31.4 C
Karnataka
Wednesday, April 2, 2025
    Home Blog

    ಬೆಂಗಳೂರಿನಲ್ಲಿ ವ್ಯಂಗ್ಯಚಿತ್ರ ಉತ್ಸವ

    ಸಂಕೇತದತ್ತ

    2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ. ಇಲ್ಲಿ ಪ್ರದರ್ಶನವಾಗುತ್ತಿರುವ ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.


    ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಚತ್ತೀಸ್‍ಗಢದ ಕಾರ್ಟೂನ್ ವಾಚ್' ಮಾಸಪತ್ರಿಕೆಯ ಸಹಯೋಗದಲ್ಲಿ ಈವ್ಯಂಗ್ಯಚಿತ್ರ ಉತ್ಸವ-2022′ ನಡೆಯುತ್ತಿದೆ. ಇದರ ಉದ್ಘಾಟನೆಯನ್ನು `ಕಾರ್ಟೂನ್ ವಾಚ್’ ಕಾರ್ಟೂನ್ ಪತ್ರಿಕೆಯ ಸಂಪಾದಕರಾದ ತ್ರಿಯಂಬಕ ಶರ್ಮ ಅವರು ನಡೆಸಿ ಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ನಾಡಿನ ನಾಲ್ಕು ಹಿರಿಯ ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

    ದೊಡ್ಡ ಅಳತೆಯ ಕ್ಯಾರಿಕೇಚರ್ ಗಳ ಪ್ರದರ್ಶನ!
    ಈ ವ್ಯಂಗ್ಯಚಿತ್ರ ಉತ್ಸವದ ಅಂಗವಾಗಿ ದೇಶದಲ್ಲೇ ಅಪರೂಪದ ಒಂದು ಪ್ರಯೋಗಕ್ಕೆ ನಾಡಿನ ವ್ಯಂಗ್ಯಚಿತ್ರಕಾರರು ಮುಂದಾಗಿದ್ದಾರೆ. ಎರಡು ಅಡಿ ಅಗಲ ಹಾಗೂ 3 ಅಡಿ ಉದ್ದದ ಕಪ್ಪು-ಬಿಳುಪಿನ ಕ್ಯಾರಿಕೇಚರ್ ಪ್ರದರ್ಶನಗೊಳ್ಳಲಿವೆ.

    ಇದರಲ್ಲಿ ನಾಡಿನ ಹೆಸರಾಂತ 21 ವ್ಯಂಗ್ಯಚಿತ್ರಕಾರರಾದ ಬಿ ಜಿ ಗುಜ್ಜಾರಪ್ಪ, ವೈ ಎಸ್ ನಂಜುಂಡಸ್ವಾಮಿ, ರಾ ಸೂರಿ, ಸತೀಶ್ ಆಚಾರ್ಯ, ಚಂದ್ರನಾಥ್ ಆಚಾರ್ಯ, ಜಿ ಎಸ್ ನಾಗನಾಥ್, ರಘುಪತಿ ಶೃಂಗೇರಿ, ಮನೋಹರ್ ಆಚಾರ್ಯ, ಜೈರಾಮ್ ಉಡುಪ, ಜೀವನ್ ಶೆಟ್ಟಿ, ಜೇಮ್ಸ್ ವಾಜ್ , ಸುಭಾಶ್‍ಚಂದ್ರ, ರವಿ ಪೂಜಾರಿ, ಯತೀಶ್ ಸಿದ್ದನಕಟ್ಟೆ, ಚಂದ್ರಗಂಗೊಳ್ಳಿ, ಸಂಕೇತ್ ಗುರುದತ್ತ, ಸತೀಶ್ ಬಾಬು, ಶೈಲೇಶ್ ಉಜಿರೆ, ಗೀಚಾ ಬೋಳ್ಕಟ್ಟೆ, ಪ್ರಸನ್ನ ಕುಮಾರ್, ಎಂ ಎನ್ ದತ್ತಾತ್ರಿ ಭಾಗವಹಿಸುತ್ತಿದ್ದು ಒಟ್ಟು 42 ಕ್ಯಾರಿಕೇಚರ್ ಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

    ನಾಲ್ವರು ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿ ಪ್ರದಾನ

    ನಾಡಿನ ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಕೆ ಆರ್ ಸ್ವಾಮಿ, ವಿ ಜಿ ನರೇಂದ್ರ, ಬಿ ಜಿ ಗುಜ್ಜಾರಪ್ಪ (ಗುಜ್ಜಾರ್) ಹಾಗೂ ಜಿ ಎಸ್ ನಾಗನಾಥ್ ಅವರುಗಳು ಈ ಜೀವನಮಾನದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಾಲ್ವರು ಹಿರಿಯ ಕಲಾವಿದರ ಕಿರು ಪರಿಚಯವು ಹೀಗಿವೆ.

    ಕೆ ಆರ್ ಸ್ವಾಮಿ :ಕನ್ನಡ ನಾಡು ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಲ್ಲಿ ಕೆ ಆರ್ ಸ್ವಾಮಿ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಇವರು ಇತ್ತೀಚಿಗಷ್ಟೇ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯೋಮಾನದಲ್ಲೂ ತಮ್ಮ ನೆಚ್ಚಿನ ಹವ್ಯಾಸವಾದ ಕಾರ್ಟೂನ್ ರಚನೆಯನ್ನು ಮಾತ್ರ ಬಿಟ್ಟಿಲ್ಲ. ವೃತ್ತಿಯಲ್ಲಿ ಇಂಜಿನಿಯರ್, ಕರ್ನಾಟಕ ವಿದ್ಯುನ್ಮಂಡಲಿಯಲ್ಲಿ 32 ವರ್ಷಗಳು ಸೇವೆ ಸಲ್ಲಿಸಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಪ್ರವೃತ್ತಿಯಲ್ಲಿನ ಉತ್ಸಾಹ ಮಾತ್ರ ಇಮ್ಮಡಿಗೊಂಡಿದೆ. ಸತತ ನಾಲ್ಕೈದು ದಶಕಗಳಿಂದ ಕಾರ್ಟೂನ್ ರಚನೆಯಲ್ಲಿ ತೊಡಗಿರುವ ಸ್ವಾಮಿ ಅವರು ಈಗಲೂ ಲವಲವಿಕೆಯಿಂದ ಇದ್ದಾರೆಂದರೆ ಅದಕ್ಕೆ ಈ ನಗೆ ಗುಳಿಗೆಯೆ ಸಿದ್ಧೌಷಧಿ ಎನ್ನಲಡ್ಡಿಯಿಲ್ಲ.

    ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ಕಾರ್ಟೂನ್ ಗಳು ಪ್ರಕಟಗೊಂಡಿವೆ. ಆಗಿನ ಕಾಲದಿಂದ ಹಿಡಿದು ಈ ಕಾಲಘಟ್ಟದವರಗೂ ಇವರು ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದಾರೆ. ಪೆನ್ನು-ಪೇಪರ್ ನಿಂದ ಆರಂಭಗೊಂಡ ಇವರ ವ್ಯಂಗ್ಯಚಿತ್ರದ ಅಭ್ಯಾಸ ತಂತ್ರಜ್ಞಾನ ಯುಗದಲ್ಲೂ ಅಷ್ಟೇ ಸ್ಪಷ್ಟ ಹಾಗೂ ವಿಭಿನ್ನವಾಗಿ ಮೂಡಿ ಬರುತ್ತಿದೆ. ಇವರ ಕಾರ್ಟೂನ್‍ಗಳಲ್ಲಿ ಮಾತಿಗಿಂತ ಚಿತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದು ಇವರ ವಿಶೇಷತೆ. ಕೆ ಆರ್ ಸ್ವಾಮಿ ಅವರು ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಮಾವ(ಅಮ್ಮನ ತಮ್ಮ). ಸ್ವಾಮಿ ಅವರ ಕತೆ ಹೇಳುವ ಶೈಲಿಯನ್ನು ಕಾಸರವಳ್ಳಿ ಅವರು ಮೆಚ್ಚುತ್ತಾರೆ ಅಲ್ಲದೆ ತಮ್ಮ ಕೆಲವು ಚಿತ್ರಗಳಲ್ಲಿ ಸ್ವಾಮಿ ಅವರ ವ್ಯಂಗ್ಯಚಿತ್ರದ ವಸ್ತುಗಳನ್ನು ಬಳಸಿಕೊಂಡಿದ್ದಾರಂತೆ!

    ಇಳಿವಯಸ್ಸಲ್ಲೂ ಉತ್ಸಾಹದ ಚಿಲುಮೆಯಂತೆ ಸದಾ ಚಟುವಟಿಕೆಯಲ್ಲಿರುವ ಸ್ವಾಮಿ ಅವರು ತಮ್ಮ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ದಿನಮಾನಕ್ಕೂ ಹೊಂದಿಕೊಂಡಿದ್ದಾರೆ.

    ವಿ.ಜಿ. ನರೇಂದ್ರ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ರೂವಾರಿ ವಿ.ಜಿ. ನರೇಂದ್ರ ಅವರಿಗೆ ಶಾಲಾ ದಿನಗಳಲ್ಲೇ ವ್ಯಂಗ್ಯಚಿತ್ರ ಕಲೆಯ ಗೀಳು ಅಂಟಿಕೊಂಡಿತ್ತು. ಇವರನ್ನು ಮೊದಲು ಆಕರ್ಷಿಸಿದ್ದು ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಅವರ ವ್ಯಂಗ್ಯಚಿತ್ರಗಳು. 1965ರಲ್ಲಿ ಇವರ ಮೊದಲ ವ್ಯಂಗ್ಯಚಿತ್ರ ಕರ್ಮವೀರ' ವಾರಪತ್ರಿಕೆಯಲ್ಲಿ ಪ್ರಕಟವಾಯ್ತು. ಅಲ್ಲಿಂದ ವ್ಯಂಗ್ಯಚಿತ್ರ ರಚನೆಯು ಆರಂಭವಾಯ್ತು. ವಿಜ್ಞಾನದ ಪದವಿಯ ನಂತರ ವೃತ್ತಿಗಾಗಿ ಮುಂಬೈ ಸೇರಿದರು. ಅಲ್ಲಿ ಇಲ್ಲಸ್ಟ್ರೇಡೆಡ್ ವೀಕ್ಲಿ ಆಫ್ ಇಂಡಿಯಾ, ಧರ್ಮಯುಗ ಮತ್ತಿತರ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನು ಬರೆದರು. ಆನಂತರ ಭಾರತದ ಪ್ರಥಮ ಕಾಮಿಕ್ ಫೀಚರ್ ಸಿಂಡಿಕೇಟ್,ರಂಗ ರೇಖಾ ಫೀಚರ್ಸ್’ ಸೇರಿದರು. ಇವರ ರಿಪೋರ್ಟರ್ ಸಂಜು' ಉದಯವಾಣಿ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳ 15 ದಿನಪತ್ರಿಕೆಗಳಲ್ಲಿ ಪ್ರಕಟವಾಗಲು ಪ್ರಾರಂಭವಾಯ್ತು. ಮುಂದೆಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರ ಬರೆಯಲು ಅವಕಾಶವಾಯ್ತು. ಅಲ್ಲಿ ಬರೆದ ವ್ಯಂಗ್ಯಚಿತ್ರಗಳು ಭಾರತದ ವ್ಯಂಗ್ಯಚಿತ್ರ ಪಿತಾಮಹ ಶಂಕರ್ ಅವರ ಗಮನ ಸೆಳೆದವು ಅಲ್ಲದೇ ಮೆಚ್ಚಿಕೊಂಡು ನರೇಂದ್ರ ಅವರನ್ನು ‘ಶಂಕರ್ಸ್ ವೀಕ್ಲಿ’ ಸೇರಲು ಅಹ್ವಾನಿಸಿದರು. 1973ರಲ್ಲಿ ಅವರು ‘ಶಂಕರ್ಸ್ ವೀಕ್ಲಿ’ ಸೇರಿದರು. ಇದು ಅವರ ಬದುಕಿನಲ್ಲಿ ದೊರೆತ ದೊಡ್ಡ ತಿರುವು. ಶಂಕರ್ಸ್ ವೀಕ್ಲಿ' ಪ್ರಕಟಣೆ ನಿಂತ ನಂತರ ನರೇಂದ್ರ ಅವರು ಬೆಂಗಳೂರಿಗೆ ಬಂದುಸಂಯುಕ್ತ ಕರ್ನಾಟಕ’ದಲ್ಲಿ 11 ವರ್ಷಗಳು ಸ್ಟಾಫ್ ವ್ಯಂಗ್ಯಚಿತ್ರಕಾರರಾದರು. ನಂತರದಲ್ಲಿ `ಕನ್ನಡ ಪ್ರಭ’ ಸೇರಿ 20 ವರ್ಷಗಳು ಸುದೀರ್ಘ ಸೇವೆಯ ನಂತರ 2007ರಲ್ಲಿ ನಿವೃತ್ತಿಯಾದರು.


    1977ರಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಸ್ಥಾಪನೆಯಾದಾಗ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದ ನರೇಂದ್ರ ಅವರು 1978ರಲ್ಲಿ ಅದರ ಅಧ್ಯಕ್ಷರೂ ಆದರು. 2001ರಿಂದ ಅವರು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟೀಯಾಗಿ ವ್ಯಂಗ್ಯಚಿತ್ರಕಲೆಯ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ದೇಶ-ವಿದೇಶದ ವ್ಯಂಗ್ಯಚಿತ್ರಕಾರರನ್ನು ಗುರುತಿಸಿ ಅವರಿಗೆ ತಮ್ಮ ಸಂಸ್ಥೆಯ ಮೂಲಕ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟು ವ್ಯಂಗ್ಯಚಿತ್ರ ಕ್ಷೇತ್ರವನ್ನು ವಿಸ್ತಾರಗೊಳಿಸುತ್ತಿದ್ದಾರೆ. ನರೇಂದ್ರ ಅವರು ಯಾವುದೇ ವಯೋಮಾನದ ಹಂಗಿಲ್ಲದೇ ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

    ಬಿ ಜಿ ಗುಜ್ಜಾರಪ್ಪ(ಗುಜ್ಜಾರ್): ತುಮಕೂರು ಜಿಲ್ಲೆಯ ಬಾಣಗೆರೆಯ ಗುಜ್ಜಾರ್ ಅವರು ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೇ ಚಿತ್ರ ರಚನೆ ಹಾಗೂ ಕಾರ್ಟೂನ್ ಸ್ಟ್ರಿಪ್‍ಗಳನ್ನು ಅಭ್ಯಾಸಿಸುತ್ತಾ ಬಂದಿದ್ದಾರೆ. ಇತಿಹಾಸದಲ್ಲಿ ಎಂಎ ಮಾಡಿ ಹಲವೆಡೆ ಕೆಲಸ ಮಾಡಿದ್ದಲ್ಲದೇ ಪ್ರಶಿಕ್ಷಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಆದರೆ ಚಿತ್ರ ರಚನೆಯ ಸೆಳೆತವು ವೃತ್ತಿಯನ್ನು ಬದಲಿಸುವಂತೆ ಮಾಡಿತು. ಲಂಕೇಶ್ ಪತ್ರಿಕೆಯಿಂದ ಕಾರ್ಟೂನ್ ಕ್ಷೇತ್ರಕ್ಕೆ ಬಂದರು. ಅಲ್ಲಿಂದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ ಹಾಗೂ ಮಯೂರ ಪತ್ರಿಕೆಗಳಿಗೆ ಮುಖ್ಯ ಕಲಾವಿದರಾಗಿ ಸೇರ್ಪಡೆಯಾದರು. ಅಲ್ಲಿ ಹಲವಾರು ವರ್ಷಗಳು ನಿರಂತರವಾಗಿ ಸಾಂದರ್ಭಿಕ ಚಿತ್ರ ಹಾಗೂ ಕಾರ್ಟೂನ್ ರಚನೆಯಲ್ಲಿ ತೊಡಗಿದರು.

    ನಂತರದಲ್ಲಿ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿ ಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರು ಹಾಗೂ ದೆಹಲಿಯ ಎನ್‍ಐಐಟಿಯಲ್ಲಿ ಕೆಲಸ ಮಾಡಿದ್ದಾರೆ. ಆ್ಯನಿಮೇಶನ್ ಕ್ಷೇತ್ರದಲ್ಲೂ ತೊಡಗಿದ್ದಾರೆ. ಅಲ್ಲದೇ ನಾಡಿನ ದಿಗ್ಗಜರ ಪುಸ್ತಕಗಳಿಗೆ ಮುಖಪುಟ, ಒಳಪುಟಗಳಿಗೆ ಚಿತ್ರ ರಚನೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಸರ್ಕಾರ ಹಾಗೂ ಸರ್ಕಾರೇತರದ ಹಲವಾರು ಕಾರ್ಯಕ್ರಮಗಳಿಗೆ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ರೈಲ್ವೆ ಇಲಾಖೆಯ ಹಲವಾರು ಯೋಜನೆಗಳಿಗೆ ಮುಖ್ಯ ಚಿತ್ರಕಾರರಾಗಿ ಗುರುತಿಸಿಕೊಂಡಿದ್ದಾರೆ.


    ವ್ಯಂಗ್ಯಚಿತ್ರವನ್ನಷ್ಟೇ ಅಲ್ಲದೇ ಪೇಟಿಂಗ್ ಅನ್ನು ಮಾಡುತ್ತಿದ್ದು ಅವು ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ದೊಡ್ಡ ಹೆಸರು ಮಾಡಿವೆ. ಇವರ ವಿಭಿನ್ನ ಶೈಲಿಯ ಕ್ಯಾರಿಕೇಚರ್ ಗಳು ಸಹ ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ಇವೆ. ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಲ್ಲದೇ ಹೊಸ ಪೀಳಿಗೆ ಚಿತ್ರಕಲಾ ಉತ್ಸಾಹಿ ಯುವಕರನ್ನು ಪ್ರೋತ್ಸಾಹಿಸುತ್ತಾ ಹುರಿದುಂಬಿಸುತ್ತಾ ಬಂದಿದ್ದಾರೆ. ಈ ಕಾರ್ಟೂನ್ ಕ್ಷೇತ್ರಕ್ಕೆ ಬರಲು ಡೆಕ್ಕನ್ ಹೆರಾಲ್ಡ್ ಗ್ರೂಪ್‍ನ ಬಿ.ವಿ. ರಾಮಮೂರ್ತಿ ಅವರು ನನಗೆ ಸ್ಪೂರ್ತಿ ಎನ್ನುತ್ತಾರೆ. ಗುಜ್ಜಾರ್ ಅವರು ಬರೆದ ಮಾಜಿ ಪ್ರಧಾನಿ ಎ. ಬಿ. ವಾಜಪೇಯಿ ವ್ಯಂಗ್ಯ ಭಾವ ಚಿತ್ರವು ಪ್ರಧಾನಿಯವರ ಮನೆಯ ಗೋಡೆಯಲ್ಲಿದೆ.

    ಪುಸ್ತಕ ಮಾಲಿಕೆಯಲ್ಲಿ 16 ರಾಷ್ಟ್ರೀಯ, ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಪ್ರಕಟಣೆಗೊಂಡಿದೆ. ಅಲ್ಲದೇ ಬಾಪು ಹಾಗೂ ಬುದ್ಧನ ಸಂದೇಶ ಸಾರುವ ಚಿತ್ರ ಸಹಿತ ಪುಸ್ತಕಗಳ ಪ್ರಕಟಣೆಯನ್ನು ಮಾಡಿದ್ದು ಕಾಮಿಕ್ಸ್ ಲೋಕಕ್ಕೂ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ. ನಿರಂತರ ಚಿತ್ರರಚನೆಯಲ್ಲಿ ತೊಡಗಿರುವ ಗುಜ್ಜಾರ್ ಸದಾ ಹೊಸತನದ ಹುಡುಕುವಿಕೆಯತ್ತ ಚಿಂತಿಸುತ್ತಾರಲ್ಲದೇ ಹೊಸ ಹೊಸ ತಂತ್ರಜ್ಞಾನದ ತಿಳುವಳಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ತಾವು ಕಲಿತದ್ದನ್ನು ಆಸಕ್ತರಿಗೂ ಪರಿಚಯಿಸುತ್ತಾರೆ.

    ಜಿ ಎಸ್ ನಾಗನಾಥ್ :ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ಕಾರಣ ದಾವಣಗೆರೆಯಲ್ಲಿ ವಾಣಿಜ್ಯಕಲೆಯನ್ನು ಅಭ್ಯಾಸಿಸಿದರು. ಆನಂತರ ಖ್ಯಾತ ಆ್ಯಡ್ ಏಜೆಂನ್ಸಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಮುಂದೆ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರಲ್ಲದೇ ಮುಂದುವರಿದು ಹಲವಾರು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಹಿರಿಯ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿಯಲ್ಲಿ ವೆಬ್ ಡಿಸೈನರ್, ಅನಿಮೇಟರ್, ಇಲ್ಲಸ್ಟ್ರೇಟರ್‍ಗಳನ್ನೂ ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರವನ್ನೂ ಮಾಡುತ್ತಾ ಬಂದಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ.

    ಪಿಯುಸಿ ಓದುವಾಗಲೇ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿದ್ದು. ಮೊದಲ ವ್ಯಂಗ್ಯಚಿತ್ರವು 1985ರಲ್ಲಿ `ಸುಧಾ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕ್ಯಾರಿಕೇಚರ್‍ಗಳಲ್ಲೂ ಪರಿಣತಿ ಪಡೆದಿದ್ದು ಸ್ಪಾಟ್ ಕ್ಯಾರಿಕೇಚರ್ ರಚನೆಯನ್ನೂ ರೂಡಿಸಿಕೊಂಡಿದ್ದಾರೆ.

    ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಆರ್ ಕೆ ಲಕ್ಷ್ಮಣ್ ಅವರ ಮುಂದಾಳತ್ವದಲ್ಲಿ 1996ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಗಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

    This image has an empty alt attribute; its file name is sanketh-gurudutt-855x1080.jpg

    ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರು‌ವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ‌‌. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ತಾವು ಬರೆದ ಪುಸ್ತಕ ಕಳುಹಿಸಿದ ಸಿದ್ಧರಾಮಯ್ಯ

    BENGALURU AUG 16

    ಬಿಜೆಪಿ ಎಂಬ ಸುಳ್ಳಿನ ಫ್ಯಾಕ್ಟರಿಯು ಉತ್ಪಾದಿಸಿ ಹಂಚುತ್ತಿರುವ ಸುಳ್ಳುಗಳ ಕುರಿತು ಜನರಿಗೆ ಸತ್ಯ ಹೇಳುವುದರ ಜೊತೆಗೆ ಆ ಬಗ್ಗೆ ಅರಿವು ಮೂಡಿಸುವಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

    ರಚನಾತ್ಮಕ ಹೋರಾಟದ ಮೂಲಕ ಮನುಷ್ಯ ವಿರೋಧಿಯಾದ ಬಿಜೆಪಿಯ ಕ್ರೂರ ಹುನ್ನಾರಗಳನ್ನು ಬಯಲಿಗೆಳೆದು ಸೋಲಿಸುವುದೆ ಇಂದಿನ ಎಲ್ಲ ಸಮಸ್ಯೆಗಳಿಗೆ ಇರುವ ನಿಜವಾದ ಪರಿಹಾರ. ಹಾಗೆ ಮಾಡಬೇಕೆಂದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಷಯಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದು ಸಿದ್ದರಾಯ್ಯ ಅವರು ಮನವಿ ಮಾಡಿದ್ದಾರೆ.

    ನಾನು ಬರೆದಿರುವ ‘ಜನಪೀಡಕ ಸರ್ಕಾರ’, ‘ ಐದು ಕಾಯ್ದೆಗಳು- ಅಸಂಖ್ಯಾತ ಸುಳ್ಳುಗಳು’ ಮತ್ತು ‘ಪೆಟ್ರೋಲ್, ಡೀಸೆಲ್ ನೂರು –ಜನರ ಬದುಕು ನುಚ್ಚು ನೂರು’ ಎಂಬ ಕಿರು ಪುಸ್ತಕಗಳನ್ನು ತಮ್ಮ ಓದಿಗಾಗಿ ಕಳಿಸುತ್ತಿದ್ದೇನೆ. ತಾವುಗಳು ಈ ವಿಚಾರಗಳನ್ನು ಓದಿ, ಕಿರು ಪುಸ್ತಕಗಳ ಕೊರತೆಯಾದರೆ ಪಕ್ಷದ ಶಿಷ್ಟಾಚಾರದಂತೆ ಮುದ್ರಿಸಿಕೊಂಡು ಎಲ್ಲ ಬೂತು ಮಟ್ಟದ ಕಾರ್ಯಕರ್ತರೂ ಓದುವಂತೆ ಮಾಡಿ ಜನರನ್ನು ನಿಜದ ಬೆಳಕಿನ ಕಡೆಗೆ ಮುನ್ನಡೆಸಬೇಕೆಂದು ಅವರು ಕೋರಿದ್ದಾರೆ.

    ಹಾಸನದ ಹೆಮ್ಮೆ ಸತ್ಯವತಿ ರಾಮನಾಥ


    ಕೆಲವರು ಇರುತ್ತಾರೆ. ಎಲೆ ಮರೆಯ ಕಾಯಿಯಂತೆ. ತಮ್ಮ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿ ತೆರೆ ಮರೆಗೆ ಸರಿದು ಬಿಡುತ್ತಾರೆ. ಅಂಥವರಲ್ಲಿ ಒಬ್ಬರು . ಭಾನುವಾರ, ಫೆಬ್ರವರಿ 9,2025ರಂದು ತಮ್ಮ 74ನೇ ವಯಸ್ಸಿನಲ್ಲಿ ದೆಹಲಿಯಲ್ಲಿ ತೀರಿಕೊಂಡ ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ. ಸ್ವತಃ ಗಮಕಿ ಮಾತ್ರವಲ್ಲದೆ ಹಲವಾರು ಗಮಕಿಗಳನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಅವರದ್ದು. ನಮ್ಮ ಕನ್ನಡಪ್ರೆಸ್ ಯೂ ಟ್ಯೂಬ್ ವಾಹಿನಿಗೆ ರನ್ನನಗದಾಯುದ್ದ ಎಂಬ ಮಾಲಿಕೆಯನ್ನು ಆರಂಭಿಸಿ ಅದನ್ನು ರೂಪಿಸಿ ಸಮನ್ವಯ ಮಾಡಿದ ಹಿರಿಮೆ ಅವರದ್ದು. ದೆಹಲಿಯ ಮಗಳ ಮನೆಗೆ ತೆರಳುವ ವರೆಗೂ ತೊರವೆ ರಾಮಾಯಣ ಸರಣಿಯನ್ನು ನಿರ್ವಹಿಸಿದರು. ಅಪೂರ್ಣವಾಗಿರುವ ಈ ಸರಣಿಯನ್ನು ಮುಕ್ತಾಯ ಗೊಳಿಸುವ ಹೊಣೆ ಇದೀಗ ಅವರ ಅಭಿಮಾನ ಬಳಗ ನಿರ್ವಹಿಸಬೇಕಾಗಿದೆ. ಅಗಲಿದ ಈ ಮಹಾಚೇತನದ ಬಗ್ಗೆ ಮತ್ತೊಬ್ಬ ಗಮಕಿ ಸುಮಾ ವೀಣಾ ಅವರು ಸಲ್ಲಿಸಿದ ನುಡಿನಮನ ಇಲ್ಲಿದೆ.


