21.5 C
Karnataka
Sunday, December 1, 2024
    Home Blog Page 100

    ಬೇರೆ ಜಿಲ್ಲೆಯಲ್ಲಿ ವಾಸ ಇರುವ ಶಿಕ್ಷಕರಿಗೂ ಮನೆಯಿಂದಲೇ ಕೆಲಸ

    ನಾಳೆಯಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕೆನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮತ್ತೊಂದು ಪರಿಷ್ಕೃತ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

    ಮೊದಲ ಆದೇಶದಲ್ಲಿ ಲಾಕ್ ಡೌನ್ ಇರುವ 11 ಜಿಲ್ಲೆಗಳ ಶಿಕ್ಷಕರು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ತಿಳಿಸಲಾಗಿತ್ತು.ಈಗಿನ ಆದೇಶದಲ್ಲಿ, ಲಾಕ್ ಡೌನ್ ತೆರವುಗೊಳಿಸಲಾಗಿರುವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಆದರೆ ಲಾಕ್ ಡೌನ್ ಇರುವ ಜಿಲ್ಲೆಯಲ್ಲಿ ಸಧ್ಯ ವಾಸಿಸುತ್ತಿರುವವರಿಗೆ ಕೂಡ ಜೂನ್ 21ರ ವರಗೆ ಶಾಲೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

    ಲಾಕ್ ಡೌನ್ ಇರದಿದ್ದರೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಈ ಆದೇಶ ಹೊರಟಿದೆ. ಲಾಕ್ ಡೌನ್ ಇರದ ಜಿಲ್ಲೆಗಳಲ್ಲಿ ಇರುವ ಶಿಕ್ಷಕರು ಅದೇ ಜಿಲ್ಲೆಯಲ್ಲಿ ಇದ್ದ ಪಕ್ಷದಲ್ಲಿ ಶಾಲೆಗಳಿಗೆ ಹಾಜರಾಗಬೇಕು.

    ಆದೇಶದ ಪ್ರತಿ ಇಲ್ಲಿದೆ.

    ಸಂಚಾರ ಮುಗಿಸಿದ ವಿಜಯ್ ಇನ್ನು ನೆನಪಷ್ಟೆ


    ಎಲ್ಲರ ಪ್ರಾರ್ಥನೆಯನ್ನು ಮೀರಿ ಸಂಚಾರ ಮುಗಿಸಿ ಹೊರಟ ಕಲಾವಿದ ಸಂಚಾರಿ ವಿಜಯ್ ರೊಂದಿಗಿನ ಒಡನಾಟವನ್ನು ರಂಗಕರ್ಮಿ ಸರ್ವಮ್ ಥಿಯೇಟರ್ ತಂಡದ ದಿವ್ಯಾ ಕಾರಂತ್ ಇಲ್ಲಿ ನೆನಪಿಸಿ ಕೊಂಡಿದ್ದಾರೆ.


    ಹನುಮಂತನಗರದ ಕೆ ಎಚ್ ಕಲಾಸೌಧದಲ್ಲಿ ನಡೆದ
    ‘ಅಕ್ಕು’ ನಾಟಕದ ಪ್ರದರ್ಶನ ಆಗಷ್ಟೇ ಮುಗಿದಿತ್ತು.
    ಮುಖದ ಬಣ್ಣ ಕಳಚುತ್ತಿದ್ದವಳನ್ನು, ಸಹಕಲಾವಿದ ಬಂದು ಕರೆದ. ‘ನಿನ್ನ ಯಾರೋ ನೊಡ್ಬೇಕಂತೆ, ಹೊರಗೆ ಕಾಯ್ತಾ ಇದ್ದಾರೆ’. ನನಗೆ ಇದೆಲ್ಲ ಸ್ವಲ್ಪ ಕಸಿವಿಸಿ. ಅರ್ಧ ಮನಸ್ಸಿನಿಂದಲೇ ಹೊರ ಹೋದೆ. ಬಾಗಿಲ ಹೊರಗೆ, ಮಸುಕು ಬೆಳಕಲ್ಲಿ ತಣ್ಣಗೆ ನಿಂತಿದ್ದ ವ್ಯಕ್ತಿ ನನ್ನ ಕಂಡಕೂಡಲೇ ಮುಂದೆ ಬಂದರು.

    ನಾನು ಬಿಟ್ಟ ಕಣ್ಣುಗಳಿಂದ ಅವರನ್ನು ನೋಡುತ್ತಲೇ ಇದ್ದೆ. ಮನಸ್ಸು ಮಂಗನ ಹಾಗೆ ಕುಣಿಯುತ್ತಿತ್ತು. ನಾಷನಲ್ ಅವಾರ್ಡ್ ಬಂದ ನಟ ನನ್ನನ್ನು ಕಾಯುವುದೇ?

    ಮೊದಲು ಮುಗುಳ್ನಗೆ, ನಂತರ ಮಾತು. ಅಥವಾ ಆತನ ಮುಖವೇ ಇದ್ದದ್ದು ಹಾಗೋ ಏನೋ! ಸದಾ ಹಸನ್ಮುಖಿ.

    ‘ಅಮ್ಮಚ್ಚಿ?’

    ‘ಹೂಂ’

    ‘ಎರೆಡರೆಡು ಭಾವ ಒಟ್ಟೊಟ್ಟಿಗೆ ನನ್ನಲ್ಲಿ ಉಕ್ಕಿಸಿದಿರಿ ನೀವು!ಪಾತ್ರಕ್ಕಾದ ನೋವು, ಕಣ್ಣಲ್ಲಿ ನೀರು ತರಿಸಿತು. ಅದನ್ನು ನಿರ್ವಹಿಸುವಲ್ಲಿ ಗೆದ್ದ ನಟಿಯ ಪರಿಪಕ್ವತೆ ಖುಷಿ ಕೊಟ್ಟಿತು.’

    ‘ಥಾಂಕ್ಸ್’

    ‘ನಾನು ವಿಜಯ್. ನಿಮ್ ಹೆಸರು?’

