24.7 C
Karnataka
Saturday, November 30, 2024
    Home Blog Page 103

    ವಿದೇಶಗಳಲ್ಲಿ ಓದುವ ವಿದ್ಯಾರ್ಥಿಗಳ 2ನೇ ಡೋಸ್‌ ಅಂತರ 4-6 ವಾರಕ್ಕೆ ಕುಗ್ಗಿಸಲು ಕೇಂದ್ರ ಸಮ್ಮತಿ


    ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳು, ಉದ್ಯೋಗ ಮಾಡುವವರಿಗೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜ್‌ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಲಸಿಕೆ ಅಭಿಯಾನವು ಶುಕ್ರವಾರ (ಜೂನ್‌ 11)ದ ವರೆಗೂ ನಡೆಯಲಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಆವರು, ಕಳೆದ ಮಂಗಳವಾರದಿಂದ ಅರಂಭಿಸಲಾದ ಈ ವ್ಯಾಕ್ಸಿನೇಷನ್‌ ಕ್ಯಾಂಪ್‌ನಲ್ಲಿ ಈವರೆಗೆ 1,200 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಇಂದು ಕೂಡ 50 ಜನ ಬಂದು ಲಸಿಕೆ ಪಡೆದಿದ್ದಾರೆ. ಶುಕ್ರವಾರ ಸಂಜೆಯೊಳಗೆ ವಿದೇಶಕ್ಕೆ ಹೋಗುವವರು ಇದ್ದರೆ ಬಂದು ಲಸಿಕೆ ತೆಗೆದುಕೊಳ್ಳಬಹುದು ಎಂದರು ಅವರು ಕೋರಿದ್ದಾರೆ.

    ಆದ್ಯತಾ ಗುಂಪಿನ ಕೋಟಾದಲ್ಲಿ ಇವರೆಲ್ಲರಿಗೂ ಲಸಿಕೆ ಕೊಡಲಾಗಿದ್ದು, 2ನೇ ಡೋಸ್‌ ನೀಡುವ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು. ಇವರೆಗೆ ನೀಡಲಾಗುವ ಎರಡನೇ ಡೋಸ್‌ ಅವಧಿಯನ್ನು 4ರಿಂದ 6 ವಾರಗಳಿಗೆ ಕುಗ್ಗಿಸುವ ರಾಜ್ಯದ ಕ್ರಮಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ರಾಜ್ಯ ಸರಕಾರ ಪತ್ರ ಬರೆದು ಮನವಿ ಮಾಡಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

    ಜಿಲ್ಲೆಗಳ್ಲಲೂ ಇವರಿಗೆ ಲಸಿಕೆ:

    ಬೆಂಗಳೂರಿನಲ್ಲಿ ಈ ಲಸಿಕೆ ಶಿಬಿರ ಯಶಸ್ವಿಯಾದ ಬೆನ್ನಲ್ಲೇ ಎಲ್ಲ ಜಿಲ್ಲೆಗಳಲ್ಲಿಯೂ ವಿದೇಶಗಳಲ್ಲಿ ವ್ಯಾಸಂಗ ಮತ್ತು ಉದ್ಯೋಗ ಮಾಡುವ ಕನ್ನಡಿಗರಿಗೆ ಇದೇ ರೀತಿಯ ಲಸಿಕೆ ಅಭಿಯಾನ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ

    ಪಿಕ್ಸ್4ಕಾಸ್ ನಿಂದ ಕಟ್ಟಡ ಕಾರ್ಮಿಕರಿಗೆಸಹಾಯಹಸ್ತ

    ವನ್ಯಜೀವಿ ಛಾಯಾಗ್ರಾಹಕರ ಸಂಘಟನೆ ಪಿಕ್ಸ್4ಕಾಸ್ ಬೆಂಗಳೂರಿನಲ್ಲಿ ಕೋವಿಡ್-19ರಿಂದ ಸಂಕಷ್ಟಕ್ಕೆ ಸಿಲುಕಿದವರು ಹಾಗೂ ಕಟ್ಟಡ ಕಾರ್ಮಿಕರಿಗೆ ಆಹಾರದ ಪ್ಯಾಕೆಟ್ ಗಳನ್ನು ವಿತರಿಸಿ ನೆರವು ನೀಡಿದೆ. ಬೆಂಗಳೂರು, ಹೈದರಾಬಾದ್ ಮತ್ತು ಕೊಯಮತ್ತೂರುಗಳಲ್ಲಿ ಇಲ್ಲಿಯವರೆಗೆ 28000 ಆಹಾರದ ಪ್ಯಾಕೆಟ್ ಗಳನ್ನು ವಿತರಿಸಿದ್ದು ಲಾಕ್ ಡೌನ್ ಅಂತ್ಯವಾಗುವವರೆಗೂ ಈ ಉಪಕ್ರಮ ಮುಂದುವರಿಸಲಿದೆ.

    ಈ ಉಪಕ್ರಮದ ಕುರಿತು ಪಿಕ್ಸ್4ಕಾಸ್ ಅಧ್ಯಕ್ಷ ಮೋಹನ್ ಥಾಮಸ್, “ ವನ್ಯಜೀವಿ ಸಂರಕ್ಷಣೆಗೆ ಶ್ರಮಿಸುವ ಸಿಬ್ಬಂದಿ ಹಾಗೂ ಸಂರಕ್ಷಣೆಯಲ್ಲಿ ತೊಡಗಿರುವ ಇತರರಿಗೆ ನೆರವಾಗುವ ಉದ್ದೇಶದಿಂದ ಪ್ರಾರಂಭವಾದ ಪಿಕ್ಸ್4ಕಾಸ್ ಸಂಸ್ಥೆಯು ವಿಶ್ವವನ್ನು ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಮಾಜದ ಅಸಹಾಯಕ, ದುರ್ಬಲ ವರ್ಗಗಳಿಗೆ ನೆರವಾಗುವ ನಿರ್ಧಾರ ತಳೆದು ಬೆಂಗಳೂರು ಹಾಗೂ ಇತರೆ ನಗರಗಳ ಸರ್ಕಾರದ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಹಾಗೂ ಅವರ ಕಡೆಯ ಬಂಧುಗಳು ಹಾಗೂ ವಲಸಿಗ ಕಟ್ಟಡ ಕಾರ್ಮಿಕರಿಗೆ ಆಹಾರದ ಪ್ಯಾಕೆಟ್ ಗಳನ್ನು ವಿತರಿಸುವ ಮೂಲಕ ನೆರವಾಗಿದೆ.

    ನಮ್ಮ ಛಾಯಾಚಿತ್ರಗಳ ಮಾರಾಟ ಹಾಗೂ ವನ್ಯಜೀವಿ ಛಾಯಾಗ್ರಾಹಕರ ಸ್ನೇಹಿತರು ಮತ್ತು ಬಂಧುಬಳಗ ನೀಡಿದ ದೇಣಿಗೆ ಸುಮಾರು 22 ಲಕ್ಷ ರೂ. ಸಂಗ್ರಹವಾಗಿದ್ದು ಈ ನಿಧಿಯ ಸದ್ಬಳಕೆ ಮಾಡಿ ಸಮಾಜದ ಸಂಕಷ್ಟಗಳಿಗೆ ಸದಾ ಮಿಡಿಯುವುದು ನಮ್ಮ ಗುರಿಯಾಗಿದೆ” ಎಂದರು.

    ಪಿಕ್ಸ್4ಕಾಸ್ ಮುಂಬೈ, ಬೆಂಗಳೂರು, ಕೊಲ್ಕತಾ, ಚೆನ್ನೈ, ಕೊಯಮತ್ತೂರು, ದೆಹಲಿ ಅಲ್ಲದೆ ದೋಹಾ, ಸಿಂಗಪೂರ್ ದೇಶಗಳಲ್ಲಿರುವ 30ಕ್ಕೂ ಹೆಚ್ಚು ಛಾಯಾಗ್ರಾಹಕರ ನೆರವಿನೊಂದಿಗೆ ಮಾರ್ಚ್ 2020ರಂದು ಪ್ರಾರಂಭವಾಯಿತು. ಜೀವನದ ವಿವಿಧ ಕ್ಷೇತ್ರಗಳಲ್ಲಿನ ಸಮಾನ ಮನಸ್ಕ ಛಾಯಾಗ್ರಾಹಕರ ಗುಂಪು `ಪಿಕ್ಸ್4ಕಾಸ್’ ಹೆಸರಿನಲ್ಲಿ ಒಗ್ಗೂಡಿದೆ. ನಮ್ಮ ಉದ್ದೇಶವು ಪರಿಸರ ಸಂರಕ್ಷಣೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದಾಗಿದೆ. ಈ ಸಂಸ್ಥೆಯ ಸದಸ್ಯರ ಛಾಯಾಚಿತ್ರಗಳನ್ನು ಮಾರಾಟ ಮಾಡಲು ಹಾಗೂ ನಿಧಿ ಸಂಗ್ರಹಿಸಲು ಡಿಜಿಟಲ್ ಪ್ಲಾಟ್ ಫಾರಂ ಸೃಷ್ಟಿಸಲಾಗಿದೆ. ಈ ಇಡೀ ಪ್ರಕ್ರಿಯೆಯು ಮುದ್ರಣ ವೆಚ್ಚಗಳು ಹಾಗೂ ತೆರಿಗೆಗಳಿಂದ ಮುಕ್ತವಾಗಿದ್ದು ಈ ನಿಶ್ಯಬ್ದವಾಗಿ ಕಾರ್ಯ ನಿರ್ವಹಿಸುವ ನಾಯಕರಿಗೆ ನೆರವಾಗುತ್ತವೆ ಮತ್ತು ಸಂರಕ್ಷಣೆಯ ಪ್ರಯತ್ನಗಳಿಗೆ ಮತ್ತಷ್ಟು ನೆರವಾಗುತ್ತದೆ.

