16.7 C
Karnataka
Sunday, November 24, 2024
    Home Blog Page 10

    ಬೊಂಬೆ ಹಬ್ಬದ ಚಾರಿತ್ರಿಕ ಹಿನ್ನೆಲೆ

    ಲೀಲಾ ವಾಸುದೇವ್

    ಪುರಾಣ ಕಾಲದಿಂದಲೂ ಶಕ್ತಿ ದೇವತೆಗೆ ಪೂಜೆ ಸಲ್ಲಿಸುತ್ತಿದ್ದರು. ಜಗದ ಜನನಿಯ ಆರಾಧನೆಯನ್ನು ಭಾವನಾತ್ಮಕವಾಗಿ ಮಾಡುತ್ತಿದ್ದರು. ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿದ ಆದಿಶಕ್ತಿ ಎಂದು ಪೂಜಿಸಿದರು. ನಂತರ ಕಲ್ಪನಾತ್ಮಕ ರೂಪವನ್ನು ರಚಿಸಿದರು. ಬಿಂದು ಬ್ರಹ್ಮಾಂಡ 7 ತ್ರಿ ಕೋನಾಕಾರದ ನೆಟ್ಟು ಸಪ್ತಮಾತ್ರಿಕೆಯರೆಂದು ಕಲ್ಲಿನಲ್ಲಿಯೇ ರೂಪ ಕೊಟ್ಟು ಜನನಿ ಎಂದು ಪೂಜಿಸತೊಡಗಿದರು. ಮುಂದೆ ಶರನ್ನವರಾತ್ರಿ ಯಲ್ಲಿ ಎರಡು ಕಣ್ಣುಗಳನ್ನು ಬರೆದು ಪೂಜಿಸುತ್ತಿದ್ದರು. ಯುಗಾದಿಯ ನಂತರ ವಸಂತ ನವರಾತ್ರಿಯನ್ನು ಆಚರಿಸುವುದು ವಾಡಿಕೆ. ಶರನ್ನ್ ನವರಾತ್ರಿಯಲ್ಲಿ ನವ ದುರ್ಗಿಯನ್ನು ರೌದ್ರ ರೂಪ ದಲ್ಲಿ ಪೂಜಿಸಿದರೆ ವಸಂತ ನವರಾತ್ರಿಯಲ್ಲಿ ಸೌಮ್ಯ ರೂಪದಲ್ಲಿ ಆರಾಧಿಸುತ್ತಾರೆ.ಲಕ್ಷ್ಮಿ ಗೌರಿಯರು ಮುಂದೆ ಗೊಂಬೆಯ ರೂಪ ತಾಳಿದರು.

    ವಿಜಯನಗರದ ಕಾಲದಲ್ಲಿ ಗೊಂಬೆಗಳ ಪ್ರದರ್ಶನ ಮತ್ತು ಪೂಜೆ ಹೆಚ್ಚಾಗಿತ್ತು ಎಂದು ತಿಳಿದುಬರುತ್ತದೆ. ಅಂದಮೇಲೆ ಇದು ಇನ್ನೂ ಹಳೆಯ ಸಂಪ್ರದಾಯವೇ ಆಗಿರಬಹುದು. ನಂತರ ಸೂತ್ರದ ಗೊಂಬೆಗಳು ಹಾಗೂ ತೊಗಲುಗೊಂಬೆಗಳು ಆರಂಭವಾದವು. ಇವುಗಳನ್ನು ಮನರಂಜನೆಗೆ ಉಪಯೋಗಿಸಲು ಪ್ರಾರಂಭ ಮಾಡಿದರು. ಹೊಂಗೆ ಎಣ್ಣೆಯ ದೀಪ ವಿಟ್ಟು ಮುಂದೆ ಬಿಳಿ ಪರದೆ ಕಟ್ಟಿ ಹಿಂದೆಯಿಂದ ತೊಗಲುಗೊಂಬೆ ಯನ್ನು ಬಟ್ಟೆಯ ಮೇಲೆ ಇಟ್ಟು ಆಡಿಸುತ್ತಿದ್ದರು . ಸಾಮಾನ್ಯವಾಗಿ ತೊಗಲುಗೊಂಬೆ ಯಲ್ಲಿ ರಾಮಾಯಣ ಮತ್ತು ಮಹಾಭಾರತದ ಚಿತ್ರಗಳನ್ನು ಮಾಡಿ ರಾತ್ರಿಯೆಲ್ಲಾ ಕಥೆಗಳನ್ನು ನಿರೂಪಿಸುತ್ತಿದ್ದರು.

    ಪ್ರಕೃತಿ ಮತ್ತು ಪುರುಷ

    ಹಿಂದಿನ ಕಾಲದಲ್ಲಿ ಮದುವೆಯಾದ ಹೆಣ್ಣುಮಗಳಿಗೆ ಒಂದು ಜೊತೆ ಪ್ರಕೃತಿ ಮತ್ತು ಪುರುಷರ ಗೊಂಬೆಗಳನ್ನು ಶ್ರೀಗಂಧದ ಮರದಲ್ಲಿ ಮಾಡಿಸಿ ಕೊಡುತ್ತಿದ್ದರು ಎಂದು ತಿಳಿದು ಬರುತ್ತದೆ . ಇದು ಪರಂಪರೆಯಾಗಿ ನಡೆಯಬೇಕಾದ ಹಬ್ಬ. ನಂತರ ಗೊಂಬೆಗಳನ್ನು ರೋಸ್ ವುಡ್ ನಲ್ಲಿ ಮಾಡುವುದು ಅಧಿಕವಾಯಿತು. ಸಾಮಾನ್ಯವಾಗಿ ಇವು ಪಟ್ಟದ ಗೊಂಬೆಗಳು ಎಂದು ಪ್ರಖ್ಯಾತಿಯನ್ನು ಪಡೆದವು.

    ನವರಾತ್ರಿಯಲ್ಲಿ ನವ ದುರ್ಗಾ ಪೂಜೆ ಬಹಳ ಶ್ರೇಷ್ಠವಾಗಿದೆ.ಬೊಂಬೆ ಇಡಲು ಮೆಟ್ಟಿಲುಗಳಂತೆ ಜೋಡಿಸಿದ ಮರದ ಚೌಕಟ್ಟು ತಯಾರಿಸಿ ಅದರ ಮೇಲೆ ಮೊದಲಿಗೆ ಪಟ್ಟದ ಗೊಂಬೆಗಳನ್ನು ಇಕ್ಕೆಲಗಳಲ್ಲಿ ದೀಪವನ್ನು ಇಟ್ಟು ಮುಂದೆ ಕಲಶ ಪೂಜೆ ಮಾಡುತ್ತಾರೆ. ಇವುಗಳಿಗೆ ,ಆದ್ಯತೆ. ನಂತರದ ಮೆಟ್ಟಿಲ ಮೇಲೆ ದಶಾವತಾರ, ಅನ್ನಪೂರ್ಣೇಶ್ವರಿ, ಕಾಳಿಂಗಮರ್ದನ, ಅನಂತಶಯನ ,ರಾಮ ಲಕ್ಷ್ಮಣ ಸೀತೆ ….ಹೀಗೆ ದೇವತಾ ಪ್ರತೀ ಕ ಗೊಂಬೆಗಳು.