     

    ಹಾಸನ ಜಿಲ್ಲೆ ಮರಿತಮ್ಮನಹಳ್ಳಿ  ಗ್ರಾಮದ ಶ್ರೀಸೂರ್ಯನಾರಾಯಣಪ್ಪ ಮತ್ತು   ಶ್ರೀಮತಿ ಅನಂತಲಕ್ಷ್ಮಿಯವರ  ಮಗಳಾಗಿ  1951 ರಲ್ಲಿ ಸತ್ಯವತಿಯವರು ಜನಿಸುತ್ತಾರೆ. ಮೂಲತಃ ಸಂಪ್ರದಾಯಸ್ಥ  ಕುಟುಂಬಕ್ಕೆ ಸೇರಿದ  ಇವರ  ಆಧ್ಯಾತ್ಮ ಹಾಗು ಗಮಕ ವ್ಯಾಖ್ಯಾನ  ಕ್ಷೇತ್ರದ  ಸಾಧನೆ ಅನನ್ಯ. ಒಂದನೆ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ತಮ್ಮ ಊರಿನಲ್ಲೆ ವಿದ್ಯಾಭ್ಯಾಸ  ಮುಗಿಸಿದ ಇವರು ಐದನೆ ತರಗತಿಯಿಂದ ಏಳನೆ ತರಗತಿಯವರೆಗೆ ಸಕಲೇಶಪುರದ ಸಂತ ಜೋಸೇಫರ ಶಾಲೆಯಲ್ಲಿ ಅಧ್ಯಯನ ಮಾಡಿ  ಹೊಳೆನರಸೀಪುರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ 1967ರಲ್ಲಿ  ಹಾಸನದ  ಎ.ವಿ.ಕೆ ಕಾಲೇಜು ಪ್ರಾರಂಭವಾದ ಮೊದಲ ವರ್ಷವೇ ಪ್ರಥಮ ಪಿ.ಯು.ಸಿಯನ್ನು ವ್ಯಾಸಂಗ ಮಾಡಿ  ಬೆಂಗಳೂರಿನ  ಬಿ. ಎಮ್.ಎಸ್. ಕಾಲೇಜಿನಲ್ಲಿ  ಬಿ.ಎಸ್ಸಿ ಪದವಿ   ಮುಗಿಸಿ ಧಾರವಾಡದಲ್ಲಿ ಸಂಸ್ಕೃತ ಎಂ.ಎ ಅಧ್ಯಯನ ಮಾಡಿದರು.

    ತಮ್ಮ ಇಪ್ಪತ್ತೊಂದನೆ ವಯಸ್ಸಿನಲ್ಲಿ ಮದುವೆಯಾದನಂತರ ಎಂ. ಎ ವ್ಯಾಸಂಗ ಮಾಡಿದ್ದು  ವಿಶೇಷವೇ ಹೌದು!  ಅಂತಾರಾಷ್ಟ್ರೀಯ ಖ್ಯಾತಿಯ  ಸಂಸ್ಕೃತ ವಿದ್ವಾಂಸರಾದ  ಡಾ. ಕೆ. ಕೃಷ್ಣಮೂರ್ತಿಯವರ ಶಿಷ್ಯೆಯಾದ     ಇವರು  ಸಂಸ್ಕೃತ  ಅಧ್ಯಾಪಕಿಯಾಗಿಯೂ ಆಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಅಪಾರ ಶಿಷ್ಯವರ್ಗ ಹೊಂದಿದ್ದರು.

    ಇವರ ಪತಿ  ದಾವಣಗೆರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೃತ್ತಿಬದುಕನ್ನು ಆರಂಭಿಸಿ, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕೆನಡದ  University of Manitoba ವಿಶ್ವವಿದ್ಯಾನಿಲಯದ ಸಂದರ್ಶಕ  ಪ್ರಾಧ್ಯಾಪಕರಾಗಿಯೂ, ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನ  ಕಂಪ್ಯೂಟರ್ ವಿಭಾಗದ ಮುಖ್ಯಸ್ಥರೂ, ಪ್ರಾಚಾರ್ಯರೂ , ಪ್ರಾಂಶುಪಾಲರು, ಆಡಳಿತಾಧಿಕಾರಿಯೂ ಆಗಿ  ಕರ್ತವ್ಯ ನಿರ್ವಹಿಸಿ ಈಗ ವಿಶ್ರಾಂತ ಬದುಕು ನಡೆಸುತ್ತಿದ್ದಾರೆ. ಇವರಿಗೆ   ಓರ್ವ ಪುತ್ರಿ ಮಾಯ ಹಾಗು ಓರ್ವ ಪುತ್ರ ಮಾಧವ . ಇವರ ಪುತ್ರಿ  ಹಾಗು ಅಳಿಯ   ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಉನ್ನತ ಶಿಕ್ಷಣ ಪಡೆದು ಸದ್ಯ ದೆಹಲಿಯ ಐ.ಐ.ಟಿ ಸಂಸ್ಥೆಯಲ್ಲಿ  ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಪುತ್ರ ಅಮೆರಿಕಾದಲ್ಲಿ ನೆಲೆಸಿದ್ದಾರೆ.   ಮಕ್ಕಳಿಗೆ ಸಾಂಸ್ಕೃತಿಕ ಹಾಗು ಪರಂಪರೆಯ ಶಿಕ್ಷಣ ನೀಡುವಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು  ಸಂಗೀತ ಹಾಗು ಸಾಹಿತ್ಯ ಶಿಕ್ಷಣವನ್ನು ಶೈಕ್ಷಣಿಕ  ಶಿಕ್ಷಣದ ಜೊತೆ ಜೊತೆಗೆ ನೀಡಿದ್ದಾರೆ.

    ಸತ್ಯವತಿಯವರು ಹಾಸನದಲ್ಲಿದ್ದಾಗ ಪಿ.ಆ್ಯಂಡ್. ಟಿ ಕಾಲೊನಿಯಲ್ಲಿ  ಮಹಿಳೆಯರಿಗಾಗಿ ಮೊದಲಿಗೆ “ಗೀತಾ ಸತ್ಸಂಗ”ವನ್ನು ಸ್ಥಾಪಿಸಿ   ಭಗವದ್ಗೀತೆ ಮತ್ತು  ವಿಷ್ಣುಸಹಸ್ರನಾಮಪಾರಾಯಣ ಪ್ರಾರಂಭಿಸಿ  ಶುಭಾರಂಭ ಮಾಡಿದ್ದು ಈಗಲೂ ನಡೆದುಕೊಂಡು ಬರುತ್ತಿದೆ..   “ಶ್ರೀಸತ್ಯಸಾಯಿ  ಸೇವಾ ಸಮಿತಿ”ಯಲ್ಲಿ  “ಬಾಲವಿಕಾಸ” ವಿಭಾಗದ   ಸಂಯೋಜಕರೂ ಆಗಿ  ಮಕ್ಕಳ ನೈತಿಕ  ಹಾಗು ಅಧ್ಯಾತ್ಮ ಬೆಳವಣಿಗೆಗೆ ಬೇಸಗೆ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆ ಇವರದು..

    ಅಧ್ಯಾತ್ಮಚಿಂತನೆ ಇಟ್ಟುಕೊಂಡಿರುವ ಇವರಿಗೆ ಮಾನಸಿಕ ಗುರು ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ  ಸ್ವಾಮಿಗಳು. ಗುರುಗಳನ್ನಾಗಿ ತಮ್ಮ ಪತಿಯನ್ನೇ ಸ್ವೀಕರಿಸಿರುವ  ಇವರ ಜ್ಞಾನ ಸಂಪತ್ತು ಅಗಾಧ. ಗಮಕ ಕ್ಷೇತ್ರದಲ್ಲೂ ಇವರು  ಅಮೋಘ ಸಾಧನೆಯನ್ನು ಮಾಡಿದ್ದಾರೆ.   ಕನ್ನಡದ ಷಟ್ಪದಿ ಕವಿಗಳಾದ ರಾಘವಾಂಕ, ಹರಿಹರ,  ಲಕ್ಷ್ಮೀಶ, ನರಹರಿ ಮೊದಲಾದವರ  ಕೃತಿಗಳಿಗೆ ವ್ಯಾಖ್ಯಾನ  ಮಾಡಿರುವುದಲ್ಲದೆ . ಸ್ವಗತ ಯೂಟ್ಯೂಬ್ ಚಾನೆಲ್ನಲ್ಲಿ  ಕುವೆಂಪು “ರಾಮಾಯಣ ದರ್ಶನಮ್”, ಕಾವ್ಯವನ್ನು ನಾಡಿನ ಜನತೆಗೆ ಸಮಗ್ರವಾಗಿ ತಲುಪಿಸಿದರು. ನಂತರ ಕನ್ನಡಪ್ರೆಸ್ ಯೂ ಟ್ಯೂಬ್ ವಾಹಿನಿಯಲ್ಲಿ ರನ್ನನ ಗದಾಯುದ್ಧ ಮತ್ತು ತೊರವೆ ರಾಮಾಯಣ ಕೃತಿಯನ್ನು ನಾಡಿನ ಜನತೆಗೆ ನೀಡಿದರು. ನಾಡಿನಾದ್ಯಂತ  ಗಮಕ ವ್ಯಾಖ್ಯಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸಿಕೊಟ್ಟು ಉನ್ನತಮಟ್ಟದ  ಕೇಳುಗವರ್ಗವನ್ನು ಹೊಂದಿದ್ದರು.ದೂರದರ್ಶನ ಮತ್ತು ಆಕಾಶವಾಣಿಯಲ್ಲಂತೂ ಇವರ   ಮೌಲ್ಯಯುತ ಕಾರ್ಯಕ್ರಮಗಳು ಪ್ರಸಾರವಾಗಿರುವುದು ಹೆಗ್ಗಳಿಕೆಯ ವಿಚಾರವೇ ಸರಿ.  ಸ್ವತಃ ಇವರು  ಮಹಿಳೆಯರನ್ನು ಸಂಘಟಿಸಿ  ತಮ್ಮ ಸಮಸ್ಯೆಗಳನ್ನು ಚರ್ಚಿಸುವ  ದೂರದರ್ಶನ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.  ಬೆಂಗಳೂರಿನ ಆರ್ಯಸಮಾಜದಲ್ಲಿ ಸತತ ಏಳು ವರ್ಷಗಳ ಕಾಲ  ಮಹರ್ಷಿ ದಯಾನಂದ ಸರಸ್ವತಿಗಳ  ಜೀವನ ಚರಿತ್ರೆಯ ಗಮಕ ವಾಚನಕ್ಕೆ ವ್ಯಾಖ್ಯಾನ ಮಾಡಿರುವುದು ಇವರ ವ್ಯಾಖ್ಯಾನ ಸಾಧನೆಯ ಪ್ರಮುಖ ಮೈಲಿಗಲ್ಲು ಎನ್ನಬಹುದು.  ವ್ಯಾಖ್ಯಾನವೆಂದರೆ ಪದವಿವರಣೆಯಲ್ಲ ಅದನ್ನು ಹೊರತು ಪಡಿಸಿ ಅದರ ಭಾವಸ್ವಾರಸ್ಯವನ್ನು  ರಂಜನೀಯವಾಗಿ ,ಪ್ರಸ್ತುತ ದಿನಮಾನಗಳಿಗೆ ಹೊಂದಿಕೆಯಾಗುವಂತೆ,  ತಾತ್ವಿಕತೆ ಮೌಲ್ಯ ಪ್ರಸಾರಣೆಯನ್ನೂ ಗುರಿಯಾಗಿಸಿಕೊಂಡ ಸಮಗ್ರದೃಷ್ಟಿಕೋನದ  ಇವರ ವ್ಯಾಖ್ಯಾನಗಳು ಅನನ್ಯ  ಎನ್ನಬಹುದು.

     ಶ್ರೀಮತಿ ಸತ್ಯವತಿ ರಾಮನಾಥವರು  ಕರ್ನಾಟಕ ಗಮಕ ಕಲಾಪರಿಷತ್ತಿಕಾವೇರಿ ಯೋಜನೆ, ಗ್ರಾಮಾಂತರ ಯೋಜನೆಗಳಲ್ಲಿಯೂ ತಮ್ಮನ್ನು ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ಗಮಕಕಲಾಪರಿಷತ್ತಿನ ಏಳಿಗೆಗೆ ಶ್ರಮಿಸಿರುವ ಇವರು ದತ್ತಿ ನಿಧಿ ಸ್ಥಾಪಿಸಿ ಆರ್ಥಿಕ ಬಲವನ್ನೂ ಸಂಸ್ಥೆಗೆ ತುಂಬುವ ಕೆಲಸ ಮಾಡಿರುವುದು ಶ್ಲಾಘನೀಯ.

    ಆಧ್ಯಾತ್ಮ ಮತ್ತು ವೈದಿಕ ವಿಚಾರಗಳ ಬಗ್ಗೆ  ಅಪಾರ ಆಸಕ್ತಿ ಮತ್ತು ಶ್ರದ್ಧೆ ಇರುವ  ‘ರಾಮಾಯಣ’ , ‘ಮಹಾಭಾರತ’,  ‘ಭಾಗವತ’, ‘ಉಪನಿಷತ್ಗಳು’, ‘ವಿವೇಕಚೂಡಾಮಣಿ’  ಮುಂತಾದ   ಗ್ರಂಥಗಳಿಂದ ಆಯ್ದ  ವಿಚಾರಗಳ  ಬಗ್ಗೆ ಬೆಳಕು ಚೆಲ್ಲಿದ್ದಾರೆ.  ಎಡತೊರೆ  ಯೋಗಾನಂದ ಸರಸ್ವತಿ ಮಠದ ಸ್ವಾಮಿಗಳು ಆಯೋಜಿಸಿದ್ದ ಶಾಂಕರ ಸಂದೇಶ ಸಪ್ತಾಹ , ಬೆಂಗಳೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿಯೂ  ಕಾರ್ಯಕ್ರಮ ನಡೆಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರಿನ  ಶಂಕರ ಮಠದಲ್ಲಿ  ಭಗವದ್ಗೀತೆಯ ಸಮಗ್ರ ಪ್ರವಚನವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. “ವೇದಕಾಲಿನ ಮಹಿಳೆಯರ ಪರಿಸ್ಥಿತಿ, ವೇದಗಳಲ್ಲಿ ಕುಟುಂಬ ವ್ಯವಸ್ಥೆ”, ರಾಷ್ಟ್ರೀಯ ಭಾವೈಕ್ಯತೆಗೆ ವೇದಗಳ ಕೊಡುಗೆ ಮುಂತಾದ ಮಹತ್ವ ಪೂರ್ಣ ವಿಷಗಳ ಬಗ್ಗೆ ಅನೇಕ ಸಂಸ್ಥೆಗಳಲ್ಲಿ, ದೂರದರ್ಶನ,ಆಕಾಶವಾಣಿಯಲ್ಲೂ  ಉಪನ್ಯಾಸ ನೀಡಿದ್ದಾರೆ.

     ಲೇಖಕಿಯಾಗಿ

     ಭಾರತೀಯ ಹಬ್ಬಗಳು,’ ಸಂಸ್ಕೃತಿ ಚಿಂತನ ಮಹಿಳಾ ಸಾಧಕರು, ನಾರಿ ಅಂಕಣ( ಹಿಂದಿ  ಭಾಷೆಯಿಂದ ಕನ್ನಡಕ್ಕೆ ತಂದಿರುವುದು) ಕುಮಾರವ್ಯಾಸ ಬಾರತದ ಆಯ್ದ ಸಂಧಿಗಳಿಗೆ ವ್ಯಾಖ್ಯಾನಬಂಧ, ದಿವ್ಯ ಸಸಿ ತುಳಸಿ  ಮತ್ತು ಪಾಶುಪತಾಸ್ತ್ರಪ್ರಧಾನ ವ್ಯಾಖ್ಯಾನ ಬಂಧ , ‘ಕರ್ಣನ ಪಾತ್ರ ವಿವೇಚನೆ  ವಿಮರ್ಶೆ, ‘ಮಾನನಿಯೇ ದ್ರೌಪದಿ  ಮೊದಲಾದ ಕೃತಿಗಳನ್ನು ತಂದಿದ್ದಾರೆ.   ಇವಿಷ್ಟಲ್ಲದೆ ಇವರ ನೂರಾರು ಲೇಖನಗಳು   ನಾಡಿನಾದ್ಯಂತದ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿವೆ.

     ಇವರು ಭಾರತ ಮಾತ್ರವಲ್ಲದೆ  ಅಮೆರಿಕಾ, ಕೆನಡಾ ಯೂರೋಪ್  ರಾಷ್ಟ್ರಗಳಲ್ಲೂ  ಭಾರತೀಯ ಸಂಸ್ಕೃತಿ ಪರಿಚಯ ಮಾಡಿದ್ದಲ್ಲದೆ ಕೆನಡಾದಲ್ಲಿ  ಭಾರತೀಯ ಸಂಸ್ಕೃತಿ ಪರಿಚಯ  ಮತ್ತು ಸಂಸ್ಕೃತ  ಭಾಷಾ ಬೋಧನೆ ಕಾರ್ಯಕ್ರಮ ಮತ್ತು  ಮಕ್ಕಳ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

    ಇಷ್ಟು ಸಾಧಿಸಿದ  ಸತ್ಯವತಿ ರಾಮನಾಥರವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವು ಗಮಕ ವ್ಯಾಖ್ಯಾನ ಕಲೆಗೆ ಗಮಕಕಲಾಪರಿಷತ್ತಿನ 9ನೆಯ ವಾರ್ಷಿಕ ಸಮ್ಮೇಳನದಲ್ಲಿ ಇವರನ್ನು ಗೌರವಿಸಿದೆ.  ಬೆಂಗಳೂರಿನ ಆರ್ಯಸಮಾಜದಲ್ಲಿ  ವೇದ ಸಂರಕ್ಷಣೆ ಮತ್ತು ವೇದ ಪ್ರಚಾರಕ್ಕಾಗಿ ವೇದಸಂರಕ್ಷಕಿ ಪ್ರಶಸ್ತಿಯನ್ನು ಕೊಡಲಾಗಿದೆ. ಕೆಂಗೇರಿಯ  ಸರಸ್ವತಿ ಸಂಗೀತ ಸಾಹಿತ್ಯ ಸದನವು  ಇವರನ್ನು ವೈದಿಕಧಾರ್ಮಿಕ ವಿಚಾರಶೀಲೆ”  ಎಂದು ಗುರುತಿಸಿ ಸನ್ಮಾನಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರ ಸೇವೆಯನ್ನು ಗುರುತಿಸಿ 2017ರಲ್ಲಿ  ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಪಾಶುಪತಾಸ್ತ್ರ ಪ್ರದಾನ ಪುಸ್ತಕಕ್ಕೆ ರಾಜ್ಯ ಲೇಖಕಿಯರ ಸಂಘದಿಂದ ಕೊಡಮಾಡುವ  ದತ್ತಿ ಪ್ರಶಸ್ತಿ ಕೂಡ ಲಭಿಸಿದೆ. ಮನೋರಂಜನಿ ಸಂಗೀತ ಮಹಾವಿದ್ಯಾಲಯ  ಮತ್ತು ಗಮಕ ಕಲಾಪರಿಷತ್  ಚಿಕ್ಕಮಗಳೂರು, ಇವರಿಂದಲೂ  ಸನ್ಮಾನಿತರಾಗಿದ್ದಾರೆ. ಅನೇಕ  ಸಂಘ ಸಂಸ್ಥೆಗಳ ಸದಸ್ಯರಾಗಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವಲ್ಲದೆ ತಮ್ಮ ತಿಂಗಳಿನ ಉಳಿತಾಯವನ್ನು ಸಂಘ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುತ್ತಾ  ಬಂದಿದ್ದಾರೆ.

    ಹೆಂಗಸರಿಗೆ  ಜೀವನದಲ್ಲಿ ಎಂಥದ್ದೆ ಸವಾಲುಗಳು ಬಂದರೂ ಅದನ್ನು ಎದುರಿಸುವ ಕ್ಷಮತೆ ಇರುತ್ತದೆ ಹಾಗಾಗಿ  ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದು ಇವರ ಕಿವಿಮಾತು.  ಸಮಯ ಹೊಂದಾಣಿಕೆ ಮಾಡುವ ಚಾಕಚಕ್ಯತೆ  ಬಂದರೆ  ಎಂಥದ್ದೂ ಕಷ್ಟವಲ್ಲ. ಶ್ರೀಮಂತಿಕೆ ಬೇಕು ಎಂದು ಅದರ  ಬೆನ್ನ ಹಿಂದೆ ಹೋಗುವುದಕ್ಕಿಂತ   ಇರುವ ಹಣದಲ್ಲಿ ಸಂತೃಪ್ತರಾಗಬೇಕು, ಸರಳವಾಗಿರಬೇಕು ಎಂಬಂತೆ ಬಾಳಿ ಬದುಕಿದ ಚೇತನ .

    ಯಾವಾಗಲೂ ಮಹಿಳೆಯರು ಕ್ರಿಯಾಶೀಲರಾಗಿರಬೇಕು ಮಕ್ಕಳಿಗೆ  ಶುದ್ಧಚಾರಿತ್ರ್ಯವನ್ನು ಹೇಳಿಕೊಡಬೇಕು. ನಮ್ಮ ಮಕ್ಕಳಿಗೆ ಕೆ.ಜಿ ಗಟ್ಟಲೆ ಬಂಗಾರಕ್ಕಿಂತ, ಸೈಟ್, ಫ್ಲ್ಯಾಟ್, ಮಹಲುಗಳಿಗಿಂತ  ಶುದ್ಧಚಾರಿತ್ರ್ಯವೇ ನಿಜವಾದ ಆಸ್ತಿ ಎನ್ನುತ್ತಿದ್ದರು.   ವೇಗದ ಜೀವನಕ್ಕೆ ಕೊಂಚ ಬ್ರೇಕ್ ಹಾಕಿ ಸಾವಕಾಶವಾಗಿ ಕುಟುಂಬದವರೊಡನೆ ಬೆರೆಯುವ ಕೆಲಸ ಮಾಡಬೇಕೆನ್ನುವ  ಕಿವಿಮಾತನ್ನು ಸತ್ಯವತಿ ರಾಮನಾಥ ಯಾವಾಗಲೂ ಸಮರ್ಥಿಸಿಕೊಳ್ಳುತ್ತಿದ್ದರು.  ಜೊತೆಗೆ ವ್ಯವಸ್ಥಿತವಾಗಿ  ಗೃಹಕೃತ್ಯಗಳನ್ನು ಮಾಡಿ ಕಾಲ ಉಳಿಸಿಕೊಂಡರೆ ಮಹಿಳೆ ತನ್ನ ವೈಯಕ್ತಿಕ ಆಸಕ್ತಿಗಳ ಕಡೆಗೂ ಗಮನ ಕೊಡಬಹುದು. ಈ ದಿಸೆಯಲ್ಲಿ  ಆಕೆಗೆ ಸ್ಮಾರ್ಟ್ ಫೋನ್   ಮತ್ತು ಗಣಕ ಯಂತ್ರದ ಸಾಮಾನ್ಯ ಪರಿಚಯವೂ ಇದ್ದರೆ   ಕಲೆ ಸಾಹಿತ್ಯ, ಸಂಗೀತದಲ್ಲಿ  ಸಮಾನ ಮನಸ್ಕರೊಡನೆ ಸಂಪರ್ಕ  ಇರಿಸಿಕೊಳ್ಳಲು ಬಹಳ ಉಪಯೋಗವಾದೀತು. ಎಂದು ತಂತ್ರಜ್ಞಾನದ ಮಹತ್ವವನ್ನೂ ಹೇಳುವುದನ್ನು ಮರೆಯುವುದಿಲ್ಲ. 

     ಇಷ್ಟು ಸಾಧನೆ ಮಾಡಿದ್ದ ಶ್ರೀಮತಿ ಸತ್ಯವತಿ ರಾಮನಾಥರ ಬಗ್ಗೆ  ಎಷ್ಟು ಬರೆದರೂ ಅಪೂರ್ಣ ಅನ್ನಿಸುತ್ತದೆ. ಅವರ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಪತಿ ರಾಮನಾಥ,  ಮಗಳು ಮಾಯಾ, ಅಳಿಯ  ಶ್ರೀಕಂಠ , ಮಗ ಮಾಧವ ,ಸೊಸೆ ಪಲ್ಲವಿ, ಮೊಮ್ಮೊಕ್ಕಳು ಪ್ರಜ್ಞಾ, ಮತ್ತು ಅಭಿಜ್ಞಾ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರಿಗೂ ಭಗವಂತ ಕರುಣಿಸಲಿ

     ರನ್ನನ ಗದಾಯುದ್ಧ ಸರಣಿಯ ಕೆಲ ಭಾಗದ ಲಿಂಕ್

    ವಿಜ್ಞಾನವನ್ನುಏಕೆ ಮತ್ತು ಹೇಗೆ ಓದಬೇಕು?

    ವಿಜ್ಞಾನ ನಮ್ಮ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿದೆ. ವಿಜ್ಞಾನವಿಲ್ಲದೆ ಜೀವನವೇ ಇಲ್ಲ. ನಮ್ಮ ದಿನ ನಿತ್ಯದ ಪ್ರತಿಯೊಂದು ಕೆಲಸದಲ್ಲಿ ನಮಗೆ ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೊ ವಿಜ್ಞಾನದ ತತ್ವಗಳನ್ನು ಬಳಸುತ್ತೇವೆ. ನಮ್ಮ ಜೀವನದ ಪ್ರತಿಯೊಂದು ಅಂಶವು ಸಹ ಒಂದಲ್ಲಾ ಒಂದು ರೀತಿಯಲ್ಲಿ ವಿಜ್ಞಾನದಿಂದ ಪ್ರಭಾವಗೊಂಡಿದೆ. ಪ್ರಾತಃಕಾಲದಲ್ಲಿ ಎದ್ದ ಕ್ಷಣದಿಂದ ಪ್ರಾರಂಭಗೊಂಡು ರಾತ್ರಿ ಮಲಗುವವರೆಗೂ ಪ್ರತಿ ತಿರುವಿನಲ್ಲಿ ವಿಜ್ಞಾನದ ಪ್ರಭಾವವನ್ನು ನಾವು ಕಾಣುತ್ತೇವೆ.

    ಮಾನವನ ಜೀವನವನ್ನು ಸುಖಮಯಗೊಳಿಸುವ ದಿಕ್ಕಿನಲ್ಲಿ ವಿಜ್ಞಾನದ ಕೊಡುಗೆ ಅಪಾರ. ಉದಾಹರಣೆಗೆ, ವೈದ್ಯಕೀಯ ವಿಜ್ಞಾನದಲ್ಲಿನ ಅಭಿವೃದ್ಧಿಯಿಂದಾಗಿ, ನಮ್ಮ ಆರೋಗ್ಯ, ಯೋಗಕ್ಷೇಮ ಸುಧಾರಿಸಿರುವ ಜೊತೆಗೆ, ನಮ್ಮ ಆಯುಷ್ಯದ ಪ್ರಮಾಣವು ಸಹ ಗಮನಾರ್ಹವಾಗಿ ಹೆಚ್ಚಾಗಿದೆ. ಒಂದು ವರದಿಯ ಪ್ರಕಾರ ಹದಿನಾರು ಮತ್ತು ಹದಿನೇಳನೆ ಶತಮಾನಗಳಲ್ಲಿ, ಮಾನವನ ಜೀವಿತಾವಧಿ ಕೇವಲ 30-40 ವರ್ಷಗಳಾಗಿತ್ತು. ಪ್ರಸ್ತುತದಲ್ಲಿ ಜೀವಿತಾವಧಿ 70-80 ವರ್ಷಗಳಾಗಿರುವುದು ನಮ್ಮ ಅದೃಷ್ಟ. ಈ ಹಿನ್ನಲೆಯಲ್ಲಿ, ವಿಜ್ಞಾನ ಎಂದರೇನು, ವಿಜ್ಞಾನವನ್ನು ನಾವು ಏಕೆ ಮತ್ತು ಹೇಗೆ ಓದಬೇಕು ಹಾಗೂ ಪ್ರಸ್ತುತದಲ್ಲಿ ವಿಜ್ಞಾನ ಶಿಕ್ಷಣದ ಸ್ಥಾನಮಾನ ಮುಂತಾದುವುಗಳನ್ನು ಕುರಿತಂತೆ ಅವಲೋಕಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯೂ ಕೂಡ.

    ವಿಜ್ಞಾನ ಎಂದರೇನು? ಭೌತಿಕ ಮತ್ತು ಪ್ರಾಕೃತಿಕ ಪ್ರಪಂಚದ ವಿದ್ಯಮಾನಗಳಿಗೆ ಸಂಬಂಧಿಸಿದ, ಪಕ್ಷಪಾತವಿಲ್ಲದ ಅವಲೋಕನ ಹಾಗೂ ವ್ಯವಸ್ಥಿತ ಪ್ರಯೋಗಗಳಿಗೆ ಒಳಗೊಳ್ಳುವಂತೆ ಮಾಡುವ ಅಧ್ಯಯನದ ವಿಧಾನವೇ ವಿಜ್ಞಾನ. ಸಾಮಾನ್ಯ ಸತ್ಯಗಳು ಅಥವಾ ಮೂಲಭೂತ ತತ್ವಗಳ ಕಾರ್ಯಾಚರಣೆಗಳನ್ನು ಒಳಗೊಂಡು ನಡೆಸುವ ಜ್ಞಾನಾನ್ವೇಷಣೆಯೆ ವಿಜ್ಞಾನ. ಒಂದು ಅರ್ಥದಲ್ಲಿ ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ ಜ್ಞಾನಮಂಡಲ.