    ಪಿಕ್ಸ್4ಕಾಸ್ ವೆಬ್ ಸೈಟ್ ನಲ್ಲಿ ಹಲವಾರು ವರ್ಣರಂಜಿತ ಮತ್ತು ಅಸಾಧಾರಣ ವನ್ಯಜೀವಿಗಳ ಛಾಯಾಚಿತ್ರಗಳಿದ್ದು ಜನರು ಭೇಟಿ ನೀಡಿ ಈ ಚಿತ್ರಗಳನ್ನು ಕೊಳ್ಳಬಹುದು. ಪ್ರಸ್ತುತ ಸನ್ನಿವೇಶದಲ್ಲಿ ಪಿಕ್ಸ್4ಕಾಸ್ ಹೈದರಾಬಾದ್, ಬೆಂಗಳೂರು ಮತ್ತು ಕೊಯಮತ್ತೂರುಗಳಲ್ಲಿ ಆಹಾರದ ಪ್ಯಾಕೆಟ್ ಗಳನ್ನು ವಿತರಿಸಿತು. ಮೇ 10, 2021ರಂದು ಪ್ರಾರಂಭಿಸಿ ಇಲ್ಲಿಯವರೆಗೂ 28000 ಆಹಾರದ ಪಾಕೆಟ್ ಗಳನ್ನು ವಿತರಿಸಿದೆ. ಲಾಕ್ ಡೌನ್ ತೆರವಾಗುವವರೆಗೂ ಪಿಕ್ಸ್4ಕಾಸ್ ಇದನ್ನು ಮುಂದುವರಿಸಲಿದೆ.

    ಲಸಿಕೆ ಪಡೆಯುವ ಮೊದಲು ಅಥವಾ ನಂತರ ಪ್ರತಿಕಾಯ ಪರೀಕ್ಷೆಗಳನ್ನು ಮಾಡಿಸುವ ಪ್ರವೃತ್ತಿ ಬೇಡ

    • ಅಲರ್ಜಿ ಹೊಂದಿರುವ ಜನರು ಲಸಿಕೆ ಪಡೆಯಬಹುದೇ?
    • ಗರ್ಭಿಣಿಯರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ? ಹಾಲುಣಿಸುವ ತಾಯಂದಿರ ಕಥೆ ಏನು?
    • ಲಸಿಕೆ ಪಡೆದ ನಂತರ ನನ್ನ ದೇಹದಲ್ಲಿ ಸಾಕಷ್ಟು ಪ್ರತಿಕಾಯಗಳು ಉತ್ಪಾದನೆಯಾಗುತ್ತವೆಯೇ?
    • ಲಸಿಕೆಯ ಡೋಸ್‌ಗಳನ್ನು ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯವೇ?
    • ನಾನು ಕೋವಿಡ್ ಸೋಂಕಿಗೆ ಒಳಗಾದರೆ ಎಷ್ಟು ದಿನಗಳ ನಂತರ ನಾನು ಲಸಿಕೆ ಪಡೆಯಬಹುದು.

    ಇವು ಕೋವಿಡ್ ಲಸಿಕೆಯ ಬಗ್ಗೆ ಜನರು ಆಗಾಗ್ಗೆ ಕೇಳುವ ಕೆಲವು ಪ್ರಶ್ನೆಗಳು. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಜೂನ್ 6ರ ಭಾನುವಾರ ಡಿಡಿ ನ್ಯೂಸ್‌ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಕೋವಿಡ್-19 ಲಸಿಕೆಗಳ ಬಗ್ಗೆ ಜನರು ಹೊಂದಿರುವ ವಿವಿಧ ಅನುಮಾನಗಳನ್ನು ಪರಿಹರಿಸಿದ್ದಾರೆ.ಅವುಗಳ ಸಾರಸಂಗ್ರಹ ವನ್ನು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದ್ದು ಅದರ ಆಯ್ದ ಭಾಗ ಇಲ್ಲಿದೆ.


    ಡಾ. ಪಾಲ್: ಯಾರಿಗಾದರೂ ಗಂಭೀರವಾದ ಅಲರ್ಜಿ ಸಮಸ್ಯೆ ಇದ್ದರೆ, ಅಂಥವರು ವೈದ್ಯಕೀಯ ಸಲಹೆಯ ನಂತರವೇ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಕು. ಆದರೆ, ಇದು ಸಾಮಾನ್ಯ ಶೀತ, ಚರ್ಮದ ಅಲರ್ಜಿ ಮುಂತಾದ ಸಣ್ಣ ಅಲರ್ಜಿಗಳ ಪ್ರಶ್ನೆಯಾಗಿದ್ದರೆ, ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯಬಾರದು.

    ಡಾ. ಗುಲೇರಿಯಾ: ಅಲರ್ಜಿಗಾಗಿ ಮೊದಲಿನಿಂದಲೂ ಔಷಧ ತೆಗೆದುಕೊಳ್ಳುತ್ತಿರುವವರು ಅವುಗಳನ್ನು ನಿಲ್ಲಿಸಬಾರದು, ಅವರು ತಮ್ಮನ್ನು ಲಸಿಕೆ ಪಡೆಯುವಾಗ ನಿಯಮಿತವಾಗಿ ಔಷಧ ಸೇವನೆ ಮುಂದುವರಿಸಬೇಕು. ಲಸಿಕೆಯಿಂದಾಗಿ ಉದ್ಭವಿಸುವ ಅಲರ್ಜಿಗಳ ನಿರ್ವಹಣೆಗಾಗಿ ಎಲ್ಲಾ ಲಸಿಕೆ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ನೀವು ತೀವ್ರ ಅಲರ್ಜಿಯನ್ನು ಹೊಂದಿದ್ದರೂ, ಔಷಧ ತೆಗೆದುಕೊಳ್ಳುವುದನ್ನು ಮುಂದುವರಿಸಿ ಮತ್ತು ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂಬುದು ನಮ್ಮ ಸಲಹೆ.

    ಡಾ. ಪಾಲ್: ನಮ್ಮ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಗರ್ಭಿಣಿಯರಿಗೆ ಲಸಿಕೆನೀಡಬಾರದು. ಏಕೆಂದರೆ, ಲಸಿಕೆ ಪ್ರಯೋಗಗಳಿಂದ ಪ್ರಸ್ತುತ ಲಭ್ಯವಿರುವ ದತ್ತಾಂಶದ ಆಧಾರದ ಮೇಲೆ ಗರ್ಭಿಣಿಯರಿಗೆ ಲಸಿಕೆಯನ್ನು ಶಿಫಾರಸು ಮಾಡಬಹುದೇ ಎಂಬ ಬಗ್ಗೆ ವೈದ್ಯರು ಮತ್ತು ವೈಜ್ಞಾನಿಕ ಸಮುದಾಯ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದಾಗ್ಯೂ, ಹೊಸ ವೈಜ್ಞಾನಿಕ ಮಾಹಿತಿಗಳ ಆಧಾರದ ಮೇಲೆ ಕೆಲವೇ ದಿನಗಳಲ್ಲಿ ಭಾರತ ಸರಕಾರವು ಈ ಬಗ್ಗೆ ಸ್ಪಷ್ಟತೆ ಒದಗಿಸಲಿದೆ.

    ಅನೇಕ ಕೋವಿಡ್-19 ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವೆಂದು ಕಂಡುಬಂದಿವೆ; ನಮ್ಮ ಎರಡು ಲಸಿಕೆಗಳಿಗೂ ಈ ಮಾರ್ಗವನ್ನು ಮುಕ್ತಗೊಳಿಸಬೇಕು ಎಂಬುದು ನಮ್ಮ ಭಾವನೆ. ನಾವು ಈ ಬಗ್ಗೆ ಸ್ವಲ್ಪ ತಾಳ್ಮೆಯಿಂದಿರಿ ಎಂದು ವಿನಂತಿಸುತ್ತೇವೆ. ಏಕೆಂದರೆ, ಈಗಿನ ಲಸಿಕೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷತಾ ಕಾಳಜಿಗಳಿಂದಾಗಿ ಗರ್ಭಿಣಿಯರನ್ನು ಆರಂಭಿಕ ಪ್ರಯೋಗಗಳಲ್ಲಿ ಬಳಸಿಕೊಂಡಿಲ್ಲ.