    ನಂತರ ಮಾನವರು, ಅಂಬಾರಿ ಮಹಾರಾಜರು, ವಿವಿಧ ಪುಸ್ತಕಗಳು, ವಾದ್ಯದ ಸಮೇತ ಸಂಗೀತಗಾರರು ,ಮುಂತಾದ ಬಹಳ ಆಕರ್ಷಕವಾದ ಗೊಂಬೆಗಳು ಬಂದವು. ಅಗತ್ಯ ವಸ್ತುಗಳು, ಹಣ್ಣುಗಳು ,ಬ್ಯಾಂಡ್ ಸೆಟ್ ,ಪಕ್ಕದ ಖಾಲಿ ಸ್ಥಳದಲ್ಲಿ ಉದ್ಯಾನವನ, ರೈತ ನೆಲ ಉಳುವುದು, ಮೃಗಾಲಯ ಗಳು ಗೊಂಬೆ ರೂಪ ಪಡೆದವು.

    ಇವುಗಳ ಮುಂದೆ ರಂಗೋಲಿ ಹಾಕುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ಅಕ್ಕಿಹಿಟ್ಟಿನ ರಂಗೋಲಿ. ಎಳೆ ರಂಗೋಲಿ ಚುಕ್ಕಿ ರಂಗೋಲಿ ( ಗೋಪಿಕಾಸ್ತ್ರೀಯರು ತುದಿಗಾಲಿನಲ್ಲಿ ನಿಂತು ನೃತ್ಯ ಮಾಡುತ್ತಿದ್ದು ಅದರ ಸಂಕೇತ ಚುಕ್ಕಿ ರಂಗೋಲಿ) ದೇವಿಯ ಸ್ತುತಿಯನ್ನು ಮಾಡಿ ಷೋಡಶೋಪಚಾರದಿಂದ ಪೂಜೆ ಮಾಡಿ ಒಂದು ಕಾಳು ಒಂದು ಅನ್ನದ ನೈವೇದ್ಯ ಆಗಬೇಕು ಆದರೆ ಪ್ರತಿಸಂಜೆ ಆರತಿ ಮಾಡುವುದು ಅಷ್ಟೇ ಮುಖ್ಯ ವಾಗಿರುತ್ತದೆ . ಇದೇ ಸಂದರ್ಭದಲ್ಲಿ ಮಕ್ಕಳಿಗೆ ತಿಂಡಿಯನ್ನು ಕೊಡುವುದುಬಹಳ ಮುಖ್ಯ.


    ಆಶ್ವಯುಜ ಮಾಸದಲ್ಲಿ ಆಚರಿಸಲ್ಪಡುವ ಸೌಹಾರ್ದತೆಯನ್ನು ಕಾಪಾಡುವ ಶರನ್ನವರಾತ್ರಿ ಭಾರತ ದೇಶದ ಎಲ್ಲಾ ಭಾಗಗಳಲ್ಲಿಯೂ ವಿಶೇಷವಾಗಿ ಆಚರಿಸಲ್ಪಡುತ್ತದೆ. ಹಳೆಯ ಕಾಲದ ಸಂಪ್ರದಾಯಸ್ಥರ ಮನೆಗಳಲ್ಲಿ ನೀಲು ಗೌರಿ ಇಡುತ್ತಾರೆ (3-4 ಅಡಿಯ ಗೊಂಬೆಗಳು ) ಪ್ರತಿದಿನ ರೂಪ ಬದಲಾಯಿಸಬೇಕು ಸಪ್ತಮಿಯ ದಿನ ಸರಸ್ವತಿ, ಅಷ್ಟಮಿಯ ದಿನ ದುರ್ಗಿ, ದಶಮಿಯಂದು ವಿಷ್ಣುರೂಪ ನಂತರ ವಿವಿಧ ಆಭರಣಗಳನ್ನು ಹಾಕಿ ಬಂಗಾರ ಮಾಡುತ್ತಾರೆ. ಇದು ನೋಡುವವರ ಕಣ್ಮನವನ್ನು ತಣಿಸುತ್ತದೆ.


    ಲೀಲಾ ವಾಸುದೇವ್ ಎಂ. ಎ. ಬಿ ಎಡ್ ಪದವೀಧರರು . ಇವರು ಮಲ್ಲೇಶ್ವರದ ದಿ ಬೆಂಗಳೂರು ಎಜುಕೇಶನ್ ಸೊಸೈಟಿ ಪದವಿಪೂರ್ವ ಕಾಲೇಜು ಮಲ್ಲೇಶ್ವರಂ ಪ್ರಾಂಶುಪಾಲರಾಗಿ ಇಲ್ಲಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಇವರು ಗಾಂಧಿ ಸಾಹಿತ್ಯ ಸಂಘ ಮತ್ತು ಸಿದ್ಧವನಹಳ್ಳಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಇದರಲ್ಲಿ ಟ್ರಸ್ಟಿ ಯಾಗಿದ್ದಾರೆ. ಇವರು ಹಲವಾರು ಕೃತಿಗಳನ್ನು ಬರೆದಿದ್ದಾರೆ ಅದರಲ್ಲಿ ಪ್ರಕಟಗೊಂಡ ಕೃತಿಗಳು ಯಾವುದೆಂದರೆ ಧರ್ಮಜ್ಯೋತಿ, ಭಾವನಾ ಬಿಂದು, ಮಕ್ಕಳ ಕಸ್ತೂರ್ಬಾ, ಭಾವನ ತುಂತುರು , ಕರ್ನಾಟಕದ ಕಸ್ತೂರ್ಬಾ ಯಶೋಧರಮ್ಮ ದಾಸಪ್ಪ, ಮಲ್ಲೇಶ್ವರದ ದೇವಸ್ಥಾನಗಳ ಕಿರುಪರಿಚಯ, ಶ್ಲೋಕ ರತ್ನಗಳು ಇವರ ಸಾಹಿತ್ಯ ಸೇವೆಗೆ ಮೆಚ್ಚಿ ಹಲವಾರು ಸಂಘ-ಸಂಸ್ಥೆಗಳು ಪುರಸ್ಕರಿಸಿದ್ದಾರೆ.