    ಮುಂದೆ ಹಲವಾರು ಸಿನಿಮಾಗಳಿಂದ ನನಗೆ ಕರೆ ಬಂದಿತ್ತು. ‘ಮೇಡಂ ಸಂಚಾರಿ ವಿಜಯ್ ಸರ್ ನಿಮ್ ನಂಬರ್ ಕೊಟ್ರು..’ ‘ಮೇಡಂ ಸಂಚಾರಿ ವಿಜಯ್ ಸರ್ ನಿಮ್ಮನ್ನ ರೇಕಮಂಡ್ ಮಾಡಿದ್ರು.. ‘
    ಒಂದೇ ನಾಟಕ ತಂಡದಲ್ಲಿ ಇದ್ದು ಒತ್ಲಾ ಹೊಡೆದದ್ದಿದೆ. ಒಟ್ಟಿಗೆ ಟೀ ಕುಡಿದು ನಾಯಿಗಳಿಗೆ ಬಿಸ್ಕತ್ ಹಾಕಿದ್ದಿದೆ. ಪ್ರತಿಯೊಂದು ನಾಟಕದ ಪ್ರದರ್ಶನದ ಆಹ್ವಾನಕ್ಕೆ ವಿಷ್ ಮಾಡಿದ್ದಿದೆ

    ಎಲ್ಲಾ ಸಿನೆಮಾದ ಪ್ರೀಮಿಯರ್ ಗೆ ಬರಲೇಬೇಕು ಎಂದು ಒತ್ತಡ ಹಾಕಿದ್ದಿದೆ. ಹಿಂದಿನ ವರ್ಷ ಲಾಕ್ ಡೌನ್ ಸಮಯದಲ್ಲಿ, ‘ಎಲ್ಲಾ ಓಕೆನಾ?’ ಅಂತ ಬಂದ ಫೋನಿನ ಕರೆಯ ನೆನಪಿದೆ.

    ಆ ಕರೆ ಮತ್ತೊಮ್ಮೆ ಬರಬಾರದೇ.

    ಕೀಚಕ ನಾಟಕದಲ್ಲಿನ ಬೃಹನ್ನಳೆ ಮತ್ತೊಮ್ಮೆ ರಂಗದ ಮೇಲೆ ವಯ್ಯಾರದಿಂದ ನಡೆಯಬಾರದೇ.

    ಹಲವು ಹಸಿದ ಜೀವಗಳಿಗೆ ಅನ್ನ ನೀಡಿದ ಕೈ ಮತ್ತೊಮ್ಮೆ ಚಪ್ಪಾಳೆ ತಟ್ಟಬಾರದೇ.

    ಒಂದಿಷ್ಟೂ ಅಹಂಕಾರವಿಲ್ಲದೆ ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದ ಚೇತನ, ಅದಮ್ಯವಾಗಬಾರದೇ.

    ಬದುಕನ್ನು ಸೋಜಿಗವಾಗಿಸಿ, ಆ ಪರಿಪಾಟಲನ್ನು ನೋಡಿ ನಗುವ ಸಾವು, ತಾನು ಸಾಯಬಾರದೇ.

    ಬದುಕಿದ್ದಾಗ ಹೇಳಲಾಗದ ಮಾತು, ಈಗ ಲೇಖನವಾಗುತ್ತಿರುವ ದುರಂತ, ಕನಸಾಗಬಾರದೇ..‌

    ವೈದ್ಯರ ಶ್ರಮ, ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ

    ಕೊನೆ ಕ್ಷಣದಲ್ಲಿ ಪವಾಡ ನಡೆದು ಕಲಾವಿದ ಸಂಚಾರಿ ವಿಜಯ್ ಅವರ ಮೆದುಳು ಕೆಲಸ ಮಾಡಲು ಆರಂಭಿಸುತ್ತದೆ ಎಂಬ ಸಹಸ್ರಾರು ಅಭಿಮಾನಿಗಳ ಆಶಯ, ಪ್ರಾರ್ಥನೆ ಫಲಿಸಲಿಲ್ಲ.ಈಗ್ಗೆ ಸ್ವಲ್ಪ ಹೊತ್ತಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಿದ ವೈದ್ಯರ ತಂಡ ಮೆದುಳು ಸಂಪೂರ್ಣ ಡೆಡ್ ಆಗಿದೆ ಎಂಬ ವಿಷಯವನ್ನು ಖಚಿತ ಪಡಿಸಿದ್ದಾರೆ.

    ಹೀಗಾಗಿ ಅವರ ಕುಟುಂಬದ ಆಶಯದಂತೆ ಸಂಚಾರಿ ವಿಜಯ್ ಅವರ ಅಂಗಾಂಗ ದಾನಕ್ಕೆ ಎಲ್ಲವೂ ಸಿದ್ಧವಾಗಿದೆ. ಜೀವನ ಸಾರ್ಥಕತೆ ತಂಡ ಇನ್ನು ಸ್ವಲ್ಪ ಹೊತ್ತಿನ ನಂತರ ಅಂಗಾಗಗಳನ್ನು ತೆಗೆಯುವ ಕೆಲಸವನ್ನು ಆರಂಭಿಸುತ್ತದೆ.

    ಸತ್ತನಂತರವೂ ಈ ಕಲಾವಿದನ ದೇಹದ ಅಂಗಾಂಗಳು ಮತ್ತೊಂದು ಜೀವಕ್ಕೆ ಆಸರೆಯಾಗಲಿವೆ.

    ಇದೀಗ ಬಂದಿದೆ N95ಗೆ ಪರ್ಯಾಯವಾಗಿ ಮರುಬಳಸಬಹುದಾದ ಹೈಬ್ರಿಡ್ SHG95 ಮಾಸ್ಕ್

    ಕೋವಿಡ್-19 ಸಾಂಕ್ರಾಮಿಕ ಸೋಂಕು ವಿಶ್ವಾದ್ಯಂತ ಇಡೀ ಮನುಕುಲವನ್ನೇ ಕಾಡುತ್ತಿದೆ. ಈ ಸೋಂಕು ಹರಡುವುದನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ತಡೆಯಬೇಕಾದರೆ ಪ್ರಾಥಮಿಕವಾಗಿ ಮಾಡಬೇಕಾದ ರಕ್ಷಣಾ ಕ್ರಮಗಳೆಂದರೆ, ನಿಯಮಿತವಾಗಿ ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸುವುದು,ಮಾಸ್ಕ್ ಧರಿಸುವುದು, ಕನಿಷ್ಠ 2 ಗಜ ದೂರ ಭೌತಿಕ ಅಂತರ ಕಾಪಾಡುವುದು ಸೇರಿದಂತೆ ಕೋವಿಡ್ ಸೂಕ್ತ ನಡವಳಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

    ಸೋಂಕಿತ ವ್ಯಕ್ತಿಯಿಂದ ಕೋವಿಡ್-19 ಸೋಂಕು ಹರಡುವುದನ್ನು N95 ಮಾಸ್ಕ್ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದು ಇದುವರೆಗೆ ಪರಿಗಣಿಸಲಾಗಿತ್ತು. ಆದರೆ ದೀರ್ಘ ಕಾಲದ ಬಳಕೆಗೆ N95 ಮಾಸ್ಕ್ ಬಳಕೆ ಹಿತಕರವಲ್ಲ ಮತ್ತು ಅದನ್ನು ಹೆಚ್ಚಿನ ಬಾರಿಗೆ ವಾಶ್ ಮಾಡಲಾಗದು ಎಂಬುದು ಇದೀಗ ಸಾಬೀತಾಗಿದೆ.