    ವಿಶಾಲವಾಗಿ ಹೇಳುವುದಾದರೆ, ವಿಜ್ಞಾನವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದಾಗಿ, ಅಜೈವಿಕ ವಿಶ್ವದ ಅಧ್ಯಯವನ್ನು ಒಳಗೊಂಡಿರುವ ಭೌತವಿಜ್ಞಾನ. ಉದಾಹರಣೆ: ಖಗೋಳಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ ಇತ್ಯಾದಿ. ಎರಡನೆಯದಾಗಿ ಜೈವಿಕ ವಿಜ್ಞಾನ. ಉದಾಹರಣೆ: ಜೀವಶಾಸ್ತ್ರ, ಕೃಷಿವಿಜ್ಞಾನ, ಜೀವರಸಾಯನಶಾಸ್ತ್ರ, ಮುಂತಾದವುಗಳು. ಮೂರನೆಯ ಶಾಖೆ ಸಾಮಾಜಿಕ ವಿಜ್ಞಾನ. ಉದಾಹರಣೆ: ಅರ್ಥಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ. ಮೇಲೆ ತಿಳಿಸಿರುವಂತೆ ಭೌತಿಕ ಮತ್ತು ನೈಸರ್ಗಿಕ ಪ್ರಪಂಚದ ವಿದ್ಯಮಾನಗಳನ್ನು ತರ್ಕಬದ್ಧವಾಗಿ ವಿವರಿಸಬಲ್ಲ ಜ್ಞಾನದ ಗಣಿ ವಿಜ್ಞಾನ. ಜ್ಞಾನವನ್ನು ಗಳಿಸುವ ವ್ಯವಸ್ಥಿತವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿಯನ್ನು ವಿಜ್ಞಾನಿ ಎಂದು ಕರೆಯುತ್ತೇವೆ. ಸತ್ಯಾನ್ವೇಷಣೆಗೆ ವಿಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ವ್ಯಕ್ತಿ ವಿಜ್ಞಾನಿಯೆಂದು ಕರೆಸಿಕೊಳ್ಳಲು ಅರ್ಹನಾಗುತ್ತಾನೆ.

    ವಿಜ್ಞಾನವನ್ನು ಏಕೆ ಓದಬೇಕು?

    ವಿಜ್ಞಾನದ ತತ್ವಗಳನ್ನು ಮತ್ತು ಅವುಗಳ ಅನ್ವಯಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಉತ್ತಮ ಹಾಗೂ ಪರಿಣಾಮಕಾರಿಯಾದ ವಿಜ್ಞಾನ ಶಿಕ್ಷಣ ಅತ್ಯಗತ್ಯ.ಮುಂದುವರಿದು, ವಿಜ್ಞಾನ ಶಿಕ್ಷಣದ ಸ್ವರೂಪವು ವಿಜ್ಞಾನವು ಹೇಗೆ ಮಾನವನ ಉಪಕ್ರಮ (ಪ್ರಾರಂಭ) ವಾಗಿದೆ, ವಿಜ್ಞಾನಿಗಳ ಚಿಂತನೆ ಹೇಗಿರುತ್ತದೆ, ವೈಜ್ಞಾನಿಕ ಜ್ಞಾನವನ್ನು ಹೇಗೆ ಸೃಷ್ಟಿಸಲಾಗುತ್ತದೆ, ಹೇಗೆ ವಿಕಸನಗೊಳ್ಳುತ್ತದೆ, ತತ್ವಗಳನ್ನು ಅನ್ವಯಗಳಲ್ಲಿ ಹೇಗೆ ಬಳಸಲಾಗುತ್ತದೆ ಎಂಬುವುದರ ಅಧ್ಯಯನವನ್ನು ಸೂಚಿಸುತ್ತದೆ.

    ವಿಜ್ಞಾನ  ಶಿಕ್ಷಣವು ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.

    1) ರಾಷ್ಟ್ರದ ಅಭಿವೃದ್ಧಿಗೆ ವಿಜ್ಞಾನ ಶಿಕ್ಷಣ ಬಹಳ ಮುಖ್ಯ. ಏಕೆಂದರೆ, ವಿಜ್ಞಾನ ಶಿಕ್ಷಣವು ಹಲವು ಕ್ಷೇತ್ರಗಳಿಗೆ ಅಪಾರ ಕೊಡುಗೆಯನ್ನು ನೀಡುತ್ತದೆ. ಪರಿಸರ ಸುಸ್ಥಿರತೆ, ರಾಷ್ಟ್ರೀಯ ಭದ್ರತೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಉತ್ಪಾಧನಾ ಕ್ಷೇತ್ರ, ಸಾಮಾಜಿಕ ಅಭಿವೃದ್ಧಿ ಹೀಗೆ ಹಲವಾರು ಕ್ಷೇತ್ರಗಳಿಗೆ ಕೊಡುಗೆಯನ್ನು ನೀಡುತ್ತದೆ.

    2) ವಿಜ್ಞಾನವು ನಾವಿನ್ಯತೆ ಮತ್ತು ತಾಂತ್ರಿಕ ಪ್ರಗತಿಗೆ ಆಧಾರವಾಗಿದೆ.

    3) ವಿಮರ್ಶಾತ್ಮಕ ಚಿಂತನೆ, ನಾವಿನ್ಯತೆ ಮತ್ತು ಸೃಜನಶೀಲತೆಗಳನ್ನು ಉತ್ತೇಜಿಸುತ್ತದೆ ಹಾಗೂ ವಿಷಯದ ಬಗ್ಗೆ ಕುತೂಹಲವನ್ನುಂಟುಮಾಡುತ್ತದೆ. ಓದಿದ ಅಥವಾ ಕೇಳಿದ ವಿಷಯದ ಬಗ್ಗೆ ಪ್ರಶ್ನಿಸುವ, ವಿಶ್ಲೇಷಿಸುವ, ಅರ್ಥವಿವರಣೆ ಮಾಡುವ (ಇಂಟರ್‌ಪ್ರಿಟ್)‌, ಮೌಲ್ಯಮಾಪನ ಮಾಡುವ ಮತ್ತು ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯಕ್ಕೆ ವಿಮರ್ಶಾತ್ಮಕ ಚಿಂತನೆ ಎಂದು ಕರೆಯುತ್ತೇವೆ. ಸಾಂಪ್ರದಾಯಕ ಕಲ್ಪನೆಗಳು, ನಿಯಮಗಳು, ಮಾದರಿಗಳನ್ನು ಮೀರುವ, ಅರ್ಥಪೂರ್ಣ ಹೊಸ ಆಲೋಚನೆಗಳನ್ನು, ವಿಧಾನಗಳನ್ನು, ವ್ಯಾಖ್ಯಾನಗಳನ್ನು ರಚಿಸುವ ಸಾಮರ್ಥ್ಯಕ್ಕೆ ಸೃಜನಶೀಲತೆಯೆಂದು ಕರೆಯಬಹುದು. ಜ್ಞಾನ ಮತ್ತು ಮಾಹಿತಿಯನ್ನು ಪಡೆಯುವ ಅತೀವ ಬಯಕೆಗೆ ಕುತೂಹಲವೆನ್ನುತ್ತೇವೆ. ವಿಜ್ಞಾನ ಶಿಕ್ಷಣವು ಈ ನಾಲ್ಕು ಗುಣ ಲಕ್ಷಣಗಳನ್ನು ಪೋಷಿಸುತ್ತದೆ. ಬಹಳ ಜನ ಪ್ರಿಯವಾದ ಮತ್ತು ಹಲವಾರು ಜನ ಸಾಮಾನ್ಯರಿಗೂ ತಿಳಿದಿರುವ ನ್ಯೂಟನ್‌ ನ ಸೇಬು ಹಣ್ಣಿನ ಪ್ರಕರಣವನ್ನು ಗಮನಿಸಿ. ತನ್ನ ಪಿತ್ರಾರ್ಜಿತ ಸೇಬುಹಣ್ಣಿನ ತೋಟದಲ್ಲಿ ಕುಳಿತಿರುವಾಗ, ಮರದಿಂದ ಸೇಬು ಕೆಳಗೆ ಬೀಳುವುದನ್ನು ಗಮನಿಸಿದ, ಜೊತೆಗೆ ಯಾವುದೇ ವಸ್ತುವನ್ನು ಮೇಲಕ್ಕೆ ಎಸೆದಾಗ, ಅದು ಪುನಃ ಕೆಳಗೆ ಬೀಳುವದನ್ನು ಪರಿಶೀಲಿಸಿದ. ಅದರಲ್ಲೂ ಭೂಮಿಯ ಮೇಲ್ಮೈಗೆ ಲಂಬವಾಗಿ ಏಕೆ ಬೀಳುತ್ತದೆ, ಮೇಲಕ್ಕಾಗಲಿ ಅಥವಾ ಪಾರ್ಶ್ವ ದಿಕ್ಕಿಗಾಗಲಿ ಏಕೆ ಹೋಗುವುದಿಲ್ಲ ಎಂಬ ಅಂಶಗಳ ಬಗ್ಗೆ ಚಿಂತನೆ ನಡೆಸಿ, ಗುರುತ್ವಾಕರ್ಷಣೆ ತತ್ವವನ್ನು ಪ್ರತಿಪಾದಿಸಿದ.

    ರೈಟ್‌ ಸಹೋದರರು ಸಹ (ಆರ್ವಿಲ್ಲೆ ರೈಟ್‌ ಮತ್ತು ವಿಲ್ಬರ್‌ ರೈಟ್)‌ ಹಕ್ಕಿಗಳು ಹಾರಾಡುವುದನ್ನುಸೂಕ್ಷ್ಮವಾಗಿ ಗಮನಿಸಿ, ನಿಯಂತ್ರಣದ ಕಲೆಯನ್ನು ಕರಗತ ಮಾಡಿಕೊಳ್ಳಲು ಗ್ಲೈಡಿಂಗ್‌ ನ್ನು ಅಭ್ಯಾಸಮಾಡಿ, ಅಂತಿಮವಾಗಿ 1903 ಡಿಸೆಂಬರ್‌ 17 ರಂದು ವಿಮಾನದ ಮೊದಲ ನಿಯಂತ್ರಿತ ಹಾರಾಟವನ್ನು ಮಾಡಿದರು.

    4) ವಿಜ್ಞಾನ ಶಿಕ್ಷಣದಲ್ಲಿ ಪರಿಕಲ್ಪನೆಯ ತಿಳುವಳಿಕೆಗೆ (ಕನ್ಸ್‌ಪ್ಚುಯಲ್ ಅಂಡರ್‌ಸ್ಟಾಂಡಿಂಗ್)‌ ಪ್ರಾಮುಖ್ಯತೆ ನೀಡುವುದರಿಂದ, ವಿಜ್ಞಾನ ಶಿಕ್ಷಣವು ವಿಮರ್ಶಾತ್ಮಕ ಚಿಂತನೆಯನ್ನು ಕೃಷಿಮಾಡುತ್ತದೆ. ಇದರಿಂದ ನೈಜ ಪ್ರಪಂಚದ ಸಮಸ್ಯೆಗಳನ್ನು ಬಿಡಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.

    5) ವಿಜ್ಞಾನವು ತಂತ್ರಜ್ಞಾನಕ್ಕೆ ಅಡಿಪಾಯವಾಗಿದೆ. ತಂತ್ರಜ್ಞಾನವು ವೈಜ್ಞಾನಿಕ ಜ್ಞಾನದ ಅನ್ವಯವಾಗಿದೆ. ಹೊಸ ತಾಂತ್ರಿಕ ಕಲ್ಪನೆಗಳಿಗೆ ಕಾರಣವಾಗುವ ಹೊಸ ಜ್ಞಾನವನ್ನು ಮೂಲ ವಿಜ್ಞಾನ ಒದಗಿಸುತ್ತದೆ. ಉದಾಹರಣೆಗೆ, ಸೆಮಿ ಕಂಡಕ್ಟರ್‌ (ಅರೆವಾಹಕ) ಸಂಬಂಧಿಸಿದ ಭೌತಶಾಸ್ತ್ರದಲ್ಲಿ ನಡೆಸುವ ಮೂಲಭೂತ ಸಂಶೋಧನೆಯನ್ನು ಆಧರಿಸಿ, ಟ್ರಾನ್ಸಿಸ್ಟರ್‌, ಇಂಟಿಗ್ರೇಟೆಡ್‌ ಸರ್ಕ್ಯೂಟ್ಸ್‌ ನಂತಹ ಸಾಧನಗಳನ್ನು ತಯಾರು ಮಾಡಲು ಸಾಧ್ಯವಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವು ವಿಭಿನ್ನ ರೀತಿಯ ಉದ್ದೇಶಗಳನ್ನು ಹೊಂದಿದ್ದರೂ ಸಹ, ಅವುಗಳು ಪರಸ್ಪರ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತವೆ.

    6) ವಿಜ್ಞಾನವು ಕಲಿಕೆಯ ಉತ್ಸಾಹವನ್ನುಂಟು ಮಾಡುತ್ತದೆ. ಅನ್ವೇಷಣೆಗಾಗಿ ವಿದ್ಯಾರ್ಥಿಗಳು ಆಕರ್ಷಣೆಗೊಳ್ಳುತ್ತಾರೆ. ಪ್ರಕೃತಿಯಲ್ಲಿ ನಾವು ಕಾಣುವ ವಿದ್ಯಮಾನಗಳಿಗೆ ಉತ್ತರ ಕಂಡುಹಿಡಿಯಲು ಆಸಕ್ತಿಯನ್ನು ಬಲಪಡಿಸುತ್ತದೆ. ಉದಾಹರಣೆಗೆ, ಸೂರ್ಯ ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಏಕೆ ಅಸ್ತಮಿಸುತ್ತಾನೆ, ನಕ್ಷತ್ರಗಳು ಏಕೆ ಮಿನುಗುತ್ತವೆ, ಆಕಾಶದ ಬಣ್ಣ ಏಕೆ ನೀಲಿ, ಸಾಗರದ ನೀರಿನ ಮೇಲ್ಮೈ ಏಕೆ ನೀಲಿ ಬಣ್ಣವಾಗಿ ಕಾಣುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಉತ್ತೇಜನಗೊಳ್ಳುತ್ತಾರೆ, ಈ ಪ್ರಕ್ರಿಯೆಯಲ್ಲಿ ಜ್ಞಾನವು ಬೆಳೆಯುತ್ತದೆ.‌

    7) ವಿಜ್ಞಾನವು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು (ಪ್ರಾಬ್ಲಂ ಸಾಲ್ವಿಂಗ್ ಸ್ಕಿಲ್ಸ್)‌ ಮತ್ತು ತಾರ್ಕಿಕ ಚಿಂತನೆಯ ಕೌಶಲ್ಯಗಳನ್ನು (ಲಾಜಿಕಲ್‌ ಥಿಂಕಿಂಗ್‌ ಸ್ಕಿಲ್ಸ್) ಅಭಿವೃದ್ಧಿಪಡಿಸುತ್ತದೆ. ಉದಾಹರಣೆಗೆ, ನೊಬೆಲ್‌ ಪ್ರಶಸ್ತಿ ವಿಜೇತರಾದ ಸರ್‌. ಸಿ. ವಿ ರಾಮನ್‌ ರವರು 1921 ರಲ್ಲಿ ಇಂಗ್ಲೆಂಡ್‌ ನಿಂದ ಸಮುದ್ರಯಾನದ ಮೂಲಕ ಭಾರತಕ್ಕೆ ವಾಪಸ್ಸು ಬರುವಾಗ, ನಿಕಾಲ್‌ ಪಟ್ಟಕದ ಸಹಾಯದಿಂದ ಸರಳ ಪ್ರಯೋಗ ನಡೆಸಿ, ಸಾಗರದ ನೀರಿನ ಮೇಲ್ಮೈನಲ್ಲಿ ಆಕಾಶವು ಪ್ರತಿಫಲನಗೊಳ್ಳುವುದರಿಂದ ನೀಲಿ ಬಣ್ಣವಾಗಿ ಕಾಣುತ್ತದೆ ಎಂದು ಲಾರ್ಡ್‌ ರಾಲೆ ನೀಡಿದ್ದ ವಿವರಣೆಯನ್ನು ತಾರ್ಕಿಕವಾಗಿ ತಪ್ಪು ಎಂದು ಪ್ರತಿಪಾದಿಸಿ, ಬೆಳಕಿನ ಚದರುವಿಕೆ ಕಾರಣ ಎಂದು ಪ್ರತಿಪಾದಿಸಿ, ರಾಮನ್‌ ಪರಿಣಾಮವನ್ನು (ರಾಮನ್‌ ಎಪೆಕ್ಟ್)‌ ಕಂಡು ಹಿಡಿದರು.

    8) ವೈಜ್ಞಾನಿಕ ಸಾಕ್ಷರತೆ (ಸೈಂಟಿಫಿಕ್‌ ಲಿಟರಸಿ) ಯನ್ನು ಅಭಿವೃದ್ಧಿ ಪಡಿಸುತ್ತದೆ. ವೈಜ್ಞಾನಿಕ ಸಾಕ್ಷರತೆಯಿಂದ, ವೈಜ್ಞಾನಿಕ ಸುದ್ಧಿಗಳು, ಅನ್ವೇಷಣೆಗಳು, ವೈಜ್ಞಾನಿಕ ಸಿದ್ದಾಂತಗಳು ಮತ್ತು ಅವಲೋಕನಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. ಪರಿಣಾಮವಾಗಿ ವಿಜ್ಞಾನ, ಸುಸ್ಥಿರತೆ ಮತ್ತು ತಂತ್ರಜ್ಞಾನಗಳನ್ನೊಳಗೊಂಡ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸುಲಭವಾಗುತ್ತದೆ. ಉದಾಹರಣೆಗೆ, ಹವಾಮಾನ ಬದಲಾವಣೆಗಳ ಬಗ್ಗೆ ಅಧ್ಯಯನ ಮಾಡಿದಾಗ, ಗ್ರೀನ್‌ ಹೌಸ್‌ ಗ್ಯಾಸಸ್‌ (ಹಸಿರು ಮನೆ ಅನಿಲಗಳು) ಗಳ ಪರಿಣಾಮ ಅರ್ಥವಾಗುತ್ತದೆ. ಸಂಬಂಧಪಟ್ಟ ನೀತಿಗಳ ಬಗ್ಗೆ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ. ಸಕ್ಕರೆ ಖಾಯಿಲೆಯಿರುವ ವ್ಯಕ್ತಿಗೆ, ಅನ್ನವನ್ನು ಮಿತವಾಗಿ ತಿನ್ನಬೇಕು, ಅದರಲ್ಲಿ ಕಾರ್ಬೊ ಹೈಡ್ರೇಟ್‌ ಹೆಚ್ಚಾಗಿರುತ್ತದೆ. ಫಲವಾಗಿ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಬದಲಾಗಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ಕೊಟ್ಟಾಗ ವಿಜ್ಞಾನ ಸಾಕ್ಷರತೆಯಿದ್ದ ವ್ಯಕ್ತಿಗೆ ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಚಾಚು ತಪ್ಪದೆ ಪಾಲಿಸುತ್ತಾನೆ.

    9) ಜಾಗತಿಕ ಸಮಸೈಗಳನ್ನು ವೈಜ್ಞಾನಿಕ ದೃಷ್ಟಿಕೋನದ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳುವ ಮತ್ತು ಸಂದರ್ಭೋಚಿತ ನೆಲೆಯಲ್ಲಿ ತಿಳಿಯುವ ಸಾಮರ್ಥ್ಯವನ್ನು ವೈಜ್ಞಾನಿಕ ಶಿಕ್ಷಣದಿಂದ ಪಡೆಯಬಹುದು.

    10) ವೈಜ್ಞಾನಿಕ ಪ್ರಗತಿ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ.

    11) ವಿಜ್ಞಾನ ಶಿಕ್ಷಣದಿಂದ ಮೂಡನಂಬಿಕೆಗಳನ್ನು ತೊಲಗಿಸಬಹುದು. ವೈಜ್ಞಾನಿಕ ಮನೋಭಾವನೆ ಬೆಳೆಯಲು ಸಹಾಯವಾಗುತ್ತದೆ.

    12) ವಿಜ್ಞಾನದ ಪದವೀಧರರು ಹೆಚ್ಚಿನ ಸಂಭಾವನೆ ಪಡೆಯುವ ಅವಕಾಶಗಳಿರುತ್ತವೆ ಮತ್ತು ಧೀರ್ಘಕಾಲದ ಉದ್ಯೋಗಗಳನ್ನು ಪಡೆಯಬಹುದು.

    13) ವಿಜ್ಞಾನ ಶಿಕ್ಷಣವು ಮುಂದಿನ ಪೀಳಿಗೆಯ ವಿಜ್ಞಾನಿಗಳನ್ನು ಸಿದ್ಧಪಡಿಸುತ್ತದೆ.

    ವಿಜ್ಞಾನವನ್ನು ಹೇಗೆ ಓದಬೇಕು?

    1) ಮೊಟ್ಟ ಮೊದಲನೆಯದಾಗಿ ಕಂಠಪಾಠ ಮಾಡುವ (ಗಟ್ಟು ಹೊಡೆಯುವ) ಅಥವಾ ಪರೀಕ್ಷೆಗಳನ್ನು ಪಾಸು ಮಾಡುವ ದೃಷ್ಟಿಯಿಂದಲೇ ಓದುವ ಅಭ್ಯಾಸವನ್ನು ಸಂಪೂರ್ಣವಾಗಿ ಬಿಡಬೇಕು. ಬದಲಿಗೆ ಪರಿಕಲ್ಪನಾ ತಿಳುವಳಿಕೆಗೆ (ಕನ್ಸಪ್ಚುಯಲ್ ಅಂಡರ್‌ಸ್ಟಾಂಡಿಂಗ್)‌ ಆಧ್ಯತೆಯನ್ನು ನೀಡಿ ಪರಿಕಲ್ಪನೆಗಳನ್ನು (ಕಾನ್ಸೆಪ್ಟ್ಸ್)‌ ಚೆನ್ನಾಗಿ ಅರ್ಥಮಾಡಿಕೊಂಡು, ಏಕಾಗ್ರತೆಯಿಂದ ಕೂಡಿದ ಅಧ್ಯಯನವನ್ನು ಮಾಡಬೇಕು. ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಪಡೆಯುವುದರ ಮೂಲಕ, ವೃತ್ತಿಯಲ್ಲಿ ಪ್ರವರ್ಧನವನ್ನು ಮತ್ತು ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ.

    2) ಸಮಸ್ಯೆ ಆಧಾರಿತ (ಪ್ರಾಬ್ಲಮ್‌ ಬೇಸಡ್‌ ಲರ್ನಿಂಗ್)‌ ಮತ್ತು ಯೋಜನೆ ಆಧಾರಿತ ಕಲಿಕೆ (ಪ್ರಾಜೆಕ್ಟ್‌ ಬೇಸಡ್‌ ಲರ್ನಿಂಗ್)‌ ಗಳನ್ನು ಅಳವಡಿಸಿಕೊಳ್ಳ ಬೇಕು. ಯಾವುದೇ ಒಂದು ತತ್ವ ಅಥವಾ ನಿಯಮ ಮತ್ತು ಸಂಬಂಧಪಟ್ಟ ಪರಿಕಲ್ಪನೆಯು ಸರಿಯಾದ ರೀತಿಯಲ್ಲಿ ಅರ್ಥವಾಗಬೇಕಾದರೆ, ಈ ಎರಡು ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಮುಕ್ತ ಸಮಸ್ಯೆಯನ್ನು ಪರಿಹರಿಸುವ ಅನುಭವದ ಮೂಲಕ ವಿಷಯದ ಬಗ್ಗೆ ಆಳವಾಗಿ ಹಾಗೂ ಸಮಂಜಸವಾಗಿ ತಿಳಿಯಲು ಸಾಧ್ಯವಾಗುತ್ತದೆ ಮತ್ತುಸಮಸ್ಯೆಗಳನ್ನು ಬಿಡಿಸುವ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡುತ್ತದೆ. ಉದಾಹರಣಗೆ, ನ್ಯೂಟನ್‌ ನಿಯಮವನ್ನಾಗಲಿ ಅಥವಾ ಆರ್ಕಿಮೀಡೀಸ್‌ ತತ್ವವನ್ನಾಗಲೀ ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವುಗಳ ಆಧಾರಿತ ಸಮಸ್ಯೆಗಳನ್ನು ಬಿಡಿಸಿದರೆ ಪರಿಕಲ್ಪನಾ ತಿಳುವಳಿಕೆ ಹೆಚ್ಚುತ್ತದೆ.

    3) ಒಂದು ಅಧ್ಯಾಯ ಅಥವಾ ವಿಷಯವನ್ನು ಓದಿದ ನಂತರ, ಸ್ವಯಂ ಪ್ರಶ್ನಿಸುವ (ಸೆಲ್ಪ್‌ ಕ್ವೆಶ್ಚನಿಂಗ್)‌ ಕ್ರಮವನ್ನು ಅನುಸರಿಸಬೇಕು. ಇದು ಹೇಗೆ? ಏಕೆ? ಮತ್ತು ಹೀಗೇಕೆ ಆಗಬಾರದು? ಎಂದು ಪ್ರಶ್ನಿಸಿಕೊಂಡು, ಆ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಪ್ರಯತ್ನಿಸಬೇಕು. ತಿಳಿಯದ ಪಕ್ಷದಲ್ಲಿ, ಅಧ್ಯಾಪಕರಿಂದ ಉತ್ತರವನ್ನು ಪಡೆಯಬೇಕು. ಇದರಿಂದ ಜ್ಞಾನ ವೃದ್ಧಿಯಾಗಿ, ಗ್ರಹಿಕೆಯ ಮಟ್ಟವು ಹೆಚ್ಚುತ್ತದೆ.

    4) ಸ್ವಯಂ ಕಲಿಕಾ ( ಸೆಲ್ಪ್‌ ಲರ್ನಿಂಗ್)‌ ಪದ್ದತಿಯನ್ನು ರೂಢಿಸಿಕೊಳ್ಳಬೇಕು. ಪ್ರಾರಂಭದಲ್ಲಿ ಕಠಿಣ ಅನಿಸಿದರೂ ಸಹ ಕ್ರಮೇಣ ಜ್ಞಾನಾರ್ಜನೆಗೆ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಈ ಪದ್ದತಿ ಹೆಚ್ಚು ಪ್ರಯೋಜನಕಾರಿ.

    5) ಮೆಮೊರಿಯಿಂದ ಮಾಹಿತಿಯನ್ನು ಹಿಂಪಡೆಯಲು ಪ್ರಯತ್ನಿಸಬೇಕು. ಪ್ರಮುಖವಾದ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು.

    6) ಸ್ನೇಹಿತರ ಜೊತೆ ಶೈಕ್ಷಣಿಕ ಚರ್ಚೆಗಳಲ್ಲಿ ಭಾಗವಹಿಸಬೇಕು.

    ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ತಮ ಗುಣಮಟ್ಟದ ವಿಜ್ಞಾನ ಶಿಕ್ಷಣವು ಜಗತ್ತಿನ ಉತ್ಕೃಷ್ಟ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ದೈನಂದಿನ ಜೀವನದಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು ಸಕ್ರಿಯಗೊಳಿಸುತ್ತದೆ.