    ಷೇರುದಾರರ ಹಿತ ಕಾಯ್ದಾಗ ಪೇಟೆ ಸರ್ವರಿಗೂ ಹಿತದಾಯಕ

    ಷೇರುಪೇಟೆಯ ಚಟುವಟಿಕೆಯ ಶೈಲಿಯು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು,  ನಿಖರವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲದ ಮಟ್ಟದಲ್ಲಿ ಬದಲಾವಣೆಗಳನ್ನು ಕಾಣುತ್ತಿವೆ. ಈ ಹಿಂದೆ  ಐ ಪಿ ಒ ಎಂದರೆ ಇನ್ಫೋಸಿಸ್‌ ಎನ್ನುವ ಮಟ್ಟಕ್ಕೆ ಷೇರುಪೇಟೆಗೆ ಒಂದು ರೀತಿಯ ಮನ್ನಣೆಯನ್ನು ತಂದುಕೊಟ್ಟ ಇನ್ಫೋಸಿಸ್‌ ಸಹಜವಾಗಿಯೇ ತನ್ನ ಹೂಡಿಕೆದಾರರಿಗೆ ಅನಿರೀಕ್ಷಿತ ಮಟ್ಟದ ಸಂಪತ್‌ ನ್ನು ವೃದ್ಧಿಸಿಕೊಟ್ಟಿದೆ.  1993 ರ ಐ ಪಿ ಒ ನಲ್ಲಿ ಹೂಡಿಕೆ ಮಾಡಿದವರ  100 ಷೇರುಗಳ ಬಂಡವಾಳ ರೂ.9,500 ಯಾವ ರೀತಿ ಬೆಳೆದಿದೆ ಎಂದರೆ ಇಂದಿಗೆ ಸರಿ ಸುಮಾರು  55 ಸಾವಿರ ಷೇರುಗಳಾಗಿ ಅದಕ್ಕೆ ಪ್ರತಿ ವರ್ಷ ಸುಮಾರು ರೂ.20 ಲಕ್ಷದಷ್ಟು ಲಾಭಾಂಶವನ್ನು ವಿತರಿಸಿದೆ.

    ಅದಕ್ಕೂ ಹಿಂದಿನ ಹೂಡಿಕೆ ಶೈಲಿ ಪರಿಶೀಲಿಸಿದಾಗ  ಹೂಡಿಕೆ ಎಂದರೆ ಕಾಲ್ಗೇಟ್‌ ಪಾಲ್ಮೊಲಿವ್‌ ಎಂದು ಗುರುತಿಸಲ್ಪಡಲಾಗುತ್ತಿತ್ತು.  ಇದಕ್ಕೆ ಕಾರಣ ಕಾಲ್ಗೇಟ್‌ ಕಂಪನಿಯು 1978 ರಲ್ಲಿ ಪ್ರತಿ ರೂ.10 ರ ಮುಖಬೆಲೆಯ ಷೇರನ್ನು ರೂ.15 ರಂತೆ ವಿತರಿಸಿ 1994 ರ ವೇಳೆಗೆ ಅದನ್ನು 50 ಪಟ್ಟು ಬೆಳೆಸುವಷ್ಟು ಸಾಧನೆ ಮಾಡಿ.  ಹೂಡಿಕೆಯ ಮಹತ್ವವನ್ನು ಸಾರಿದೆ.

    ಇನ್ನು 80 ರ ದಶಕಗಳಿಂದೀಚೆಗೆ,  ಉಳಿತಾಯದ ರೀತಿ ನಾವು ಷೇರುಗಳಲ್ಲಿ ಹಣ ಹೂಡಿದಲ್ಲಿ ಹೂಡಿಕೆದಾರರಿಗೆ ನಿಯತಕಾಲಿಕವಾಗಿ ಮಾಸಾಶನದ ರೀತಿ ಲಾಭಾಂಶವನ್ನು ನೀಡಿ, ಹೂಡಿಕೆ ಮಾಡಿದ ಷೇರುಗಳ ದರಗಳು ಏರಿಕೆ ಕಾಣುವಂತಹ ಸಾಧನೆಯನ್ನು ಪ್ರದರ್ಶಿಸಿದ ಕಂಪನಿಗಳಲ್ಲಿ ಹೆಚ್‌ ಡಿ ಎಫ್‌ ಸಿ,  ಟಾಟಾ ಪವರ್‌ ( 2000 ದಲ್ಲಿ ಟಾಟಾ ಸಮೂಹದ ಟಾಟಾ ಹೈಡ್ರೋ ಮತ್ತು ಆಂದ್ರ ವ್ಯಾಲಿ ಕಂಪನಿಗಳನ್ನು 4:5 ರ ಅನುಪಾದತಲ್ಲಿ ಟಾಟಾ ಪವರ್‌ ನಲ್ಲಿ ವಿಲೀನಗೊಳಿಸಲಾಯಿತು) , ಐ ಟಿ ಸಿ, ಹಿಂದೂಸ್ಥಾನ್‌ ಲೀವರ್‌, ಈಸ್ಟ್‌ ಇಂಡಿಯಾ ಹೋಟೆಲ್ಸ್‌, ಬ್ರೂಕ್‌ ಬಾಂಡ್‌,  ಪಾಂಡ್ಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ವೈಶ್ಯ ಬ್ಯಾಂಕ್ ನಂತಹವು  ಮುಖ್ಯವಾದವು.  ಆಗ   ಷೇರುಗಳಲ್ಲಿ ಹೂಡಿಕೆಯನ್ನು ಹೆಚ್ಚಾಗಿ ಕಾರ್ಪರೇಟ್‌ ಫಲಗಳಾದ ಲಾಭಾಂಶ, ಬೋನಸ್‌ ಮತ್ತು ಹಕ್ಕಿನ ಷೇರುಗಳ ಮುಲಕ ಪಡೆಯಬಹುದಾದ ಅಂಶಗಳನ್ನಾಧರಿಸಿ, ಕಂಪನಿಗಳ ಆಂತರಿಕ ಸಾಮರ್ಥ್ಯವನ್ನಾಧರಿಸಿ ನಿರ್ಧರಿಸಲಾಗುತ್ತಿತ್ತು.  ಯಾರಿಗೂ ತಾತ್ಕಾಲಿಕ ಅಥವಾ ಅಲ್ಪಾವಧಿ  ಹೂಡಿಕೆಯ ಭಾವನೆ ಇರುತ್ತಿರಲಿಲ್ಲ.  