    ಈ ನಿಟ್ಟಿನಲ್ಲಿ ಇದಕ್ಕೆ ಪರ್ಯಾಯವಾಗಿ ಬಹು ಪದರದ ಹೈಬ್ರಿಡ್ ಮಾಸ್ಕ್ ಗಳನ್ನು ಅಭಿವೃದ್ಧಿಪಡಿಸುವಂತೆ ಪರಿಶೋಧನಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಕೋರಿತ್ತು. ಇದಕ್ಕೆ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ(ಬಿರಾಕ್) ಮತ್ತು ಐಕೆಪಿ ನಾಲೆಡ್ಜ್ ಪಾರ್ಕ್ ಭಾಗಶ: ಬೆಂಬಲ ನೀಡಿ ಕೇಂದ್ರ ಸರ್ಕಾರದ ಕ್ಷಿಪ್ರ ಕೋವಿಡ್ ನಿಧಿ ಅಡಿ ಆರ್ಥಿಕ ನೆರವು ಒದಗಿಸಲಾಗಿತ್ತು.

    SHG-95 ಹೆಸರಿನ ಸಾಮಾಜಿಕ ಮುಖಗವಸುಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಈಗಾಗಲೇ ಚಾಲನೆ ದೊರೆತಿದ್ದು, ಮೇಡ್ ಇನ್ ಇಂಡಿಯಾದ ಈ ಮುಖಗವಸುಗಳು 90% ಜೀವ ಕಣಗಳು ಮತ್ತು ಧೂಳು ಹಾಗೂ 99% ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸುವ ದಕ್ಷತೆ ಹೊಂದಿವೆ. ಈ ಮುಖಗವಸುಗಳು ಸರಾಗವಾಗಿ ಉಸಿರಾಡಲು ಅನುವು ಮಾಡಿಕೊಡಲಿವೆ, ಆರಾಮದಾಯಕ ಕಿವಿ ಕುಣಿಕೆ ಇರುತ್ತದೆ. ಉಷ್ಣವಲಯದ ಪರಿಸ್ಥಿತಿಯಲ್ಲೂ ಬಳಸಲು ಅನುಕೂಲಕರವಾಗಿದೆ. ಏಕೆಂದರೆ ಅವುಗಳನ್ನು ಸಂಪೂರ್ಣ ಕೈಯಿಂದ ನೇಯ್ಗೆ ಮಾಡಿದ ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತಿದೆ. ಈ ಮುಖಗವಸಿಗೆ ವಿಶೇಷ ಶುದ್ಧೀಕರಣ ಪದರ ಅಳವಡಿಸಿರುವುದು ಮತ್ತೊಂದು ಅನುಕೂಲ. ಕೈಯಿಂದ ತೊಳೆಯಬಹುದಾದ, ಮರುಬಳಕೆ ಮಾಡಬಹುದಾದ ಈ ಮಾಸ್ಕ್|ಗಳನ್ನು 50-75 ರೂಪಾಯಿಗೆ ಮಾರಾಟ ಮಾಡಲು ಕಂಪನಿ ಅಂದಾಜಿಸಿದೆ. ಎಲ್ಲರಿಗೂ ಕೈಗೆಟಕುವ ದರಕ್ಕೆ ಮುಖಗವಸು ಒದಗಿಸುವುದು ಕೇಂದ್ರ ಸರ್ಕಾರದ ಪ್ರಮುಖ ಧ್ಯೇಯವಾಗಿದೆ.

    ಈಗಾಗಲೇ ಸುಮಾರು 1,45,000ಕ್ಕಿಂತ ಹೆಚ್ಚಿನ ಮುಖಗವಸುಗಳು ಮಾರಾಟವಾಗಿವೆ. ಈ ಉಪಕ್ರಮಕ್ಕೆ ಗ್ರ್ಯಾಂಡ್ ಚಾಲೆಂಜಸ್ ಕೆನಡಾ ಸಂಸ್ಥೆ ಆರ್ಥಿಕ ನೆರವು ಒದಗಿಸಿದೆ. ಕೋವಿಡ್-19 ಸಂಕಷ್ಟ ಪರಿಸ್ಥಿತಿಯ ಬೇಡಿಕೆಗೆ ಅನುಗುಣವಾಗಿ SHG-95 ಹೆಸರಿನ ಮಾಸ್ಕ್|ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಲವಾರು ಸ್ವಸಹಾಯ ಗುಂಪುಗಳ ಸದಸ್ಯರನ್ನು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಅವರ ಜೀವನಾಧಾರ ಸುಧಾರಣೆಗೆ ಒತ್ತು ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು www.dbtindia.gov.in ಮತ್ತು www.birac.nic.in ಇಲ್ಲಿಂದ ಪಡೆಯಬಹದಾಗಿದೆ. (ವರದಿ ಪಿಐಬಿ)


    ದೇಶಾದ್ಯಂತ ಸೋಂಕು ಮತ್ತಷ್ಟು ಇಳಿಮುಖ

    ದೇಶದಲ್ಲಿ ಕೋವಿಡ್-19 ಸೋಂಕು ಇಳಿಮುಖ ಕಾಣುತ್ತಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಇದೀಗ 9,73,158ಕ್ಕೆ ಇಳಿಕೆ ಕಂಡಿದೆ.

    ಸತತ 66 ದಿನಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ಮಟ್ಟದಿಂದ ಕೆಳಕ್ಕೆ ತಗ್ಗಿದೆ.

    ಕಳೆದ 24 ತಾಸುಗಳಲ್ಲಿ ದೇಶದಲ್ಲಿ 70,421 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ, 74 ದಿನಗಳ ನಂತರ ವರದಿಯಾಗಿರುವ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ.

    ದೇಶಾದ್ಯಂತ ಇಲ್ಲಿಯ ತನಕ 2,81,62,947 ಕೊರೊನಾ ಸೋಂಕಿತರು ರೋಗದಿಂದ ಗುಣಮುಖರಾಗಿದ್ದಾರೆ. 1,19,501 ಸೋಂಕಿತರು ಕಳೆದ 24 ತಾಸುಗಳಲ್ಲಿ ಚೇತರಿಸಿಕೊಂಡಿದ್ದಾರೆ.