    ಪ್ರಸ್ತುತ ಪರಿಸ್ಥಿತಿ

    ವಿಪರ್ಯಾಸದ ಸಂಗತಿಯೆಂದರೆ, ವಿಜ್ಞಾನದಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಸಹ, ಇತ್ತೀಚಿನ ವರ್ಷಗಳಲ್ಲಿ ಪದವಿ ಹಂತದಲ್ಲಿ ಅಧ್ಯಯನಕ್ಕಾಗಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ಈ ವಿಷಯ ನಿಜವಾಗಲೂ ಆತಂಕಕಾರಿ ವಿಷಯ. ಮೂಲ ವಿಜ್ಞಾನದ (ಬೇಸಿಕ್ ಸೈನ್ಸ್)‌ ವಿಷಯಗಳ ಬಗ್ಗೆ ಒಲವು ಕಡಿಮೆಯಾಗಲು ಹಲವಾರು ಕಾರಣಗಳಿವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ ಈ ವಿಷಯಗಳು ಕಲಾ ವಿಷಯಗಳಿಗೆ ಹೋಲಿಸಿದರೆ ಕಠಿಣ, ಅಧ್ಯಯನ ಮಾಡಲು ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಬದ್ಧರಾಗಿರಬೇಕಾಗುತ್ತದೆ, ಗ್ರಹಿಕೆಯು ಕಷ್ಟಕರ, ಇತರರಿಗಿಂತ ಬುದ್ದಿವಂತರಾಗಿರಬೇಕು ಎಂಬ ತಪ್ಪು ಕಲ್ಪನೆಗಳು ವಿದ್ಯಾರ್ಥಿಗಳಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ಮೂಡಿವೆ.

    ವೃತ್ತಿಪರ ಕೋರ್ಸುಗಳಂತೆ (ಉದಾಹರಣೆಗೆ ಎಂಜಿನಿಯರಿಂಗ್)‌ ಮೂಲ ವಿಜ್ಞಾನದ ವೃತ್ತಿಯು ಲಾಭದಾಯಕವಲ್ಲ, ಉದ್ಯೋಗ ಸಿಗುವುದು ಕಷ್ಟ ಎಂಬ ಋಣಾತ್ಮಕ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಮೂಡಿದೆ. ಈ ಚಿಂತನೆಗಳು ಸರಿಯಲ್ಲ. ಈ ಪರಿಸ್ಥಿತಿ ಉಂಟಾಗಲು ಬಹುಶಃ ಈಗ ಹೆಚ್ಚಿನ ಮಟ್ಟದಲ್ಲಿ ಅನುಸರಿಸುತ್ತಿರುವ ಕಂಠಪಾಠ ಪದ್ದತಿಯು ಕಾರಣವೆಂದು ಹೇಳಬಹುದು. ಹಲವಾರು ವರ್ಷಗಳಿಂದ ಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಗಿತ್ತಿರುವುದರಿಂದ, ನೈಪುಣ್ಯತೆ ಹೊಂದಿರುವ ವಿಜ್ಞಾನದ ಶಿಕ್ಷಕರ ಕೊರತೆಯು ಸಹ ಕಾರಣವಾಗಿದೆ ಎಂದು ಹೇಳಬಹುದು. ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಅನುಕೂಲಕರವಾದ ವಾತಾವರಣ ಇಳಿಮುಖವಾಗುತ್ತಿರುವ ಪ್ರವೃತ್ತಿಯು ಕಾರಣವಿರಬಹುದು. ಹೀಗೆ ಮುಂದುವರಿದರೆ, ಭವಿಷ್ಯದಲ್ಲಿ ಎಲ್ಲಾ ಹಂತಗಳಲ್ಲೂ (ಪ್ರೈಮರಿಯಿಂದ ಸ್ನಾತಕೋತ್ತರ ಹಂತದ ವರೆವಿಗೆ) ನುರಿತ ಮತ್ತು ನೈಪುಣ್ಯತೆ ಹೊಂದಿರುವ ವಿಜ್ಞಾನದ ಶಿಕ್ಷಕರ ಕೊರತೆ ತೀವ್ರವಾಗುವುದರಲ್ಲಿ ಸಂಶಯವೇ ಇಲ್ಲ. ಪರಿಸ್ಥಿತಿಯು ಇನ್ನೂ ಹದಗೆಡುತ್ತದೆ. ಆದ್ದರಿಂದ ಮೂಲ ವಿಜ್ಞಾನದ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದ ಬಗ್ಗೆ ಗಂಭೀರವಾಗಿ ಅವಲೋಕಿಸಿ, ಪ್ರೋತ್ಸಾಹಕಾರಿ ಕ್ರಮಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ, ಹಿಂದಿನ ದಿನಗಳಲ್ಲಿದ್ದಂತ ವಿಜ್ಞಾನ ಶಿಕ್ಷಣದ ದಿವ್ಯತೆಯನ್ನು ಪುನಃ ಸ್ಥಾಪನೆ ಮಾಡಬೇಕಾಗಿದೆ.

    photos courtesy: unsplash.com

    ಎಲ್ಲಾದರು ಇರು ಎಂತಾದರು ಇರು ಕನ್ನಡಿಗನಾಗಿ  ಹೆಮ್ಮೆಯಿಂದ  ಇರು

    ಇಂದು ನವೆಂಬರ್ 1,    ವಿಶ್ವಾದ್ಯಂತ  ಕನ್ನಡಿಗರಿಗೆಲ್ಲರಿಗೂ   ಸಂಭ್ರಮದ ದಿನ.    ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ಅಖಂಡ  ರಾಜ್ಯವನ್ನಾಗಿ  ಘೋಷಣೆ ಮಾಡಿದ  ಸುದಿನ.  1956ರ ನವೆಂಬರ್ 1ರಂದು  ಮೈಸೂರು ರಾಜ್ಯವು(ಈಗಿನ ಕರ್ನಾಟಕ) ನಿರ್ಮಾಣವಾದುದರ ಸಂಕೇತವಾಗಿ ಅಂದಿನಿಂದ  ಕನ್ನಡ  ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ  ಆಚರಿಸಲಾಗುತ್ತದೆ.    ಸುಮಾರು 2,೦೦೦ ವರ್ಷಗಳಿಗಿಂತಲೂ ಮಿಗಿಲಾದ ಇತಿಹಾಸ ಇರುವ ಕನ್ನಡ ನಾಡು  ನುಡಿಯು   ಕಲೆ,  ಸಾಹಿತ್ಯ, ಸಂಸ್ಕೃತಿ,     ಶಿಕ್ಷಣ,  ಕ್ರೀಡೆ,  ವಾಸ್ತುಶಿಲ್ಪ, ವಾಣಿಜ್ಯ,  ಆರ್ಥಿಕತೆ, ಶಿಲ್ಪಕಲೆ,  ಪ್ರವಾಸ,  ವಿಜ್ಞಾನ,  ತಂತ್ರಜ್ಞಾನ, ಅನೇಕ  ವಿಷಯಗಳಲ್ಲಿ  ರಾಷ್ಟ್ರ ಮಾತ್ರವಲ್ಲ  ವಿಶ್ವದಲ್ಲಿಯೇ  ಒಂದು ವಿಶೇಷ ಸ್ಥಾನಮಾನ ಹೊಂದಿದೆ.    ಕನ್ನಡ ನಾಡಿನ   ವಿಶೇಷತೆಗಳು, ಸಾಧನೆಗಳು  ಒಂದೆರಡಲ್ಲ, ನೂರಾರು.  ಅವುಗಳಲ್ಲಿ  ಕೆಲವೊಂದನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.  ಅವುಗಳನ್ನು ಒಂದೊಂದಾಗಿ ತಿಳಿಯುತ್ತಾ ಹೋದಂತೆ     ಪ್ರತಿಯೊಬ್ಬ ಕನ್ನಡಿಗನಲ್ಲಿಯೂ   ಕನ್ನಡಿಗನಾಗಿ ಹುಟ್ಟಿರುವುದಕ್ಕೆ  ಅಭಿಮಾನ ತನ್ನಿಂತಾನೇ ಮೂಡಿಬರುತ್ತದೆ.  ಇದೇ  ಅಭಿಮಾನದಲ್ಲಿ  ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರವಲ್ಲ ಪ್ರತಿ ದಿನ, ಪ್ರತಿ ಕ್ಷಣವು ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಸಂಭ್ರಮಿಸಬಹುದು.

    • ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ 99.99 % ಪರಿಪೂರ್ಣವಾಗಿರುವ ಭಾಷೆ ಎಂದು ಗುರುತಿಸಲ್ಪಟ್ಟಿರುವ  ಭಾಷೆ  ಕನ್ನಡ.
    • ಪ್ರಾಚೀನವಾದ ಹಲ್ಮಿಡಿ ಶಾಸನದಲ್ಲಿ  ಕಾಣುವ  ಕನ್ನಡ   ಲಿಪಿಯು     ಕ್ರಿ.ಶ 450 ರ   ಸಮಯದಲ್ಲೇ   ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುವುದನ್ನು  ದೃಢಪಡಿಸುತ್ತದೆ.
    • ಎರಡನೇ ಶತಮಾನದಷ್ಟು ಹಿಂದೆಯೇ ಕನ್ನಡ ಭಾಷೆ ಗ್ರೀಸ್ ದೇಶದವರೆಗೂ ತನ್ನ ಕಂಪನ್ನು ಬೀರಿತ್ತು; ಇದಕ್ಕೆ ಸಾಕ್ಷಿ ಎನ್ನುವಂತೆ ಚಾರಿಯಟ್ ಮೈಮ್ (Charition mime) ಎಂಬ ಎರಡನೇ ಶತಮಾನದ ಗ್ರೀಕ್ ನಾಟಕವೊಂದರಲ್ಲಿ  ಕನ್ನಡ ನುಡಿಗಟ್ಟುಗಳನ್ನು ಬಳಸಲಾಗಿತ್ತು.
    • ಜಗತ್ತಿನಲ್ಲಿರುವ ಒಟ್ಟು  7117 ಭಾಷೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ 30 ನೇ ಸ್ಥಾನದಲ್ಲಿರುವ ಭಾಷೆ ಕನ್ನಡ.
    • ಜರ್ಮನಿಯ ರೆವರೆಂಡ್ ಎಫ್. ಕಿಟ್ಟೆಲ್,    1894 ರಲ್ಲಿ ಭಾರತೀಯ ಉಪಖಂಡದ ಇತಿಹಾಸ,  ಸಂಸ್ಕೃತಿ, ಭಾಷೆ, ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಲು  ಆಯ್ಕೆಮಾಡಿಕೊಂಡಿರುವುದು ಕನ್ನಡನಾಡು  ಮತ್ತು ಅವರು ನಿಘಂಟು ರಚಿಸಿರುವ  ಭಾರತೀಯ ಏಕೈಕ  ಭಾಷೆ ಕನ್ನಡ.
    • ಭಾರತ ಸರ್ಕಾರದಿಂದ  ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಪಡೆದಿರುವ 6 ಭಾಷೆಗಳಲ್ಲಿ ಕನ್ನಡವೂ ಒಂದು.
    • ಭಾರತದಲ್ಲಿ ಅತಿ ಹೆಚ್ಚು  ಜ್ಞಾನಪೀಠ  ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ   ಸಾಹಿತ್ಯ ದಿಗ್ಗಜರನ್ನು ಹೊಂದಿರುವ ರಾಜ್ಯ ಕರ್ನಾಟಕ (ಕುವೆಂಪು,  ಶ್ರೀ ರಾಮಾಯಣ ದರ್ಶನಂ-1967; ದ. ರಾ. ಬೇಂದ್ರ, ನಾಕುತಂತಿ – 1973; ಕೆ. ಶಿವರಾಮ ಕಾರಂತ, ಮೂಕಜ್ಜಿಯ ಕನಸುಗಳು – 1977; ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1893; ವಿ. ಕೃ. ಗೋಕಾಕ, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1990; ಯು. ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯಕ್ಕೆ ಸಮಗ್ರ – 1994;  ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ, ನಾಟಕಗಳು – 1998;  ಚಂದ್ರಶೇಖರ ಕಂಬಾರ – ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ  -2010).
    • ವಿಕಿಪೀಡಿಯ ವಿಶ್ವಕೋಶ ಲಾಂಚನದಲ್ಲಿ ಸ್ಥಾನ ಪಡೆದಿರುವ ಜಗತ್ತಿನ  ಭಾಷೆಗಳಲ್ಲಿ ಕನ್ನಡವು ಒಂದು.
    • ಜಗತ್ಪ್ರಸಿದ್ಧ  ವಚನ ಸಾಹಿತ್ಯ ಮತ್ತು   ದಾಸ ಸಾಹಿತ್ಯ ಪರಂಪರೆಯು ಬೆಳೆದುಬಂದಿರುವ ತಾಣ ಕನ್ನಡ ನಾಡು.
    • ತಾಜ್ ಮಹಲ್ ನಂತರ ಭಾರತದ  ಅತ್ಯಂತ ಅತೀ  ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ  ತಾಣ  ಕೃಷ್ಣರಾಜೇಂದ್ರ ಒಡೆಯರು  ನಿರ್ಮಿಸಿದ ಮೈಸೂರು ಅರಮನೆ.
    • 57 ಅಡಿ ಎತ್ತರವಿದ್ದು,  ಸುಮಾರು  30 ಕಿ.ಮೀ ದೂರದಿಂದಲೂ   ನೋಡಬಹುದಾದ  ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆ ಇರುವುದು ಕರ್ನಾಟಕದ  ಶ್ರವಣಬೆಳಗೋಳದಲ್ಲಿ.
    • ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುವ  ಮತ್ತು  “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ 37 ಮೀಟರ್  ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುವ  ವಿಶಿಷ್ಟ  ವಾಸ್ತುಶೈಲಿಯ ವಿಶ್ವದ ಏಕೈಕ  ಕಟ್ಟಡ ಮತ್ತು   ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್   ಬಿಜಾಪುರದ (ವಿಜಯಪುರ) ಗೋಲ ಗುಮ್ಮಟ.
    • ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಬಳಿಯ ನಿಡಗೋಡು ಗ್ರಾಮದಲ್ಲಿರುವ  ಸುಮಾರು 1,493 ಅಡಿಗಳ ಎತ್ತರದಿಂದ ಧುಮುಕುವ ಕುಂಚಿಕಲ್ ಜಲಪಾತವು   ಭಾರತದ ಅತ್ಯಂತ ಎತ್ತರದ ಜಲಪಾತವಾಗಿದೆ.
    • ಭವ್ಯವಾದ ಜೋಗ ಜಲಪಾತವೂ ಒಳಗೊಂಡು ಸುಮಾರು 5೦೦ ಜಲಪಾತಗಳನ್ನು ಹೊಂದಿರುವ   ಸೌಂದರ್ಯದ ಬೀಡು ಎಂದು ಗುರುತಿಸಿಕೊಂಡಿರುವ ರಾಜ್ಯ ಕರ್ನಾಟಕ.
    • ಕರ್ನಾಟಕವು ಹಂಪಿ,  ಪಟ್ಟದಕಲ್ಲು ಮತ್ತು ಜೀವವೈವಿಧ್ಯತೆಯ ಸ್ವರ್ಗ  ಪಶ್ಚಿಮ ಘಟ್ಟಗಳು ಸೇರಿದಂತೆ ಹಲವಾರು UNESCO ವಿಶ್ವ ಪರಂಪರೆಯ ತಾಣಗಳಿಗೆ ನೆಲೆಯಾಗಿದೆ.
    • ‘ಭಾರತೀಯ ಶಿಲ್ಪಕಲೆಯ ತೊಟ್ಟಿಲು’ ಎಂದು ಖ್ಯಾತಿ ಹೊಂದಿರುವ ಪ್ರವಾಸಿ ತಾಣ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ   ಐಹೊಳೆ.
    • ರಾಷ್ಟ್ರೀಯ ಪ್ರಾಣಿ   ಹುಲಿ  ಅತಿ  ಹೆಚ್ಚು ಸಂಖ್ಯೆಯಲ್ಲಿರುವ  ಭಾರತದ  ಎರಡನೇ  ರಾಜ್ಯ ಕರ್ನಾಟಕ.
    • ನಾಯಕ ನಟನಾಗಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ  ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಏಕೈಕ ಸಿನಿಮಾ ತಾರೆ  ಡಾ. ರಾಜಕುಮಾರ್.
    • ನೀರೊಳಗಿನ ಚಿತ್ರೀಕರಣ ಮಾಡಿದ ಮೊದಲ ಭಾರತೀಯ ಚಿತ್ರ  ಶಂಕರ್ ನಾಗ್ ನಿರ್ದೇಶನದ ‘ಒಂದು ಮುತ್ತಿನ ಕಥೆ’.
    • ಭಾರತದ ಅತಿದೊಡ್ಡ ಕಚ್ಚಾ ರೇಷ್ಮೆ ಉತ್ಪಾದನಾ ಘಟಕಗಳ ನೆಲೆ ಎಂದು ಗುರುತಿಸಿಕೊಂಡಿರುವ ರಾಜ್ಯ  ಕರ್ನಾಟಕ;  ಪೇಟೆಂಟ್ ಪಡೆದಿರುವ   ಮೈಸೂರು ರೇಷ್ಮೆ ಜಗತ್ತಿನ ಅತ್ಯಂತ ಉತ್ಕೃಷ್ಟ ರೇಷ್ಮೆಗಳಲ್ಲಿ ಒಂದು ಎಂದು ಮನ್ನಣೆ ಪಡೆದಿದೆ.
    • ಭಾರತದ ರಾಷ್ಟ್ರ ಧ್ವಜಗಳನ್ನು ತಯಾರಿಸಲು ಮತ್ತು ಪೂರೈಸಲು ಸರ್ಕಾರದ ಅಧಿಕೃತ ಅನುಮತಿಯನ್ನು ಹೊಂದಿರುವ ಭಾರತದ ಏಕೈಕ ಘಟಕ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ.
    • ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಜನಪ್ರಿಯ ಚಲನಚಿತ್ರ ಎರಡಕ್ಕೂ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಭಾರತದ   ಏಕೈಕ ನಟ ಮತ್ತು ನಿರ್ದೇಶಕ  ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಒಬ್ಬ ಕನ್ನಡಿಗ.
    • ಭಾರತದಲ್ಲಿನ ಎಲ್ಲಾ ಚುನಾವಣೆಗಳಿಗೆ ಬಳಸಲಾಗುವ ಅಳಿಸಲಾಗದ ಕಪ್ಪು ಶಾಯಿಯನ್ನು ತಯಾರಿಸಲು ಅಧಿಕಾರ ಹೊಂದಿರುವ ಏಕೈಕ ಸ್ಥಳ ಮೈಸೂರಿನಲ್ಲಿರುವ  ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್.
    • 1780 ರ ದಶಕದಲ್ಲಿ,  ಟಿಪ್ಪು ಸುಲ್ತಾನ್ ಮತ್ತು ಹೈದರ್ ಆಲಿ ಆಳ್ವಿಕೆಯ ಕಾಲದಲ್ಲಿ ಲೋಹ-ಸಿಲಿಂಡರ್ ಮತ್ತು ಕಬ್ಬಿಣ-ಕೇಸ್ಡ್ ರಾಕೆಟ್ ಫಿರಂಗಿಗಳನ್ನು ಪ್ರಥಮ ಬಾರಿಗೆ ಅಭಿವೃದ್ಧಿಪಡಿಸಿದ ನಾಡು ಕನ್ನಡ ನಾಡು.
    • ಭಾರತೀಯ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು  ಅತ್ಯಂತ ಶ್ರೀಮಂತ ಸಾಮ್ರಾಜ್ಯಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದ್ದು,  ಅಲ್ಲಿ ವ್ಯಾಪಾರಿಗಳು ಚಿನ್ನ ಮತ್ತು ಅಮೂಲ್ಯ ರತ್ನಗಳನ್ನು ಸಂತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು.
    hampi Photo by Anton Polyakov from Pexels
    • ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ   ರಾಣಿ ಅಬ್ಬಕ್ಕ ‘ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ’. 
    • ಭಾರತೀಯ ಸೇನೆಯು ಕಂಡ  ಅತ್ಯಂತ ಶ್ರೇಷ್ಠ ಮಿಲಿಟರಿ ಅಧಿಕಾರಿ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಕಾಲಾಳುಪಡೆ ದಳಕ್ಕೆ ಯುದ್ಧ ಮಾಡಿದ ಏಕೈಕ ಭಾರತೀಯ  ಕರ್ನಾಟಕದ  ಜನರಲ್ ಕೆ.  ಎಸ್. ತಿಮ್ಮಯ್ಯ.
    • ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ (ಸಿ-ಇನ್-ಸಿ) ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ.
    • ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ (ಐಟಿ) ರಫ್ತು ಮಾಡುವ ‘ಭಾರತದ ಸಿಲಿಕಾನ್ ವ್ಯಾಲಿ”  ಹಾಗೂ  “ಭಾರತದ ಐಟಿ ರಾಜಧಾನಿ’ ಎಂದು ಪರಿಗಣಿಸಲ್ಪಟ್ಟ  ದೇಶದ ಏಕೈಕ ನಗರ ಬೆಂಗಳೂರು.
    By KshitizBathwal / wikipedia
    • ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ 3 ನೇ  ಸ್ಥಾನದಲ್ಲಿರುವ .’ದಕ್ಷಿಣದ ಚಿರಾಪುಂಜಿ’  ಎಂದು ಗುರುತಿಸಿ ಸಲ್ಪಟ್ಟ ಪ್ರದೇಶ ಕರ್ನಾಟಕದ  ಆಗುಂಬೆ. 
    • ಭಾರತದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು  ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ಉತ್ಪಾದಿಸುವ ರಾಜ್ಯ ಕರ್ನಾಟಕ.
    • ಅತಿ  ಹೆಚ್ಚು  ರಾಷ್ಟ್ರೀಕೃತ  ಬ್ಯಾಂಕ್ ಗಳನ್ನು  ಸ್ಥಾಪಿಸಿ  ‘ಭಾರತದ ಬ್ಯಾಂಕಿಂಗ್ ತೊಟ್ಟಿಲು’ ಎಂದು ಮನ್ನಣೆ ಪಡೆದಿರುವ ರಾಜ್ಯ ಕರ್ನಾಟಕ (ದೇಶದ ಏಳು ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು  ಜನ್ಮ ಪಡೆದಿರುವುದು  ಕರ್ನಾಟಕದಲ್ಲಿ -ಇತ್ತೀಚಿನ ವರ್ಷಗಳಲ್ಲಿ ಕೆಲವು ಬ್ಯಾಂಕ್‌ಗಳು ವಿಲೀನಗೊಂಡಿವೆ).
    • ವಿಶ್ವ ದಾಖಲೆಯ  ಮಟ್ಟದ ವೇಗದಲ್ಲಿ  ಓಡಿ    ‘ಭಾರತದ ಉಸೇನ್ ಬೋಲ್ಟ್’  ಎಂದು ಹೆಸರು ಗಳಿಸಿದ  ಏಕೈಕ ವ್ಯಕ್ತಿ ಮೂಡುಬಿದಿರೆಯ ಕಂಬಳ ಓಟಗಾರ  ಶ್ರೀನಿವಾಸ ಗೌಡ.
    • ಜಗತ್ತಿನಲ್ಲಿ 25 ಬಾರಿ ಮರುಮುದ್ರಣಗೊಂಡ ಏಕೈಕ ಕವನ ಸಂಕಲನಗಳ ಪುಸ್ತಕ ನಾಡೋಜ  ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ‘ ನಿತ್ಯೋತ್ಸವ ‘.
    • ಒಂದನೇ ಸ್ಥಾನದಲ್ಲಿರುವ ಭಾರತದ ಶೈಕ್ಷಣಿಕ ಕೇಂದ್ರ (Educational hub) ಎಂದು ಅಂತರರಾಷ್ಟ್ರೀಯ ಮನ್ನಣೆ ಪಡೆದ ನಗರ ಬೆಂಗಳೂರು.
    • “ಜಗತ್ತಿನ ಅತ್ಯಂತ ಜೀವವೈವಿಧ್ಯತೆಯ ತಾಣಗಳಲ್ಲಿ  ಒಂದಾಗಿರುವ  ಪಶ್ಚಿಮ ಘಟ್ಟಗಳ (ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಮೀಸಲು ಕಾಡುಗಳು ಸೇರಿದಂತೆ) ವಿಶ್ವ ಪರಂಪರೆಯ ಹತ್ತು  ತಾಣಗಳಿರುವುದು ಕರ್ನಾಟಕದಲ್ಲಿ.
    • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್ಸಿ.),  ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ಇಸ್ರೋ), ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿ.ಎಫ್.ಟಿ. ಆರ್. ಐ.),  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್), ಒಟ್ಟು ಸುಮಾರು 50 ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹೆಸರು ಗಳಿಸಿರುವ ಸಂಶೋಧನಾ ಕೇಂದ್ರಗಳು ಇರುವುದು ಕರ್ನಾಟಕದಲ್ಲಿ.
    • ಸ್ವಾದಿಷ್ಟದಲ್ಲಿ ದೇಶ ವಿದೇಶಗಳಲ್ಲಿ  ಪ್ರಸಿದ್ಧವಾಗಿರುವ ಕೋಸಂಬರಿ ಮಸಾಲೆದೋಸೆ, ಮಂಗಳೂರು ಬಜ್ಜಿ, ಮದ್ದೂರುವಡೆ, ರಾಗಿರೊಟ್ಟಿ, ಮೈಸೂರುಪಾಕ್,, ಧಾರವಾಡದ ಫೇಡೆ (ಪೇಡಾ), ಬೆಳಗಾವಿ ಕುಂದಾ, ಹಲಸಿನ ಹಪ್ಪಳ, ಬಿಸಿಬೇಳೆಭಾತ್ ಅಡುಗೆಗಳು ಅನ್ವೇಷಿಸಲ್ಪಟ್ಟ ರಾಜ್ಯ ಕರ್ನಾಟಕ.
    • ಜಿಡಿಪಿಯಲ್ಲಿ  ಭಾರತದಲ್ಲಿ ಮೂರನೇ ಶ್ರೀಮಂತ ರಾಜ್ಯ  ಕರ್ನಾಟಕ (₹20.5 trillion).
    • ವಿಶಿಷ್ಟ ಶೈಲಿ ಮತ್ತು ರಂಗಭೂಮಿ ತಾಂತ್ರಿಕತೆಯೊಂದಿಗೆ  ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಮೇಕಪ್    ಸಮ್ಮಿಶ್ರಣದಿಂದ ಕೂಡಿರುವ ವಿಶ್ವದ ಏಕೈಕ ಕಲೆ  ಕರ್ನಾಟಕದ  ಯಕ್ಷಗಾನ. 
    • ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರ  ‘ಆಕಾಶವಾಣಿ’ಯನ್ನು ಸ್ಥಾಪಿಸಿದ್ದು ಕರ್ನಾಟಕದ ಮೈಸೂರಿನಲ್ಲಿ (1936 ರಲ್ಲಿ ಎಂ. ವಿ. ಗೋಪಾಲಸ್ವಾಮಿ).
    • ಭಾರತ ವಿಶ್ವದ ಅತಿದೊಡ್ಡ ಚಲನಚಿತ್ರಗಳ ನಿರ್ಮಾಣ ಮಾಡುವ ದೇಶ; 2019ರಲ್ಲಿಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿರುವ ರಾಜ್ಯ  ಕರ್ನಾಟಕ.
    • ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ (ಇವಿಎಂ) ಗಳನ್ನು ತಯಾರಿಸುವ  ಸಂಸ್ಥೆ ಕರ್ನಾಟಕದಲ್ಲಿರುವ  ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್.
    • ಸರ್ ಎಂ. ವಿಶ್ವೇಶ್ವರಯ ಅವರ ಜನ್ಮ ದಿನಾಚರಣೆಯನ್ನು (ಸೆಪ್ಟೆಂಬರ್ 15) ರಾಷ್ಟ್ರೀಯ ಇಂಜಿನಿಯರ್ಸ್  ದಿನಾಚರಣೆ ಎಂದು  ಆಚರಿಸಲಾಗುತ್ತದೆ.
    • ಭಾರತ ಕ್ರಿಕೆಟ್ ತಂಡಕ್ಕೆ  ಅತಿ ಹೆಚ್ಚು ಆಟಗಾರರನ್ನು  ನೀಡಿರುವ  ರಾಜ್ಯ ಕರ್ನಾಟಕ.
    • ವಿಧಾನಸೌಧ ಭಾರತದ ಅತಿದೊಡ್ಡ ಶಾಸಕಾಂಗ ಕಟ್ಟಡವಾಗಿದೆ.
    • ಕರ್ನಾಟಕ ರಾಜ್ಯದ ಸಾಫ್ಟ್‌ವೇರ್ ಉದ್ಯಮವು ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಸಾಫ್ಟ್‌ವೇರ್ ರಫ್ತಿನಿಂದ ಬರುವ ಆದಾಯ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ   ರಾಜ್ಯ ಕರ್ನಾಟಕ.
    • 1999 ರಲ್ಲಿ ಪಾಕಿಸ್ತಾನದ ವಿರುದ್ಧ ಒಂದೇ  ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಮತ್ತು ಏಕೈಕ ಭಾರತೀಯ ಮತ್ತು  ಜಗತ್ತಿನ ಎರಡನೇ ಬೌಲರ್ ಸಾಧಿಸಿರುವ  ಕ್ರಿಕೇಟಿಗ ಅನಿಲ್ ಕುಂಬ್ಳೆ ಕನ್ನಡಿಗ.
    • ಜಾಗತಿಕವಾಗಿ ‘ಸೈನ್ಸ್ ಕೆರಿಯರ್ಸ್ ಟಾಪ್ 20 ಉದ್ಯೋಗದಾತರು’ ಪಟ್ಟಿಯಲ್ಲಿ ಅಗ್ರ ಐದು ಬಯೋಟೆಕ್ ಉದ್ಯೋಗದಾತರಲ್ಲಿ ಸ್ಥಾನ ಪಡೆದಿರುವ ಬಯೋಕಾನ್  ಲಿಮಿಟೆಡ್ ಸಂಸ್ಥೆ ಇರುವುದು ಬೆಂಗಳೂರಿನಲ್ಲಿ ಮತ್ತು  ಅದರ ಸಂಸ್ಥಾಪಕಿ   ಕಿರಣ್ ಮಜುಂದಾರ್-ಶಾ ಅವರು ಶಿಕ್ಷಣ ಪಡೆದಿರುವುದು ಕರ್ನಾಟಕದಲ್ಲಿ. 
    • ಇನ್ಫೋಸಿಸ್ ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾಗಿದೆ.
    • ವಿದ್ಯುತ್ ಬೀದಿ ದೀಪಗಳನ್ನು ಬಳಸಿದ ಏಷ್ಯಾದ ಮೊದಲ ನಗರ ಬೆಂಗಳೂರು.
    • ಸರ್ ಎಂ. ವಿಶ್ವೇಶ್ವರಯ್ಯ; ಭೀಮ್ಸೆನ್ ಜೋಶಿ; ಪ್ರೊ. ಸಿ.ಎನ್.ಆರ್. ರಾವ್ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಗೆ ಭಾಜನರಾದ ಕರ್ನಾಟಕದ ಶ್ರೇಷ್ಠ  ಸಾಧಕರು. 