     ಇತ್ತೀಚಿನವರೆಗೂ ಅಂದರೆ 2020ರಲ್ಲಿ ತೇಲಿಬಿಟ್ಟ ಐ ಪಿ ಒ ಗಳು ಸ್ವಲ್ಪಮಟ್ಟಿನ ಪ್ರೀಮಿಯಂ ಹೆಚ್ಚು ಎನಿಸಿದರೂ ಅಲಾಟ್‌ ಆದವರಿಗೆ  ಆಕರ್ಷಣೀಯ ಲಾಭವನ್ನು ತಂದು ಕೊಟ್ಟಿವೆ.   ಮಾರ್ಚ್‌ ನಲ್ಲಿ ಬಂದ ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ ಸರ್ವಿಸಸ್‌  ಷೇರಿನ ಬೆಲೆ ಲೀಸ್ಟಿಂಗ್‌ ದಿನ ಸ್ವಲ್ಪ ಕುಸಿತ ಕಂಡರೂ ನಂತರ ಚೇತರಿಕೆ ಕಂಡಿದೆ.  ವಿತರಣೆ ಬೆಲೆ ರೂ.755 ಆದರೆ ಲಿಸ್ಟಿಂಗ್‌ ಬೆಲೆ ರೂ.684 ರ ಸಮೀಪವಿತ್ತು. ಈಗ ರೂ.900 ರ ಗಡಿ ದಾಟಿದೆ.

    ಅಕ್ಟೋಬರ್‌ 2020 ರಲ್ಲಿ ತೇಲಿಬಿಟ್ಟ ಯು ಟಿ ಐ ಅಸ್ಸೆಟ್‌ ಮ್ಯಾನೇಜ್‌ ಮೆಂಟ್‌ ಕಂಪನಿ ಷೇರು ರೂ.554 ರಲ್ಲಿ ವಿತರಿಸಿದರೂ ಲೀಸ್ಟಿಂಗ್‌ ದಿನ ರೂ.477 ರ ಸಮೀಪವಿದ್ದು ನಂತರ ಚೇತರಿಕೆ ಕಂಡಿದೆ.  ಈಗ ಅದರ ಬೆಲೆ ರೂ.720 ನ್ನು ದಾಟಿದೆ.

    ಅದರಂತೆ ಅಕ್ಟೋಬರ್‌ ತಿಂಗಳಲ್ಲಿ ವಿತರಣೆಯಾದ ಏಂಜೆಲ್‌ ಒನ್‌ ಕಂಪನಿಯ ಐ ಪಿ ಒ ಬೆಲೆ ರೂ.306 ಆದರೆ ಲೀಸ್ಟಿಂಗ್‌ ದಿನದ ಬೆಲೆ ರೂ.276 ರಲ್ಲಿತ್ತು.  ನಂತರ ಚೇತರಿಕೆ ಕಂಡು ಈಗ 1,360 ರ ಸಮೀಪವಿದೆ.

    ನವೆಂಬರ್‌ ನಲ್ಲಿ ತೇಲಿಬಿಟ್ಟ ಈಕ್ವಿಟಾಸ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ವಿತರಿಸಿದ್ದು ರೂ.33 ರಲ್ಲಿಯಾದರೂ ಲಿಸ್ಟಿಂಗ್‌ ರೂ.32.75, ನಂತರ ಚೇತರಿಕೆ ಕಂಡಿದೆ.  ಈಗ ರೂ.51 ನ್ನು ದಾಟಿದೆ.  

    ಮೇಲೆ ತಿಳಿಸಿದ ಈ ಕಂಪನಿಗಳನ್ನು ಹೊರತುಪಡಿಸಿದಲ್ಲಿ ಉಳಿದಂತೆ ಎಲ್ಲಾ ಕಂಪನಿಗಳು  ವಿತರಣೆ ಬೆಲೆಗಿಂತ ಹೆಚ್ಚಿನ ಆಕರ್ಷಣೀಯ ಬೆಲೆಯಲ್ಲಿ ವಹಿವಾಟಾಗುತ್ತಿವೆ.  ಕೆಲವು ಕಂಪನಿಗಳು ವಿತರಣೆ ಬೆಲೆಗಿಂತ ಕಡಿಮೆಯಾದಲ್ಲಿ ಚೇತರಿಕೆಯಿಂದ ಪುಟಿದೆದ್ದಿವೆ.  ಅಂದರೆ ವಿತರಣೆ ಬೆಲೆಗಳು ಸ್ವಲ್ಪಮಟ್ಟಿನ ನ್ಯಾಯಸಮ್ಮತವಾಗಿದ್ದವು ಎನ್ನಬಹುದು.

    2021 ರ ಐ ಪಿ ಒ ಗಳು

    ಆರಂಭಿಕ ಷೇರು ವಿತರಣೆಗಳು 2021 ರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದವು.  ಅವುಗಳಲ್ಲಿ ಸೇವಾ ವಲಯದ, ಸ್ಟಾರ್ಟ್‌ ಅಪ್‌ ಗಳು, ಪ್ಲಾಟ್ ಫಾರಂ ಕಂಪನಿಗಳೇ ಹೆಚ್ಚಿದ್ದವು.    ಆ ವರ್ಷ ತೇಲಿಬಿಟ್ಟ ಸುಮಾರು 60 ಕ್ಕೂ ಹೆಚ್ಚಿನ ಕಂಪನಿಗಳಲ್ಲಿ  25 ಕ್ಕೂ ಹೆಚ್ಚಿನ ಕಂಪನಿಗಳು ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿವೆ.  ಅತಿ ಹೆಚ್ಚು ಹಾನಿಯುಂಟುಮಾಡಿದ ಕಂಪನಿಗಳೆಂದರೆ

