮಾಡಿದ್ದು ಈಗಲೂ ನಡೆದುಕೊಂಡು ಬರುತ್ತಿದೆ..   “ಶ್ರೀಸತ್ಯಸಾಯಿ  ಸೇವಾ ಸಮಿತಿ”ಯಲ್ಲಿ  “ಬಾಲವಿಕಾಸ” ವಿಭಾಗದ   ಸಂಯೋಜಕರೂ ಆಗಿ  ಮಕ್ಕಳ ನೈತಿಕ  ಹಾಗು ಅಧ್ಯಾತ್ಮ ಬೆಳವಣಿಗೆಗೆ ಬೇಸಗೆ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆ ಇವರದು..

    ಅಧ್ಯಾತ್ಮಚಿಂತನೆ ಇಟ್ಟುಕೊಂಡಿರುವ ಇವರಿಗೆ ಮಾನಸಿಕ ಗುರು ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ  ಸ್ವಾಮಿಗಳು. ಗುರುಗಳನ್ನಾಗಿ ತಮ್ಮ ಪತಿಯನ್ನೇ ಸ್ವೀಕರಿಸಿರುವ  ಇವರ ಜ್ಞಾನ ಸಂಪತ್ತು ಅಗಾಧ. ಗಮಕ ಕ್ಷೇತ್ರದಲ್ಲೂ ಇವರು  ಅಮೋಘ ಸಾಧನೆಯನ್ನು ಮಾಡಿದ್ದಾರೆ.   ಕನ್ನಡದ ಷಟ್ಪದಿ ಕವಿಗಳಾದ ರಾಘವಾಂಕ, ಹರಿಹರ,  ಲಕ್ಷ್ಮೀಶ, ನರಹರಿ ಮೊದಲಾದವರ  ಕೃತಿಗಳಿಗೆ ವ್ಯಾಖ್ಯಾನ  ಮಾಡಿರುವುದಲ್ಲದೆ . ಸ್ವಗತ ಯೂಟ್ಯೂಬ್ ಚಾನೆಲ್ನಲ್ಲಿ  ಕುವೆಂಪು “ರಾಮಾಯಣ ದರ್ಶನಮ್”, ಕಾವ್ಯವನ್ನು ನಾಡಿನ ಜನತೆಗೆ ಸಮಗ್ರವಾಗಿ ತಲುಪಿಸಿದರು. ನಂತರ ಕನ್ನಡಪ್ರೆಸ್ ಯೂ ಟ್ಯೂಬ್ ವಾಹಿನಿಯಲ್ಲಿ ರನ್ನನ ಗದಾಯುದ್ಧ ಮತ್ತು ತೊರವೆ ರಾಮಾಯಣ ಕೃತಿಯನ್ನು ನಾಡಿನ ಜನತೆಗೆ ನೀಡಿದರು. ನಾಡಿನಾದ್ಯಂತ  ಗಮಕ ವ್ಯಾಖ್ಯಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸಿಕೊಟ್ಟು ಉನ್ನತಮಟ್ಟದ  ಕೇಳುಗವರ್ಗವನ್ನು ಹೊಂದಿದ್ದರು.ದೂರದರ್ಶನ ಮತ್ತು ಆಕಾಶವಾಣಿಯಲ್ಲಂತೂ ಇವರ   ಮೌಲ್ಯಯುತ ಕಾರ್ಯಕ್ರಮಗಳು ಪ್ರಸಾರವಾಗಿರುವುದು ಹೆಗ್ಗಳಿಕೆಯ ವಿಚಾರವೇ ಸರಿ.  ಸ್ವತಃ ಇವರು  ಮಹಿಳೆಯರನ್ನು ಸಂಘಟಿಸಿ  ತಮ್ಮ ಸಮಸ್ಯೆಗಳನ್ನು ಚರ್ಚಿಸುವ  ದೂರದರ್ಶನ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.  ಬೆಂಗಳೂರಿನ ಆರ್ಯಸಮಾಜದಲ್ಲಿ ಸತತ ಏಳು ವರ್ಷಗಳ ಕಾಲ  ಮಹರ್ಷಿ ದಯಾನಂದ ಸರಸ್ವತಿಗಳ  ಜೀವನ ಚರಿತ್ರೆಯ ಗಮಕ ವಾಚನಕ್ಕೆ ವ್ಯಾಖ್ಯಾನ ಮಾಡಿರುವುದು ಇವರ ವ್ಯಾಖ್ಯಾನ ಸಾಧನೆಯ ಪ್ರಮುಖ ಮೈಲಿಗಲ್ಲು ಎನ್ನಬಹುದು.  ವ್ಯಾಖ್ಯಾನವೆಂದರೆ ಪದವಿವರಣೆಯಲ್ಲ ಅದನ್ನು ಹೊರತು ಪಡಿಸಿ ಅದರ ಭಾವಸ್ವಾರಸ್ಯವನ್ನು  ರಂಜನೀಯವಾಗಿ ,ಪ್ರಸ್ತುತ ದಿನಮಾನಗಳಿಗೆ ಹೊಂದಿಕೆಯಾಗುವಂತೆ,  ತಾತ್ವಿಕತೆ ಮೌಲ್ಯ ಪ್ರಸಾರಣೆಯನ್ನೂ ಗುರಿಯಾಗಿಸಿಕೊಂಡ ಸಮಗ್ರದೃಷ್ಟಿಕೋನದ  ಇವರ ವ್ಯಾಖ್ಯಾನಗಳು ಅನನ್ಯ  ಎನ್ನಬಹುದು.