                ಹೀಗೆ ಕನ್ನಡ  ನಾಡು ನುಡಿಯ  ವಿಶಿಷ್ಟತೆ,  ಸಾಧನೆ, ಸಾಧಕರುಗಳ ಪಟ್ಟಿ ಮಾಡುತ್ತಾ ಹೋದರೆ   ಬೆಳೆಯುತ್ತಾ ಹೋಗುತ್ತದೆ. ರಾಷ್ಟ್ರಕವಿ ಕುವೆಂಪು ಅವರ   ಕವನದ ಸಾಲುಗಳು ಕನ್ನಡಿಗರೆಲ್ಲರಿಗೂ ಎಂದೆಂದಿಗೂ ಸ್ಪರ್ತಿದಾಯಕ.

    “ಎಲ್ಲಾದರು ಇರು

    ಎಂತಾದರು ಇರು

    ಎಂದೆಂದಿಗೂ ನೀ ಕನ್ನಡವಾಗಿರು

    ಕನ್ನಡವೇ ಸತ್ಯ

    ಕನ್ನಡವೇ ನಿತ್ಯ”

    ನ್ಯೂಟನ್‌ ತೆರೆದಪ್ರಪಂಚ

    ಮಾಧ್ಯಮಿಕ ಮತ್ತು ಹೈಯರ್‌ ಸೆಕೆಂಡರಿ ತರಗತಿಗಳಲ್ಲಿ ನಾವೆಲ್ಲರೂ ನ್ಯೂಟನ್, ಆತನ ಚಲನೆಯ ನಿಯಮಗಳು ಮತ್ತು ಗುರುತ್ವಾಕರ್ಷಣೆ ಸಿದ್ಧಾಂತಗಳ ಬಗ್ಗೆ ಓದಿದ್ದೇವೆ. ಹಾಗಾಗಿ, ಸರ್‌ ಐಸಾಕ್‌ ನ್ಯೂಟನ್‌ ವಿದ್ಯಾರ್ಥಿ ಸಮುದಾಯದಲ್ಲಿ ಚಿರ ಪರಿಚಿತರು. ಹಲವಾರು ಸಾಮಾನ್ಯ ನಾಗರಿಕರೂ ಸಹ ನ್ಯೂಟನ್‌ ಹೆಸರು ಕೇಳಿರುತ್ತಾರೆ. ಶಾಸ್ತ್ರೀಯ ಯಂತ್ರಶಾಸ್ತ್ರದ (ಕ್ಲಾಸಿಕಲ್‌ ಮೆಕಾನಿಕ್ಸ್)‌ ಜನಕನೆಂದು ಖ್ಯಾತಿ ಪಡೆದಿರುವ, ವಿಜ್ಞಾನಕ್ಕೆ, ವಿಶೇಷವಾಗಿ ಭೌತಶಾಸ್ತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿ ಹದಿನೇಳು ಮತ್ತು ಹದಿನೆಂಟನೇ ಶತಮಾನಗಳ ಭೌತಶಾಸ್ತ್ರದ ಅಭಿವೃಧ್ಧಿಗೆ ಕಾರಣೀಭೂತರಾದ ಸರ್‌ ಐಸಾಕ್‌ ನ್ಯೂಟನ್‌ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ.

    ಸರ್‌ ಐಸಾಕ್‌ ನ್ಯೂಟನ್‌ ವಿಶ್ವ ವಿಖ್ಯಾತ, ಪ್ರತಿಭಾವಂತ, ಭೌತಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ರಸವಿದ್ಯೆ (ಅಲ್‌ ಕೆಮಿಸ್ಟ್)‌, ದೇವತಾಶಾಸ್ತ್ರಜ್ಞ (ಥಿಯಾಲಾಜಿಯನ್)‌ ಮತ್ತು ಲೇಖಕ. ಹೀಗೆ ಅನೇಕ ಶಾಸ್ತ್ರಗಳ ಜ್ಞಾನವನ್ನು ಪಡೆದಿದ್ದ ಮಹಾ ವಿದ್ವಾಂಸ (ಬಹುಶ್ರುತ). ಹದಿನೇಳನೇ ಶತಮಾನದ ದ್ವಿತೀಯಾರ್ದ ಮತ್ತು ಹದಿನೆಂಟನೇ ಶತಮಾನದ ಮೊದಲನೇ ತ್ರೈಮಾಸಿಕ ಅವಧಿಯಲ್ಲಿ ಜೀವಿಸಿದ್ದ ಇಂಗ್ಲೆಂಡ್‌ ದೇಶದ ಭೌತಶಾಸ್ತ್ರಜ್ಞ ಮತ್ತು ತತ್ವಜ್ಞಾನಿ (1642-1726). ವಿಚಿತ್ರವೆಂದರೆ, ನ್ಯೂಟನ್‌ ಜೀವಿಸಿದ್ದ ಕಾಲದಲ್ಲಿ ವಿಜ್ಞಾನಿ ಎಂಬ ಪದದ ಬಳಕೆಯಿರಲಿಲ್ಲ. ಎಲ್ಲಾ ವಿಜ್ಞಾನಿಗಳನ್ನು ನೈಸರ್ಗಿಕ ತತ್ವಜ್ಞಾನಿ (ನ್ಯಾಚುರಲ್ ಫಿಲಾಸಫರ್)‌ ಎಂದೇ ಕರೆಯುತ್ತಿದ್ದರು.

    ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇತಿಹಾಸಕಾರ ಮತ್ತು ವಿಜ್ಞಾನದ ತತ್ವಜ್ಞಾನಿ ವಿಲಿಯಮ್‌ ವೆವೆಲ್‌ ಮೊಟ್ಟ ಮೊದಲಿಗೆ 1834 ರಲ್ಲಿ ವಿಜ್ಞಾನಿ ಎಂಬ ಪದವನ್ನು ಬಳಸಿದರು. ಅಂದಿನಿಂದ ವಿಜ್ಞಾನಿ ಎಂಬ ಪದದ ಬಳಕೆ ಪ್ರಾರಂಭವಾಯಿತು. ಮೇಲೆ ತಿಳಿಸಿರುವಂತೆ, ನ್ಯೂಟನ್‌, ಚಲನೆಯ ಮತ್ತು ಗುರುತ್ವಾಕರ್ಷಣೆಯ ನಿಯಮಗಳಿಗೆ, ಆಪ್ಟಿಕ್ಸ್‌ (ದೃಗ್ವಿಜ್ಞಾನ) ಮತ್ತು ಕಲನ ಶಾಸ್ತ್ರಕ್ಕೆ ಖ್ಯಾತಿಯನ್ನು ಪಡೆದ ಭೌತವಿಜ್ಞಾನಿ. ನ್ಯೂಟನ್‌ ರಚಿಸಿರುವ ಭವ್ಯ ಕೃತಿ “ಪ್ರಿನ್ಸಿಫಿಯಾ ಮ್ಯಾಥಮಾಟಿಕ” 1687 ರಲ್ಲಿ ಪ್ರಕಟಗೊಂಡಿತು. ಇದರ ಫಲವಾಗಿ ಪ್ರಪಂಚದಾದ್ಯಂತ, ವಿಶೇಷವಾಗಿ ಯೂರೋಪ್‌ ಖಂಡದಲ್ಲಿ ಜ್ಞಾನೋದಯದ ನವಯುಗಕ್ಕೆ ನಾಂದಿಯಾಯಿತು. ಹಲವಾರು ವರ್ಷಗಳು ನಡೆಸಿದ ಸಂಶೋಧನೆಯ ಫಲವಾಗಿ ಈ ಕೃತಿ ಪ್ರಕಟಗೊಂಡಿತು. ನ್ಯೂಟನ್‌ ಚಲನೆಯ ನಿಯಮಗಳು ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ ಸಂಶಯ ರಹಿತವಾಗಿ ಸ್ಥಾಪನೆಗೊಳ್ಳಲು ಸಾಧ್ಯವಾಯಿತು. ನ್ಯೂಟನ್‌ ರಚಿಸಿದ ಎರಡನೇ ಮಹಾಗ್ರಂಥ “ಆಪ್ಟಿಕ್ಸ್”‌ ನಲ್ಲಿ ಬೆಳಕಿನ ಗುಣಲಕ್ಷಣಗಳನ್ನು ವಿವರಿಸಲಾಗಿದೆ. ರಾಯಲ್‌ ಸೊಸೈಟಿ ಆಫ್‌ ಲಂಡನ್‌ ನ ಅಧ್ಯಕ್ಷರಾಗಿ ಮತ್ತು ರಾಯಲ್‌ ಮಿಂಟ್‌ ನ ಮಾಸ್ಟರ್‌ ಆಗಿ ಕಾರ್ಯನಿರ್ವಹಿಸಿ ಖ್ಯಾತಿಯನ್ನು ಪಡೆದ ನ್ಯೂಟನ್‌ 1726 ರಲ್ಲಿ ಮರಣ ಹೊಂದಿದರು.

    ಆರಂಭಿಕ/ಬಾಲ್ಯ ಜೀವನ:- ದಿನಾಂಕ 25 ಡಿಸೆಂಬರ್‌ 1642 ರಲ್ಲಿ (ಜ್ಯೂಲಿಯನ್‌ ಕ್ಯಾಲೆಂಡರ್)‌ ವೂಲ್ಸ್‌ ಥಾರ್ಪ್‌, ಲಿಂಕನ್‌ ಸೈರ್‌ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅದೇ ವರ್ಷದಲ್ಲಿ (8, ಜನವರಿ 1642) ಗೆಲಿಲಿಯೋ ನಿಧನ ಹೊಂದಿದ್ದರು. ಕೆಲವರ ಅಭಿಪ್ರಾಯವೇನೆಂದರೆ, ಭೌತಶಾಸ್ತ್ರದ ಕ್ಷೇತ್ರದಲ್ಲಿ ನಿರ್ವಾತವನ್ನುಂಟು ಮಾಡದಿರುವ ಇಚ್ಛೆ ಹೊಂದಿದ್ದ ದೇವರು, ಗೆಲಿಲಿಯೋ ನಿಧನರಾದ ವರ್ಷದಲ್ಲಿಯೇ ನ್ಯೂಟನ್‌ ಜನಿಸುವಂತೆ ಆಶೀರ್ವದಿಸಿದ. ಐಸಾಕ್‌ ನ್ಯೂಟನ್‌ (ತಂದೆಯ ಹೆಸರು ಕೂಡ ನ್ಯೂಟನ್)‌ ಮತ್ತು ಹನ್ನ ಆಯ್ ಸ್ಕಾಫ್‌ ನ್ಯೂಟನ್‌ನ ತಂದೆ ಮತ್ತು ತಾಯಿ. ಮಗು ತಾಯಿಯ ಗರ್ಭದಲ್ಲಿರುವಾಗಲೇ, ನ್ಯೂಟನ್‌ ಜನನದ ಮೂರು ತಿಂಗಳು ಮುಂಚೆಯೇ, ಅವನ ತಂದೆ ತೀರಿಕೊಂಡಿದ್ದರು. ಹುಟ್ಟಿದ ಮಗು ಅತಿ ಸಣ್ಣ ಮತ್ತು ಬಹು ದುರ್ಬಲವಾಗಿದ್ದರಿಂದ, ಹುಟ್ಟಿದ ಕೂಡಲೇ ಮಗು ಸಾಯುತ್ತದೆ ಎಂದು ನಿರೀಕ್ಷಿಸಿದ್ದರು. ಮಗುವನ್ನು ದೊಡ್ಡ ಲೋಟದಲ್ಲಿರಿಸಬಹುದಾಗಿತ್ತೆಂಬ ವಿಷಯವನ್ನು ಹಲವು ಕಡೆ ದಾಖಲಿಸಲಾಗಿದೆ. ಆದರೆ ದೇವರ ಇಚ್ಛೆ ಬೇರೆಯೇ ಆಗಿತ್ತು. ನ್ಯೂಟನ್‌ ಎಂಬತೈದು ವರ್ಷಗಳ ಕಾಲ ಬದುಕಿದ್ದರು.

    ನ್ಯೂಟನ್ನನ ತಾಯಿ ಶ್ರೀಮಂತ ವ್ಯಾಪಾರಿ ಬಾರ್ನಾಬಾಸ್‌ ಸ್ಮಿತ್‌ ಎಂಬುವರನ್ನು ನ್ಯೂಟನ್‌ ಜನಿಸಿದ ಎರಡು ವರ್ಷಗಳೊಳಗೆ ಎರಡನೇ ಮದುವೆಯಾದರು. ನ್ಯೂಟನ್‌ನ್ನು ಅವರ ಅಜ್ಜಿಯ ಆರೈಕೆಯಲ್ಲಿ ಬಿಟ್ಟು, ಎರಡನೇ ಗಂಡನ ಜೊತೆಯಲ್ಲಿ ಪಕ್ಕದ ಊರಿಗೆ ಹೊರಟರು. ಇದರಿಂದ ನ್ಯೂಟನ್‌ ತಾಯಿ ತಂದೆಯವರ ಪ್ರೀತಿ ವಿಶ್ವಾಸಗಳಿಂದ ವಂಚಿತರಾದರು. ಇದು ನ್ಯೂಟನ್‌ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರಿತು ಎಂದು ಹಲವರ ಅಭಿಪ್ರಾಯ. 1653 ರಲ್ಲಿ ಮಲ ತಂದೆ ತೀರಿಕೊಳ್ಳುವವರೆವಿಗೂ, ನ್ಯೂಟನ್‌ ಅಜ್ಜಿಯ ಮನೆಯಲ್ಲಿ ತನ್ನ ಬಾಲ್ಯವನ್ನು ಕಳೆದರು.

    ನ್ಯೂಟನ್‌ನ ಪ್ರಾರಂಭಿಕ ಶಿಕ್ಷಣ, ಗ್ರಾಮೀಣ ಶಾಲೆಗಳಲ್ಲಿ ನಡೆಯಿತು. ಗ್ರಾಂಥಮ್‌ನ ಕಿಂಗ್ಸ್‌ ಶಾಲೆಯಲ್ಲಿ ಲ್ಯಾಟಿನ್‌ ಭಾಷೆ, ಗ್ರೀಕ್‌ ಭಾಷೆ ಮತ್ತು ಗಣಿತಶಾಸ್ತ್ರದಲ್ಲಿ ಶಿಕ್ಷಣ ಪಡೆದರು. 1659 ರಲ್ಲಿ, ನ್ಯೂಟನ್‌ನ್ನು ಸ್ವಂತ ಊರಿಗೆ ಕರೆ ತರಲಾಯಿತು. ಅವರ ತಾಯಿಗೆ, ನ್ಯೂಟನ್‌ ರೈತನಾಗಬೇಕೆಂಬ ಆಸೆಯಿತ್ತು. ಆದರೆ ನ್ಯೂಟನ್‌ಗೆ ಅದು ಸುತರಾಂ ಇಷ್ಟವಿರಲಿಲ್ಲ. 1661 ರಲ್ಲಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿಗೆ, 19 ನೇ ವಯಸ್ಸಿನಲ್ಲಿ ಪ್ರವೇಶವನ್ನು ಪಡೆದರು. ಆ ಸಮಯದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅರಿಸ್ಟಾಟಲ್‌ನ ತತ್ವಗಳಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿತ್ತು. ನ್ಯೂಟನ್‌ಗೆ ಇದು ಇಷ್ಟವಾಗದೆ, ಆಧುನಿಕ ತತ್ವಜ್ಞಾನಿಗಳಾದ ಡೆಸ್ಕಾರ್ಟ್‌ಸ್ (ಫ್ರೆಂಚ್, 1596-1650), ಖಗೋಳಶಾಸ್ತ್ರಜ್ಞರಾದ ಗೆಲಿಲಿಯೋ (ಇಟಲಿ, 1564-1642), ಕಾಪರ್‌ ನಿಕಸ್‌ (ಪೋಲಾಂಡ್‌, 1473-1543) ಮತ್ತು ಕೆಪ್ಲರ್‌ (ಜರ್ಮನಿ, 1571-1630) ಇವರುಗಳು ಪ್ರತಿಪಾದಿಸಿದ ಅತ್ಯಾಧುನಿಕ ಅಥವಾ ಸುಧಾರಿತ ವಿಚಾರಗಳ ಬಗ್ಗೆ ಹೆಚ್ಚು ಒಲವನ್ನು ತೋರಿಸಿ, ಈ ವಿಚಾರಗಳ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದರು. 1665 ರಲ್ಲಿ ನ್ಯೂಟನ್‌ ಪದವಿಯನ್ನು ಪಡೆದರು. ದುರದೃಷ್ಟವಶಾತ್‌, ಅದೇ ವರ್ಷದಲ್ಲಿ ಗ್ರೇಟ್‌ ಪ್ಲೇಗ್‌ ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ವಿಶ್ವವಿದ್ಯಾಲಯವನ್ನು ಸುಮಾರು ಹದಿನೆಂಟು ತಿಂಗಳ ಕಾಲ ಮುಚ್ಚಲಾಯಿತು. ಮುಂದಿನ ಎರಡು ವರ್ಷಗಳ ಕಾಲ, ವೂಲ್ಸ್‌ ಥಾರ್ಫ್ ನ ಮನೆಯಲ್ಲಿಯೇ ಕಲನಶಾಸ್ತ್ರ (ಕ್ಯಾಲ್‌ ಕ್ಯುಲಸ್)‌, ಆಪ್ಟಿಕ್ಸ್‌ (ದೃಗ್ವಿಜ್ಞಾನ) ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮಗಳ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸಿದರು.

    ಗುರುತ್ವಾಕರ್ಷಣೆ:- 1687ರಲ್ಲಿ ಮೂಲತಃ ಪ್ರಕಟವಾದ ಫಿಲಾಸಫಿ ನ್ಯಾಚುರಲಿಸ್‌ ಪ್ರಿನ್ಸಿಫಿಯಾ ಮ್ಯಾಥಮ್ಯಾಟಿಕಾನಲ್ಲಿ ಐಸಾಕ್‌ ನ್ಯೂಟನ್‌ ಚಲನೆಯ ಮೂರು ನಿಯಮಗಳನ್ನು ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮವನ್ನು ವಿವರಿಸಿದ್ದಾರೆ. ಗುರುತ್ವಾಕರ್ಷಣೆಯ ನಿಯಮ – ಪ್ರತಿಕಣವು ಬ್ರಹ್ಮಾಂಡದ ಪ್ರತಿಯೊಂದು ಕಣವನ್ನು ಆಕರ್ಷಿಸುತ್ತದೆ ಮತ್ತು ಆಕರ್ಷಿಸುವ ಬಲವು ದ್ರವ್ಯ ರಾಶಿಗಳ ಉತ್ಪನ್ನಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ ಮತ್ತು ಅವುಗಳ ಅಂತರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿರುತ್ತದೆ ಎಂದು ಹೇಳುತ್ತದೆ. ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮವು ಮರದಿಂದ ಸೇಬು ಹೇಗೆ ಕೆಳಗೆ ಬೀಳುತ್ತದೆ ಎಂಬುವದರಿಂದ ಹಿಡಿದು ಚಂದ್ರನು ಭೂಮಿಯ ಸುತ್ತ ಏಕೆ ಸುತ್ತುತ್ತಾನೆ, ಗ್ರಹಗಳು ಸೂರ್ಯನ ಸುತ್ತಲೂ ಏಕೆ ಸುತ್ತುತ್ತವೆ ಎಂಬುವುದರವರೆಗೆ ವಿವರಿಸಬಹುದು. ವಸ್ತುಗಳು ತಮ್ಮ ಎಲ್ಲಾ ದ್ರವ್ಯ ರಾಶಿಯನ್ನು ತಮ್ಮ ಕೇಂದ್ರ ಬಿಂದುವಿನಲ್ಲಿ ಕೇಂದ್ರಿಕರಿಸದಂತೆ ಆಕರ್ಷಿಸುತ್ತವೆ.

    ತನ್ನ ಕುಟುಂಬಕ್ಕೆ ಸೇರಿದ ಸೇಬಿನ ತೋಟದಲ್ಲಿ ಅಡ್ಡಾಡುತ್ತಾ, ಆಳವಾಗಿ ಯೋಚಿಸಿದ ನ್ಯೂಟನ್‌ಗೆ ಗುರುತ್ವಾಕರ್ಷಣೆಯ ಬಲದ ಬಗ್ಗೆ ಕಲ್ಪನೆ ಮೂಡಿತು ಹಾಗೂ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ರೂಪಿಸಲು ಪ್ರೇರೇಪಿಸಿತು. ಸೇಬಿನ ಹಣ್ಣು ಮರದಿಂದ ಲಂಬವಾಗಿ ಭೂಮಿಗೆ ಬೀಳಲು ಕಾರಣವಾದ ಗುರುತ್ವಾಕರ್ಷಣೆಯ ಬಲ, ಚಂದ್ರನನ್ನು ತನ್ನ ಕಕ್ಷೆಯಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿಯೂ ಆಗಿರಬಹುದು ಎಂಬ ಆಲೋಚನೆ ನ್ಯೂಟನ್‌ಗೆ ಬಂದಿತು. ದೂರದ ವಿಲೋಮ ವರ್ಗದಂತೆ ಬಲವು ಕಡಿಮೆಯಾದರೆ, ನಿಜವಾಗಿಯೂ ಚಂದ್ರನ ಕಕ್ಷೆಯ ಅವಧಿಯನ್ನು ಲೆಕ್ಕ ಹಾಕಬಹುದು ಮತ್ತು ಉತ್ತಮ ಒಪ್ಪಂದವನ್ನು ಪಡೆಯಬಹುದೆಂದು ನ್ಯೂಟನ್‌ ತೋರಿಸಿಕೊಟ್ಟರು. ಇದೇ ಬಲವು ಇತರೆ ಕಕ್ಷೆಗಳ ಚಲನೆಗಳಿಗೆ ಕಾರಣವಾಗಿದೆ ಎಂದೂ ನ್ಯೂಟನ್‌ ಊಹಿಸಿದರು ಮತ್ತು ಆದ್ದರಿಂದ, ನಿಯಮವನ್ನು ಸಾರ್ವತ್ರಿಕ ಗುರುತ್ವಾಕರ್ಷಣೆಯೆಂದು ಕರೆದರು.

    ನ್ಯೂಟನ್‌ನ ಚಲನೆಯ ನಿಯಮಗಳ ಪ್ರಕಾರ ವೃತ್ತಾಕಾರದ ಚಲನೆಯ ವಿಶ್ಲೇಷಣೆಯನ್ನು ಮಾಡಿದಾಗ, ವೃತ್ತಾಕಾರದ ಚಲನೆಗೆ ಕೇಂದ್ರಾಭಿಮುಖ ಬಲವು ಅವಶ್ಯಕ ಎಂಬ ಅಂಶ ತಿಳಿಯುತ್ತದೆ. ಯಾವುದೇ ಒಂದು ವಸ್ತುವನ್ನು ಸರಳ ರೇಖಾ ವೃತ್ತದ ಪಥದಿಂದ ವೃತ್ತಾಕಾರದ ಚಲನೆಗೆ ಬದಲಾಯಿಸಿಲು ಕೇಂದ್ರಾಭಿಮುಖ ಬಲವು ಅತ್ಯವಶ್ಯಕ. ಮುಂದುವರೆದು, ಸೂರ್ಯನ ಸುತ್ತಲೂ ದೀರ್ಘವೃತ್ತಾಕಾರದ ಪಥದಲ್ಲಿ ಗ್ರಹಗಳ ಚಲನೆಗೆ ಕಾರಣವಾದ ಕೇಂದ್ರಾಭಿಮುಖ ಬಲವು ಸೂರ್ಯನ ಮತ್ತು ಗ್ರಹಗಳ ದೂರದ ವರ್ಗಕ್ಕೆ ವಿಲೋಮವಾಗಿರುತ್ತದೆ ಎಂಬ ಅಂಶವನ್ನು ಕಂಡುಹಿಡಿದರು. ಅಲ್ಲದೆ ಗುರು ಗ್ರಹದ (ಜೂಪಿಟರ್) ಉಪಗ್ರಹಗಳು ಕೆಪ್ಲರ್‌ನ ಮೂರನೇ ನಿಯಮವನ್ನು ಪಾಲಿಸುವಲ್ಲಿ, ವಿಲೋಮ ವರ್ಗದ ಕೇಂದ್ರಾಭಿಮುಖ ಬಲವು, ಉಪಗ್ರಹಗಳನ್ನು ತಮ್ಮ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿರುಸುತ್ತವೆ ಎಂದು ವಾದಿಸಿದರು.