    ಡಾ. ಗುಲೇರಿಯಾ: ಅನೇಕ ದೇಶಗಳು ಗರ್ಭಿಣಿಯರಿಗೆ ಲಸಿಕೆಯನ್ನು ಪ್ರಾರಂಭಿಸಿವೆ. ಅಮೆರಿಕದ ʻಎಫ್‌ಡಿಎʼ ಫೈಜರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ಗೆ ಸಂಬಂಧಿಸಿದ ದತ್ತಾಂಶವೂ ಶೀಘ್ರದಲ್ಲೇ ಹೊರಬೀಳಲಿದೆ. ಈಗಾಗಲೇ ಕೆಲವೊಂದು ದತ್ತಾಂಶಗಳು ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಅಗತ್ಯವಿರುವ ಸಂಪೂರ್ಣ ದತ್ತಾಂಶವನ್ನು ಪಡೆಯಲು ಮತ್ತು ಅನುಮೋದಿಸಲು ಸಾಧ್ಯವಾಗಲಿದೆ ಎಂದು ನಾವು ಆಶಿಸುತ್ತೇವೆ.

    ಡಾ. ಪಾಲ್: ಈ ಬಗ್ಗೆ ಒಂದು ಸ್ಪಷ್ಟ ಮಾರ್ಗಸೂಚಿ ಇದೆ, ಹಾಲುಣಿಸುವ ತಾಯಂದಿರಿಗೆ ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಯಾವುದೇ ಭಯದ ಅಗತ್ಯವಿಲ್ಲ. ಲಸಿಕೆಯ ಮೊದಲು ಅಥವಾ ನಂತರ ಸ್ತನ್ಯಪಾನವನ್ನು ನಿಲ್ಲಿಸುವ ಅಥವಾ ವಿರಮಿಸುವ ಅಗತ್ಯವಿಲ್ಲ.

    ಡಾ. ಗುಲೇರಿಯಾ: ಲಸಿಕೆಗಳ ಪರಿಣಾಮಕಾರಿತ್ವವನ್ನು ನಾವು ಕೇವಲ ಪ್ರತಿಕಾಯಗಳು- ಆಂಟಿ ಬಾಡೀಸ್- ಉತ್ಪತ್ತಿಯಾಗುವ ಪ್ರಮಾಣದಿಂದ ಮಾತ್ರ ನಿರ್ಣಯಿಸಬಾರದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಲಸಿಕೆಗಳು ಅನೇಕ ರೀತಿಯ ರಕ್ಷಣೆಯನ್ನು ನೀಡುತ್ತವೆ.ಪ್ರತಿಕಾಯಗಳ ಮೂಲಕವಷ್ಟೆ ಅಲ್ಲದೆ ಜೀವಕೋಶ-ಮಧ್ಯಸ್ಥಿಕೆಯ ರೋಗನಿರೋಧಕತೆ ಮತ್ತು ಸ್ಮರಣೆ ಜೀವಕೋಶಗಳ ಮೂಲಕ ದೇಹಕ್ಕೆ ರಕ್ಷಣೆ ಒದಗಿಸುತ್ತವೆ. (ಇದರಿಂದ ನಾವು ಸೋಂಕಿಗೆ ಒಳಗಾದಾಗ ಹೆಚ್ಚು ಪ್ರತಿಕಾಯಗಳು ಉತ್ಪಾದನೆಯಾಗುತ್ತವೆ)

    ಇಲ್ಲಿಯವರೆಗೆ ಲಭ್ಯವಿರುವ ದತ್ತಾಂಶವು ಎಲ್ಲಾ ಲಸಿಕೆಗಳ – ಕೋವಾಕ್ಸಿನ್, ಕೋವಿಶೀಲ್ಡ್ ಅಥವಾ ಸ್ಪುಟ್ನಿಕ್ ವಿ – ಪರಿಣಾಮವು ಹೆಚ್ಚು ಕಡಿಮೆ ಸಮಾನವಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಈ ಲಸಿಕೆಯನ್ನು ತೆಗೆದುಕೊಳ್ಳಿ ಅಥವಾ ಆ ಲಸಿಕೆಯನ್ನು ತೆಗೆದುಕೊಳ್ಳಿ ಎಂದು ನಾವು ಹೇಳಿದರೆ ತಪ್ಪಾಗುತ್ತದೆ. ನಿಮ್ಮ ಪ್ರದೇಶದಲ್ಲಿ ಯಾವ ಲಸಿಕೆ ಲಭ್ಯವಿದ್ದರೂ ದಯವಿಟ್ಟು ಅದನ್ನು ತೆಗೆದುಕೊಳ್ಳಿ. ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರುತ್ತೀರಿ.

    ಡಾ. ಪಾಲ್: ಲಸಿಕೆಯ ನಂತರ ಪ್ರತಿಕಾಯ ಪರೀಕ್ಷೆಯನ್ನು ಮಾಡಿಸಲು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಕೇವಲ ಪ್ರತಿಕಾಯಗಳು ಮಾತ್ರ ವ್ಯಕ್ತಿಯ ರೋಗನಿರೋಧಕತೆಯನ್ನು ಸೂಚಿಸುವುದಿಲ್ಲ. ಈ ಕಾರಣಕ್ಕಾಗಿ ಇಂತಹ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಅಲ್ಲದೆ, ಟಿ-ಕೋಶಗಳು ಅಥವಾ ಸ್ಮರಣೆ ಕೋಶಗಳೂ ಸಹ ದೇಹದ ಪ್ರತಿರೋಧಕ ಶಕ್ತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಲಸಿಕೆಯನ್ನು ಪಡೆದಾಗ ಇವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತವೆ, ಅವು ಬಲಗೊಳ್ಳುತ್ತವೆ ಮತ್ತು ಪ್ರತಿರೋಧ ಶಕ್ತಿಯನ್ನು ಪಡೆಯುತ್ತವೆ. ಆದರೆ, ಪ್ರತಿಕಾಯ ಪರೀಕ್ಷೆ ವೇಳೆ ಟಿ-ಜೀವಕೋಶಗಳು ಪತ್ತೆವಾಗುವುದಿಲ್ಲ. ಏಕೆಂದರೆ ಇವು ಇರುವುದು ಮೂಳೆ ಮಜ್ಜೆಯಲ್ಲಿ. ಆದ್ದರಿಂದ, ಲಸಿಕೆ ಪಡೆಯುವ ಮೊದಲು ಅಥವಾ ನಂತರ ಪ್ರತಿಕಾಯ ಪರೀಕ್ಷೆಗಳನ್ನು ಮಾಡಿಸುವ ಪ್ರವೃತ್ತಿ ಬೇಡ. ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಿ, ಸರಿಯಾದ ಸಮಯದಲ್ಲಿ ಎರಡೂ ಡೋಸ್‌ಗಳನ್ನು ತೆಗೆದುಕೊಳ್ಳಿ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ಎಂಬುದು ನಮ್ಮ ಮನವಿ. ಅಷ್ಟೇ ಅಲ್ಲ, ಕೋವಿಡ್-19 ಸೋಂಕಿಗೆ ಒಳಗಾಗದವರಿಗೆ ಲಸಿಕೆಯ ಅಗತ್ಯವಿಲ್ಲ ಎಂಬ ತಪ್ಪು ಕಲ್ಪನೆಯಿಂದಲೂ ಜನರು ಹೊರಬರಬೇಕು.

    ಡಾ. ಪಾಲ್: ವಿಶೇಷವಾಗಿ ʻಆಸ್ಟ್ರಾ-ಜೆನೆಕಾʼ ಲಸಿಕೆಗೆ ಸಂಬಂಧಿಸಿದಂತೆ ಇಂತಹ ಸಮಸ್ಯೆಯ ಕೆಲವು ಪ್ರಕರಣಗಳು ಗಮನ ಸೆಳೆದಿವೆ. ಈ ಸಮಸ್ಯೆ ಯುರೋಪಿನಲ್ಲಿ, ಅದರಲ್ಲೂ ಕೊಂಚ ಮಟ್ಟಿಗೆ ಯುವ ಜನರಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಅವರ ಜೀವನಶೈಲಿ, ದೇಹ ಮತ್ತು ಆನುವಂಶಿಕ ರಚನೆ ಇದಕ್ಕೆ ಕಾರಣ. ಆದರೆ, ನಾವು ಭಾರತದಲ್ಲಿ ಈ ದತ್ತಾಂಶವನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ್ದೇವೆ. ಅಂತಹ ರಕ್ತ ಹೆಪ್ಪುಗಟ್ಟುವ ಘಟನೆಗಳು ಇಲ್ಲಿ ಬಹುತೇಕ ನಗಣ್ಯವಾಗಿವೆ. ಅದರ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲವೆಂಬ ಭರವಸೆಯನ್ನು ನಾನು ನಿಮಗೆ ನೀಡಲು ಬಯಸುತ್ತೇನೆ. ಯುರೋಪಿಯನ್ ದೇಶಗಳಲ್ಲಿ, ಈ ಸಮಸ್ಯೆ ನಮ್ಮ ದೇಶಕ್ಕಿಂತಲೂ ಸುಮಾರು 30 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ.