    • ಒನ್‌ 97 ಕಮ್ಯುನಿಕೇಷನ್ಸ್‌ ; ವಿತರಿಸಿದ ಬೆಲೆ ರೂ.2,150:  2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.637
    • ಕಾರ್‌ ಟ್ರೇಡ್‌ ಟೆಕ್‌            : ವಿತರಿಸಿದ ಬೆಲೆ ರೂ.1,600  :  2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.610
    • ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ : ವಿತರಿಸಿದ ಬೆಲೆ ರೂ.305 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.99
    • ಫಿನೋ ಪೇಮೆಂಟ್ಸ್‌ ಬ್ಯಾಂಕ್‌ : ವಿತರಿಸಿದ ಬೆಲೆ ರೂ.577  : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.225
    • ಪಿ ಬಿ ಫಿನ್ ಟೆಕ್‌ ‌        : ವಿತರಿಸಿದ ಬೆಲೆ ರೂ.980  :  2022 ರ ಸೆಪ್ಟೆಂಬರ್‌  ಅಂತ್ಯದ ಬೆಲೆ ರೂ.473
    • ರೇಟ್‌ ಗೇನ್‌ ಟ್ರಾವಲ್‌ ಟೆಕ್ನಾಲಜೀಸ್‌ : ವಿತರಿಸಿದ ಬೆಲೆ ರೂ.425 ; 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.270
    • ಶ್ರೀರಾಮ್‌ ಪ್ರಾಪರ್ಟೀಸ್‌  :  ವಿತರಿಸಿದ ಬೆಲೆ ರೂ.118 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.75
    • ಆದಿತ್ಯ ಬಿರ್ಲಾ ಸನ್‌ ಲೈಫ್‌ ಎ ಎಂ ಸಿ : ವಿತರಿಸಿದ ಬೆಲೆ ರೂ.712  : 2022 ರ ಸೆಪ್ಟೆಂಬರ್‌  ಅಂತ್ಯದ ಬೆಲೆ ರೂ.455
    • ವಿಂಡ್ಲಾಸ್‌ ಬಯೋಟೆಕ್‌  ವಿತರಿಸಿದ ಬೆಲೆ ರೂ.460 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.234
    • ಗ್ಲೆನ್‌ ಮಾರ್ಕ್‌ ಲೈಫ್‌ ಸೈನ್ಸಸ್‌  ವಿತರಿಸಿದ ಬೆಲೆ ರೂ.720  : 2020 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.386

    ಹಾಗೆಯೇ ಮೆಡ್‌ ಪ್ಲಸ್‌ ಹೆಲ್ತ್‌ ಸರ್ವಿಸಸ್‌,  ಸ್ಟಾರ್‌ ಹೆಲ್ತ ಅಂಡ್‌ ಅಲೈಡ್‌ ಇನ್ಷೂರನ್ಸ್‌ ಕಂಪನಿ, ಎಸ್‌ ಜೆ ಎಸ್‌ ಎಂಟರ್ಪ್ರೈಸಸ್‌, ವಿಜಯ್‌ ಡಯಾಗ್ನಾಸ್ಟಿಕ್ ಸೆಂಟರ್‌,  ನುವೊಕೋ ವಿಸ್ಟಾಸ್‌ ಕಾರ್ಪೊರೇಷನ್‌, ಎಕ್ಸಾರೋ ಟೈಲ್ಸ್‌,  ಝೊಮೆಟೋ, ಶ್ಯಾಂ ಮೆಟಲಿಕ್ಸ್‌, ಇಂಡಿಯಾ ಪೆಸ್ಟಿಸೈಡ್ಸ್‌, ಇಂಡಿಯನ್‌ ರೈಲ್ವೇ ಫೈನಾನ್ಸ್‌ ಕಾರ್ಪೊರೇಷನ್‌ ಗಳು ಸಹ ಸೆಪ್ಟೆಂಬರ್‌ ಅಂತ್ಯದಲ್ಲಿ ವಿತರಣೆ ಬೆಲೆಗಳಿಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿವೆ.

    ಅಂದರೆ ಎಲ್ಲಾ  ಐ ಪಿ ಒ  ಕಂಪನಿಗಳು ಹಾನಿಗೊಳಪಡಿಸಿವೆ ಎಂದಲ್ಲ, ಕಂಪನಿಗಳಾದ  ಪಾರಸ್‌ ಡಿಫೆನ್ಸ್‌ ಅಂಡ್‌ ಸ್ಪೇಸ್  ಟೆಕ್ನಾಲಜೀಸ್‌ ‌, ದೇವಿಯಾನಿ ಇಂಟರ್‌ ನ್ಯಾಶನಲ್‌,  ತತ್ವ ಚಿಂತನ್‌ ಫಾರ್ಮ ಕೆಂ,  ಕೃಷ್ಣ ಇನ್ಸ್ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌, ಬಾರ್ಬೆಕ್‌ ನ್ಯಾಶನ್‌ ಹಾಸ್ಪಿಟಾಲಿಟಿ,  ಸ್ಟೋವ್‌ ಕ್ರಾಫ್ಟ್‌,  ಹೋಂ ಫಸ್ಟ್‌ ಫೈನಾನ್ಸ್ ಕಂಪನಿ, ನ್ಯೂರೇಕಾ , ಲಕ್ಷ್ಮಿ ಆರ್ಗಾನಿಕ್‌ ಇಂಡಸ್ಟ್ರೀಸ್‌,  ಅನುಪಮ್‌ ರಸಾಯನ್‌ ಇಂಡಿಯಾ, ಮ್ಯಾಕ್ರೋಟೆಕ್‌ ಡೆವಲಪರ್ಸ್‌ , ರೋಲೆಕ್ಸ್‌ ರಿಂಗ್ಸ್‌,  ಅಮಿ ಆರ್ಗಾನಿಕ್ಸ್‌,  ಸಿಗಾಚಿ ಇಂಡಸ್ಟ್ರೀಸ್‌, ಗೋ ಫ್ಯಾಶನ್ಸ್( ಇಂಡಿಯಾ),  ಮೆಟ್ರೋಡ್ಸ್‌,  ಡಟಾ ಪ್ಯಾಟರ್ನ್ಸ್‌ ( ಇಂಡಿಯಾ), ಹೆಚ್‌ ಪಿ ಅಡ್ಹೆಸಿವ್ಸ್‌ , ಕ್ಲೀನ್‌ ಸೈನ್ಸ್‌ ಅಂಡ್ ಟೆಕ್ನಾಲಜೀಸ್‌,   ನಂತಹ ಕಂಪನಿಗಳು ಲಾಭದಾಯಕವಾಗಿವೆ.ನಝಾರಾ ಟೆಕ್ನಾಲಜೀಸ್‌, ಈಸಿ ಟ್ರಿಪ್‌ ಪ್ಲಾನರ್ಸ್‌ ಕಂಪನಿಗಳು ಆಕರ್ಷಣೀಯ ಬೋನಸ್‌ ಷೇರುಗಳನ್ನೂ ವಿತರಿಸಿವೆ.

    ಆದರೆ ಅತ್ಯಧಿಕ ಪ್ರೀಮಿಯಂನಲ್ಲಿ ವಿತರಿಸಿದ ಕೆಲವು ಕಂಪನಿಗಳು ವಿತರಣೆಗೂ ಮುಂಚಿನ ಮೂರು ವರ್ಷಗಳು ನಿರಂತರವಾಗಿ ಹಾನಿಗೊಳಗಾಗಿರುವಾಗ ವಿತರಿಸಿದ ಬೆಲೆ ಮಾತ್ರ ಬೆರಗಾಗಿಸುವಂತಿದ್ದು, ಜನಸಾಮಾನ್ಯರನ್ನು ತಮ್ಮ ಬ್ರಾಂಡ್‌ ಆಧಾರದ ಮೇಲೆ ಆಕರ್ಷಿಸಿ, ಹಾನಿಗೊಳಪಡಿಸಿವೆ.