    ನ್ಯೂಟನ್‌ ಮಾಡಿದ ಪ್ರತಿಪಾದನೆ, ಭೂಮಿ ಮತ್ತು ಚಂದ್ರನ ನಡುವೆಯೂ‌ ಸಹ ಅದೇ ರೀತಿಯ ಸಂಬಂಧವಿದೆಯೆಂಬ ಅಂಶವು ಬೆಳಕಿಗೆ ಬಂದಿತು. ಭೂಮಿಯಿಂದ ಚಂದ್ರನ ದೂರ 384400 ಕಿ.ಮೀ. ಭೂಮಿಯ ತ್ರಿಜ್ಯ (ರೇಡಿಯಸ್)‌ 6371 ಕಿ.ಮೀ. ಭೂಮಿಯಿಂದ ಚಂದ್ರನ ದೂರ ಭೂಮಿಯ ತ್ರಿಜ್ಯದ ಅರವತ್ತು ಪಟ್ಟು ಜಾಸ್ತಿ. ಭೂಮಿಯ ಮೇಲ್ಮೈನಲ್ಲಿನ ಗುರುತ್ವಾಕರ್ಷಣೆಯ ವೇಗವರ್ದನೆ (ಆಕ್ಷಿಲರೇಶನ್‌ ಡ್ಯೂಟು ಗ್ರಾವಿಟಿ) 9.81 ಮೀ/ಸೆ2 ಇದ್ದು, ಭೂಮಿಯಿಂದ ಚಂದ್ರನಿರುವ ದೂರದ ಬಿಂದುವಿನಲ್ಲಿ ಗುರುತ್ವಾಕರ್ಷಣೆಯ ವೇಗವರ್ದನೆಯು 2.72X10-3 ಮೀ/ಸೆ2 ಇದ್ದು, ಇವುಗಳ ಅನುಪಾತವು 3600 (602). ಅಂದರೆ, ಭೂಮಿಯ ಮೇಲ್ಮೈನಲ್ಲಿರುವ ಗುರುತ್ವಾಕರ್ಷಣೆಯ ವೇಗವರ್ದನೆ ಮತ್ತು ಭೂಮಿಯಿಂದ ಚಂದ್ರನಿರುವ ಬಿಂದುವಿನಲ್ಲಿರುವ ಗುರುತ್ವಾಕರ್ಷಣೆಯ ವೇಗವರ್ದನೆ  ಅನುಪಾತವು ಚಂದ್ರನ ಕಕ್ಷೆಯ ಮತ್ತು ಭೂಮಿಯ ತ್ರಿಜ್ಯದ ಅನುಪಾತದ ವರ್ಗಕ್ಕೆ ಸರಿಸಮ. ಈ ಅನುಪಾತಗಳ ಸರಿಸಮವು ಒಂದು ವಸ್ತುವಿನ ವೇಗವರ್ದನೆಯ ಕಕ್ಷೆಯ ಕೇಂದ್ರ ಬಿಂದುವಿನಿಂದ ದೂರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿ ಕಡಿಮೆಯಾಗುತ್ತದೆ ಎಂದು ಸೂಚಿಸುತ್ತದೆ. ಬಲವು ದ್ರವ್ಯರಾಶಿ ಮತ್ತು ವೇಗವರ್ದನೆಯ ಉತ್ಪನ್ನವಾಗಿರುವುದರಿಂದ, ಗುರುತ್ವಾಕರ್ಷಣೆಯ ಬಲವು ಸಹ ಅಂತರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿ ಬದಲಾಗುತ್ತದೆ. ಇದರಿಂದ ಗುರುತ್ವಾಕರ್ಷಣೆಯ ಆವಿಷ್ಕಾರವಾಯಿತು ಎಂದೇ ಹೇಳಬಹುದು. ಮುಂದುವರೆದು, ಗುರುತ್ವಾಕರ್ಷಣೆಯ ಬಲವು, ವಸ್ತುಗಳ ದ್ರವ್ಯ ರಾಶಿಯನ್ನು ಅವಲಂಬಿಸಿರಬೇಕೆಂಬ ಅಂಶವನ್ನು ನ್ಯೂಟನ್‌ ಅರಿತುಕೊಂಡರು. M ದ್ರವ್ಯರಾಶಿಯುಳ್ಳ ವಸ್ತುವಿನ ಮೇಲೆ F ಬಲವನ್ನು ಪ್ರಯೋಗಿಸಿದಾಗ, F/M ದರದಲ್ಲಿ ವೇಗವರ್ಧನೆಗೊಳ್ಳುವುದರಿಂದ, ದ್ರವ್ಯರಾಶಿಗೆ ಗುರುತ್ವಾಕರ್ಷಣೆಯ ಬಲವು ನೇರ ಅನುಪಾತದಲ್ಲಿರ ಬೇಕೆಂದು ನಿರ್ಣಯಿಸಿದರು. ಈ ನಿರ್ಣಯವು, ಎಲ್ಲಾ ವಸ್ತುಗಳು, ಅವುಗಳ ದ್ರವ್ಯರಾಶಿಯ ಮೇಲೆ ಅವಲಂಬಿಸದೆ, ಭೂಮಿಯ ಕಡೆಗೆ ಒಂದೇ ದರದಲ್ಲಿ ವೇಗವರ್ದನೆಗೊಳ್ಳುತ್ತದೆ ಎಂಬ ಗೆಲಿಲಿಯೋನ ತತ್ವಕ್ಕೆ ಅನುಗುಣವಾಗಿರುತ್ತದೆ ಎಂದು ಪ್ರತಿಪಾದಿಸಿದರು. ಈ ಅಂಶವನ್ನು ನ್ಯೂಟನ್‌ ಸಹ ಪ್ರಾಯೋಗಿಕವಾಗಿ ಧೃಡಪಡಿಸಿದ್ದಾರೆ. ಗುರುತ್ವಾಕರ್ಷಣೆಯ ಬಲವು, ವಸ್ತುಗಳ ದ್ರವ್ಯರಾಶಿಗಳ ಉತ್ಪನಕ್ಕೆ ನೇರ ಅನುಪಾತದಲ್ಲಿರುತ್ತದೆ ಎಂದು ತೋರಿಸಿಕೊಟ್ಟರು.

    ಬಲವು ವಿಲೋಮ ವರ್ಗದ ಕಾನೂನಿನ ಅಡಿಯಲ್ಲಿ ಬದಲಾದರೆ, ವಸ್ತುವಿನ ಕಕ್ಷೆಯು ದೀರ್ಘ ವೃತ್ತಾಕಾರವಾಗಿರುತ್ತದೆ ಎಂದು ನ್ಯೂಟನ್‌ ತೋರಿಸಿಕೊಟ್ಟರು. ಬಹಳ ಮುಖ್ಯವಾಗಿ, ಭೂಮಿಯ ಮೇಲಿನ ವಸ್ತುಗಳ ಚಲನೆಗಳು ಹಾಗೂ ಬಾಹ್ಯಾಕಾಶದಲ್ಲಿನ ಆಕಾಶಕಾಯಗಳ ಚಲನೆಗಳು ಒಂದೇ ತತ್ವಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ಜಗತ್ತಿಗೆ ತೋರಿಸಿಕೊಟ್ಟರು. ನಕ್ಷತ್ರಗಳು, ನಕ್ಷತ್ರ ಸಮೂಹಗಳು ಮತ್ತು ಎಲ್ಲಾ ಆಕಾಶ ಕಾಯಗಳ ನಡುವೆ ಗುರುತ್ವಾಕರ್ಷಣೆಯ ಬಲವಿರುತ್ತದೆ ಎಂಬ ಅಂಶ ಬೆಳಕಿಗೆ ಬಂದಿತು. 1684 ರಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ಉಲ್ಲೇಖಿಸಲು ಬಯಸುತ್ತೇನೆ. ವಿಜ್ಞಾನಿ ಎಡ್‌ಮೆಂಡ್‌ ಹ್ಯಾಲಿ ನ್ಯೂಟನ್‌ ರಿಂದ ತಮಗಿದ್ದ ಸಂಶಯದ ಬಗ್ಗೆ ಸ್ಪಷ್ಠೀಕರಣವನ್ನು ಬಯಸಿದರು. ವಿಲೋಮ ವರ್ಗದ ಕಾನೂನಿನ ಅಡಿಯಲ್ಲಿ ವಸ್ತುವು ಯಾವ ರೀತಿಯ ಕಕ್ಷೆಯಲ್ಲಿ ಚಲಿಸುತ್ತದೆ ಎಂದು ಹ್ಯಾಲಿ ಪ್ರಶ್ನಿಸಿದರು. ಕೂಡಲೇ ದೀರ್ಘ ವೃತ್ತಾಕಾರ ಎಂದು ನ್ಯೂಟನ್‌ ಉತ್ತರಿಸಿದರು. ಗುರುತ್ವಾಕರ್ಷಣೆಯ ನಿಯಮದ ಮೂಲಕ, ನ್ಯೂಟನ್‌ ಕೆಪ್ಲರ್‌ ನಿಯಮಗಳನ್ನು ಸಾಧಿಸಿದರು. ಜೊತೆಗೆ ಧೂಮಕೇತುಗಳ ಪಥ, ಉಬ್ಬರ ಏರಿಳಿತಗಳ ವಿವರಣೆ ನೀಡಿದರು. ಇದರ ಮೂಲಕ, ಸೌರಮಂಡಲದ ಸೂರ್ಯ ಕೇಂದ್ರಿತ ಸೂತ್ರೀಕರಣಗಳನ್ನು ನ್ಯೂಟನ್‌ ದೃಡಪಡಿಸಿದರು.

    ನ್ಯೂಟನ್‌ ವಿಧಾನ ಕ್ರಮವನ್ನು ಅನುಸರಿಸಿ, ಎಡ್‌ಮಂಡ್‌ ಹ್ಯಾಲಿ ಬಹಳಷ್ಟು ಧೂಮಕೇತುಗಳ (ಕಾಮೆಟ್ಸ್)‌ ಕಕ್ಷೆಗಳು ಪ್ಯಾರಾಬೊಲಿಕ್‌ ಕಕ್ಷೆಗಳಾಗಿರುತ್ತವೆ ಎಂದು ತೋರಿಸಿಕೊಟ್ಟರು. ಇವರ ಅಧ್ಯಯನದ ವಿಶೇಷತೆಯೆಂದರೆ 1537, 1607 ಮತ್ತು 1680 ರಲ್ಲಿ ಕಾಣಿಸಿಕೊಂಡ ಮೂರು ಧೂಮಕೇತುಗಳು ಒಂದೇ ಧೂಮಕೇತು ಎಂದು ತೋರಿಸಿಕೊಟ್ಟರು. ಅದು 1456 ಮತ್ತು 1378 ರಲ್ಲೂ ಕಾಣಿಸಿಕೊಂಡಿತ್ತು ಎಂದು ತೋರಿಸಿಕೊಟ್ಟರು ಮತ್ತು ಇದೇ ಧೂಮಕೇತು 1759 ರಲ್ಲಿ ಕಾಣಿಸುತ್ತದೆ ಎಂದು ಪ್ರತಿಪಾದಿಸಿದರು. ಆಶ್ಚರ್ಯದ ಸಂಗತಿಯೆಂದರೆ, 1759 ರಲ್ಲಿ ಅದೇ ಧೂಮಕೇತು ಕಾಣಿಸಿಕೊಂಡಿತ್ತು. ಈ ಧೂಮಕೇತು 1986 ರಲ್ಲೂ ಕಾಣಿಸಿಕೊಂಡಿತ್ತು. ಆಗ ನಮಗೆ ಧೂಮಕೇತುವನ್ನು ನೋಡುವ ಅವಕಾಶ ದೊರಕಿತು. ಮತ್ತೆ ಅದು 2061 ರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಧೂಮಕೇತುವಿನ ಹೆಸರು ಹ್ಯಾಲಿಸ್‌ ಕಾಮೆಟ್, ಪ್ರತಿ ಸುಮಾರು 75 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

    ಗುರುತ್ವಾಕರ್ಷಣೆಯ ತತ್ವವನ್ನು ಪ್ರತಿಪಾದಿಸಲು ಇದ್ದಂತಹ ಅಡತಡೆಗಳ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ. ಪ್ರಮುಖವಾಗಿ, ಅರಿಸ್ಟಾಟಲ್‌ ನ ವಾದ ವಿವಾದ ಮತ್ತು ಡೆಸ್‌ ಕಾರ್ಟಿಸ್‌ ನ ಗುರುತ್ವಾಕರ್ಷಣೆಯ ವರ್ಟೆಕ್ಸ್‌ ಸಿದ್ಧಾಂತ. ಅರಿಸ್ಟಾಟಲ್‌ ನ ವಾದವೇನೆಂದರೆ

    ಅ) ಒಂದು ವಸ್ತುವು ಕೆಳಗೆ ಬೀಳುವುದು ನೈಸರ್ಗಿಕ ಕ್ರಿಯೆ.

    ಆ) ಆಕಾಶ ಕಾಯಗಳು ವೃತ್ತಾಕಾರದ ಪಥದಲ್ಲಿ ಚಲಿಸುತ್ತವೆ.

    ಇ) ಒಂದು ಸ್ಥಿರ ವೇಗದಲ್ಲಿ ಚಲಿಸಲು ಹಾಗೂ ಚಲನೆಯನ್ನು ಮುಂದುವರಿಸಲು ಆ ವಸ್ತುವಿನ ಮೇಲೆ ನಿರಂತರವಾಗಿ ಬಲವನ್ನು ಪ್ರಯೋಗಿಸಬೇಕು.

    ಈ) ಒಂದು ವಸ್ತುವಿನ ಮೇಲೆ ಸಂಪರ್ಕದ ಮೂಲಕವೇ ಬಲ ಪ್ರಯೋಗಿಸಬಹುದು. ದೂರದಿಂದ ಬಲ ಪ್ರಯೋಗಿಸಲು ಸಾಧ್ಯವಿಲ್ಲ.

    ಉ) ಭಾರವಾದ ವಸ್ತುಗಳು, ಹಗುರವಾದ ವಸ್ತುಗಳಿಗೆ ಹೋಲಿಸಿದರೆ, ಹೆಚ್ಚಿನ ವೇಗದಿಂದ ಭೂಮಿಗೆ ಬೀಳುತ್ತವೆ.

    ಜೊತೆಗೆ, 16-17 ನೇ ಶತಮಾನದಲ್ಲಿ ಜೀವಂತವಾಗಿದ್ದ ಮೊದಲ ಕ್ರಮಾಂಕದ ಗಣಿತಶಾಸ್ತ್ರಜ್ಞ, ವೈಜ್ಞಾನಿಕ ಚಿಂತಕ ಡೆಸ್ಕಾರ್ಟಿಸ್‌ನ ಪ್ರಕಾರ, ಅಸ್ತಿತ್ವದಲ್ಲಿ ನಿರ್ವಾತವಿಲ್ಲ. ಈಥರ್‌ ಎಂಬ ಮಾಧ್ಯಮದ ಬಾಹ್ಯಾಕಾಶದಲ್ಲಿ ನಿರಂತರ ಒತ್ತಡದ ವ್ಯತ್ಯಾಸದಿಂದಾಗಿ ಸಾರ್ವತ್ರಿಕ ಗುರುತ್ವಾಕರ್ಷಣೆ ಸೃಷ್ಟಿಯಾಗುತ್ತದೆ ಎಂದು ಪ್ರತಿಪಾದಿಸಿದ್ದ.

    ನ್ಯೂಟನ್‌ ಗುರುತ್ವಾಕರ್ಷಣೆಯ ಮಹತ್ವವಾದ ಆವಿಷ್ಕಾರದ ನಂತರ, ಅರಿಸ್ಟಾಟಲ್‌ ಮತ್ತು ಡೆಸ್ಕರ್ಟಿಸ್‌ನ ವಾದಗಳನ್ನು ತಿರಸ್ಕರಿಸಲಾಯಿತು. 1915 ರಲ್ಲಿ ಐನ್‌ಸ್ಟೀನ್ ಸಾಪೇಕ್ಷತೆಯ ಸಾಮಾನ್ಯ ಸಿದ್ಧಾಂತ ಆವಿಷ್ಕರಿಸುವವರೆವಿಗೂ ಹಾಗೂ ಗುರುತ್ವಾಕರ್ಷಣೆಯ ಬಲದ ದೃಷ್ಟಿಕೋನವು ಬದಲಾಗುವವರೆವಿಗೂ, ಹಲವು ಶತಮಾನಗಳ ವರೆಗೆ ನ್ಯೂಟನ್ನನ ಗುರುತ್ವಾಕರ್ಷಣೆಯ ತತ್ವಗಳು ಪ್ರಬಲವಾದ ವೈಜ್ಞಾನಿಕ ದೃಷ್ಟಿಕೋನವನ್ನು ರೂಪಿಸುವಲ್ಲಿ  ಯಶಸ್ವಿಯಾಯಿತು. ಕೇಪ್ಲರ್‌ನ ಗ್ರಹಗಳ ಚಲನೆಯ ನಿಯಮಗಳು, ಉಬ್ಬರವಿಳಿತಗಳು, ಧೂಮಕೇತುಗಳ ಪಥಗಳು ಹೀಗೆ ಹಲವಾರು ವಿದ್ಯಮಾನಗಳನ್ನು ವಿವರಿಸಲು ಗುರುತ್ವಾಕರ್ಷಣೆಯ ತತ್ವಗಳನ್ನು ನ್ಯೂಟನ್‌ ಬಳಸಿದರು. ಜೊತೆಗೆ ಸೌರವ್ಯೂಹದ ಸೂರ್ಯ ಕೇಂದ್ರಿತ ಸಿದ್ಧಾಂತದ ಬಗ್ಗೆ ಇದ್ದ ಅನುಮಾನಗಳನ್ನು ನಿರ್ಮೂಲನ ಮಾಡಿದರು.

    ಆಪ್ಟಿಕ್ಸ್‌ (ದೃಗ್ವಿಜ್ಞಾನ):- ಪ್ರಮುಖ ಅಂಶವೆಂದರೆ, ಲೂಕಾಷಿಯನ್‌ ಪ್ರಾಧ್ಯಾಪಕರಾಗಿ ನೇಮಕಾತಿಯಾದ ನಂತರ, ಪ್ರಪ್ರಥಮವಾಗಿ ನ್ಯೂಟನ್‌ ಸಂಶೋಧನೆ ನಡೆಸಿದ್ದು ಬೆಳಕಿಗೆ ಸಂಬಂಧಿಸಿದಂತೆ. 1666 ರಲ್ಲಿ ಕನಿಷ್ಠ ವಿಚಲನದ ಸ್ಥಾನದಲ್ಲಿರಿಸಿದ (ಮಿನಿಮಮ್‌ ಡೀವಿಯೇಶನ್‌ ಪೊಝಿಶಿನ್)‌ ಗಾಜಿನ ಪಟ್ಟಕದ (ಪ್ರಿಜಮ್)‌ ಮೂಲಕ ಬೆಳಕನ್ನು ಹಾಯಿಸಿದಾಗ, ಬೇರೆ ಬೇರೆ ಬಣ್ಣದ ಕಿರಣಗಳು ವಿವಿಧ ಕೋನಗಳಲ್ಲಿ ವಕ್ರೀಭವನಗೊಂಡು, ಬಹುವರ್ಣದ ಚಿತ್ರಣ (ಸ್ಪೆಕ್ಟ್ರಮ್)‌ ಉಂಟಾಗುತ್ತದೆ ಎಂಬ ಅಂಶವನ್ನು ನ್ಯೂಟನ್‌ ಕಂಡುಹಿಡಿದರು. ಇದರಿಂದ, ಬಣ್ಣವು ಬೆಳಕಿನ ಅಂತರ್ಗತವಾಗಿರುವ ಲಕ್ಷಣವೆಂದು ಜಗತ್ತಿಗೆ ತೋರಿಸಿಕೊಟ್ಟರು. ಮುಂದುವರಿಸಿ, ಈ ರೀತಿಯಾಗಿ ಉಂಟಾದ ಬಹುವರ್ಣದ ಕಿರಣಗಳನ್ನು ಮಸೂರ ಮತ್ತು ಎರಡನೇ ಪಟ್ಟಕದಲ್ಲಿ ಹಾಯಿಸಿದಾಗ, ಬಿಳಿ ಬೆಳಕನ್ನು ಮರು ಸಂಯೋಜಿಸಬಹುದೆಂದು ಪ್ರದರ್ಶಿಸಿದರು. ಬಿಳಿ ಬಣ್ಣವು VIBGYOR ಎಂಬ ಏಳು ಬಣ್ಣಗಳಿಂದ ಕೂಡಿದೆ ಎಂದು ತೋರಿಸಿಕೊಟ್ಟರು. ವಸ್ತುಗಳು ಸ್ವತಃ ಬಣ್ಣವನ್ನು ಸೃಷ್ಟಿಸುವುದಿಲ್ಲ. ಅವುಗಳ ವರ್ಣ, ಬಣ್ಣದ ಬೆಳಕಿನೊಂದಿಗೆ ಸಂವಹನ ನಡೆಸುವ ಪರಿಣಾಮವಾಗಿದೆ ಎಂದು ಗಮನಿಸಿ, ಪ್ರಪಂಚಕ್ಕೆ ಈ ಅಂಶವನ್ನು ನಿದರ್ಶಿಸಿದರು. ಇದನ್ನು ನ್ಯೂಟನ್‌ನ ಬಣ್ಣದ ಸಿದ್ಧಾಂತ ಎಂದೇ ಕರೆಯುತ್ತಾರೆ. ಉದಾಹರಣೆಗೆ, ಕೆಂಪು ಬಣ್ಣದ ವಸ್ತುವನ್ನು ನೀಲಿ ಬಣ್ಣದ ಬೆಳಕಿನಲ್ಲಿಟ್ಟಾಗ ಕಪ್ಪಾಗಿ ಕಾಣುತ್ತದೆ.

    ಯಾವುದೇ ಮಸೂರಕ್ಕೆ ವರ್ಣವಿಪಥನ (ಕ್ರೊಮಾಟಿಕ್‌ ಅಬರೇಷನ್)‌ ನ್ಯೂನತೆಯಿರುತ್ತದೆ ಎಂದು ತಿಳಿದ ನ್ಯೂಟನ್‌, ವಕ್ರೀಭವನದ ದೂರದರ್ಶಕದ ಬದಲು, ಪ್ರತಿಫಲನದ ದೂರದರ್ಶಕವನ್ನು 1668 ರಲ್ಲಿ ಮೊಟ್ಟ ಮೊದಲಿಗೆ ತಯಾರಿಸಿದರು. ನ್ಯೂಟನ್‌ ತನ್ನ ದೂರದರ್ಶಕಗಳಿಗೆ ದೃಗ್ವಿಜ್ಞಾನದ ಗುಣಮಟ್ಟವನ್ನು ನಿರ್ಣಯಿಸಲು ನ್ಯೂಟನ್‌ನ ಉಂಗುರಗಳನ್ನು (ನ್ಯೂಟನ್‌ ರಿಂಗ್ಸ್)‌ ಬಳಸಿಕೊಂಡಿದ್ದು ವಿಶೇಷ. ಈ ಆವಿಷ್ಕಾರಕ್ಕೆ ಮೆಚ್ಚುಗೆಯನ್ನು ತೋರಿಸುವ ಸಲುವಾಗಿ, ಲಂಡನ್ ನ ರಾಯಲ್‌ ಸೊಸೈಟಿಯ ಸದಸ್ಯತ್ವವನ್ನು ನೀಡಲಾಯಿತು. ನ್ಯೂಟನ್‌ ಬಿಳಿಯ ಬಣ್ಣವು, ಏಳು ಬಣ್ಣಗಳಿಂದ ಕೂಡಿದೆ ಎಂದು ಪ್ರಪಂಚಕ್ಕೆ ತಿಳಿಸಿಕೊಡುವ ಮುಂಚೆ, ಅರಿಸ್ಟಾಟಲ್‌ ಸೇರಿದಂತೆ, ಎಲ್ಲಾ ವಿಜ್ಞಾನಿಗಳು ಬಿಳಿ ಬಣ್ಣವು ಏಕ ಘಟಕ ಎಂಬ ಅಭಿಪ್ರಾಯವನ್ನು ಹೊಂದಿದ್ದರು.

    ಬೆಳಕಿನ ಕಾರ್ಪಸ್ಕುಲರ್ಸಿದ್ಧಾಂತ:- ನ್ಯೂಟನ್‌ ಬೆಳಕಿನ ಕಾರ್ಪಸ್ಕುಲರ್‌ ಸಿದ್ಧಾಂತವನ್ನು ಪ್ರತಿಪಾದಿಸಿದರು. ಬೆಳಕು ಸಣ್ಣ ಕಣಗಳಿಂದ ಕೂಡಿದೆ ಎಂದು ಭಾವಿಸಿದರು. (ಕ್ವಾಂಟಮ್‌ ಸಿದ್ಧಾಂತದ ಪೋಟಾನ್ ಗಳಿಗೂ, ನ್ಯೂಟನ್‌ನ ಬೆಳಕಿನ ಕಣಗಳಿಗೆ ಸಂಬಂಧವಿಲ್ಲ) ಈ ಬೆಳಕಿನ ಕಿರಣಗಳು, ಬೇರೆ ಕಣಗಳಂತೆ ನೈಸರ್ಗಿಕ ದ್ರವ್ಯ ರಾಶಿಯನ್ನು ಹೊಂದಿರುತ್ತವೆ ಎಂದು ಭಾವಿಸಿದ್ದರು. ಆದ್ದರಿಂದ ಭೂಮಿಯ ಮೇಲ್ಮೈಗೆ ಸಮಾನಂತರವಾಗಿರುವ ಬೆಳಕಿನ ಕಿರಣವು ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದಿಂದ ಕೆಳಕ್ಕೆ ಬಾಗುತ್ತದೆ ಎಂದು ನ್ಯೂಟನ್‌ ನಿರ್ಣಯಿಸಿದ್ದರು. ಬೆಳಕಿನ ವೇಗವು ಅತಿ ಹೆಚ್ಚಾಗಿರುವುದರಿಂದ, ಈ ಪರಿಣಾಮವನ್ನು ಗಮನಿಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ನ್ಯೂಟನ್‌ ತನ್ನ ಕಣ ಸಿದ್ಧಾಂತದಿಂದ ವಕ್ರೀಭವನವನ್ನು ವಿವರಿಸಿದರು. ನ್ಯೂಟನ್‌ನ ಸಿದ್ಧಾಂತದ ಪ್ರಕಾರ ಬೆಳಕಿನ ಕಿರಣಗಳು ದಟ್ಟವಾದ ಮಾಧ್ಯಮದಲ್ಲಿ ಹೆಚ್ಚು ವೇಗವಾಗಿ ಪ್ರಸರಣಗೊಳ್ಳುತ್ತವೆ. ಆದರೆ, ಪ್ರಾಯೋಗಿಕ ವೀಕ್ಷಣೆಗಳ ಪ್ರಕಾರ ಬೆಳಕಿನ ಕಿರಣಗಳು ದಟ್ಟವಾದ ಮಾಧ್ಯಮದಲ್ಲಿ ಕಡಿಮೆ ವೇಗದಲ್ಲಿ ಪ್ರಸರಣಗೊಳ್ಳುತ್ತವೆ. ಮುಂದುವರಿದಂತೆ, ನ್ಯೂಟನ್‌ ಸಿದ್ಧಾಂತದ ಆಧಾರದ ಮೇಲೆ ಬೆಳಕಿನ ಹಸ್ತಕ್ಷೇಪ (ಬೆಳಕಿನ ಇಂಟರ್‌ಫಿಯರೆನ್ಸ್)‌ ಮತ್ತು ಬೆಳಕಿನ ವಿವರ್ತನೆ (ಡಿಫ್ರ್ಯಾಕಶನ್‌ ಆಫ್‌ ಲೈಟ್) ವಿವರಿಸಲು ಸಾಧ್ಯವಾಗಲಿಲ್ಲ. ಈ ಕಾರಣಗಳಿಂದ, 1704 ರಲ್ಲಿ ನ್ಯೂಟನ್‌ನ ಕಾರ್ಪಸ್ಕುಲರ್‌ ಸಿದ್ಧಾಂತವನ್ನು ತಿರಸ್ಕರಿಸಲಾಯಿತು.

    ಗುರುತ್ವಾಕರ್ಷಣೆ ಮತ್ತು ದೃಗ್ವಿಜ್ಞಾನದ ಜೊತೆಗೆ, ಅನುಭವ ಜನಿತವಾದ (ಎಂಪಿರಿಕಲ್)‌ ತಂಪಾಗಿಸುವಿಕೆಯ ನಿಯಮ ಮತ್ತು ಅನಿಲಗಳಲ್ಲಿ ಶಬ್ಧದ ವೇಗವನ್ನು ಅಧ್ಯಯನ ಮಾಡಿದರು. ನ್ಯೂಟನ್‌ನ ತಂಪಾಗಿಸುವಿಕೆಯ ನಿಯಮವು, ಒಂದು ವಸ್ತುವನ್ನು ತಂಪಾಗಿಸುವ ದರವು ವಸ್ತು ಮತ್ತು ವಸ್ತುವಿನ ಸುತ್ತ ಮುತ್ತಲಿನ ತಾಪಮಾನದ ವ್ಯತ್ಯಾಸಕ್ಕೆ ನೇರ ಅನುಪಾತದಲ್ಲಿರುತ್ತದೆ ಎಂದು ಹೇಳುತ್ತದೆ. ಜೊತೆಗೆ ನ್ಯೂಟನ್‌ ಕಲನಶಾಸ್ತ್ರವನ್ನು (ಕ್ಯಾಲ್‌ ಕ್ಯುಲಸ್)‌ ಸ್ವತಂತ್ರವಾಗಿ ( ಲೈಬ್ನಿಜ್‌ ನ ವಿವಾದ ಹಿನ್ನಲೆಯಲ್ಲಿ) ಅಭಿವೃದ್ಧಿ ಪಡಿಸಿದ್ದಾರೆ ಎಂಬುವುದಾಗಿ ಆಧುನಿಕ ಇತಿಹಾಸಕಾರು ನಂಬುತ್ತಾರೆ.