     ಶ್ರೀಮತಿ ಸತ್ಯವತಿ ರಾಮನಾಥವರು  ಕರ್ನಾಟಕ ಗಮಕ ಕಲಾಪರಿಷತ್ತಿಕಾವೇರಿ ಯೋಜನೆ, ಗ್ರಾಮಾಂತರ ಯೋಜನೆಗಳಲ್ಲಿಯೂ ತಮ್ಮನ್ನು ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ಗಮಕಕಲಾಪರಿಷತ್ತಿನ ಏಳಿಗೆಗೆ ಶ್ರಮಿಸಿರುವ ಇವರು ದತ್ತಿ ನಿಧಿ ಸ್ಥಾಪಿಸಿ ಆರ್ಥಿಕ ಬಲವನ್ನೂ ಸಂಸ್ಥೆಗೆ ತುಂಬುವ ಕೆಲಸ ಮಾಡಿರುವುದು ಶ್ಲಾಘನೀಯ.

    ಆಧ್ಯಾತ್ಮ ಮತ್ತು ವೈದಿಕ ವಿಚಾರಗಳ ಬಗ್ಗೆ  ಅಪಾರ ಆಸಕ್ತಿ ಮತ್ತು ಶ್ರದ್ಧೆ ಇರುವ  ‘ರಾಮಾಯಣ’ , ‘ಮಹಾಭಾರತ’,  ‘ಭಾಗವತ’, ‘ಉಪನಿಷತ್ಗಳು’, ‘ವಿವೇಕಚೂಡಾಮಣಿ’  ಮುಂತಾದ   ಗ್ರಂಥಗಳಿಂದ ಆಯ್ದ  ವಿಚಾರಗಳ  ಬಗ್ಗೆ ಬೆಳಕು ಚೆಲ್ಲಿದ್ದಾರೆ.  ಎಡತೊರೆ  ಯೋಗಾನಂದ ಸರಸ್ವತಿ ಮಠದ ಸ್ವಾಮಿಗಳು ಆಯೋಜಿಸಿದ್ದ ಶಾಂಕರ ಸಂದೇಶ ಸಪ್ತಾಹ , ಬೆಂಗಳೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿಯೂ  ಕಾರ್ಯಕ್ರಮ ನಡೆಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರಿನ  ಶಂಕರ ಮಠದಲ್ಲಿ  ಭಗವದ್ಗೀತೆಯ ಸಮಗ್ರ ಪ್ರವಚನವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. “ವೇದಕಾಲಿನ ಮಹಿಳೆಯರ ಪರಿಸ್ಥಿತಿ, ವೇದಗಳಲ್ಲಿ ಕುಟುಂಬ ವ್ಯವಸ್ಥೆ”, ರಾಷ್ಟ್ರೀಯ ಭಾವೈಕ್ಯತೆಗೆ ವೇದಗಳ ಕೊಡುಗೆ ಮುಂತಾದ ಮಹತ್ವ ಪೂರ್ಣ ವಿಷಗಳ ಬಗ್ಗೆ ಅನೇಕ ಸಂಸ್ಥೆಗಳಲ್ಲಿ, ದೂರದರ್ಶನ,ಆಕಾಶವಾಣಿಯಲ್ಲೂ  ಉಪನ್ಯಾಸ ನೀಡಿದ್ದಾರೆ.