    ನಿರಂತರ 32ನೇ ದಿನದಲ್ಲಿ ಚೇತರಿಕೆ ಪ್ರಮಾಣವು ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕುತ್ತಿದೆ.

    ಚೇತರಿಕೆ ದರ ಇದೀಗ 95.43%ಗೆ ಸುಧಾರಣೆ ಕಂಡಿದೆ.

    ವಾರದ ಪಾಸಿಟಿವಿಟಿ ದರ(ಸೋಂಕಿತರ ಪ್ರಮಾಣ) 5% ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದ್ದು, ಅದೀಗ ಪ್ರಸ್ತುತ 4.54%ಗೆ ಇಳಿಕೆ ಕಂಡಿದೆ.

    ದೈನಂದಿನ ಪಾಸಿಟಿವಿಟಿ ದರ ಇದೀಗ 4.72%ಗೆ ತಗ್ಗಿದ್ದು, ಸತತ 21 ದಿನಗಳ ನಂತರ 10% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.

    ದೇಶಾದ್ಯಂತ ಗಂಟಲು ದ್ರವ ಪರೀಕ್ಷೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಇಲ್ಲಿಯ ತನಕ 37.96 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ.

    ದೇಶವ್ಯಾಪಿ ನಡೆಸುತ್ತಿರುವ ರಾಷ್ಟ್ರೀಯ ಬೃಹತ್ ಲಸಿಕಾ ಆಂದೋಲನದಲ್ಲಿ ಇದುವರೆಗೆ ಅರ್ಹ ಫಲಾನುಭವಿಗಳಿಗೆ 25.48 ಲಸಿಕಾ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವಿವರ ನೀಡಿದೆ.


    ದೊಡ್ಡಬಳ್ಳಾಪುರವನ್ನು ಎಂದಿಗೂ ಮರೆಯದ ಕೆ ಸಿ ಎನ್ ಚಂದ್ರಶೇಖರ್

    ನಿನ್ನೆ ಮಧ್ಯರಾತ್ರಿ ನಿಧನರಾದ ನಿರ್ಮಾಪಕ, ಉದ್ಯಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದ ಕೆ.ಸಿ.ಎನ್.ಚಂದ್ರಶೇಖರ್ ನಿಧನದಿಂದ ಅದ್ಧೂರಿ ಚಲನಚಿತ್ರ ನಿರ್ಮಾಣ, ಚಲನಚಿತ್ರ ರಂಗದ ಸಂಘಟನೆಯ ಮುಂಚೂಣಿಯಲ್ಲಿದ್ದ ಒಬ್ಬ ಪ್ರಮುಖ ನೇತಾರನನ್ನು ಕಳೆದುಕೊಂಡಂತಾಗಿದೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

    ಖ್ಯಾತ ನಿರ್ಮಾಪಕ ಕೆ.ಸಿ.ಎನ್.ಗೌಡ ಹಾಗೂ ನರಸಮ್ಮ ದಂಪತಿಗಳ ಪುತ್ರರಾಗಿದ್ದ ಕೆಸಿಎನ್ ಚಂದ್ರು ಹುಟ್ಟಿದ್ದು 1952ರಲ್ಲಿ. ದೊಡ್ಡಬಳ್ಳಾಪುರ ತಾಲೂಕಿನ ಕೋನೇನಹಳ್ಳಿಯವರು. ಬಾಲ್ಯ ಕಳೆದಿದ್ದು ಮರಳೇನಹಳ್ಳಿ. ಪ್ರೈಮರಿ ಸ್ಕೂಲ್ ವ್ಯಾಸಂಗವೂ ಮರಳೇನಹಳ್ಳಿಯಲ್ಲಿ. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ದೊಡ್ಡಬಳ್ಳಾಪುರದಲ್ಲಿ ಪೂರೈಸಿ ನಂತರ ಅವರು ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ.(ನಾಟಕ)ಯ ಮೊದಲ ಬ್ಯಾಚ್ ಪದವೀಧರರಾಗಿದ್ದರು.

    ದೊಡ್ಡಬಳ್ಳಾಪುರದಲ್ಲಿ ಕೆ.ಸಿ.ಎನ್.ಗೌಡರು ಎಂದರೆ ದೊಡ್ಡ ಉದ್ಯಮಿಗಳು. ಸುಮಾರು ಇನ್ನೂರಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿದ್ದ ನೂರಾರು ಕಾರ್ಮಿಕರಿಗೆ ಕೆಲಸ ನೀಡಿದ್ದ ಕುಟುಂಬ ಅವರದು. ರೇಷ್ಮೆ ಬಟ್ಟೆ ನೇಯ್ಗೆಯಲ್ಲಿ ಎಷ್ಟು ಪರಿಣಿತಿಯೋ ಕನ್ನಡ ಚಿತ್ರರಂಗದ ಮಹತ್ವದ ಚಲನಚಿತ್ರಗಳ ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಹೆಚ್ಚಿಸಿದವರು ಕೆ.ಸಿ.ಎನ್.ಚಂದ್ರಶೇಖರ್.

    ತಂದೆ ಕೆ ಸಿ ಎನ್ ಗೌಡರೊಂದಿಗೆ

    ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಚೆನ್ನೈನ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿದ್ದರು.
    ಕೆ.ಸಿ.ಎನ್.ಚಂದ್ರಶೇಖರ್ ಸಿನಿಮಾ ರಂಗದಲ್ಲಿ, ತಮ್ಮ ವ್ಯಾಪಾರ ರಂಗದಲ್ಲಿ ಎಷ್ಟೇ ಖ್ಯಾತಿ, ಹಣ ಸಂಪಾದಿಸಿದರೂ ಅವರಿಗೆ ತಮ್ಮೂರಿನ ಬಗ್ಗೆ ಅಪಾರ ಅಭಿಮಾನವಿತ್ತು. ಅವರ ಪ್ರಾಥಮಿಕ ಶಿಕ್ಷಣ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಂತರ ಪ್ರೌಢಶಾಲೆಗೆ ದೊಡ್ಡಬಳ್ಳಾಪುರದ ಸರ್ಕಾರಿ ಪ್ರೌಢಶಾಲೆ ಸೇರಿದರು. ನಂತರ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದರು.