    ಸರ್ಕಾರಿ ಹುದ್ದೆಗಳು: ನ್ಯೂಟನ್‌ ಬ್ರಿಟಿಷ್‌ ಸರ್ಕಾರದಲ್ಲಿ ಹಲವಾರು ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದ್ದರು. 1696 ರಿಂದ 1699 ರ ವರೆವಿಗೆ ರಾಯಲ್‌ ಮಿಂಟ್‌ನ ವಾರ್ಡನ್‌ ಹುದ್ದೆಯಲ್ಲಿ, ನಂತರ 1699 ರಿಂದ 1726 ರ ವರೆವಿಗೆ ಮಾಸ್ಟರ ಆಫ್‌ ರಾಯಲ್‌ ಮಿಂಟ್‌ ಸ್ಥಾನವನ್ನು ಅಲಂಕರಿಸಿದ್ದರು.

    1703 ರಿಂದ 1726 ರ ವರೆವಿಗೆ ರಾಯಲ್‌ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಜೊತೆಗೆ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ಪಾರ್ಲಿಮೆಂಟ್‌ ಸದಸ್ಯರಾಗಿ ಎರಡು ಬಾರಿ 1689 ರಿಂದ 1690 ಮತ್ತು 1701 ರಿಂದ 1702 ರ ವರೆಗೆ ಸೇವೆಯನ್ನು ಸಲ್ಲಿಸಿದರು. 1705 ರಲ್ಲಿ ಮಹಾರಾಣಿ ಅನ್ನಿ, ನ್ಯೂಟನ್‌ ಗೆ ನೈಟ್‌ಹುಡ್‌ ನೀಡಿ ಗೌರವಿಸಿದರು.   ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ನ್ಯೂಟನ್‌ ಎಂದಿಗೂ ಮದುವೆಯಾಗಲಿಲ್ಲ. ಯಾವುದೇ ಭಾವೊದ್ರೇಕಕ್ಕೆ ಎಂದಿಗೂ ಸಂವೇದನಾಶೀಲರಾಗಲಿಲ್ಲ. ಸಾಮಾನ್ಯ ಮನುಷ್ಯನ ದೌರ್ಬಲ್ಯಗಳಿಗೆ ಒಳಪಟ್ಟಿರಲಿಲ್ಲ. ನ್ಯೂಟನ್‌ ಕನ್ಯೆಯಾಗಿ ಮರಣ ಹೊಂದಿದನೆಂಬ ನಂಬಿಕೆ ಅಸ್ಥಿತ್ವದಲ್ಲಿದೆ.

    ನ್ಯೂಟನ್‌ ತನ್ನ ಸಾಧನೆಗಳ ಬಗ್ಗೆ ತುಲನಾತ್ಮಕಾವಾಗಿ ಸಾಧಾರಣವಾಗಿದ್ದರು. (ಮಾಡೆಸ್ಟ್‌ ಅಬೌಟ್‌ ಇಸ್‌ ಅಚೀವ್‌ಮೆಂಟ್ಸ್)‌.

    ವಿಜ್ಞಾನದ ಇತಿಹಾಸದಲ್ಲಿ ಪ್ರಿನ್ಸಿಫಿಯಾ ಮ್ಯಾಥಮ್ಯಾಟಿಕಾ ಗ್ರಂಥವನ್ನು ಅದ್ಬುತವಾದ, ಸ್ಮಾರಕದ ಗ್ರಂಥವೆಂದು ಪರಿಗಣಿಸಲಾಗಿದೆ. ಲ್ಯಾಟಿನ್‌ ಭಾಷೆಯಲ್ಲಿ ಬರೆದಿರುವ ಈ ಗ್ರಂಥವನ್ನು 1687 ರಲ್ಲಿ ಎಡ್‌ಮಂಡ್‌ ಹ್ಯಾಲಿಯವರ ಸಹಾಯದಿಂದ ಮತ್ತು ಒತ್ತಾಯದಿಂದ ಪ್ರಕಟಿಸಲಾಯಿತು. ಎಡಮಂಡ್‌ ಹ್ಯಾಲಿ ಆರ್ಥಿಕ ನೆರವನ್ನು ಸಹ ನೀಡಿದರು ಎಂದು ಹೇಳಲಾಗಿದೆ. ಫ್ರೆಂಚ್‌ ಗಣಿತಶಾಸ್ತ್ರಜ್ಞ ಲಾಗ್ರೇಂಜ್‌ ಹೇಳಿರುವ ಪ್ರಕಾರ “ನ್ಯೂಟನ್‌ ಅವರು ಅಸ್ತಿತ್ವದಲ್ಲಿದ್ದ ಅತ್ಯಂತ ಶ್ರೇಷ್ಠ ಪ್ರತಿಭೆ ಮತ್ತು ಅತ್ಯಂತ ಅದೃಷ್ಠಶಾಲಿ, ಏಕೆಂದರೆ ನಾವು ಸ್ಥಾಪಿಸಲು ಪ್ರಪಂಚದ ವ್ಯವಸ್ಥೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಕಂಡು ಹಿಡಿಯಲಾಗುವುದಿಲ್ಲ.”

    ಆಂಗ್ಲ ಕವಿ ಅಲೆಕ್ಸಾಂಡರ್‌ ಪೋಪ್‌ ನ್ಯೂಟನ್‌ ಸಾಧನೆಗಳನ್ನು ಮೆಚ್ಚಿ ಶಿಲಾ ಶಾಸನವನ್ನು ಬರೆದರು. “ಪ್ರಕೃತಿ ಮತ್ತು ಪ್ರಕೃತಿ ನಿಯಮಗಳು ರಾತ್ರಿಯಲ್ಲಿ ಅಡಗಿಕೊಂಡಿವೆ. ದೇವರು ನ್ಯೂಟನ್‌ ಆಗಲಿ ಮತ್ತು ಎಲ್ಲವೂ ಬೆಳಕಿಗೆ ಬರಲಿ.”

    ನ್ಯೂಟನ್‌ನ ಹೇಳಿಕೆಯಿಂದ ಲೇಖನವನ್ನು ಅಂತ್ಯಗೊಳಿಸುತ್ತಿದ್ದೇನೆ. “ನಾನು ಜಗತ್ತಿಗೆ ಹೇಗೆ ಕಾಣಿಸುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನನಗೆ, ನಾನು ಸಮುದ್ರ ತೀರದಲ್ಲಿ ಆಟವಾಡುವ ಹುಡುಗನಂತೆ ಮತ್ತು ಆಗಾಗ್ಗೆ ನನ್ನ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುತ್ತಿದ್ದೇನೆ ಮತ್ತು ನಂತರ ಸಾಮಾನ್ಯಕ್ಕಿಂತ ಮೃದುವಾದ ಬೆಂಚಕಲ್ಲು ಅಥವಾ ಸುಂದರವಾದ ಚಿಪ್ಪುಗಳನ್ನು ಕಂಡು ಕೊಂಡಿದ್ದೇನೆ. ಸತ್ಯದ ಸಾಗರವು ನನ್ನ ಮುಂದೆ ಎಲ್ಲಾ ಪತ್ತೆಯಾಗಿಲ್ಲ”.

    ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅಶ್ವಿನಿ ಗಣಪತಿ

    BENGALURU :

    2024 ರ ಅಕ್ಟೋಬರ್ 23 ರಿಂದ 27 ರವರೆಗೆ ದಕ್ಷಿಣ ಕೊರಿಯಾದ ಉಲ್ಜುನಲ್ಲಿ ನಡೆಯಲಿರುವ ಏಷ್ಯಾ ಪೆಸಿಫಿಕ್ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತಂಡಕ್ಕೆ ಬೆಂಗಳೂರಿನ ಅಲ್ಟ್ರಾ ಮ್ಯಾರಥಾನ್ ಓಟಗಾತಿ ಅಶ್ವಿನಿ ಗಣಪತಿ ಭಟ್ ಸೇರ್ಪಡೆಯಾಗಿದ್ದಾರೆ. ಇವರು ತಂಡದಲ್ಲಿರುವ ಕರ್ನಾಟಕದ ಏಕೈಕ ಸದಸ್ಯರಾಗಿದ್ದಾರೆ.

    ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಅರ್ಹತಾ ಆದೇಶವನ್ನು ನಿಗದಿಪಡಿಸಿದೆ ಮತ್ತು ಆಯ್ಕೆಗಾಗಿ ITRA ಸ್ಕೋರ್‌ಗಳನ್ನು ಬಳಸಿದೆ. ಎಎಫ್‌ಐ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

    ಭಾರತ ತಂಡವು 80 ಕಿಮೀ ಉದ್ದದ ಟ್ರಯಲ್ ವಿಭಾಗದಲ್ಲಿ 3 ಪುರುಷರು ಮತ್ತು ಒಬ್ಬ ಮಹಿಳೆ (ಅಶ್ವಿನಿ) ಒಳಗೊಂಡಿದ್ದರೆ, 40 ಕಿಲೋಮೀಟರ್‌ಗಳ ಶಾರ್ಟ್ ಟ್ರಯಲ್ ವಿಭಾಗದಲ್ಲಿ 5 ಪುರುಷರು ಮತ್ತು ಒಬ್ಬ ಮಹಿಳೆ ಇದ್ದಾರೆ.

    ಟ್ರಯಲ್ ಓಟವು ಯಾವುದೇ ಒರಟು, ಅರಣ್ಯ, ಪರ್ವತಗಳ ಭೂಪ್ರದೇಶದಲ್ಲಿ ನಡೆಯುವ ಕ್ರೀಡೆಯಾಗಿದೆ. ಚಾಂಪಿಯನ್‌ಶಿಪ್, ನಿರ್ದಿಷ್ಟವಾಗಿ, ದಕ್ಷಿಣ ಕೊರಿಯಾದ ಪರ್ವತ ಪ್ರದೇಶದಲ್ಲಿ ಹೊಂದಿಸಲಾಗಿದೆ ಮತ್ತು ಗಮನಾರ್ಹ ಆರೋಹಣ/ಅವರೋಹಣಗಳನ್ನು ಒಳಗೊಂಡಿದೆ.

    ಜುಲೈ 2022 ರಲ್ಲಿ ಬೆಂಗಳೂರಿನಲ್ಲಿ ನಡೆದ 400 ಮೀಟರ್ ಟ್ರ್ಯಾಕ್‌ನಲ್ಲಿ ನಡೆದ 24 ಗಂಟೆಗಳ ಏಷ್ಯಾ ಓಸೇನಿಯಾ ಚಾಂಪಿಯನ್‌ಶಿಪ್‌ನಲ್ಲಿ ಅಶ್ವಿನ್ ಭಾರತೀಯ ತಂಡದ ಭಾಗವಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

    ವಿಶ್ವ ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ

    MYSURU

    ಸಂಗೀತ ಲೋಕದ ವಿಶ್ವ ಶ್ರೇಷ್ಠ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ, ಉಸ್ತಾದ್ ಆಲಿ ಅಕ್ಬರ್‌ ಖಾನ್‌ ಅವರ ಶಿಷ್ಯ ಪಂಡಿತ್ ರಾಜೀವ್ ತಾರಾನಾಥ್ ನಿಧನ ಹೊಂದಿದ್ದಾರೆ.

    ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜೀವ್‌ ತಾರಾನಾಥ್‌ ಅವರು ಇಂದು (ಜೂನ್ 11) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ವಿಶ್ವದ ಶ್ರೇಷ್ಠ ಸರೋದ್ದ ವಾದಕರಲ್ಲಿ ಒಬ್ಬರೆನಿಸಿರುವ ರಾಜೀವ್ ತಾರಾನಾಥರು ಜನಿಸಿದ ದಿನ ಅಕ್ಟೋಬರ್ 17, 1932. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು ನಮ್ಮ ಕರ್ನಾಟಕದವರೇ ಆದ ರಾಜೀವ್ ತಾರಾನಾಥರು.ರಾಜೀವ್ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರಿಂದ ಪಡೆದರು. ಕೇವಲ ಒಂಭತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಚೇರಿಯನ್ನು ನಡೆಸಿದರು. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು.

    ರಾಜೀವ್ ತಾರಾನಾಥರು ಸಾಹಿತ್ಯದಲ್ಲಿ ಪಿ.ಎಚ್.ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕೊಲ್ಕಾತಾಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕಬರ್ ಖಾನ್ ಅವರ ಶಿಷ್ಯರಾದರು. 2009ರ ವರ್ಷದಲ್ಲಿ ಅಲಿ ಅಕ್ಬರ್ ಖಾನರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಕ್ಬರ್ ಅಲಿ ಖಾನ್ ಅವರಲ್ಲದೆ ಪಂಡಿತ ರವಿಶಂಕರ್, ಅನ್ನಪೂರ್ಣಾದೇವಿ, ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ತಮ್ಮದಾಗಿಸಿಕೊಂಡವರು.

    ಹಲವೊಂದು ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿರುವ ರಾಜೀವ್ ತಾರಾನಾಥರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಿತ್ರಗಳೆಂದರೆ ಕನ್ನಡದ ಸಂಸ್ಕಾರ , ಅನುರೂಪ, ಶೃಂಗಾರ ಮಾಸ, ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಟವ್ ಮುಂತಾದವು.

    ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ: ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಯ್ಸಾಗಾರ ನಿರ್ಮಾಣಕ್ಕೆ ಸಮ್ಮತಿ

    BENGALURU

    ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

    ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಜ್ಯದಲ್ಲಿರುವ ವಿವಿಧ ಮೃಗಾಲಯಗಳಿಗೆ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಆದಾಯ ಹೆಚ್ಚಿಸಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಪರಾಮರ್ಶಿಸಿದರು.

    ಮೈಸೂರು ಶ್ರೀ ಚಾಮರಾಜೇಂದ್ರ ಮಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಕ್ವೇರಿಯಂ (ಮತ್ಸ್ಯಾಗಾರ) ನಿರ್ಮಿಸಲು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಮಂಡಿಸಲು ಸೂಚಿಸಲಾಯಿತು.

    ಮೃಗಾಲಯ ಪ್ರಾಧಿಕಾರದ ವಾರ್ಷಿಕ ವರದಿಯನ್ನು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬಿಡುಗಡೆ ಮಾಡಿದರು.


    ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿಸಲಾಯಿತು.

    ಅದೇ ರೀತಿ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಮತ್ಸ್ಯಾಗಾರಗಳನ್ನು ನಿರ್ಮಿಸಲು ಈಗಾಗಲೇ ನಡೆದಿರುವ ಪರಿಕಲ್ಪನೆ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತ್ಯ ಮತ್ಸ್ಯಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.
    ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳು ಸೋಂಕು ಇತ್ಯಾದಿಯಿಂದ ಸಾವಿಗೀಡಾಗದಂತೆ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಯ ಬಗ್ಗೆ ಚರ್ಚಿಸಿ, ವೈದ್ಯರ ನೇಮಕಾತಿಗೆ ಅನುಮೋದನೆ ನೀಡಲಾಯಿತು.
    ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶುವೈದ್ಯಾಧಿಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ ನೀಡಲಾಯಿತು.

    ಇತರ ನಿರ್ಣಯಗಳು:

    • ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ, ಪಕ್ಷಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಒದಗಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು,, ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಹರಿಸು ಕ್ರಮ ಕೈಗೊಳ್ಳಲು ಸಮ್ಮತಿ.

    • ಬನ್ನೇರುಘಟ್ಟ ಉದ್ಯಾನದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು 21 ಸಾವಿರ ಮಾಸಿಕ ವೇತನ ಮೀರಿದ 153 ಸಿಬ್ಬಂದಿಗೆ ಸಿ.ಜಿ.ಎಚ್.ಎಸ್. ದರದಂತೆ ವೈದ್ಯಕೀಯ ವೆಚ್ಚ ಭರಿಸಲು ಅನುಮೋದನೆ.

    • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸ್ಯಾಟಲೈಟ್ ಕೇಂದ್ರವಾಗಿ ಕಾರ್ಯನಿರ್ವಹಣೆಗೆ ಅನುಮೋದನೆ.

    • ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕೆ ಜಮೀನು ಭೂಸ್ವಾಧೀನ ಮತ್ತು ಮೃಗಾಲಯದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಪೂರೈಕೆಗೆ ಸಮ್ಮತಿ.

    ದೇವರನ್ನು ತೋರಿಸಿದ ಸನ್ಯಾಸಿ

    ಒಂದು ದಿನ ಒಬ್ಬ ಸನ್ಯಾಸಿಯು ನದಿ ತೀರದಲ್ಲಿ ಧ್ಯಾನ ಮಾಡುತ್ತಿದ್ದರು.ಒಬ್ಬ ಯುವಕ ಅವರ ಬಳಿಗೆ ಬಂದು ಅವರ ಧ್ಯಾನಕ್ಕೆ ಅಡಚಣೆಯನ್ನು ಉಂಟು ಮಾಡಿ , “ಗುರುಗಳೆ ನಾನು ನಿಮ್ಮ ಶಿಷ್ಯನಾಗಲು ಬಯಸುತ್ತಿದ್ದೇನೆ” ಎಂದು ಹೇಳಿದ.ಆಗ ಆ ಸನ್ಯಾಸಿಯು “ಏಕೆ?” ಎಂದು ಕಾರಣ ಕೇಳಿದರು.

    ಆ ಯುವಕ ನಾನು ದೇವರನ್ನು ಹುಡುಕುತ್ತಿದ್ದೇನೆ ಎಂದು ಹೇಳುತ್ತಾನೆ.

    ಗುರುಗಳು ಏಕಾಏಕಿ ಜಿಗಿದು ನಿಂತರು. ಆ ಯುವಕನ ಕತ್ತನ್ನು ಹಿಡಿದುಕೊಂಡು, ಎಳೆದು ತಂದು, ನದಿಯಲ್ಲಿ ಬಿಡುತ್ತಾರೆ. ಅವನ ತಲೆಯನ್ನು ಹಿಡಿದುಕೊಂಡು ನೀರಿನೊಳಗೆ ಮುಳುಗಿಸುತ್ತಾರೆ. ಒಂದು ನಿಮಿಷ ಅವನನ್ನು ಹಾಗೇ ನೀರಿನಲ್ಲಿ ಮುಳುಗಿಸುತ್ತಾರೆ. ಅವನಿಗೆ ಉಸಿರು ಕಟ್ಟಿದಂತಾಗುತ್ತದೆ. ಆನಂತರ ಆ ತೊಂದರೆಯಿಂದ ಸುಧಾರಿಸಿಕೊಳ್ಳಲು ಅವನಿಗೆ ಅವಕಾಶ ನೀಡುತ್ತಾರೆ.

    ನಂತರ ಆ ಸನ್ಯಾಸಿಯು ಆ ಯುವಕನನ್ನು ನದಿಯಿಂದ ಎಳೆದು ಹೊರ ತರುತ್ತಾರೆ. ಆ ನೀರಿನಿಂದಾಗಿ ಆ ಯುವಕನಿಗೆ ಉಸಿರು ಕಟ್ಟಿದಂತಾಗುತ್ತದೆ. ಉಸಿರಾಡಲು ಕಷ್ಟವಾಗಿ ಕೆಮ್ಮುತ್ತಿರುತ್ತಾನೆ. ಅಂತಿಮವಾಗಿ ಅವನನ್ನು ಆರಾಮಾಗಿ ಬಿಟ್ಟು ಆ ಸನ್ಯಾಸಿ ಹೇಳುತ್ತಾರೆ :“ಈಗ ಹೇಳು.. ನಿನ್ನನ್ನು ನೀರಿನಲ್ಲಿ ಮುಳುಗಿಸಿದಾಗ ಎಲ್ಲದಕ್ಕಿಂತ ಅತಿ ಮುಖ್ಯವಾಗಿ ನಿನಗೆ ಬೇಕೆನಿಸಿದ್ದು ಯಾವುದು..??”

    ಆಗ ಯುವಕ “ಗಾಳಿ” ಎಂದು ಉತ್ತರಿಸುತ್ತಾನೆ..

    “ಚೆನ್ನಾಗಿದೆ.. ಈಗ ಮನೆಗೆ ಹೋಗು.. ಗಾಳಿಗಿಂತ ದೊಡ್ಡ ದೇವರು ನಿನಗೆ ಬೇಕು ಅಂತ ಅನಿಸಿದಾಗ ಮತ್ತೆ ನನ್ನ ಹತ್ತಿರ ಬಾ” ಎಂದು ಹೇಳುತ್ತಾರೆ ಆ ಸನ್ಯಾಸಿ.

    ಆಪತ್ಕಾಲದಲ್ಲಿ ಒದಗುವವರೆ ದೇವರು ಎಂಬುದರ ಅರಿವು ಯುವಕನಿಗೆ ಆಗುತ್ತದೆ.

    ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಇನ್ನು ಮುಂದೆ ನ್ಯಾಕ್‌ (NAAC) ಸಂಸ್ಥೆಯಿಂದ ಅವಳಿ ಮಾನ್ಯತಾ ಪದ್ಧತಿ

    .ಪೀಠಿಕೆ:- ದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಎನ್‌ ಇ ಪಿ 2020 ರ ಪರಮೋಚ್ಛ ಉದ್ಧೇಶವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿ  ಬೋಧನಾ-ಕಲಿಕೆ, ಸಂಶೋಧನೆ, ಸೃಜನಶೀಲತೆಯ ಬೆಳವಣಿಗೆ, ಪ್ರೇರಿತ ಶಿಕ್ಷಕರು, ಉದ್ಯೋಗ ಕೌಶಲ್ಯಗಳು, ಶೈಕ್ಷಣಿಕ ವಾತಾವರಣ, ಭೌತಿಕ ಸೌಲಭ್ಯಗಳ  ಜೊತೆಗೆ ಮೌಲ್ಯಮಾಪನ ಮತ್ತು ಮಾನ್ಯತೆಯು ಸಹ ಬಹಳ ಮುಖ್ಯ ಮತ್ತು ಅದರ ಅವಿಭಾಜ್ಯ ಅಂಗವಾಗಿದೆ. ಮೌಲ್ಯಮಾಪನ ಮಾಡಿ, ಮಾನ್ಯತೆಯನ್ನು ನೀಡುವ ಕಾರ್ಯವನ್ನು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು (ನ್ಯಾಶನಲ್‌ ಅಸೆಸ್‌ಮೆಂಟ್‌ ಅಂಡ್‌ ಅಕ್ರೆಡಿಟೇಶನ್‌ ಕೌನ್ಸಿಲ್-NAAC) ಕಳೆದು ಮೂವತ್ತು ವರ್ಷಗಳಿಂದಲೂ ಮಾಡುತ್ತಾ ಬಂದಿದೆ.

    ಎನ್‌ ಇ ಪಿ 2020 ರ ಉದ್ದೇಶಗಳ ಅನುಗುಣವಾಗಿ ಮೌಲ್ಯಮಾಪನ ಮತ್ತು ಮಾನ್ಯತಾ ಪ್ರಕ್ರಿಯೆಯನ್ನು ಬಲಪಡಿಸುವ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಭಾರತ ಸರ್ಕಾರದ ವತಿಯಿಂದ 2022 ರಲ್ಲಿ ಡಾ. ಕೆ. ರಾದಾಕೃಷ್ಣನ್‌, ವಿಶ್ರಾಂತ ಅಧ್ಯಕ್ಷರು, ಇಸ್ರೊ, ಇವರ ನೇತೃತ್ವದಲ್ಲಿ ಸಮಗ್ರ ಸಮಿತಿಯನ್ನು ರಚಿಸಲಾಯಿತು. ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಮತ್ತು ಪ್ರತ್ಯುತ್ತರಗಳನ್ನು ಸಂಗ್ರಹಿಸಿ, ಸಮಿತಿಯು ಅಂತಿಮ ವರದಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ಜನವರಿ 2024 ರಲ್ಲಿ ಸಲ್ಲಿಸಿತು. ಸಮಿತಿಯ ಶಿಪಾರಸ್ಸುಗಳನ್ನು ಅಂಗೀಕರಿಸಿ, ಹೊರಡಿಸಿದ ಸರ್ಕಾರದ ಆದೇಶದ ಮೇರೆಗೆ ನ್ಯಾಕ್‌ ಸಂಸ್ಥೆಯು ಈಗಿರುವ ಶ್ರೇಣೀಕರಣದ ಮಾನ್ಯತೆಯ ಬದಲಿಗೆ ಅವಳಿ ಮಾನ್ಯತೆಯನ್ನು  ಎರಡು ಹಂತಗಳಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ.

    ಚಾಲ್ತಿಯಲ್ಲಿರುವ ಶ್ರೇಣಿಕರಣದ ಮಾನ್ಯತೆಯ ಪದ್ಧತಿ

    ಈಗ ಚಾಲ್ತಿಯಲ್ಲಿರುವ ಶ್ರೇಣೀಕರಣದ ಮಾನ್ಯತೆಯ ಪದ್ಧತಿಯಲ್ಲಿ ಪಠ್ಯಕ್ರಮ, ಬೋಧನಾ-ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆ, ಭೌತಿಕ ಸೌಲಭ್ಯಗಳು ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಬೆಂಬಲಿತ ಸೌಕರ್ಯಗಳು, ಆಳ್ವಿಕೆ, ನಾಯಕತ್ವ ಮತ್ತು ನಿರ್ವಹಣೆ, ಸಂಸ್ಥೆಯ ಮೌಲ್ಯಗಳು ಹೀಗೆ ಏಳು ಮಾನದಂಡಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಶೇಕಡಾ 70 ರಷ್ಟು ದತ್ತಾಂಶ ಆಧಾರಿತ ಮತ್ತು ಉಳಿದ ಶೇಕಡಾ 30 ಅಂಕಗಳಿಗೆ ಸಮಾನ ಸ್ಕಂದರ ತಂಡದಿಂದ ಭೌತಿಕ ಪರಿಶೀಲನೆ ನಡೆಸಿ ಎರಡು ಹಂತಗಳ ಫಲಿತಾಂಶಗಳನ್ನು ಕ್ರೌಢೀಕರಿಸಿ ಶ್ರೇಣೀಕರಣದ ಮಾನ್ಯತೆಯನ್ನು ನೀಡಲಾಗುತ್ತಿದೆ.  A++ನಿಂದ D ವರೆವಿಗೂ ಎಂಟು ಗ್ರೇಡ್‌ ಗಳ ಪದ್ಧತಿಯಲ್ಲಿ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡಲಾಗುತ್ತಿದೆ.

    ಶ್ರೇಣೀಕರಣದ ಮಾನ್ಯತಾ ಪದ್ಧತಿಯನ್ನು ಪರಿಷ್ಕರಿಸಿ ನೂತನ ಅವಳಿ ಮಾನ್ಯತಾ ಪದ್ಧತಿಯನ್ನು ರೂಪಿಸಲು ಮುಖ್ಯ ಕಾರಣಗಳು 

    ಎನ್‌ ಇ ಪಿ 2020 ರ ದೃಷ್ಟಿಕೋನಕ್ಕೆ ಅನುಗುಣವಾಗಿ ಮೌಲ್ಯಮಾಪನ ಪದ್ಧತಿಯನ್ನು ಮಾರ್ಪಾಡು ಮಾಡುವುದು, ಉತ್ತಮ ಶ್ರೇಣಿಯನ್ನು ಪಡೆಯಲು (A++ ಮತ್ತು A+) ಶಿಕ್ಷಣ ಸಂಸ್ಥೆಗಳ ನಡುವೆ ಇದ್ದಂತಹ ಅನಾರೋಗ್ಯಕರ ಪೈಪೋಟಿ ಮತ್ತು ನಂತರದ ದಿನಗಳಲ್ಲಿ ಶ್ರೇಣಿಗಳ ಹೆಸರಿನಲ್ಲಿ ನಡೆಸುತ್ತಿದ್ದ ವ್ಯಾಪಾರೀಕರಣವನ್ನು ತಡೆಯುವುದು, ಮೌಲ್ಯಮಾಪನ ಕಾರ್ಯವನ್ನು ಸರಳೀಕರಣಗೊಳಿಸಿ ಮೌಲ್ಯಮಾಪನ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳು  ಭಾಗವಹಿಸಲು ಉತ್ತೇಜಿಸುವುದು ಮತ್ತು ಅದರ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು (ಸೆಪ್ಟಂಬರ್‌ 30, 2023 ರ ವರೆಗೆ ದೇಶದಲ್ಲಿರುವ 43796 ಕಾಲೇಜುಗಳ ಪೈಕಿ ಕೇವಲ 9479 ಕಾಲೇಜುಗಳು ಮಾನ್ಯತೆ ಪಡೆದಿವೆ), ಹಸ್ತ ಚಾಲಿತ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡಿ ತಂತ್ರಜ್ಞಾನ ಚಾಲಿತ ಮತ್ತು ಆಧುನಿಕ ವ್ಯವಸ್ಥೆಯೊಂದಿಗೆ ಅನುಮೋದನೆ ನೀಡುವುದು, ಪಾರದರ್ಶಕತೆಯನ್ನು ಕಾಪಾಡುವುದು, ಮಾನ್ಯತೆಯ ಗುಣಮಟ್ಟವನ್ನು ಹೆಚ್ಚಿಸಿ, ಶ್ರೇಷ್ಠತೆ ಮತ್ತು ಜಾಗತಿಕ ಮೆಚ್ಚುಗೆಯನ್ನು ಪಡೆಯಲು ಮಾರ್ಗದರ್ಶನ ನೀಡುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಅವಳಿ ಮಾನ್ಯತೆಯನ್ನು ಜಾರಿಗೊಳಿಸಿ ಸಮಾನತೆಯನ್ನು ತರುವುದು.