     ಲೇಖಕಿಯಾಗಿ

     ಭಾರತೀಯ ಹಬ್ಬಗಳು,’ ಸಂಸ್ಕೃತಿ ಚಿಂತನ ಮಹಿಳಾ ಸಾಧಕರು, ನಾರಿ ಅಂಕಣ( ಹಿಂದಿ  ಭಾಷೆಯಿಂದ ಕನ್ನಡಕ್ಕೆ ತಂದಿರುವುದು) ಕುಮಾರವ್ಯಾಸ ಬಾರತದ ಆಯ್ದ ಸಂಧಿಗಳಿಗೆ ವ್ಯಾಖ್ಯಾನಬಂಧ, ದಿವ್ಯ ಸಸಿ ತುಳಸಿ  ಮತ್ತು ಪಾಶುಪತಾಸ್ತ್ರಪ್ರಧಾನ ವ್ಯಾಖ್ಯಾನ ಬಂಧ , ‘ಕರ್ಣನ ಪಾತ್ರ ವಿವೇಚನೆ  ವಿಮರ್ಶೆ, ‘ಮಾನನಿಯೇ ದ್ರೌಪದಿ  ಮೊದಲಾದ ಕೃತಿಗಳನ್ನು ತಂದಿದ್ದಾರೆ.   ಇವಿಷ್ಟಲ್ಲದೆ ಇವರ ನೂರಾರು ಲೇಖನಗಳು   ನಾಡಿನಾದ್ಯಂತದ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿವೆ.

     ಇವರು ಭಾರತ ಮಾತ್ರವಲ್ಲದೆ  ಅಮೆರಿಕಾ, ಕೆನಡಾ ಯೂರೋಪ್  ರಾಷ್ಟ್ರಗಳಲ್ಲೂ  ಭಾರತೀಯ ಸಂಸ್ಕೃತಿ ಪರಿಚಯ ಮಾಡಿದ್ದಲ್ಲದೆ ಕೆನಡಾದಲ್ಲಿ  ಭಾರತೀಯ ಸಂಸ್ಕೃತಿ ಪರಿಚಯ  ಮತ್ತು ಸಂಸ್ಕೃತ  ಭಾಷಾ ಬೋಧನೆ ಕಾರ್ಯಕ್ರಮ ಮತ್ತು  ಮಕ್ಕಳ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

    ಇಷ್ಟು ಸಾಧಿಸಿದ  ಸತ್ಯವತಿ ರಾಮನಾಥರವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವು ಗಮಕ ವ್ಯಾಖ್ಯಾನ ಕಲೆಗೆ ಗಮಕಕಲಾಪರಿಷತ್ತಿನ 9ನೆಯ ವಾರ್ಷಿಕ ಸಮ್ಮೇಳನದಲ್ಲಿ ಇವರನ್ನು ಗೌರವಿಸಿದೆ.  ಬೆಂಗಳೂರಿನ ಆರ್ಯಸಮಾಜದಲ್ಲಿ  ವೇದ ಸಂರಕ್ಷಣೆ ಮತ್ತು ವೇದ ಪ್ರಚಾರಕ್ಕಾಗಿ ವೇದಸಂರಕ್ಷಕಿ ಪ್ರಶಸ್ತಿಯನ್ನು ಕೊಡಲಾಗಿದೆ. ಕೆಂಗೇರಿಯ  ಸರಸ್ವತಿ ಸಂಗೀತ ಸಾಹಿತ್ಯ ಸದನವು  ಇವರನ್ನು ವೈದಿಕಧಾರ್ಮಿಕ ವಿಚಾರಶೀಲೆ”  ಎಂದು ಗುರುತಿಸಿ ಸನ್ಮಾನಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರ ಸೇವೆಯನ್ನು ಗುರುತಿಸಿ 2017ರಲ್ಲಿ  ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಪಾಶುಪತಾಸ್ತ್ರ ಪ್ರದಾನ ಪುಸ್ತಕಕ್ಕೆ ರಾಜ್ಯ ಲೇಖಕಿಯರ ಸಂಘದಿಂದ ಕೊಡಮಾಡುವ  ದತ್ತಿ ಪ್ರಶಸ್ತಿ ಕೂಡ ಲಭಿಸಿದೆ. ಮನೋರಂಜನಿ ಸಂಗೀತ ಮಹಾವಿದ್ಯಾಲಯ  ಮತ್ತು ಗಮಕ ಕಲಾಪರಿಷತ್  ಚಿಕ್ಕಮಗಳೂರು, ಇವರಿಂದಲೂ  ಸನ್ಮಾನಿತರಾಗಿದ್ದಾರೆ. ಅನೇಕ  ಸಂಘ ಸಂಸ್ಥೆಗಳ ಸದಸ್ಯರಾಗಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವಲ್ಲದೆ ತಮ್ಮ ತಿಂಗಳಿನ ಉಳಿತಾಯವನ್ನು ಸಂಘ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುತ್ತಾ  ಬಂದಿದ್ದಾರೆ.