    ಆರೋಗ್ಯಕರ ಬೆಳವಣಿಗೆ:


    ಐ ಪಿ ಒ ಗಳ ಪರಿಸ್ಥಿತಿ ಈ ಮಟ್ಟಕ್ಕೆ ಕುಸಿದಿರುವ ಈ ಹಂತದಲ್ಲಿ ಕಂಪನಿಗಳು ತಮ್ಮ ಚಿಂತನೆಯನ್ನು ಷೇರುದಾರರ ಪರವಾಗಿ ತೆಗೆದುಕೊಂಡಿರುವುದೂ ಸಹ ಇದೆ.   ಕರ್ನಾಟಕದ ಕಂಪನಿ ಸಂಡೂರ್‌ ಮ್ಯಾಂಗನೀಸ್‌ ಅಂಡ್‌ ಐರನ್‌ ಓರ್ಸ್‌ ಕಂಪನಿಯು ಆಗಸ್ಟ್‌ ನಲ್ಲಿ ಪ್ರತಿ ಷೇರಿಗೆ ಒಂದರಂತೆ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿದೆ.  ಪೇಟೆಯಲ್ಲಿ ಷೇರಿನ ಬೆಲೆ ರೂ.2,000 ದಿಂದ ರೂ.3,000 ದಲ್ಲಿರುವಾಗ ಮುಖಬೆಲೆಯಲ್ಲೇ ವಿತರಣೆ ಮಾಡಿ ಹೂಡಿಕೆದಾರರ ಸ್ನೇಹಿತ್ವದಿಂದ ಮೆರೆದಿದೆ.

    ಅದೇ ರೀತಿ  ಡೈರಿ ವಲಯದ ಕಂಪನಿ ಹೆರಿಟೇಜ್‌ ಫುಡ್ಸ್‌  ಕಂಪನಿ ಪ್ರತಿ ಒಂದು ಷೇರಿಗೆ ಒಂದರಂತೆ ಮುಖಬೆಲೆಯಾದ ರೂ.5 ರಂತೆ ಹಕ್ಕಿನ ಷೇರು ವಿತರಿಸುವುದಾಗಿ ಪ್ರಕಟಿಸಿದೆ. ಇದು ಉತ್ತಮ ಬೆಳವಣಿಗೆ.  

    ಕಾರ್ಪೊರೇಟ್‌ ಪಿತಾಮಹರಾದ ಧೀರೂಭಾಯಿ ಅಂಬಾನಿಯವರು ತಮ್ಮ ಕಂಪನಿಯನ್ನು ಬೆಳೆಸುವುದಕ್ಕೆ ಅನುಸರಿಸಿದ ಹಾದಿ ಎಂದರೆ ಷೇರುದಾರರನ್ನು ಪೋಷಿಸಿಕೊಂಡು, ಅವರನ್ನು ಹರ್ಷಚಿತ್ತರನ್ನಾಗಿಸಿ, ಪ್ರತಿಯೊಂದು ವಿತರಣೆಯಲ್ಲಿ ಉತ್ತಮ ಬೆಂಬಲ ಪಡೆದುಕೊಂಡು ಕಾರ್ಪೊರೇಟ್‌ ಕಲ್ಪನೆಯನ್ನು ಸಾಕಾರಗೊಳಿಸಿದರು.  ಮುಂದಿನ ದಿನಗಳಲ್ಲಿ ಕಂಪನಿಗಳಾದ ಸಂಡೂರ್‌ ಮ್ಯಾಂಗನೀಸ್‌ ಅಂಡ್‌ ಐರನ್‌ ಓರ್ಸ್‌ ಮತ್ತು ಹೆರಿಟೇಜ್‌ ಫುಡ್‌ ಗಳು ತೆಗೆದುಕೊಂಡ ಹೂಡಿಕೆದಾರ ಸ್ನೇಹಿ, ಷೇರುದಾರರ ಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚು ಹೆಚ್ಚು ಹೂಡಿಕೆದಾರರು ಪೇಟೆ ಪ್ರವೇಶಿಸುತ್ತಿರುವ ವಾತಾವರಣಕ್ಕೆ ಪುಷ್ಠಿದಾಯಕವಾಗಿಸುತ್ತಾರೆ ಎಂದು ಆಶಿಸೋಣ. 

    Dasara Doll Festival: ಚಿಕ್ಕಕಲ್ಲಸಂದ್ರದ ಜಯಶ್ರೀ ಅವರ ಮನೆಯ ದಸರಾ ಗೊಂಬೆ ನೋಟ

    ಕನ್ನಡಪ್ರೆಸ್ ಕಾಮ್ ದಸರಾ ಗೊಂಬೆ ಹಬ್ಬಕ್ಕೆ ಪೋಟೋಗಳು ಹರಿದು ಬರುತ್ತಲೇ ಇವೆ. ಆಯ್ದ ಗೊಂಬೆ ಮನೆಯ ಮತ್ತೊಂದು ಕಂತು ಇಲ್ಲಿದೆ.

    CET ಸಿಇಟಿ: ಪರಿಷ್ಕೃತ ರ್‍ಯಾಂಕಿಂಗ್ ಬಿಡುಗಡೆ ಮೊದಲ 500 ರ್‍ಯಾಂಕಿಂಗ್‌ನಲ್ಲಿ ವ್ಯತ್ಯಾಸವಾಗಿಲ್ಲ: ಅಶ್ವತ್ಥನಾರಾಯಣ

    BENGALURU OCT 1

    ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ ರ್‍ಯಾಂಕಿಂಗ್‌ನ ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದೆ. ಜುಲೈ 30ರಂದು ಹೊರಡಿಸಿದ್ದ ರ್‍ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್‍ಯಾಂಕಿಂಗ್‌ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹೋದ ವರ್ಷವೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಈ ವರ್ಷವೂ ಸಿಇಟಿ ಬರೆದಿದ್ದ 24 ಸಾವಿರ ಅಭ್ಯರ್ಥಿಗಳು 2021ರಲ್ಲಿ ಗಳಿಸಿದ್ದ ಅಂಕಗಳಲ್ಲಿ ಶೇಕಡ 6ರಷ್ಟು ಅಂಕಗಳನ್ನು ಕಡಿತಗೊಳಿಸಿದ ನಂತರ ಆ ವರ್ಷದ ಅಂಕಗಳ ಶೇಕಡ 50ರಷ್ಟು ಮತ್ತು ಸಿಇಟಿಯಲ್ಲಿ ಪಡೆದ ಅಂಕಗಳ ಶೇಕಡ 50ರಷ್ಟನ್ನು ಪರಿಗಣಿಸಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಹೋದ ವರ್ಷದ 14 ವಿದ್ಯಾರ್ಥಿಗಳು ಮಾತ್ರ 500ರಿಂದ 1,000ನೇ ರ್‍ಯಾಂಕ್ ಮಧ್ಯೆ ಸ್ಥಾನ ಪಡೆದಿದ್ದಾರೆ ಎಂದು ವಿವರಿಸಿದರು.