    ದೊಡ್ಡಬಳ್ಳಾಪುರದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ತಮ್ಮ ಬಂಧುಮಿತ್ರರು ಹಾಗೂ ಗೆಳೆಯರನ್ನು ಮಾತನಾಡಿಸುತ್ತಿದ್ದರು. ದೊಡ್ಡಬಳ್ಳಾಪುರದ ಯಾರಾದರೂ ಅವರ ಮನೆಗೆ ಹೋದರೂ ಪ್ರೀತಿಯಿಂದ ಉಪಚರಿಸುತ್ತಿದ್ದರು. ದೊಡ್ಡಬಳ್ಳಾಪುರ ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾಗಿದ್ದರು. ಬೆಂಗಳೂರಿನ ವಸಂತನಗರದಲ್ಲಿ ವರ ನೇತೃತ್ವದಲ್ಲಿ ಕುಂಚಿಟಿಗ ವಿದ್ಯಾರ್ಥಿಗಳ ನೆರವಿಗೆ ವಿದ್ಯಾರ್ಥಿ ನಿಲಯ ಕಟ್ಟಿಸಿದ್ದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾಳಜಿ ಅವರದಾಗಿತ್ತು.
    ಬಂಗಾರದ ಮನುಷ್ಯ, ಹುಲಿಯ ಹಾಲಿನ ಮೇವು, ಕಸ್ತೂರಿ ನಿವಾಸ, ಬಭ್ರುವಾಹನ, ಸನಾದಿ ಅಪ್ಪಣ್ಣ, ಭಲೇ ಜೋಡಿ, ದಾರಿ ತಪ್ಪಿದ ಮಗ ಇತ್ಯಾದಿ ಚಿತ್ರಗಳು ರಾಜ್ ಕಮಲ್ ಆರ್ಟ್ಸ್ ದೊಡ್ಡಬಳ್ಳಾಪುರ ಮತ್ತು ಕೆಸಿಎನ್ ಮೂವೀಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿದ್ದವು.

    ಅಪಾರ ಸಾಹಿತ್ಯ ಪ್ರೇಮಿಯೂ ಆಗಿದ್ದ ಅವರು ಕಳೆದ ಬಾರಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾದ ಕನ್ನಡ ಜಾಗೃತ ಪರಿಷತ್ತಿನ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲೂ ಭಾಗವಹಿಸಿದ್ದರು.
    ಕೋನೇನಹಳ್ಳಿಯ ಅವರ ಸೋದರ ಸಂಬಂಧಿ ಆಂಜನಪ್ಪ ಅವರು ಊರಿನಲ್ಲಿ ಕೆ.ಸಿ.ಎನ್. ಕುಟುಂಬದವರು ಆಸ್ಪತ್ರೆ ಕಟ್ಟಿಸಿದ್ದಾರೆ. ಅವರು ಕುಂಚಿಟಿಗರ ಅಭಿವೃದ್ಧಿಗೆ ಅಪಾರ ಶ್ರಮವಹಿಸಿ ಕುಂಚಿಟಿಗರ ವಿದ್ಯಾರ್ಥಿ ನಿಲಯ ನಿರ್ಮಿಸಲು ಶ್ರಮಿಸಿದರು ಎಂದರು.

    ದೊಡ್ಡಬಳ್ಳಾಪುರದಲ್ಲಿ ನಡೆದ ಕುಂಚಿಟಿಗರ ಸಂಘದ ಸಭೆಯಲ್ಲಿ ಶ್ರೀರಾಮಯ್ಯ, ಕೆಂಪರಾಜು ಹಾಗೂ ಶಿಕ್ಷಕ ಎಂ.ವಿ.ರಾಜ್ ಕುಮಾರ್ ಅವರೊಂದಿಗೆ ಕೆ.ಸಿ.ಎನ್. ಚಂದ್ರು

    ಕೆ.ಸಿ.ಎನ್.ಚಂದ್ರಶೇಖರ್ ಅವರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿದ್ದಾಗ ತಮ್ಮ ಊರಿನ ಹಲವು ವಿದ್ಯಾರ್ಥಿಗಳಿಗೆ ಅಲ್ಲಿ ಸೀಟುಗಳನ್ನು ನೀಡಿ ಉತ್ತೇಜಿಸಿದರು ಎಂದು ಅವರನ್ನು ನೆನೆಯುತ್ತಾರೆ.
    ಕೆ.ಸಿ.ಎನ್.ಚಂದ್ರಶೇಖರ್ ಅವರು ತಮ್ಮ ಊರಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು ಎಂದು ದೊಡ್ಡಬಳ್ಳಾಪುರ ತಾಲೂಕು ಕುಂಚಿಟಿಗರ ಸಂಘದ ಕಾರ್ಯಾಧ್ಯಕ್ಷ ಆರ್.ಕೆಂಪರಾಜು ಹೇಳುತ್ತಾರೆ.

    ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾಗಿದ್ದ ಅವರು ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದರು ಎಂದು ನೆನೆಯುತ್ತಾರೆ.
    ಅವರ ಸಂಬಂಧಿಯಾದ ಎಂ.ಶ್ರೀರಾಮಯ್ಯ, ಕೆಸಿಎನ್ ಚಂದ್ರಶೇಖರ್ ಅವರ ಅಜ್ಜ ಕೆ.ಚೌಡಯ್ಯ ತಮ್ಮ ಊರು ಕೋನೇನಹಳ್ಳಿ ಬಿಟ್ಟು ದೊಡ್ಡಬಳ್ಳಾಪುರಕ್ಕೆ ಬಂದು ಅಲ್ಲಿ ರಾಗಿ ಮಿಷನ್ ಹಾಕಿ ಅಲ್ಲಿಂದ ತಮ್ಮ ಉದ್ಯಮ ಪ್ರಾರಂಭಿಸಿದರು. ನಂತರ ಮಗ್ಗಗಳಿಂದ ಸಿನಿಮಾವರೆಗೆ ಅವರು ಅಪಾರವಾಗಿ ಪ್ರಗತಿ ಸಾಧಿಸಿದರು ಎನ್ನುತ್ತಾರೆ.

    ಮೊದಲ‌ ಪಿಯು ಮೌಲ್ಯಾಂಕನ ಅವಧಿ ವಿಸ್ತರಣೆ ; ಶಿಕ್ಷಕರ‌ ವರ್ಗಾವಣಾ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟ

    ಶಾಲಾರಂಭದ ಕುರಿತು ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆಯಾದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಲಾಕ್ ಡೌನ್ ಜಾರಿಯಲ್ಲಿದ್ದು, ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವುದರಿಂದ ಶಿಕ್ಷಕರು ಲಾಕ್ ಡೌನ್  ತೆರವಾದ ದಿನದಿಂದಲೇ ಶಾಲೆಗಳಿಗೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸೋಮವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರದಿಂದ  ಶಾಲೆಗಳಿಗೆ ಶಿಕ್ಷಕರು ಹಾಜರಾಗಿ ಮಕ್ಕಳ ನೋಂದಣಿ ಪ್ರಾರಂಭಿಸಬೇಕಾಗಿರುವ  ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಪೂರ್ಣಗೊಂಡ ನಂತರ ಶಿಕ್ಷಕರು ಶಾಲೆಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‌ ಎಂದರು.