    ಡಾ. ಗುಲೇರಿಯಾ: ಅಮೆರಿಕ ಮತ್ತು ಯುರೋಪಿಯನ್ ಜನರಿಗೆ ಹೋಲಿಸಿದರೆ ಶಸ್ತ್ರಚಿಕಿತ್ಸೆಯ ನಂತರವೂ ಭಾರತೀಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಎಂದು ಈ ಮೊದಲೇ ಕಂಡು ಬಂದಿದೆ. ವ್ಯಾಕ್ಸಿನ್ ಪ್ರೇರಿತ ʻಥ್ರಾಂಬೋಸಿಸ್ʼ ಅಥವಾ ʻಥ್ರಾಂಬೋಸೈಟೊಪೆನಿಯಾʼ ಎಂದು ಹೆಸರಿಸಲಾದ ಈ ಅಡ್ಡ ಪರಿಣಾಮವು ಭಾರತದಲ್ಲಿ ಬಹಳ ವಿರಳವಾಗಿದ್ದು, ಭಾರತದಲ್ಲಿ ಇದರ ಪ್ರಮಾಣ ಯುರೋಪ್‌ಗಿಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ. ಆದ್ದರಿಂದ, ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದಕ್ಕಾಗಿ ಚಿಕಿತ್ಸೆಗಳು ಸಹ ಲಭ್ಯವಿದ್ದು, ಬೇಗನೆ ಸಮಸ್ಯೆ ಪತ್ತೆ ಮಾಡಿದರೆ ಇದರ ಮೊರೆ ಹೋಗಲು ಅವಕಾಶವಿದೆ.

    ಡಾ. ಗುಲೇರಿಯಾ: ಕೋವಿಡ್-19 ಸೋಂಕಿಗೆ ಒಳಗಾದ ವ್ಯಕ್ತಿಯು ಚೇತರಿಸಿಕೊಂಡ ದಿನದಿಂದ ಮೂರು ತಿಂಗಳ ಬಳಿಕ ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ಇತ್ತೀಚಿನ ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳುತ್ತವೆ. ಹೀಗೆ ಮಾಡುವುದರಿಂದ ದೇಹವು ಬಲವಾದ ರೋಗನಿರೋಧಕಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಮತ್ತು ಲಸಿಕೆಯ ಪರಿಣಾಮವು ಉತ್ತಮವಾಗಿರುತ್ತದೆ.

    ನಮ್ಮ ಲಸಿಕೆಗಳು ಇದುವರೆಗೂ ಭಾರತದಲ್ಲಿ ಕಂಡುಬರುವ ರೂಪಾಂತರಿ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಿವೆ ಎಂದು ತಜ್ಞರಾದ ಡಾ. ಪಾಲ್ ಮತ್ತು ಡಾ. ಗುಲೇರಿಯಾ ಇಬ್ಬರೂ ಪ್ರತಿಪಾದಿಸಿದರು ಹಾಗೂ ಭರವಸೆ ನೀಡಿದರು. ಲಸಿಕೆಗಳನ್ನು ತೆಗೆದುಕೊಂಡ ನಂತರ ನಮ್ಮ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ ಅಥವಾ ಲಸಿಕೆಗಳನ್ನು ತೆಗೆದುಕೊಂಡ ನಂತರ ಜನರು ಸಾಯುತ್ತಾರೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಅವರು ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದರು. ಇದು ಗ್ರಾಮೀಣ ಪ್ರದೇಶಗಳು ಮತ್ತು ದೂರ ಪ್ರದೇಶಗಳಲ್ಲಿರುವ ಕೆಲವರು ಹೊಂದಿರುವ ತಪ್ಪು ನಂಬಿಕೆ ಎಂದು ಹೇಳಿದರು. (ವರದಿ ಕೃಪೆ: ಪಿಐಬಿ)


    ಬಿಜೆಪಿಯಲ್ಲಿನ ಬೆಳವಣಿಗೆ ಬೃಹತ್ ನಾಟಕ, ಬಿಎಸ್‍ವೈ ತಂತ್ರಗಾರಿಕೆ ಎಂದ ಸಿದ್ಧರಾಮಯ್ಯ

    ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಬೃಹತ್ ನಾಟಕ. ನೀನು ಚಿವುಟಿದಂತೆ ಮಾಡು, ನಾನು ಅತ್ತಂತೆ ಮಾಡು ಎನ್ನುವಂತೆ ಆಗಿದೆ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.ಬಿಜೆಪಿಯಲ್ಲಿ ನಡೆಯುತ್ತಿರುವ ಎಲ್ಲ ನಾಟಕವೂ ರಾಜ್ಯದ ಜನರಿಗೆ ಗೊತ್ತಾಗಿದೆ. ಹೀಗಾಗಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಯಡಿಯೂರಪ್ಪ ಅವರು ಕಳಪೆ ಮುಖ್ಯಮಂತ್ರಿ. ಅವರನ್ನು ತೆಗೆಯುವ ಕುರಿತು ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ. ಆದರೆ, ಕೊರೊನಾ ಕಾಡುತ್ತಿರುವ ಸಂದರ್ಭದಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಏನಾಗಬಹುದು, ಮುಂದಿನ ಮುಖ್ಯಮಂತ್ರಿ ಯಾರನ್ನು ಮಾಡಬೇಕು ಎಂಬ ಸಂಶಯ ವರಿಷ್ಠರನ್ನು ಕಾಡುತ್ತಿದೆ.ಯಡಿಯೂರಪ್ಪ ಅವರು ಶಾಸಕರಿಂದ ಸಹಿ ಸಂಗ್ರಹ ಮಾಡಬೇಡಿ ಎಂದಿದ್ದಾರೆ. ರೇಣುಕಾಚಾರ್ಯ 65 ಶಾಸಕರು ಈಗಾಗಲೇ ಸಹಿ ಮಾಡಿದ್ದಾರೆ ಎನ್ನುತ್ತಾರೆ. ಈ ಸಹಿಗೆ ಕಿಮ್ಮತ್ತಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲವೂ ಡ್ರಾಮ ಎನ್ನುವುದು ತಿಳಿಯುವುದಿಲ್ಲವೇ ? ಎಂದು ಸಿದ್ಧರಾಮಯ್ಯ ಕೇಳಿದ್ದಾರೆ.

    ನಾನು ವರಿಷ್ಠರು ಹೇಳಿದ ಕೂಡಲೇ ರಾಜಿನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ಅವರ ತಂತ್ರಗಾರಿಕೆಯ ಭಾಗ. ಮತ್ತೊಂದೆಡೆ ರೇಣುಕಾಚಾರ್ಯ ಮೂಲಕ ಅವರೇ ಶಾಸಕರ ಸಹಿ ಸಂಗ್ರಹ ಮಾಡಿಸುತ್ತಿದ್ದಾರೆ. ಒಂದು ಕಡೆ ಬೆದರಿಸುವ ಮತ್ತು ನನಗೆ ಶಕ್ತಿ ಇದೆ ಎಂದು ತೋರಿಸಲು ಹೊರಟಿದ್ದಾರೆ. ಇದು ಸ್ವಾಭಾವಿಕವಾದ ರಾಜಕೀಯ ಬೆಳವಣಿಗೆಗಳು ಏನಲ್ಲ ಎಂದೂ ಸಿದ್ಧರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ತಿಳಿಸಿದರು.

    ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಜಯ :
    ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಸವನಗೌಡ ತುರವೀಹಾಳ ಅವರು ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ಮಾಡಿರುವ ದ್ರೋಹವನ್ನು ಜನ ಸಹಿಸಲಿಲ್ಲ. ಅವರ ಬಗ್ಗೆ ಅಸಹ್ಯ ಭಾವನೆ ಉಂಟಾಗಿತ್ತು. ಹೀಗಾಗಿ ಮತದಾರರು ಅವರನ್ನು ಸೋಲಿಸುವ ತೀರ್ಮಾನ ಮಾಡಿದ್ದರು.ನಾನು ಮತ್ತು ಶಿವಕುಮಾರ್ ಪ್ರಚಾರ ಮಾಡಿದ್ದರ ಜೊತೆಗೆ ಸ್ಥಳೀಯ ನಾಯಕರೂ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದರು. ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ಮತ್ತು ಅನುಕಂಪದ ಅಲೆ ಬಸವನಗೌಡ ಅವರ ಗೆಲುವಿಗೆ ಕಾರಣವಾಯಿತು. ಈ ಮೂಲಕ ಮಸ್ಕಿ ಕ್ಷೇತ್ರದ ಜನ ಪಕ್ಷಾಂತರ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

    ಚುನಾವಣೆಯಾದರೆ ನಮ್ಮದೇ ಗೆಲುವು
    ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾಲಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಾತಾವರಣ ನಿರ್ಮಾಣವಾಗಿದೆೆ. ಬಿಜೆಪಿ ಸರಕಾರ ಎಲ್ಲರ ರಂಗಗಳಲ್ಲಿಯೂ ವಿಫಲವಾಗಿರುವುದೇ ಇದಕ್ಕೆ ಕಾರಣ. ಈ ಸರಕಾರದಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಷಯವನ್ನಂತೂ ಕೇಳುವಂತಿಲ್ಲ.

    ನಮ್ಮ ಶಾಸಕರು ಚುನಾವಣೆ ವೇಳೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಶಕ್ತಿ ಕಳೆದುಕೊಂಡಿದ್ದಾರೆ. ಅಭಿವೃದ್ಧಿಗೆ ಸರಕಾರದಿಂದ ಅನುದಾನ ಬಿಡುಗಡೆ ಆಗದಿರುವುದೇ ಇದಕ್ಕೆ ಕಾರಣ. ಈಗಲೇ ಚುನಾವಣೆ ಬರಬೇಕು ಎಂದು ನಾವು ಬಯಸುವುದಿಲ್ಲ. ಸರಕಾರ ಉರುಳಿಸುವ ಪ್ರಯತ್ನಕ್ಕೂ ಕೈ ಹಾಕುವುದಿಲ್ಲ ಎಂದರು.