    ಹಾಗೆಯೇ, 501ರಿಂದ 10,000ನೇ ರ್‍ಯಾಂಕಿಂಗ್‌ನಲ್ಲಿ ಹೋದ ವರ್ಷದ 2,063 ಅಭ್ಯರ್ಥಿಗಳು ಮತ್ತು 22,022 ಅಭ್ಯರ್ಥಿಗಳು 10,001ದಿಂದ 1 ಲಕ್ಷದವರೆಗಿನ ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ, ನ್ಯಾಚುರೋಪತಿ ಕೋರ್ಸುಗಳಿಗೆ ಮಾತ್ರ ಅನ್ವಯವಾಗುತ್ತದೆ. ವೆಟರ್ನರಿ ಮತ್ತು ಫಾರ್ಮಸಿ ಕೋರ್ಸುಗಳಿಗೆ ಈ ಹಿಂದೆ ನೀಡಿರುವಂತೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್‍ಯಾಂಕಿಂಗ್ ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ತೇರ್ಗಡೆಗೊಳಿಸಲಾಗಿತ್ತು. ಬಳಿಕ, ದ್ವಿತೀಯ ಪಿಯುಸಿ ಅಂಕಗಳನ್ನು ಮಾತ್ರ ಪರಿಗಣಿಸಿ ಅವರಿಗೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಕೊಡಲಾಗಿತ್ತು. ಅಂಥವರ ಪೈಕಿ 24 ಸಾವಿರ ವಿದ್ಯಾರ್ಥಿಗಳು ಈ ವರ್ಷವೂ ಸಿಇಟಿ ಬರೆದಿದ್ದರು. ಇವರೆಲ್ಲ, ತಮ್ಮ ಸಿಇಟಿ ಅಂಕವನ್ನೂ ಪರಿಗಣಿಸಬೇಕೆಂದು ಕೋರಿ ಹೈಕೋರ್ಟಿನ ಮೆಟ್ಟಿಲು ಹತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

    ಅಕ್ಟೋಬರ್ 1 ರಂದುಮೈಸೂರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಸುವರ್ಣೋತ್ಸವ

    ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರನ್ನು ತನ್ನೆಡೆಗೆ ಸೆಳೆಯಲು , ವಿಭಿನ್ನ ರೀತಿಯ ಸದಾಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ , ಜೇನುಗೂಡು , ಮರಳಿಮನಸಾಗಿದೆ , ಬೆಟ್ಟದ ಹೂ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಆಯೋಜಿಸುತ್ತಿರುವ ‘ಸುವರ್ಣೋತ್ಸವ’ ಕಾರ್ಯಕ್ರಮವು ಈ ಬಾರಿಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ.ಅಕ್ಟೋಬರ್ 1 ರಂದು ಶನಿವಾರ ಸಂಜೆ 5 ಗಂಟೆಗೆ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಈ ಅದ್ದೂರಿ ಸಂಭ್ರಮಾಚರಣೆಯಲ್ಲಿ ‘ಬೊಂಬಾಟ್ ಭೋಜನ’ ಕಾರ್ಯಕ್ರಮ ಖ್ಯಾತಿಯ ಸಿಹಿ ಕಹಿ ಚಂದ್ರು, ‘ಮುದ್ದುಮಣಿಗಳು’ ಧಾರಾವಾಹಿ ಖ್ಯಾತಿಯ ಶಿವು ಹಾಗು ದೃಷ್ಟಿ , ‘ಬೆಟ್ಟದ ಹೂ’ ಧಾರಾವಾಹಿ ಕಲಾವಿದರಾದ ಹೂವಿ, ಸುನೇತ್ರ ಪಂಡಿತ್, ನಾರಾಯಣ ಸ್ವಾಮಿ ಮತ್ತಿತರ ಕಲಾವಿದರು ಒಂದೇ ವೇದಿಕೆ ಮೇಲೆ ಒಟ್ಟಾಗಿ ಬರುತ್ತಿದ್ದಾರೆ. ಸುವರ್ಣ ಪರಿವಾರದ ತಾರೆಯರೊಂದಿಗೆ ಹಾಡು, ಹರಟೆ, ಆಟಗಳ ಜೊತೆಗೆ ಮನೋರಂಜನೆಯ ಮಹಾಮೇಳವೇ ನಡೆಯಲಿದೆ.

    KCET: ಸಿಇಟಿ: ಪರಿಷ್ಕೃತ ರಾಂಕಿಂಗ್ ಶನಿವಾರ ಪ್ರಕಟ

    BENGALURU SEPT 30

    ಹೈಕೋರ್ಟ್ ಆದೇಶವನ್ನು ಮನ್ನಿಸಿ ಸಿದ್ಧಪಡಿಸಿರುವ ಸಿಇಟಿ ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ಶನಿವಾರ (ಅಕ್ಟೋಬರ್ 1) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

    ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ karresults.nic.in ನಲ್ಲಿ ನೋಡಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    DASARA DOLLS:ನೋಡಲೆರಡು ಕಣ್ಣು ಸಾಲದು ದಸರಾ ಗೊಂಬೆಗಳ ನೋಡಲು..

    ಕನ್ನಡಪ್ರೆಸ್ ಕಾಮ್ ದಸರಾ ಗೊಂಬೆ ಹಬ್ಬಕ್ಕೆ ಪೋಟೋಗಳು ಹರಿದು ಬರುತ್ತಲೇ ಇವೆ. ಆಯ್ದ ಗೊಂಬೆ ಮನೆಯ ಮೊದಲ ಕಂತು ಇಲ್ಲಿದೆ.

    DASARA :ಇಂದಿನಿಂದ ದಸರಾ; ಎಲ್ಲೆಲ್ಲೂ ಸಡಗರ

    ಇಂದಿನಿಂದ ನಾಡಹಬ್ಬ. ಒಂಭತ್ತು ದಿನಗಳ ನವರಾತ್ರಿ ಆರಂಭ. ಮನೆ ಮನೆಗಳಲ್ಲೂ ಹಬ್ಬದ ಸಡಗರ. ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಲನೆ.