    ಮೊದಲ‌ ಪಿಯು ಮೌಲ್ಯಾಂಕನ ಅವಧಿ ವಿಸ್ತರಣೆ

    ಹಲವು ಉಪನ್ಯಾಸಕ ಸಂಘಟನೆಗಳ ಕೋರಿಕೆಯ ಮೇರೆಗೆ ಮೊದಲ ಪಿ.ಯು.ಸಿ. ಮೌಲ್ಯಾಂಕನ  ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳ ಲಾಕ್-ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗುತ್ತದೆ‌ ಎಂದು ಸಹ ಸಚಿವರು ಹೇಳಿದ್ದಾರೆ. ಈ ಕುರಿತಂತೆ ಪದವಿಪೂರ್ವ ಶಿಕ್ಷಕರಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಅವರು ಕ್ರಮ‌‌ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.

    ಚೈಲ್ಡ್ ಪ್ರೊಫೈಲ್ ನಿಯಮಿತ ದಾಖಲೆ:

    ಈ ಬಾರಿ ನಿಗದಿತ ಅವಧಿಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವಾಗಿ ಜಾರಿಯಲ್ಲಿಡುವ ಅವಶ್ಯಕತೆ ಇದೆ.  ಪ್ರತಿ ಸೂಚಿತ ಅವಧಿಗೆ ವಿದ್ಯಾರ್ಥಿಗಳ ಚೈಲ್ಡ್ ಪ್ರೊಫೈಲ್ ಗಳನ್ನು ನಿಯಮಿತವಾಗಿ ದಾಖಲಿಸುವ, ಕಲಿಕಾ ಸಾಮರ್ಥ್ಯಗಳನ್ನು ಅಳೆಯುವ ಮಾನದಂಡಗಳಾಗಿ ರೂಪಿಸುವ ಸದೃಢ ವ್ಯವಸ್ಥೆಯನ್ನು ಜಾರಿಯಲ್ಲಿಡುವ ವ್ಯವಸ್ಥೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಅತ್ಯವಶ್ಯಕವಾಗಿದ್ದು, ಇಂಥಹ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮಂಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ‌ ಸಂವಾದ

    ಈ ಬಾರಿಯ ಎರಡು ದಿನಗಳ ಎಸ್.ಎಸ್.ಎಲ್.ಸಿ. ಪರೀಕ್ಷೆ ನಿರ್ವಹಣೆ ಕುರಿತಂತೆ ಜೂ. 28 ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದ ಸಭೆ ನಡೆಯಲಿದ್ದು,   ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಇಲಾಖೆಯ ಆಯುಕ್ತರನ್ನು  ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಕ್ರಮಗಳ ಕುರಿತು ವಿಸ್ತ್ರತ ಚರ್ಚೆ ನಡೆಸಿ ಮಾರ್ಗದರ್ಶನ ನೀಡಲಾಗುವುದು  ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೊಠಡಿ ಮೇಲ್ವಿಚಾರಕ ಶಿಕ್ಷಕರಿಗೆ ಕೋವಿಡ್ ಲಸಿಕೆ

    ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೊಠಡಿ  ಮೇಲ್ವಿಚಾರಕರುಗಳಿಗೆ ಕೋವಿಡ್ – 19ರ ಲಸಿಕೆಯನ್ನು ನೀಡುವ ಪ್ರಕ್ರಿಯೆಯನ್ನು ಪರೀಕ್ಷೆಗೆ ಮುನ್ನ ಪೂರ್ಣಗೊಳಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ವಹಿಸಬೇಕೆಂದೂ ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.

    ಶಿಕ್ಷಕರ‌ ವರ್ಗಾವಣಾ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟ

    ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯ ಕುರಿತಂತೆ ನಿಯಮಗಳ ಆಕ್ಷೇಪಣಾ ಸಲ್ಲಿಕೆ ಅವಧಿ  ಪೂರ್ಣಗೊಳ್ಳುತಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರದ ಅಧಿಸೂಚನೆಯನ್ನು ಹೊರಡಿಸಿ ಸಾಧ್ಯವಾದಷ್ಟು ಶೀಘ್ರವೇ ವರ್ಗಾವಣಾ ಪ್ರಕ್ರಿಯೆ ಕೈಗೊಳ್ಳಬೇಕೆಂದು  ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಯಾವುದೇ ಅಡೆತಡೆಗಳು ಬಾರದ ರೀತಿಯಲ್ಲಿ ತಂತ್ರಜ್ಞಾನಾಧಾರಿತ ವರ್ಗಾವಣಾ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಲಾಗಿದೆಯೆಂದರು.

    ಪ್ಯಾಕೇಜ್ ಪರಿಹಾರ ನೇರ‌ ಶಿಕ್ಷಕರ‌ ಖಾತೆಗೆ

    ಖಾಸಗಿ ಖಾಸಗಿ ಶಾಲಾ ಶಿಕ್ಷಕರಿಗೆ  ಮುಖ್ಯಮಂತ್ರಿಗಳು  ಘೋಷಿಸಿರುವ ಪ್ಯಾಕೇಜ್ ಪರಿಹಾರವನ್ನು ಕ್ಲಪ್ತ ಸಮಯದಲ್ಲಿ  ಫಲಾನುಭವಿಗಳಿಗೆ ನೇರವಾಗಿ ವಿತರಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಬೇಕೆಂದೂ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಿಕ್ಷಕರ, ಶಿಕ್ಷಕೇತರರ ಹಾಗೂ ಅತಿಥಿ ಶಿಕ್ಷಕರ‌‌ ಬ್ಯಾಂಕ್‌ಖಾತೆಗಳ‌ ವಿವರಗಳನ್ನು ಶೀಘ್ರ ಸಂಗ್ರಹಿಸಿ ಅನುದಾನವನ್ನು ನೇರ ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಬೇಕು. ಅತ್ಯಂತ ಸಮರ್ಪಕವಾಗಿ ಈ ಪ್ರಕ್ರಿಯೆ ನಿರ್ವಹಣೆಯಾಗಬೇಕು ಎಂದು‌ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ‌ಕಾರ್ಯದರ್ಶಿ‌ ಎಸ್.ಆರ್.ಉಮಾಶಂಕರ್, ಸಾರ್ವಜನಿಕ‌ ಶಿಕ್ಷಣ‌ ಇಲಾಖೆಯ ಆಯುಕ್ತ ಅನ್ಬುಕುಮಾರ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ‌ ಸ್ನೇಹಲ್ ಸೇರಿದಂತೆ ಹಿರಿಯ‌ ಅಧಿಕಾರಿಗಳು ಉಪಸ್ಥಿತರಿದ್ದರು