    ಹೆಂಗಸರಿಗೆ  ಜೀವನದಲ್ಲಿ ಎಂಥದ್ದೆ ಸವಾಲುಗಳು ಬಂದರೂ ಅದನ್ನು ಎದುರಿಸುವ ಕ್ಷಮತೆ ಇರುತ್ತದೆ ಹಾಗಾಗಿ  ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದು ಇವರ ಕಿವಿಮಾತು.  ಸಮಯ ಹೊಂದಾಣಿಕೆ ಮಾಡುವ ಚಾಕಚಕ್ಯತೆ  ಬಂದರೆ  ಎಂಥದ್ದೂ ಕಷ್ಟವಲ್ಲ. ಶ್ರೀಮಂತಿಕೆ ಬೇಕು ಎಂದು ಅದರ  ಬೆನ್ನ ಹಿಂದೆ ಹೋಗುವುದಕ್ಕಿಂತ   ಇರುವ ಹಣದಲ್ಲಿ ಸಂತೃಪ್ತರಾಗಬೇಕು, ಸರಳವಾಗಿರಬೇಕು ಎಂಬಂತೆ ಬಾಳಿ ಬದುಕಿದ ಚೇತನ .

    ಯಾವಾಗಲೂ ಮಹಿಳೆಯರು ಕ್ರಿಯಾಶೀಲರಾಗಿರಬೇಕು ಮಕ್ಕಳಿಗೆ  ಶುದ್ಧಚಾರಿತ್ರ್ಯವನ್ನು ಹೇಳಿಕೊಡಬೇಕು. ನಮ್ಮ ಮಕ್ಕಳಿಗೆ ಕೆ.ಜಿ ಗಟ್ಟಲೆ ಬಂಗಾರಕ್ಕಿಂತ, ಸೈಟ್, ಫ್ಲ್ಯಾಟ್, ಮಹಲುಗಳಿಗಿಂತ  ಶುದ್ಧಚಾರಿತ್ರ್ಯವೇ ನಿಜವಾದ ಆಸ್ತಿ ಎನ್ನುತ್ತಿದ್ದರು.   ವೇಗದ ಜೀವನಕ್ಕೆ ಕೊಂಚ ಬ್ರೇಕ್ ಹಾಕಿ ಸಾವಕಾಶವಾಗಿ ಕುಟುಂಬದವರೊಡನೆ ಬೆರೆಯುವ ಕೆಲಸ ಮಾಡಬೇಕೆನ್ನುವ  ಕಿವಿಮಾತನ್ನು ಸತ್ಯವತಿ ರಾಮನಾಥ ಯಾವಾಗಲೂ ಸಮರ್ಥಿಸಿಕೊಳ್ಳುತ್ತಿದ್ದರು.  ಜೊತೆಗೆ ವ್ಯವಸ್ಥಿತವಾಗಿ  ಗೃಹಕೃತ್ಯಗಳನ್ನು ಮಾಡಿ ಕಾಲ ಉಳಿಸಿಕೊಂಡರೆ ಮಹಿಳೆ ತನ್ನ ವೈಯಕ್ತಿಕ ಆಸಕ್ತಿಗಳ ಕಡೆಗೂ ಗಮನ ಕೊಡಬಹುದು. ಈ ದಿಸೆಯಲ್ಲಿ  ಆಕೆಗೆ ಸ್ಮಾರ್ಟ್ ಫೋನ್   ಮತ್ತು ಗಣಕ ಯಂತ್ರದ ಸಾಮಾನ್ಯ ಪರಿಚಯವೂ ಇದ್ದರೆ   ಕಲೆ ಸಾಹಿತ್ಯ, ಸಂಗೀತದಲ್ಲಿ  ಸಮಾನ ಮನಸ್ಕರೊಡನೆ ಸಂಪರ್ಕ  ಇರಿಸಿಕೊಳ್ಳಲು ಬಹಳ ಉಪಯೋಗವಾದೀತು. ಎಂದು ತಂತ್ರಜ್ಞಾನದ ಮಹತ್ವವನ್ನೂ ಹೇಳುವುದನ್ನು ಮರೆಯುವುದಿಲ್ಲ. 

     ಇಷ್ಟು ಸಾಧನೆ ಮಾಡಿದ್ದ ಶ್ರೀಮತಿ ಸತ್ಯವತಿ ರಾಮನಾಥರ ಬಗ್ಗೆ  ಎಷ್ಟು ಬರೆದರೂ ಅಪೂರ್ಣ ಅನ್ನಿಸುತ್ತದೆ. ಅವರ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಪತಿ ರಾಮನಾಥ,  ಮಗಳು ಮಾಯಾ, ಅಳಿಯ  ಶ್ರೀಕಂಠ , ಮಗ ಮಾಧವ ,ಸೊಸೆ ಪಲ್ಲವಿ, ಮೊಮ್ಮೊಕ್ಕಳು ಪ್ರಜ್ಞಾ, ಮತ್ತು ಅಭಿಜ್ಞಾ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರಿಗೂ ಭಗವಂತ ಕರುಣಿಸಲಿ

     ರನ್ನನ ಗದಾಯುದ್ಧ ಸರಣಿಯ ಕೆಲ ಭಾಗದ ಲಿಂಕ್

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!