    ಈ ಒಂಭತ್ತು ದಿನಗಳು ಪೌರಾಣಿಕವಾಗಿ , ಐತಿಹಾಸಿಕವಾಗಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ. ಗಮಕ ವ್ಯಾಖ್ಯಾನದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ ಅವರು ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ನವರಾತ್ರಿ ಆಚರಣೆಯ ಹಿಂದಿನ ಉದ್ದೇಶವನ್ನು ವಿವರವಾಗಿ ಚರ್ಚಿಸಿದ್ದಾರೆ. ಈ ಕೆಳಗಿನ ಲಿಂಕ್ ಮೂಲಕ ಆ ವಿಡಿಯೋ ನೋಡಬಹುದು. ಇದರ ಜೊತೆಗೆ ಲತಾ ಶ್ರೀಕಾಂತ್ ಮತ್ತು ನಯನಾ ಶ್ರೀಕಾಂತ್ ಅವರು ಹಾಡಿರುವ ಹಾಡುಗಳು ದಸರಾ ಸಂಭ್ರಮ ಹೆಚ್ಚಿಸಿವೆ.

    ಇದರ ಜೊತಗೆ ಆ ಒಂಭತ್ತು ದಿನವೂ ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ದಸರಾ ಸಂಗೀತೋತ್ಸವ ನಡೆಯುತ್ತಿದೆ. ನಮ್ಮ ಚಾನಲ್ ಗೆ ಸಬ್ ಸ್ಕ್ರೈಬ್ ಆಗುವ ಮೂಲಕ ವೀಕ್ಷಿಸ ಬಹುದಾಗಿದೆ.

    ನಮ್ಮೆಲ್ಲಾ ಓದುಗರಿಗೂ ನವರಾತ್ರಿಯ ಶುಭಾಶಯಗಳು.

    MYSURU DASARA :ನಾಳೆ ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳ ಆಗಮನ; ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಪೂರ್ವಸಿದ್ಧತೆ ಪರಿಶೀಲನೆ

    MYSURU SEP 25

    ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂರ್ವಸಿದ್ಧತೆ ಪರಿಶೀಲಿಸಿದರು.

    ವೇದಿಕೆ ಸಿದ್ಧತೆ, ಗಣ್ಯರು, ಅಧಿಕಾರಿಗಳು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದಸರಾದ ಎಲ್ಲಾ ಸಿದ್ಧತೆ ಅಂತಿಮವಾಗಿದೆ. ರಾಷ್ಟ್ರಪತಿ ಕಚೇರಿಯಿಂದ ಬಂದ ಸೂಚನೆಯಂತೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದರು.

    ವೇದಿಕೆ ಮೇಲೆ ರಾಷ್ಟ್ರಪತಿಗಳು ಸೇರಿದಂತೆ 13 ಗಣ್ಯರು ಇರಲಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳು, ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ವೇದಿಕೆಗೆ ಆಗಮಿಸಿ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಬುಡಕಟ್ಟು ಸಮುದಾಯವರನ್ನು ಭೇಟಿ ಮಾಡಿ ಹುಬ್ಬಳ್ಳಿಗೆ ತೆರಳಲಿದ್ದಾರೆ ಎಂದು ಹೇಳಿದರು.

    ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂರ್ವಸಿದ್ಧತೆ ಪರಿಶೀಲಿಸಿದರು.

    ಬುಡಕಟ್ಟು ಜನರ ಭೇಟಿ, ರಾಷ್ಟ್ರಪತಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ
    ದೇವಸ್ಥಾನದ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗದಿಂದ ಬುಡಕಟ್ಟು ಸಮುದಾಯದ 14 ಜನರು ಆಗಮಿಸಲಿದ್ದಾರೆ ಎಂದು ಹೇಳಿದರು.

    ರಾಷ್ಟ್ರಪತಿಗಳೊಂದಿಗೆ ವೇದಿಕೆ ಹಂಚಿಕೊಳ್ಳಬಾರದೆಂದು ಆಪ್ ಪತ್ರ ಬರೆದಿರುವ ವಿಚಾರ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಅನಾವಶ್ಯಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ರಾಜಕೀಯ ಮಾಡುತ್ತಿದ್ದು, ಅದನ್ನು ರಾಜಕೀಯವಾಗಿ ಎದುರಿಸುತ್ತೇನೆ ಎಂದರು.

    ನಾವು ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವರ್ಕ್ ಆರ್ಡರ್‌ ನೀಡಿದ್ದಾರೆ. ಇದರಲ್ಲಿ ನಮ್ಮ ಪಾತ್ರ ಇಲ್ಲ, ಯಾವುದೇ ವ್ಯವಹಾರ ಇಲ್ಲ. ಕಡತಗಳು ಅಧ್ಯಕ್ಷರಿಗೆ ಬರಲ್ಲ ಮತ್ತು ಯಾವ ಕಡತಕ್ಕೂ ಸಹಿ ಕೂಡ ಹಾಕಿಲ್ಲ. ಹಣಕಾಸಿನ ಯಾವುದೇ ವ್ಯವಹಾರ ಮಾಡಿಲ್ಲ. ರಾಜಕೀಯವಾಗಿ ಮಾಡಿದ್ದಾರೆ, ರಾಜಕೀಯವಾಗಿ ಎದುರಿಸುತ್ತೇನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

    ಹಿರಿಯ ನಾಯಕ ಎಸ್.ಎಂ ಕೃಷ್ಣ ಆರೋಗ್ಯವಾಗಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU SEP 25

    ರಾಜ್ಯದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಆರೋಗ್ಯ ಚೇತರಿಕೆಯಾಗಿದೆ. ಎರಡು, ‌ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಅವರು ಮನೆಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

    ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

    ರಾಜ್ಯದ ಹಿರಿಯ ನಾಯಕ ಎಸ್ ಎಂ ಕೃಷ್ಣ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ನಿರಂತರ ಚಿಕಿತ್ಸೆಯಿಂದ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಮೂರು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ. ರಾಜ್ಯದ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ರಾಷ್ಟ್ರಪತಿಗಳಿಂದ ನಾಳೆ ದಸರಾ ಉದ್ಘಾಟನೆ

    ನಾಳೆಯ ದಸರಾ ಉದ್ಘಾಟನೆಗೆ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆಮ ಅವರಿಂದ ಚಾಮುಂಡೇಶ್ವರಿ ದೇವಿ ಪೂಜೆ ಮತ್ತು ದಸರಾ ಉದ್ಘಾಟನೆ ನಡೆಯಲಿದೆ. ರಾಜ್ಯದಲ್ಲಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    error: Content is protected !!