    ಜೀವನ್ಮರಣ ಹೋರಾಟದಲ್ಲಿ ನಟ ಸಂಚಾರಿ ವಿಜಯ್; ಮಿದುಳು ನಿಷ್ಕ್ರಿಯ; ಚಿತ್ರರಂಗ ಆಘಾತ‌, ವೆಂಟಿಲೇಟರ್‌ ಮೇಲೆ ನಟ

    ಶನಿವಾರ ರಾತ್ರಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬನ್ನೇರುಘಟ್ಟ ರಸ್ತೆಯ ಸಾಗರ್‌ ಅಪೊಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಚಿಂತಾಜನಕ ಸ್ಥಿತಿಯಲ್ಲೇ ಇದ್ದಾರೆ. ಅವರ ಮೆದುಳು ಸದ್ಯಕ್ಕೆ ಕೆಲಸ ಮಾಡುತ್ತಿಲ್ಲ. ಆದರೆ ಇತರ ಅಂಗಾಗಗಳು ಸುಸ್ಥಿತಿಯಲ್ಲಿವೆ. ಹೀಗಾಗಿ ಸಂಜೆಯ ನಂತರ ನಡೆಯುವ ಮತ್ತೊಂದು ಪರೀಕ್ಷೆ ಅವರ ಆರೋಗ್ಯದ ಸ್ಥಿತಿಯನ್ನು ತಿಳಿಸಲಿದೆ.

    ವೆಂಟಿಲೇಟರ್‌ ಮೇಲೆ ಚಿಕಿತ್ಸೆ ಪಡೆಯುತ್ತ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಜಯ್‌ ಅವರ ಅಂಗಾಂಗಳನ್ನು ದಾನ ಮಾಡುವ ನಿರ್ಧಾರವನ್ನು ಅವರ ಕುಟುಂಬ ಸದಸ್ಯರು ಕೈಗೊಂಡಿದ್ದು, ಸದ್ಯಕ್ಕೆ ಅಪೊಲೋ ವೈದ್ಯರೂ ಈ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಟ ಜಗ್ಗೇಶ ಕೂಡ ಜತೆಯಲ್ಲಿದ್ದರು.

    ಲಾಕ್ ಡೌನ್ ಸಡಿಲಿಕೆ ಆಗದ ಜಿಲ್ಲೆಗಳ ಶಿಕ್ಷಕರಿಗೆ ನಾಳೆಯಿಂದ ಮನೆಯಿಂದಲೆ ಕೆಲಸ

    ಕಠಿಣ ಕೋವಿಡ್ ನಿರ್ಬಂಧಗಳಿರುವ 11 ಜಿಲ್ಲೆಗಳ ಶಿಕ್ಷಕರು ನಿರ್ಬಂಧ ಸಡಿಲವಾಗುವವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ .ಇತರ ಜಿಲ್ಲೆಗಳ ಶಿಕ್ಷಕರು ನಾಳೆಯಿಂದಲೇ ಶಾಲೆಗಳಿಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಇದೇ ಜೂನ್ 15ರಿಂದ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಮತ್ತು ಶಿಕ್ಷಕರು ಶಾಲೆಗೆ ಹಾಜರಾಗಲು ಆದೇಶ ನೀಡಲಾಗಿತ್ತು.ಆದರೆ ಇನ್ನು ಕೆಲ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರಿದಿರುವುದರಿಂದ ಗೊಂದಲ ಉಂಟಾಗಿತ್ತು . ಹೀಗಾಗಿ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.

    ಆದೇಶದ ಪ್ರತಿ ಇಲ್ಲಿದೆ.

    ಪ್ರವಾಸಿ ಮಾರ್ಗದರ್ಶಿಗಳಿಗೆ 5000 ರೂ.ಕೋವಿಡ್‍ ಪರಿಹಾರಘೋಷಣೆ

    ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತವಾಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ -ಗೈಡ್- ಕೋವಿಡ್‍ ಸಂಕಷ್ಟದ ಪರಿಹಾರವಾಗಿ ರೂ.5000 ನೀಡವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಪ್ರಕಟಿಸಿದ್ದಾರೆ.

    ಪ್ರವಾಸೋದ್ಯಮ ಇಲಾಖೆಯಲ್ಲಿ 384 ನೋಂದಾಯಿತ ಪ್ರವಾಸಿ ಗೈಡ್‍ಗಳಿದ್ದು, ಅವರೆಲ್ಲರಿಗೂ ಕೋವಿಡ್‍ ಸಂಕಷ್ಟದ ಸಮಯದಲ್ಲಿ ನೆರವಾಗಲು ನಿರ್ಧರಿಸಲಾಗಿದೆ.ಹೋಟೆಲ್‍ ಕಾರ್ಮಿಕರಿಗೆ ಕೋವಿಡ್‍ ಪರಿಹಾರ ಪ್ಯಾಕೇಜ್‍ ಯೋಜನೆಯಡಿ ರೂ.3000 ಗಳನ್ನು ನೀಡಲು ಸಹ ಆರ್ಥಿಕ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ಸರ್ಕಾರಿ ಆದೇಶ ಹೊರಡಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.

    ಬೆಂಗಳೂರಿನ ಖನಿಜ ಭವನದಲ್ಲಿರುವ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಕಛೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೋವಿಡ್‍ ಲಾಕ್‍ಡೌನ್‍ನಿಂದ ಪ್ರವಾಸೋದ್ಯಮ ಕ್ಷೇತ್ರದ ಮೇಲಾಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು.

    ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳ ಜೊತೆ ಸಹ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಕಷ್ಟಗಳನ್ನು ವಿವರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದರು.