    .

    ಆಗಸ್ಟ್ 28-29ಕ್ಕೆ ಸಿಇಟಿ: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ


    • ಸಿಇಟಿ ಅಂಕಗಳಿಂದ ಮಾತ್ರ rank ನಿರ್ಧಾರ: ಜೂನ್ 15ರಿಂದ ನೋಂದಣಿ
    • ಜಸ್ಟ್‌ ಪಾಸಾದರೆಲ್ಲರೂ ಬರೆಯಬಹದು CET
    • ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಹತ್ವದ ಪ್ರಕಟಣೆ

    2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಿರುವುದರಿಂದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೊರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.

    ಈ ಸಂಬಂಧ ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

    ಸಿಇಟಿ, ನೀಟ್ ಸೇರಿ ರಾಜ್ಯದಲ್ಲಿ ನಡೆಯುವ ಎಲ್ಲ ವೃತ್ತಿಪರ ಕೋರ್ಸುಗಳಿಗೆ ಪಿಯುಸಿ ಅಂಕವನ್ನು ಪರಿಗಣನೆ ಮಾಡದಿರಲು ನಿರ್ಧರಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಈ ನಿಟ್ಟಿನಲ್ಲಿ ನೀಡಿದ್ದ ಸಲಹೆಯನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

    ಈಗಾಗಲೇ ಘೋಷಣೆ ಮಾಡಿರುವಂತೆ ಆಗಸ್ಟ್‌ 28, 29 ಹಾಗೂ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ದ್ವಿತೀಯ ಪಿಯುಸಿ (ವಿಜ್ಞಾನ) ಪಾಸಾದ ಪ್ರತೀ ವಿದ್ಯಾರ್ಥಿಯೂ ಸಿಇಟಿ ಬರೆಯಲು ಅವಕಾಶವಿದೆ ಎಂದು ಅವರು ತಿಳಿಸಿದರು.

    “ಎಲ್ಲ ಐಚ್ಛಿಕ ವಿಷಯಗಳ ಪರೀಕ್ಷೆ 28 ಮತ್ತು 29ರಂದು ನಡೆಯುತ್ತದೆ. ಉಳಿದಂತೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಆಗಸ್ಟ್ 30ರಂದು ಪರೀಕ್ಷೆ ನಡೆಯಲಿದೆ. ಮೊದಲು ಯಾವ ಪದ್ಧತಿಯಲ್ಲಿ ಪರೀಕ್ಷೆ ನಡೆಯುತ್ತಿತ್ತೋ ಅದೇ ರೀತಿ ಪರೀಕ್ಷೆ ನಡೆಯುತ್ತದೆ. ಪ್ರತಿ ವಿಷಯಕ್ಕೆ 60 ಅಂಕ ಇರುತ್ತದೆ. ಮೊದಲ ದಿನ ಗಣಿತ & ಜೀವವಿಜ್ಞಾನ ಹಾಗೂ ಎರಡನೇ ದಿನ ಭೌತವಿಜ್ಞಾನ & ರಸಾಯನಿಕ ವಿಜ್ಞಾನ ಇರುತ್ತದೆ ಎಂದರು ಅವರು.

    ಅಂಕಗಳ ಮಿತಿ ಇಲ್ಲ, ವಿನಾಯಿತಿಯ ವಿವರ:

    ಸಿಇಟಿಯಲ್ಲಿ ಎಂಜಿನಿಯರಿಂಗ್, ಪಶುವೈದ್ಯ, ಕೃಷಿ ವಿಜ್ಞಾನ, ಆರ್ಕಿಟೆಕ್ಟ್, ಫಾರ್ಮಸಿ ಪ್ರವೇಶ ಪರೀಕ್ಷೆಗೆ ಇದ್ದ ʼಅರ್ಹ ಅಂಕʼಗಳ ಷರತ್ತನ್ನು ತೆಗೆದು ಹಾಕಲಾಗಿದೆ. ಕೇವಲ ಸಿಇಟಿ ಅಂಕಗಳ ಆಧಾರದ ಮೇಲೆ ಮಾತ್ರ ರಾಂಕ್ ಕೊಡಲಾಗುವುದು. ವೃತ್ತಿಪರ ಎಂಜಿನಿಯರಿಂಗ್ ಕೋರ್ಸ್ʼಗೆ ಭೌತಶಾಸ್ತ್ರ, ರಸಾಯನಶಾಸ್ತ್ರ & ಗಣಿತ ವಿಷಯಗಳಲ್ಲಿ ಸಿಇಟಿ ಬರೆಯಲು ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇ.45 ಹಾಗೂ ಪರಿಶಿಷ್ಟ ಜಾತಿ-ವರ್ಗದ ಅಭ್ಯರ್ಥಿಗಳು ಶೇ.40ರಷ್ಟು ಅಂಕಗಳನ್ನು ಗಳಿಸಬೇಕೆಂಬ ಷರತ್ತು ಇತ್ತು. ಆದರೆ ಈಗ ಬದಲಿಸಿದ್ದು, ಪಿಸಿಎಂ ಹಾಗೂ ನಿಗದಿತ ಐಚ್ಛಿಕ ವಿಷಯಗಳಲ್ಲಿ ಉತ್ತೀರ್ಣರಾಗಿರುವ ಎಲ್ಲ, ಅಂದರೆ ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಗಳು ಕೂಡ ಸಿಇಟಿ ಬರೆಯಲು ಅರ್ಹತೆ ಹೊಂದಿರುತ್ತಾರೆ. ಅಂಕಗಳ ಮಿತಿ ಸಡಿಲಿಕೆ ಮಾಡಿರುವ ಬಗ್ಗೆ ಎಲ್ಲ ಸಂಬಂಧಿತ ಪರೀಕ್ಷಾ ಮಂಡಳಿಗಳು, ಇನ್ನಿತರೆ ಸಂಬಂಧಿತ ಎಲ್ಲ ಸಂಸ್ಥೆಗಳಿಗೆ ಸರಕಾರ ಪತ್ರ ಬರೆಯಲಿದೆ ಎಂದು ಡಿಸಿಎಂ ಇದೇ ವೇಳೆ ತಿಳಿಸಿದರು.

    2021-22ನೇ ವರ್ಷಕ್ಕೆ ಮಾತ್ರ:

    ಎಂಜಿನಿಯರಿಂಗ್ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ rank ನಿರ್ಧರಿಸಲು ಪ್ರಸ್ತುತ ನಿಯಮದಲ್ಲಿ ಇರುವಂತೆ ಅರ್ಹತಾ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆಯಲ್ಲಿ ಪಡೆದ ಪಿಸಿಎಂ ವಿಷಯಗಳ ಅಂಕಗಳನ್ನು ಸಮನಾಗಿ ಪರಿಗಣಿಸಿ ಸಿಇಟಿ rank ನೀಡಲಾಗುತ್ತಿತ್ತು. ಅದರ ಬದಲಿಗೆ ಈಗ ಕೇವಲ ಸಿಇಟಿ ಪರೀಕ್ಷೆಯಲ್ಲಿನ ಪಿಸಿಎಂ ವಿಷಯಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ ಎಂಜಿನಿಯರಿಂಗ್ rank ಕೊಡಲಾಗುವುದು. ಈ ಬದಲಾವಣೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಜೂನ್ 15ರಿಂದ ನೋಂದಣಿ:

    ಸಿಇಟಿ ಬರೆಯಲಿಚ್ಛಿಸುವ ವಿದ್ಯಾರ್ಥಿಗಳು ಜೂನ್ 15ರಿಂದಲೇ ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.

    ಸಿಇಟಿಗೂ ನೀಟ್ ನಂತೆ ಅಂಕ ಮಿತಿ?:

    ಇದೇ ವೇಳೆ ನೀಟ್ ನಲ್ಲಿ ಇಂತಿಷ್ಟು ಅಂಕ ಗಳಿಸಿದರೆ ಮಾತ್ರ ವೈದ್ಯ ಕೋರ್ಸುಗಳಿಗೆ ಪ್ರವೇಶ ಇದೆ. ಅದೇ ಪದ್ಧತಿಯನ್ನು ಸಿಇಟಿಯಲ್ಲೂ ತರುವ ಉದ್ದೇಶವಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಗುಣಮಟ್ಟದ ದೃಷ್ಟಿಯಲ್ಲಿ ಸರಕಾರ ಈ ನಿಟ್ಟಿನಲ್ಲಿ ಚಿಂತಿಸುತ್ತಿದೆ. ಪಾಸಾದವರೆಲ್ಲ ಎಂಜಿನಿಯರಿಂಗ್ ಸೇರುತ್ತಿದ್ದಾರೆ. ಆದ್ದರಿಂದ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ ಎಂದರು ಅವರು.

    ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕುಮಾರ್ ನಾಯಕ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಾಜ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಅವರು ಸಭೆಯಲ್ಲಿ‌ ಹಾಜರಿದ್ದರು.