    ನೂತನ ಅವಳಿ ಮಾನ್ಯತೆ ಮತ್ತು ಪ್ರಬುದ್ಧತೆ ಆಧಾರಿತ ಶ್ರೇಣಿಕರಣ ಮಾನ್ಯತೆ.

    ಮೊದಲನೆಯದಾಗಿ, ಈಗ ಚಾಲ್ತಿಯಲ್ಲಿರುವ ಶ್ರೇಣೀಕರಣ ಮಾನ್ಯತೆಯ ಬದಲು “ಮಾನ್ಯತೆ ಹೊಂದಿದೆ ಅಥವಾ ಹೊಂದಿಲ್ಲ” ಎಂಬ ಅವಳಿ ಮಾನ್ಯತಾ ಪದ್ಧತಿಯನ್ನು ಅಳವಡಿಸಲಾಗುತ್ತದೆ. ಈ ಪದ್ಧತಿಯನ್ನು ಮುಂದಿನ ನಾಲ್ಕು ತಿಂಗಳುಗಳಲ್ಲಿ ನ್ಯಾಕ್‌ ಸಂಸ್ಥೆಯು ಜಾರಿ ಮಾಡಲಿದೆ. ಈ ಪದ್ಧತಿಯಲ್ಲಿ  ಹತ್ತು ನಿಯತಾಂಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಆ ಹತ್ತು ನಿಯತಾಂಕಗಳು ಯಾವುವೆಂದರೆ, ಪಠ್ಯಕ್ರಮ, ಅಧ್ಯಾಪಕರ ಸಂಪನ್ಮೂಲಗಳು, ಬೋಧನೆ-ಕಲಿಕಾ ಪದ್ಧತಿ, ಸಂಶೋಧನೆ ಮತ್ತು ಆವಿಷ್ಕಾರಗಳು, ಸಹ ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳು, ಸಮುದಾಯದ ಬಗ್ಗೆ ಕಾಳಜಿ, ಹಸಿರು ಉಪಕ್ರಮಗಳು, ಆಳ್ವಿಕೆ ಮತ್ತು ಆಡಳಿತ, ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಆರ್ಥಿಕ ಸಂಪನ್ಮೂಲಗಳು ಹಾಗೂ ನಿರ್ವಹಣೆ. ಈ ನಿಯತಾಂಕಗಳಿಗೆ ಸಂಬಂಧಿಸದಂತೆ ಅಧ್ಯಯನಾಧಾರಿತ ಮೌಲ್ಯಮಾಪನ ಮಾಡಿ, ನಿಗದಿತ ಕನಿಷ್ಠ ಅಂಕ ಅಥವಾ ಅದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಸಂಸ್ಥೆಗಳಿಗೆ “ಮಾನ್ಯತೆ ಹೊಂದಿದೆ” ಎಂದು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

                ಎರಡನೆಯದಾಗಿ, ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಮತ್ತು ಗುಣಮಟ್ಟದ ರೇಖೆಯನ್ನು ಮೇಲೇರಿಸಲು ಅನುಕೂಲವಾಗುವಂತೆ ಪ್ರಬುದ್ಧತೆ (ಮೆಚ್ಯೂರಿಟಿ) ಆಧಾರಿತ ಮಾನ್ಯತೆಯನ್ನು ಈ ವರ್ಷದ ಡಿಸೆಂಬರ್‌ ವೇಳೆಗೆ ನ್ಯಾಕ್‌ ಸಂಸ್ಥೆಯು ಅನುಷ್ಠಾನ ಮಾಡಲಿದೆ. ಈ ಪದ್ಧತಿಯಲ್ಲಿ ಹಂತ 1 ರಿಂದ ಹಂತ 4 ರ ವರೆಗೆ ರಾಷ್ಟ್ರೀಯ ಉತ್ಕೃಷ್ಟತಾ ಸಂಸ್ಥೆಗಳಾಗಿ ಬೆಳೆಯಲು, ನಂತರ ಹಂತ 5- ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರುವಾಸಿಯಾದ ಹಾಗೂ ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ಸಂಸ್ಥೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಮೌಲ್ಯಮಾಪನ ಮಾಡಿ, ಮಾನ್ಯತೆಯನ್ನು ನೀಡಲಾಗುತ್ತದೆ.  ಮೇಲೆ ವಿವರಿಸಿದ ಎರಡು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯ ವಿಧಾನಗಳು, ಶೈಕ್ಷಣಿಕ ಕಲಿಕಾ ಫಲಿತಾಂಶಗಳು ಮತ್ತು ಸಂಸ್ಥೆಯ ಗುಣಮಟ್ಟದ ಮೇಲೆ ಇವುಗಳ ಪರಿಣಾಮಗಳ ಆಧಾರಿತ ಮೌಲ್ಯಮಾಪನ ನಿಯತಾಂಕಗಳನ್ನು ರೂಪಿಸಲಾಗುತ್ತದೆ.

    ನೂತನ ಪದ್ಧತಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಿರುವ ಇನ್ನಿತರ ಬದಲಾವಣೆಗಳು

    ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಈಗ ಚಾಲ್ತಿಯಲ್ಲಿರುವ ಒಂದು ಗಾತ್ರ ಎಲ್ಲರಿಗೂ ಸರಿ ಹೊಂದುತ್ತದೆ (ಒನ್‌ ಸೈಜ್‌ ಫಿಟ್ಸ್‌ ಆಲ್) ಮಾದರಿಯ ಬದಲು, ನಮ್ಮ ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳ ವೈವಿಧ್ಯತೆ (ಉದಾಹರಣೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಸಂಸ್ಥೆಗಳ ನಡುವೆ ಇರುವ ವ್ಯತ್ಯಾಸಗಳು), ಸಂಸ್ಥೆಗಳ ದೃಷ್ಠಿಕೋನ ಮತ್ತು ಪರಂಪರೆಗಳನ್ನು ಪರಿಗಣಿಸಿ ವರ್ಗೀಕರಣ ಮಾಡಲಾಗುತ್ತದೆ.

                ಇನ್ನಿತರ ಬದಲಾವಣೆಗಳೆಂದರೆ, ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಮಾನ್ಯತೆಯ ಅವಧಿಯನ್ನು 6 ವರ್ಷಗಳಿಗೆ ಏರಿಸುವುದು, ಮಾನ್ಯತೆಯನ್ನು ಹೊಂದಲು ಅನರ್ಹವಾದ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವುದು, ಒಂದು ರಾಷ್ಟ್ರ ಒಂದು ಡೇಟಾ (ಅಂಕಿ ಅಂಶಗಳ ಮಾಹಿತಿ) ವೇದಿಕೆಯನ್ನು ರಚಿಸುವುದು, ನಂಬಿಕೆಯ ಮತ್ತು ವಿಶ್ವಾಸಾರ್ಹ ಮೇರೆಗೆ ಸಂಸ್ಥೆಗಳ ಅಂಕಿ ಅಂಶಗಳನ್ನು ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕೆಂಬ ನಿಯಮವನ್ನು ಜಾರಿಗೊಳಿಸಿ, ತಪ್ಪು ಮಾಹಿತಿ ನೀಡಿದ ಪಕ್ಷದಲ್ಲಿ ಕಠಿಣ ಶಿಕ್ಷೆಯನ್ನು ನೀಡುವುದು ಮತ್ತು ಪರಿಶೀಲನೆಗಾಗಿ ಭೌತಿಕ ಭೇಟಿಗಳನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳು ಹಾಗೂ ಇನ್ನಿತರ ಪಾಲುದಾರರ ಅಭಿಪ್ರಾಯಗಳಿಗೆ ಹೆಚ್ಚು ಒತ್ತು ನೀಡುವುದು.

    ಅವಳಿ ಮಾನ್ಯತಾ ಪದ್ಧತಿಯ ಅನನುಕೂಲಗಳು

                ಬಹಳಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಅವಳಿ ಮೌಲ್ಯಮಾಪನ ಪದ್ಧತಿಯನ್ನು ಸ್ವಾಗತಿಸಿದರೆ, ಕೆಲವು ಶಿಕ್ಷಣ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಬಹುದು. ಏಕೆಂದರೆ, A+ ಶ್ರೇಣಿ ಪಡೆಯಲು ಅರ್ಹವಿರುವ ಕಾಲೇಜಿಗೂ ಮತ್ತು B+ ಶ್ರೇಣಿ ಪಡೆಯಬಹುದಾದಂತಹ ಕಾಲೇಜಿಗೂ “ಮಾನ್ಯತೆ ಹೊಂದಿದೆ” ಎಂಬ ಒಂದೇ ತರಹದ  ಪ್ರಮಾಣ ಪತ್ರವನ್ನು ನೀಡಿದರೆ, ಸಾಮಾನ್ಯ ಜನತೆಯ ದೃಷ್ಠಿಯಲ್ಲಿ ಎರಡು ಕಾಲೇಜುಗಳಲ್ಲಿನ ವ್ಯತ್ಯಾಸವು ಕಂಡುಬರುವುದಿಲ್ಲ. ಕಾಲೇಜುಗಳ ಆಯ್ಕೆಯ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಜೊತೆಗೆ, ಶಿಕ್ಷಣ ಸಂಸ್ಥೆಗಳು ನಿರುತ್ಸಾಹವನ್ನು ವ್ಯಕ್ತಪಡಿಸಬಹುದು. ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಉತ್ಕೃಷ್ಠ ಸಂಸ್ಥೆಗಳಾಗಿ ಬೆಳೆಯಲು ಮೆಚ್ಯೂರಿಟಿ ಆಧಾರಿತ ಮಾನ್ಯತಾ   ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

    ಮುಂದಿನ ಹದಿನೈದು ವರ್ಷಗಳಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಮೌಲ್ಯಮಾಪನ ಮತ್ತು ಮಾನ್ಯತೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅತ್ಯುತ್ತಮ ಮಟ್ಟಕ್ಕೆ ಏರಿ, ಪದವಿಗಳನ್ನು ನೀಡುವ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆಯ ಬೇಕೆಂಬುದೇ  ಸರ್ಕಾರದ ಆಶಯವಾಗಿದೆ.

    ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SIDBI) ಅಸಿಸ್ಟೆಂಟ್‌ ಮ್ಯಾನೇಜರ್ ಹುದ್ದೆ

    ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನ  ( SIDBI) ಹಿನ್ನಲೆ:

    SIDBI ಸಂಸತ್ತಿನ ಕಾಯಿದೆಯ ಅಡಿಯಲ್ಲಿ ಸ್ಥಾಪಿಸಲಾದ ಪ್ರಧಾನ ಹಣಕಾಸು ಸಂಸ್ಥೆಯಾಗಿದೆ. ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರಚಾರ, ಹಣಕಾಸು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ಏಳೂವರೆ ದಶಕಗಳಿಂದ ಭಾರತದ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭವಾಗಿದೆ. SIDBI ಕೈಗಾರಿಕಾ ವಲಯದಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಚೈತನ್ಯಕ್ಕೆ ನೀಡಿದ ಕೊಡುಗೆಯಿಂದ ದೇಶದಾದ್ಯಂತ ಕೈಗಾರಿಕಾ ಅಭಿವೃದ್ಧಿಯ ವಿಸ್ತರಿಸುವಿಕೆಗೆ ಕಾರಣವಾಗಿದೆ. MSME ಗಳ ಹಣಕಾಸು, ಪ್ರಚಾರ ಮತ್ತು ಅಭಿವೃದ್ಧಿಯ ವಿವಿಧ ಯೋಜನೆಗಳಿಗಾಗಿ SIDBI ಕಾರ್ಯನಿರ್ವಹಿಸುತ್ತಿದೆ.

    ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಖಾಲಿ ಇರುವ ಗ್ರೇಡ್ ‘A’ ವೃಂದದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ನವೆಂಬರ್ 28 ರೊಳಗೆ ಅರ್ಜಿ ಸಲ್ಲಿಸಬಹುದು. ಜನರಲ್ ಸ್ಟ್ರೀಮ್ ನ ಒಟ್ಟು 50 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 8, ಎಸ್‌ಟಿ ಅಭ್ಯರ್ಥಿಗಳಿಗೆ  4, ಒಬಿಸಿ ವರ್ಗಕ್ಕೆ 11, ಆರ್ಥಿಕ ದುರ್ಬಲ ವರ್ಗದವರಿಗೆ 5 ಮತ್ತು ಸಾಮಾನ್ಯ ವರ್ಗಕ್ಕೆ 22 ಹುದ್ದೆಗಳನ್ನು ಮೀಸಲಿಡಲಾಗಿದೆ.

    ಆನ್ ಲೈನ್ ಪರೀಕ್ಷೆ(ಅಗತ್ಯವಿದ್ದಲ್ಲಿ) ಗುಂಪು ಚರ್ಚೆ, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ನೇಮಕ ಪ್ರಕ್ರಿಯೆಗಳು ನಡೆಯಲಿವೆ ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಬ್ಯಾಂಕ್ ತಿಳಿಸಿದೆ.

    ನವೆಂಬರ್ 08, 2023 ಕ್ಕೆ ವಯಸ್ಸಿನ ಮಿತಿ:

    ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳನ್ನು ಮೀರಿರಬಾರದು. ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸರಕಾರದ ನಿಯಮಾವಳಿ ಪ್ರಕಾರ ಸಡಿಲಿಕೆಯು ಈ ಕೆಳಗಿನಂತೆ ಇರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 5 ವರ್ಷ ಇತರೆ ಹಿಂದುಳಿದ ವರ್ಗಗಳಿಗೆ (ನಾನ್-ಕ್ರೀಮಿ ಲೇಯರ್) 3 ವರ್ಷಗಳು. ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳು.

    ಅರ್ಹತೆಗಳೇನು?

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ ಶೇಕಡಾ 60 ಅಂಕಗಳನ್ನು (ಎಸ್ಸಿ/ಎಸ್ ಟಿ/ವಿಶೇಷ ಚೇತನರು ಶೇಕಡಾ 55) ಪಡೆದಿರಬೇಕು.

    ಅಥವಾ

    ಸಿಎ/ಸಿಎಸ್/ಸಿಡಬ್ಲೂಎ/ಸಿಎಫ್ಎ/ ಸಿಎಂಎ ಅಥವಾ ಕಾನೂನಿನಲ್ಲಿ/ಇಂಜಿನಿಯರಿಂಗ್ ನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ ಶೇಕಡಾ 60% ಅಂಕಗಳನ್ನು (ಎಸ್ಸಿ/ಎಸ್ ಟಿ/ವಿಶೇಷ ಚೇತನರು ಶೇಕಡಾ 55) ಪಡೆದಿರಬೇಕು.

    ಶೈಕ್ಷಣಿಕ ಅರ್ಹತೆಯ ನಂತರ ಕೆಲಸದ  ಅನುಭವ:

    ಇದರೊಂದಿಗೆ ಅಭ್ಯರ್ಥಿಗಳು ಕನಿಷ್ಠ 2 ವರ್ಷ ವಾಣಿಜ್ಯ ಬ್ಯಾಂಕುಗಳು / ಅಖಿಲ ಭಾರತ ಹಣಕಾಸು ಸಂಸ್ಥೆ( All India Financial Institution ) ನಲ್ಲಿ  MSME ಸಾಲ ವಿಭಾಗದಲ್ಲಿ(ವೈಯಕ್ತಿಕ ಸಾಲ, ಶೈಕ್ಷಣಿಕ ಸಾಲ, ವಾಹನ ಸಾಲ, ವಸತಿ ಸಾಲ, ಇತ್ಯಾದಿ ಹೊರತುಪಡಿಸಿ)  ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.

    ಅಥವಾ

    ಮೂರು ವರ್ಷಗಳ ಪ್ರಮುಖ NBFCಗಳಲ್ಲಿ ವ್ಯವಸ್ಥಿತವಾದ MSME ಸಾಲದಲ್ಲಿ ವೈಯಕ್ತಿಕವಲ್ಲದ ಸಾಲ / ಕಾರ್ಪೊರೇಟ್ ಸಾಲ ನೀಡಿದ ಸೇವಾನುಭವ ಹೊಂದಿರಬೇಕು.

    ಅರ್ಜಿ ಶುಲ್ಕ ಏಷ್ಟು?:

    ಎಸ್‌ಸಿ/ಎಸ್‌ಟಿ/ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆದರೆ, 175 ರೂ, ಇಂಟಿಮೇಷನ್‌ ಫೀ ಪಾವತಿಸಬೇಕು. ಉಳಿದ ಎಲ್ಲಾ ವರ್ಗದವರು ಇಂಟಿಮೇಷನ್ ಫೀ ಸೇರಿಸಿ 1,100 ರೂ. ಪಾವತಿಸಬೇಕು. ಎಸ್‌ಐಡಿಬಿಐ ಸಿಬ್ಬಂದಿಯಾಗಿದ್ದಲ್ಲಿ ಸಂಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ (ರುಪೇ / ವೀಸಾ / ಮಾಸ್ಟರ್ ಕಾರ್ಡ್ / ಮೆಸ್ಟ್ರೋ), ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, IMPS, ನಗದು ಕಾರ್ಡ್‌ಗಳು / ಮೊಬೈಲ್ ವ್ಯಾಲೆಟ್‌ಗಳು ಬಳಸಿಕೊಂಡು ಆನ್ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್ ನಲ್ಲಿ ಮಾತ್ರ.

    ಪರೀಕ್ಷಾ ಪೂರ್ವ ತರಬೇತಿ:

    ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 10 ದಿನಗಳ ಪರೀಕ್ಷಾ ಪೂರ್ವ ತರಬೇತಿಯನ್ನು ಬ್ಯಾಂಕ್ ವತಿಯಿಂದ ನೀಡಲಾಗುತ್ತದೆ. ಆನ್‌ ಲೈನ್ ಮೂಲಕವೇ ತರಬೇತಿ ಇರುತ್ತದೆ. ತರಬೇತಿಯ ಅಗತ್ಯವಿದ್ದಲ್ಲಿ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಉಲ್ಲೇಖಿಸಬೇಕು.

    ಪರೀಕ್ಷಾಕೇಂದ್ರ: (ಪರೀಕ್ಷೆ ನಡೆದಲ್ಲಿ) ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು ಮಾತ್ರ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 28, 2023

    ಸಂದರ್ಶನ ಮತ್ತು ಗುಂಪು ಚರ್ಚೆ ನಡೆಯುವ ದಿನಾಂಕ: ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿ 2024

    ನೇಮಕ ಹೇಗೆ?

    ಆನ್ ಲೈನ್ ಪರೀಕ್ಷೆ(ಅಗತ್ಯವಿದ್ದಲ್ಲಿ) ಸಂದರ್ಶನ ಮತ್ತು ಗುಂಪು ಚರ್ಚೆ.

    ವೇತನ: ರೂ.44,500- ರೂ. 89,150

    ಹೊಸದೇನು ಗಮನಿಸಿ:

    • ಈ ಹಿಂದೆ ಎಲ್ಲ ಬ್ಯಾಂಕ್ ಹಾಗೂ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಫೋಟೋ, ಸಹಿ, ಎಡ ಹೆಬ್ಬೆರಳಿನ ಗುರುತು, ಕೈ ಬರಹದ ಘೋಷಣೆ ಮಾತ್ರ ಅಪ್ ಲೋಡ್ ಮಾಡಲಾಗುತ್ತಿತ್ತು. ಪಡೆದ ಅಂಕಗಳನ್ನು ಶೈಕ್ಷಣಿಕ ಕಾಲಂ ನಲ್ಲಿ ಮಾಹಿತಿ ನೀಡಬೇಕಾಗಿತ್ತು. ಆದರೆ ಈ ಪರೀಕ್ಷೆಗೆ ಶೈಕ್ಷಣಿಕ ಮಾಹಿತಿಗಳ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.

    ಅಪ್‌ಲೋಡ್ ಮಾಡುವ ವಿಧಾನ:

    • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಅಭ್ಯರ್ಥಿಗಳಿಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಲಿಂಕ್‌ಗಳುಒದಗಿಸಲಾಗುತ್ತಿದೆ.ಇವುಗಳಲ್ಲಿಫೋಟೋ,ಸಹಿ,ಎಡ ಹೆಬ್ಬೆರಳಿನ ಗುರುತು, ಕೈ ಬರಹದ ಘೋಷಣೆ, ವೈಯಕ್ತಿಕ ಮಾಹಿತಿ(Bio Data), ಶೈಕ್ಷಣಿಕ ಪ್ರಮಾಣಪತ್ರ ಮತ್ತು ಸಂಬಂಧಿತ ಕ್ಷೇತ್ರದಲ್ಲಿರುವ ಅನುಭವ / ಕೆಲಸದಿಂದ ನಿರ್ಗಮಿಸಿದ್ದಲ್ಲಿ ರಿಲೀವಿಂಗ್ ಪತ್ರ.  ಎಲ್ಲವನ್ನು ಅವುಗಳಿಗೆ ಸಂಬಂಧಿಸಿದ ಆಯಾಯ ಲಿಂಕ್ ಗಳನ್ನು ಕ್ಲಿಕ್ ಮಾಡಿ ಪ್ರತಿಯೊಂದು ಮಾಹಿತಿ ಯನ್ನು ಅಪ್ಲೋಡ್ ಮಾಡೋದನ್ನಮರೆಯಬೇಡಿ..

    ಆಯ್ಕೆ ವಿಧಾನ:

    • ಆಯ್ಕೆ ಪ್ರಕ್ರಿಯೆಯು ಗುಂಪು ಚರ್ಚೆ ಮತ್ತು ಸಂದರ್ಶನ ಮೂಲಕ ನಡೆಯುತ್ತದೆ.
    • ಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಿದ ನಂತರ,ಪೂರ್ವಭಾವಿಯಾಗಿ ಅರ್ಜಿ ನಮೂನೆಯಲ್ಲಿ ನಮೂದಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅದಕೆ ಪೂರಕವಾಗಿ ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಶೀಲಿಸಿ ನಿಗದಿಪಡಿಸಿದ ಅರ್ಹತೆ, ಸೂಕ್ತತೆ/ಅನುಭವ, ಇತ್ಯಾದಿಗಳ ಮೇಲೆ ಅರ್ಹ ಅಭ್ಯರ್ಥಿ  ಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
    • ಪೂರ್ವಭಾವಿ ಸ್ಕ್ರೀನಿಂಗ್ ನಂತರ ಆಯ್ಕೆಯಾದವರು ಮೂಲ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿರುತ್ತಾರೆ.
    • ನಂತರ ಬ್ಯಾಂಕ್ ಆನ್‌ಲೈನ್ ಸೈಕೋಮೆಟ್ರಿಕ್ ಪರೀಕ್ಷೆ ಅಥವಾ ವ್ಯಕ್ತಿತ್ವ, ಸಂವಹನದ ರೀತಿ, ಸ್ಪಷ್ಟತೆ ಮತ್ತುಸಮಸ್ಯೆ-ಪರಿಹರಿಸುವಿಕೆನಿರ್ಣಯಿಸುವ  ನವೀನತೆ, ದಕ್ಷತೆಯ ಬಗ್ಗೆ ಕಾಳಜಿ,ಇವುಗಳಿಗೆ ಸಂಬಂದಿಸಿದಂತೆ ಯಾವುದು ಸೂಕ್ತವಾಗಿದೆಯೋ ಅಂತಹ ಪರೀಕ್ಷೆಯನ್ನು ನಡೆಸುತ್ತದೆ.
    • ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡುವ ಇಚ್ಛೆ,ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹುದ್ದೆಗೆ ಸೂಕ್ತತೆ ಇತ್ಯಾದಿ. ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂದರ್ಶನದ ಸಮಿತಿಯ ಮುಂದೆ ನೀಡಲಾಗುವುದು.
    • ಸೈಕೋಮೆಟ್ರಿಕ್ ಪರೀಕ್ಷೆ ಯನ್ನು ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳನ್ನು ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಹಾಜರಾಗಲು ಕರೆಯಲಾಗುವುದು, ಇದು SIDBI ಯ ವಿವಿಧ ಕಚೇರಿಗಳಲ್ಲಿ ನಡೆಯುತ್ತದೆ. ಅಭ್ಯರ್ಥಿಯು ಮೊದಲು ಗುಂಪು ಚರ್ಚೆಗೆ ಹಾಜರಾಗಬೇಕು ಮತ್ತು ನಂತರ ಅದೇ ದಿನ ಸಂದರ್ಶನಕ್ಕೆ ಹಾಜರಾಗಬೇಕು.
    • ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಗರಿಷ್ಠ ಅಂಕಗಳು 100. ಪಡೆಯಬೇಕಾದ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸuತ್ತದೆ. ಗುಂಪು ಚರ್ಚೆಯಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನದ ಅರ್ಹತೆಗಾಗಿ ಪರಿಗಣಿಸ ಲಾಗುವುದು.
    • ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಅಭ್ಯರ್ಥಿಯು ಗಳಿಸಿದ ಸಂಯೋಜಿತ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.
    • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆಯನ್ನು ಆಧರಿಸಿ ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ನಡೆಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ.ಆನ್‌ಲೈನ್ ಪರೀಕ್ಷೆ ಸೂಕ್ತವೆಂದು ಭಾವಿಸಿದರೆ ಮಾತ್ರ ಪರೀಕ್ಷೆ ನಡೆಸಲಾಗುವುದು.ಪರೀಕ್ಷಾ ಕೇಂದ್ರಗಳ ತಾತ್ಕಾಲಿಕ ಪಟ್ಟಿ ಯಲ್ಲಿ ಬೆಂಗಳೂರು ಪರೀಕ್ಷಾ ಕೇಂದ್ರವಿದೆ. (ಪರೀಕ್ಷೆ ಅಗತ್ಯ ವಿರುವ ಸಂದರ್ಭದಲ್ಲಿ ಮಾತ್ರ ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ನಡೆಸ ಲಾಗುತ್ತದೆ).
    • ಇದೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವರದಾನ ವಾಗಬಹುದು. ಪರೀಕ್ಷೆ ನಡೆಯದಿದ್ದಲ್ಲಿ ಕೇವಲ ಸೈಕೋಮ್ಯಾಟ್ರಿಕ್ ಟೆಸ್ಟ್ ಗುಂಪು ಚರ್ಚೆ ಹಾಗೂ ಸಂದರ್ಶನ ಮಾತ್ರ ನಡೆಯಲಿದೆ.
    • ಗುಂಪು ಚರ್ಚೆ ಮತ್ತು ಸಂದರ್ಶನವು ಲಕ್ನೋ, ಮುಂಬೈ, ನವದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾ ದಲ್ಲಿ ಮಾತ್ರ ನಡೆಯಲಿದೆ.

    ವಿವರಗಳಿಗೆ: https://sidbi.in or www.sidbi.in

    ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣವಾಗಿ ಅಧಿಸೂಚನೆಯನ್ನುಓದಿಕೊಳ್ಳಬೇಕು. ನೇಮಕ ಸಂಬಂಧ ಎಲ್ಲಾ ಮಾಹಿತಿಯನ್ನು SIDBI ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತದೆ.

    error: Content is protected !!