    ಆಸ್ತಿ ತೆರಿಗೆಯನ್ನು ಮನ್ನಾ ಮಾಡಬೇಕು. ಮದ್ಯ ಪರವಾನಗಿ ಶುಲ್ಕವನ್ನು ಶೇ.50 ರಷ್ಟು ಮನ್ನಾ ಮಾಡಿ ಉಳಿದ ಶೇ.50 ರಷ್ಟು ಶುಲ್ಕವನ್ನು ಕಟ್ಟಲು ಈ ವರ್ಷದ ಡಿಸೆಂಬರ್‍ ಅಂತ್ಯದವರೆಗೆ ಸಮಯ ವಿಸ್ತರಿಸಬೇಕು ಹಾಗೂ ವಿದ್ಯುತ್‍ಚ್ಛಕ್ತಿ ದರದಲ್ಲಿ ರಿಯಾಯಿತಿ ನೀಡಬೇಕು.

    ಪ್ರವಾಸೋದ್ಯಮ ವಾಹನಗಳ ತೆರಿಗೆಯನ್ನು ಆರು ತಿಂಗಳ ಅವಧಿಗೆ ಮನ್ನಾ ಮಾಡಬೇಕು. ಪ್ರವಾಸಿ ವಾಹನಗಳನ್ನು ಚಲಾಯಿಸುತ್ತಿರುವ ಚಾಲಕರಿಗೆ ರೂ.3000/-ಗಳ ಕೋವಿಡ್‍ ಪರಿಹಾರ ಹಣವಾಗಿ ನೀಡಬೇಕು.ರಾಜ್ಯದಲ್ಲಿ ಓಲಾ, ಉಬರ್ ಸೇರಿದಂತೆ ಒಟ್ಟು 3 ಲಕ್ಷ 30 ಸಾವಿರ ಪ್ರವಾಸಿ ವಾಹನ ಚಾಲಕರಿದ್ದು, ಅವರೆಲ್ಲರಿಗೂ ಕೋವಿಡ್‍ ಪ್ಯಾಕೇಜ್‍ ಹಣ ನೀಡಬೇಕೆಂದು ಒತ್ತಾಯಿಸಿದರು.

    ಇದೇ ತಿಂಗಳ 21 ರಿಂದ ಹೋಟೆಲ್‍ ಹಾಗೂ ರೆಸ್ಟೋರೆಂಟ್‍ಗಳನ್ನು ತೆಗೆಯಲು ಅವಕಾಶ ನೀಡಬೇಕು. ಟೂರ್ ಆಪರೇಟರ್ಸ್‍ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಸಹ ಮನವಿ ಮಾಡಿದರು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೆ.ಎಸ್‍.ಎಫ್‍.ಸಿ.ಯಿಂದ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿಗೆ ರಿಯಾಯಿತಿ ಕೊಡಿಸಬೇಕು ಎಂದು ಸಹ ಕೋರಿದರು.

    ರಾಜ್ಯದಲ್ಲಿರುವ ಎಲ್ಲಾ ಹೋಟೆಲ್‍ಗಳಿಗೂ, ಸ್ಟಾರ್‍ ಹೋಟೆಲ್‍ಗಳಿಗೆ ನೀಡಿರುವ ಕೈಗಾರಿಕಾ ಸ್ಥಾನಮಾನ ವಿಸ್ತರಿಸಬೇಕೆಂದು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧ್ಯಕ್ಷ ಕೆ.ಶ್ಯಾಮರಾಜ್‍, ಉಪಾಧ್ಯಕ್ಷ ವಿನಿತ್‍ ವರ್ಮಾ, ಕಾರ್ಯದರ್ಶಿ ಮಹಾಲಿಂಗಯ್ಯ ಇವರು ಸಚಿವರಿಗೆ ಮನವಿ ಪತ್ರ ನೀಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು.

    ಜೂನ್‍ ತಿಂಗಳ ಅಂತ್ಯಕ್ಕೆ ವಿಜಯಪುರ, ಹಂಪಿ, ಬಾದಾಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ತ್ರೀ ಸ್ಟಾರ್ ಹೋಟೆಲ್‍ಗಳಿಗೆ ಶಿಲಾನ್ಯಾಸ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ತಿಂಗಳ ಅಂತ್ಯಕ್ಕೆ ಪ್ರವಾಸೋದ್ಯಮ ನೀತಿಗೆ ಮಾರ್ಗಸೂಚಿಗಳನ್ನು ಅಳವಡಿಸಿ, ಸರ್ಕಾರಿ ಆದೇಶ ಹೊರಡಿಸಲು ಹಾಗೂ ಸ್ಟಾರ್‍ ಹೋಟೆಲ್‍ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿರುವ ಬಗ್ಗೆ ಸಹ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

    ಹೆಲಿಟೂರಿಸಂ, ಸಿ-ಪ್ಲೈನ್‍ ಹಾಗೂ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ವಾಟರ್‍ ಸ್ಪೋರ್ಟ್ಸ್ ಆರಂಭಿಸುವುದು, ನಂದಿಬೆಟ್ಟ ಹಾಗು ಇತರ ಕಡೆ ರೋಪ್‍-ವೇಗಳನ್ನು ನಿರ್ಮಾಣ ಮಾಡುವ ಯೋಜನೆಗಳಿಗೆ ವೇಗ ನೀಡುವಂತೆ ಇದೇ ವೇಳೆ ಅಧಿಕಾರಿಗಳಿಗೆ ಆದೇಶಿಸಿದರು. ಕರಾವಳಿ ಹಾಗು ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಪ್ರವಾಸೋದ್ಯಮ ಯೋಜನೆಗಳಿಗೆ ಆದ್ಯತೆ ಮೇಲೆ ಕ್ರಮ ಕೈಗೊಂಡು ನಿಗಧಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಿದರು.

    ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ ಕುಮಾರ್‍ ಪಾಂಡೆ, ನಿರ್ದೇಶಕಿ ಸಿಂಧು ಬಿ.ರೂಪೇಶ್‍, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ ಹಾಗೂ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್‍ ಪುಷ್ಕರ್‍ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಪ್ರಗತಿ ಪರಿಶೀಲನೆ ಸಭೆಯ ನಂತರ ಸಚಿವರು ಚಿತ್ರಕಲಾ ಪರಿಷತ್‍ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯಿಂದ ಟೂರ್‍ ಆಪರೇಟರ್ಸ್‍ ಹಾಗೂ ಚಾಲಕರಿಗೆ ಆಯೋಜಿಸಿದ್ದ ಕೋವಿಡ್‍ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ, ಸಚಿವರು ಚಾಲನೆ ನೀಡಿದರು.

    ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಪ್ರಥಮ ಆದ್ಯತೆಯಾಗಿ ಕೋವಿಡ್‍ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಸಚಿವರು ತಿಳಿಸಿದರು.

    error: Content is protected !!