    ವಿಜ್ಞಾನ ಪದವಿ ಕೋರ್ಸುಗಳಿಗೂ ಸಿಇಟಿ ಚಿಂತನೆ

    2021ನೇ ಸಾಲಿನಲ್ಲಿ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ. 6ರಿಂದ 7ಲಕ್ಷ ವಿದ್ಯಾರ್ಥಿಗಳು ಪಿಯುಸಿಯಿಂದ ಹೊರಬರುತ್ತಿದ್ದಾರೆ. ಮೊದಲು ಕೊನೆ ಪಕ್ಷ 4 ಲಕ್ಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ವಿದ್ಯಾರ್ಥಿಗಳು ಮಾತ್ರ ಪಾಸಾಗುತ್ತಿದ್ದರು. ಈ ಬಾರಿ 30% ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಇವರಲ್ಲಿ ಅನೇಕರು ಪದವಿ ಕಾಲೇಜುಗಳಿಗೆ ಸೇರಲಿದ್ದು, ಅಲ್ಲಿನ ವ್ಯವಸ್ಥೆ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.ವಿಜ್ಞಾನ ವಿಭಾಗದಲ್ಲಿ ಗುಣಮಟ್ಟಕ್ಕೆ ಆದ್ಯತೆ ಕೊಡುವ ಉದ್ದೇಶದಿಂದ ಅದಕ್ಕೆ ಸಂಬಂಧಿಸಿದ ಎಲ್ಲ ಪದವಿ ಕೋರ್ಸುಗಳಿಗೆ ಸಿಇಟಿ ಅಂಕಗಳನ್ನು ಆಧರಿಸಿಯೇ ಪ್ರವೇಶ ನೀಡುವ ಯೋಚನೆ ಮಾಡಲಾಗುತ್ತಿದೆ. ಈ ಬಗ್ಗೆ ವಿಸ್ತೃತವಾಗಿ ಚಿಂತಿಸಲಾಗುತ್ತಿದೆ. ಯಾವುದೂ ಅಂತಿಮವಾಗಿಲ್ಲ ಎಂದು ಅವರು ಹೇಳಿದರು.




    ದೇಶದಲ್ಲಿ ಸೋಂಕು ಮತ್ತಷ್ಟು ಇಳಿಕೆ

    ಭಾರತದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 63 ದಿನಗಳ ನಂತರವೂ ಒಂದು ಲಕ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ (ಜೂನ್ 8ರ ಬೆಳಿಗ್ಗೆ9 ಗಂಟೆ )86,498 ಪ್ರಕರಣಗಳು ವರದಿಯಾಗಿವೆ. 66 ದಿನಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿವೆ.

    ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಇನ್ನಷ್ಟು ಇಳಿಕೆಯಾಗಿದ್ದು, 13,03,702 ರಷ್ಟಿವೆ. 24 ಗಂಟೆಗಳ ಅವಧಿಯಲ್ಲಿ 97,907 ರಷ್ಟು ಸಕ್ರಿಯ ಪ್ರಕರಣಗಳು ಇಳಿಕೆಯಾಗಿವೆ.

    ಈವರೆಗೆ ದೇಶದಲ್ಲಿ 2,73,41,462 ಮಂದಿ ಚೇತರಿಸಿಕೊಂಡಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 1,82,282 ಗುಣಮುಖರಾಗಿದ್ದಾರೆ. ಸತತ 26 ನೇ ದಿನವೂ ಸಹ ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಸಂಖ್ಯೆ ಹೆಚ್ಚಾಗಿದೆ. ಚೇತರಿಕೆ ದರ ಶೇ 94.29 ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ 5.94 ರಷ್ಟಿದೆ.

    ದೈನಂದಿನ ಪಾಸಿಟಿವಿಟಿ ದರ ಶೇ 4.92 ರಷ್ಟಿದ್ದು, ನಿರಂತರವಾಗಿ 15 ನೇ ದಿನವೂ ಸಹ ಪಾಸಿಟಿವಿಟಿ ದರ ಶೇ 10 ಕ್ಕಿಂತ ಕಡಿಮೆ ಇದೆ. ಸೋಂಕು ಪತ್ತೆ ಪರೀಕ್ಷೆ ಗಣನೀಯವಾಗಿ ಏರಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 36.8 ಕೋಟಿ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿ ಒಟ್ಟು 23.61 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ.(ವರದಿ: ಪಿಐಬಿ)

    ದಿಲೀಪ್ ಕುಮಾರ್ ಆರೋಗ್ಯ ಸ್ಥಿರ

    ತಮ್ಮ ಪತಿ, ಹಿರಿಯ ಕಲಾವಿದ ದಿಲೀಪ್ ಕುಮಾರ್ ಅವರ ಆರೋಗ್ಯ ಸ್ಥಿರವಾಗಿದ್ದು ಆದಷ್ಟು ಬೇಗನೆ ಅವರನ್ನು ಡಿಸ್ ಚಾರ್ಜ್ ಮಾಡುವುದಾಗಿ ವೈದ್ಯರು ಭರವಸೆ ನೀಡಿದ್ದಾರೆಂದು ಸಾಹಿರಾ ಬಾನು  ಈಗ್ಗೆ ಕೆಲವು ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದಾರೆ.

    ವದಂತಿಗಳನ್ನು ನಂಬಬಾರದೆಂತಲೂ ಮತ್ತು ದಿಲೀಪ್ ಕುಮಾರ್ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಬೇಕೆಂತಲೂ ಅವರು ಮನವಿ ಮಾಡಿರುವುದರ ಜೊತೆಗೆ ದಿಲೀಪ್ ಕುಮಾರ್ ಅವರ ಇತ್ತೀಚಿನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

    ಉಸಿರಾಟದ ತೊಂದರೆಗೆ ಒಳಗಾಗಿದ್ದ ದಿಲೀಪ್ ಕಮಾರ್ ಅವರನ್ನು ಭಾನುವಾರ ಮುಂಬೈನ ಹಿಂದೂಜ ಆಸ್ಫತ್ರೆಗೆ ಸೇರಿಸಲಾಗಿತ್ತು.

    ರಾಜ್ಯ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ;146 ತಾಲೂಕು, 19 ಜಿಲ್ಲಾಸ್ಪತ್ರೆಗಳ ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೆ

    ಸಂಭವನೀಯ ಕೋವಿಡ್‌ ಮೂರನೇ ಅಲೆ ಸೇರಿ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯವನ್ನು ಸರ್ವಸಜ್ಜುಗೊಳಿಸಲು ತಕ್ಷಣವೇ ಮುಂದಾಗಿರುವ ರಾಜ್ಯ ಸರಕಾರವು 1,500 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿದೆ.

    ಬೆಂಗಳೂರಿನಲ್ಲಿ ಸೋಮವಾರ ನಡೆದ ಕೋವಿಡ್‌ ಕಾರ್ಯಪಡೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದರಲ್ಲದೆ, 3  ತಿಂಗಳಲ್ಲಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗಲಿದೆ ಎಂದರು.

    ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಬಗ್ಗ ಡಿಸಿಎಂ ನೀಡಿದ ಮಾಹಿತಿಯ ಸಾರಾಂಶ ಹೀಗಿದೆ;

    • 146 ತಾಲೂಕು ಹಾಗೂ 16 ಜಿಲ್ಲಾಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಇನ್ನು 3 ಆಸ್ಪತ್ರೆಗಳ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ಇದು. ಇಡೀ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸಂಪೂರ್ಣ ಮೇಲ್ದರ್ಜೆಗೇರಿಸಲಾಗುವುದು.
    • ಪ್ರಾಥಮಿಕ ಮಟ್ಟದಿಂದ ಜಿಲ್ಲಾ ಆಸ್ಪತ್ರೆವರೆಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಪ್ರತೀ ತಾಲೂಕು ಆಸ್ಪತ್ರೆಯಲ್ಲೂ ಒಟ್ಟು 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಇಷ್ಟೂ ಹಾಸಿಗೆಗಳ ಪೈಕಿ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆಗಳಿರುತ್ತವೆ. ಜತೆಯಲ್ಲಿಯೇ ವೆಂಟಿಲೇಟರ್‌, ಮಾನೀಟರ್‌ಗಳು & ಬೈಪ್ಯಾಪ್ ವ್ಯವಸ್ಥೆ ಇರುವ ಹಾಗೆ ಕ್ರಮ ವಹಿಸಲಾಗುವುದು. ರಿಮೋಟ್‌ ಐಸಿಯುಗಳ ಜತೆಗೆ ಎಲ್ಲ ರೀತಿಯ ಡಯಾಗ್ನಾಸ್ಟಿಕ್‌ ಸೌಲಭ್ಯವನ್ನೂ ಒದಗಿಸಲಾಗುವುದು. ಈ ಇಡೀ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ಎಲ್ಲ ನುರಿತ ಸಿಬ್ಬಂದಿಯನ್ನು ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
    • ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ ತನಕ ಇಷ್ಟೆಲ್ಲ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಕೊನೆ ಪಕ್ಷ 4,000  ವೈದ್ಯರ ಅಗತ್ಯವಿದೆ. ಒಬ್ಬ ವೈದ್ಯರಿಗೆ ಮೂವರು ನರ್ಸ್‌ಗಳಂತೆ, ಒಬ್ಬ ವೈದ್ಯರಿಗೆ ಗ್ರೂಪ್‌ ʼಡಿʼ ಮೂವರು ಸಿಬ್ಬಂದಿ ಅಗತ್ಯ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನ ಸಲುವಾಗಿ 1,500 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ವಾರ್ಷಿಕ 600 ಕೋಟಿ ರೂ. ವೇತನ ಹೊರತುಪಡಿಸಿದರೆ ಮಿಕ್ಕ ಬಹುತೇಕ ವೆಚ್ಚ ಒಮ್ಮೆಯಷ್ಟೇ ಆಗುವಂಥದ್ದು. ಉಳಿದಂತೆ ಕಟ್ಟಡ, ಆಕ್ಸಿಜನ್‌ ಜನರೇಟರ್‌, ವೆಂಟಿಲೇಟರ್‌, ಯಂತ್ರೋಪಕರಣ ಇತ್ಯಾದಿ ಸೇರಿ 800 ಕೋಟಿ ರೂ. ವೆಚ್ಚ ಆಗಲಿದೆ. ಈ ಕುರಿತ ಅಂದಾಜು ವೆಚ್ಚದ ವಿವರಗಳನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದ್ದು, ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
    • ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಯಾರೂ ತಮ್ಮ ತಾಲೂಕು ಬಿಟ್ಟು ಆಚೆ ಬರಬಾರದು. ಜಿಲ್ಲಾ ಮಟ್ಟದಲ್ಲೇ 97% ಆರೋಗ್ಯ ಸೇವೆ ಸಿಗಬೇಕು. ಸರಕಾರಿ ಆಸ್ಪತ್ರೆ ಎಂದರೆ, ನಿರ್ವಹಣೆ & ಗುಣಮಟ್ಟದಲ್ಲಿ ಕೊರತೆ ಆಗಬಾರದು. ಇದು ಸರಕಾರದ ಉದ್ದೇಶ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಬಿಸಿಜಿ (ಬಾಸ್ಟನ್‌ ಕನ್ಸಲ್‌ಟಿಂಗ್‌ ಗ್ರೂಪ್)‌ ನಮಗೆ CSR ಮೂಲಕ ಉಚಿತವಾಗಿ ತಾಂತ್ರಿಕ ನೆರವು ನೀಡುತ್ತಿದೆ.

    ಬೆಂಗಳೂರು ನಗರದಲ್ಲೂ ವಿಸ್ತರಣೆ:

    ಬೆಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ ವಿಸ್ತರಿಸಲು ಸ್ಥಳದ ಅಭಾವ ಇದ್ದು, ಹೊಸ ಜಾಗಗಳನ್ನು ಅಥವಾ ಲಭ್ಯ ಸ್ಥಳಗಳನ್ನು ಗುರುತಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಅಗಾಧವಾಗಿ ಹೆಚ್ಚಿಸಲಾಗುವುದು. ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಗಳಲ್ಲಿ ಒಳಗೊಳ್ಳದ ನಿತ್ಯದ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 2ನೇ ಹಂತದ ಆಸ್ಪತ್ರೆಗಳನ್ನು ಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಉದ್ದೇಶಕ್ಕೆ ಸ್ಥಳದ ಅಗತ್ಯವಿದೆ. ಒಂದೆರಡು ವಾರದಲ್ಲಿ ಈ ಸಮಿತಿ ವರದಿ ನೀಡಲಿದೆ.

    *ಬೆಂಗಳೂರಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು 100 ಹಾಸಿಗೆಗಳ ಉತ್ಕೃಷ್ಟ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿಯೂ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆಗಳಿರುತ್ತವೆ. ಜತೆಗೆ, 4 ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಲಾಗುವುದು.

    ವಾರ್‌ ರೂಂಗೆ ಅನುಸಂಧಾನ:

    ಕೋವಿಡ್‌ ನಿರ್ವಹಣೆಯಲ್ಲಿ ಆಪ್ತಮಿತ್ರ, ಟೆಲಿ ಟ್ರಯಾಜಿಂಗ್‌, ಸುವರ್ಣ ಆರೋಗ್ಯ ಟ್ರಸ್ಟ್‌ ಸೇರಿ ವಿವಿಧ ನೆಟ್‌ವರ್ಕ್‌ಗಳು, ಆಪ್‌ಗಳು ಇತ್ಯಾದಿ ಇದ್ದು ಪ್ರತ್ಯೇಕವಾಗಿ ಕೆಲಸ ಮಾಡುತ್ತಿವೆ. ಇವೆಲ್ಲವನ್ನೂ ಕೋವಿಡ್‌ ವಾರ್‌ರೂಂಗೆ ಅನುಸಂಧಾನ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹೊಸ ವ್ಯವಸ್ಥೆಗೆ ವಾರ್‌ ರೂಂ ಉಸ್ತುವಾರಿಯೇ ಅಧ್ಯಕ್ಷರಾಗುತ್ತಾರೆ. ವಿವಿಧ ಸಮಿತಿಗಳ ಉಸ್ತುವಾರಿ ಹೊಂದಿರುವವರೆಲ್ಲ ವಾರ್‌ ರೂಂ ಉಸ್ತುವಾರಿ ಸಮಿತಿ ಸದಸ್ಯರಾಗಿರುತ್ತಾರೆ. ಮೂರನೇ ಅಲೆ ಇದೊಂದು ಅತ್ಯುತ್ತಮ ಕ್ರಮವಾಗಿದೆ. ಎರಡು ತಿಂಗಳಲ್ಲಿ ಇದನ್ನು ಮಾಡಲಾಗುವುದು.

    ಯುವಜನರಿಗೆ ಆರೋಗ್ಯ ಕುಶಲತೆ ತರಬೇತಿ:

    ಆರೋಗ್ಯ ವ್ಯವಸ್ಥೆ ಅರೆವೈದ್ಯ ಸಿಬ್ಬಂದಿ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಹಯೋಗದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಎಸ್‌ಎಸ್‌ಎಲ್‌ಸಿ-ಪಿಯುಸಿ ವ್ಯಾಸಂಗ ಮಾಡಿರುವ 5,000 ಯುವ ಜನರಿಗೆ 3 ತಿಂಗಳ ಉಚಿತ ತರಬೇತಿಯನ್ನು ಆಯಾ ಜಿಲ್ಲಾ ಕೇಂದ್ರದಲ್ಲೇ ನೀಡಲಾಗುವುದು. ಈ ಸಂದರ್ಭದಲ್ಲಿ ಮಾಸಿಕ 5,000 ಗೌರವ ಧನ ನೀಡಲಾಗುವುದು. 

    5 ಲಕ್ಷ ವಯಲ್ಸ್‌ ರೆಮಿಡಿಸಿವಿರ್‌ ಸಂಗ್ರಹ:

    3ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ 5 ಲಕ್ಷ ವಯಲ್ಸ್‌ ರೆಮಿಡಿಸಿವಿರ್‌ ಔಷಧಿಯನ್ನು ಸಂಗ್ರಹ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಸದ್ಯಕ್ಕೆ ನಮ್ಮಲ್ಲಿ 2 ಲಕ್ಷ ವಯಲ್ಸ್‌ ಸಂಗ್ರಹ ಇದೆ. ಇನ್ನು 2,156 ಕಪ್ಪು ಶಿಲೀಂದ್ರದ ಪ್ರಕರಣಗಳು ವರದಿಯಾಗಿದ್ದು, ಅದಕ್ಕೂ ಔಷಧಿ ಕೊರತೆಯಾಗದಂತೆ ಲೈಸೋಮಲ್‌ ಆಪ್ತೋಟೆರಿಸಿನ್-ಬಿ ಔಷಧಿಯನ್ನು 23,000 ವಯಲ್ಸ್‌ ಕೇಂದ್ರ ಒದಗಿಸಿದೆ. ಪ್ರತಿದಿನ 10,000 ವಯಲ್ಸ್‌ ಅಗತ್ಯವಿದ್ದು, ಇದಕ್ಕೆ ಪರ್ಯಾಯವಾಗಿ ʼಎಮಲ್ಷನ್‌ ಆಪ್ತೋಮಲ್‌ ಟೆರಿಸನ್-ಬಿʼ ಔಷಧಿಯ 25,000 ವಯಲ್ಸ್‌ 10ನೇ ತಾರೀಖು ಪೂರೈಕೆಯಾಗಲಿದೆ.

    ಖಾಸಗಿ ಆಸ್ಪತ್ರೆ & ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ 7,500 ಸಾಮಾನ್ಯ ಬೆಡ್‌ಗಳನ್ನು ಆಕ್ಸಿಜನ್‌ ಬೆಡ್‌ಗಳನ್ನಾಗಿ ಪರಿವರ್ತನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯ ಆರ್ಥಿಕಿ ನೆರವು ನೀಡಲಾಗುವುದು.
     
    ಜುಲೈ ಹೊತ್ತಿಗೆ ರಾಜ್ಯದಲ್ಲಿಯೇ 500 ಮೆ.ಟನ್‌ ಆಕ್ಸಿಜನ್‌ ಉತ್ಪಾದನೆಗೆ ಕ್ರಮ ವಹಿಸಲಾಗುವುದು. ಅದಕ್ಕೆ ಬೇಕಾದ ಅಗತ್ಯ ಆಕ್ಸಿಜನ್‌ ಜನರೇಟರ್‌ಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕಡೆಯಿಂದ ಒದಗಿಸಲಾಗುವುದು. ಜತೆಗೆ, ಜಿಲ್ಲಾಸ್ಪತ್ರೆಗಳಲ್ಲಿ 6 ಕೆಎಲ್‌ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಇದ್ದು, ಅದ್ನು 13 ಕೆಎಲ್‌ಗೆ ಹೆಚ್ಚಿಸಲಾಗುವುದು, ಮೆಡಿಕಲ್‌ ಕಾಲೇಜ್‌ಗಳಲ್ಲಿ 20 ಕೆಎಲ್‌ ಸಂಗ್ರಹ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗುವುದು.


    ಇನ್ನು ಲಸಿಕೆ ಖರೀದಿ ಇಲ್ಲ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ವ್ಯಾಕ್ಸಿನ್‌ ಪೂರೈಕೆ ಮಾಡಲಿದೆ ಎಂದು ಇಂದು ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಪ್ರಧಾನಿ ಅವರಿಗೆ ಅಭಿನಂದನೆಗಳು. ಇನ್ನು ಮುಂದೆ ರಾಜ್ಯವು ನೇರವಾಗಿ ಲಸಿಕೆ ಖರೀದಿ ಮಾಡಲ್ಲ. ಈಗಾಗಲೇ 3 ಕೋಟಿ ಲಸಿಕೆ ಖರೀದಿಗೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇನ್ನೂ 2 ಕೋಟಿ ಲಸಿಕೆ ಪಡೆಯುವ ಬಗ್ಗೆ ಪ್ರಯತ್ನ ನಡೆದಿತ್ತು. ಈಗ ಅದನ್ನು ಕೈಬಿಡಲಾಗಿದೆ.

    ಈ ತಿಂಗಳಲ್ಲಿಯೇ ಕೇಂದ್ರದ 58 ಲಕ್ಷ‌ ಡೋಸ್‌ ಕೋವಿಡ್ ಲಸಿಕೆ ಬರಲಿದೆ. ಖಾಸಗಿ ಕ್ಷೇತ್ರದಿಂದಲೂ 20 ಲಕ್ಷ ಡೋಸ್‌ ಲಭ್ಯವಾಗುತ್ತಿದೆ. ಜೂನ್‌ ತಿಂಗಳೊಂದರಲ್ಲೇ ರಾಜ್ಯಕ್ಕೆ 80 ಲಕ್ಷ ಡೋಸ್‌ ಲಸಿಕೆ ಸಿಗಲಿದೆ. ಈ ಲೆಕ್ಕದ ಪ್ರಕಾರ ಪ್ರತೀ ದಿನ 6 ಲಕ್ಷ ಜನರಿಗೆ ಲಸಿಕೆ ನೀಡಲು ಸಾಧ್ಯವಿದೆ. ಅದಕ್ಕೆ ಅಗತ್ಯವಾದ ಕ್ರಮ ಸರಕಾರ ವಹಿಸಲಿದೆ.ಕಾರ್ಯಪಡೆ ಸದಸ್ಯರಾದ ಸಚಿವ ಸಿಸಿ ಪಾಟೀಲ್‌, ಡಾ.ಕೆ.ಸುಧಾಕರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು


    ಭಾರತದಲ್ಲಿಂದು 61 ದಿನಗಳಲ್ಲೇ ಅತಿ ಕಡಿಮೆ ಕೋವಿಡ್ ಪ್ರಕರಣ

    ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,00,636 ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ತಿಂಗಳಲ್ಲಿ ಇದು ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಸತತ 11 ದಿನಗಳಿಂದ 2 ಲಕ್ಷಕ್ಕೂ ಕಡಿಮೆ ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ.ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವ ಮತ್ತು ನಿರಂತರ ಪ್ರಯತ್ನಗಳ ಫಲ ಇದಾಗಿದೆ.

    https://static.pib.gov.in/WriteReadData/userfiles/image/image0025SBB.jpg

    ಭಾರತದಲ್ಲಿ ನಿರಂತರವಾಗಿ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ಸತತ ಎರಡನೇ ದಿನ ಕೂಡ ಸಕ್ರಿಯ ಪ್ರಕರಣಗಳು 15 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಇಂದು 14,01,609 ಪ್ರಕರಣಗಳು ದಾಖಲಾಗಿವೆ. ನಿರಂತರ ಏಳು ದಿನಗಳಿಂದ 20 ಲಕ್ಷಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ.

    https://static.pib.gov.in/WriteReadData/userfiles/image/image001KSXM.jpg

    ಹೆಚ್ಚು ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು 25 ದಿನಗಳಿಂದ ನಿರಂತರವಾಗಿ ಚೇತರಿಕೆಯಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,74,399 ಮಂದಿ ಗುಣಮುಖರಾಗಿದ್ದಾರೆ. ದೈನಂದಿನ ಪ್ರಕರಣಗಳಿಗೆ ಹೋಲಿಸಿದರೆ 24 ಗಂಟೆಗಳಲ್ಲಿ 73,763 ಮಂದಿ ಗುಣಮುಖರಾಗಿದ್ದಾರೆ.

    https://static.pib.gov.in/WriteReadData/userfiles/image/image003C8MK.jpg

    ಸಾಂಕ್ರಾಮಿಕ ಕಂಡು ಬಂದ ನಂತರದಿಂದ ಈ ತನಕ 2,71,59,180 ಮಂದಿ ಈಗಾಗಲೇ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತಿದ್ದು, ಒಟ್ಟಾರೆ ಗುಣಮುಖರಾಗಿರುವ ಪ್ರಮಾಣ ಶೇ 93.94 ರಷ್ಟಿದೆ.
    ಕಳೆದ 24 ಗಂಟೆಗಳಲ್ಲಿ 15,87,589 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ 36.6 ಕೋಟಿ (36,63,34,111) ಗೂ ಹೆಚ್ಚು ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.
    ಒಂದು ಕಡೆ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಇನ್ನೊಂದೆಡೆ ನಿರಂತರವಾಗಿ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗುತ್ತಿದೆ. ದೈನಂದಿನ ಪಾಸಿಟಿವಿಟಿ ದರ ಇಂದು ಶೇ 6.34 ರಷ್ಟಿದ್ದು, ನಿರಂತರ 14 ದಿನಗಳಿಂದ ಶೇ 10 ಕ್ಕಿಂತ ಕಡಿಮೆ ಇದೆ.

    https://static.pib.gov.in/WriteReadData/userfiles/image/image004W5V1.jpg

    ಲಸಿಕಾ ವಲಯದಲ್ಲಿ ಈತನ ದೇಶಾದ್ಯಂತ ನಡೆದ ರಾಷ್ಟ್ರೀಯ ಲಸಿಕಾ ಅಭಿಯಾನದಲ್ಲಿ 23.27 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಇಂದು ಬೆಳಿಗ್ಗೆ 7 ಗಂಟೆವರೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 23,27,86,482 ಡೋಸ್ ಲಸಿಕೆಯನ್ನು 32,68,969 ಅವಧಿಯಲ್ಲಿ ಹಾಕಲಾಗಿದೆ.

    ಆರೋಗ್ಯ ಕಾರ್ಯಕರ್ತರುಮೊದಲ ಡೋಸ್99,68,836
    ಎರಡನೇ ಡೋಸ್68,62,013
    ಮುಂಚೂಣಿ ಕಾರ್ಯಕರ್ತರುಮೊದಲ ಡೋಸ್1,62,06,661
    ಎರಡನೇ ಡೋಸ್86,71,758
    18-44 ವಯೋಮಿತಿಯವರುಮೊದಲ ಡೋಸ್2,86,18,514
    ಎರಡನೇ ಡೋಸ್1,68,302
    45 ರಿಂದ 60 ವಯೋಮಿತಿಯವರುಮೊದಲ ಡೋಸ್7,10,44,966
    ಎರಡನೇ ಡೋಸ್1,13,34,356
    60 ವರ್ಷ ಮೀರಿದರುಮೊದಲ ಡೋಸ್6,06,75,796
    ಎರಡನೇ ಡೋಸ್1,92,35,280
    ಒಟ್ಟು23,27,86,482

    (ವರದಿ ಪಿಐಬಿ)

    ಬಿಎಸ್ ವೈ ಪದತ್ಯಾಗದ ಮಾತನ್ನು ಆಡಿದ್ದೇಕೆ?

    ಹೈ ಕಮಾಂಡ್ ಕೇಳಿದರೆ ಪದತ್ಯಾಗಕ್ಕೆ ಸಿದ್ಧ ಎಂದು ಮೊನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಎಬ್ಬಿಸಿದೆ. ಯಡಿಯೂರಪ್ಪ ಅವರ ಈ ಹೇಳಿಕೆ ಹಿಂದಿನ ರಾಜಕೀಯ ನಡೆಯೇನು? ಯಡಿಯೂರಪ್ಪನವರು ಹೊರತು ಪಡಿಸಿದರೆ ಸರಕಾರವನ್ನು ಮುನ್ನೆಡುಸುವ ನಾಯಕರು ಬಿಜೆಪಿಯಲ್ಲಿ ಯಾರಿದ್ದಾರೆ?

    ಈ ಎಲ್ಲಾ ಬೆಳವಣಿಗೆಗಳ ಕುರಿತ ಪಾಡ್ಕಾಸ್ಟ್ ಇಲ್ಲಿದೆ. ಕನ್ನಡಪ್ರೆಸ್ .ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಅವರು ಭಾಗವಹಿಸಿದ್ದಾರೆ. ಆಲಿಸಿ ಮತ್ತು ಪ್ರತಿಕ್ರಿಯಿಸಿ

    error: Content is protected !!